Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಮಾರ್ಚ್ 22 ರಂದು ಐಟಿಯು ಪ್ರದೇಶ ಕಚೇರಿ ಮತ್ತು ನಾವೀನ್ಯತೆಯ ಕೇಂದ್ರ ಉದ್ಘಾಟಿಸಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ವಿಜ್ಞಾನ ಭವನದಲ್ಲಿ 2023 ರ ಮಾರ್ಚ್ 22 ರ ಅಪರಾಹ್ನ 12.30 ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ದೂರ ಸಂಪರ್ಕ ಸಂಘದ [ಐಟಿಯು] ಪ್ರದೇಶ ಕಚೇರಿ ಮತ್ತು ಭಾರತದ ನಾವೀನ್ಯತೆಯ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅವರು “ಕಾಲ್ ಫಾರ್ ಯು ಡಿಗ್” ಆಪ್ ಲೋಕಾರ್ಪಣೆ ಮಾಡಲಿದ್ದು, ಇದೇ ಸಂದರ್ಭದಲ್ಲಿ ಸಮಾರಂಭ ಉದ್ದೇಶಿಸಿ ಮಾತನಾಡಲಿದ್ದಾರೆ.

ಐಟಿಯು ವಿಶ್ವ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನಗಳ [ಐಸಿಟಿ] ವಲಯದ ವಿಶೇಷ ಸಂಸ್ಥೆಯಾಗಿದೆ. ಜಿನೆವಾದಲ್ಲಿ ಮುಖ್ಯ ಕಚೇರಿ ಇದ್ದು, ಇದರ ಸಂಪರ್ಕ ಜಾಲದಲ್ಲಿ ಕ್ಷೇತ್ರೀಯ ಅಧಿಕಾರಿಗಳು, ಪ್ರದೇಶ ಮತ್ತು ಪ್ರಾದೇಶಿಕ ಅಧಿಕಾರಿಗಳಿದ್ದಾರೆ. ಪ್ರದೇಶ ಕಚೇರಿ ತೆರೆಯುವ ಕುರಿತು 2022 ರ ಮಾರ್ಚ್ ನಲ್ಲಿ ಐಟಿಯು ಜೊತೆ ಆತಿಥ್ಯ ದೇಶವಾಗಿ ಭಾರತ ಸಹಿ ಹಾಕಿತ್ತು. ಭಾರತದ ಪ್ರದೇಶ ಕಚೇರಿಯಲ್ಲಿ ನಾವೀನ್ಯತೆಯ ಕೇಂದ್ರವಿದ್ದು, ಇದು ಐಟಿಯುನ ಇತರೆ ಕಚೇರಿಗಳಿಗಿಂತ ಭಿನ್ನವಾಗಿದೆ. ನವದೆಹಲಿಯ ಮೆಹ್ರೌಲಿಯ ಸೆಂಟರ್ ಫಾರ್ ಡವಲಪ್ಮೆಂಟ್ ಆಫ್ ಟೆಲಿಮೆಟಿಕ್ಸ್ [ಸಿ-ಡಾಟ್] ಕಚೇರಿಯ ಎರಡನೇ ಮಹಡಿಯಲ್ಲಿ ಸುಸಜ್ಜಿತವಾದ ಪ್ರದೇಶ ಕಚೇರಿಯನ್ನು  ಸಜ್ಜುಗೊಳಿಸಲಾಗಿದೆ. ಇದು ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ, ಶ್ರೀ ಲಂಕಾ, ಮಾಲ್ಡೀವ್ಸ್, ಆಫ್ಘಾನಿಸ್ತಾನ್ ಮತ್ತು ಇರಾನ್ ದೇಶಗಳಿಗೆ ಸೇವೆ ಸಲ್ಲಿಸಲಿದ್ದು, ಈ ರಾಷ್ಟ್ರಗಳ ನಡುವೆ ಸಮನ್ವಯತೆ ಮತ್ತು ಈ ಪ್ರದೇಶದಲ್ಲಿ ಪರಸ್ಪರ ಲಾಭದಾಯಕ ಆರ್ಥಿಕ ಸಹಕಾರವನ್ನು ಉತ್ತೇಜಿಸಲಿದೆ.

