Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

98ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ 98ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನವದೆಹಲಿಯಲ್ಲಿ ಆಯೋಜಿಸಲಾಗುತ್ತಿರುವ ಮರಾಠಿ ಭಾಷೆಯ ಭವ್ಯ ಕಾರ್ಯಕ್ರಮಕ್ಕೆ ಎಲ್ಲಾ ಮರಾಠಿಗರನ್ನು ಸ್ವಾಗತಿಸಿದರು. ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವು ಒಂದು ಭಾಷೆ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ ಎಂದು ಹೇಳಿದ ಅವರು, ಸಮ್ಮೇಳನವು ಸ್ವಾತಂತ್ರ್ಯ ಹೋರಾಟದ ಸಾರ ಮತ್ತು ಮಹಾರಾಷ್ಟ್ರ ಮತ್ತು ರಾಷ್ಟ್ರದ ಸಾಂಸ್ಕೃತಿಕ ಪರಂಪರೆಯನ್ನು ಒಳಗೊಂಡಿದೆ ಎಂದು ಹೇಳಿದರು.

1878ರಲ್ಲಿ ಮೊದಲ ಆವೃತ್ತಿಯಿಂದ ಇಲ್ಲಿಯವರೆಗೆ, ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವು 147 ವರ್ಷಗಳ ಭಾರತದ ಪ್ರಯಾಣಕ್ಕೆ ಸಾಕ್ಷಿಯಾಗಿದೆ ಎಂದು ಶ್ರೀ ಮೋದಿ ಹೇಳಿದರು. ಶ್ರೀ ಮಹಾದೇವ್ ಗೋವಿಂದ ರಾನಡೆ, ಶ್ರೀ ಹರಿ ನಾರಾಯಣ್ ಆಪ್ಟೆ, ಶ್ರೀ ಮಾಧವ ಶ್ರೀಹರಿ ಆನೆ, ಶ್ರೀ ಶಿವರಾಮ ಪರಾಂಜಪೆ, ಶ್ರೀ ವೀರ ಸಾವರ್ಕರ್ ಅವರಂತಹ ಅನೇಕ ದಿಗ್ಗಜರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು ಎಂದು ಅವರು ಹೇಳಿದರು. ಈ ಹೆಮ್ಮೆಯ ಸಂಪ್ರದಾಯದ ಭಾಗವಾಗಲು ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಶ್ರೀ ಶರದ್ ಪವಾರ್ ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು ಈ ಕಾರ್ಯಕ್ರಮಕ್ಕಾಗಿ ದೇಶದ ಮತ್ತು ಪ್ರಪಂಚದಾದ್ಯಂತದ ಎಲ್ಲಾ ಮರಾಠಿ ಪ್ರೇಮಿಗಳನ್ನು ಅಭಿನಂದಿಸಿದರು.

ಇಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ಮರಾಠಿ ಭಾಷೆಯ ಬಗ್ಗೆ ಯೋಚಿಸುವಾಗ ಸಂತ ಜ್ಞಾನೇಶ್ವರರ ಪದ್ಯಗಳು ನೆನಪಾಗುವುದು ಸಹಜ ಎಂದು ಹೇಳಿದರು. ಸಂತ ಜ್ಞಾನೇಶ್ವರರ ಪದ್ಯವನ್ನು ಓದಿದ ಶ್ರೀ ಮೋದಿ ಅವರು ಮರಾಠಿ ಭಾಷೆ  ಅಮೃತಕ್ಕಿಂತ ಮಧುರವಾಗಿದೆ, ಆದ್ದರಿಂದ ಮರಾಠಿ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ತಮ್ಮ ಪ್ರೀತಿ ಮತ್ತು ವಾತ್ಸಲ್ಯ ಅಪಾರವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಮರಾಠಿ ವಿದ್ವಾಂಸರಷ್ಟು ಪ್ರವೀಣರಲ್ಲದಿದ್ದರೂ ಮರಾಠಿ ಕಲಿಯಲು ಸದಾ ನಿರಂತರ ಪ್ರಯತ್ನ ಮಾಡುತ್ತಿರುವುದಾಗಿ ಪ್ರಧಾನಿ ವಿನಮ್ರವಾಗಿ ಹೇಳಿದರು.

ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವಾರ್ಷಿಕೋತ್ಸವ, ಪುಣ್ಯಶ್ಲೋಕ್ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಯತ್ನದಿಂದ ರಚಿಸಲಾದ ನಮ್ಮ ಸಂವಿಧಾನದ 75ನೇ ವಾರ್ಷಿಕೋತ್ಸವವನ್ನು ದೇಶವು ಆಚರಿಸುತ್ತಿರುವ ಮಹತ್ವದ ಸಂದರ್ಭದಲ್ಲಿ ಈ ಸಮ್ಮೇಳನ ನಡೆಯುತ್ತಿದೆ ಎಂದು ಶ್ರೀ ಮೋದಿ ಅವರು ಹೇಳಿದರು. ಒಂದು ಶತಮಾನದ ಹಿಂದೆ, ಒಬ್ಬ ವಿಶಿಷ್ಟ ಮರಾಠಿ ವ್ಯಕ್ತಿ ಮಹಾರಾಷ್ಟ್ರದ ಮಣ್ಣಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ ಎಸ್‌ ಎಸ್) ಬೀಜವನ್ನು ನೆಟ್ಟಿದ್ದರು ಎಂದು ಹೆಮ್ಮೆ ವ್ಯಕ್ತಪಡಿಸಿದ ಶ್ರೀ ಮೋದಿ, ಇಂದು ಅದು ವಿಶಾಲವಾದ ಮರವಾಗಿ ಬೆಳೆದು ಶತಮಾನೋತ್ಸವವನ್ನು ಆಚರಿಸುತ್ತಿದೆ ಎಂದು ಹೇಳಿದರು. ಕಳೆದ 100 ವರ್ಷಗಳಿಂದ, ಆರ್‌ ಎಸ್‌ ಎಸ್ ತನ್ನ ಸಾಂಸ್ಕೃತಿಕ ಪ್ರಯತ್ನಗಳ ಮೂಲಕ ವೇದಗಳಿಂದ ವಿವೇಕಾನಂದರವರೆಗೆ ಭಾರತದ ಶ್ರೇಷ್ಠ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಹೊಸ ಪೀಳಿಗೆಗೆ ರವಾನಿಸಿದೆ ಎಂದು ಅವರು ಒತ್ತಿ ಹೇಳಿದರು. ದೇಶಕ್ಕಾಗಿ ಬದುಕಲು ಆರ್‌ ಎಸ್‌ ಎಸ್‌ ನಿಂದ ಪ್ರೇರಿತರಾಗುವುದು ಲಕ್ಷಾಂತರ ಮಂದಿಯಂತೆ ತಮಗೂ ದೊರೆತ ಸೌಭಾಗ್ಯ ಎಂದು ಅವರು ಹೇಳಿದರು. ಆರ್‌ ಎಸ್‌ ಎಸ್ ಮೂಲಕವೇ ಮರಾಠಿ ಭಾಷೆ ಮತ್ತು ಸಂಪ್ರದಾಯದೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಸಿಕ್ಕಿತು ಎಂದು ಪ್ರಧಾನಿಯವರು ಹೇಳಿರು. ಕೆಲವು ತಿಂಗಳುಗಳ ಹಿಂದೆ ಮರಾಠಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಲಾಯಿತು, ಇದಕ್ಕಾಗಿ ಭಾರತ ಮತ್ತು ಪ್ರಪಂಚದಾದ್ಯಂತ 12 ಕೋಟಿಗೂ ಹೆಚ್ಚು ಮರಾಠಿ ಭಾಷಿಕರು ದಶಕಗಳಿಂದ ಕಾಯುತ್ತಿದ್ದರು ಎಂದು ಅವರು ಒತ್ತಿ ಹೇಳಿದರು. ಈ ಕಾರ್ಯವನ್ನು ಸಾಧಿಸಲು ಅವಕಾಶ ಸಿಕ್ಕಿದ್ದು ತಮ್ಮ ಜೀವನದ ದೊಡ್ಡ ಸೌಭಾಗ್ಯ ಎಂದು ಅವರು ಬಣ್ಣಿಸಿದರು.

“ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ, ನಮ್ಮ ಸಂಸ್ಕೃತಿಯ ವಾಹಕ” ಎಂದು ಪ್ರಧಾನಿ ಹೇಳಿದರು. ಭಾಷೆಗಳು ಸಮಾಜದಲ್ಲಿ ಹುಟ್ಟಿದ್ದರೂ, ಅದನ್ನು ರೂಪಿಸುವಲ್ಲಿ ಅವು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು. ಮರಾಠಿಯು ಮಹಾರಾಷ್ಟ್ರ ಮತ್ತು ರಾಷ್ಟ್ರದ ಅನೇಕ ವ್ಯಕ್ತಿಗಳ ಚಿಂತನೆಗಳಿಗೆ ಅಭಿವ್ಯಕ್ತಿಯನ್ನು ನೀಡಿದೆ ಮತ್ತು ನಮ್ಮ ಸಾಂಸ್ಕೃತಿಕ ಅಭಿವೃದ್ಧಿಗೆ ಕೊಡುಗೆ ನೀಡಿದೆ ಎಂದು ಅವರು ಒತ್ತಿ ಹೇಳಿದರು. ಮರಾಠಿ ಭಾಷೆಯ ಮಹತ್ವದ ಕುರಿತು ಸಮರ್ಥ ರಾಮದಾಸ್ ಜಿ ಅವರ ಮಾತುಗಳನ್ನು ಉಲ್ಲೇಖಿಸಿದ ಪ್ರಧಾನಿ, “ಮರಾಠಿ ಒಂದು ಪರಿಪೂರ್ಣ ಭಾಷೆಯಾಗಿದ್ದು, ಶೌರ್ಯ, ಸೌಂದರ್ಯ, ಸೂಕ್ಷ್ಮತೆ, ಸಮಾನತೆ, ಸಾಮರಸ್ಯ, ಆಧ್ಯಾತ್ಮಿಕತೆ ಮತ್ತು ಆಧುನಿಕತೆಯನ್ನು ಒಳಗೊಂಡಿದೆ” ಎಂದು ಹೇಳಿದರು. ಮರಾಠಿಯು ಭಕ್ತಿ, ಶಕ್ತಿ ಮತ್ತು ಬುದ್ಧಿಶಕ್ತಿಯನ್ನು ಒಳಗೊಂಡಿದೆ ಎಂದು ಅವರು ಹೇಳಿದರು. ಭಾರತಕ್ಕೆ ಆಧ್ಯಾತ್ಮಿಕ ಶಕ್ತಿಯ ಅಗತ್ಯವಿದ್ದಾಗ, ಮಹಾರಾಷ್ಟ್ರದ ಮಹಾನ್ ಸಂತರು ಋಷಿಮುನಿಗಳ ಜ್ಞಾನವನ್ನು ಮರಾಠಿಯಲ್ಲಿ ಲಭ್ಯವಾಗುವಂತೆ ಮಾಡಿದರು ಎಂದು ಶ್ರೀ ಮೋದಿ ಹೇಳಿದರು. ಭಕ್ತಿ ಚಳುವಳಿಯ ಮೂಲಕ ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸಿದ ಸಂತ ಜ್ಞಾನೇಶ್ವರ, ಸಂತ ತುಕಾರಾಂ, ಸಂತ ರಾಮದಾಸ್, ಸಂತ ನಾಮದೇವ, ಸಂತ ತುಕ್ಡೋಜಿ ಮಹಾರಾಜ್, ಗಡ್ಗೆ ಬಾಬಾ, ಗೋರಾ ಕುಂಭರ್ ಮತ್ತು ಬಹಿನಾಬಾಯಿ ಅವರ ಕೊಡುಗೆಗಳನ್ನು ಅವರು ಸ್ಮರಿಸಿದರು. ಆಧುನಿಕ ಕಾಲದಲ್ಲಿ, ಶ್ರೀ ಗಜಾನನ ದಿಗಂಬರ ಮದ್ಗುಲ್ಕರ್ ಮತ್ತು ಶ್ರೀ ಸುಧೀರ್ ಫಡ್ಕೆಯವರ ಗೀತ ರಾಮಾಯಣದ ಪ್ರಭಾವವನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು.

