Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

70 ನೇ ಸಂವಿಧಾನ ದಿನದ ಪ್ರಯುಕ್ತ ಸಂಸತ್ ನ ಜಂಟಿ ಸದನ ಉದ್ದೇಶಿಸಿ ಪ್ರಧಾನ ಮಂತ್ರಿಗಳ ಭಾಷಣ


ಆದರಣೀಯ ರಾಷ್ಟ್ರಪತಿಗಳೇ, ಉಪ ರಾಷ್ಟ್ರಪತಿಗಳೇ, ಮಾನ್ಯ ಸ್ಪೀಕರ್ ಅವರೇ ಶ್ರೀ ಪ್ರಹ್ಲಾದ್ ಜಿ ಅವರೇ ಮತ್ತು ಸನ್ಮಾನ್ಯ ಸಾರ್ವಜನಿಕ ಪ್ರತಿನಿಧಿಗಳೇ

ಕೆಲ ದಿನಗಳು ಮತ್ತು ಸಂದರ್ಭಗಳು ನಮ್ಮನ್ನು ಇತಿಹಾಸದೊಂದಿಗೆ ನಮ್ಮ ಸಂಬಂಧ ಬೆಳೆಯುವಂತೆ ಮಾಡಿ ಭವಿಷ್ಯತ್ತಿಗೆ ನಾವು ಕಾರ್ಯನಿರ್ವಹಿಸುವಂತೆ ಪ್ರೇರೆಪಿಸುತ್ತವೆ. 26 ನವೆಂಬರ್ ಇಂದಿನ ದಿನ ಐತಿಹಾಸಿಕ ದಿನವಾಗಿದೆ. 70 ವರ್ಷಗಳ ಹಿಂದೆ ವಿಧಿವತ್ತಾಗಿ ಹೊಸ ರೂಪುರೇಷೆಗಳೊಂದಿಗೆ ನಾವು ಸಂವಿಧಾನವನ್ನು ಅಂಗೀಕರಿಸಿದ್ದೆವು. ಇದರ ಜೊತೆಗೆ ಭಾರತದ ಮಹಾನ್ ಸರ್ವೋಚ್ಚ ಪರಂಪರೆ ಸಾವಿರಾರು ವರ್ಷಗಳ ಸಾಂಸ್ಕೃತಿಕ ಬಳುವಳಿ ವಸುದೈವ ಕುಟುಂಬಕಂ ಎಂಬ ವಿಚಾರಗಳೊಂದಿಗೆ ಬಾಳುವ ಉದಾತ್ತ ಸಂಪ್ರದಾಯಕ್ಕೆ ಇದೇ ನವೆಂಬರ್ 26 ರಂದು ಮುಂಬೈಯಲ್ಲಿ ಛಿದ್ರ ಮಾಡುವಂತಹ ಉಗ್ರರ ಪ್ರಯತ್ನ ಮನಸ್ಸಿಗೆ ನೋವನ್ನುಂಟು ಮಾಡುತ್ತದೆ. ಇಂದು ನಾನು ಅಗಲಿದ ಎಲ್ಲ ಆತ್ಮಗಳಿಗೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. 7 ದಶಕಗಳ ಹಿಂದೆ ಇದೇ ಸೆಂಟ್ರಲ್ ಹಾಲ್ ನಲ್ಲಿ ಎಷ್ಟೋ ಪವಿತ್ರ ಶಬ್ದಗಳು ಮಾರ್ದನಿಸಿದ್ದವು. ಸಂವಿಧಾನದ ಒಂದೊಂದು ಅನುಚ್ಛೇದದ ಕುರಿತು ಸೂಕ್ಷ್ಮವಾದ ಚರ್ಚೆಗಳು ನಡೆದವು. ತರ್ಕ, ವಿತರ್ಕಗಳು ನಡೆದವು, ಹೊಸ ವಿಚಾರಗಳು ಮೂಡಿಬಂದವು, ಆಸ್ಥೆ, ವಿಶ್ವಾಸ, ಕನಸುಗಳು ಸಂಕಲ್ಪಗಳ ಕುರಿತು ಚರ್ಚೆ ನಡೆಯಿತು. ಹೀಗೆ ಈ ಸದನ, ಜ್ಞಾನ ಭಂಡಾರವಾಗಿತ್ತು. ಇಲ್ಲಿ ಭಾರತದ ಪ್ರತಿಯೊಂದು ಭಾಗದ ಕನಸನ್ನು ಶಬ್ದಗಳಲ್ಲಿ ಹೆಣೆಯುವ ಪ್ರಯತ್ನ ನಡೆದಿತ್ತು. ಡಾಕ್ಟರ್ ರಾಜೇಂದ್ರ ಪ್ರಸಾದ್ ಡಾಕ್ಟರ್ ಭೀಮರಾವ್ ಬಾಬಾ ಸಾಹೇಬ್ ಅಂಬೇಡ್ಕರ್ ಸರ್ದಾರ್ ವಲ್ಲಭ್ ಭಾಯಿ ಪಟೇಲ್, ಪಂಡಿತ್ ನೆಹರು, ಆಚಾರ್ಯ ಕ್ರಿಪಲಾಣಿ ಯವರು, ಮೌಲಾನಾ ಆಝಾದ್, ಪುರುಷೋತ್ತಮ್ ದಾಸ್ ಟಂಡನ್, ಸುಚೇತಾ ಕ್ರಿಪಲಾಣಿ, ಹನ್ಸಾ ಮೆಹ್ತಾ, ಎಲ್ ಡಿ ಕೃಷ್ಣಸ್ವಾಮಿ ಐಯ್ಯರ್, ಎನ್ ಕೆ ಗೋಪಾಲ ಸ್ವಾಮಿ ಐಯ್ಯಂಗಾರ್, ಜಾನ್ ಮಥಾಯ್ – ಇಂಥ ಅಗಣಿತ ಮಹಾನ್ ವ್ಯಕ್ತಿಗಳು ನೇರ ಅಥವಾ ಪರೋಕ್ಷವಾಗಿ ಕೊಡುಗೆಯನ್ನು ನೀಡಿ ಇಂಥ ಮಹಾನ್ ಪರಂಪರೆಯನ್ನು ನಮಗೆ ನೀಡಿದ್ದಾರೆ. ಇಂದು ಈ ಸುಸಂದರ್ಭದಲ್ಲಿ ನಾನು ಆ ಎಲ್ಲ ಶ್ರೇಷ್ಠ ವ್ಯಕ್ತಿಗಳನ್ನು ಸ್ಮರಿಸುತ್ತೇನೆ ಮತ್ತು ಅವರಿಗೆ ಆದರದಿಂದ ನಮಿಸುತ್ತೇನೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನವೆಂಬರ್ 25 1949 ರಂದು ಸಂವಿಧಾನವನ್ನು ಅಂಗೀಕರಿಸುವ ಒಂದು ದಿನ ಮೊದಲು ತಮ್ಮ ಕೊನೆಯ ಭಾಷಣದಲ್ಲಿ ಏನು ಹೇಳಿದ್ದರೋ ಅದನ್ನು ಉಲ್ಲೇಖಿಸಬಯಸುತ್ತೇನೆ. ಭಾರತ ಮೊದಲ ಬಾರಿಗೆ 1947 ರಲ್ಲಿ ಸ್ವತಂತ್ರವಾಯಿತು ಅಥವಾ 26 ಜನವರಿ 1950 ರಲ್ಲಿ ಗಣತಂತ್ರವಾಯಿತು ಎಂದಲ್ಲ ಭಾರತ ಮೊದಲೂ ಸ್ವತಂತ್ವಾಗಿತ್ತು ಮತ್ತು ನಮ್ಮಲ್ಲಿ ಅನೇಕ ಗಣತಂತ್ರಗಳಿದ್ದವು ಎಂಬುದನ್ನು ಬಾಬಾ ಸಾಹೇಬರು ದೇಶಕ್ಕೆ ನೆನಪಿಸಿಕೊಟ್ಟಿದ್ದರು. ಆದರೆ ನಮ್ಮದೇ ತಪ್ಪಿನಿಂದಾಗಿ ನಾವು ಇತಿಹಾಸದಲ್ಲಿ ಸ್ವಾತಂತ್ರ್ಯವನ್ನು ಕಳೆದುಕೊಂಡೆವು ಮತ್ತು ಗಣತಂತ್ರ ವ್ಯಕ್ತಿತ್ವವನ್ನೂ ಕಳೆದುಕೊಂಡೆವು ಎಂದು ತಮ್ಮ ದುಖಃವನ್ನು ವ್ಯಕ್ತಪಡಿಸಿದ್ದರು. ಇಂಥ ಪರಿಸ್ಥಿತಿಯಲ್ಲಿ ನಾವು ಸ್ವತಂತ್ರವೇನೋ ಆದೆವು. ನಮ್ಮ ದೇಶ ಗಣತಂತ್ರವೂ ಆಯಿತು ಆದರೆ ನಾವಿದನ್ನು ಉಳಿಸಿಕೊಳ್ಳುತ್ತೆವೆಯೇ? ಹಿಂದಿನ ಅನುಭವದಿಂದ ಪಾಠ ಕಲಿಯುತ್ತೇವೆಯೇ? ಎಂದು ಬಾಬಾ ಸಾಹೇಬರು ದೇಶವನ್ನು ಎಚ್ಚರಿಸಿದ್ದರು. ಇಂದು ಇಲ್ಲಿ ಬಾಬಾ ಸಾಹೇಬರು ಇದ್ದರೆ ಅವರಿಗಿಂತ ಸಂತೋಷಪಡುವವರು ಬೇರಾರೂ ಇರುತ್ತಿರಲಿಲ್ಲ. ಏಕೆಂದರೆ ಇಷ್ಟು ವರ್ಷಗಳಲ್ಲಿ ಭಾರತ ಅವರ ಪ್ರಶ್ನೆಗಳಿಗೆ ಉತ್ತರ ನೀಡುವುದಲ್ಲದೇ ಸ್ವಾತಂತ್ರ್ಯವನ್ನು ಮತ್ತು ಪ್ರಜಾಪ್ರಭುತ್ವವನ್ನು ಮತ್ತಷ್ಟು ಸಮೃದ್ಧ ಮತ್ತು ಸಶಕ್ತಗೊಳಿಸಿದೆ. ಆದ್ದರಿಂದ ಈ ಸಂದರ್ಭದಲ್ಲಿ ಇಂದು ಕಳೆದ 7 ದಶಕಗಳಿಂದ ಸಂವಿಧಾನದ ಚೈತನ್ಯವನ್ನು