ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಇ.ಎಫ್.ಸಿ.ಯ ಶಿಫಾರಸಿನಂತೆ, 1160 ಕೋಟಿ ರೂಪಾಯಿಗಳ ಆಯವ್ಯಯ ಹಂಚಿಕೆಯೊಂದಿಗೆ 2017-18 ರಿಂದ 2019-2020ರವರೆಗೆ ರಾಷ್ಟ್ರೀಯ ಯುವ ಸಶಕ್ತೀಕರಣ ಕಾರ್ಯಕ್ರಮ ಯೋಜನೆಯನ್ನು ಮುಂದುವರಿಸಲು ತನ್ನ ಸಮ್ಮತಿ ನೀಡಿದೆ.
ಮುಖ್ಯಾಂಶಗಳು :
12ನೇ ಪಂಚ ವಾರ್ಷಿಕ ಯೋಜನೆಯ ಅವಧಿಯಲ್ಲಿ, ಹಣಕಾಸು ಸಚಿವಾಲಯ ಮತ್ತು ನೀತಿ ಆಯೋಗದ ಸಮಾಲೋಚನೆಯೊಂದಿಗೆ ಕೈಗೊಳ್ಳಲಾದ ತರ್ಕಬದ್ಧಗೊಳಿಸುವಿಕೆಯ ಕಸರತ್ತಿನಲ್ಲಿ, ಎಂಟು ಯೋಜನೆಗಳನ್ನು ರಾಷ್ಟ್ರೀಯ ಯುವ ಸಶಕ್ತೀಕರಣ ಕಾರ್ಯಕ್ರಮದ ಸುರಕ್ಷತಾ ಯೋಜನೆಯಡಿಯಲ್ಲಿ ಉಪ ಯೋಜನೆಗಳಾಗಿ ತರಲಾಗಿದೆ. ಇದು ಯೋಜನೆಗಳ ನಡುವೆ ಉತ್ತಮ ಒಮ್ಮತ ಸಾಧಿಸಲು ನೆರವಾಗುತ್ತವೆ ಮತ್ತು ಆ ಮೂಲಕ, ಅವುಗಳ ಸಾಮರ್ಥ್ಯ ಸುಧಾರಿಸುತ್ತವೆ ಹಾಗೂ ಲಭ್ಯ ಸಂಪನ್ಮೂಲದೊಂದಿಗೆ ಉತ್ತಮ ಫಲಿತಾಂಶ ಸಾಧನೆಗೆ ನೆರವಾಗುತ್ತದೆ. ಯೋಜನೆಯ ಫಲಾನುಭವಿಗಳು, ರಾಷ್ಟ್ರೀಯ ಯುವ ನೀತಿ 2014ರಲ್ಲಿ “ಯುವ’ ಎಂಬುದಕ್ಕೆ ನೀಡಿರುವ ವ್ಯಾಖ್ಯಾನದಂತೆ 15-29ವಯೋಮಾನದ ಯುವಜನರಾಗಿರುತ್ತಾರೆ, ಕಾರ್ಯಕ್ರಮಗಳ ಅಂಶಗಳು, ನಿರ್ದಿಷ್ಟವಾಗಿ 10-19ವರ್ಷದೊಳಗಿನ ಹದಿಹರೆಯದವರಿಗಾಗಿ ಇರುತ್ತದೆ.
ರಾಷ್ಟ್ರೀಯ ಯುವ ಸಶಕ್ತೀಕರಣ ಕಾರ್ಯಕ್ರಮದ ಅಡಿಯಲ್ಲಿ ಎಂಟು ಉಪ ಯೋಜನೆಗಳು ಈ ಕೆಳಗಿನಂತಿವೆ :
i. ನೆಹರೂ ಯುವ ಕೇಂದ್ರ ಸಂಘಟನ್ (ಎನ್.ವೈ.ಕೆ.ಎಸ್.);
ii. ರಾಷ್ಟ್ರೀಯ ಯುವ ಕಾರ್ಪ್ಸ್ (ಎನ್.ವೈ.ಸಿ.);
iii. ಯುವಜನರು ಮತ್ತು ಹದಿಹರೆಯದವರ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಕ್ರಮ(ಎನ್.ಪಿ.ವೈ.ಎ.ಡಿ.);
iv. ಅಂತಾರಾಷ್ಟ್ರೀಯ ಸಹಕಾರ;
v. ಯುವ ಹಾಸ್ಟೆಲ್ ಗಳು (ವೈ.ಎಚ್) ;
vi. ಸ್ಕೌಟಿಂಗ್ ಮತ್ತು ಗೈಡಿಂಗ್ ಸಂಸ್ಥೆಗಳಿಗೆ ನೆರವು;
vii. ರಾಷ್ಟ್ರೀಯ ಶಿಸ್ತು ಯೋಜನೆ (ಎನ್.ಡಿ.ಎಸ್.) ;ಮತ್ತು
viii. ರಾಷ್ಟ್ರೀಯ ಯುವ ನಾಯಕರ ಕಾರ್ಯಕ್ರಮ (ಎನ್.ವೈ.ಎಲ್.ಪಿ.)
ಹಿನ್ನೆಲೆ:
ರಾಷ್ಟ್ರೀಯ ಯುವ ಸಶಕ್ತೀಕರಣ ಕಾರ್ಯಕ್ರಮ ಯೋಜನೆ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಹಾಲಿ ಚಾಲ್ತಿಯಲ್ಲಿರುವ ಕೇಂದ್ರ ವಲಯದ ಕಾರ್ಯಕ್ರಮವಾಗಿದೆ ಮತ್ತು 12ನೇ ಪಂಚವಾರ್ಷಿಕ ಯೋಜನೆಯಿಂದ ಮುಂದುವರಿದುಕೊಂಡು ಬಂದಿದೆ. ಈ ಯೋಜನೆಯು ಯುವಜನರಲ್ಲಿ ನಾಯಕತ್ವದ ಗುಣ ಬೆಳೆಸುವ ಮತ್ತು ವ್ಯಕ್ತಿತ್ವ ವಿಕಾಸದ ಗುರಿಯನ್ನು ಹೊಂದಿದ್ದು, ಆ ಮೂಲಕ ಅವರನ್ನು ರಾಷ್ಟ್ರ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿಸುವುದಾಗಿದೆ.