ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 17ರ ಭಾನುವಾರ ರಾಷ್ಟ್ರಪತಿ ಭವನದಲ್ಲಿ ನೀತಿ ಆಯೋಗದ ಆಡಳಿತ ಮಂಡಳಿಯ ನಾಲ್ಕನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ದಿನವಿಡೀ ನಡೆಯಲಿರುವ ಸಭೆಯಲ್ಲಿ ಕೇಂದ್ರ ಸಚಿವರು, ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗೌರ್ನರ್ ಗಳು ಮತ್ತು ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ನೀತಿ ಆಯೋಗದ ಆಡಳಿತ ಮಂಡಳಿಯು ಪ್ರಮುಖ ಕಾಯವಾಗಿದ್ದು, ರಾಜ್ಯಗಳ ಸಕ್ರಿಯ ಸಹಯೋಗದೊಂದಿಗೆ ರಾಷ್ಟ್ರೀಯ ಅಭಿವೃದ್ಧಿಯ ಆದ್ಯತೆಗಳು, ಕ್ಷೇತ್ರಗಳು ಮತ್ತು ವ್ಯೂಹಗಳ ಸಂದರ್ಭದಲ್ಲಿ ಹಂಚಿಕೆಯ ದೃಷ್ಟಿಕೋನದೊಂದಿಗೆ ಅಭಿವೃದ್ಧಿಯ ನಿರೂಪಣೆ ರೂಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ.
ಆಡಳಿತ ಮಂಡಳಿಯು ಕಳೆದ ವರ್ಷದ ಅವಧಿಯಲ್ಲಿ ಆಗಿರುವ ಕಾರ್ಯಗಳ ಪರಾಮರ್ಶೆ ನಡೆಸುತ್ತದೆ ಮತ್ತು ಭವಿಷ್ಯದ ಅಭಿವೃದ್ಧಿ ಆದ್ಯತೆಗಳ ಬಗ್ಗೆ ವಿಚಾರ ವಿಮರ್ಶೆ ನಡೆಸುತ್ತದೆ.
ಮಂಡಳಿಯು ರೈತರ ಆದಾಯ ದುಪ್ಪಟ್ಟು ಮಾಡಲು ಕೈಗೊಂಡಿರುವ ಕ್ರಮಗಳು; ಮಹತ್ವಾಕಾಂಕ್ಷೆಯ ಯೋಜನೆಗಳಾದ ಆಯುಷ್ಮಾನ್ ಭಾರತ, ರಾಷ್ಟ್ರೀಯ ಪೌಷ್ಟಿಕ ಅಭಿಯಾನ ಮತ್ತು ಇಂದ್ರಧನುಷ್ ಅಭಿಯಾನ; ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅಭಿವೃದ್ಧಿ; ಮತ್ತು ಮಹಾತ್ಮಾಗಾಂಧಿ ಅವರ 150ನೇ ಜಯಂತಿ ಆಚರಣೆ ಕುರಿತ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸುವ ನಿರೀಕ್ಷೆ ಇದೆ.
***