ಶತಮಾನಗಳ ದಬ್ಬಾಳಿಕೆಯ ಸಂದರ್ಭದಲ್ಲಿ ಮರಾಠಿ ಭಾಷೆಯು ಆಕ್ರಮಣಕಾರರಿಂದ ವಿಮೋಚನೆಯ ಕೂಗು ಆಗಿ ಮಾರ್ಪಟ್ಟಿತು ಎಂದು ಪ್ರಧಾನಮಂತ್ರಿಯವರು ಹೇಳಿದರು. ಶತ್ರುಗಳ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜ್, ಸಂಭಾಜಿ ಮಹಾರಾಜ್ ಮತ್ತು ಬಾಜಿರಾವ್ ಪೇಶ್ವೆಯಂತಹ ಮರಾಠ ಯೋಧರ ಶೌರ್ಯವನ್ನು ಅವರು ಉಲ್ಲೇಖಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ವಾಸುದೇವ ಬಲವಂತ ಫಡಕೆ, ಲೋಕಮಾನ್ಯ ತಿಲಕ್, ವೀರ ಸಾವರ್ಕರ್ ಅವರಂತಹ ಹೋರಾಟಗಾರರು ಬ್ರಿಟಿಷರನ್ನು ಎದುರಿಸಿದ್ದರು ಎಂದು ಅವರು ಹೇಳಿದರು. ಅವರ ಕೊಡುಗೆಯಲ್ಲಿ ಮರಾಠಿ ಭಾಷೆ ಮತ್ತು ಸಾಹಿತ್ಯದ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು. ಕೇಸರಿ ಮತ್ತು ಮರಾಠಾದಂತಹ ಪತ್ರಿಕೆಗಳು, ಕವಿ ಗೋವಿಂದಗ್ರಜ ಅವರ ಶಕ್ತಿಶಾಲಿ ಕವಿತೆಗಳು ಮತ್ತು ರಾಮ್ ಗಣೇಶ್ ಗಡ್ಕರಿ ಅವರ ನಾಟಕಗಳು ರಾಷ್ಟ್ರೀಯತೆಯ ಮನೋಭಾವವನ್ನು ಪೋಷಿಸಿದವು ಎಂದು ಶ್ರೀ ಮೋದಿ ಅವರು ಎತ್ತಿ ತೋರಿಸಿದರು. ಲೋಕಮಾನ್ಯ ತಿಲಕರು ಮರಾಠಿಯಲ್ಲಿ ಗೀತಾ ರಹಸ್ಯವನ್ನು ಬರೆದರು, ಅದು ದೇಶಾದ್ಯಂತ ಹೊಸ ಶಕ್ತಿಯನ್ನು ತುಂಬಿತು ಎಂದು ಅವರು ಹೇಳಿದರು.

“ಮರಾಠಿ ಭಾಷೆ ಮತ್ತು ಸಾಹಿತ್ಯವು ಸಮಾಜದ ತುಳಿತಕ್ಕೊಳಗಾದ ಮತ್ತು ವಂಚಿತ ವರ್ಗಗಳಿಗೆ ಸಾಮಾಜಿಕ ವಿಮೋಚನೆಯ ಬಾಗಿಲುಗಳನ್ನು ತೆರೆಯಿತು” ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು. ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಮಹರ್ಷಿ ಕರ್ವೆ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಮಹಾನ್ ಸಮಾಜ ಸುಧಾರಕರ ಕೊಡುಗೆಗಳನ್ನು ಅವರು ಉಲ್ಲೇಖಿಸಿದರು, ಅವರು ಮರಾಠಿಯಲ್ಲಿ ಹೊಸ ಯುಗದ ಚಿಂತನೆಯನ್ನು ಉತ್ತೇಜಿಸಿದರು ಎಂದು ಹೇಳಿದರು. ಮರಾಠಿ ಭಾಷೆ ದೇಶಕ್ಕೆ ಶ್ರೀಮಂತ ದಲಿತ ಸಾಹಿತ್ಯವನ್ನು ನೀಡಿದೆ ಎಂದು ಅವರು ಹೇಳಿದರು. ತನ್ನ ಆಧುನಿಕ ಚಿಂತನೆಯಿಂದಾಗಿ, ಮರಾಠಿ ಸಾಹಿತ್ಯವು ವಿಜ್ಞಾನ ಸಾಹಿತ್ಯವನ್ನು ಸಹ ನೀಡಿದೆ ಎಂದು ಅವರು ಒತ್ತಿ ಹೇಳಿದರು. ಆಯುರ್ವೇದ, ವಿಜ್ಞಾನ ಮತ್ತು ತರ್ಕಶಾಸ್ತ್ರದಲ್ಲಿ ಮಹಾರಾಷ್ಟ್ರದ ಜನರ ಅಸಾಧಾರಣ ಕೊಡುಗೆಗಳನ್ನು ಉಲ್ಲೇಖಿಸಿದ ಶ್ರೀ ಮೋದಿ, ಈ ಸಂಸ್ಕೃತಿಯು ಯಾವಾಗಲೂ ಹೊಸ ಆಲೋಚನೆಗಳು ಮತ್ತು ಪ್ರತಿಭೆಗಳನ್ನು ಆಹ್ವಾನಿಸಿದೆ, ಇದು ಮಹಾರಾಷ್ಟ್ರದ ಪ್ರಗತಿಗೆ ಕಾರಣವಾಗುತ್ತಿದೆ ಎಂದು ಹೇಳಿಸಿದರು. ಮುಂಬೈ ಮಹಾರಾಷ್ಟ್ರಕ್ಕೆ ಮಾತ್ರವಲ್ಲದೆ ಇಡೀ ದೇಶದ ಆರ್ಥಿಕ ರಾಜಧಾನಿಯಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು. ಮುಂಬೈ ಬಗ್ಗೆ  ಮಾತನಾಡುವಾಗ, ಚಲನಚಿತ್ರಗಳನ್ನು ಉಲ್ಲೇಖಿಸದೆ ಸಾಹಿತ್ಯದ ಚರ್ಚೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು. ಮರಾಠಿ ಚಲನಚಿತ್ರಗಳು ಮತ್ತು ಹಿಂದಿ ಸಿನೆಮಾ  ಎರಡನ್ನೂ ಉನ್ನತೀಕರಿಸಿದ್ದು ಮಹಾರಾಷ್ಟ್ರ ಮತ್ತು ಮುಂಬೈ ಎಂದು ಅವರು ಹೇಳಿದರು. ಶಿವಾಜಿ ಸಾವಂತ್ ಅವರ ಮರಾಠಿ ಕಾದಂಬರಿಯ ಮೂಲಕ ಸಂಭಾಜಿ ಮಹಾರಾಜರ ಶೌರ್ಯವನ್ನು ಪರಿಚಯಿಸಿದ ‘ಛಾವಾ’ ಚಿತ್ರದ ಪ್ರಸ್ತುತ ಜನಪ್ರಿಯತೆಯ ಬಗ್ಗೆ ಅವರು ಗಮನ ಸೆಳೆದರು.

