Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2018-19ನೇ ಸಾಲಿನ ಕೇಂದ್ರ ಬಜೆಟ್ ಬಳಿಕ ಪ್ರಧಾನಮಂತ್ರಿಯವರ ಹೇಳಿಕೆಯ ಕನ್ನಡ ರೂಪಾಂತರ


“ನಾನು ಈ ಬಜೆಟ್ ಮಂಡನೆಗಾಗಿ ಹಣಕಾಸು ಸಚಿವ ಶ್ರೀ ಅರುಣ್ ಜೇಟ್ಲಿ ಅವರನ್ನು ಅಭಿನಂದಿಸುತ್ತೇನೆ. ಈ ಬಜೆಟ್ ನವದೆಹಲಿಯ ಅಡಿಪಾಯದ ಕಲ್ಲನ್ನು ಬಲಪಡಿಸಲಿದೆ. ಬಜೆಟ್ ನ ಗಮನ ಕೃಷಿಯಿಂದ ಮೂಲಸೌಕರ್ಯದವರೆಗೆ ಇದೆ. ಒಂದೆಡೆ ಈ ಬಜೆಟ್ ಆರೋಗ್ಯ ಯೋಜನೆಯ ಅಂಶಗಳನ್ನು ಒಳಗೊಂಡಿದ್ದು, ಬಡ ಮತ್ತು ಮಧ್ಯಮವರ್ಗದವರ ಕಾಳಜಿಯನ್ನು ಪೂರೈಸುತ್ತದೆ, ಮತ್ತೊಂದೆಡೆ ದೇಶದ ಸಣ್ಣ ಉದ್ದಿಮೆಗಳ ಸಂಪತ್ತು ಹೆಚ್ಚಳಕ್ಕೆ ಯೋಜನೆ ಹೊಂದಿದೆ. ಆಹಾರ ಸಂಸ್ಕರಣೆಯಿಂದ ಫೈಬರ್ ಆಪ್ಟಿಕ್ಸ್ ವರೆಗೆ, ರಸ್ತೆಯಿಂದ ಶಿಪ್ಪಿಂಗ್ ವರೆಗೆ, ಯುವಜನರ ಮತ್ತು ಹಿರಿಯ ನಾಗರಿಕರ ಕಾಳಜಿ, ಗ್ರಾಮೀಣ ಭಾರತದಿಂದ ಆಯುಷ್ಮಾನ್ ಭಾರತ ಹಾಗೂ ಡಿಜಿಟಲ್ ಭಾರತದಿಂದ – ನವೋದ್ಯಮ ಭಾರತದವರೆಗಿವೆ.

ಈ ಬಜೆಟ್ ದೇಶದ 125 ಕೋಟಿ ಜನರ ಆಶೋತ್ತರಗಳನ್ನು ಮತ್ತು ಭರವಸೆಗೆ ಚೈತನ್ಯ ನೀಡುವ ನಿರೀಕ್ಷೆ ಇದೆ. ಇದು ರೈತಸ್ನೇಹಿ, ಶ್ರೀಸಾಮಾನ್ಯ ಸ್ನೇಹಿ, ವಾಣಿಜ್ಯ ಪರಿಸರ ಸ್ನೇಹಿಯಷ್ಟೇ ಅಲ್ಲ, ಅಭಿವೃದ್ಧಿ ಸ್ನೇಹಿಯಾಗಿದೆ. ಸುಗಮವಾಗಿ ವಾಣಿಜ್ಯ ನಡೆಸುವುದರ ಜೊತೆಗೆ ಸುಗಮವಾಗಿ ಬದುಕುವುದಕ್ಕೂ ಈ ಬಜೆಟ್ ನಲ್ಲಿ ಗಮನ ಹರಿಸಲಾಗಿದೆ. ಮಧ್ಯಮವರ್ಗದವರಿಗೆ ಹೆಚ್ಚಿನ ಉಳಿತಾಯವಿದ್ದು, 21ನೇ ಶತಮಾನಕ್ಕಾಗಿ ನವ ಪೀಳಿಗೆಯ ಮೂಲಸೌಕರ್ಯ ಮತ್ತು ಉತ್ತಮ ಆರೋಗ್ಯ ಭರವಸೆ – ಎಲ್ಲವೂ ಸುಗಮ ಜೀವನದೆಡೆಗಿನ ಸಮಗ್ರ ಹೆಜ್ಜೆಗಳಾಗಿವೆ.

