Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

72ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕೆಂಪುಕೋಟೆಯ ಮೇಲಿಂದ ಪ್ರಧಾನಮಂತ್ರಿಯವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 72ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಯ ಮೇಲಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು.

ಭಾರತ ಇಂದು ಆತ್ಮ ವಿಶ್ವಾಸದಿಂದ ಬೀಗುತ್ತಿದೆ ಎಂದು ಪ್ರತಿಪಾದಿಸಿದ ಪ್ರಧಾನಿ, ಆರು ಯುವ ಮಹಿಳಾ ನೌಕಾಧಿಕಾರಿಗಳ ನಾವಿಕ ಸಾಗರ ಪರಿಕ್ರಮ ಮತ್ತು ವಿನಮ್ರ ಹಿನ್ನೆಲೆಯಿಂದ ಬಂದ ಭಾರತದ ಯುವ ಕ್ರೀಡಾಪಟುಗಳ ಯಶಸ್ಸಿನ ಬೆಳವಣಿಗೆಯನ್ನು ಪ್ರಸ್ತಾಪಿಸಿದರು. ಪ್ರತಿ 12 ವರ್ಷಗಳಿಗೊಮ್ಮೆ ನೀಲಗಿರಿ ಬೆಟ್ಟದಲ್ಲಿ ಅರಳುವ ನೀಲಕುರುಂಜಿ ಪುಷ್ಪವನ್ನು ಪ್ರಧಾನಮಂತ್ರಿ ಪ್ರಸ್ತಾಪಿಸಿದರು. ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಅಧಿವೇಶನವು ಸಾಮಾಜಿಕ ನ್ಯಾಯಕ್ಕೆ ಮುಡಿಪಾಗಿತ್ತು ಎಂದು ಹೇಳಿದರು. ಭಾರತವು ಈಗ ವಿಶ್ವದ ಆರನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿದೆ ಎಂದರು.

ಪ್ರಧಾನಮಂತ್ರಿಯವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಭದ್ರತಾ ಪಡೆಗಳು ಮತ್ತು ಪೊಲೀಸ್ ಪಡೆಗಳ ಯೋಧರಿಗೆ ಅವರು ನಮನ ಸಲ್ಲಿಸಿದರು. 1919ರ ಬೈಸಾಕಿ ದಿನದಂದು ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಹುತಾತ್ಮರನ್ನು ಅವರು ಸ್ಮರಿಸಿದರು. ದೇಶದ ಕೆಲವು ಭಾಗಗಳಲ್ಲಿ ಪ್ರವಾಹದಿಂದ ಬಾಧಿತರಾಗಿರುವ ಜನರಿಗೆ ಅವರು ಸಂತಾಪ ಸೂಚಿಸಿದರು.

ಕವಿ ಸುಬ್ರಮಣಿಯಂ ಭಾರತಿ ಅವರನ್ನು ಉಲ್ಲೇಖಿಸಿ, ಅವರು ಎಲ್ಲಾ ಬಗೆಯ ಸಂಕೋಲೆಗಳಿಂದ ಸ್ವಾತಂತ್ರ್ಯ ಪಡೆವ ಮಾರ್ಗವನ್ನು ಭಾರತವು ಜಗತ್ತಿಗೆ ತೋರಿಸಿದೆ ಎಂದರು. ಅಂಥ ಕನಸುಗಳನ್ನು ಅಸಂಖ್ಯಾತ ಸ್ವಾತಂತ್ರ್ಯ ಯೋಧರು ಹಂಚಿಕೊಂಡಿದ್ದಾರೆ ಎಂದರು. ಬಡವರಿಗೂ ನ್ಯಾಯ ದೊರಕಬೇಕು, ಮತ್ತು ಮುಂದೆ ಸಾಗಲು ಸರ್ವರಿಗೂ ಸಮಾನ ಅವಕಾಶ ದೊರಕಬೇಕು ಎಂಬ ಕನಸು ನನಸು ಮಾಡಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಗ್ರವಾದ ಸಂವಿಧಾನವನ್ನು ರಚಿಸಿದರು ಎಂದರು. ಭಾರತೀಯರು ಈಗ ಒಗ್ಗೂಡಿ ದೇಶ ಕಟ್ಟಲು ಮುಂದೆ ಬರುತ್ತಿದ್ದಾರೆ ಎಂದರು. ಶೌಚಾಲಯ ನಿರ್ಮಾಣ, ಹಳ್ಳಿಗಳಿಗೂ ವಿದ್ಯುತ್ ತಲುಪಿಸುವುದು, ಎಲ್.ಪಿ.ಜಿ. ಅನಿಲ ಸಂಪರ್ಕ, ಮನೆ ನಿರ್ಮಾಣ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಆಗುತ್ತಿರುವ ಅಭಿವೃದ್ಧಿಯ ಗತಿಯ ಬಗ್ಗೆ ಅವರು ಉದಾಹರಣೆಗಳನ್ನು ನೀಡಿದರು.

