Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2017-18-ಕೇಂದ್ರ ಬಜೆಟ್ ಕುರಿತಂತೆ ಪ್ರಧಾನಮಂತ್ರಿಯವರ ಹೇಳಿಕೆಯ ಕನ್ನಡ ಪಠ್ಯ


ಅದ್ಭುತವಾದ ಬಜೆಟ್ ಮಂಡಿಸಿದ್ದಕ್ಕಾಗಿ ನಾನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಅಭಿನಂದಿಸುತ್ತೇನೆ. ಇದು ಬಡವರನ್ನು ಸಬಲೀಕರಿಸಲಿದ್ದು, ಎಲ್ಲರ ನಿರೀಕ್ಷೆಯ ಮಟ್ಟ ತಲುಪಲಿದೆ. ಇದು ಮೂಲಸೌಕರ್ಯಕ್ಕೆ ಉತ್ತೇಜನ ನೀಡಲಿದ್ದು, ಹಣಕಾಸು ವ್ಯವಸ್ಥೆಗೆ ಬಲ ತರಲಿದೆ ಮತ್ತು ಅಭಿವೃದ್ಧಿಗೆ ದೊಡ್ಡ ಪ್ರೋತ್ಸಾಹ ದೊರಕಿಸಲಿದೆ. ಹೆದ್ದಾರಿಗಳ ನಿರ್ಮಾಣದಿಂದ ಹಿಡಿದು ಐ-ವೇಗಳ ವಿಸ್ತರಣೆಯವರಗೆ, ಬೇಳೆಕಾಳುಗಳ ದರದಿಂದ ಹಿಡಿದು ಡಾಟಾ ಸ್ಪೀಡ್ ವರೆಗೆ, ರೈಲ್ವೆಯ ಆಧುನೀಕರಣದಿಂದ ಹಿಡಿದು ಸರಳ ಆರ್ಥಿಕತೆ ನಿರ್ಮಾಣದವರೆಗೆ, ಶಿಕ್ಷಣದಿಂದ ಹಿಡಿದು ಆರೋಗ್ಯದವರೆಗೆ, ಉದ್ದಿಮೆದಾರರಿಂದ ಹಿಡಿದು ಕೈಗಾರಿಕೆಗಳವರೆಗೆ, ಜವಳಿ ಉತ್ಪಾದಕರಿಂದ ಹಿಡಿದು ತೆರಿಗೆ ಕಡಿತದವರೆಗೆ ಪ್ರತಿಯೊಬ್ಬರ ನಿರೀಕ್ಷೆಗಳನ್ನೂ ಪೂರ್ಣಗೊಳಿಸಬಲ್ಲ ಅವಕಾಶಗಳು ಈ ಬಜೆಟ್ ನಲ್ಲಿವೆ. ಹಣಕಾಸು ಸಚಿವರು ಮತ್ತು ಅವರ ಸಂಪೂರ್ಣ ತಂಡ ಈ ಐತಿಹಾಸಿಕ ಬಜೆಟ್ ಗಾಗಿ ಅಭಿನಂದನಾರ್ಹರು.

ಈ ಬಜೆಟ್, ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿಯ ಕ್ರಮಗಳ ಪ್ರತಿಬಿಂಬವಾಗಿದೆ ಮತ್ತು ಈ ನಿಟ್ಟಿನಲ್ಲಿ ಮುಂದೆ ನಡೆಯುವ ಮುನ್ನೋಟವಾಗಿದೆ. ಕೇಂದ್ರ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನಗೊಳಿಸಿರುವುದು ಪ್ರಮುಖ ಹೆಜ್ಜೆಯಾಗಿದೆ. ಇದು ಸಾರಿಗೆ ವಲಯದ ಸಮಗ್ರ ಯೋಜನೆಗೆ ನೆರವಾಗುತ್ತದೆ. ರೈಲ್ವೆ ಈಗ ದೇಶದ ಸಾರಿಗೆ ಅಗತ್ಯಗಳನ್ನು ಪೂರೈಸಲು ಇನ್ನೂ ಉತ್ತಮ ಕೊಡುಗೆ ನೀಡಬಹುದಾಗಿದೆ.