ನಮ್ಮ ರೈತರು ದಾಖಲೆಯ ಹಣ್ಣು ಮತ್ತು ತರಕಾರಿ ಉತ್ಪಾದನೆಯ ಮೂಲಕ ದೇಶದ ಅಭಿವೃದ್ಧಿಗೆ ದೊಡ್ಡ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ರೈತರಿಗೆ ಮತ್ತು ಅವರ ಆದಾಯ ಹೆಚ್ಚಳಕ್ಕೆ ಈ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ. 14.5 ಲಕ್ಷ ಕೋಟಿ ರೂಪಾಯಿ ದಾಖಲೆಯ ಹಂಚಿಕೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಕೃಷಿಗೆ ಒದಗಿಸಲಾಗಿದೆ. ದಲಿತರು, ಸಮಾಜದ ತುಳಿತಕ್ಕೊಳಗಾದವರು, ವಂಚಿತ ವರ್ಗಗಳು 51 ಲಕ್ಷ ಹೊಸ ಮನೆಗಳು, 3 ಲಕ್ಷ ಕಿಲೋ ಮೀಟರ್ ರಸ್ತೆ, ಸುಮಾರು 2 ಲಕ್ಷ ಶೌಚಾಲಯಗಳು, 1.75 ಕೋಟಿ ಮನೆಗಳಿಗೆ ವಿದ್ಯುತ್ ನಿಂದ ಪ್ರಯೋಜನ ಪಡೆಯಲಿವೆ. ಈ ಉಪಕ್ರಮಗಳು ಹೊಸ ಅವಕಾಶಗಳನ್ನು ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸೃಷ್ಟಿಸಲಿವೆ. ರೈತರು ಉತ್ಪಾದನೆಗಾಗಿ ಮಾಡುವ ವೆಚ್ಚದ ಒಂದೂವರೆ ಪಟ್ಟು ಲಾಭದಾಯಕ ಬೆಲೆ ನೀಡುವ ನಿರ್ಧಾರವನ್ನು ನಾನು ಪ್ರಶಂಸಿಸುತ್ತೇನೆ. ಈ ನಿಟ್ಟಿನಲ್ಲಿ ರೈತರು ಪೂರ್ಣ ಪ್ರಯೋಜನ ಪಡೆಯುವಂತೆ ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ಸಮಾಲೋಚಿಸಿ ಒಂದು ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಆಪರೇಷನ್ ಗ್ರೀನ್ ಈ ನಿಟ್ಟಿನಲ್ಲಿ ಅದರಲ್ಲೂ ಹಣ್ಣು ಮತ್ತು ತರಕಾರಿ ಬೆಳೆಯುವವರಿಗೆ ಒಂದು ಸಮರ್ಥ ಸಾಧನವಾಗಿದೆ. ಅಮೂಲ್ ಹೈನುಗಾರಿಕೆ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ರೈತರಿಗೆ ನ್ಯಾಯಸಮ್ಮತ ಬೆಲೆಯ ಖಾತ್ರಿ ಪಡಿಸುವಲ್ಲಿ ಹೇಗೆ ಸಾಧನವಾಯಿತು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ನಮ್ಮ ದೇಶದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗಾಗಿ ಕ್ಲಸ್ಟರ್ ಆಧಾರಿತ ನಿಲುವಿನ ಪರಿಚಯ ನಮಗಿದೆ. ನಾವು ವಿವಿಧ ಜಿಲ್ಲೆಗಳ ಕೈಷಿ ಉತ್ಪನ್ನಗಳನ್ನು ಗಮನದಲ್ಲಿಟ್ಟುಕೊಂಡು ಕೃಷಿ ಕ್ಲಸ್ಟರ್ ದೃಷ್ಟಿಕೋನವನ್ನು ದೇಶಾದ್ಯಂತದ ವಿವಿಧ ಜಿಲ್ಲೆಗಳಲ್ಲಿ ಅಳವಡಿಸಿಕೊಂಡಿದ್ದೇವೆ. ಜಿಲ್ಲೆಗಳನ್ನು ಗುರುತಿಸಿದ ತರುವಾಯ ನಿರ್ದಿಷ್ಟ ಕೃಷಿ ಉತ್ಪನ್ನಕ್ಕೆ ಸಂಗ್ರಹಣಾಗಾರ, ಸಂಸ್ಕರಣೆ ಮತ್ತು ಮಾರುಕಟ್ಟೆಯ ವ್ಯವಸ್ಥೆ ಒದಗಿಸುವುದನ್ನು ನಾನು ಸ್ವಾಗತಿಸುತ್ತೇನೆ.