ಅಖಂಡವಾಗಿ ಕಾಪಾಡಿಕೊಂಡು ಬಂದ ಕಾರ್ಯ ನಿರ್ವಾಹಕ, ನ್ಯಾಯಾಂಗ, ಶಾಸಕಾಂಗದ ಎಲ್ಲ ಸದಸ್ಯರಿಗೂ ಗೌರವಯುತವಾಗಿ ಸ್ಮರಿಸುತ್ತೇನೆ ಮತ್ತು ನಮಿಸುತ್ತೇನೆ. ವಿಶೇಷವಾಗಿ ನಾನು 130 ಕೋಟಿ ಭಾರತೀಯರ ಎದುರು ತಲೆಬಾಗುತ್ತೇನೆ. ಅವರು ಎಂದಿಗೂ ಭಾರತದ ಪ್ರಜಾಪ್ರಭುತ್ವದ ಮೇಲಿನ ಅಚಲ ನಂಬಿಕೆಯಿಟ್ಟು ಅದರ ಪ್ರಭೆ ಕುಂದಲು ಬಿಡಲಿಲ್ಲ. ನಮ್ಮ ಸಂವಿಧಾನವನ್ನು ಎಂದಿಗೂ ಒಂದು ಪವಿತ್ರ ಗ್ರಂಥವಾಗಿ ಮತ್ತು ದಾರಿದೀಪದಂತೆ ಪರಿಗಣಿಸಲಾಗಿದೆ

ಸಂವಿಧಾನದ 70 ವರ್ಷಗಳು ನಮಗೆ ಸಂತಸ, ಶ್ರೇಷ್ಠತೆ ಮತ್ತು ನಿಷ್ಕರ್ಷದ ಭಾವವನ್ನು ತಂದಿದೆ. ಸಂವಿಧಾನದ ಭಾವನೆ ಸ್ಥಿರ ಮತ್ತು ಅಚಲವಾಗಿರುವುದು ಹರ್ಷ. ಒಂದೊಮ್ಮೆ ಇಂಥ ಪ್ರಯತ್ನಗಳು ನಡೆದಿದ್ದರೂ ದೇಶದ ಜನತೆ ಅದನ್ನು ಅಸಫಲಗೊಳಿಸಿದ್ದಾರೆ ಮತ್ತು ಸಂವಿಧಾನದ ಮೇಲೆ ಯಾವ ಆತಂಕ ಬರದಂತೆ ನೋಡಿಕೊಂಡಿದ್ದಾರೆ. ನಮ್ಮ ಸಂವಿಧಾನದ ಬಲದಿಂದ ನಾವು ಸುನಿಶ್ಚಿತವಾಗಿ ಶ್ರೇಷ್ಠತೆಯನ್ನು ದಾಖಲಿಸಿದ್ದೇವೆ ಮತ್ತು ಒಂದೇ ಭಾರತ ಶ್ರೇಷ್ಠ ಭಾರತದೆಡೆಗೆ ಸಾಗಲು ನಮಗೆ ಸಾಧ್ಯವಾಗಿದೆ. ಸಂವಿಧಾನದ ಪರೀಧಿಯಲ್ಲಿದ್ದು ನಾವು ಹಲವು ಸುಧಾರಣೆಗಳನ್ನು ತಂದಿದ್ದೇವೆ. ಮತ್ತು ನಿಷ್ಕರ್ಷವೇನೆಂದರೆ ಬೃಹತ್ ಮತ್ತು ವಿವಧತೆಯಿಂದ ಕೂಡಿದ ಭಾರತದ ಅಭಿವೃದ್ಧಿಗೆ, ವಿನೂತನ ಭವಿಷ್ಯಕ್ಕೆ, ನವಭಾರತಕ್ಕೆ ಒಂದೇ ಒಂದು ಮಾರ್ಗವೆಂದರೆ ಅದು ಸಂವಿಧಾನ. ಸಂವಿಧಾನದ ಚೈತನ್ಯವು ಅಖಂಡವಾಗಿರುವ ಏಕೈಕ ಮಾರ್ಗವಾಗಿದೆ. ನಮ್ಮ ಸಂವಿಧಾನವು ನಮಗೆ ಶ್ರೇಷ್ಠ ಮತ್ತು ಅತ್ಯಂತ ಪವಿತ್ರವಾದ ಗ್ರಂಥವಾಗಿದೆ. ಇದು ನಮ್ಮ ಜೀವನ, ನಮ್ಮ ಸಮಾಜ, ನಮ್ಮ ಸಂಪ್ರದಾಯಗಳು, ನಮ್ಮ ನಂಬಿಕೆಗಳು, ನಮ್ಮ ನಡವಳಿಕೆ ಮತ್ತು ನಮ್ಮ ನೀತಿಗಳನ್ನು ಒಳಗೊಂಡ ಪುಸ್ತಕವಾಗಿದೆ. ಇದರಲ್ಲಿ ಹಲವಾರು ಸವಾಲುಗಳಿಗೆ ಪರಿಹಾರವಿದೆ. ಹೊರಗಿನ ಬೆಳಕಿಗೆ ಕಿಟಕಿಗಳನ್ನು ತೆರೆದಿಟ್ಟಿದ್ದರಿಂದ ಜೊತೆಗೆ ಒಳಗಿರುವ ಪ್ರಕಾಶವೂ ದೇದೀಪ್ಯಮಾನವಾಗಿ ಬೆಳಗುವಂತೆ ಅವಕಾಶ ಕಲ್ಪಿಸಿರುವುದರಿಂದ ನಮ್ಮ ಸಂವಿಧಾನ ಬಹಳ ವ್ಯಾಪಕವಾಗಿದೆ.