ಬಜೆಟ್ ಗಮನ ಕೃಷಿ, ಗ್ರಾಮೀಣ ಅಭಿವೃದ್ಧಿ ಮತ್ತು ಮೂಲಸೌಕರ್ಯದ ಮೇಲಿದೆ. ಇದು ಕೂಡ ಹೂಡಿಕೆಯನ್ನು ಹೆಚ್ಚಿಸುವ ಮತ್ತು ಉದ್ಯೋಗಾವಕಾಶ ಸೃಷ್ಟಿಸುವ ಸರ್ಕಾರದ ಬದ್ಧತೆಯ ಬಿಂಬವಾಗಿದೆ. ಈ ವಿಭಾಗಗಳ ಯೋಜನೆಗಳಿಗೆ ಮಾಡಲಾಗಿರುವ ಹಂಚಿಕೆ ಗಣನೀಯವಾಗಿ ಹೆಚ್ಚಳವಾಗಿದೆ. ರೈಲ್ವೆ ಮತ್ತು ರಸ್ತೆ ಸಾರಿಗೆ ವಲಯಕ್ಕೆ ಬಜೆಟ್ ಹಂಚಿಕೆಯನ್ನು ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ. ರೈತರ ಆದಾಯವನ್ನು 2022ರಹೊತ್ತಿಗೆ ದುಪ್ಪಟ್ಟು ಮಾಡುವುದು ಸರ್ಕಾರದ ಗುರಿಯಾಗಿದೆ ಮತ್ತು ಇದನ್ನು ಗಮನದಲ್ಲಿಟ್ಟುಕೊಂಡು ನೀತಿಗಳು ಮತ್ತು ಯೋಜನೆಗಳನ್ನು ರೂಪಿಸಲಾಗಿದೆ. ಬಜೆಟ್ ನಲ್ಲಿ ರೈತರು, ಹಳ್ಳಿಗಳು, ಬಡವರು, ದಲಿತರು ಮತ್ತು ಸಮಾಜದ ಶೋಷಿತ ವರ್ಗಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೃಷಿ, ಪಶು ಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ಜಲಾಶ್ರಯ ಅಭಿವೃದ್ಧಿ, ಸ್ವಚ್ಛ ಭಾರತ ಅಭಿಯಾನ ಮೊದಲಾದ ಕ್ಷೇತ್ರಗಳು ಗ್ರಾಮೀಣ ಭಾರತದ ಆರ್ಥಿಕ ಸ್ಥಿತಿಯನ್ನು ಮೇಲೆತ್ತುವ ಸಾಕಷ್ಟು ಸಾಮರ್ಥ್ಯವನ್ನು ಹೊಂದಿವೆ ಮತ್ತು ಅಲ್ಲಿನ ಜನರ ಜೀವನ ಮಟ್ಟದಲ್ಲಿ ಕಣ್ಣಿಗೆ ಕಾಣುವಂಥ ಬದಲಾವಣೆ ತರಬಲ್ಲದಾಗಿವೆ.

ಈ ಬಜೆಟ್ ಉದ್ಯೋಗಾವಕಾಶಗಳನ್ನು ಹೆಚ್ಚಿಸವ ನಿಟ್ಟಿನಲ್ಲಿ ಒತ್ತು ನೀಡಿದೆ. ವಿದ್ಯುನ್ಮಾನ ಉತ್ಪಾದನೆ, ಜವಳಿಗೆ ವಿಶೇಷ ಹಂಚಿಕೆ ಮಾಡಲಾಗಿದ್ದು, ಇದು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವವರನ್ನು ಸಂಘಟಿತ ವಲಯಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ.ದೇಶದ ಯುವಜನರನ್ನು ಗಮನದಲ್ಲಿಟ್ಟುಕೊಂಡು ಕೌಶಲ್ಯ ಅಭಿವೃದ್ಧಿಗೆ ಬಜೆಟ್ ಹಂಚಿಕೆ ಗಣನೀಯವಾಗಿ ಏರಿಕೆ ಮಾಡಲಾಗಿದೆ ಮತ್ತು ಜನಸಂಖ್ಯೆಯ ಲಾಭದ ಪ್ರಯೋಜನವನ್ನು ಆ ಮೂಲಕ ಪಡೆಯುವ ಅಗತ್ಯವಿದೆ. ದಾಖಲೆಯ ಹಂಚಿಕೆ- ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಹಿಂದೆಂದಿಗಿತಲೂ ಹೆಚ್ಚು ಹಂಚಿಕೆ ಮಾಡಲಾಗಿದೆ. ಮಹಿಳಾ ಕಲ್ಯಾಣ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕೆ ಸಂಬಂಧಿಸಿದ ಯೋಜನೆಗಳಿಗೆ ನೀಡುವ ಹಂಚಿಕೆಯನ್ನು ಹೆಚ್ಚಳ ಮಾಡಲಾಗಿದೆ. ಆರೋಗ್ಯ ಮತ್ತು ಉನ್ನತ ಶಿಕ್ಷಣಕ್ಕೆ ಮಾಡಲುವ ಹಂಚಿಕೆಯನ್ನೂ ಗಣನೀಯವಾಗಿ ಹೆಚ್ಚಿಸಲಾಗಿದೆ.

ದೇಶದ ಆರ್ಥಿಕ ಬೆಳವಣಿಗೆಯಲ್ಲಿ ವಸತಿ ಮತ್ತು ನಿರ್ಮಾಣ ವಲಯ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ಬಜೆಟ್ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ವಸತಿ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡಿದೆ.

ರೈಲ್ವೆ ಬಜೆಟ್ ನ ವಿಶೇಷ ಗಮನ ರೈಲ್ವೆ ಸುರಕ್ಷತೆಯ ಮೇಲಿದೆ. ರೈಲ್ವೆ ಸುರಕ್ಷತಾ ನಿಧಿಯನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದ್ದು, ರೈಲ್ವೆ ಸುರಕ್ಷತೆಯ ಮೇಲೆ ಹೆಚ್ಚಿನ ಹಣ ವೆಚ್ಚ ಮಾಡಲು ಇದು ನೆರವಾಗಲಿದೆ. ಬಜೆಟ್ ನಲ್ಲಿ ರೈಲ್ವೆಯ ಬಂಡವಾಳ ವೆಚ್ಚ ಮತ್ತು ರಸ್ತೆ ಮೂಲಸೌಕರ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಡಿಜಿಟಲ್ ಆರ್ಥಿಕತೆಯ ಸಮಗ್ರ ಪ್ಯಾಕೇಜ್ ತೆರಿಗೆ ವಂಚನೆಯನ್ನು ತಪ್ಪಿಸುತ್ತದೆ ಮತ್ತು ಕಪ್ಪುಹಣದ ಚಲಾವಣೆಯನ್ನು ತಡೆಯುತ್ತದೆ. ನಾವು ಡಿಜಿಟಲ್ ಆರ್ಥಿಕತೆಯನ್ನು ಆರಂಭಿಸಲು ಅಭಿಯಾನದೋಪಾದಿಯಲ್ಲಿ ಪ್ರಯತ್ನ ಕೈಗೊಂಡಿದ್ದೇವೆ, 2017-18ರಲ್ಲಿ 2500 ಕೋಟಿ ಡಿಜಿಟಲ್ ವಹಿವಾಟಿನ ಗುರಿ ಸಾಧಿಸಲು ಬಹು ದೂರ ಕ್ರಮಿಸಬೇಕಾಗಿದೆ.

ಹಣಕಾಸು ಸಚಿವರು, ತೆರಿಗೆ ಸುಧಾರಣೆ ಮತ್ತು ತಿದ್ದುಪಡಿಗಳನ್ನು ತಂದಿದ್ದಾರೆ, ಇದು ಮಧ್ಯಮ ವರ್ಗದ ಜನತೆಗೆ ನೆಮ್ಮದಿ ನೀಡಲಿದ್ದು, ಕೈಗಾರಿಕೆಗಳ ಸ್ಥಾಪನೆಗೆ, ಉದ್ಯೋಗಾವಕಾಶಗಳ ಸೃಷ್ಟಿಗೆ ಕಾರಣವಾಗುತ್ತದೆ ಮತ್ತು ತಾರತಮ್ಯಕ್ಕೆ ಇತಿಶ್ರೀ ಹಾಡಿ, ಖಾಸಗಿ ಹೂಡಿಕೆದಾರರಿಗೆ ಪ್ರೋತ್ಸಾಹ ನೀಡುತ್ತದೆ. ವೈಯಕ್ತಿಕ ಆದಾಯ ತೆರಿಗೆಯನ್ನು ಗಣನೀಯವಾಗಿ ಕಡಿಮೆ ಮಾಡುವುದು ನೇರವಾಗಿ ಮಧ್ಯಮ ವರ್ಗದವರಿಗೆ ಹೆಚ್ಚಾಗಿ ತಲುಪಲಿದೆ. ತೆರಿಗೆಯ ದರವನ್ನು ಶೇಕಡ 10ರಿಂದ ಶೇ.5ಕ್ಕೆ ಇಳಿಸಿರುವುದು ದಿಟ್ಟ ಕ್ರಮವಾಗಿದೆ. ಈ ನಿರ್ಧಾರದಿಂದ ಭಾರತದ ಬಹುತೇಕ ತೆರಿಗೆದಾರರಿಗೆ ಲಾಭವಾಗಲಿದೆ. ನೀವು ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧದ ನಾನು ನಡೆಸುತ್ತಿರುವ ಹೋರಾಟ ನೋಡಿರಬಹುದು, ರಾಜಕೀಯಕ್ಕೆ ನೀಡಲಾಗುವ ಆರ್ಥಿಕ ನೆರವು ಸದಾ ಚರ್ಚೆಯ ವಿಷಯವಾಗಿದೆ. ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಸದಾ ಪರಿಶೀಲನೆಯಲ್ಲಿರಬೇಕು. ಚುನಾವಣೆಗೆ ಹಣ ನೀಡುವ ವಿಚಾರದಲ್ಲಿ ಹಣಕಾಸು ಸಚಿವರ ಹೊಸ ಯೋಜನೆಯು ಈ ನಿಟ್ಟಿನಲ್ಲಿ ಆಶಾಕಿರಣವಾಗಿದೆ ಮತ್ತು ಜನತೆಯ ಆಶೋತ್ತರಗಳಿಗೆ ಮತ್ತು ಕಪ್ಪು ಹಣದ ವಿರುದ್ಧ ನಮ್ಮ ಹೋರಾಟಕ್ಕೆ ಅನುಗುಣವಾಗಿದೆ