ನಮ್ಮ ದೇಶದಲ್ಲಿ, ಸಹಕಾರಿ ಸಂಸ್ಥೆಗಳಿಗೆ ತೆರಿಗೆ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ. ಆದರೆ, ರೈತರ ಉತ್ಪಾದನಾ ಸಂಸ್ಥೆಗಳು – ಎಫ್.ಪಿ.ಓ.,ಗಳು ಕೂಡ ಸಹಕಾರ ಸಂಸ್ಥೆಗಳ ರೀತಿಯಲ್ಲೇ ಇದ್ದರೂ ಅವುಗಳಿಗೆ ಈ ಪ್ರಯೋಜನ ಲಭಿಸಿರಲಿಲ್ಲ. ಹೀಗಾಗಿ, ರೈತರ ಉತ್ಪಾದನಾ ಸಂಘಟನೆಗಳಿಗೆ – ಎಫ್.ಪಿ.ಓ. ತೆರಿಗೆ ವಿನಾಯಿತಿ ನೀಡಲಾಗಿದೆ, ಇದು ರೈತರ ಕಲ್ಯಾಣಕ್ಕಾಗಿ ಮೀಸಲಾಗಿದ್ದು, ಸ್ವಾಗತಾರ್ಹ ಕ್ರಮವಾಗಿದೆ. ಮಹಿಳೆಯರು ತೊಡಗಿಕೊಂಡಿರುವ ಜೈವಿಕ, ಗಿಡಮೂಲಿಕೆ ಕೃಷಿ ಮತ್ತು ‘ರೈತರ ಉತ್ಪಾದಕ ಸಂಸ್ಥೆಗಳ’ ಜೊತೆಗೆ ಸ್ವಸಹಾಯ ಗುಂಪುಗಳ ನಡುವಿನ ಸಂಪರ್ಕವನ್ನು ಒದಗಿಸುವ ಮೂಲಕ ರೈತರ ಆದಾಯ ಹೆಚ್ಚಾಗುತ್ತದೆ. ಅದೇ ರೀತಿ, ಗೋಬರ್ – ಧನ್ ಯೋಜನೆಯು ಗ್ರಾಮವನ್ನು ಸ್ವಚ್ಛವಾಗಿಡಲು ನೆರವಾಗುತ್ತದೆ ಜೊತೆಗೆ ದನಗಾಹಿಗಳು ಮತ್ತು ರೈತರ ಆದಾಯ ಹೆಚ್ಚಿಸುತ್ತದೆ. ನಮ್ಮ ದೇಶದಲ್ಲಿ ರೈತರು ಕೃಷಿಯ ಜೊತೆಗೆ ಇತರ ವಿವಿಧ ವೃತ್ತಿಯನ್ನೂ ಕೈಗೊಳ್ಳುತ್ತಾರೆ. ಕೆಲವರು ಮೀನುಗಾರಿಕೆ, ಪಶುಸಂಗೋಪನೆ, ಕೋಳಿ ಸಾಕಾಣಿಕೆ ಅಥವಾ ಜೇನು ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ಇಂಥ ಹೆಚ್ಚುವರಿ ಚಟುವಟಿಕೆಗಳಿಗೆ ಬ್ಯಾಂಕ್ ಗಳಿಂದ ಸಾಲ ಪಡೆಯಲು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಮೀನುಗಾರಿಕೆ ಮತ್ತು ಪಶು ಸಂಗೋಪನೆಗೆ ಸಾಲ ಒದಗಿಸುವುದು ಸಮರ್ಥ ಹೆಜ್ಜೆಯಾಗಿದೆ. ಭಾರತದ 700 ಜಿಲ್ಲೆಗಳಲ್ಲಿ 7 ಸಾವಿರಕ್ಕೂ ಹೆಚ್ಚು ಬ್ಲಾಕ್ ಗಳಿವೆ. ಈ ಬಡಾವಣೆಗಳಲ್ಲಿ ನಾವಿನ್ಯತೆ ಕುರಿತ ಮತ್ತು ಗ್ರಾಮೀಣ ಸಂಪರ್ಕ ಹೆಚ್ಚಿಸುವ ಕುರಿತ 22 ಸಾವಿರ ಗ್ರಾಮೀಣ ವಾಣಿಜ್ಯಕೇಂದ್ರಗಳ ಮೂಲಕ ಮೂಲಸೌಕರ್ಯದ ಆಧುನೀಕರಣಕ್ಕೆ ಒತ್ತು ನೀಡಲಾಗಿದೆ. ಮುಂಬರುವ ದಿನಗಳಲ್ಲಿ, ಈ ಕೇಂದ್ರಗಳು ರೈತರ ಆದಾಯ ಹೆಚ್ಚಿಸಲು, ಉದ್ಯೋಗಾವಕಾಶ ಸೃಷ್ಟಿಸಲು ನೆರವಾಗುತ್ತವೆ ಮತ್ತು ಕೃಷಿ ಆಧಾರಿತ ಗ್ರಾಮೀಣ ಮತ್ತು ಕೃಷಿ ಆರ್ಥಿಕತೆಯ ತಾಣಗಳಾಗಲಿವೆ. ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಅಡಿಯಲ್ಲಿ, ಈಗ ಹಳ್ಳಿಗಳನ್ನು ಗ್ರಾಮೀಣ ಮಾರುಕಟ್ಟೆ, ಉನ್ನತ ಶಿಕ್ಷಣ ಕೇಂದ್ರ ಮತ್ತು ಆಸ್ಪತ್ರೆಗಳೊಂದಿಗೆ ಸಂಪರ್ಕಿಸಲಾಗಿದೆ. ಇದು ಗ್ರಾಮಗಳ ಜನರ ಬದುಕು ಸುಗಮಗೊಳಿಸುತ್ತಿದೆ.

