Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಪರೀಕ್ಷಾ ಪೇ ಚರ್ಚಾ-2023ರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಪ್ರಧಾನಮಂತ್ರಿಯವರ ಸಂವಾದ

​​​​​​​ಪರೀಕ್ಷಾ ಪೇ ಚರ್ಚಾ-2023ರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಪ್ರಧಾನಮಂತ್ರಿಯವರ ಸಂವಾದ

​​​​​​​ಪರೀಕ್ಷಾ ಪೇ ಚರ್ಚಾ-2023ರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಪ್ರಧಾನಮಂತ್ರಿಯವರ ಸಂವಾದ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ ಇಂದು ಪರೀಕ್ಷಾ ಪೇ ಚರ್ಚಾ (ಪಿಪಿಸಿ)ಯ 6ನೇ ಆವೃತ್ತಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಿದರು. ಸಂವಾದಕ್ಕೂ ಮುನ್ನ ಸ್ಥಳದಲ್ಲಿ ಪ್ರದರ್ಶಿಸಲಾದ ವಿದ್ಯಾರ್ಥಿಗಳ ಪ್ರದರ್ಶನಗಳನ್ನು ಅವರು ವೀಕ್ಷಿಸಿದರು. ಪರೀಕ್ಷಾ ಪೇ ಚರ್ಚಾವನ್ನು ಪ್ರಧಾನಮಂತ್ರಿಯವರು ಪರಿಕಲ್ಪನೆ ಮಾಡಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಜೀವನ ಮತ್ತು ಪರೀಕ್ಷೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಅವರೊಂದಿಗೆ ಸಂವಹನ ನಡೆಸುತ್ತಾರೆ. ಈ ವರ್ಷದ ಪಿಪಿಸಿಯ ಆವೃತ್ತಿಯಲ್ಲಿ 155 ದೇಶಗಳಿಂದ ಸುಮಾರು 38.80 ಲಕ್ಷ ನೋಂದಣಿಗಳು ನಡೆದಿದ್ದವು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಪರೀಕ್ಷಾ ಪೇ ಚರ್ಚಾ ನಡೆಯುತ್ತಿದೆ ಎಂದು ಒತ್ತಿ ಹೇಳಿದರು. ಇತರ ರಾಜ್ಯಗಳಿಂದ ನವದೆಹಲಿಗೆ ಭೇಟಿ ನೀಡುವವರಿಗೂ ಗಣರಾಜ್ಯೋತ್ಸವನ್ನು ವೀಕ್ಷಿಸುವ ಅವಕಾಶ ದೊರೆತಿದೆ ಎಂದರು. ಸ್ವತಃ ತಾವೇ ಪರೀಕ್ಷಾ ಪೇ ಚರ್ಚಾದ ಪ್ರಾಮುಖ್ಯತೆಯ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಕಾರ್ಯಕ್ರಮದ ಭಾಗವಾಗಿ ಕೇಳಲಾಗುವ ಲಕ್ಷಾಂತರ ಪ್ರಶ್ನೆಗಳತ್ತ ಗಮನಸೆಳೆದರು. ಇದು ಭಾರತದ ಯುವ ಪೀಳಿಗೆಯ ಮನಸ್ಸಿನ ಒಳನೋಟವನ್ನು ಬಿಂಬಿಸುತ್ತದೆ ಎಂದು ಹೇಳಿದರು. “ಈ ಪ್ರಶ್ನೆಗಳು ನನಗೆ ನಿಧಿಯಿದ್ದಂತೆ” ಎಂದು ಪ್ರಧಾನಿ ಹೇಳಿದ್ದಾರೆ. ಇಂತಹ ಕ್ರಿಯಾತ್ಮಕ ಸಮಯದಲ್ಲಿ ಯುವ ವಿದ್ಯಾರ್ಥಿಗಳ ಮನಸ್ಸಿನ ಬಗ್ಗೆ ವಿವರವಾದ ಪ್ರಬಂಧವನ್ನು ನೀಡುವ ಮೂಲಕ ಮುಂಬರುವ ವರ್ಷಗಳಲ್ಲಿ ಸಾಮಾಜಿಕ ವಿಜ್ಞಾನಿಗಳು ವಿಶ್ಲೇಷಿಸಬಹುದಾದ ಈ ಎಲ್ಲಾ ಪ್ರಶ್ನೆಗಳ ಸಂಕಲನವನ್ನು ನಾನು ಬಯಸುತ್ತೇನೆ ಎಂದು ಅವರು ಗಮನಸೆಳೆದರು.