ಕವಿ ಕೇಶವಸುತ ಅವರನ್ನು ಉಲ್ಲೇಖಿಸಿದ ಶ್ರೀ ಮೋದಿ, ನಾವು ಹಳೆಯ ವಿಚಾರಗಳಲ್ಲಿ ಜಡವಾಗಿ ಉಳಿಯಲು ಸಾಧ್ಯವಿಲ್ಲ ಮತ್ತು ಮಾನವ ನಾಗರಿಕತೆ, ಚಿಂತನೆ ಮತ್ತು ಭಾಷೆ ನಿರಂತರವಾಗಿ ವಿಕಸನಗೊಳ್ಳುತ್ತಲೇ ಇರುತ್ತವೆ ಎಂದು ಒತ್ತಿ ಹೇಳಿದರು. ಭಾರತವು ನಿರಂತರವಾಗಿ ವಿಕಸನಗೊಂಡು, ಹೊಸ ವಿಚಾರಗಳನ್ನು ಅಳವಡಿಸಿಕೊಂಡು, ಬದಲಾವಣೆಗಳನ್ನು ಸ್ವಾಗತಿಸಿರುವುದರಿಂದ ವಿಶ್ವದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾಗಿದೆ ಎಂದು ಅವರು ಒತ್ತಿ ಹೇಳಿದರು. ಭಾರತದ ಅಗಾಧ ಭಾಷಾ ವೈವಿಧ್ಯತೆಯು ಈ ಬೆಳವಣಿಗೆಗೆ ಸಾಕ್ಷಿಯಾಗಿದೆ ಮತ್ತು ಏಕತೆಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ ಪ್ರಧಾನಿ, ಮರಾಠಿ ಈ ವೈವಿಧ್ಯತೆಗೆ ಉದಾಹರಣೆಯಾಗಿದೆ ಎಂದು ಹೇಳಿದರು, ಪ್ರಧಾನಿಯವರು ಭಾಷೆಯನ್ನು ಯಾವುದೇ ತಾರತಮ್ಯವಿಲ್ಲದೆ ತನ್ನ ಮಕ್ಕಳಿಗೆ ಹೊಸ ಮತ್ತು ವಿಶಾಲವಾದ ಜ್ಞಾನವನ್ನು ನೀಡುವ ತಾಯಿಗೆ ಹೋಲಿಸಿದರು. ಭಾಷೆ ಪ್ರತಿಯೊಂದು ಆಲೋಚನೆ ಮತ್ತು ಪ್ರತಿಯೊಂದು ಬೆಳವಣಿಗೆಯನ್ನು ಒಳಗೊಳ್ಳುತ್ತದೆ ಎಂದು ಹೇಳಿದರು. ಮರಾಠಿಯು ಸಂಸ್ಕೃತದಿಂದ ಹುಟ್ಟಿಕೊಂಡಿದೆ ಮತ್ತು ಪ್ರಾಕೃತದ ಗಮನಾರ್ಹ ಪ್ರಭಾವವನ್ನು ಹೊಂದಿದೆ ಎಂದು ಶ್ರೀ ಮೋದಿ ಹೇಳಿದರು. ಮಾನವ ಚಿಂತನೆಯನ್ನು ವಿಶಾಲಗೊಳಿಸಿದ ಮಹಾನ್ ಚಿಂತಕರು ಮತ್ತು ಬರಹಗಾರರ ಕೊಡುಗೆಗಳನ್ನು ಅವರು ಎತ್ತಿ ತೋರಿಸಿದರು. ಅವರು ಲೋಕಮಾನ್ಯ ತಿಲಕರ ಗೀತಾ ರಹಸ್ಯವನ್ನು ಪ್ರಸ್ತಾಪಿಸಿದರು, ಇದು ಸಂಸ್ಕೃತದ ಗೀತಾವನ್ನು ಅರ್ಥೈಸುತ್ತದೆ ಮತ್ತು ಮರಾಠಿ ಮಾಧ್ಯಮದ ಮೂಲಕ ಅದನ್ನು ಹೆಚ್ಚು ಪ್ರವೇಶಿಸುವಂತೆ ಮಾಡಿದೆ ಎಂದು ಅವರು ಹೇಳಿದರು.. ಸಂಸ್ಕೃತದ ಜ್ಞಾನೇಶ್ವರಿ ಗೀತೆಯು ಮರಾಠಿ ವ್ಯಾಖ್ಯಾನದೊಂದಿಗೆ ವಿದ್ವಾಂಸರು ಮತ್ತು ಸಂತರಿಗೆ ಗೀತೆಯನ್ನು ಅರ್ಥಮಾಡಿಕೊಳ್ಳಲು ಮಾನದಂಡವಾಗಿದೆ ಎಂದು ಅವರು ಹೇಳಿದರು. ಮರಾಠಿ ಇತರ ಭಾರತೀಯ ಭಾಷೆಗಳಿಂದ ವಿಕಸನಗೊಂಡಿದೆ ಮತ್ತು ಶ್ರೀಮಂತಗೊಂಡಿದೆ ಎಂದು ಪ್ರಧಾನಿ ಹೇಳಿದರು. ‘ಆನಂದಮಠʼದಂತಹ ಕೃತಿಗಳನ್ನು ಮರಾಠಿಗೆ ಅನುವಾದಿಸಿದ ಭಾರ್ಗವರಾಮ ವಿಠ್ಠಲ್ ವರೆಕರ್ ಮತ್ತು ಪನ್ನಾ ಧಾಯ್, ದುರ್ಗಾವತಿ ಮತ್ತು ರಾಣಿ ಪದ್ಮಿನಿಯ ಜೀವನ ಆಧಾರಿತ ಕೃತಿಗಳನ್ನು ರಚಿಸಿದ ವಿಂದಾ ಕರಂಡಿಕರ್ ಅವರ ಕೃತಿಗಳನ್ನು ಅನೇಕ ಭಾಷೆಗಳಿಗೆ ಅನುವಾದಿಸಲಾಗಿದೆ ಎಂದು ಅವರು ಉದಾಹರಣೆಗಳನ್ನು ನೀಡಿದರು. “ಭಾರತೀಯ ಭಾಷೆಗಳ ನಡುವೆ ಎಂದಿಗೂ ಪರಸ್ಪರ ಹಗೆತನ ಇರಲಿಲ್ಲ; ಬದಲಿಗೆ, ಅವು ಯಾವಾಗಲೂ ಪರಸ್ಪರ ಅಳವಡಿಸಿಕೊಂಡಿವೆ ಮತ್ತು ಶ್ರೀಮಂತವಾಗಿವೆ” ಎಂದು ಅವರು ಹೇಳಿದರು.