ಇಂದು ಈ ಸಂದರ್ಭದಲ್ಲಿ 2014 ರಲ್ಲಿ ಕೆಂಪು ಕೋಟೆಯಿಂದ ಮಾತನಾಡಿದ ಒಂದು ಮಾತನ್ನು ಮತ್ತೊಮ್ಮೆ ಹೇಳಲುಬಯಸುತ್ತೇನೆ. ನಾನು ಸಂವಿಧಾನವನ್ನು ವರ್ಣಿಸಬೇಕೆಂದರೆ ಭಾರತೀಯರಿಗೆ ಘನತೆ ಮತ್ತು ಭಾರತಕ್ಕೆ ಏಕತೆ ಎಂಬ ಎರಡು ಸರಳ ಶಬ್ದಗಳಲ್ಲಿ ವರ್ಣಿಸಬಯಸುತ್ತೇನೆ. ನಾಗರಿಕರ ಘನತೆಯನ್ನು ಸರ್ವೋಚ್ಛ ಮಟ್ಟದಲ್ಲಿಟ್ಟು ಸಂಪೂರ್ಣ ಭಾರತದ ಕತೆ ಮತ್ತು ಸಮಗ್ರತೆಯನ್ನು ಉಳಿಸಿಕೊಳ್ಳುವ ಮೂಲಕ ಈ ಎರಡೂ ಮಂತ್ರಗಳನ್ನು ನಮ್ಮ ಸಂವಿಧಾನ ಪೂರೈಸಿದೆ. ನಮ್ಮ ಸಂವಿಧಾನ ಜಾಗತಿಕ ಪ್ರಜಾಪ್ರಭುತ್ವದ ಅತ್ಯುತ್ತಮ ಉದಾಹರಣೆಯಾಗಿದೆ. ಇದು ನಮ್ಮ ಹಕ್ಕುಗಳ ಬಗ್ಗೆ ಹೇಳುವುದು ಮಾತ್ರವಲ್ಲದೇ, ನಮ್ಮ ಕರ್ತವ್ಯಗಳ ಬಗ್ಗೆಯೂ ಅರಿವು ಮೂಡಿಸಿತ್ತದೆ. ಒಂದು ರೀತಿಯಲ್ಲಿ ನಮ್ಮ ಸಂವಿಧಾನ ವಿಶ್ವದಲ್ಲೇ ಅತ್ಯಂತ ಜಾತ್ಯತೀತವಾದುದು, ನಾವು ಏನು ಮಾಡಬೇಕು ಎಂಬುದಕ್ಕೆ, ಎಷ್ಟು ವಿಶಾಲವಾಗಿ ಕನಸುಕಾಣಬಹುದು ಮತ್ತು ನಾವು ಯಾವ ಮಟ್ಟ ತಲುಪಬೇಕು ಎಂಬುದಕ್ಕೆ ಯಾವುದೇ ಮಿತಿ ಇಲ್ಲ. ಸಂವಿದಾನದಲ್ಲಿ ಹಕ್ಕುಗಳ ಬಗ್ಗೆ ಹೇಳಲಾಗಿದೆ ಅದೇ ರೀತಿ ಕರ್ತವ್ಯಗಳ ಬಗ್ಗೆಯೂ ತಿಳಿಸಲಾಗಿದೆ. ನಮ್ಮ ಸಂವಿಧಾನ ನಮ್ಮ ದೇಶ ಮತ್ತು ನಮ್ಮ ದೇಶವಾಸಿಗಳು ನಮ್ಮಿಂದ ಬಯಸುವಷ್ಟು ನಾವು ಒಬ್ಬ ವ್ಯಕ್ತಿಯಾಗಿ, ಒಂದು ಕುಟುಂಬವಾಗಿ, ಒಂದು ಸಮಾಜವಾಗಿ, ನಮ್ಮ ಕರ್ತವ್ಯಗಳ ಕುರಿತು ಗಂಭೀರವಾಗಿದ್ದೇವೆಯೇ. ಯಾವುದನ್ನು ಸಂವಿಧಾನದಲ್ಲಿ ಬರೆದಿಲ್ಲವೋ, ಅದನ್ನು ನಾವು ಸಾಮಾಜಿಕ ನಡವಳಿಕೆ ಮೂಲಕ ಸ್ಥಾಪಿಸಬೇಕು ಎಂದು ರಾಜೇಂದ್ರ ಬಾಬು ಜೀ ಅವರು ಹೇಳಿದ್ದರು ಮತ್ತು ಇದು ಭಾರತದ ವಿಶೇಷತೆಯೂ ಆಗಿದೆ. ಕಳೆದ ದಶಕಗಳಲ್ಲಿ ನಾವು ನಮ್ಮ ಅಧಿಕಾರಗಳಿಗೆ ಹೆಚ್ಚು ಒತ್ತು ನೀಡಿದ್ದೇವೆ, ಅದು ಅವಶ್ಯಕವೂ ಆಗಿತ್ತು ಮತ್ತು ಸೂಕ್ತವೂ ಆಗಿತ್ತು ಏಕೆಂದರೆ ಸಮಾಜದಲ್ಲಿ ಎಂಥ ವ್ಯವಸ್ಥೆ ಜಾರಿಗೆ ಬಂದಿತ್ತೆಂದರೆ, ಒಂದು ದೊಡ್ಡ ವರ್ಗವನ್ನು ಅವರ ಹಕ್ಕುಗಳಿಂದ ವಂಚಿತರನ್ನಾಗಿಸಿತ್ತು. ಹಕ್ಕುಗಳ ಬಗ್ಗೆ ಪರಿಚಯಿಸಿದೇ ಈ ದೊಡ್ಡ ವರ್ಗವು ಸಮಾನತೆ ಮತ್ತು ನ್ಯಾಯದ ಮಹತ್ವವನ್ನು ಅರಿಯುವುದು ಸಾಧ್ಯವಿರಲಿಲ್ಲ. ಆದರೆ ಇಂದು ನಮಗೆ ಅಧಿಕಾರದ ಜೊತೆಗೆ ಒಬ್ಬ ನಾಗರಿಕನಾಗಿ ನಮ್ಮ ಕರ್ತವ್ಯಗಳು ಮತ್ತು ನಮ್ಮ ಜವಾಬ್ದಾರಿಯ ಕುರಿತು ಚಿಂತನೆ ಮಾಡಲೇಬೇಕಿದೆ ಎಂಬುದು ಈ ಸಮಯದ ಅವಶ್ಯಕತೆಯಾಗಿದೆ. ಏಕೆಂದರೆ, ಜವಾಬ್ದಾರಿಯನ್ನು ನಿಭಾಯಿಸದೇ ನಾವು ನಮ್ಮ ಅಧಿಕಾರಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಸಾಧ್ಯವಿಲ್ಲ.

