ಗೌರವಾನ್ವಿತ ಗಣ್ಯರೆ,
ನಾವಿಂದು ಇತಿಹಾಸದ ಮಹತ್ವದ ತಿರುವಿನಲ್ಲಿದ್ದೇವೆ. ಅನೇಕ ಸಮಸ್ಯೆಗಳಿಂದ ಜರ್ಝರಿತವಾಗಿರುವ ಜಗತ್ತಿನಲ್ಲಿ ಹವಾಮಾನ ಬದಲಾವಣೆ, ಪರಿಸರ ಸಂರಕ್ಷಣೆ ಮತ್ತು ಇಂಧನ ಭದ್ರತೆ ಇಂದು ದೊಡ್ಡ ಸವಾಲುಗಳಾಗಿವೆ. ಈ ದೊಡ್ಡ ಸವಾಲುಗಳ ವಿರುದ್ಧ ಹೋರಾಡುವಲ್ಲಿ ಒಂದು ಅಡೆತಡೆಯೆಂದರೆ ನಾವು ಹವಾಮಾನ ಬದಲಾವಣೆಯನ್ನು ಇಂಧನ ದೃಷ್ಟಿಕೋನದಿಂದ ಮಾತ್ರ ನೋಡುತ್ತೇವೆ. ಈ ನಿಟ್ಟಿನಲ್ಲಿ ನಾವು ನಮ್ಮ ಚರ್ಚೆಯ ವ್ಯಾಪ್ತಿ ಹೆಚ್ಚಿಸಬೇಕು.
ಭಾರತೀಯ ನಾಗರಿಕತೆಯಲ್ಲಿ ಭೂಮಿಗೆ ತಾಯಿಯ ಸ್ಥಾನಮಾನ ನೀಡಲಾಗಿದೆ. ಈ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು, ನಾವು ಭೂಮಿ ತಾಯಿಯ ಕರೆಯನ್ನು ಕೇಳಬೇಕಾಗಿದೆ. ಅದಕ್ಕೆ ತಕ್ಕಂತೆ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು, ನಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕು. ಈ ಉತ್ಸಾಹದಲ್ಲಿ, ಮಿಷನ್ ಲೈಫ್, ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್, ವಿಪತ್ತು ನಿರೋಧಕ ಮೂಲಸೌಕರ್ಯ ಒಕ್ಕೂಟ, ಮಿಷನ್ ಹೈಡ್ರೋಜನ್, ಜೈವಿಕ ಇಂಧನ ಒಕ್ಕೂಟ, ಬಿಗ್ ಕ್ಯಾಟ್ ಅಲೈಯನ್ಸ್ ಮುಂತಾದ ಸಾಂಸ್ಥಿಕ ಪರಿಹಾರಗಳನ್ನು ಭಾರತವು ಇಡೀ ಜಗತ್ತಿಗೆ ಸೃಷ್ಟಿಸಿದೆ. ಇಂದು ಭಾರತದ ರೈತರು ಪ್ರತಿ ಹನಿ ನೀರನ್ನು ಉಳಿಸುವ ಮೂಲಕ ಪ್ರಗತಿ ಮತ್ತು ಅಭಿವೃದ್ಧಿಯ ಪಥದಲ್ಲಿ ನಡೆಯುತ್ತಿದ್ದಾರೆ, “ಪರ್ ಡ್ರಾಪ್ ಮೋರ್ ಕ್ರಾಪ್” ಧ್ಯೇಯ ಅನುಸರಿಸುತ್ತಿದ್ದಾರೆ. ನಾವು 2070ರ ವೇಳೆಗೆ ಇಂಗಾಲ ಹೊರಸೂಸುವಿಕೆಯ ನಿವ್ವಳ ಶೂನ್ಯ ಗುರಿಯತ್ತ ವೇಗವಾಗಿ ಚಲಿಸುತ್ತಿದ್ದೇವೆ.