ನಾವು ಉಜ್ವಲ ಯೋಜನೆಯಲ್ಲಿ ಸುಗಮ ಜೀವನದ ಸ್ಫೂರ್ತಿಯ ವಿಸ್ತರಣೆಯನ್ನು ಕಂಡಿದ್ದೇವೆ. ಈ ಯೋಜನೆ ಗ್ರಾಮೀಣ ಮಹಿಳೆಯರಿಗೆ ಹೊಗೆಯಿಂದ ಮುಕ್ತಿ ನೀಡಿರುವುದಷ್ಟೇ ಅಲ್ಲ, ಅದು ಅವರ ಸಬಲೀಕರಣದ ಅತಿ ದೊಡ್ಡ ಮೂಲವಾಗಿದೆ. ಉಜ್ವಲ ಗುರಿಯನ್ನು 5 ಕೋಟಿಯಿಂದ 6 ಕೋಟಿ ಕುಟುಂಬಗಳಿಗೆ ಹೆಚ್ಚಿಸಿರುವುದಕ್ಕೆ ನನಗೆ ಸಂತೋಷವಾಗಿದೆ. ದೊಡ್ಡ ಸಂಖ್ಯೆಯ ದಲಿತ, ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳ ಕುಟುಂಬಗಳು ಈ ಯೋಜನೆಯಿಂದ ಲಾಭ ಪಡೆದಿವೆ. ಈ ಬಜೆಟ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ 1 ಲಕ್ಷ ಕೋಟಿ ರೂಪಾಯಿ ಒದಗಿಸಿದೆ.