ರೈತರಿಗೆ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ನೀಡುವುದು, ಜಿ.ಎಸ್.ಟಿ, ಮತ್ತು ಒಂದು ಶ್ರೇಣಿ ಒಂದೇ ಪಿಂಚಣಿಯಂಥ ದೀರ್ಘ ಕಾಲದಿಂದ ನನೆಗುದಿಗೆ ಬಿದ್ದಿದ್ದ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದರು. ಕೇಂದ್ರ ಸರ್ಕಾರಕ್ಕೆ ರಾಷ್ಟ್ರದ ಹಿತವೇ ಪರಮೋಚ್ಚವಾಗಿರುವುದರಿಂದಲೇ ಇದೆಲ್ಲವೂ ಸಾಧ್ಯವಾಗಿದೆ ಎಂದರು.

2013ಕ್ಕೆ ಹೋಲಿಸಿದರೆ ಅಂತಾರಾಷ್ಟ್ರೀಯ ಸಂಸ್ಧೆಗಳು ಮತ್ತು ಸಂಘಟನೆಗಳು ಭಾರತವನ್ನು ಹೇಗೆ ವಿಭಿನ್ನವಾಗಿ ನೋಡುತ್ತಿವೆ ಎಂಬುದನ್ನು ಪ್ರಧಾನಿ ಪ್ರಸ್ತಾಪಿಸಿದರು. “ನೀತಿ ಪಾರ್ಶ್ವವಾಯು” ಸಮಯದಿಂದ ಭಾರತವು “ಸುಧಾರಣೆ, ಕಾರ್ಯಕ್ಷಮತೆ, ರೂಪಾಂತರ” ಕ್ಕೆ ಪರಿವರ್ತನೆಯಾಗಿದೆ ಎಂದು ಅವರು ಹೇಳಿದರು. ಭಾರತವು ಇಂದು ಅಂತಾರಾಷ್ಟ್ರೀಯ ಸೌರ ಸಹಯೋಗದ ನೇತೃತ್ವ ವಹಿಸಿರುವುದಲ್ಲದೆ, ಹಲವು ಮಹತ್ವದ ಬಹುಪಕ್ಷೀಯ ಸಂಘಟನೆಗಳ ಸದಸ್ಯನಾಗಿದೆ ಎಂದು ಹೇಳಿದರು.

ಈಶಾನ್ಯ ಭಾರತ ಇಂದು ಕ್ರೀಡಾ ಸಾಧನೆಯಿಂದ, ವಿದ್ಯುತ್ ಸಂಪರ್ಕವೇ ಇಲ್ಲದ ದೂರದ ಕೊನೆಯ ಹಳ್ಳಿಗೂ ವಿದ್ಯುತ್ ಸಂಪರ್ಕದಿಂದ ಮತ್ತು ಸಾವಯವ ಕೃಷಿ ತಾಣವಾಗಿ ಸುದ್ದಿಯಲ್ಲಿದೆ ಎಂದ ಪ್ರಧಾನಮಂತ್ರಿಯವರು ಹೇಳಿದರು.

ಮುದ್ರಾ ಯೋಜನೆಯಡಿಯಲ್ಲಿ 13 ಕೋಟಿ ರೂಪಾಯಿ ಸಾಲ ವಿತರಿಸಲಾಗಿದ್ದು, ಈ ಪೈಕಿ 4 ಕೋಟಿ ರೂಪಾಯಿ ಸಾಲವನ್ನು ಅಂಥ ಸಾಲವನ್ನು ಮೊದಲ ಬಾರಿಗೆ ಪಡೆಯುತ್ತಿರುವ ಫನಾನುಭವಿಗಳಿಗೆ ವಿತರಿಸಲಾಗಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು.

