ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭದಲ್ಲಿ ರಾಜ್ಯಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಅವರು ಇಂದು ಉಪರಾಷ್ಟ್ರಪತಿಯವರನ್ನು ಮೇಲ್ಮನೆಗೆ ಸ್ವಾಗತಿಸಿದರು.
ಪ್ರಧಾನಮಂತ್ರಿಯವರು ಭಾರತದ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷರಾದ ಶ್ರೀ ಜಗದೀಪ್ ಧನಕರ್ ಅವರನ್ನು ಸಂಸತ್ತಿನ ಎಲ್ಲ ಸದಸ್ಯರು ಮತ್ತು ದೇಶದ ಎಲ್ಲ ನಾಗರಿಕರ ಪರವಾಗಿ ಅಭಿನಂದಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ದೇಶದ ಉಪರಾಷ್ಟ್ರಪತಿಗಳ ಗೌರವಾನ್ವಿತ ಸ್ಥಾನದ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಈ ಆಸನವು ಲಕ್ಷಾಂತರ ಜನರಿಗೆ ಸ್ಫೂರ್ತಿಯ ನೆಲೆಯಾಗಿದೆ ಎಂದು ಹೇಳಿದರು.
ರಾಜ್ಯಸಭೆಯ ಸಭಾಧ್ಯಕ್ಷರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಸದನದ ಎಲ್ಲ ಸದಸ್ಯರ ಪರವಾಗಿ ಸಶಸ್ತ್ರ ಪಡೆಗಳಿಗೆ ನಮನ ಸಲ್ಲಿಸಿದರು. ಉಪರಾಷ್ಟ್ರಪತಿಯವರ ಜನ್ಮಸ್ಥಳವಾದ ಝುಂಝುನುವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ರಾಷ್ಟ್ರದ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸಿರುವ ಝುಂಝುನುವಿನ ಅಸಂಖ್ಯಾತ ಕುಟುಂಬಗಳ ಕೊಡುಗೆಗಳನ್ನು ಶ್ಲಾಘಿಸಿದರು. ಯೋಧರು ಮತ್ತು ಕಿಸಾನ್ ರೊಂದಿಗಿನ ಉಪರಾಷ್ಟ್ರಪತಿಯವರ ನಿಕಟ ಸಂಬಂಧವನ್ನು ಉಲ್ಲೇಖಿಸಿ, “ನಮ್ಮ ಉಪರಾಷ್ಟ್ರಪತಿಯವರು ರೈತಪುತ್ರ ಮತ್ತು ಅವರು ಸೈನಿಕ ಶಾಲೆಯಲ್ಲಿ ಓದಿದವರಾಗಿದ್ದಾರೆ. ಹೀಗಾಗಿ, ಅವರು ಜವಾನ್ ಮತ್ತು ಕಿಸಾನ್ ರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ” ಎಂದು ಹೇಳಿದರು.
ಭಾರತವು ಎರಡು ಮಹತ್ವದ ಘಟನೆಗಳಿಗೆ ಸಾಕ್ಷಿಯಾದ ಈ ಸಮಯದಲ್ಲಿ ಸಂಸತ್ತಿನ ಗೌರವಾನ್ವಿತ ಮೇಲ್ಮನೆಗೆ ಉಪರಾಷ್ಟ್ರಪತಿಯವರನ್ನು ಸ್ವಾಗತಿಸುತ್ತಿದ್ದೇನೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಭಾರತವು ‘ಸ್ವಾತಂತ್ರ್ಯದ ಅಮೃತ ಕಾಲ’ ಕ್ಕೆ ಪ್ರವೇಶಿಸಿದೆ ಮತ್ತು ಜಿ-20 ಶೃಂಗಸಭೆಯ ಆತಿಥ್ಯ ವಹಿಸುವ ಮೂಲಕ ಅದರ ಅಧ್ಯಕ್ಷತೆ ವಹಿಸುವ ಪ್ರತಿಷ್ಠಿತ ಅವಕಾಶವನ್ನು ಪಡೆದುಕೊಂಡಿದೆ ಎಂದು ಶ್ರೀ ಮೋದಿ ಗಮನಸೆಳೆದರು. ನವ ಭಾರತದ ಅಭಿವೃದ್ಧಿಯ ಹೊಸ ಯುಗದ ಪ್ರಾರಂಭವನ್ನು ಗುರುತಿಸುವುದಲ್ಲದೆ, ಮುಂಬರುವ ದಿನಗಳಲ್ಲಿ ವಿಶ್ವದ ದಿಕ್ಕನ್ನು ನಿರ್ಧರಿಸುವತ್ತ ಭಾರತವು ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು. “ನಮ್ಮ ಪ್ರಜಾಪ್ರಭುತ್ವ, ನಮ್ಮ ಸಂಸತ್ತು ಮತ್ತು ನಮ್ಮ ಸಂಸದೀಯ ವ್ಯವಸ್ಥೆಯು ಈ ಪ್ರಯಾಣದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ” ಎಂದು ಅವರು ಹೇಳಿದರು.
