ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬೆಲೆ ಏರಿಕೆ ಸರಿದೂಗಿಸಲು ಮೂಲ ವೇತನ/ಪಿಂಚಣಿಯ ಮೇಲೆ ಹಾಲಿ ಇರುವ ಶೇ.12ರ ದರಕ್ಕೆ ಶೇ.5ರ ಹೆಚ್ಚಳದೊಂದಿಗೆ 01.07.2019ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿ.ಆರ್.)ದ ಹೆಚ್ಚುವರಿ ಕಂತನ್ನು ಬಿಡುಗಡೆ ಮಾಡಲು ತನ್ನ ಅನುಮೋದನೆ ನೀಡಿದೆ. 7ನೇ ವೇತನ ಆಯೋಗದ ಶಿಫಾರಸುಗಳ ಆಧಾರದಲ್ಲಿ ಈ ಹೆಚ್ಚಳವು ಒಪ್ಪಿತ ಸೂತ್ರಗಳಿಗೆ ಅನುಗುಣವಾಗಿದೆ.
ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರದ ಹೆಚ್ಚಳದ ಒಟ್ಟು ಪರಿಣಾಮದಿಂದಾಗಿ ಬೊಕ್ಕಸಕ್ಕೆ 15909.35 ಕೋಟಿ ವಾರ್ಷಿಕ ಹೊರೆಯಾಗಲಿದ್ದರೆ, 2019-20ರ ಆರ್ಥಿಕ ವರ್ಷದಲ್ಲಿ 10606.20 ಕೋಟಿ ರೂಪಾಯಿ (ಜುಲೈ 2019ರಿಂದ 2020 ಫೆಬ್ರವರಿವರೆಗೆ 8 ತಿಂಗಳು) ಹೊರೆಯಾಗಲಿದೆ. ಇದರಿಂದ 49.93 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65.26 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.
ಹೆಚ್ಚುವರಿ ತುಟ್ಟಿಭತ್ಯೆಯ ಏರಿಕೆಯ ಪರಿಣಾಮವಾಗಿ ವರ್ಷವೊಂದಕ್ಕೆ 8590.20 ಕೋಟಿ ರೂಪಾಯಿ ; ಮತ್ತು 2019-20 ರ ಸಾಲಿನ ಪ್ರಸಕ್ತ ಹಣಕಾಸು ವರ್ಷದ 8 ತಿಂಗಳುಗಳಲ್ಲಿ (ಜುಲೈ 2019ರಿಂದ 2020 ಫೆಬ್ರವರಿವರೆಗೆ 8 ತಿಂಗಳು) 5726.80 ಕೋಟಿ ಹೊರೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ.
ಹೆಚ್ಚುವರಿ ತುಟ್ಟಿ ಪರಿಹಾರ ಏರಿಕೆಯ ಪರಿಣಾಮವಾಗಿ ವಾರ್ಷಿಕ 7319.15 ಕೋಟಿ ರೂಪಾಯಿ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ 4870 ಕೋಟಿ ರೂಪಾಯಿ ಹೊರೆಯ ಅಂದಾಜು ಮಾಡಲಾಗಿದೆ.
ಜೀವನ ನಿರ್ವಹಣೆಯ ವೆಚ್ಚವನ್ನು ಸರಿದೂಗಿಸಲು, ನೈಜ ಮೌಲ್ಯದ ಸವೆತದಿಂದ ಅವರ ಮೂಲ ವೇತನ / ಪಿಂಚಣಿ ರಕ್ಷಿಸಲು ಕೇಂದ್ರ ಸರ್ಕಾರಿ ನೌಕರರಿಗೆ/ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು ನೀಡಲಾಗುತ್ತದೆ. ತುಟ್ಟಿ ಭತ್ಯೆ/ತುಟ್ಟಿ ಪರಿಹಾರವನ್ನು ವರ್ಷದಲ್ಲಿ ಎರಡು ಬಾರಿ ಜನವರಿ 1 ಮತ್ತು ಜುಲೈ 1ರಂದು ಪರಿಷ್ಕರಿಸಲಾಗುತ್ತದೆ.