ನಿರಾಶೆಯನ್ನು ನಿಭಾಯಿಸುವ ಬಗ್ಗೆ:

ಅಶ್ವಿನಿ ತಮಿಳುನಾಡಿನ ಮಧುರೈನ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ, ದೆಹಲಿಯ ಪಿತಾಂಪುರದ ಕೆ.ವಿ.ಯ ನವತೇಜ್ ಮತ್ತು ಪಾಟ್ನಾದ ನವೀನ್ ಬಾಲಿಕಾ ಶಾಲೆಯ ಪ್ರಿಯಾಂಕಾ ಕುಮಾರಿ ಅವರು ಕಳಪೆ ಅಂಕಗಳನ್ನು ಪಡೆದಲ್ಲಿ ಕುಟುಂಬದ ನಿರಾಶೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ಕುಟುಂಬದ ನಿರೀಕ್ಷೆಗಳಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು. ಆದಾಗ್ಯೂ, ಈ ನಿರೀಕ್ಷೆಗಳು ಸಾಮಾಜಿಕ ಸ್ಥಾನಮಾನಕ್ಕೆ ಸಂಬಂಧಿತ ನಿರೀಕ್ಷೆಗಳಿಂದಾಗಿದ್ದರೆ ಅದು ಕಳವಳಕಾರಿಯಾಗಿದೆ ಎಂದು ಅವರು ಹೇಳಿದರು. ಶ್ರೀ ಮೋದಿಯವರು ಕಾರ್ಯಕ್ಷಮತೆಯ ಹೆಚ್ಚುತ್ತಿರುವ ಮಾನದಂಡಗಳು ಮತ್ತು ಪ್ರತಿ ಯಶಸ್ಸಿನೊಂದಿಗೆ ಹೆಚ್ಚುತ್ತಿರುವ ನಿರೀಕ್ಷೆಗಳ ಬಗ್ಗೆಯೂ ಮಾತನಾಡಿದರು. ಸುತ್ತಮುತ್ತಲಿನ ನಿರೀಕ್ಷೆಯ ಜಾಲದಲ್ಲಿ ಸಿಲುಕಿಕೊಳ್ಳುವುದು ಒಳ್ಳೆಯದಲ್ಲ. ನಾವು ಆಂತರಿಕವಾಗಿ ನೋಡಬೇಕು ಮತ್ತು ನಿರೀಕ್ಷೆಯನ್ನು ತಮ್ಮ ಸ್ವಂತ ಸಾಮರ್ಥ್ಯಗಳು, ಅಗತ್ಯಗಳು, ಉದ್ದೇಶಗಳು ಮತ್ತು ಆದ್ಯತೆಗಳಂತೆ ನೋಡಬೇಕು ಎಂದು ಅವರು ಹೇಳಿದರು. ಪ್ರೇಕ್ಷಕರು ಬೌಂಡರಿ ಮತ್ತು ಸಿಕ್ಸರ್ ಗಳನ್ನು ಎದುರು ನೋಡುವ ಕ್ರಿಕೆಟ್ ಆಟದ ಉದಾಹರಣೆಯನ್ನು ನೀಡಿದ ಪ್ರಧಾನಿಯವರು, ಪ್ರೇಕ್ಷಕರಲ್ಲಿ ಅನೇಕರು ಸಿಕ್ಸರ್ ಅಥವಾ ಬೌಂಡರಿಗಾಗಿ ಮನವಿ ಮಾಡಿದ ನಂತರವೂ ಬ್ಯಾಟಿಂಗ್ ಮಾಡಲು ಹೋಗುವ ಬ್ಯಾಟ್ಸ್ ಮನ್ ಯಾವುದಕ್ಕೂ ವಿಚಲಿತನಾಗುವುದಿಲ್ಲ ಎಂದು ಹೇಳಿದರು. ಕ್ರಿಕೆಟ್ ಮೈದಾನದಲ್ಲಿ ಬ್ಯಾಟ್ಸ್ ಮನ್ ನ ಗಮನ ಮತ್ತು ವಿದ್ಯಾರ್ಥಿಗಳ ಮನಸ್ಸಿನ ನಡುವಿನ ಸಂಬಂಧವನ್ನು ವಿವರಿಸಿದ ಪ್ರಧಾನಮಂತ್ರಿಯವರು, ನೀವು ಏಕಾಗ್ರತೆಯಿಂದ ಇದ್ದರೆ ನಿರೀಕ್ಷೆಗಳ ಒತ್ತಡವನ್ನು ಅಳಿಸಿಹಾಕಬಹುದು ಎಂದರು. ಪೋಷಕರು ತಮ್ಮ ಮಕ್ಕಳಿಗೆ ನಿರೀಕ್ಷೆಗಳ ಹೊರೆ ಹಾಕಬಾರದು ಎಂದು ಅವರು ಒತ್ತಾಯಿಸಿದರು. ವಿದ್ಯಾರ್ಥಿಗಳು ಯಾವಾಗಲೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತಮ್ಮನ್ನು ತಾವು ಮೌಲ್ಯಮಾಪನ ಮಾಡಿಕೊಳ್ಳುವಂತೆ ಕೇಳಿಕೊಂಡರು. ಆದಾಗ್ಯೂ, ಒತ್ತಡಗಳನ್ನು ವಿಶ್ಲೇಷಿಸಿ ತಮ್ಮ ಸ್ವಂತ ಸಾಮರ್ಥ್ಯಕ್ಕೆ ನ್ಯಾಯ ಒದಗಿಸುತ್ತಿದ್ದಾರೆಯೇ ಎಂದು ವಿಚಾರಿಸಿ ನೋಡಲು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅಂತಹ ಪರಿಸ್ಥಿತಿಯಲ್ಲಿ ಈ ನಿರೀಕ್ಷೆಗಳು ಉತ್ತಮ ಕಾರ್ಯಕ್ಷಮತೆಯನ್ನು ಉತ್ತೇಜಿಸುತ್ತವೆ ಎಂದು ಹೇಳಿದರು.