ಈ ದಿನವು ರಾಜ್ಯಸಭೆಯ ಅಧ್ಯಕ್ಷರಾಗಿ ಉಪರಾಷ್ಟ್ರಪತಿಯವರ ಅಧಿಕಾರಾವಧಿಯ ಔಪಚಾರಿಕ ಆರಂಭವನ್ನು ಸೂಚಿಸುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಮೇಲ್ಮನೆಯ ಹೆಗಲ ಮೇಲಿರುವ ಜವಾಬ್ದಾರಿಯು ಸಾಮಾನ್ಯ ಜನರ ಕಾಳಜಿಗೆ ಸಂಬಂಧಿಸಿದೆ ಎಂದು ಹೇಳಿದರು. “ಈ ಅವಧಿಯಲ್ಲಿ ಭಾರತವು ತನ್ನ ಜವಾಬ್ದಾರಿಗಳನ್ನು ಅರಿತು ಅದಕ್ಕೆ ಬದ್ಧವಾಗಿದೆ” ಎಂದು ಅವರು ಹೇಳಿದರು. ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ರೂಪದಲ್ಲಿ ಭಾರತದ ಪ್ರತಿಷ್ಠಿತ ಬುಡಕಟ್ಟು ಸಮಾಜವು ಈ ಮಹತ್ವದ ಘಟ್ಟದಲ್ಲಿ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡುತ್ತಿದೆ ಎಂದು ಪ್ರಧಾನಮಂತ್ರಿಯವರು ಗಮನಸೆಳೆದರು. ಅಪ್ರಧಾನ ಸಮುದಾಯದಿಂದ ಬಂದ, ದೇಶದ ಅತ್ಯುನ್ನತ ಸ್ಥಾನವನ್ನು ತಲುಪಿದ ಮಾಜಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರನ್ನೂ ಪ್ರಧಾನಮಂತ್ರಿಯವರು ನೆನಪಿಸಿಕೊಂಡರು.
ಉಪರಾಷ್ಟ್ರಪತಿಯವರ ಆಸನದತ್ತ ಪೂಜ್ಯಭಾವನೆಯಿಂದ ನೋಡುತ್ತಾ ಪ್ರಧಾನಮಂತ್ರಿಯವರು ಹೇಳಿದರು, “ಕೇವಲ ಸಂಪನ್ಮೂಲದ ವಿಧಾನಗಳಿಂದ ಮಾತ್ರ ಏನನ್ನೂ ಸಾಧಿಸಲು ಸಾಧ್ಯವಿಲ್ಲ, ಆದರೆ ಅಭ್ಯಾಸ ಮತ್ತು ಸಾಕ್ಷಾತ್ಕಾರಗಳಿಂದ ಅದು ಸಾಧ್ಯ ಎಂಬುದಕ್ಕೆ ತಮ್ಮ ಜೀವನವು ಸಾಕ್ಷಿಯಾಗಿದೆ.” ಎಂದು ಹೇಳಿದರು. ಮೂರು ದಶಕಗಳಿಗೂ ಹೆಚ್ಚಿನ ಕಾಲ ಹಿರಿಯ ವಕೀಲರಾಗಿ ಕಾರ್ಯ ನಿರ್ವಹಿಸಿದ ಉಪರಾಷ್ಟ್ರಪತಿಯವರ ಅನುಭವದ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ರಾಜ್ಯಸಭೆಯಲ್ಲಿ ಅವರು ತಮ್ಮ ನ್ಯಾಯಾಲಯವನ್ನು ಮಿಸ್ ಮಾಡಿಕೊಳ್ಳುವುದಿಲ್ಲ ಏಕೆಂದರೆ ಸುಪ್ರೀಂ ಕೋರ್ಟ್ ನಲ್ಲಿ ಅವರನ್ನು ಭೇಟಿಯಾಗುತ್ತಿದ್ದ ಹೆಚ್ಚಿನ ಸಂಖ್ಯೆಯ ಜನರನ್ನು ಅವರು ಸದನದಲ್ಲಿಯೂ ಭೇಟಿಯಾಗಬಹುದು ಎಂದು ಹೇಳಿದರು. ತಮ್ಮ ಮಾತನ್ನು ಮುಂದುವರಿಸಿದ ಅವರು “ನೀವು ಶಾಸಕನಿಂದ ಸಂಸದ, ಕೇಂದ್ರ ಸಚಿವ ಮತ್ತು ರಾಜ್ಯಪಾಲರಾಗಿಯೂ ಕೆಲಸ ಮಾಡಿದ್ದೀರಿ” ಎಂದು ಹೇಳಿದರು. ಈ ಎಲ್ಲ ಪಾತ್ರಗಳಲ್ಲಿನ ಸಾಮಾನ್ಯ ಅಂಶವೆಂದರೆ ದೇಶದ ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಅವರ ಶ್ರದ್ಧೆ ಎಂದು ಹೇಳಿದರು. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಉಪರಾಷ್ಟ್ರಪತಿಯವರ ಶೇ.75 ರಷ್ಟು ಮತ ಗಳಿಕೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಇದು ಅವರ ಬಗ್ಗೆ ಎಲ್ಲರ ಒಲವಿಗೆ ಸಾಕ್ಷಿಯಾಗಿದೆ ಎಂದರು. “ಮುಂದಾಳತ್ವ ವಹಿಸುವುದು ನಾಯಕತ್ವದ ನಿಜವಾದ ವ್ಯಾಖ್ಯಾನವಾಗಿದೆ, ಮತ್ತು ರಾಜ್ಯಸಭೆಯ ಸಂದರ್ಭದಲ್ಲಿ ಇದು ಹೆಚ್ಚು ಮುಖ್ಯವಾಗುತ್ತದೆ ಏಕೆಂದರೆ ಸದನವು ಹೆಚ್ಚು ಪರಿಷ್ಕೃತ ರೀತಿಯಲ್ಲಿ ಪ್ರಜಾಸತ್ತಾತ್ಮಕ ನಿರ್ಧಾರಗಳನ್ನು ಮುಂದೆ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಹೊಂದಿದೆ” ಎಂದು ಪ್ರಧಾನಿ ಹೇಳಿದರು.