ಹಕ್ಕುಗಳು ಮತ್ತು ಕರ್ತವ್ಯಗಳ ನಡುವೆ ಅವಿನಾಭಾವ ಸಂಬಂಧವಿದೆ ಮತ್ತು ಈ ಸಂಬಂಧವನ್ನು ಮಹಾತ್ಮ ಗಾಂಧಿ ಅವರು ಬಹಳ ಸ್ಪಷ್ಟವಾಗಿ ವಿವರಿಸಿದ್ದಾರೆ. ಇಂದು ನಮ್ಮ ದೇಶವು ಪೂಜ್ಯ ಬಾಪು ಅವರ 150ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಅವರ ಉಲ್ಲೇಖ ಬಹಳ ಪ್ರಸ್ತುತವೆನಿಸಿದೆ. ಅಧಿಕಾರವೆಂಬುದು ತಮ್ಮ ಜವಾಬ್ದಾರಿಯನ್ನು ಉತ್ತಮ ನಿರ್ವಹಿಸುವುದೇ ಆಗಿದೆ ಎಂದು ಅವರು ಹೇಳುತ್ತಿದ್ದರು. ಅವರು ಇದನ್ನು ಎಲ್ಲೋ ಬರೆದಿದ್ದರು. ನಿಮ್ಮ ಪ್ರಾಮಾಣಿಕತೆ ಮತ್ತು ಸಮರ್ಪಣೆಯಿಂದ ನೀವು ನಿರ್ವಹಿಸಿದ ಕರ್ತವ್ಯಗಳಿಂದಲೇ ಎಲ್ಲಾ ಹಕ್ಕುಗಳು ಬರುತ್ತವೆ ಎಂದು ನನ್ನ ಅನಕ್ಷರಸ್ಥ ಆದರೆ, ಸಂವೇದನಾಶೀಲ ತಾಯಿ ಅವರಿಂದ ನಾನು ಕಲಿತಿದ್ದೇನೆ. ಕಳೆದ ಶತಮಾನದ ಆರಂಭಿಕ ದಶಕಗಳಲ್ಲಿ ಇಡೀ ಜಗತ್ತು ಹಕ್ಕುಗಳ ಬಗ್ಗೆ ಮಾತನಾಡುವಾಗ ಗಾಂಧೀಜಿ ಅವರು ಒಂದು ಹೆಜ್ಜೆ ಮುಂದೆ ಸಾಗಿ ನಾಗರೀಕರ ಕರ್ತವ್ಯಗಳ ಬಗ್ಗೆ ಮಾತನಾಡೋಣ ಎಂದು ಹೇಳಿದ್ದರು. 1947 ರಲ್ಲಿ ಯುನೆಸ್ಕೋ ದ ಮಹಾ ನಿರ್ದೇಶಕರಾದ ಡಾ. ಜೂಲಿಯನ್ ಹಕ್ಸ್ ಲೇ 60 ಮಂದಿ ಮುಖ್ಯಸ್ಥರಿಗೆ ಪತ್ರವೊಂದನ್ನು ಬರೆದಿದ್ದರು ಮತ್ತು ಅವರ ಮಾರ್ಗದರ್ಶನ ಕೋರಿದ್ದರು. ಮಾನವ ಹಕ್ಕುಗಳ ವಿಶ್ವ ಸನ್ನದು ಸಿದ್ಧ ಪಡಿಸಬೇಕೆಂದಾದಲ್ಲಿ ಅದಕ್ಕೆ ಆಧಾರವೇನು ಎಂದು ಅವರು ತಮ್ಮ ಪತ್ರದಲ್ಲಿ ಕೇಳಿದ್ದರು ಮತ್ತು ಈ ಕುರಿತು ವಿಶ್ವದ ಶ್ರೇಷ್ಠ ವ್ಯಕ್ತಿಗಳಿಂದ ಅಭಿಪ್ರಾಯವನ್ನು ಕೋರಿದ್ದರು ಅಂತೆಯೇ ಮಹಾತ್ಮ ಗಾಂಧಿ ಅವರನ್ನೂ ಕೇಳಿದ್ದರು. ಆದರೆ, ವಿಶ್ವದ ಇತರರಿಗಿಂತ ಮಹಾತ್ಮ ಗಾಂಧಿ ಅವರ ಕಲ್ಪನೆ ವಿಭಿನ್ನವಾಗಿತ್ತು. ನಮ್ಮ ಕರ್ತವ್ಯಗಳನ್ನು ನಾಗರಿಕರಾದ ನಾವು ಪರಿಪೂರ್ಣವಾಗಿ ನಿರ್ವಹಿಸಿದಾಗ ಮಾತ್ರ ನಮ್ಮ ಜೀವನದ ಹಕ್ಕುಗಳನ್ನು ಗಳಿಸಬಹುದು ಎಂದು ಮಹಾತ್ಮ ಅವರು ಹೇಳಿದ್ದರು. ಒಂದು