ಕೆಳ ಮಧ್ಯಮವರ್ಗ ಮತ್ತು ಸಮಾಜದ ಬಡ ವರ್ಗದವರಿಗೆ ವೈದ್ಯಕೀಯ ವೆಚ್ಚ ಮತ್ತು ಚಿಕಿತ್ಸೆ ಎರಡೂ ಕಾಳಜಿಯ ವಿಚಾರಗಳೇ ಆಗಿವೆ. ಬಜೆಟ್ ನಲ್ಲಿ ಪ್ರಕಟಿಸಲಾಗಿರುವ ಹೊಸ ಯೋಜನೆ ಆಯುಷ್ಮಾನ್ ಭಾರತ ಈ ವರ್ಗದ ಜನರ ಕಾಳಜಿಯನ್ನು ಪೂರೈಸಲಿದೆ. ಈ ಯೋಜನೆ ದೇಶದ ಸುಮಾರು 10 ಕೋಟಿ ಬಡ ಮತ್ತು ಕೆಳ ಮಧ್ಯಮವರ್ಗದ ಕುಟುಂಬಗಳಿಗೆ ದೊರಕಲಿದೆ. ಅದರೆ ಇದು 45-50 ಕೋಟಿ ಜನರಿಗೆ ತಲುಪಲಿದೆ. ಈ ಯೋಜನೆಯಡಿ, ಈ ಕುಟಂಬಗಳು, ಗುರುತಿಸಲಾದ ಆಸ್ಪತ್ರೆಗಳಲ್ಲಿ ವಾರ್ಷಿಕ 5 ಲಕ್ಷ ರೂಪಾಯಿಗಳವರೆಗೆ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದಾಗಿದೆ. ಇದು ವಿಶ್ವದ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆಯಾಗಿದ್ದು, ವೆಚ್ಚವನ್ನು ಸರ್ಕಾರವೇ ಭರಿಸಲಿದೆ. 1.5 ಲಕ್ಷ ಆರೋಗ್ಯ ಕ್ಷೇಮ ಕೇಂದ್ರಗಳನ್ನು ದೇಶದ ಪ್ರಮುಖ ಪಂಚಾಯಿತಿಗಳಾದ್ಯಂತ ತೆರೆಯುತ್ತಿರುವುದು ಶ್ಲಾಘನಾರ್ಹ. ಇದು ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರಿಗೆ ಆರೋಗ್ಯ ಸೇವೆ ದೊರಕುವಂತೆ ಮಾಡುತ್ತದೆ. 24 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ದೇಶಾದ್ಯಂತ ತೆರೆಯುತ್ತಿರುವುದು, ಜನರಿಗೆ ಚಿಕಿತ್ಸೆಯನ್ನು ಒದಗಿಸುವುದರ ಜೊತೆಗೆ, ಯುವಜನರಿಗೆ ವೈದ್ಯಕೀಯ ಶಿಕ್ಷಣವನ್ನೂ ನೀಡುತ್ತದೆ. ದೇಶಾದ್ಯಂತ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಸ್ಥಾಪನೆ ನಮ್ಮ ಪ್ರಯತ್ನವಾಗಿದೆ.

ಹಿರಿಯ ನಾಗರಿಕರ ಕಾಳಜಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ಬಾರಿಯ ಬಜೆಟ್ ನಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈಗ ಹಿರಿಯ ನಾಗರಿಕರು ಪ್ರಧಾನಮಂತ್ರಿ ವಯ ವರ್ಧನ ಯೋಜನೆಯಡಿಯಲ್ಲಿ 15 ಲಕ್ಷ ರೂಪಾಯಿಗಳವರೆಗಿನ ಠೇವಣಿಗೆ ಕನಿಷ್ಠ ಶೇ.8ರಷ್ಟು ಬಡ್ಡಿಗೆ ಅರ್ಹರಾಗಿರುತ್ತಾರೆ. ಅವರ ಬ್ಯಾಂಕ್ ಅಥವಾ ಅಂಚೆ ಕಚೇರಿಗಳ ಠೇವಣಿಯ ಮೇಲಿನ 50 ಸಾವಿರ ರೂಪಾಯಿಗಳವರೆಗಿನ ಬಡ್ಡಿಯ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಜೊತೆಗೆ ಗಂಭೀರ ಕಾಯಿಲೆಗಳ ಮೇಲೆ ಮಾಡಲಾದ 1 ಲಕ್ಷ ರೂಪಾಯಿಗಳವರೆಗಿನ ವೆಚ್ಚಕ್ಕೂ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