ದೇಶದಾದ್ಯಂತ ಇರುವ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಉದ್ಯೋಗ ಸೃಷ್ಟಿಯ ದೊಡ್ಡ ಮೂಲವಾಗಿವೆ. ಈ ಕೈಗಾರಿಕೆಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ತಮಗೆ ಅಡ್ಡಿಯಾಗುತ್ತಿದೆ ಮತ್ತು ತೆರಿಗೆಗಳನ್ನು ಕಡಿಮೆ ಮಾಡಿದರೆ, ಆಗ ಸುಮಾರು ಶೇಕಡ 90ರಷ್ಟು ನಮ್ಮ ಸಣ್ಣ ಕೈಗಾರಿಕೆಗಳಿಗೆ ಲಾಭವಾಗಲಿದೆ ಎಂದು ಒತ್ತಾಯಿಸುತ್ತಿವೆ. ಹೀಗಾಗಿ ಸರ್ಕಾರವು ಸಣ್ಣ ಕೈಗಾರಿಕೆಗಳ ವ್ಯಾಖ್ಯೆಗೆ ತಿದ್ದುಪಡಿ ತಂದಿದ್ದು, ಅದರ ವ್ಯಾಪ್ತಿಯನ್ನು ವಿಸ್ತರಿಸಿದೆ ಮತ್ತು ತೆರಿಗೆಯ ದರವನ್ನು ಶೇಕಡ 30ರಿಂದ ಶೇ.25ಕ್ಕೆ ಇಳಿಕೆ ಮಾಡಿದೆ. ಇದರಿಂದ ಶೇಕಡ 90ರಷ್ಟು ನಮ್ಮ ಸಣ್ಣ ಕೈಗಾರಿಕೆಗಳಿಗೆ ಲಾಭವಾಗಲಿದೆ. ಇದು ನಮ್ಮ ಎಸ್.ಎಸ್.ಐ.ಗಳು ಜಾಗತಿಕವಾಗಿ ಸ್ಪರ್ಧಿಸಲು ನೆರವಾಗಲಿದೆ ಎಂದು ನಾನು ಭಾವಿಸುತ್ತೇನೆ.

ಈ ಬಜೆಟ್ ದೇಶದ ಒಟ್ಟಾರೆ ಬೆಳವಣಿಗೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ, ಒಟ್ಟಾರೆ ಆರ್ಥಿಕ ಪ್ರಗತಿಗೂ ನೆರವಾಗುತ್ತದೆ ಮತ್ತು ರೈತರ ಆದಾಯವನ್ನು ಹೆಚ್ಚಳ ಮಾಡಲು ಪೂರಕವಾಗುತ್ತದೆ. ಜನರ ಜೀವನ ಮಟ್ಟ ಸುಧಾರಣೆ, ಅತ್ಯುತ್ತಮ ಶಿಕ್ಷಣ, ಆರೋಗ್ಯ ಖಾತ್ರಿಪಡಿಸುತ್ತದೆ ಮತ್ತು ವಸತಿ ಸಂಘಟಿತವಾಗುತ್ತದೆ. ವಿತ್ತೀಯ ಕೊರತೆ ಹೆಚ್ಚಿಸದಿರುವುದು ಬಡವರ ಮತ್ತು ಮಧ್ಯಮವರ್ಗದವರ ಖರೀದಿಯ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನವಾಗಿದೆ.