ರೀತಿಯಲ್ಲಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ನಮ್ಮ ಹಕ್ಕುಗಳನ್ನು ರಕ್ಷಿಸಬಹುದು. ಆ ಸಮಯದಲ್ಲೇ ಮಹಾತ್ಮ ಗಾಂಧಿ ಅವರು ಇದನ್ನು ಪ್ರತಿಪಾದಿಸಿದ್ದರು. ನಾವು ಕರ್ತವ್ಯಗಳು ಮತ್ತು ಬಾಧ್ಯತೆಗಳ ಬಗ್ಗೆ ಮಾತನಾಡುವಾಗ ನಾವೆಲ್ಲರೂ ಒಂದು ರಾಷ್ಟ್ರದ ರೂಪದಲ್ಲಿ ಸಾಮಾನ್ಯವಾಗಿ ಪೂರೈಸಬೇಕಾದ ಜವಾಬ್ದಾರಿಗಳಾಗಿರುತ್ತವೆ ಮತ್ತು ಹೀಗೆ ಮಾಡುವುದರಿಂದಲೇ ಒಂದು ರಾಷ್ಟ್ರದ ರೂಪದಲ್ಲಿ ನಮ್ಮ ಸಂಕಲ್ಪಗಳು ಸಿದ್ಧಗೊಳ್ಳುತ್ತವೆ. ಕೆಲವೊಮ್ಮೆ ನಾವು ಸೇವೆಯನ್ನೇ ಕರ್ತವ್ಯವೆಂದು ಭಾವಿಸುತ್ತೇವೆ, ಈ ಆಂಶದ ಕುರಿತು ನಾವು ಸ್ಪಷ್ಟತೆಯನ್ನು ಹೊಂದಿರಬೇಕು. ಪ್ರತಿ ಸಮಾಜಕ್ಕೂ ಸೇವೆ, ಮೌಲ್ಯಗಳು ಮತ್ತು ಸಂಪ್ರದಾಯಗಳು ಅತ್ಯಂತ ಪ್ರಮುಖವಾದವು. ಆದರೆ, ಕರ್ತವ್ಯ, ಸೇವೆಗಿಂತ ಹೆಚ್ಚು ಮಹತ್ವವಾದುದು ಮತ್ತು ಕೆಲವು ಬಾರಿ ಅದರತ್ತ ನಮ್ಮ ಗಮನ ಹರಿಯುವುದಿಲ್ಲ. ಅವಶ್ಯಕತೆಯಿರುವ ದಾರಿಹೋಕರೊಬ್ಬರಿಗೆ ನೀವು ಸಹಾಯ ಮಾಡಿದಲ್ಲಿ ಅದು ಒಂದು ರೀತಿಯ ಸೇವೆ.ಈ ಸೇವಾ ಮನೋಭಾವ ಎಲ್ಲ ಸಮಾಜವನ್ನು ಮತ್ತು ಮಾನವೀಯತೆಯನ್ನು ಬಲಪಡಿಸುತ್ತದೆ. ಆದರೆ ಕರ್ತವ್ಯವೆಂಬುದು ಸ್ವಲ್ಪ ಭಿನ್ನವಾಗಿದೆ. ನೀವು ದಾರಿಹೋಕರಿಗೆ ಸಹಾಯ ಮಾಡುವುದು ಒಳ್ಳೆಯದು. ಆದರೆ, ಸಂಚಾರಿ ನಿಯಮಗಳನ್ನು ನಾನು ಪಾಲಿಸದೇ ಹೋದಲ್ಲಿ ಮತ್ತು ಯಾರಿಗೂ ಯಾವುದೇ ಸಮಸ್ಯೆ ಆಗುವುದಿಲ್ಲ ದು ಖಚಿತ ಪಡಿಸಿಕೊಂಡರೆ ಅಂಥ ವ್ಯವಸ್ಥೆಯ ಒಂದು ಭಾಗವಾಗುವುದು ನನ್ನ ಕರ್ತವ್ಯ. “ನಾನು ಏನು ಮಾಡುವೆನೋ, ಅದರಿಂದ ನನ್ನ ದೇಶ ಬಲಗೊಳ್ಳುತ್ತದೋ ಇಲ್ಲವೋ?” ಎಂದು ನೀವು ನಿಮಗೇ ಒಂದು ಪ್ರಶ್ನೆ ಹಾಕಿಕೊಂಡರೆ, ಒಂದು ಕುಟುಂಬದ ಸದಸ್ಯರಾಗಿ ನಮ್ಮ ಕುಟುಂಬದ ಬಲವರ್ಧನೆಗೆ ನಾವು ಎಲ್ಲವನ್ನೂ ಮಾಡುತ್ತೇವೆ. ಅದೇ ರೀತಿ ನಮ್ಮ ದೇಶವನ್ನು ಬಲ ಪಡಿಸಲು ಮತ್ತು ನಮ್ಮ ರಾಷ್ಟ್ರವನ್ನು ಶಕ್ತಿಯುತವನ್ನಾಗಿಸಲು ನಾವು ಕೆಲಸ ಮಾಡಬೇಕು.