ನಮ್ಮ ವಿಶಾಲವಾದ ರೈಲ್ವೆ ಜಾಲವು 2030ರ ವೇಳೆಗೆ ಇಂಗಾಲ ಹೊರಸೂಸುವಿಕೆಯ ನಿವ್ವಳ ಶೂನ್ಯವಾಗಲು ನಿರ್ಧರಿಸಿದೆ. ಪ್ರಸ್ತುತ, ಭಾರತದಲ್ಲಿ ನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯವು ಸುಮಾರು 175 ಮೆಗಾ ವ್ಯಾಟ್ಗಳಷ್ಟಿದೆ. 2030ರಲ್ಲಿ ಇದು ಸುಮಾರು 500 ಮೆಗಾವ್ಯಾಟ್ಗೆ ತಲುಪಲಿದೆ. ನಾವು ನಮ್ಮ ಎಲ್ಲಾ ಪ್ರಯತ್ನಗಳನ್ನು ಭೂಮಿಯ ಸಂರಕ್ಷಣೆಗೆ ನಮ್ಮ ಜವಾಬ್ದಾರಿ ಎಂದು ಪರಿಗಣಿಸುತ್ತೇವೆ. ಈ ಮೌಲ್ಯಗಳು ನಮ್ಮ ಅಭಿವೃದ್ಧಿಯ ಅಡಿಪಾಯವಾಗಿವೆ. ನಮ್ಮ ಅಭಿವೃದ್ಧಿ ಪಯಣವು ಮಹತ್ವಾಕಾಂಕ್ಷೆಯ ಗುರಿಗಳಲ್ಲಿ ಬೇರೂರಿದೆ. ಭಾರತದ ಅಭಿವೃದ್ಧಿ ಪಯಣದಲ್ಲಿ ಪರಿಸರ ಬದ್ಧತೆಗಳು ಅಡ್ಡಿಯಾಗಿಲ್ಲ, ಆದರೆ ವೇಗವರ್ಧಕವಾಗಿದೆ.
ಗೌರವಾನ್ವಿತ ಗಣ್ಯರೆ,
ಹವಾಮಾನ ಬದಲಾವಣೆ ಕ್ರಿಯೆಯತ್ತ ಸಾಗುತ್ತಿರುವಾಗ, ನಾವು ಹಸಿರು ಮತ್ತು ಸ್ವಚ್ಛ ಇಂಧನ ತಂತ್ರಜ್ಞಾನ ಪೂರೈಕೆ ಸರಪಳಿಗಳನ್ನು ಚೇತರಿಸಿಕೊಳ್ಳುವಂತೆ ಮಾಡಬೇಕು. ನಾವು ಅಗತ್ಯವಿರುವ ದೇಶಗಳಿಗೆ ತಂತ್ರಜ್ಞಾನ ವರ್ಗಾವಣೆ ಮತ್ತು ಕೈಗೆಟುಕುವ ಹಣಕಾಸು ಒದಗಿಸದಿದ್ದರೆ, ನಮ್ಮ ಚರ್ಚೆ ನಿಷ್ಪ್ರಯೋಜಕವಾಗುತ್ತದೆ. ಈ ರಂಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಭಾರತದ ಜನರು ಪರಿಸರದ ಬಗ್ಗೆ ಜಾಗೃತರಾಗಿದ್ದಾರೆ, ತಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಶತಮಾನಗಳಿಂದ ಈ ಜವಾಬ್ದಾರಿ ಪ್ರಜ್ಞೆಯು ನಮ್ಮಲ್ಲಿ ಹುದುಗಿದೆ. ಭಾರತವು ಎಲ್ಲರೊಂದಿಗೆ ತನ್ನ ಕೊಡುಗೆಯನ್ನು ನೀಡಲು ಸಂಪೂರ್ಣವಾಗಿ ಸಿದ್ಧವಾಗಿದೆ.
ತುಂಬು ಧನ್ಯವಾದಗಳು.