ಭಾರತ್ 6ಜಿ ಸಮಗ್ರ ವರದಿಯನ್ನು ಸಿದ್ಧಪಡಿಸಲು ತಂತ್ರಜ್ಞಾನ ನಾವೀನ್ಯತೆಯ ತಂಡವನ್ನು 2021 ರ ನವೆಂಬರ್ ನಲ್ಲಿ ರಚಿಸಲಾಗಿತ್ತು. ವಿವಿಧ ಸಚಿವಾಲಯಗಳು/ಇಲಾಖೆಗಳು, ಸಂಶೋಧಕರು ಮತ್ತು ಅಭಿವೃದ್ಧಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಪ್ರಾಮಾಣೀಕರಣ ಸಂಸ್ಥೆಗಳು, ದೂರ ಸಂಪರ್ಕ ಸೇವಾದಾತರನ್ನೊಳಗೊಂಡ ತಂಡದಿಂದ ಭಾರತದಲ್ಲಿ 6ಜಿ ಕ್ರಿಯಾ ಯೋಜನೆ ಮತ್ತು ಕೈಗಾರಿಕಾ ವಲಯದಿಂದ ನೀಲನಕ್ಷೆ ಸಿದ್ಧಪಡಿಸಲು ನಿರ್ಧರಿಸಲಾಗಿತ್ತು. ಶೈಕ್ಷಣಿಕ ಸಂಸ್ಥೆಗಳು, ಉದ್ಯಮಗಳು, ನವೋದ್ಯಮಗಳು, ಎಂಎಸ್ಎಂಇಗಳು ವಿಕಸನವಾಗುತ್ತಿರುವ ಐಸಿಟಿ ತಂತ್ರಜ್ಞಾನವನ್ನು ಪರೀಕ್ಷಿಸಿ ಮೌಲ್ಯ ಮಾಪನ ಮಾಡಲು 6ಜಿ ಪರೀಕ್ಷಾ ವೇದಿಕೆಯನ್ನು ಸ್ಥಾಪಿಸಲಾಗಿದೆ. ಇದು ದೇಶದಲ್ಲಿ ನಾವೀನ್ಯತೆ, ಸಾಮರ್ಥ್ಯ ವರ್ಧನೆ ಮತ್ತು ವೇಗದ ತಂತ್ರಜ್ಞಾನ ಅಳವಡಿಕೆಗೆ ಅನುವು ಮಾಡಿಕೊಡುವ ವಾತಾವರಣವನ್ನು ಕಲ್ಪಿಸಲಿದೆ.  