ಒಬ್ಬ ನಾಗರಿಕನು ತನ್ನ ಮಗುವನ್ನು ಶಾಲೆಗೆ ಕಳುಹಿಸುವಾಗ ಪೋಷಕನಾಗಿ ತನ್ನ ತರ್ವ್ಯವನ್ನು ಮಾಡುತ್ತಾನೆ. ಆದರೆ, ಅದೇ ಹೆತ್ತವರು ಮಾತೃ ಭಾಷೆಯನ್ನು ಕಲಿಯುವಂತೆ ಪ್ರಜ್ಞಾಪೂರ್ವಕವಾಗಿ ತಮ್ಮ ಮಗುವನ್ನು ಒತ್ತಾಯಿಸಿದರೆ ನಾಗರಿಕರಾಗಿಯೂ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅವರು ರಾಷ್ಟ್ರ ಸೇವೆಯ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಹೀಗೆ ಒಬ್ಬ ವ್ಯಕ್ತಿಯು ಒಂದೊಂದು ಹನಿ ನೀರನ್ನು ಉಳಿಸುವ ಪುಟ್ಟ ಕೆಲಸವನ್ನು ಮಾಡಿದರೂ, ಅವನು ತನ್ನ ನಾಗರಿಕ ಕರ್ತವ್ಯವನ್ನು ನಿರ್ವಹಿಸುತ್ತಾನೆ. ಒಬ್ಬ ವ್ಯಕ್ತಿ ಲಸಿಕೆಗಳನ್ನು ಹಾಕಿಸಿಕೊಂಡರೆ ತನ್ನ ಕರ್ತವ್ಯವನ್ನು ನಿರ್ವಹಿಸಿದಂತೆ, ಆ ಕುರಿತು ಅವನಿಗೆ ಯಾರೂ ನೆನಪಿಸಬೇಕಿಲ್ಲ. ಯಾರೂ ಮನವರಿಕೆ ಮಾಡಿಕೊಡದೇ ಮತ ಚಲಾಯಿಸಲು ಹೋದರೆ, ಅವನು ತನ್ನ ಕರ್ತವ್ಯವನ್ನು ನಿರ್ವಹಿಸಿದಂತೆ. ಒಬ್ಬ ತನ್ನ ತೆರಿಗೆಯನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದರೆ, ತನ್ನ ಕರ್ತವ್ಯವನ್ನು ನಿರ್ವಹಿಸಿದಂತೆ. ಇಂತಹ ಅನೇಕ ಜವಾಬ್ದಾರಿಗಳಿವೆ. ಪ್ರಜೆಗಳಾಗಿ ನಾವು ಇವುಗಳನ್ನು ಸಹಜ ರೂಪದಲ್ಲಿ ಮೈಗೂಡಿಸಿಕೊಂಡರೆ, ಸಂಸ್ಕಾರವಾಗಿ ಅಳವಡಿಸಿಕೊಂಡರೆ, ದೇಶವನ್ನು ಉಚ್ಛಮಟ್ಟಕ್ಕೆ ಕೊಂಡೊಯ್ಯುವಲ್ಲಿ ಬಹಳ ಸಹಾಯವಾಗುತ್ತದೆ. ಈ ಪ್ರಶ್ನೆಗಳು ದೇಶದ ಪ್ರತಿಯೊಬ್ಬ ನಾರಿಕನ ಮನದಲ್ಲಿ, ಅವನ ಆತ್ಮದಲ್ಲಿ, ಅಗ್ರಸ್ಥಾನದಲ್ಲಿರುವುದಿಲ್ಲವೋ, ಅಲ್ಲಿಯವರೆಗೆ ನಮ್ಮ ನಾಗರಿಕ ಕರ್ತವ್ಯಗಳು ಒಂದಲ್ಲಾ ಒಂದೆಡೆ ಬಲಹೀನಗೊಳ್ಳುತ್ತಾ ಸಾಗುತ್ತವೆ ಮತ್ತು ಒಂದಲ್ಲಾ ಒಂದು ರೀತಿಯಲ್ಲಿ ಬೇರೆಯವರ ಅಧಿಕಾರಗಳಿಗೆ ಹಾನಿಯೊಡ್ಡುತ್ತವೆ. ಹಾಗಾಗಿ, ಇತರರ ಅಧಿಕಾರಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಕರ್ತವ್ಯಗಳ ಬಗ್ಗೆ ನಿಗಾವಹಿಸುವುದು ನಮ್ಮ ಬಾಧ್ಯತೆ ಆಗುತ್ತದೆ ಮತ್ತು ಜನ ಪ್ರತಿನಿಧಿಯ ರೂಪದಲ್ಲಿ ನಮ್ಮ ಜವಾಬ್ದಾರಿಗಳು ಮತ್ತಷ್ಟು ಹೆಚ್ಚುತ್ತವೆ. ಸಾಂವಿಧಾನಿಕ ಮೌಲ್ಯಗಳನ್ನು ಗಟ್ಟಿಗೊಳಿಸುವುದಲ್ಲದೇ ನಮ್ಮನ್ನು ನಾವು ಆದರ್ಶಪ್ರಾಯವಾಗಿ ಪ್ರಸ್ತುತ ಪಡಿಸಬೇಕು. ಅದು ನಮ್ಮ ಜವಾಬ್ದಾರಿಯಾಗುತ್ತದೆ. ಅಲ್ಲದೇ, ಸಮಾಜದಲ್ಲಿ ಅರ್ಥಪೂರ್ಣ ಬದಲಾವಣೆಗಾಗಿ ನಾವು ಈ ಕರ್ತವ್ಯವನ್ನು ಪೂರೈಸಬೇಕು. ನಮ್ಮ ಎಲ್ಲ ಕಾರ್ಯಕ್ರಮಗಳಲ್ಲಿ ಎಲ್ಲ ಬಗೆಯ ಮಾತುಕತೆಗಳಲ್ಲಿ ನಮ್ಮ ಕರ್ತವ್ಯಗಳತ್ತ ಗಮನ ಹರಿಸಬೇಕಾಗುತ್ತದೆ. ಸಾರ್ವಜನಿಕರೊಂದಿಗೆ ಸಂವಾದದಲ್ಲಿ ಕರ್ತವ್ಯಗಳ ಬಗ್ಗೆ ಮಾತನಾಡುವುದನ್ನು ಮರೆಯಬಾರದು. ‘ನಾವು ಭಾರತದ ಜನರು’ ಎಂಬ ಒಕ್ಕಣೆಯಿಂದಲೇ ನಮ್ಮ ಸಂವಿಧಾನ ಆರಂಭವಾಗುತ್ತದೆ. ನಾವು ಭಾರತೀಯರೇ ಇದರ ಬಲ, ನಾವೇ ಇದರ ಪ್ರೇರಣೆ, ಮತ್ತು ನಾವೇ ಇದರ ಉದ್ದೇಶವೂ ಆಗಿದ್ದೇವೆ.

‘ನಾನಿರುವುದು ಸಮಾಜಕ್ಕಾಗಿ; ನಾನಿರುವುದು ದೇಶಕ್ಕಾಗಿ’ ಎಂಬ ಕರ್ತವ್ಯದ ಭಾವನೆಯೇ ನಮ್ಮ ಸ್ಫೂರ್ತಿಯ ಸೆಲೆಯಾಗಿದೆ. ಈ ಸಂಕಲ್ಪ ಶಕ್ತಿಯೊಂದಿಗೆ ನಾವೆಲ್ಲರೂ ಜೊತೆಗೂಡಿ ಭಾರತದ ಜವಾಬ್ದಾರಿಯುತ ನಾಗರಿಕರ ರೂಪದಲ್ಲಿ ನಮ್ಮ ಕರ್ತವ್ಯಗಳ ಪಾಲನೆ ಮಾಡೋಣ ಎಂದು ಎಲ್ಲರಿಗೂ ಕರೆನೀಡುತ್ತೇನೆ. ಬನ್ನಿ ನಮ್ಮ ಗಣರಾಜ್ಯವನ್ನು ನಾವು ಕರ್ತವ್ಯದಲ್ಲಿ ನಿರತವಾದ ಹೊಸ ಸಂಸ್ಕೃತಿಯತ್ತ ಕೊಂಡೊಯ್ಯೋಣ. ಬನ್ನಿ ನಾವೆಲ್ಲರೂ ದೇಶದ ನವ ನಾಗರಿಕರಾಗೋಣ, ಉತ್ತಮ ನಾಗರಿಕರಾಗೋಣ. ಈ ಸಂವಿಧಾನದ ದಿನ, ನಮ್ಮ ಸಂವಿಧಾನದ ಆದರ್ಶಗಳನ್ನು ಎತ್ತಿಹಿಡಿಯುತ್ತದೆ, ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಕೊಡುಗೆ ನೀಡುವ ಬದ್ಧತೆಗೆ ಪುಷ್ಠಿ ನೀಡುತ್ತದೆ ಮತ್ತು ಸಂವಿಧಾನ ನಿರ್ಮಾತೃಗಳು ಕಂಡ ಕನಸನ್ನು ಪೂರೈಸುವ ಶಕ್ತಿಯನ್ನು ನೀಡಲಿ. ಬುದ್ಧಿಮತ್ತೆಯ ಮಂಥನವಾದ ಪವಿತ್ರ ಭೂಮಿ ಇದು, ಇದರ ಪ್ರತಿಧ್ವನಿ ಇನ್ನೂ ಮಾರ್ಧನಿಸುತ್ತಿದೆ. ಆ ಪ್ರತಿಧ್ವನಿ ಖಂಡಿತಾ ನಮ್ಮನ್ನು ಆಶೀರರ್ವದಿಸುತ್ತದೆ, ಆ ಪ್ರತಿಧ್ವನಿ ಖಂಡಿತಾ ನಮಗೆ ಪ್ರೇರಣಾದಾಯಕವಾಗುತ್ತದೆ, ಶಕ್ತಿಯನ್ನು ನೀಡುತ್ತದೆ, ಮಾರ್ಗದರ್ಶಿಯಾಗುತ್ತದೆ ಎಂಬ ಭಾವನೆಯೊಂದಿಗೆ ಮತ್ತೊಮ್ಮೆ ನಾನು ಸಂವಿಧಾನ ದಿನದ ಪವಿತ್ರ ಸಂದರ್ಭದಲ್ಲಿ ಪೂಜ್ಯ ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ನಮಿಸುತ್ತೇನೆ, ಸಂವಿಧಾನ ನಿರ್ಮಾತೃಗಳಿಗೆ ನಮಿಸುತ್ತೇನೆ ಮತ್ತು ದೇಶವಾಸಿಗಳಿಗೆ ನನ್ನ ಶುಭಾಷಯಗಳನ್ನು ತಿಳಿಸುತ್ತೇನೆ. ಧನ್ಯವಾದಗಳು.