ನನ್ನ ಸಂಪುಟ ಸಹೋದ್ಯೋಗಿ ಶ್ರೀ ಅಮಿತ್ ಶಾ ಅವರೇ, ರಾಷ್ಟ್ರೀಯ ಸಹಕಾರಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ದಿಲೀಪ್ ಸಂಘಾನಿ ಅವರೇ, ಡಾ. ಚಂದ್ರಪಾಲ್ ಸಿಂಗ್ ಯಾದವ್ ಅವರೇ, ದೇಶದ ಮೂಲೆ ಮೂಲೆಯ ಸಹಕಾರ ಸಂಘಗಳ ಎಲ್ಲಾ ಸದಸ್ಯರೇ, ನಮ್ಮ ರೈತ ಸಹೋದರ ಸಹೋದರಿಯರೇ, ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ! ನಿಮ್ಮೆಲ್ಲರಿಗೂ 17ನೇ ಭಾರತೀಯ ಸಹಕಾರಿ ಸಮ್ಮೇಳನದ ಅಂಗವಾಗಿ ಹೃತ್ಪೂರ್ವಕ ಅಭಿನಂದನೆಗಳು. ಈ ಸಮ್ಮೇಳನಕ್ಕೆ ನಾನು ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ!
ಸ್ನೇಹಿತರೇ,
ಇಂದು ನಮ್ಮ ದೇಶವು ʻಅಭಿವೃದ್ಧಿ ಹೊಂದಿದ ಭಾರತʼ ಮತ್ತು ʻಸ್ವಾವಲಂಬಿ ಭಾರತʼದ ಗುರಿಯತ್ತ ಕೆಲಸ ಮಾಡುತ್ತಿದೆ. ನಮ್ಮ ಪ್ರತಿಯೊಂದು ಗುರಿಗಳನ್ನು ಸಾಧಿಸಲು ಪ್ರತಿಯೊಬ್ಬರ ಪ್ರಯತ್ನವೂ ಅತ್ಯಗತ್ಯ, ಮತ್ತು ಸಹಕಾರಿ ಮನೋಭಾವವು ಸರ್ವರ ಪ್ರಯತ್ನದ ಸಂದೇಶವನ್ನು ರವಾನಿಸುತ್ತದೆ ಎಂದು ನಾನು ಕೆಂಪು ಕೋಟೆಯ ಮೇಲಿನಿಂದ ಘೋಷಿಸಿದ್ದೆ. ಇಂದು, ಹಾಲು ಉತ್ಪಾದನೆಯಲ್ಲಿ ನಾವು ವಿಶ್ವದಲ್ಲೇ ನಂ.1 ಸ್ಥಾನದಲ್ಲಿದ್ದೇವೆ, ಹಾಲು ಸಹಕಾರ ಸಂಘಗಳ ಕೊಡುಗೆಗೆ ಧನ್ಯವಾದಗಳು. ಭಾರತವು ವಿಶ್ವದ ಅತಿದೊಡ್ಡ ಸಕ್ಕರೆ ಉತ್ಪಾದಿಸುವ ದೇಶಗಳಲ್ಲಿ ಒಂದಾಗಿದೆ; ನಮ್ಮ ಸಹಕಾರಿ ಸಂಸ್ಥೆಗಳು ಇದರಲ್ಲೂ ಪ್ರಮುಖ ಪಾತ್ರವಹಿಸುತ್ತವೆ. ದೇಶದ ಹೆಚ್ಚಿನ ಭಾಗದಲ್ಲಿ, ಸಹಕಾರಿ ಸಂಸ್ಥೆಗಳು ಸಣ್ಣ ರೈತರಿಗೆ ಪ್ರಮುಖ ಬೆಂಬಲವಾಗಿ ಮಾರ್ಪಟ್ಟಿವೆ. ಇಂದು, ಹೈನುಗಾರಿಕೆಯಂತಹ ಸಹಕಾರಿ ಕ್ಷೇತ್ರಗಳಲ್ಲಿ ನಮ್ಮ ತಾಯಂದಿರು ಮತ್ತು ಸಹೋದರಿಯರ ಪಾಲ್ಗೊಳ್ಳುವಿಕೆ ಸುಮಾರು 60 ಪ್ರತಿಶತದಷ್ಟಿದೆ. ಆದ್ದರಿಂದ, ʻಅಭಿವೃದ್ಧಿ ಹೊಂದಿದ ಭಾರತʼದ ಬೃಹತ್ ಗುರಿಗಳನ್ನು ಸಾಧಿಸಲು, ನಾವು ಸಹಕಾರಿ ಸಂಸ್ಥೆಗಳಿಗೆ ದೊಡ್ಡ ಉತ್ತೇಜನ ನೀಡಲು ನಿರ್ಧರಿಸಿದ್ದೇವೆ. ಅಮಿತ್ ಭಾಯ್ ಅವರು ಈಗಷ್ಟೇ ವಿವರವಾಗಿ ವಿವರಿಸಿದಂತೆ, ನಾವು ಮೊದಲ ಬಾರಿಗೆ ಸಹಕಾರಿಗಳಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿದ್ದೇವೆ ಮತ್ತು ಪ್ರತ್ಯೇಕ ಬಜೆಟ್ ಗೆ ಅವಕಾಶ ನೀಡಿದ್ದೇವೆ. ಇಂದು ಸಹಕಾರಿ ಸಂಘಗಳಿಗೆ ಕಾರ್ಪೊರೇಟ್ ವಲಯಕ್ಕೆ ಲಭ್ಯವಿರುವ ಅದೇ ಸೌಲಭ್ಯಗಳನ್ನು ಮತ್ತು ಅದೇ ವೇದಿಕೆಗಳನ್ನು ಒದಗಿಸಲಾಗುತ್ತಿದೆ. ಸಹಕಾರಿ ಸಂಘಗಳನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ, ಅವುಗಳಿಗೆ ತೆರಿಗೆ ದರಗಳನ್ನು ಸಹ ಕಡಿಮೆ ಮಾಡಲಾಗಿದೆ. ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸಲಾಗುತ್ತಿದೆ. ನಮ್ಮ ಸರ್ಕಾರವು ಸಹಕಾರಿ ಬ್ಯಾಂಕುಗಳನ್ನು ಬಲಪಡಿಸಿದೆ. ಸಹಕಾರಿ ಬ್ಯಾಂಕುಗಳಿಗೆ ಹೊಸ ಶಾಖೆಗಳನ್ನು ತೆರೆಯಲು ಸಹಾಯ ಮಾಡುವ ಸಲುವಾಗಿ ಮತ್ತು ಜನರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸಲು ನೆರವಾಗುವ ಸಲುವಾಗಿ ನಿಯಮಗಳು ಮತ್ತು ನಿಬಂಧನೆಗಳನ್ನು ಸಡಿಲಿಸಲಾಗಿದೆ.
ಸ್ನೇಹಿತರೇ,
ನಮ್ಮ ರೈತ ಸಹೋದರ – ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಳೆದ 9 ವರ್ಷಗಳಲ್ಲಿ ಸುಧಾರಿತ ನೀತಿಗಳು ಮತ್ತು ಸರ್ಕಾರ ಕೈಗೊಂಡ ನಿರ್ಧಾರಗಳಿಂದ ಆಗಿರುವ ಬದಲಾವಣೆಗಳು ನಿಮ್ಮ ಅನುಭವಕ್ಕೂ ಬಂದಿವೆ. 2014ರ ಮೊದಲು ರೈತರ ಸಾಮಾನ್ಯ ಬೇಡಿಕೆಗಳು ಮತ್ತು ಅವರು ಪದೇಪದೆ ಮುಂದಿಡುತ್ತಿದ್ದ ಬೇಡಿಕೆಗಳು ನಿಮಗೆ ನೆನಪಿರಬಹುದು. ಸರ್ಕಾರದಿಂದ ತಮಗೆ ಬಹಳ ಕಡಿಮೆ ನೆರವು ಸಿಗುತ್ತದೆ ಎಂದು ರೈತರು ದೂರುತ್ತಿದ್ದರು. ಮತ್ತು ತಾವು ಯಾವುದೇ ಸಣ್ಣ ಸಹಾಯವನ್ನು ಪಡೆದರೂ ಅದು ಮಧ್ಯವರ್ತಿಗಳಿಗೆ ಹೋಗುತ್ತಿತ್ತು. ದೇಶದ ಸಣ್ಣ ಮತ್ತು ಮಧ್ಯಮ ರೈತರು ಸರ್ಕಾರದ ಯೋಜನೆಗಳ ಪ್ರಯೋಜನಗಳಿಂದ ವಂಚಿತರಾಗಿದ್ದರು. ಕಳೆದ 9 ವರ್ಷಗಳಲ್ಲಿ ಈ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಇಂದು ಕೋಟ್ಯಂತರ ಸಣ್ಣ ರೈತರು ʻಪಿಎಂ ಕಿಸಾನ್ ಸಮ್ಮಾನ್ ನಿಧಿʼಯನ್ನು ಪಡೆಯುತ್ತಿದ್ದಾರೆ. ಈಗ ಮಧ್ಯವರ್ತಿಗಳೂ ಇಲ್ಲ, ನಕಲಿ ಫಲಾನುಭವಿಗಳೂ ಇಲ್ಲ! ಕಳೆದ ನಾಲ್ಕು ವರ್ಷಗಳಲ್ಲಿ, ಈ ಯೋಜನೆಯಡಿ 2.5 ಲಕ್ಷ ಕೋಟಿ ರೂ.ಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗಿದೆ. ನೀವೆಲ್ಲರೂ ಸಹಕಾರಿ ಕ್ಷೇತ್ರವನ್ನು ಮುನ್ನಡೆಸುತ್ತಿದ್ದೀರಿ; ಆದ್ದರಿಂದ, ನೀವು ಈ ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ನೋಡುತ್ತೀರಿ ಎಂದು ನಾನು ಭಾವಿಸುತ್ತೇನೆ. ನಾನು ಅದನ್ನು ಮತ್ತೊಂದು ಅಂಕಿ-ಅಂಶದೊಂದಗೆ ಹೋಲಿಕೆ ಮಾಡಿದರೆ, ಈ ಮೊತ್ತವು ಎಷ್ಟು ಅಗಾಧವಾದುದು ಎಂದು ನೀವು ಸುಲಭವಾಗಿ ಊಹಿಸಲು ಸಾಧ್ಯವಾಗುತ್ತದೆ! ನಾವು 2014ರ ಹಿಂದಿನ 5 ವರ್ಷಗಳ ಒಟ್ಟು ಕೃಷಿ ಬಜೆಟ್ ಅನ್ನು ಸೇರಿಸಿದರೆ, ಅದು 90 ಸಾವಿರ ಕೋಟಿ ರೂ.ಗಿಂತಲೂ ಕಡಿಮೆ! ಅಂದರೆ, ಆ ಸಮಯದಲ್ಲಿ ಇಡೀ ದೇಶದ ಇಡೀ ಕೃಷಿ ವ್ಯವಸ್ಥೆಗೆ ಖರ್ಚು ಮಾಡಿದ ಮೊತ್ತದ ಸುಮಾರು 3 ಪಟ್ಟು ಹಣವನ್ನು ನಾವು ಕೇವಲ ಒಂದು ಯೋಜನೆಗೆ – ಅಂದರೆ ʻಪಿಎಂ ಕಿಸಾನ್ ಸಮ್ಮಾನ್ ನಿಧಿʼಗೆ ಖರ್ಚು ಮಾಡಿದ್ದೇವೆ.