ಈ ಸದನದ ಘನತೆಯನ್ನು ಹೆಚ್ಚಿಸಿ ಅದನ್ನು ಎತ್ತಿಹಿಡಿಯುವತ್ತ ಸದಸ್ಯರ ಹೆಗಲ ಮೇಲಿರುವ ಜವಾಬ್ದಾರಿಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ಸದನವು ದೇಶದ ಮಹಾನ್ ಪ್ರಜಾಸತ್ತಾತ್ಮಕ ಪರಂಪರೆಯ ವಾಹಕವಾಗಿದ್ದು, ಅದರ ಶಕ್ತಿಯೂ ಆಗಿದೆ ಎಂದು ಹೇಳಿದರು. ಅನೇಕ ಮಾಜಿ ಪ್ರಧಾನ ಮಂತ್ರಿಗಳು ಒಂದಾನೊಂದು ಸಮಯದಲ್ಲಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು ಎಂದು ಅವರು ಒತ್ತಿ ಹೇಳಿದರು. ಉಪರಾಷ್ಟ್ರಪತಿಯವರ ಮಾರ್ಗದರ್ಶನದಲ್ಲಿ ಈ ಸದನವು ತನ್ನ ಪರಂಪರೆ ಮತ್ತು ಘನತೆಯನ್ನು ಮುಂದಕ್ಕೆ ಒಯ್ಯಲಿದೆ ಎಂದು ಪ್ರಧಾನಮಂತ್ರಿಯವರು ಸದಸ್ಯರಿಗೆ ಭರವಸೆ ನೀಡಿದರು. “ಸದನದಲ್ಲಿನ ಗಂಭೀರ ಪ್ರಜಾಸತ್ತಾತ್ಮಕ ಚರ್ಚೆಗಳು ನಮ್ಮ ಹೆಮ್ಮೆಯ ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಬಲವನ್ನು ನೀಡುತ್ತವೆ” ಎಂದು ಅವರು ಹೇಳಿದರು.
ಭಾಷಣದ ಕೊನೆಯಲ್ಲಿ, ಸದಸ್ಯರಿಗೆ ಸಂತೋಷ ಮತ್ತು ನಗುವಿನ ಮೂಲವಾಗಿದ್ದ, ಮಾಜಿ ಉಪರಾಷ್ಟ್ರಪತಿ ಮತ್ತು ಮಾಜಿ ಅಧ್ಯಕ್ಷರ ಪದಗುಚ್ಛಗಳು ಮತ್ತು ಪ್ರಾಸಗಳಿಂದ ಕೂಡಿದ ಹಿಂದಿನ ಅಧಿವೇಶನವನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. “ತಮ್ಮ ಚುರುಕು ಬುದ್ಧಿಯ ಸ್ವಭಾವವು ಆ ಕೊರತೆಯನ್ನು ಸದಾ ತುಂಬಿಸುತ್ತದೆ. ನೀವು ಆ ಅನುಕೂಲವನ್ನು ಸದನಕ್ಕೆ ಸದಾಕಾಲ ನೀಡುತ್ತೀರಿ ಎಂದು ನನಗೆ ಖಾತ್ರಿಯಿದೆ” ಎಂದು ಪ್ರಧಾನಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
*****
Speaking in the Rajya Sabha. https://t.co/1sMsERCMzU
— Narendra Modi (@narendramodi) December 7, 2022
Our Vice President is a Kisan Putra and he studied at a Sainik school.
— PMO India (@PMOIndia) December 7, 2022
Thus, he is closely associated with Jawans and Kisans: PM @narendramodi speaking in the Rajya Sabha
This Parliament session is being held at a time when we are marking Azadi Ka Amrit Mahotsav and when India has assumed the G-20 Presidency: PM @narendramodi
— PMO India (@PMOIndia) December 7, 2022
Our respected President Droupadi Murmu Ji hails from a tribal community. Before her, our former President Shri Kovind Ji belongs to the marginalised sections of society and now, our VP is a Kisan Putra. Our VP also has great knowledge of legal matters: PM @narendramodi
— PMO India (@PMOIndia) December 7, 2022