ಸರ್ವರಿಗೂ ಸಂಪರ್ಕ ಮತ್ತು ಡಿಜಿಟಲ್ ಸೇರ್ಪಡೆ ಸರ್ಕಾರದ ‘ಅಂತ್ಯೋದಯ’ ನಿಲುವಿನ ಅವಿಭಾಜ್ಯ ಅಂಗವಾಗಿದೆ. ಕಳೆದ ವರ್ಷ 5 ರಾಜ್ಯಗಳ 44 ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಮೊಬೈಲ್ ಸೇವಾ ವ್ಯಾಪ್ತಿಗೆ ಒಳಪಡದ 7,287 ಹಳ್ಳಿಗಳಲ್ಲಿ 4ಜಿ ಮೊಬೈಲ್ ಸೇವೆಗಳನ್ನು ಒದಗಿಸುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿತ್ತು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರಲ್ಲಿ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, ಸರ್ಕಾರದ ಯೋಜನೆಗಳನ್ನು ಗರಿಷ್ಠಮಟ್ಟಕ್ಕೆ ತಲುಪಿಸಲು ಕರೆ ನೀಡಿದ್ದರು. ಕೇಂದ್ರ ಸಚಿವ ಸಂಪುಟ ಇಂದು ದೇಶಾದ್ಯಂತ ವ್ಯಾಪ್ತಿಗೆ ಒಳಪಡದ ಹಳ್ಳಿಗಳಲ್ಲಿ ಒಟ್ಟು 26,316 ಕೋಟಿ ರೂ.ಗಳ ವೆಚ್ಚದಲ್ಲಿ 4ಜಿ ಮೊಬೈಲ್ ಸೇವೆಗಳನ್ನು ಪೂರೈಸುವ ಯೋಜನೆಗೆ ತನ್ನ ಅನುಮೋದನೆ ನೀಡಿದೆ.
ಈ ಯೋಜನೆಯು ದೂರದ ಮತ್ತು ದುರ್ಗಮ ಪ್ರದೇಶಗಳಲ್ಲಿನ 24,680 ಹಳ್ಳಿಗಳಲ್ಲಿ 4 ಜಿ ಮೊಬೈಲ್ ಸೇವೆಗಳನ್ನು ಒದಗಿಸುತ್ತದೆ. ಪುನರ್ವಸತಿ, ಹೊಸ-ವಸಾಹತುಗಳು, ಅಸ್ತಿತ್ವದಲ್ಲಿರುವ ಆಪರೇಟರ್ ಗಳು ಸೇವೆಗಳನ್ನು ಹಿಂತೆಗೆದುಕೊಂಡಿರುವ ಮೊದಲಾದ ಕಾರಣಗಳಿಗಾಗಿ ಶೇ.20 ಹೆಚ್ಚುವರಿ ಗ್ರಾಮಗಳನ್ನು ಸೇರಿಸಿಕೊಳ್ಳುವ ಅವಕಾಶವನ್ನು ಈ ಯೋಜನೆ ಹೊಂದಿದೆ. ಇದಲ್ಲದೆ, ಕೇವಲ 2ಜಿ/3ಜಿ ಸಂಪರ್ಕ ಹೊಂದಿರುವ 6,279 ಗ್ರಾಮಗಳನ್ನು 4ಜಿಗೆ ಮೇಲ್ದರ್ಜೆಗೇರಿಸಲಾಗುವುದು.
ಆತ್ಮನಿರ್ಭರ ಭಾರತದ 4ಜಿ ತಂತ್ರಜ್ಞಾನ ಸ್ಟ್ಯಾಕ್ ಅನ್ನು ಬಳಸಿಕೊಂಡು ಬಿಎಸ್ಎನ್ಎಲ್ ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತದೆ ಮತ್ತು ಸಾರ್ವತ್ರಿಕ ಸೇವೆಯ ಬಾಧ್ಯತೆ ನಿಧಿ ಮೂಲಕ ಧನಸಹಾಯವನ್ನು ನೀಡುತ್ತದೆ. 26,316 ಕೋಟಿ ರೂ.ಗಳ ಯೋಜನಾ ವೆಚ್ಚವು ಕ್ಯಾಪೆಕ್ಸ್ ಮತ್ತು 5 ವರ್ಷಗಳ ಒಪೆಕ್ಸ್ ಅನ್ನು ಒಳಗೊಂಡಿದೆ.
ಬಿಎಸ್ಎನ್ಎಲ್ ಈಗಾಗಲೇ ಆತ್ಮನಿರ್ಭರ 4ಜಿ ತಂತ್ರಜ್ಞಾನದ ಸ್ಟ್ಯಾಕ್ ಅನ್ನು ನಿಯೋಜಿಸುವ ಪ್ರಕ್ರಿಯೆಯಲ್ಲಿದೆ, ಇದನ್ನು ಈ ಯೋಜನೆಯಲ್ಲಿಯೂ ನಿಯುಕ್ತಿಗೊಳಿಸಲಾಗುವುದು.
ಈ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕವನ್ನು ಒದಗಿಸುವ ಸರ್ಕಾರದ ದೃಷ್ಟಿಕೋನದ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಯೋಜನೆಯು ವಿವಿಧ ಇ-ಆಡಳಿತ ಸೇವೆಗಳು, ಬ್ಯಾಂಕಿಂಗ್ ಸೇವೆಗಳು, ಟೆಲಿ-ಮೆಡಿಸಿನ್, ಟೆಲಿ-ಶಿಕ್ಷಣ ಇತ್ಯಾದಿಗಳನ್ನು ಮೊಬೈಲ್ ಬ್ರಾಡ್ ಬ್ಯಾಂಡ್ ಮೂಲಕ ತಲುಪಿಸುವುದನ್ನು ಉತ್ತೇಜಿಸುತ್ತದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತದೆ.
********
Connectivity brings opportunities, progress and prosperity. Today’s Cabinet decision on enhancing connectivity in uncovered villages is going to transform lives of people in these areas and ensure better service delivery as well. https://t.co/zqVEI9ybFf
— Narendra Modi (@narendramodi) July 27, 2022