Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

13ನೇ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿಗಳು

13ನೇ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿಗಳು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆ.09, 2021ರಂದು ನಡೆದ 13ನೇ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆ ವಹಿಸಿದರು.

ಭಾರತ ಆಯ್ಕೆ ಮಾಡಿದ ಶೃಂಗಸಭೆಯ ವಿಷಯವೆಂದರೆ, BRICS@15: ನಿರಂತರತೆ, ಬಲವರ್ಧನೆ ಮತ್ತು ಒಮ್ಮತಕ್ಕಾಗಿ ಬ್ರಿಕ್ಸ್‌ ದೇಶಗಳ ನಡುವೆ ಸಹಕಾರ.  ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಮಾಫೋಸಾ ಹಾಗು ಇತರ ಎಲ್ಲ ಬ್ರಿಕ್ಸ್ ನಾಯಕರು ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಈ ವರ್ಷ ಭಾರತದ ಅಧ್ಯಕ್ಷತೆ ಅವಧಿಯಲ್ಲಿ ಬ್ರಿಕ್ಸ್ ಪಾಲುದಾರರಿಂದ ಪಡೆದ ಸಹಕಾರದ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದರಿಂದ ಹಲವಾರು ಹೊಸ ಉಪಕ್ರಮಗಳ ಸಾಧನೆಗೆ ಅವಕಾಶವಾಯಿತು ಎಂದರು. ಇವುಗಳಲ್ಲಿ ಚೊಚ್ಚಲ ಬ್ರಿಕ್ಸ್ ಡಿಜಿಟಲ್ ಆರೋಗ್ಯ ಶೃಂಗಸಭೆ; ಬಹುಪಕ್ಷೀಯ ಸುಧಾರಣೆಗಳ ಬಗ್ಗೆ ಬ್ರಿಕ್ಸ್ ಸಚಿವರ ಮೊದಲ ಜಂಟಿ ಹೇಳಿಕೆ; ಬ್ರಿಕ್ಸ್ ಭಯೋತ್ಪಾದನಾ ನಿಗ್ರಹ ಕ್ರಿಯಾ ಯೋಜನೆ; ದೂರ ಸಂವೇದಿ ಉಪಗ್ರಹಗಳ ಕ್ಷೇತ್ರದಲ್ಲಿ ಸಹಕಾರ ಕುರಿತ ಒಪ್ಪಂದ; ವರ್ಚ್ಯುವಲ್‌ ಬ್ರಿಕ್ಸ್ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ; ಹಸಿರು ಪ್ರವಾಸೋದ್ಯಮ ಕುರಿತ ಬ್ರಿಕ್ಸ್ ಒಕ್ಕೂಟ ಇತ್ಯಾದಿ ಸೇರಿವೆ.  ಕೋವಿಡ್ ನಂತರದ ಜಾಗತಿಕ ಚೇತರಿಕೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳು ವಹಿಸಬಹುದಾದ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ‘ಸದೃಢತೆಯಿಂದ, ಹೊಸತನದಿಂದ ಮತ್ತು ವಿಶ್ವಾಸಾರ್ಹತೆಯಿಂದ ಸುಸ್ಥಿರತೆಯಿಂದ ಮತ್ತೆ ನಿರ್ಮಿಸಿʼ ಎಂಬ ಧ್ಯೇಯವಾಕ್ಯದಡಿ ಬ್ರಿಕ್ಸ್ ಸಹಕಾರ ಹೆಚ್ಚಳಕ್ಕೆ ಕರೆ ನೀಡಿದರು. 

ಈ ಬಾರಿಯ ಸಭೆಯ ವಿಷಯವಸ್ತುವಿನ ಬಗ್ಗೆ ವಿವರಿಸಿದ ಪ್ರಧಾನಮಂತ್ರಿಯವರು ʻಮರು ನಿರ್ಮಾಣʼದ ವೇಗ ವರ್ಧನೆಗೆ ಕರೆ ನೀಡಿದರು. ಲಸಿಕೆ ನೀಡಿಕೆಯ ವೇಗ ಮತ್ತು ಲಭ್ಯತೆಯನ್ನು ಹೆಚ್ಚಿಸುವ ಮೂಲಕ; ಫಾರ್ಮಾ ಮತ್ತು ಲಸಿಕೆ ಉತ್ಪಾದನಾ ಸಾಮರ್ಥ್ಯಗಳನ್ನು ಅಭಿವೃದ್ಧಿ ಹೊಂದಿದ ಜಗತ್ತನ್ನು ಮೀರಿ ವೈವಿಧ್ಯಗೊಳಿಸುವ ಮೂಲಕ  ‘ಕ್ಷಮತೆ’ಯನ್ನು ಸಾಧಿಸುವುದು; ಸಾರ್ವಜನಿಕ ಒಳಿತಿಗಾಗಿ ಡಿಜಿಟಲ್ ಸಾಧನಗಳನ್ನು ಸೃಜನಾತ್ಮಕವಾಗಿ ಬಳಸುವ ಮೂಲಕ ‘ಹೊಸತನವನ್ನು’ ಬೆಳೆಸುವುದು; ಅವುಗಳ ವಿಶ್ವಾಸಾರ್ಹತೆ ಬೆಳೆಸಲು ಬಹುಪಕ್ಷೀಯ ಸಂಸ್ಥೆಗಳ ಸುಧಾರಣೆಯನ್ನು ಖಾತರಿಪಡಿಸುವುದು; ಪರಿಸರ ಮತ್ತು ಹವಾಮಾನ ವಿಷಯಗಳ ಬಗ್ಗೆ ಒಕ್ಕೊರಲಿನ ಬ್ರಿಕ್ಸ್ ಧ್ವನಿಯ ಮೂಲಕ ‘ಸುಸ್ಥಿರ’ ಅಭಿವೃದ್ಧಿಯನ್ನು ಉತ್ತೇಜಿಸುವುದು – ಇವುಗಳ ಮೂಲಕ ʻಮರು ನಿರ್ಮಾಣʼಕ್ಕೆ ವೇಗ ನೀಡಲು ಕರೆ ನೀಡಿದರು.

ಅಫಘಾನಿಸ್ತಾನದ ಇತ್ತೀಚಿನ ಬೆಳವಣಿಗೆಗಳು ಸೇರಿದಂತೆ ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ನಾಯಕರು ಚರ್ಚಿಸಿದರು.  ಭಯೋತ್ಪಾದನೆ ಮತ್ತು ಉಗ್ರವಾದದ ಬೆಳವಣಿಗೆಯಿಂದ ಎದುರಾಗುವ ಅಪಾಯಗಳ ಬಗ್ಗೆ ಅಭಿಪ್ರಾಯಗಳು ಹಂಚಿಕೊಳ್ಳಲಾಯಿತು. ʻಭಯೋತ್ಪಾದನೆ ವಿರುದ್ಧದ ಬ್ರಿಕ್ಸ್‌ ಕಾರ್ಯ ಯೋಜನೆʼ ಅನುಷ್ಠಾನವನ್ನು ತ್ವರಿತಗೊಳಿಸಲು ಬ್ರಿಕ್ಸ್‌ನ ಎಲ್ಲ ಪಾಲುದಾರರು ಸಮ್ಮತಿಸಿದರು.

ಶೃಂಗಸಭೆಯ ಸಮಾರೋಪದಲ್ಲಿ ನಾಯಕರು ‘ನವದೆಹಲಿ ಘೋಷಣೆ’ಯನ್ನು ಅಂಗೀಕರಿಸಿದರು.

***