ಈ ಬಜೆಟ್ ನಮ್ಮ ಆಶೋತ್ತರಗಳು, ಕನಸುಗಳೊಂದಿಗೆ ಕೂಡಿಕೊಂಡಿದೆ ಮತ್ತು ನಮ್ಮ ಭವಿಷ್ಯದ ಹಾದಿಯನ್ನು ಚಿತ್ರಿಸುತ್ತದೆ. ಇದು ನಮ್ಮ ನೂತನ ಪೀಳಿಗೆಯ ಭವಿಷ್ಯವಾಗಿದೆ, ನಮ್ಮ ರೈತರ ಭವಿಷ್ಯವಾಗಿದೆ. ನಾನು ಭವಿಷ್ಯ ಎಂದು ಹೇಳಿದಾಗ, ಅದರ ಪ್ರತಿಯೊಂದು ಅಕ್ಷರದಲ್ಲಿಯೂ ಅರ್ಥ ಇದೆ. ಎಫ್.ಯು.ಟಿ.ಯು.ಆರ್.ಇ. ನಲ್ಲಿ ಎಫ್ ಅಕ್ಷರವು ಫಾರ್ಮರ್ (ರೈತ), ಯು ಅಂಡರ್ ಪ್ರಿವಿಲೈಜ್ಡ್ (ಶೋಷಿತರು – ಇದರಲ್ಲಿ ದಲಿತರು, ತುಳಿತಕ್ಕೆ ಒಳಗಾದವರು, ಮಹಿಳೆಯರು ಇತ್ಯಾದಿ ಸೇರುತ್ತಾರೆ), ಟಿ ಅಂದರೆ ಟ್ರಾನ್ಫರೆನ್ಸಿ (ಪಾರದರ್ಶಕತೆ), ಟೆಕ್ನಾಲಜಿ ಅಪ್ ಗ್ರೆಡೇಷನ್ – (ತಂತ್ರಜ್ಞಾನ ಮೇಲ್ದರ್ಜೆಗೇರಿಸುವುದು) ಇದು ಆಧುನಿಕ ಭಾರತದ ಕನಸಾಗಿದೆ, ಯು ಅಂದರೆ ಅರ್ಬನ್ ರಿಜುವಿನೇಷನ್ (ನಗರಗಳ ನವೀಕರಣ) ಆರ್ ಅಂದರೆ ರೂರಲ್ ಡೆವಲಪ್ಮೆಂಟ್ (ಗ್ರಾಮೀಣ ಅಭಿವೃದ್ಧಿ) ಮತ್ತು ಇ ಅಂದರೆ ಎಂಪ್ಲಾಯ್ಮೆಂಟ್ ಫಾರ್ ಯೂತ್, ಎಂಟರ್ ಪೆನ್ಯೂವರ್ ಶಿಪ್ ( ಯುವಕರಿಗೆ ಉದ್ಯೋಗ, ಉದ್ಯಮಶೀಲತೆ), ಹೊಸ ಉದ್ಯೋಗಕ್ಕೆ ಒತ್ತು ನೀಡುವುದು ಮತ್ತು ಯುವ ಉದ್ದಿಮೆದಾರರಿಗೆ ಚೈತನ್ಯ ತುಂಬುವುದಾಗಿದೆ. ಇಂಥ ಫ್ಯುಚರ್ ಬಜೆಟ್ ಮಂಡಿಸಿದ ಹಣಕಾಸು ಸಚಿವರಿಗೆ ಮತ್ತೊಮ್ಮೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ಬಜೆಟ್ ಸರ್ಕಾರದ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುತ್ತದೆ, ವಿಶ್ವಾಸದ ಹೊಸ ವಾತಾವರಣ ಸೃಷ್ಟಿಸುತ್ತದೆ ಎಂಬ ವಿಶ್ವಾಸ ನನಗಿದೆ ಮತ್ತು ದೇಶ ಹೊಸ ಎತ್ತರಕ್ಕೆ ಸಾಗಲು ನೆರವಾಗುತ್ತದೆ. ಮತ್ತೊಮ್ಮೆ ಹಣಕಾಸು ಸಚಿವರಿಗೆ ಮತ್ತು ಅವರ ತಂಡಕ್ಕೆ ನನ್ನ ಹೃತ್ಪೂರ್ವಕವಾದ ಅಭಿನಂದನೆಗಳು.