ಸ್ನೇಹಿತರೇ,
ಪ್ರಪಂಚದಾದ್ಯಂತ ಹೆಚ್ಚುತ್ತಿರುವ ರಸಗೊಬ್ಬರ ಮತ್ತು ರಾಸಾಯನಿಕಗಳ ಬೆಲೆಯಿಂದ ರೈತರಿಗೆ ಹೊರೆಯಾಗುವುದಿಲ್ಲ ಎಂದು ಮೋದಿ ಭರವಸೆ ನೀಡುತ್ತಾರೆ. ಕೇಂದ್ರದ ಬಿಜೆಪಿ ಸರ್ಕಾರ ನಿಮಗೆ ಈ ಭರವಸೆ ನೀಡಿದೆ. ಇಂದು, ರೈತನು ಪ್ರತಿ ಚೀಲಕ್ಕೆ 270 ರೂ.ಗಿಂತ ಕಡಿಮೆ ವೆಚ್ಚದಲ್ಲಿ ಯೂರಿಯಾ ಪಡೆಯುತ್ತಿದ್ದಾನೆ. ಇದರ ಬೆಲೆ ಬಾಂಗ್ಲಾದೇಶದಲ್ಲಿ 720 ರೂ., ಪಾಕಿಸ್ತಾನದಲ್ಲಿ 800 ರೂ., ಚೀನಾದಲ್ಲಿ 2100 ರೂ. ಇದೆ. ಅಲ್ಲದೆ, ಸಹೋದರ- ಸಹೋದರಿಯರೇ, ಅಮೆರಿಕದಂತಹ ಅಭಿವೃದ್ಧಿ ಹೊಂದಿದ ದೇಶದಲ್ಲೂ, ರೈತರು ಇದೇ ಪ್ರಮಾಣದ ಯೂರಿಯಾ ಪಡೆಯಲು 3,000 ರೂ.ಗಿಂತ ಹೆಚ್ಚು ಬೆಲೆ ತೆರುತ್ತಿದ್ದಾರೆ. ನಾವು ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ಅಷ್ಟಕ್ಕೂ ಗ್ಯಾರಂಟಿ ಎಂದರೇನು? ರೈತನ ಜೀವನವನ್ನು ಪರಿವರ್ತಿಸಲು ಎಷ್ಟು ಪ್ರಯತ್ನ ಬೇಕು ಎಂಬುದನ್ನು ಇದು ತೋರಿಸುತ್ತದೆ. ಒಟ್ಟಾರೆಯಾಗಿ, ನಾವು ಕಳೆದ 9 ವರ್ಷಗಳನ್ನು ನೋಡುವುದಾದರೆ ಮತ್ತು ನಾನು ಬರೀ ರಸಗೊಬ್ಬ ಸಬ್ಸಿಡಿ ವಿಷಯವನ್ನಷ್ಟೇ ಹೇಳುವುದಾದರೆ, ಬಿಜೆಪಿ ಸರ್ಕಾರ ಇದಕ್ಕಾಗಿ 10 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಿದೆ. ಇದಕ್ಕಿಂತ ದೊಡ್ಡ ಗ್ಯಾರಂಟಿ ಬೇರೇನಿದೆ?
ಸ್ನೇಹಿತರೇ,
ಮೊದಲಿನಿಂದಲೂ, ರೈತರು ತಮ್ಮ ಬೆಳೆಗಳಿಗೆ ನ್ಯಾಯಯುತ ಬೆಲೆ ಪಡೆಯುವುದನ್ನು ಖಾತರಿಪಡಿಸುವ ವಿಚಾರದಲ್ಲಿ ನಮ್ಮ ಸರ್ಕಾರ ಬಹಳ ಗಂಭೀರವಾಗಿದೆ. ಕಳೆದ 9 ವರ್ಷಗಳಲ್ಲಿ, ʻಕನಿಷ್ಠ ಬೆಂಬಲ ಬೆಲೆʼ(ಎಂಎಸ್ಪಿ) ಹೆಚ್ಚಿಸಿದ ಪರಿಣಾಮವಾಗಿ ರೈತರು 15 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಪಡೆದಿದ್ದಾರೆ. ಇದರರ್ಥ, ನೀವು ಲೆಕ್ಕಾಚಾರ ಮಾಡಿದರೆ, ಪ್ರತಿ ವರ್ಷ ಕೇಂದ್ರ ಸರ್ಕಾರವು ಕೃಷಿ ಮತ್ತು ರೈತರಿಗಾಗಿ 6.5 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡುತ್ತಿದೆ, ಅಂದರೆ ಪ್ರತಿ ವರ್ಷ, ಸರ್ಕಾರವು ಪ್ರತಿ ರೈತರಿಗೆ ಒಂದಲ್ಲ ಒಂದು ರೂಪದಲ್ಲಿ ಸರಾಸರಿ 50 ಸಾವಿರ ರೂ.ಗಳನ್ನು ಒದಗಿಸುತ್ತಿದೆ. ಅಂದರೆ, ಬಿಜೆಪಿ ಸರ್ಕಾರದಲ್ಲಿ, ರೈತರಿಗೆ ಪ್ರತಿ ವರ್ಷ 50 ಸಾವಿರ ರೂ.ಗಳನ್ನು ವಿವಿಧ ರೀತಿಯಲ್ಲಿ ಪಡೆಯುವುದು ಗ್ಯಾರಂಟಿ. ಇದು ಮೋದಿ ಅವರ ಗ್ಯಾರಂಟಿ. ನಾನು ಮಾತನಾಡುತ್ತಿರುವುದು ಭರವಸೆಯ ಬಗ್ಗೆಯಲ್ಲ, ಈಗಾಗಲೇ ನಾವು ಮಾಡಿರುವ ಮತ್ತು ಮಾಡುತ್ತಿರುವ ಕೆಲಸದ ಬಗ್ಗೆ.
ಸ್ನೇಹಿತರೇ,
ರೈತ ಸ್ನೇಹಿ ವಿಧಾನಕ್ಕೆ ಅನುಗುಣವಾಗಿ, ಕೆಲವು ದಿನಗಳ ಹಿಂದೆ ಮತ್ತೊಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರವು ರೈತರಿಗೆ 3 ಲಕ್ಷ 70 ಸಾವಿರ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದೆ. ಇದಲ್ಲದೆ, ಕಬ್ಬು ಬೆಳೆಗಾರರ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ಈಗ ಪ್ರತಿ ಕ್ವಿಂಟಲ್ ಗೆ ದಾಖಲೆಯ 315 ರೂ.ಗೆ ಹೆಚ್ಚಿಸಲಾಗಿದೆ. ಇದರಿಂದ 5 ಕೋಟಿಗೂ ಹೆಚ್ಚು ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರು ನೇರವಾಗಿ ಪ್ರಯೋಜನವನ್ನು ಪಡೆಯುತ್ತಾರೆ.
ಸ್ನೇಹಿತರೇ,
ʻಅಮೃತ ಕಾಲʼದಲ್ಲಿ ದೇಶದ ಹಳ್ಳಿಗಳು ಮತ್ತು ದೇಶದ ರೈತರ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ದೇಶದ ಸಹಕಾರಿ ವಲಯವು ಪ್ರಮುಖ ಪಾತ್ರ ವಹಿಸಲಿದೆ. ಸರ್ಕಾರ ಮತ್ತು ಸಹಕಾರ ಸಂಸ್ಥೆಗಳು ಒಟ್ಟಾಗಿ ʻಅಭಿವೃದ್ಧಿ ಹೊಂದಿದ ಭಾರತʼ, ʻಸ್ವಾವಲಂಬಿ ಭಾರತʼದ ಸಂಕಲ್ಪಕ್ಕೆ ದುಪ್ಪಟ್ಟು ಶಕ್ತಿ ನೀಡಲಿವೆ. ಸರ್ಕಾರವು ʻಡಿಜಿಟಲ್ ಇಂಡಿಯಾʼದೊಂದಿಗೆ ಪಾರದರ್ಶಕತೆಯನ್ನು ಹೆಚ್ಚಿಸಿದ್ದಲ್ಲದೆ, ಪ್ರತಿ ಫಲಾನುಭವಿಗೆ ನೇರವಾಗಿ ಪ್ರಯೋಜನಗಳನ್ನು ತಲುಪಿಸಿತು. ಇಂದು, ದೇಶದ ಕಡುಬಡವರು ಸಹ ಉನ್ನತ ಮಟ್ಟದಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವು ಕೊನೆಗೊಂಡಿದೆ ಎಂದು ನಂಬುತ್ತಾರೆ. ಈಗ, ಸಹಕಾರಿ ಸಂಸ್ಥೆಗಳಿಗೆ ಇಷ್ಟೊಂದು ಉತ್ತೇಜನ ನೀಡುತ್ತಿರುವ ಸಂದರ್ಭದಲ್ಲಿ ಶ್ರೀಸಾಮಾನ್ಯರು, ನಮ್ಮ ರೈತರು, ನಮ್ಮ ಜಾನುವಾರು ಸಾಕಣೆದಾರರು ಸಹ ತಮ್ಮ ದೈನಂದಿನ ಜೀವನದಲ್ಲಿ ಈ ವಿಷಯಗಳ ಅನುಭವ ಪಡೆಯುವುದು ಮತ್ತು ಅದನ್ನು ನಂಬುವುದು ಅವಶ್ಯಕ. ಸಹಕಾರಿ ಕ್ಷೇತ್ರವು ಪಾರದರ್ಶಕತೆ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತದ ಮಾದರಿಯಾಗುವುದು ಅತ್ಯಗತ್ಯವಾಗಿದೆ. ಸಹಕಾರಿ ಸಂಘಗಳಲ್ಲಿ ದೇಶದ ಸಾಮಾನ್ಯ ನಾಗರಿಕರ ನಂಬಿಕೆ ಬಲಗೊಳ್ಳಬೇಕು. ಅದನ್ನು ಖಾತರಿಪಡಿಸಲು, ಸಹಕಾರಿ ಸಂಸ್ಥೆಗಳಲ್ಲಿ ಸಾಧ್ಯವಾದಷ್ಟು ಡಿಜಿಟಲ್ ವ್ಯವಸ್ಥೆಯನ್ನು ಉತ್ತೇಜಿಸುವುದು ಅತ್ಯಗತ್ಯವಾಗಿದೆ. ನಗದು ವಹಿವಾಟಿನ ಮೇಲಿನ ಅವಲಂಬನೆಯನ್ನು ನಾವು ಕೊನೆಗೊಳಿಸಬೇಕು. ಇದಕ್ಕಾಗಿ, ಸಹಕಾರಿ ಕ್ಷೇತ್ರದ ಎಲ್ಲಾ ಜನರು ಅಭಿಯಾನದ ಮೂಲಕ ಪ್ರಯತ್ನಗಳನ್ನು ಮಾಡಬೇಕಾಗಿದೆ. ನಾನು ಸಹಕಾರಿ ಸಚಿವಾಲಯವನ್ನು ರಚಿಸುವ ಮೂಲಕ ನಿಮಗಾಗಿ ನಿರ್ಣಾಯಕ ಕೆಲಸ ಮಾಡಿದ್ದೇನೆ. ಈಗ ನೀವು ಡಿಜಿಟಲ್ ಕಡೆಗೆ ಸಾಗುವ ಮೂಲಕ ಮತ್ತು ನಗದುರಹಿತವಾಗಿ ಹೋಗುವ ಮೂಲಕ ಹಾಗೂ ಸಂಪೂರ್ಣ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ನನಗೆ ಅಷ್ಟೇ ನಿರ್ಣಾಯಕ ಕೆಲಸವನ್ನು ಮಾಡುತ್ತೀರಿ. ನಾವೆಲ್ಲರೂ ಒಟ್ಟಾಗಿ ಪ್ರಯತ್ನಗಳನ್ನು ಮಾಡಿದರೆ, ನಾವು ಖಂಡಿತವಾಗಿಯೂ ಬೇಗನೆ ಯಶಸ್ಸನ್ನು ಪಡೆಯಬಹುದು. ಇಂದು ಭಾರತವು ತನ್ನ ಡಿಜಿಟಲ್ ವಹಿವಾಟಿಗಾಗಿ ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಇಂತಹ ಸನ್ನಿವೇಶದಲ್ಲಿ, ಸಹಕಾರಿ ಸಂಘಗಳು ಮತ್ತು ಸಹಕಾರಿ ಬ್ಯಾಂಕುಗಳು ಸಹ ಇದರಲ್ಲಿ ಮುಂದಾಳತ್ವ ವಹಿಸಬೇಕಾಗುತ್ತದೆ. ಇದರಿಂದ, ಪಾರದರ್ಶಕತೆ ಮತ್ತು ಮಾರುಕಟ್ಟೆಯಲ್ಲಿ ನಿಮ್ಮ ದಕ್ಷತೆ ಹೆಚ್ಚಾಗುತ್ತದೆ ಹಾಗೂ ಉತ್ತಮ ಸ್ಪರ್ಧೆಯೂ ಸಾಧ್ಯವಾಗುತ್ತದೆ.
ಸ್ನೇಹಿತರೇ,
ಅತ್ಯಂತ ಪ್ರಮುಖ ಪ್ರಾಥಮಿಕ ಮಟ್ಟದ ಸಹಕಾರ ಸಂಘವಾದ (ಪ್ರಾಥಮಿಕ ಕೃಷಿ ಸಾಲ ಸಹಕಾರ ಸಂಘ) ʻಪಿಎಸಿಎಸ್ʼ, ಈಗ ಪಾರದರ್ಶಕತೆ ಮತ್ತು ಆಧುನಿಕತೆಗೆ ಮಾದರಿಯಾಗಲಿದೆ. ಇಲ್ಲಿಯವರೆಗೆ 60 ಸಾವಿರಕ್ಕೂ ಹೆಚ್ಚು ʻಪಿಎಸಿಎಸ್ʼಗಳನ್ನು ಕಂಪ್ಯೂಟರೀಕರಣಗೊಳಿಸಲಾಗಿದೆ ಎಂಬ ವಿಚಾರ ನನಗೆ ತಿಳಿಸಲಾಯಿತು, ಇದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಆದರೆ, ಸಹಕಾರಿ ಸಂಸ್ಥೆಗಳು ತಮ್ಮ ಕೆಲಸವನ್ನು ಸುಧಾರಿಸುವುದು ಮತ್ತು ತಂತ್ರಜ್ಞಾನದ ಬಳಕೆಗೆ ಒತ್ತು ನೀಡುವುದು ಬಹಳ ಮುಖ್ಯ. ಸಹಕಾರ ಸಂಘಗಳ ಪ್ರತಿಯೊಂದು ಹಂತವು ʻಕೋರ್ ಬ್ಯಾಂಕಿಂಗ್ʼನಂತಹ ವ್ಯವಸ್ಥೆಯನ್ನು ಅಳವಡಿಸಿಕೊಂಡಾಗ ಮತ್ತು ಸದಸ್ಯರು 100 ಪ್ರತಿಶತ ಆನ್ಲೈನ್ ವಹಿವಾಟುಗಳನ್ನು ಸ್ವೀಕರಿಸಿದಾಗ, ಅದು ದೇಶಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.
ಸ್ನೇಹಿತರೇ,
ಇಂದು ಭಾರತದ ರಫ್ತು ನಿರಂತರವಾಗಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿರುವುದನ್ನು ನೀವು ನೋಡಬಹುದು. ‘ಮೇಕ್ ಇನ್ ಇಂಡಿಯಾ’ ಬಗ್ಗೆ ಇಂದು ಪ್ರಪಂಚದಾದ್ಯಂತ ಚರ್ಚಿಸಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ, ಸಹಕಾರಿ ಸಂಸ್ಥೆಗಳು ಸಹ ಈ ಕ್ಷೇತ್ರದಲ್ಲಿ ತಮ್ಮ ಕೊಡುಗೆ ಹೆಚ್ಚಿಸುವಂತೆ ಖಾತರಿಪಡಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ಉದ್ದೇಶದೊಂದಿಗೆ, ಇಂದು ನಾವು ಉತ್ಪಾದನೆಗೆ ಸಂಬಂಧಿಸಿದ ಸಹಕಾರಿ ಸಂಘಗಳನ್ನು ವಿಶೇಷವಾಗಿ ಪ್ರೋತ್ಸಾಹಿಸುತ್ತಿದ್ದೇವೆ. ಅವುಗಳ ಮೇಲಿನ ತೆರಿಗೆಯನ್ನು ಸಹ ಈಗ ಸಾಕಷ್ಟು ಕಡಿಮೆ ಮಾಡಲಾಗಿದೆ. ರಫ್ತು ಹೆಚ್ಚಿಸುವಲ್ಲಿ ಸಹಕಾರಿ ಕ್ಷೇತ್ರವೂ ಪ್ರಮುಖ ಪಾತ್ರ ವಹಿಸುತ್ತಿದೆ. ಹೈನುಗಾರಿಕೆ ಕ್ಷೇತ್ರದಲ್ಲಿ ನಮ್ಮ ಸಹಕಾರಿ ಸಂಸ್ಥೆಗಳು ಶ್ಲಾಘನೀಯ ಕೆಲಸ ಮಾಡುತ್ತಿವೆ. ಹಾಲಿನ ಪುಡಿ, ಬೆಣ್ಣೆ ಮತ್ತು ತುಪ್ಪವನ್ನು ಇಂದು ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿದೆ. ಈಗ ಬಹುಶಃ ಸಹಕಾರಿ ಸಂಘಗಳು ಜೇನು ಕ್ಷೇತ್ರವನ್ನು ಸಹ ಪ್ರವೇಶಿಸುತ್ತಿವೆ. ನಮ್ಮ ಹಳ್ಳಿಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶಕ್ತಿಯ ಕೊರತೆಯಿಲ್ಲ, ಆದರೆ ನಾವು ದೃಢನಿಶ್ಚಯದಿಂದ ಮುಂದುವರಿಯಬೇಕಷ್ಟೇ. ಇಂದು, ವಿಶ್ವದಲ್ಲಿ ‘ಶ್ರೀ ಅನ್ನ’ ಎಂದು ಗುರುತಿಸಲ್ಪಟ್ಟಿರುವ ಭಾರತದ ಸಿರಿಧಾನ್ಯಗಳು ಈಗ ಚರ್ಚೆಯ ವಿಷಯವಾಗಿವೆ. ಇದಕ್ಕಾಗಿ ಜಗತ್ತಿನಲ್ಲಿ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಲಾಗುತ್ತಿದೆ. ನಾನು ಇತ್ತೀಚೆಗಷ್ಟೇ ಅಮೆರಿಕಕ್ಕೆ ಭೇಟಿ ನೀಡಿದ್ದೆ. ಅಮೆರಿಕದ ಅಧ್ಯಕ್ಷರು ಆಯೋಜಿಸಿದ್ದ ಔತಣಕೂಟದಲ್ಲಿ ಸಿರಿ ಧಾನ್ಯಗಳು ಅಥವಾ ವಿವಿಧ ರೀತಿಯ ‘ಶ್ರೀಅನ್ನ’ ತಿನಿಸುಗಳೂ ಇದ್ದವು. ಭಾರತ ಸರ್ಕಾರದ ಉಪಕ್ರಮದಿಂದಾಗಿ, ಈ ವರ್ಷವನ್ನು ವಿಶ್ವದಾದ್ಯಂತ ʻಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷʼವಾಗಿ ಆಚರಿಸಲಾಗುತ್ತಿದೆ. ನಿಮ್ಮಂತಹ ಸಹಕಾರಿ ಸ್ನೇಹಿತರು ದೇಶದ ಆಹಾರ ಧಾನ್ಯಗಳನ್ನು ವಿಶ್ವ ಮಾರುಕಟ್ಟೆಗೆ ಕೊಂಡೊಯ್ಯುವ ಪ್ರಯತ್ನಗಳನ್ನು ಮಾಡಲು ಸಾಧ್ಯವಿಲ್ಲವೇ? ಇದರಿಂದ, ಸಣ್ಣ ರೈತರು ಸಹ ಪ್ರಮುಖ ಆದಾಯದ ಮೂಲವನ್ನು ಪಡೆಯುತ್ತಾರೆ. ಇದು ಪೌಷ್ಟಿಕ ಆಹಾರದ ಹೊಸ ಸಂಪ್ರದಾಯವನ್ನು ಪ್ರಾರಂಭಿಸುತ್ತದೆ. ನೀವು ಈ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡಬೇಕು ಮತ್ತು ಸರ್ಕಾರದ ಪ್ರಯತ್ನಗಳನ್ನು ಮುಂದುವರಿಸಬೇಕು.
ಸ್ನೇಹಿತರೇ,
ಇಚ್ಛಾಶಕ್ತಿ ಇದ್ದಾಗ, ಅತ್ಯಂತ ದೊಡ್ಡ ಸವಾಲುಗಳನ್ನು ಸಹ ಎದುರಿಸಬಹುದು ಎಂಬುದನ್ನು ನಾವು ಹಲವು ವರ್ಷಗಳಿಂದ ತೋರಿಸಿದ್ದೇವೆ. ಉದಾಹರಣೆಗೆ, ನಾನು ನಿಮ್ಮೊಂದಿಗೆ ಕಬ್ಬಿನ ಸಹಕಾರ ಸಂಘಗಳ ಬಗ್ಗೆ ಮಾತನಾಡುತ್ತೇನೆ. ಒಂದು ಕಾಲದಲ್ಲಿ ರೈತರು ಕಬ್ಬಿಗೆ ಪಡೆಯುತ್ತಿದ್ದ ಬೆಲೆ ಅತ್ಯಂತ ಕಡಿಮೆ ಇತ್ತು. ಅಲ್ಲದೆ, ಹಣವು ವರ್ಷಗಳ ಕಾಲ ರೈತರ ಕೈ ಸೇರುತ್ತಿರಲಿಲ್ಲ. ಕಬ್ಬಿನ ಉತ್ಪಾದನೆ ಹೆಚ್ಚಾದರೂ ರೈತರು ತೊಂದರೆಗೆ ಸಿಲುಕುತ್ತಿದ್ದರು, ಕಬ್ಬಿನ ಉತ್ಪಾದನೆ ಕುಸಿದರಂತೂ ರೈತರು ಖಂಡಿತವಾಗಿಯೂ ತೊಂದರೆಗೆ ಸಿಲುಕುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ, ಸಹಕಾರಿ ಸಂಘಗಳಲ್ಲಿ ಕಬ್ಬು ಬೆಳೆಗಾರರ ವಿಶ್ವಾಸವು ದುರ್ಬಲಗೊಳ್ಳುತ್ತಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯುವತ್ತ ನಾವು ಗಮನ ಹರಿಸಿದ್ದೇವೆ. ಕಬ್ಬು ಬೆಳೆಗಾರರ ಹಳೆಯ ಬಾಕಿ ಪಾವತಿಗಳನ್ನು ಪಾವತಿಸಲು ನಾವು ಸಕ್ಕರೆ ಕಾರ್ಖಾನೆಗಳಿಗೆ 20 ಸಾವಿರ ಕೋಟಿ ರೂ.ಗಳ ಪ್ಯಾಕೇಜ್ ನೀಡಿದ್ದೇವೆ. ನಾವು ಕಬ್ಬಿನಿಂದ ʻಎಥೆನಾಲ್ʼ ಉತ್ಪಾದಿಸಲು ಮತ್ತು ಪೆಟ್ರೋಲ್ ನೊಂದಿಗೆ ʻಎಥೆನಾಲ್ʼ ಮಿಶ್ರಣ ಮಾಡುವತ್ತ ಗಮನ ಹರಿಸಿದ್ದೇವೆ. ಕಳೆದ 9ವರ್ಷಗಳಲ್ಲಿ ಸಕ್ಕರೆ ಕಾರ್ಖಾನೆಗಳಿಂದ 70 ಸಾವಿರ ಕೋಟಿ ರೂ.ಗಳ ʻಎಥೆನಾಲ್ʼ ಖರೀದಿಸಲಾಗಿದೆ ಎಂದರೆ ನೀವೇ ಸ್ವಲ್ಪ ಊಹಿಸಿ ನೋಡಿ. ಜೊತೆಗೆ ಇದು ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಪಾವತಿ ಮಾಡಲು ಸಕ್ಕರೆ ಕಾರ್ಖಾನೆಗಳಿಗೂ ಸಹಾಯ ಮಾಡಿದೆ. ಈ ಹಿಂದೆ ಕಬ್ಬಿಗೆ ನೀಡಲಾಗುವ ಹೆಚ್ಚಿನ ಬೆಲೆಯ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಯನ್ನು ನಮ್ಮ ಸರ್ಕಾರ ರದ್ದುಪಡಿಸಿದೆ. ಆದ್ದರಿಂದ, ನಾವು ತೆರಿಗೆಗೆ ಸಂಬಂಧಿಸಿದ ದಶಕಗಳಷ್ಟು ಹಳೆಯ ಸಮಸ್ಯೆಗಳನ್ನು ಸಹ ಪರಿಹರಿಸಿದ್ದೇವೆ. ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಹಳೆಯ ಬೇಡಿಕೆಗಳನ್ನು ಈಡೇರಿಸಲು ಈ ವರ್ಷದ ಬಜೆಟ್ ನಲ್ಲಿ 10,000 ಕೋಟಿ ರೂ.ಗಳ ವಿಶೇಷ ನೆರವನ್ನು ಘೋಷಿಸಲಾಗಿದೆ. ಈ ಎಲ್ಲಾ ಪ್ರಯತ್ನಗಳು ಕಬ್ಬಿನ ವಲಯದಲ್ಲಿ ಶಾಶ್ವತ ಬದಲಾವಣೆಗಳನ್ನು ತರುತ್ತಿವೆ, ಈ ವಲಯದಲ್ಲಿ ಸಹಕಾರಿ ಸಂಸ್ಥೆಗಳನ್ನು ಬಲಪಡಿಸುತ್ತಿವೆ.
ಸ್ನೇಹಿತರೇ,
ಒಂದು ಕಡೆ ನಾವು ರಫ್ತನ್ನು ಹೆಚ್ಚಿಸಬೇಕು, ಮತ್ತೊಂದೆಡೆ ನಾವು ಆಮದುಗಳ ಮೇಲಿನ ನಮ್ಮ ಅವಲಂಬನೆಯನ್ನು ನಿರಂತರವಾಗಿ ಕಡಿಮೆ ಮಾಡಬೇಕು. ಭಾರತವು ಆಹಾರ ಧಾನ್ಯಗಳ ವಿಚಾರದಲ್ಲಿ ಸ್ವಾವಲಂಬಿಯಾಗಿದೆ ಎಂದು ನಾವು ಆಗಾಗ್ಗೆ ಹೇಳುತ್ತೇವೆ. ಆದರೆ ವಾಸ್ತವವೇನು? ಗೋಧಿ, ಭತ್ತ ಮತ್ತು ಸಕ್ಕರೆಯಲ್ಲಿ ಸ್ವಾವಲಂಬನೆ ಮಾತ್ರ ಸಾಕಾಗುವುದಿಲ್ಲ. ಜೊತೆಗೆ, ನಾವು ಆಹಾರ ಭದ್ರತೆಯ ಬಗ್ಗೆ ಮಾತನಾಡುವಾಗ, ಅದು ಕೇವಲ ಗೋಧಿ ಮತ್ತು ಅಕ್ಕಿಗೆ ಸೀಮಿತವಾಗಬಾರದು. ನಾನು ನಿಮಗೆ ಕೆಲವು ವಿಷಯಗಳನ್ನು ನೆನಪಿಸಲು ಬಯಸುತ್ತೇನೆ. ನಾವು ನಮ್ಮ ರೈತ ಸಹೋದರ-ಸಹೋದರಿಯರನ್ನು ಎಚ್ಚರಗೊಳಿಸಬೇಕಾಗಿದೆ! ಖಾದ್ಯ ತೈಲದ ಆಮದು, ಬೇಳೆಕಾಳುಗಳ ಆಮದು, ಮೀನು ಆಹಾರದ ಆಮದು ಅಥವಾ ಆಹಾರ ವಲಯದಲ್ಲಿ ಸಂಸ್ಕರಿಸಿದ ಮತ್ತು ಇತರ ಉತ್ಪನ್ನಗಳು ಹೀಗೆ ಯಾವುದೇ ಇರಲಿ, ನಾವು ಪ್ರತಿವರ್ಷ ಈ ವಸ್ತುಗಳಿಗಾಗಿ 2 – 2.5 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತೇವೆ ಎಂದು ತಿಳಿದರೆ ನಿಮಗೆ ಆಘಾತವಾಗಬಹುದು. ಈ ಹಣ ವಿದೇಶಗಳಿಗೆ ಹೋಗುತ್ತದೆ. ಅಂದರೆ ಈ ಹಣವನ್ನು ವಿದೇಶಕ್ಕೆ ಕಳುಹಿಸಬೇಕಾಗುತ್ತದೆ. ಭಾರತದಂತಹ ಆಹಾರ ಪ್ರಾಬಲ್ಯದ ದೇಶಕ್ಕೆ ಇದು ತಕ್ಕನಾದ ವಿಷಯವೇ? ದೊಡ್ಡ ಭರವಸೆಯ ಕ್ಷೇತ್ರವೆನಿಸಿದ ಸಹಕಾರಿ ಕ್ಷೇತ್ರದ ಇಡೀ ನಾಯಕತ್ವವೇ ನನ್ನ ಮುಂದೆ ಇದೆ. ಆದ್ದರಿಂದ, ನಾವು ಕ್ರಾಂತಿಯ ದಿಕ್ಕಿನಲ್ಲಿ ಸಾಗಬಹುದೆಂದು ನಾನು ಸಹಜವಾಗಿಯೇ ನಿಮ್ಮಿಂದ ನಿರೀಕ್ಷಿಸುತ್ತೇನೆ. ಈ ಹಣ ಭಾರತದ ರೈತರ ಜೇಬಿಗೆ ಹೋಗಬೇಕೇ ಅಥವಾ ಬೇಡವೇ? ಅದು ವಿದೇಶಗಳಿಗೆ ಹೋಗಬೇಕೇ?
ಸ್ನೇಹಿತರೇ,
ನಮ್ಮಲ್ಲಿ ದೊಡ್ಡ ಮಟ್ಟದಲ್ಲಿ ತೈಲ ಬಾವಿಗಳಿಲ್ಲ ಎಂಬುದು ನಿಮಗೆ ಗೊತ್ತಿರುವ ವಿಚಾರವೇ. ಆದ್ದರಿಂದ, ನಾವು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕು; ಅದು ನಮ್ಮ ಅನಿವಾರ್ಯತೆ. ಆದರೆ ಖಾದ್ಯ ತೈಲದಲ್ಲಿ ಸ್ವಾವಲಂಬನೆ ಸಾಧ್ಯ. ಇದಕ್ಕಾಗಿ ʻಮಿಷನ್ ಪಾಮ್ ಆಯಿಲ್ʼ ಪ್ರಾರಂಭದಂತಹ ಕ್ರಮಗಳ ಮೂಲಕ ಕೇಂದ್ರ ಸರ್ಕಾರವು ಸಮರೋಪಾದಿಯಲ್ಲಿ ಕೆಲಸ ಮಾಡಿದೆ ಎಂದು ನಿಮಗೆ ತಿಳಿದಿರಬಹುದು. ನಾವು ಪಾಮೋಲಿನ್ ಕೃಷಿಯನ್ನು ಪ್ರೋತ್ಸಾಹಿಸಿದ್ದೇವೆ, ಇದರಿಂದ ನಾವು ಪಾಮೋಲಿನ್ ಎಣ್ಣೆಯನ್ನು ಉತ್ಪಾದಿಸಬಹುದು. ಅಂತೆಯೇ, ಎಣ್ಣೆಕಾಳು ಬೆಳೆಗಳನ್ನು ಉತ್ತೇಜಿಸಲು ಹೆಚ್ಚಿನ ಸಂಖ್ಯೆಯ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ದೇಶದ ಸಹಕಾರಿ ಸಂಸ್ಥೆಗಳು ಈ ಅಭಿಯಾನದ ಚುಕ್ಕಾಣಿ ಹಿಡಿದರೆ, ಶೀಘ್ರದಲ್ಲೇ ನಾವು ಖಾದ್ಯ ತೈಲದ ವಿಷಯದಲ್ಲಿ ಸ್ವಾವಲಂಬಿಗಳಾಗಬಹುದು. ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸದಿಂದ ಹಿಡಿದು ನೆಡುತೋಪು, ತಂತ್ರಜ್ಞಾನ ಮತ್ತು ಸಂಗ್ರಹಣೆಗೆ ಸಂಬಂಧಿಸಿದ ಮಾಹಿತಿ ಮತ್ತು ಸೌಲಭ್ಯಗಳನ್ನು ಒದಗಿಸುವವರೆಗೆ ನೀವು ಬಹಳಷ್ಟು ಕೆಲಸಗಳನ್ನು ಮಾಡಬಹುದು.
ಸ್ನೇಹಿತರೇ,
ಕೇಂದ್ರ ಸರ್ಕಾರವು ಮೀನುಗಾರಿಕೆ ಕ್ಷೇತ್ರಕ್ಕೆ ಮತ್ತೊಂದು ಪ್ರಮುಖ ಯೋಜನೆಯನ್ನು ಪ್ರಾರಂಭಿಸಿದೆ. ಇಂದು, ʻಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆʼ ಅಡಿಯಲ್ಲಿ ಮೀನು ಉತ್ಪಾದನೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗುತ್ತಿದೆ. ದೇಶಾದ್ಯಂತ ಎಲ್ಲೆಲ್ಲಿ ನದಿಗಳು ಮತ್ತು ಸಣ್ಣ ಕೊಳಗಳಿವೆಯೋ, ಅಲ್ಲಿ ಗ್ರಾಮಸ್ಥರು ಮತ್ತು ರೈತರು ಈ ಯೋಜನೆಯ ಮೂಲಕ ಹೆಚ್ಚುವರಿ ಆದಾಯದ ಮೂಲವನ್ನು ಪಡೆಯುತ್ತಿದ್ದಾರೆ. ಇದರ ಅಡಿಯಲ್ಲಿ, ಸ್ಥಳೀಯ ಮಟ್ಟದಲ್ಲಿ ಮೇವು ಉತ್ಪಾದನೆಗೆ ಸಹ ನೆರವು ನೀಡಲಾಗುತ್ತಿದೆ. ಇಂದು 25 ಸಾವಿರಕ್ಕೂ ಹೆಚ್ಚು ಸಹಕಾರಿ ಸಂಘಗಳು ಮೀನುಗಾರಿಕೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರ ಪರಿಣಾಮವಾಗಿ, ಮೀನು ಸಂಸ್ಕರಣೆ, ಮೀನು ಒಣಗಿಸುವುದು ಮತ್ತು ಮೀನು ಸಂಗ್ರಹಣೆ, ಮೀನು ಕ್ಯಾನಿಂಗ್ ಮತ್ತು ಮೀನು ಸಾಗಣೆಯಂತಹ ಅನೇಕ ಚಟುವಟಿಕೆಗಳನ್ನು ಸಂಘಟಿತ ರೀತಿಯಲ್ಲಿ ಬಲಪಡಿಸಲಾಗಿದೆ. ಇದು ಮೀನುಗಾರರ ಜೀವನವನ್ನು ಸುಧಾರಿಸಲು ಮತ್ತು ಉದ್ಯೋಗವನ್ನು ಸೃಷ್ಟಿಸಲು ಸಹಾಯ ಮಾಡಿದೆ. ಕಳೆದ 9 ವರ್ಷಗಳಲ್ಲಿ ಒಳನಾಡಿನ ಮೀನುಗಾರಿಕೆಯೂ ದ್ವಿಗುಣಗೊಂಡಿದೆ. ನಾವು ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯವನ್ನು ರಚಿಸಿದ್ದರಿಂದ, ಹೊಸ ಶಕ್ತಿಯು ಹೊರಹೊಮ್ಮಿದೆ. ಅಂತೆಯೇ, ದೇಶವು ಮೀನುಗಾರಿಕೆಗಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸಬೇಕು ಎಂಬ ಬಲವಾದ ಬೇಡಿಕೆ ಬಹಳ ಹಿಂದಿನಿಂದಲೂ ಇತ್ತು. ನಾವೂ ಅದನ್ನೇ ಮಾಡಿದ್ದೇವೆ. ಅದಕ್ಕೂ ನಾವು ಪ್ರತ್ಯೇಕ ಬಜೆಟ್ ವ್ಯವಸ್ಥೆ ಮಾಡಿದ್ದೇವೆ ಮತ್ತು ಆ ಕ್ಷೇತ್ರದ ಫಲಿತಾಂಶಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಸಹಕಾರಿ ಕ್ಷೇತ್ರವು ಈ ಅಭಿಯಾನವನ್ನು ಹೇಗೆ ವಿಸ್ತರಿಸಬಹುದು ಎಂಬುದನ್ನು ಅನ್ವೇಷಿಸಲು ನೀವೆಲ್ಲರೂ ಮುಂದೆ ಬರಬೇಕು. ಇದು ನಿಮ್ಮಿಂದ ನನ್ನ ನಿರೀಕ್ಷೆ. ಸಹಕಾರಿ ಕ್ಷೇತ್ರವು ತನ್ನ ಸಾಂಪ್ರದಾಯಿಕ ವಿಧಾನಕ್ಕಿಂತ ವಿಭಿನ್ನವಾಗಿ ಏನನ್ನಾದರೂ ಮಾಡಬೇಕಾಗುತ್ತದೆ. ಸರ್ಕಾರವು ತನ್ನ ಕಡೆಯಿಂದ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಈಗ ಮೀನು ಸಾಕಣೆಯಂತಹ ಅನೇಕ ಹೊಸ ಕ್ಷೇತ್ರಗಳಲ್ಲಿ ʻಪಿಎಸಿಎಸ್ʼ ಪಾತ್ರ ಹೆಚ್ಚುತ್ತಿದೆ. ದೇಶಾದ್ಯಂತ 2 ಲಕ್ಷ ಹೊಸ ವಿವಿಧೋದ್ದೇಶ ಸಂಘಗಳನ್ನು ರಚಿಸುವ ಗುರಿಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. ಅಮಿತ್ ಭಾಯ್ ಅವರು ಹೇಳಿದಂತೆ, ನಾವು ಎಲ್ಲಾ ಪಂಚಾಯಿತಿಗಳನ್ನು ಪರಿಗಣಿಸಿದರೆ, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಇದರೊಂದಿಗೆ, ಸಹಕಾರಿಗಳ ಶಕ್ತಿಯು ಪ್ರಸ್ತುತ ಈ ವ್ಯವಸ್ಥೆಯು ಅಸ್ತಿತ್ವದಲ್ಲಿಲ್ಲದ ಹಳ್ಳಿಗಳು ಮತ್ತು ಪಂಚಾಯಿತಿಗಳನ್ನು ಸಹ ತಲುಪುತ್ತದೆ.
ಸ್ನೇಹಿತರೇ,
ಕಳೆದ ವರ್ಷಗಳಲ್ಲಿ ನಾವು ʻರೈತ ಉತ್ಪಾದಕ ಸಂಸ್ಥೆʼಗಳ ರಚನೆಗೆ, ಅಂದರೆ ಎಫ್ ಪಿ ಒ ರಚನೆಗೆ ವಿಶೇಷ ಒತ್ತು ನೀಡಿದ್ದೇವೆ. ಪ್ರಸ್ತುತ, ದೇಶಾದ್ಯಂತ 10,000 ಹೊಸ ಎಫ್ ಪಿ ಒ ರಚಿಸುವ ಕೆಲಸ ನಡೆಯುತ್ತಿದೆ ಮತ್ತು ಇದರಲ್ಲಿ ಸುಮಾರು 5,000 ಈಗಾಗಲೇ ರೂಪುಗೊಂಡಿವೆ. ಈ ʻಎಫ್ಪಿಒʼಗಳು ಸಣ್ಣ ರೈತರಿಗೆ ಉತ್ತೇಜನ ನೀಡಲಿವೆ. ಇವು ಸಣ್ಣ ರೈತರನ್ನು ಮಾರುಕಟ್ಟೆಯಲ್ಲಿ ದೊಡ್ಡ ಶಕ್ತಿಯನ್ನಾಗಿ ಮಾಡುವ ಸಾಧನವಾಗಿವೆ. ಈ ಅಭಿಯಾನವು ಬೀಜದಿಂದ ಮಾರುಕಟ್ಟೆಯವರೆಗೆ, ಪ್ರತಿಯೊಂದು ವ್ಯವಸ್ಥೆಯನ್ನು ಸಣ್ಣ ರೈತರು ತಮ್ಮ ಪರವಾಗಿ ಪರಿವರ್ತಿಸಿಕೊಳ್ಳುವಂತೆ ಮತ್ತು ಮಾರುಕಟ್ಟೆಯ ಶಕ್ತಿಗೆ ಸವಾಲೊಡ್ಡುವಂತೆ ಖಚಿತಪಡಿಸುತ್ತದೆ. ಪ್ರಾಥಮಿಕ ಕೃಷಿ ಸಾಲ ಸಹಕಾರ ಸಂಘಗಳ(ಪಿಎಸಿಎಸ್) ಮೂಲಕ ʻಎಫ್ಪಿಒʼಗಳನ್ನು ರಚಿಸಲು ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿಯೇ ಈ ಕ್ಷೇತ್ರದಲ್ಲಿ ಸಹಕಾರಿ ಸಂಸ್ಥೆಗಳಿಗೆ ಅಪಾರ ಸಾಮರ್ಥ್ಯವಿದೆ.
ಸ್ನೇಹಿತರೇ,
ರೈತರಿಗೆ ಇತರ ಆದಾಯದ ಮೂಲಗಳನ್ನು ಹೆಚ್ಚಿಸುವ ವಿಷಯದಲ್ಲಿ ಸರ್ಕಾರದ ಪ್ರಯತ್ನಗಳಿಗೆ, ಸಹಕಾರಿ ಕ್ಷೇತ್ರವು ಹೆಚ್ಚುವರಿ ಶಕ್ತಿಯನ್ನು ನೀಡಬಲ್ಲದು. ಜೇನು ಉತ್ಪಾದನೆ, ಸಾವಯವ ಆಹಾರ, ಕೃಷಿ ಭೂಮಿಯಲ್ಲಿ ಸೌರ ಫಲಕಗಳನ್ನು ಸ್ಥಾಪಿಸುವ ಮೂಲಕ ವಿದ್ಯುತ್ ಉತ್ಪಾದಿಸುವ ಅಭಿಯಾನ ಅಥವಾ ಮಣ್ಣಿನ ಪರೀಕ್ಷೆ, ಹೀಗೆ,ಅದು ಯಾವುದೇ ಆಗಿರಲಿ, ಸಹಕಾರಿ ಕ್ಷೇತ್ರದ ಸಹಕಾರ ಅತ್ಯಂತ ಅವಶ್ಯಕವಾಗಿದೆ.
ಸ್ನೇಹಿತರೇ,
ಇಂದು ರಾಸಾಯನಿಕ ಮುಕ್ತ ಕೃಷಿ, ನೈಸರ್ಗಿಕ ಕೃಷಿ ಸರ್ಕಾರದ ಆದ್ಯತೆಯಾಗಿದೆ. ಈಗ ನಮ್ಮ ಹೃದಯಗಳನ್ನು ಕಲಕಿದ್ದಕ್ಕಾಗಿ ನಾನು ದೆಹಲಿಯ ಆ ಹೆಣ್ಣುಮಕ್ಕಳನ್ನು ಅಭಿನಂದಿಸುತ್ತೇನೆ. ʻಭೂಮಿ ತಾಯಿʼ ಅಳುತ್ತಿದ್ದಳು ಮತ್ತು “ನನ್ನನ್ನು ಕೊಲ್ಲಬೇಡ” ಎಂದು ಅಂಗಲಾಚುತ್ತಿದ್ದಳು. ಅವರು ರಂಗಭೂಮಿಯ ರಂಗ ಪ್ರದರ್ಶನದ ಮೂಲಕ ನಮ್ಮನ್ನು ಅತ್ಯುತ್ತಮ ರೀತಿಯಲ್ಲಿ ಜಾಗೃತಗೊಳಿಸಲು ಪ್ರಯತ್ನಿಸಿದ್ದಾರೆ. ಪ್ರತಿಯೊಂದು ಸಹಕಾರಿ ಸಂಸ್ಥೆಯೂ ಇಂತಹ ತಂಡವನ್ನು ರಚಿಸಬೇಕೆಂದು ನಾನು ಬಯಸುತ್ತೇನೆ. ಆ ತಂಡವು ಪ್ರತಿ ಹಳ್ಳಿಯಲ್ಲಿ ಇಂಥದ್ದೇ ಪ್ರದರ್ಶನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತದೆ ಮತ್ತು ಅವರನ್ನು ಎಚ್ಚರಗೊಳಿಸುತ್ತದೆ. ಇತ್ತೀಚೆಗೆ ʻಪಿಎಂ-ಪ್ರಣಾಮ್ʼ ಎಂಬ ಬೃಹತ್ ಯೋಜನೆಗೆ ಅನುಮೋದನೆ ನೀಡಲಾಗಿದೆ. ಹೆಚ್ಚು ಹೆಚ್ಚು ರೈತರು ರಾಸಾಯನಿಕ ಮುಕ್ತ ಕೃಷಿಯನ್ನು ಅಳವಡಿಸಿಕೊಳ್ಳುವಂತೆ ಖಾತರಿಪಡಿಸುವುದು ಇದರ ಉದ್ದೇಶವಾಗಿದೆ. ಇದರ ಅಡಿಯಲ್ಲಿ, ಪರ್ಯಾಯ ರಸಗೊಬ್ಬರಗಳು ಅಥವಾ ಸಾವಯವ ರಸಗೊಬ್ಬರಗಳ ಉತ್ಪಾದನೆಗೆ ಒತ್ತು ನೀಡಲಾಗುವುದು. ಪರಿಣಾಮವಾಗಿ, ಮಣ್ಣು ಸುರಕ್ಷಿತವಾಗಿರುತ್ತದೆ ಮತ್ತು ರೈತರ ವೆಚ್ಚವೂ ಕಡಿಮೆಯಾಗುತ್ತದೆ. ಈ ಉಪಕ್ರಮದಲ್ಲಿ ಸಹಕಾರಿ ಸಂಸ್ಥೆಗಳ ಕೊಡುಗೆ ಬಹಳ ನಿರ್ಣಾಯಕವಾಗಿದೆ. ಎಲ್ಲಾ ಸಹಕಾರಿ ಸಂಸ್ಥೆಗಳು ಸಾಧ್ಯವಾದಷ್ಟು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. ನಿಮ್ಮ ಜಿಲ್ಲೆಯ 5 ಹಳ್ಳಿಗಳಲ್ಲಿ 100% ರಾಸಾಯನಿಕ ಮುಕ್ತ ಕೃಷಿ ಇರುವಂತೆ ನೀವು ಸಂಕಲ್ಪ ತೊಡಬಹುದು. ಆ 5 ಹಳ್ಳಿಗಳೊಳಗಿನ ಯಾವುದೇ ಜಮೀನಿನಲ್ಲಿ ಒಂದು ಎಳ್ಳಷ್ಟೂ ರಾಸಾಯನಿಕವನ್ನೂ ಬಳಸದಂತೆ ಖಚಿತಪಡಿಸಿಕೊಳ್ಳಬೇಕು. ಇದರಿಂದ, ಇಡೀ ಜಿಲ್ಲೆಯಲ್ಲಿ ಜಾಗೃತಿ ಹೆಚ್ಚಾಗುತ್ತದೆ ಮತ್ತು ಎಲ್ಲರ ಪ್ರಯತ್ನವೂ ಹೆಚ್ಚಾಗುತ್ತದೆ.
ಸ್ನೇಹಿತರೇ,
ರಾಸಾಯನಿಕ ಮುಕ್ತ ಕೃಷಿ ಮತ್ತು ರೈತರಿಗೆ ಹೆಚ್ಚುವರಿ ಆದಾಯ ಎರಡನ್ನೂ ಖಾತ್ರಿಪಡಿಸುವ ಮತ್ತೊಂದು ಯೋಜನೆ ಇದೆ. ಅದೇ ʻಗೋಬರ್ಧನ್ ಯೋಜನೆʼ. ಇದರ ಅಡಿಯಲ್ಲಿ, ದೇಶಾದ್ಯಂತ ತ್ಯಾಜ್ಯದಿಂದ ಸಂಪತ್ತನ್ನು ಉತ್ಪಾದಿಸಲಾಗುತ್ತಿದೆ. ಹಸುವಿನ ಸಗಣಿ ಮತ್ತು ತ್ಯಾಜ್ಯವು ವಿದ್ಯುತ್ ಹಾಗೂ ಸಾವಯವ ಗೊಬ್ಬರ ಉತ್ಪಾದಿಸುವ ಬೃಹತ್ ಸಾಧನವಾಗುತ್ತಿದೆ. ಇಂದು ಸರ್ಕಾರವು ಅಂತಹ ಸ್ಥಾವರಗಳ ಬೃಹತ್ ಜಾಲವನ್ನು ಅಭಿವೃದ್ಧಿಪಡಿಸುತ್ತಿದೆ. ಅನೇಕ ದೊಡ್ಡ ಕಂಪನಿಗಳು ದೇಶದಲ್ಲಿ 50ಕ್ಕೂ ಹೆಚ್ಚು ಜೈವಿಕ ಅನಿಲ ಸ್ಥಾವರಗಳನ್ನು ನಿರ್ಮಿಸಿವೆ. ಈ ʻಗೋಬರ್ಧನ್ʼ ಸ್ಥಾವರಗಳಿಗಾಗಿ ಸಹಕಾರಿ ಸಂಘಗಳು ಸಹ ಮುಂದೆ ಬರಬೇಕಾಗಿದೆ. ಇದರಿಂದ ಖಂಡಿತವಾಗಿಯೂ ಜಾನುವಾರು ಸಾಕಣೆದಾರರಿಗೆ ಪ್ರಯೋಜನವಾಗಲಿದೆ. ಇದೇ ವೇಳೆ, ರಸ್ತೆಗಳಲ್ಲಿ ಅನಾಥವಾಗಿ ಬಿಡಲಾದ ಪ್ರಾಣಿಗಳ ಸದ್ಬಳಕೆಗೂ ನೆರವಾಗುತ್ತದೆ.
ಸ್ನೇಹಿತರೇ,
ನೀವೆಲ್ಲರೂ ಹೈನುಗಾರಿಕೆ ಕ್ಷೇತ್ರದಲ್ಲಿ ಮತ್ತು ಪಶುಸಂಗೋಪನಾ ಕ್ಷೇತ್ರದಲ್ಲಿ ಬಹಳ ವ್ಯಾಪಕವಾಗಿ ಕೆಲಸ ಮಾಡುತ್ತೀರಿ. ಹೆಚ್ಚಿನ ಸಂಖ್ಯೆಯ ಜಾನುವಾರು ಸಾಕಣೆದಾರರು ಸಹಕಾರಿ ಚಳವಳಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ರೋಗಗಳು ರೈತನನ್ನು ದೊಡ್ಡ ತೊಂದರೆಗೆ ಸಿಲುಕಿಸಬಹುದು ಎಂದು ನಿಮಗೆಲ್ಲರಿಗೂ ಗೊತ್ತಿದೆ. ಕಾಲು-ಬಾಯಿ ರೋಗವು ಬಹಳ ಹಿಂದಿನಿಂದಲೂ ನಮ್ಮ ಜಾನುವಾರುಗಳಿಗೆ ದೊಡ್ಡ ಸಂಕಟಕಾರಿಯಾಗಿದೆ. ಈ ರೋಗದಿಂದಾಗಿ, ಜಾನುವಾರು ಸಾಕಿರುವ ರೈತರು ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸುತ್ತಾರೆ. ಆದ್ದರಿಂದ, ಮೊದಲ ಬಾರಿಗೆ, ಕೇಂದ್ರ ಸರ್ಕಾರವು ದೇಶಾದ್ಯಂತ ಉಚಿತ ಲಸಿಕೀಕರಣ ಅಭಿಯಾನವನ್ನು ಪ್ರಾರಂಭಿಸಿದೆ. ಕೋವಿಡ್ ವೈರಾಣುವಿನ ವಿರುದ್ಧ ಉಚಿತ ಲಸಿಕೆ ಅಭಿಯಾನವನ್ನು ನಾವು ಇಲ್ಲಿ ಸ್ಮರಿಸಬಹುದು. ಇದು ಜಾನುವಾರುಗಳಿಗೆ ಉಚಿತ ಲಸಿಕೆಗಳನ್ನು ಒದಗಿಸಲು ನಡೆಯುತ್ತಿರುವ ಅಷ್ಟೇ ಬೃಹತ್ ಅಭಿಯಾನವಾಗಿದೆ. ಇದರ ಅಡಿಯಲ್ಲಿ, 24 ಕೋಟಿ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಆದರೆ ನಾವು ಇನ್ನೂ ಕಾಲು-ಬಾಯಿ ರೋಗವನ್ನು ಬೇರುಸಹಿತ ಕಿತ್ತುಹಾಕಲು ಸಾಧ್ಯವಾಗಿಲ್ಲ. ಅದು ಲಸಿಕೀಕರಣ ಅಭಿಯಾನವಾಗಿರಲಿ ಅಥವಾ ಪ್ರಾಣಿಗಳ ಪತ್ತೆಹಚ್ಚುವಿಕೆಯಾಗಿರಲಿ, ಸಹಕಾರಿ ಸಂಸ್ಥೆಗಳು ಈ ಉದ್ದೇಶಗಳಿಗಾಗಿ ಮುಂದೆ ಬರಬೇಕು. ಹೈನುಗಾರಿಕೆ ಕ್ಷೇತ್ರದಲ್ಲಿ ಜಾನುವಾರು ಸಾಕಣೆದಾರರು ಮಾತ್ರ ಪಾಲುದಾರರಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಸ್ನೇಹಿತರೇ, ದಯವಿಟ್ಟು ನನ್ನ ಭಾವನೆಗಳನ್ನು ಗೌರವಿಸಿ; ಜಾನುವಾರು ಸಾಕಣೆದಾರರು ಮಾತ್ರ ಪಾಲುದಾರರಲ್ಲ, ಆದರೆ ನಮ್ಮ ಜಾನುವಾರುಗಳು ಸಹ ಸಮಾನ ಪಾಲುದಾರರು. ಅದಕ್ಕಾಗಿಯೇ ನಾವು ಅದನ್ನು ನಮ್ಮ ಜವಾಬ್ದಾರಿ ಎಂದು ಪರಿಗಣಿಸಿ ಅಗತ್ಯ ಕೊಡುಗೆ ನೀಡಬೇಕಾಗಿದೆ.
ಸ್ನೇಹಿತರೇ,
ಸರ್ಕಾರದ ಎಲ್ಲಾ ಕಾರ್ಯಗಳನ್ನು ಯಶಸ್ವಿಗೊಳಿಸುವ ಸಹಕಾರಿ ಸಂಸ್ಥೆಗಳ ಸಾಮರ್ಥ್ಯದ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ. ನಾನು ಬಂದ ರಾಜ್ಯದಲ್ಲಿ ಸಹಕಾರಿ ಸಂಘಗಳ ಶಕ್ತಿಯನ್ನು ನಾನು ನೋಡಿದ್ದೇನೆ. ಸ್ವಾತಂತ್ರ್ಯ ಚಳವಳಿಯಲ್ಲಿ ಸಹಕಾರಿ ಸಂಘಗಳು ಸಹ ಪ್ರಮುಖ ಪಾತ್ರ ವಹಿಸಿವೆ. ಆದ್ದರಿಂದ, ಮತ್ತೊಂದು ಪ್ರಮುಖ ಕಾರ್ಯದಲ್ಲಿ ಭಾಗವಹಿಸುವಂತೆ ನಿಮ್ಮೆಲ್ಲರಿಗೂ ಮನವಿ ಮಾಡಲು ಬಯಸುತ್ತೇನೆ. ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ಪ್ರತಿ ಜಿಲ್ಲೆಯಲ್ಲೂ 75 ʻಅಮೃತ ಸರೋವರʼಗಳನ್ನು ನಿರ್ಮಿಸುವಂತೆ ನಾನು ಮನವಿ ಮಾಡಿದ್ದೆ. ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ, ದೇಶಾದ್ಯಂತ ಸುಮಾರು 60 ಸಾವಿರ ʻಅಮೃತ ಸರೋವರʼಗಳನ್ನು ನಿರ್ಮಿಸಲಾಗಿದೆ. ಅದು ನೀರಾವರಿ ಉದ್ದೇಶಕ್ಕಾಗಿರಲಿ ಅಥವಾ ಕುಡಿಯುವ ಉದ್ದೇಶಗಳಿಗಾಗಿರಲಿ, ಪ್ರತಿ ಮನೆ ಮತ್ತು ಪ್ರತಿಯೊಂದು ಹೊಲಕ್ಕೂ ನೀರು ಪೂರೈಸಲು ಕಳೆದ 9 ವರ್ಷಗಳಲ್ಲಿ ಸರ್ಕಾರ ಮಾಡಿದ ಕೆಲಸದ ವಿಸ್ತರಣೆ ಇದಾಗಿದೆ. ರೈತರು ಮತ್ತು ನಮ್ಮ ಜಾನುವಾರುಗಳಿಗೆ ನೀರಿನ ಕೊರತೆಯಾಗದಂತೆ ನೀರಿನ ಮೂಲವನ್ನು ವರ್ಧಿಸಲು ಇದು ಮಾರ್ಗವಾಗಿದೆ. ಅದಕ್ಕಾಗಿಯೇ ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಸ್ನೇಹಿತರು ಸಹ ಈ ಶುಭ ಅಭಿಯಾನಕ್ಕೆ ಕೈ ಜೋಡಿಸಬೇಕು. ನೀವು ಸಹಕಾರಿ ವಲಯದ ಯಾವುದೇ ಕ್ಷೇತ್ರದಲ್ಲಿ ಸಕ್ರಿಯರಾಗಿರಬಹುದು, ಆದರೆ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ, ಎಷ್ಟು ಕೊಳಗಳನ್ನು ನಿರ್ಮಿಸಬಹುದೆಂದು ನೀವು ನಿರ್ಧರಿಸಬಹುದು; ಒಂದು, ಎರಡು, ಐದು, ಅಥವಾ ಹತ್ತು? ಎಷ್ಟಾದರೂ ಆಗಬಹುದು. ಆದರೆ ಜಲ ಸಂರಕ್ಷಣೆಯ ದಿಕ್ಕಿನಲ್ಲಿ ಕೆಲಸ ಮಾಡಲು ದೃಢನಿಶ್ಚಯ ಮಾಡಿ. ಪ್ರತಿಯೊಂದು ಹಳ್ಳಿಯಲ್ಲೂ ಅಮೃತ ಸರೋವರವನ್ನು ನಿರ್ಮಿಸಿದರೆ, ಭವಿಷ್ಯದ ಪೀಳಿಗೆಯು ನಮ್ಮನ್ನು ತುಂಬಾ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತದೆ, ಅವರು ಪಡೆಯುವ ನೀರು ಅವರ ಪೂರ್ವಜರ ಪ್ರಯತ್ನದ ಫಲಿತಾಂಶವಾಗಿದೆ. ನಮ್ಮ ಭವಿಷ್ಯದ ಪೀಳಿಗೆಗಾಗಿ ನಾವು ಏನನ್ನಾದರೂ ಉಳಿಸಬೇಕು. ನೀರಿಗೆ ಸಂಬಂಧಿಸಿದ ಮತ್ತೊಂದು ಅಭಿಯಾನವೆಂದರೆ ʻಪ್ರತಿ ಹನಿಗೆ ಹೆಚ್ಚು ಬೆಳೆʼ. ನಮ್ಮ ರೈತರು ʻಸ್ಮಾರ್ಟ್ ನೀರಾವರಿʼಯನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದಕ್ಕೆ ಜಾಗೃತಿ ಬಹಳ ಮುಖ್ಯ. ಹೆಚ್ಚಿನ ನೀರು ಹೆಚ್ಚಿನ ಬೆಳೆಯ ಖಾತರಿಯನ್ನು ನೀಡುವುದಿಲ್ಲ. ಪ್ರತಿ ಹಳ್ಳಿಯಲ್ಲಿ ಸೂಕ್ಷ್ಮ ನೀರಾವರಿಯನ್ನು ವಿಸ್ತರಿಸುವ ಸಲುವಾಗಿ ಸಹಕಾರಿ ಸಂಘಗಳು ತಮ್ಮ ಪಾತ್ರವನ್ನು ವಿಸ್ತರಿಸಬೇಕಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರ ಸಾಕಷ್ಟು ನೆರವು ಮತ್ತು ಪ್ರೋತ್ಸಾಹವನ್ನು ನೀಡುತ್ತಿದೆ.
