ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಈ ಕೆಳಗಿನ ಪ್ರಸ್ತಾವಗಳನ್ನು ಅನುಮೋದಿಸಿದೆ.
ಎ) 2018-19ನೇ ಸಾಲಿನ ಹಣಕಾಸು ವರ್ಷಕ್ಕೆ ಸ್ವಚ್ಛ ಭಾರತ ಮಿಷನ್(ಗ್ರಾಮೀಣ) (ಎಸ್ ಬಿ ಎಂ(ಜಿ)ಗೆ ನಬಾರ್ಡ್ ಮೂಲಕ 15,000 ಕೋಟಿ ರೂ.ವರೆಗೆ ಹೆಚ್ಚುವರಿ ಬಜೆಟ್ ಸಂಪನ್ಮೂಲ ಸಂಗ್ರಹಕ್ಕೆ ಒಪ್ಪಿಗೆ.
ಬಿ) ಕುಡಿಯುವ ನೀರಿನ ಗುಣಮಟ್ಟ ಅಂತಾರಾಷ್ಟ್ರೀಯ ಕೇಂದ್ರದ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಅದಕ್ಕೆ ಎಸ್ ಬಿ ಎಂ(ಜಿ)ಗೆ ಹೆಚ್ಚುವರಿ ಬಜೆಟ್ ಸಂಪನ್ಮೂಲ ಸ್ವೀಕಾರಕ್ಕೆ ಒಪ್ಪಿಗೆ, ಆ ಹಣವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅನುಷ್ಠಾನ ಸಂಸ್ಥೆಗಳಿಗೆ ವಿತರಣೆ ಮತ್ತು ಮರುಪಾವತಿ ನೋಡಿಕೊಳ್ಳುವುದು.
ಸಿ) ಹಿಂದಿನ ಕುಡಿಯುವ ನೀರಿನ ಗುಣಮಟ್ಟ ಅಂತಾರಾಷ್ಟ್ರೀಯ ಕೇಂದ್ರದ ಹೆಸರನ್ನು ರಾಷ್ಟ್ರೀಯ ಕುಡಿಯುವ ನೀರು, ಒಳಚರಂಡಿ ಮತ್ತು ಗುಣಮಟ್ಟ ಕೇಂದ್ರ(ಎನ್ ಸಿ ಡಿ ಡಬ್ಲ್ಯೂ ಎಸ್ & ಕ್ಯೂ)ಆಗಿ ಬದಲಾಯಿಸುವುದು.
ಪರಿಣಾಮ:-
ಈ ನಿರ್ಧಾರದಿಂದ ಸ್ವಚ್ಛ ಭಾರತ ಯೋಜನೆ(ಗ್ರಾಮೀಣ)ಅಡಿ ಸಹಾಯಧನ ಪಡೆಯುತ್ತಿರುವ 1.5 ಕೋಟಿ ಗ್ರಾಮೀಣ ಕುಟುಂಬಗಳಿಗೆ ಮತ್ತು ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣಾ(ಎಸ್ಎಲ್ಎಂಡಬ್ಲ್ಯೂ) ಚಟುವಟಿಕೆಗಳಲ್ಲಿ ತೊಡಗಿರುವ ಗ್ರಾಮ ಪಂಚಾಯಿತಿಗಳಿಗೆ ಪ್ರಯೋಜನವಾಗಲಿದೆ.
ಈ ನಿಧಿಯನ್ನು ದೇಶಾದ್ಯಂತ ಎಲ್ಲ ಗ್ರಾಮಗಳಲ್ಲಿ ಸುಸ್ಥಿರ ಬಯಲು ಬಹಿರ್ದೆಸೆ ಮುಕ್ತ(ಓಡಿಎಫ್) ಸ್ಥಾನ ಪಡೆಯಲು ಬಳಸಲಾಗುವುದು.
ಒಳಗೊಂಡಿರುವ ವೆಚ್ಚ :-
ಸಾಲ ಪಡೆದ ದಿನದಿಂದ ಒಪ್ಪಿತ ಷರತ್ತು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ 10ನೇ ವರ್ಷದ ಕೊನೆಯಲ್ಲಿ ನಬಾರ್ಡ್ ಗೆ ಒಂದೇ ಕಂತಿನಲ್ಲಿ 15 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ಮರುಪಾವತಿ ಮಾಡಲಾಗುವುದು.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿಖರ ಅಗತ್ಯತೆ ಮತ್ತು ವೆಚ್ಚವನ್ನು ಪರಿಶೀಲಿಸಿದ ನಂತರ ಹೆಚ್ಚುವರಿ ಬಜೆಟ್ ಸಂಪನ್ಮೂಲ ನಿಧಿಯನ್ನು ನಬಾರ್ಡ್ ಮೂಲಕಸಂಗ್ರಹಿಸಲಾಗುವುದು. ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆಗೆ ನಿಧಿಯನ್ನು ಸ್ವೀಕರಿಸಿದ ಬಳಿಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅನುಷ್ಠಾನ ಸಂಸ್ಥೆಗಳಿಗೆ ವಿತರಿಸಲಾಗುವುದು ಮತ್ತು ಸಾಲ ಹಾಗೂ ಬಡ್ಡಿ ಹಣವನ್ನು ಮರು ಪಾವತಿ ಮಾಡಲಾಗುವುದು. ಅದಕ್ಕಾಗಿ ರಾಷ್ಟ್ರೀಯ ಕುಡಿಯುವ ನೀರು, ಒಳಚರಂಡಿ ಮತ್ತು ಗುಣಮಟ್ಟ ಕೇಂದ್ರ ಆಧಾರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.
ಇದರಿಂದಾಗಿ ನಿಗದಿತ ಗಡುವಿನಲ್ಲಿ ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆಯ ಗುರಿ ಸಾಧನೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಕಾಲದಲ್ಲಿ ಅಗತ್ಯ ಹಣಕಾಸಿನ ನೆರವು ಲಭ್ಯವಾಗಲಿದೆ.
ಹಿನ್ನೆಲೆ:-
2019ರ ಅಕ್ಟೋಬರ್ 2ರ ವೇಳೆಗೆ ಗ್ರಾಮೀಣ ಪ್ರದೇಶದಲ್ಲಿ ಸಮಗ್ರ ನೈರ್ಮಲೀಕರಣ ಗುರಿ ಸಾಧನೆ ಉದ್ದೇಶದಿಂದ 2014ರ ಅಕ್ಟೋಬರ್ 2ರಂದು ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆಗೆ ಚಾಲನೆ ನೀಡಲಾಯಿತು. ಇದಕ್ಕಾಗಿ ನಿಗದಿತ ರಾಜ್ಯಗಳು ಮತ್ತು ಕೇಂದ್ರದ ಪಾಲು ಸೇರಿಸಿ, ವೈಯಕ್ತಿಕ, ಕೌಟುಂಬಿಕ ಶೌಚಾಲಯಗಳ ನಿರ್ಮಾಣಕ್ಕಾಗಿ ಅರ್ಹ ಫಲಾನುಭವಿಗಳಿಗೆ ತಲಾ 12 ಸಾವಿರ ರೂ. ಹಣಕಾಸಿನ ನೆರವು ನೀಡಲಾಗುವುದು. ಅಲ್ಲದೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಚಟುಟಿಕೆಗಳಿಗಾಗಿ 150/300/500 ಮತ್ತು 500ಕ್ಕೂ ಅಧಿಕ ಕುಟುಂಬಗಳಿರುವ ಗ್ರಾಮ ಪಂಚಾಯಿತಿಗಳಿಗೆ ಕ್ರಮವಾಗಿ 7/12/15/20 ಲಕ್ಷ ರೂ. ಆರ್ಥಿಕzಸಹಾಯ ನೀಡಲಾಗುವುದು. ಮೊದಲನೇ ಇಸಿ ಯೋಜನೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಒಟ್ಟಾರೆ ಖರ್ಚು ಮಾಡುವ ಶೇಕಡ 5ರಷ್ಟು ಮತ್ತು ಕೇಂದ್ರ ಮಟ್ಟದಲ್ಲಿ ಶೇಕಡ 3ರಷ್ಟು ಹಣ ಖರ್ಚು ಮಾಡಬಹುದಾಗಿದೆ. ಆಡಳಿತಾತ್ಮಕ ವೆಚ್ಚಕ್ಕಾಗಿ ಒಟ್ಟಾರೆ ಯೋಜನೆಯ ಶೇಕಡ 2ರಷ್ಟನ್ನು ವ್ಯಯಿಸಲು ಅವಕಾಶವಿದೆ. ಈ ನಿಧಿಯನ್ನು ಚಟುವಟಿಕೆಗಳಿಗಾಗಿ ರಾಜ್ಯಗಳು ಮತ್ತು ಕೇಂದ್ರದ ನಡುವೆ ಹಂಚಿಕೆ ಪ್ರಮಾಣ(ಉತ್ತರ, ಈಶಾನ್ಯ ರಾಜ್ಯಗಳು, ಜಮ್ಮು ಮತ್ತು ಕಾಶ್ಮೀರ ಹಾಗು ವಿಶೇಷ ವರ್ಗದ ರಾಜ್ಯಗಳನ್ನು ಹೊರತುಪಡಿಸಿ) 60:40. ಈಶಾನ್ಯ ರಾಜ್ಯಗಳು, ಜಮ್ಮು ಮತ್ತು ಕಾಶ್ಮೀರ ಹಾಗೂ ವಿಶೇಷ ವರ್ಗದ ರಾಜ್ಯಗಳಿಗೆ 90:10 ಪ್ರಮಾಣದಲ್ಲಿ ನಿಧಿ ಒದಗಿಸಲಾಗುವುದು.
ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆ ಗ್ರಾಮೀಣ ಭಾರತದಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ. 2018ರ ಜುಲೈ 31ರ ವೇಳೆಗೆ ನೈರ್ಮಲೀಕರಣ ವ್ಯಾಪ್ತಿ ಭಾರತದಲ್ಲಿ ಶೇಕಡ 88.9ರಷ್ಟಿದೆ. 2014ರ ಅಕ್ಟೋಬರ್ 2ರಿಂದ 7.94 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 419 ಜಿಲ್ಲೆಗಳ 4.06 ಲಕ್ಷ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ(ಒಡಿಎಫ್) ಎಂದು ಘೋಷಿಸಲಾಗಿದೆ.
ಅತ್ಯಂತ ವೇಗದಲ್ಲಿ ಈ ಕಾರ್ಯ ನಡೆಯುತ್ತಿದ್ದು, 2019ರ ಅಕ್ಟೋಬರ್ ವೇಳೆಗೆ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗುರಿ ಸಾಧನೆ ನಿಟ್ಟಿನ ಹಾದಿಯಲ್ಲಿದೆ.
2014ರ ಸೆಪ್ಟೆಂಬರ್ 24ರಂದು ಕೇಂದ್ರ ಸಂಪುಟ ಅಕ್ಟೋಬರ್ 2, 2014ರಿಂದ ಜಾರಿಗೆ ಬರುವಂತೆ ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆಗೆ ಅನುಮೋದನೆ ನೀಡಿದ್ದು, 2019ರ ಅಕ್ಟೋಬರ್ 2ರ ವೇಳೆಗೆ ಗ್ರಾಮೀಣ ಪ್ರದೇಶಗಳ ಸಮಗ್ರ ನೈರ್ಮಲೀಕರಣ ಸಾಧಿಸುವ ಗುರಿ ಹೊಂದಲಾಗಿದೆ. ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆಯಡಿ ಮಹತ್ವದ ಪ್ರಗತಿ ಸಾಧಿಸಲಾಗಿದೆ. ಗುರಿ ಸಾಧನೆ ಅಂತಿಮ ಹಂತದಲ್ಲಿದ್ದು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಕಾರ್ಯ ನಡೆದಿದೆ.
ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆಯ ಗುರಿಯನ್ನು ಸಾಧಿಸಲು 2018-19ನೇ ಸಾಲಿನಲ್ಲಿ ಹಣಕಾಸು ಅಗತ್ಯತೆಗಳನ್ನು ಪೂರೈಸಲು ಹಣಕಾಸು ಸಚಿವರು ಬಜೆಟ್ ನಲ್ಲಿ ಪ್ರಕಟಿಸಿ, ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆಗೆ 30 ಸಾವಿರದ 343 ಕೋಟಿ ರೂ. ಹಂಚಿಕೆ ಮಾಡಿದ್ದರು. ಅದರಂತೆ 15 ಸಾವಿರದ 340 ಕೋಟಿ ರೂಪಾಯಿಗಳನ್ನು ಸಾಮಾನ್ಯ ಬಜೆಟ್ಬೆಂ ಬಲದಲ್ಲಿ ಒದಗಿಸಲು ಪ್ರಸ್ತಾಪಿಸಲಾಗಿತ್ತು ಮತ್ತು ಇನ್ನುಳಿದ 15 ಸಾವಿರ ಕೋಟಿ ರೂಪಾಯಿಗಳನ್ನು ಹೆಚ್ಚುವರಿ ಬಜೆಟ್ ಸಂಪನ್ಮೂಲ(ಇಬಿಆರ್) ಮೂಲಕ ಸಂಗ್ರಹಿಸಲು ಉದ್ದೇಶವಿತ್ತು. ನಂತರ ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯ ಹೆಚ್ಚುವರಿ ಬಜೆಟ್ ಸಂಪನ್ಮೂಲ ಕುರಿತಾದ ಸ್ಥಾಯಿ ಸಮಿತಿ ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆಗೆ 2018-19ನೇ ಸಾಲಿಗೆ 15 ಸಾವಿರ ಕೋಟಿ ರೂಪಾಯಿಗಳನ್ನು ನಬಾರ್ಡ್ ಮೂಲಕ ಪಡೆಯಲು ಶಿಫಾರಸ್ಸು ಮಾಡಿತ್ತು.
********