ಪಿಎಂ ಗತಿಶಕ್ತಿ ಅಡಿಯಲ್ಲಿ ಸಮಗ್ರ ಯೋಜನೆ ಮತ್ತು ಮೂಲ ಸೌಕರ್ಯ ಸಂಪರ್ಕ ಯೋಜನೆಗಳ ಸಂಘಟಿತ ಅನುಷ್ಠಾನ ಕುರಿತು ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ನಿದರ್ಶನವಾಗಿ ಕಾಲ್ ಬಿಫೋರ್ ಯು ಡಿಗ್ [ಸಿಬಿಯುಡಿ] ಆಪ್, ಆಪ್ಟಿಕಲ್ ಫೈಬರ್ ಕೇಬಲ್ ಗಳಂತಹ ಅಂಗರ್ತವಾಗಿರುವ ಸ್ವತ್ತುಗಳಿಗೆ ಹಾನಿಯಾಗುವುದನ್ನು ತಡೆಗಟ್ಟುವ ಸಾಧನವಾಗಿ ಕಾರ್ಯನಿರ್ವಹಿಸಲಿದೆ. ಸಮನ್ವಯತೆಯಿಲ್ಲದೇ ಅಗೆಯುವ ಮತ್ತು ಉತ್ಖನನದಿಂದಾಗಿ ಪ್ರತಿವರ್ಷ 3000 ಕೋಟಿ ರೂಪಾಯಿ ನಷ್ಟಕ್ಕೆ ಕಾರಣವಾಗುತ್ತಿದೆ. ಸಿಬಿಯುಡಿ ಮೊಬೈಲ್ ಆಫ್ ಉತ್ಖನನ ಮಾಡುವವರು ಮತ್ತು ಭೂ ಮಾಲೀಕರಿಗೆ ಎಸ್ಎಂಎಸ್/ಇಮೇಲ್ ಸೂಚನೆಗಳನ್ನು ಇದು ಕಳುಹಿಸುತ್ತದೆ ಮತ್ತು ಕರೆ ಮಾಡುತ್ತದೆ. ಯೋಜನಾಬದ್ಧವಾಗಿ ಉತ್ಖನನ ಮಾಡಿದರೆ ಭೂ ಗರ್ಭದಲ್ಲಿನ ಆಸ್ತಿಗಳ ರಕ್ಷಣೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿದಂತಾಗುತ್ತದೆ.

ದೇಶದ ಆಡಳಿತದಲ್ಲಿ ಸಂಪೂರ್ಣವಾಗಿ ಸರ್ಕಾರದ ವಿಧಾನವನ್ನು ಅಳವಡಿಸಿಕೊಂಡಿರುವುದನ್ನು ವಿವರಿಸುವ ಸಿಬಿಯುಡಿ ವ್ಯವಹಾರಗಳನ್ನು ಸುಲಭಗೊಳಿಸುವ ಮೂಲಕ ಎಲ್ಲಾ ಪಾಲುದಾರರಿಗೆ ಪ್ರಯೋಜನ ಒದಗಿಸುತ್ತದೆ. ಇದು ಸಂಭವನೀಯ ವ್ಯಾಪಾರ ನಷ್ಟದಿಂದ ರಕ್ಷಣೆ ನೀಡುತ್ತದೆ ಮತ್ತು ರಸ್ತೆ, ದೂರ ಸಂಪರ್ಕ, ನೀರು, ಅನಿಲ ಮತ್ತು ವಿದ್ಯುತ್ ನಂತಹ ಅಗತ್ಯ ಸೇವೆಗಳಲ್ಲಿ ಕಡಿಮೆ ಅಡಚಣೆಯಿಂದಾಗಿ ನಾಗರಿಕರಿಗೆ ಆಗುವ ಅನಾನುಕೂಲತೆಯನ್ನು ತಗ್ಗಿಸುತ್ತದೆ.

ಐಟಿಯು ಪ್ರದೇಶ ಕಚೇರಿಗಳ ವ್ಯಾಪ್ತಿಯ ಮಾಹಿತಿ ತಂತ್ರಜ್ಞಾನ/ದೂರ ಸಂಪರ್ಕ ಸಚಿವರು, ಐಟಿಯುನ ಮಹಾ ಪ್ರಧಾನ ಕಾರ್ಯದರ್ಶಿಗಳು ಮತ್ತು ಇತರೆ ಹಿರಿಯ ಅಧಿಕಾರಿಗಳು, ರಾಯಭಾರಿಗಳು, ಕೈಗಾರಿಕಾ ನಾಯಕರು, ನವೋದ್ಯಮಗಳು ಮತ್ತು ಎಂಎಸ್ಎಂಇ, ಶಿಕ್ಷಣ ವಲಯದ ನಾಯಕರು, ವಿಧ್ಯಾರ್ಥಿಗಳು ಮತ್ತು ಇತರೆ ಪಾಲುದಾರರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

****