ಭಾಷೆಯ ಹೆಸರಿನಲ್ಲಿ ವಿಭಜನೆಯನ್ನು ಸೃಷ್ಟಿಸುವ ಪ್ರಯತ್ನಗಳನ್ನು ನಮ್ಮ ಭಾಷೆಗಳ ಸಾಮಾನ್ಯ ಪರಂಪರೆಯಿಂದ ಎದುರಿಸಲಾಗುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಭಾಷೆಗಳನ್ನು ಪುಷ್ಟೀಕರಿಸುವ ಮತ್ತು ಅಳವಡಿಸಿಕೊಳ್ಳುವ ಜವಾಬ್ದಾರಿಯನ್ನು ಒತ್ತಿ ಹೇಳಿದ ಅವರು ಇಂತಹ ತಪ್ಪು ಕಲ್ಪನೆಗಳಿಂದ ದೂರವಿರಬೇಕು ಎಂದು ಕರೆ ನೀಡಿದರು. ಇಂದು ದೇಶದ ಎಲ್ಲಾ ಭಾಷೆಗಳನ್ನು ಮುಖ್ಯವಾಹಿನಿಯ ಭಾಷೆಗಳಾಗಿ ನೋಡಲಾಗುತ್ತಿದೆ ಎಂದು ಅವರು ತಿಳಿಸಿದರು. ಮರಾಠಿ ಸೇರಿದಂತೆ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಶಿಕ್ಷಣವನ್ನು ಉತ್ತೇಜಿಸುವ ಪ್ರಯತ್ನಗಳ ಬಗ್ಗೆ ಅವರು ಗಮನ ಸೆಳೆದರು. ಈಗ ಮಹಾರಾಷ್ಟ್ರದ ಯುವಜನರು ಮರಾಠಿಯಲ್ಲಿ ಉನ್ನತ ಶಿಕ್ಷಣ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನು ಪಡೆಯಬಹುದು ಎಂದು ಮೋದಿ ಹೇಳಿದರು. ಇಂಗ್ಲಿಷ್ ಪ್ರಾವೀಣ್ಯತೆಯ ಕೊರತೆಯಿಂದ ಪ್ರತಿಭೆಗಳನ್ನು ಕಡೆಗಣಿಸುವ ಮನಸ್ಥಿತಿ ಬದಲಾಗಿದೆ ಎಂದು ಅವರು ಒತ್ತಿ ಹೇಳಿದರು.