ದೀರ್ಘ ಕಾಲದಿಂದ ದೇಶದ ಸೂಕ್ಷ್ಮ, ಸಣ್ಣ ಮತ್ತು ಮದ್ಯಮ ಉದ್ದಿಮೆಗಳು ಅಥವಾ ಎಂ.ಎಸ್.ಎಂ.ಇಗಳು ದೊಡ್ಡ ಕೈಗಾರಿಕೆಗಳಿಗಿಂತ ಹೆಚ್ಚಿನ ತೆರಿಗೆ ಪಾವತಿ ಮಾಡಬೇಕಾಗಿತ್ತು. ಈ ಬಜೆಟ್ ನಲ್ಲಿ ದೃಢ ನಿರ್ಧಾರ ಪ್ರಟಿಸಲಾಗಿದ್ದು, ಎಂಎಸ್.ಎಂ.ಇ.ಗಳ ತೆರಿಗೆಯನ್ನು ಸರ್ಕಾರ ಶೇ.5ರಷ್ಟು ಇಳಿಕೆ ಮಾಡಿದೆ, ಈಗ ಅವರು ಶೇ.30ರ ಬದಲಾಗಿ ಶೇ.25ರಷ್ಟು ತೆರಿಗೆ ಪಾವತಿಸುತ್ತಾರೆ. ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅಗತ್ಯವಾದ ಕಾರ್ಯ ಬಂಡವಾಳವನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕುಗಳು ಮತ್ತು ಎನ್.ಬಿ.ಎಫ್.ಸಿ.ಗಳಿಂದ ಸಾಲ ಸೌಲಭ್ಯವನ್ನು ಹೆಚ್ಚಳ ಮಾಡಲಾಗಿದೆ. ಭಾರತದಲ್ಲಿ ಮೇಕ್ ಆಫ್ ಮಿಷನ್ಗೆ ಅದು ಉತ್ತೇಜನ ನೀಡುತ್ತದೆ. ಇದು ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಉತ್ತೇಜನ ನೀಡಲಿದೆ.

ಎಂ.ಎಸ್.ಎಂ.ಇ. ವಲಯ ದೊಡ್ಡ ಕೈಗಾರಿಕೆಗಳ ಎನ್.ಪಿ.ಎ.ಯಿಂದ ಒತ್ತಡ ಅನುಭವಿಸುತ್ತಿವೆ. ಸಣ್ಣ ಉದ್ಯಮಗಳು ಇತರರ ತಪ್ಪಿಗೆ ಸಂಕಷ್ಟ ಅನುಭವಿಸಬಾರದು. ಹೀಗಾಗಿ, ಎನ್.ಪಿ.ಎ ಮತ್ತು ಎಂ.ಎಸ್.ಎಂ.ಇ. ವಲಯದ ಒತ್ತಡದ ಖಾತೆಗಳಿಗೆ ಸಂಬಂಧಿಸಿದ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ಶೀಘ್ರ ಪ್ರಕಟಿಸಲಿದೆ.

ಉದ್ಯೋಗ ಉತ್ತೇಜಿಸುವ ಸಲುವಾಗಿ ಮತ್ತು ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಸಲುವಾಗಿ, ಸರ್ಕಾರ, ದಿಟ್ಟ ನಿರ್ಧಾರ ಕೈಗೊಂಡಿದೆ. ಇದು ಅನೌಪಚಾರಿಕ ವಲಯದಿಂದ ಔಪಚಾರಿಕ ವಲಯಕ್ಕೆ ಪರಿವರ್ತಿಸಿ, ಉತ್ತೇಜನ ನೀಡುತ್ತದೆ ಮತ್ತು ಹೊಸ ಉದ್ಯೋಗಾವಕಾಶಗಳನ್ನೂ ಒದಗಿಸುತ್ತದೆ. ಈಗ ಸರ್ಕಾರ ಮೊದಲ ಮೂರು ವರ್ಷಗಳವರೆಗೆ ಹೊಸ ಉದ್ಯೋಗಿಗಳ ಇ.ಪಿ.ಎಫ್. ಖಾತೆಗೆ ಶೇ.12ರಷ್ಟು ದೇಣಿಗೆ ನೀಡುತ್ತದೆ. ಜೊತೆಗೆ ಹೊಸ ಮಹಿಳಾ ಸಿಬ್ಬಂದಿಗೂ ಮೊದಲ ಮೂರು ವರ್ಷಗಳ ಕಾಲ ಇಪಿಎಫ್. ದೇಣಿಗೆಯನ್ನು ಹಾಲಿ ಇರುವ ಶೇ.12ರಿಂದ ಶೇ.8ಕ್ಕೆ ಇಳಿಸಲಾಗಿದೆ. ಹೀಗಾಗಿ, ಅವರು ಮನೆಗೆ ತೆಗೆದುಕೊಂಡು ಹೋಗುವ ವೇತನ ಹೆಚ್ಚಳವಾಗುತ್ತದೆ ಮತ್ತು ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ ಲಭಿಸಲಿದೆ. ಆದಾಗ್ಯೂ, ಮಾಲೀಕರ ದೇಣಿಗೆಯ ಪಾಲನ್ನು ಶೇ.12ರಲ್ಲೇ ಉಳಿಸಲಾಗಿದೆ. ಇದು ಉದ್ಯೋಗಸ್ಥ ಮಹಿಳೆಯರ ಸಬಲೀಕರಣಕ್ಕೆ ಕೈಗೊಂಡ ಪ್ರಮುಖ ಹೆಜ್ಜೆಯಾಗಿದೆ.