ಭಾರತವು ತನ್ನ ವಿಜ್ಞಾನಿಗಳ ಬಗ್ಗೆ ಹೆಮ್ಮೆ ಪಡುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. 2022ರ ಹೊತ್ತಿಗೆ ತನ್ನದೇ ಸ್ವಯಂ ಸಾಮರ್ಥ್ಯದಿಂದ ಭಾರತ ಕೈಗೊಳ್ಳಲಿರುವ ಬಾಹ್ಯಾಕಾಶಕ್ಕೆ ಮಾನವ ಸಹಿತ ಅಭಿಯಾನವಾದ “ಗಗನ-ಯಾನ”ದ ಬಗ್ಗೆ ಅವರು ಪ್ರಕಟಿಸಿದರು. ಇಂಥ ಕಾರ್ಯ ಮಾಡುತ್ತಿರುವ ನಾಲ್ಕನೇ ರಾಷ್ಟ್ರ ಭಾರತ ಎಂದೂ ಅವರು ಹೇಳಿದರು.

2022ರ ಹೊತ್ತಿಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಚಿಂತನೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಅತ್ಯಂತ ಕ್ಲಿಷ್ಟಕರವಾದ ಕಾರ್ಯವನ್ನು ಸಾಧಿಸುವುದು ನಮ್ಮ ಗುರಿಯಾಗಿದೆ ಎಂದರು. ಉಜ್ವಲ ಯೋಜನೆ ಮತ್ತು ಸೌಭಾಗ್ಯ ಯೋಜನೆ ಜನರಿಗೆ ಗೌರವ ತರುತ್ತಿವೆ ಎಂದರು. ಡಬ್ಲ್ಯು.ಎಚ್.ಓ. ದಂಥ ಸಂಘಟನೆಗಳು ಸ್ವಚ್ಛಭಾರತ್ ನಲ್ಲಿ ಆಗಿರುವ ಪ್ರಗತಿಯನ್ನು ಶ್ಲಾಘಿಸಿವೆ ಎಂದರು.

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜಯಂತಿಯ ಅಂಗವಾಗಿ ಈ ವರ್ಷ ಸೆಪ್ಟೆಂಬರ್ 25ರಂದು ಜನ ಆರೋಗ್ಯ ಅಭಿಯಾನವನ್ನು ಉದ್ಘಾಟಿಸಲಾಗುವುದು ಎಂದು ಪ್ರಧಾನಮಂತ್ರಿ ಪ್ರಕಟಿಸಿದರು. ಭಾರತದಲ್ಲಿ ಬಡವರು ಉತ್ತಮ ಗುಣಮಟ್ಟ ಮತ್ತು ಕೈಗೆಟಕುವ ದರದ ಆರೋಗ್ಯ ಸೇವೆ ಪಡೆಯುತ್ತಿದ್ದಾರೆ ಎಂಬುದನ್ನು ನಾವು ಖಾತ್ರಿಪಡಿಸಿಕೊಳ್ಳುತ್ತೇವೆ. ಈ ಯೋಜನೆಯಿಂದ 50 ಕೋಟಿ ಜನರಿಗೆ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.

6 ಕೋಟಿ ನಕಲಿ ಫಲಾನುಭವಿಗಳನ್ನು ತೆಗೆದುಹಾಕುವ ಮೂಲಕ ಸರ್ಕಾರದ ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವ ಗುರಿಯನ್ನು ಹೇಗೆ ಸಾಧಿಸಲಾಗಿದೆ ಎಂದು ಪ್ರಧಾನ ಮಂತ್ರಿ ವಿವರಿಸಿದರು. ಪ್ರಾಮಾಣಿಕ ತೆರಿಗೆದಾರರು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದ ಅವರು, ಅವರಿಂದಾಗಿ ಹಲವರ ಹೊಟ್ಟೆ ತುಂಬಿಸಲಾಗುತ್ತಿದೆ ಮತ್ತು ಬಡವರ ಬದುಕಿನಲ್ಲಿ ಪರಿವರ್ತನೆ ತರಲಾಗುತ್ತಿದೆ ಎಂದರು.