“ಸಾಹಿತ್ಯವು ಸಮಾಜದ ಕನ್ನಡಿ ಮಾತ್ರವಲ್ಲ, ಮಾರ್ಗದರ್ಶಿಯೂ ಹೌದು” ಎಂದು ಶ್ರೀ ಮೋದಿ ಹೇಳಿದರು. ನಾಡಿನಲ್ಲಿ ಸಾಹಿತ್ಯ ಸಮ್ಮೇಳನಗಳು ಹಾಗೂ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ಮಹತ್ವದ ಪಾತ್ರದ ಬಗ್ಗೆ ಅವರು ಹೇಳಿದರು. ಅಖಿಲ ಭಾರತೀಯ ಮರಾಠಿ ಸಾಹಿತ್ಯ ಮಹಾಮಂಡಲವು ಗೋವಿಂದ ರಾನಡೆ, ಹರಿನಾರಾಯಣ ಆಪ್ಟೆ, ಆಚಾರ್ಯ ಅತ್ರೆ ಮತ್ತು ವೀರ ಸಾವರ್ಕರ್ ಅವರಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮುನ್ನಡೆಸುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಸಾಹಿತ್ಯ ಸಮ್ಮೇಳನದ ಸಂಪ್ರದಾಯವು 2027 ರಲ್ಲಿ 150 ವರ್ಷಗಳನ್ನು ಪೂರೈಸುತ್ತದೆ, ಅದು 100 ನೇ ಸಾಹಿತ್ಯ ಸಮ್ಮೇಳನವಾಗಲಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಪ್ರತಿಯೊಬ್ಬರೂ ಈ ಸಂದರ್ಭವನ್ನು ವಿಶೇಷವಾಗಿಸಿಕೊಳ್ಳಬೇಕು ಮತ್ತು ಈಗಿನಿಂದಲೇ ಸಿದ್ಧತೆಗಳನ್ನು ಪ್ರಾರಂಭಿಸಬೇಕು ಎಂದು ಅವರು ಕೋರಿದರು. ಸಾಮಾಜಿಕ ಜಾಲತಾಣಗಳ ಮೂಲಕ ಮರಾಠಿ ಸಾಹಿತ್ಯಕ್ಕೆ ಸೇವೆ ಸಲ್ಲಿಸುತ್ತಿರುವ ಅನೇಕ ಯುವಕರ ಪ್ರಯತ್ನವನ್ನು ಶ್ಲಾಘಿಸಿದ ಅವರು, ಅವರ ಪ್ರತಿಭೆ ಗುರುತಿಸಲು ವೇದಿಕೆ ಕಲ್ಪಿಸಿಕೊಡುವಂತೆ ಕರೆ ನೀಡಿದರು. ಆನ್‌ಲೈನ್ ಪ್ಲಾಟ್‌ಫಾರ್ಮ್‌ ಗಳು ಮತ್ತು ಭಾಷಿನಿಯಂತಹ ಉಪಕ್ರಮಗಳ ಮೂಲಕ ಮರಾಠಿ ಕಲಿಕೆಯನ್ನು ಉತ್ತೇಜಿಸುವ ಮಹತ್ವವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಯುವಕರಲ್ಲಿ ಮರಾಠಿ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಸ್ಪರ್ಧೆಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು. ಮರಾಠಿ ಸಾಹಿತ್ಯದ ಈ ಪ್ರಯತ್ನಗಳು ಮತ್ತು ಸ್ಫೂರ್ತಿಗಳು ವಿಕಸಿತ ಭಾರತಕ್ಕಾಗಿ 140 ಕೋಟಿ ನಾಗರಿಕರಿಗೆ ಸ್ಫೂರ್ತಿ ನೀಡುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಮಹಾದೇವ ಗೋವಿಂದ ರಾನಡೆ, ಹರಿನಾರಾಯಣ ಆಪ್ಟೆ, ಮಾಧವ ಶ್ರೀಹರಿ ಆನೆ ಮತ್ತು ಶಿವರಾಮ ಪರಾಂಜಪೆ ಅವರಂತಹ ಗಣ್ಯ ವ್ಯಕ್ತಿಗಳ ಶ್ರೇಷ್ಠ ಪರಂಪರೆಯನ್ನು ಮುಂದುವರಿಸುವಂತೆ ಕರೆ ನೀಡಿದ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು ಮತ್ತು ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.

ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್; ರಾಜ್ಯಸಭಾ ಸದಸ್ಯ ಶ್ರೀ ಶರದ್ ಪವಾರ್; 98ನೇ ಸಮ್ಮೇಳನದ ಅಧ್ಯಕ್ಷೆ ಡಾ. ತಾರಾ ಭಾವಲ್ಕರ್ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

98ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನವು ಫೆಬ್ರವರಿ 21 ರಿಂದ 23 ರವರೆಗೆ ನಡೆಯುತ್ತಿದ್ದು, ವೈವಿಧ್ಯಮಯ ಚರ್ಚೆಗಳು, ಪುಸ್ತಕ ಪ್ರದರ್ಶನ, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಖ್ಯಾತ ಸಾಹಿತಿಗಳೊಂದಿಗೆ ಸಂವಾದಾತ್ಮಕ ಅಧಿವೇಶನಗಳನ್ನು ಒಳಗೊಂಡಿರುತ್ತದೆ. ಈ ಸಮ್ಮೇಳನವು ಮರಾಠಿ ಸಾಹಿತ್ಯದ ಕಾಲಾತೀತ ಪ್ರಸ್ತುತತೆಯನ್ನು ಆಚರಿಸುತ್ತದೆ ಮತ್ತು ಭಾಷಾ ಸಂರಕ್ಷಣೆ, ಅನುವಾದ ಮತ್ತು ಸಾಹಿತ್ಯ ಕೃತಿಗಳ ಮೇಲೆ ಡಿಜಿಟಲೀಕರಣದ ಪ್ರಭಾವ ಸೇರಿದಂತೆ ಪ್ರಸ್ತುತ ಅದರ ಪಾತ್ರವನ್ನು ಅನ್ವೇಷಿಸುತ್ತದೆ.

71 ವರ್ಷಗಳ ನಂತರ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಮರಾಠಿ ಸಾಹಿತ್ಯ ಸಮ್ಮೇಳನವು ಪುಣೆಯಿಂದ ದೆಹಲಿಗೆ ಸಾಂಕೇತಿಕ ಸಾಹಿತ್ಯಿಕ ರೈಲು ಪ್ರಯಾಣವನ್ನು ಸಹ ಒಳಗೊಂಡಿದೆ, ಇದರಲ್ಲಿ 1,200 ಮಂದಿ ಭಾಗವಹಿಸುವವರು ಸಾಹಿತ್ಯದ ಏಕೀಕೃತ ಮನೋಭಾವವನ್ನು ಪ್ರದರ್ಶಿಸುತ್ತಾರೆ. 2,600 ಕ್ಕೂ ಹೆಚ್ಚು ಕವನಗಳ ಪ್ರಸ್ತುತಿ, 50 ಪುಸ್ತಕಗಳ ಬಿಡುಗಡೆ ಮತ್ತು 100 ಪುಸ್ತಕ ಮಳಿಗೆಗಳನ್ನು ಒಳಗೊಂಡಿರುತ್ತದೆ. ನಾಡಿನ ಖ್ಯಾತ ವಿದ್ವಾಂಸರು, ಸಾಹಿತಿಗಳು, ಕವಿಗಳು ಮತ್ತು ಸಾಹಿತ್ಯಾಭಿಮಾನಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ.

 

 

*****