ನವ ಭಾರತದ ಕನಸು ಸಾಕಾರಗೊಳಿಸುವ ಸಲುವಾಗಿ, ಶ್ರೀಸಾಮಾನ್ಯರ ಬದುಕನ್ನು ಸುಗಮಗೊಳಿಸುವುದನ್ನು ಹೆಚ್ಚಳ ಮಾಡಲಾಗುತ್ತದೆ ಮತ್ತು ಅಭಿವೃದ್ಧಿಯಲ್ಲಿ ಸ್ಥಿರತೆಯನ್ನು ಖಾತ್ರಿ ಪಡಿಸಲಾಗುತ್ತಿದೆ, ಭಾರತಕ್ಕೆ ಮುಂದಿನ ಪೀಳಿಗೆಯ ಮೂಲಸೌಕರ್ಯದ ಅಗತ್ಯವಿದೆ. ಡಿಜಿಟಲ್ ಇಂಡಿಯಾಗೆ ಸಂಬಂಧಿಸಿದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಇದಕ್ಕೆ 6 ಲಕ್ಷ ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದ್ದು, ಕಳೆದ ವರ್ಷಕ್ಕಿಂತ 1 ಲಕ್ಷ ಕೋಟಿ ಹೆಚ್ಚಾಗಿದೆ. ಈ ಯೋಜನೆಗಳು ದೇಶದಲ್ಲಿ ಹಲವು ಸುತ್ತಿನ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿವೆ.

ಮಧ್ಯಮವರ್ಗದವರಿಗೆ ಮತ್ತು ವೇತನದಾರರಿಗೆ ತೆರಿಗೆ ರಿಯಾಯಿತಿ ಪ್ರಕಟಿಸಿರುವ ನಾನು ಹಣಕಾಸು ಸಚಿವರನ್ನು ಅಭಿನಂದಿಸುತ್ತೇನೆ.

ಈ ಬಜೆಟ್ ಎಲ್ಲ ಭಾರತೀಯರ ನಿರೀಕ್ಷೆಗಳಿಗೆ ಅನುಗುಣವಾಗಿದೆ. ಈ ಬಜೆಟ್ ಈ ಕೆಳಗಿನವುಗಳನ್ನು ಖಾತ್ರಿಪಡಿಸುತ್ತದೆ – ರೈತರ ಬೆಳೆಗೆ ಲಾಭದಾಯಕ ದರ, ಕಲ್ಯಾಣ ಯೋಜನೆಗಳ ಮೂಲಕ ಬಡ ಜನರ ಏಳಿಗೆ, ತೆರಿಗೆ ಪಾವತಿಸುವ ನಾಗರಿಕರ ಪ್ರಾಮಾಣಿಕತೆಗೆ ಗೌರವ, ಸೂಕ್ತವಾದ ತೆರಿಗೆ ಸ್ವರೂಪದೊಂದಿಗೆ ಉದ್ಯಮಶೀಲತೆಯ ಸ್ಫೂರ್ತಿಗೆ ಬೆಂಬಲ ಮತ್ತು ಹಿರಿಯ ನಾಗರಿಕರ ಕೊಡುಗೆಗೆ ಮೆಚ್ಚುಗೆ.

ನವ ಭಾರತಕ್ಕೆ ಭದ್ರ ಬುನಾದಿ ಒದಗಿಸುವ ಮತ್ತು ಸುಗಮ ಜೀವನ ಹೆಚ್ಚಿಸುವ ಬಜೆಟ್ ಮಂಡಿಸಿದ್ದಕ್ಕಾಗಿ ಮತ್ತೊಮ್ಮೆ ಹಣಕಾಸು ಸಚಿವರಿಗೆ ಮತ್ತು ಅವರ ತಂಡಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ.”