ಭ್ರಷ್ಟ ಮತ್ತು ಕಪ್ಪುಹಣ ಹೊಂದಿರುವವರನ್ನು ಕ್ಷಮಿಸುವುದಿಲ್ಲ ಎಂದು ಪ್ರಧಾನಮಂತ್ರಿಯವರು ಪ್ರತಿಪಾದಿಸಿದರು. ದೆಹಲಿಯ ರಸ್ತೆಗಳು ಈಗ ಬಲಶಾಲಿ ದಳ್ಳಾಳಿಗಳಿಂದ ಮುಕ್ತವಾಗಿದ್ದು, ಬಡವರ ದನಿ ಆಲಿಸಲಾಗುತ್ತಿದೆ ಎಂದರು.

ಭಾರತೀಯ ಸಶಸ್ತ್ರ ಪಡೆಗಳ ಕಿರು ಸೇವೆ ಆಯೋಗದ ಮಹಿಳಾ ಅಧಿಕಾರಿಗಳು ಈಗ ಪಾರದರ್ಶಕ ಆಯ್ಕೆ ಪ್ರಕ್ರಿಯೆಯ ಮೂಲಕ ಶಾಶ್ವತ ಆಯೋಗಕ್ಕೆ ಅರ್ಹರಾಗಿದ್ದಾರೆ ಎಂದು ಪ್ರಧಾನ ಮಂತ್ರಿ ಘೋಷಿಸಿದರು. .

ತ್ರಿವಳಿ ತಲಾಖ್ ಪದ್ಧತಿ ಮುಸ್ಲಿಮ್ ಮಹಿಳೆಯರಿಗೆ ದೊಡ್ಡ ಅನ್ಯಾಯ ಮಾಡುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಮುಸ್ಲಿಂ ಮಹಿಳೆಯರಿಗೆ ನ್ಯಾಯದ ಖಾತ್ರಿ ಪಡಿಸಲು ಶ್ರಮಿಸಲಾಗುತ್ತಿದೆ ಎಂದರು.

ದೇಶದಲ್ಲಿ ಎಡಪಂಥೀಯ ವಿಧ್ವಂಸಕತೆ ಇಳಿಮುಖವಾಗುತ್ತಿರುವ ಬಗ್ಗೆ ಪ್ರಧಾನಮಂತ್ರಿ ಮಾತನಾಡಿದರು. ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ “ಇನ್ಸಾನಿಯತ್, ಜಮೂರಿಯತ್, ಕಾಶ್ಮೀರಿಯತ್’ ಎಂಬ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಮುನ್ನೋಟವನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು.

ಸರ್ವರಿಗೂ ಸೂರು, ಸರ್ವರಿಗೂ ವಿದ್ಯುತ್, ಸರ್ವರಿಗೂ ಶುದ್ಧ ಅಡುಗೆ ಇಂಧನ, ಸರ್ವರಿಗೂ ನೀರು, ಸರ್ವರಿಗೂ ನೈರ್ಮಲ್ಯ, ಎಲ್ಲರಿಗೂ ಕೌಶಲ್ಯ, ಸರ್ವರಿಗೂ ಆರೋಗ್ಯ, ಸರ್ವರಿಗೂ ವಿಮೆ ಮತ್ತು ಸರ್ವರಿಗೂ ಸಂಪರ್ಕ ಕುರಿತಂತೆ ಪ್ರತಿಪಾದಿಸಿದರು.

ಅಪೌಷ್ಟಿಕತೆಯ ನಿರ್ಮೂಲನೆ ಮತ್ತು ಭಾರತದ ಪ್ರಗತಿಯನ್ನು ಕಾಣಲು ಹಾಗೂ ಭಾರತೀಯರಿಗೆ ಗುಣಮಟ್ಟದ ಜೀವನ ದೊರಕುವುದನ್ನು ಕಾಣಲು ತಾವು ಕಾತರ ಮತ್ತು ಉತ್ಸುಕರಾಗಿರುವುದಾಗಿ ಹೇಳಿದರು.

*****