ಸ್ನೇಹಿತರೇ,
ಸಂಗ್ರಹಣೆ ಕೂಡ ಒಂದು ಪ್ರಮುಖ ಸಮಸ್ಯೆಯಾಗಿದೆ. ಅಮಿತ್ ಭಾಯ್ ಅವರು ಅದನ್ನು ವಿವರವಾಗಿ ತಿಳಿಸಿದ್ದಾರೆ. ಆಹಾರ ಧಾನ್ಯಗಳನ್ನು ಸಂಗ್ರಹಿಸಲು ಸೌಲಭ್ಯಗಳ ಕೊರತೆಯು ನಷ್ಟಕ್ಕೆ ಕಾರಣವಾಗಿದೆ, ಜೊತೆಗೆ ದೀರ್ಘಾವಧಿಯಲ್ಲಿ ನಮ್ಮ ಆಹಾರ ಭದ್ರತೆ ಮತ್ತು ನಮ್ಮ ರೈತರಿಗೆ ದೊಡ್ಡ ಹೊಡೆತವಾಗಿದೆ. ಇಂದು ಭಾರತದಲ್ಲಿ, ನಾವು ಉತ್ಪಾದಿಸುವ ಆಹಾರ ಧಾನ್ಯಗಳಲ್ಲಿ 50 ಪ್ರತಿಶತಕ್ಕಿಂತ ಕಡಿಮೆ ಸಂಗ್ರಹಿಸಬಹುದು. ಈಗ ಕೇಂದ್ರ ಸರ್ಕಾರವು ವಿಶ್ವದ ಅತಿದೊಡ್ಡ ಶೇಖರಣಾ ಯೋಜನೆಯನ್ನು ತಂದಿದೆ. ಕಳೆದ ಹಲವಾರು ದಶಕಗಳಲ್ಲಿ ದೇಶದಲ್ಲಿ ಇದುವರೆಗೂ ಮಾಡಿದ ಎಲ್ಲಾ ಕೆಲಸಗಳ ಫಲಿತಾಂಶವೇನು? ನಾವು 1400 ಲಕ್ಷ ಟನ್ ಗಳಿಗಿಂತ ಹೆಚ್ಚು ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದ್ದೇವೆ. ಮುಂದಿನ 5 ವರ್ಷಗಳಲ್ಲಿ ಇದರಲ್ಲಿ ಶೇ.50ರಷ್ಟು ಅಂದರೆ ಸುಮಾರು 700 ಲಕ್ಷ ಟನ್ ಹೊಸ ಶೇಖರಣಾ ಸಾಮರ್ಥ್ಯವನ್ನು ಸೃಷ್ಟಿಸುವುದು ನಮ್ಮ ಸಂಕಲ್ಪವಾಗಿದೆ. ಇದು ಖಂಡಿತವಾಗಿಯೂ ಕಠಿಣ ಕಾರ್ಯವೇ ಹೌದು. ಆದರೆ, ಇದರಿಂದ ದೇಶದ ರೈತರ ಸಾಮರ್ಥ್ಯ ಹೆಚ್ಚಾಗುತ್ತದೆ, ಮತ್ತು ಹಳ್ಳಿಗಳಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಮೊದಲ ಬಾರಿಗೆ, ನಮ್ಮ ಸರ್ಕಾರವು ಹಳ್ಳಿಗಳಲ್ಲಿ ಕೃಷಿಗೆ ಸಂಬಂಧಿಸಿದ ಮೂಲಸೌಕರ್ಯಗಳಿಗಾಗಿ ಒಂದು ಲಕ್ಷ ಕೋಟಿ ರೂಪಾಯಿಗಳ ವಿಶೇಷ ನಿಧಿಯನ್ನು ರಚಿಸಿದೆ. ಕಳೆದ 3 ವರ್ಷಗಳಲ್ಲಿ ಇದರ ಅಡಿಯಲ್ಲಿ 40,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗಿದೆ ಎಂಬ ಮಾಹಿತಿ ನನಗಿದೆ. ಸಹಕಾರಿ ಸಂಘಗಳು ಮತ್ತು ʻಪಿಎಸಿಎಸ್ʼ ಇದರಲ್ಲಿ ಪ್ರಮುಖ ಪಾಲನ್ನು ಹೊಂದಿವೆ. ʻಫಾರ್ಮ್ ಗೇಟ್ʼ ಮೂಲಸೌಕರ್ಯ ಮತ್ತು ʻಕೋಲ್ಡ್ ಸ್ಟೋರೇಜ್ʼನಂತಹ ವ್ಯವಸ್ಥೆಗಳನ್ನು ನಿರ್ಮಿಸಲು ಸಹಕಾರಿ ವಲಯವು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾಗಿದೆ.
ಸ್ನೇಹಿತರೇ,
ನವ ಭಾರತದಲ್ಲಿ ಸಹಕಾರಿ ಸಂಸ್ಥೆಗಳು ದೇಶದ ಆರ್ಥಿಕತೆಯ ಪ್ರಬಲ ಶಕ್ತಿಯಾಗುತ್ತವೆ ಎಂದು ನನಗೆ ಖಾತರಿಯಿದೆ. ಸಹಕಾರಿ ಮಾದರಿಯನ್ನು ಅನುಸರಿಸುವ ಮೂಲಕ ಸ್ವಾವಲಂಬಿ ಹಳ್ಳಿಗಳನ್ನು ನಿರ್ಮಿಸುವತ್ತ ನಾವು ಸಾಗಬೇಕಾಗಿದೆ. ಈ ರೂಪಾಂತರವನ್ನು ಹೇಗೆ ಮತ್ತಷ್ಟು ಸುಧಾರಿಸಬಹುದು ಎಂಬುದರ ಕುರಿತು ನಿಮ್ಮ ಚರ್ಚೆಯು ಅತ್ಯಂತ ಮಹತ್ವದ್ದಾಗಿದೆ. ಸಹಕಾರಿ ಸಂಸ್ಥೆಗಳಲ್ಲಿ ಸಹಕಾರವನ್ನು ಹೇಗೆ ಸುಧಾರಿಸುವುದು ಎಂಬುದರ ಬಗ್ಗೆಯೂ ನೀವು ಚರ್ಚಿಸಬೇಕು. ಸಹಕಾರಿ ಸಂಘಗಳು ರಾಜಕೀಯದ ಬದಲು ಸಾಮಾಜಿಕ ನೀತಿ ಮತ್ತು ರಾಷ್ಟ್ರೀಯ ನೀತಿಯ ವಾಹಕಗಳಾಗಬೇಕು. ನಿಮ್ಮ ಸಲಹೆಗಳು ದೇಶದಲ್ಲಿ ಸಹಕಾರ ಚಳವಳಿಯನ್ನು ಮತ್ತಷ್ಟು ಬಲಪಡಿಸುತ್ತವೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತವೆ ಎಂದು ನನಗೆ ಖಾತರಿಯಿದೆ. ಮತ್ತೊಮ್ಮೆ ನಿಮ್ಮೆಲ್ಲರ ನಡುವೆ ಇರಲು ಅವಕಾಶ ಸಿಕ್ಕಿದ್ದು ಸಂತೋಷದ ಸಂಗತಿ ಎಂದು ಹೇಳುತ್ತಾ ನನ್ನ ಮಾತು ಮುಗಿಸುತ್ತೇನೆ. ನಿಮಗೆಲ್ಲಾ ನನ್ನ ಶುಭ ಹಾರೈಕೆಗಳು!
ಧನ್ಯವಾದಗಳು!
ಸೂಚನೆ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.
****
Addressing the Indian Cooperative Congress. The sector plays a vibrant role in the country's progress. https://t.co/7VH4XNbqTQ
— Narendra Modi (@narendramodi) July 1, 2023
मैंने लाल किले से कहा है, हमारे हर लक्ष्य की प्राप्ति के लिए सबका प्रयास आवश्यक है।
— PMO India (@PMOIndia) July 1, 2023
सहकार की स्पिरिट भी तो यही है: PM @narendramodi pic.twitter.com/GYWnPSzf4B
जब विकसित भारत के लिए बड़े लक्ष्यों की बात आई, तो हमने सहकारिता को एक बड़ी ताकत देने का फैसला किया। pic.twitter.com/GujRgc53iI
— PMO India (@PMOIndia) July 1, 2023
करोड़ों छोटे किसानों को पीएम किसान सम्मान निधि मिल रही है।
— PMO India (@PMOIndia) July 1, 2023
कोई बिचौलिया नहीं, कोई फर्ज़ी लाभार्थी नहीं। pic.twitter.com/8Ptp8MOQ4i
किसान हितैषी अप्रोच को जारी रखते हुए, कुछ दिन पहले एक और बड़ा निर्णय लिया गया है। pic.twitter.com/Qyv119vAVf
— PMO India (@PMOIndia) July 1, 2023
अमृतकाल में देश के गांव, देश के किसान के सामर्थ्य को बढ़ाने के लिए अब देश के कॉपरेटिव सेक्टर की भूमिका बहुत बड़ी होने वाली है। pic.twitter.com/Pm1WTnlWQX
— PMO India (@PMOIndia) July 1, 2023
केंद्र सरकार ने मिशन पाम ऑयल शुरु किया है।
— PMO India (@PMOIndia) July 1, 2023
इसके तहत तिलहन की फसलों को बढ़ावा दिया जा रहा है। pic.twitter.com/18TDetCKuJ
बीते वर्षों में हमने किसान उत्पादक संघों यानि FPOs के निर्माण पर भी विशेष बल दिया है। pic.twitter.com/iYgpZx7n58
— PMO India (@PMOIndia) July 1, 2023
आज कैमिकल मुक्त खेती, नैचुरल फार्मिंग, सरकार की प्राथमिकता है। pic.twitter.com/fwl3aSu5Bk
— PMO India (@PMOIndia) July 1, 2023
Per Drop More Crop
— PMO India (@PMOIndia) July 1, 2023
ज्यादा पानी, ज्यादा फसल की गारंटी नहीं है।
Micro-irrigation का कैसे गांव-गांव तक विस्तार हो, इसके लिए सहकारी समितियों को अपनी भूमिका का भी विस्तार करना होगा। pic.twitter.com/5lG4XuwN49