ಪರೀಕ್ಷೆಗಳ ತಯಾರಿ ಮತ್ತು ಸಮಯ ನಿರ್ವಹಣೆ ಕುರಿತು:

ಡಾಲ್ ಹೌಸಿಯ ಕೆ.ವಿ.ಯ 11ನೇ ತರಗತಿ ವಿದ್ಯಾರ್ಥಿನಿ ಆರುಶಿ ಠಾಕೂರ್ ಅವರ ಪರೀಕ್ಷೆಯ ಸಿದ್ಧತೆಗಳನ್ನು ಎಲ್ಲಿ ಆರಂಭಿಸಬೇಕು ಎಂಬ ಬಗ್ಗೆ ತಿಳಿಯದಿರುವ ಪ್ರಶ್ನೆ ಮತ್ತು ರಾಯಪುರದ ಕೃಷ್ಣ ಪಬ್ಲಿಕ್ ಶಾಲೆಯ ಅದಿತಿ ದಿವಾನ್ ಅವರಿಂದ ಪರೀಕ್ಷೆಯ ಸಮಯದಲ್ಲಿ ಸಮಯ ನಿರ್ವಹಣೆಯ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ಪರೀಕ್ಷೆಗಳಿರಲಿ ಅಥವಾ ಇಲ್ಲದಿರಲಿ ಸಾಮಾನ್ಯ ಜೀವನದಲ್ಲಿ ಸಮಯ ನಿರ್ವಹಣೆಯ ಮಹತ್ವವನ್ನು ಒತ್ತಿ ಹೇಳಿದರು. ಕೆಲಸ ಮಾಡುವುದರಿಂದ ನಾವು ಎಂದಿಗೂ ಆಯಾಸಗೊಳ್ಳುವುದಿಲ್ಲ, ವಾಸ್ತವವಾಗಿ ಕೆಲಸ ಮಾಡದಿರುವುದು ಒಬ್ಬ ವ್ಯಕ್ತಿಯನ್ನು ಆಯಾಸಗೊಳಿಸುತ್ತದೆ ಎಂದು ಅವರು ಹೇಳಿದರು. ತಾವು ಮಾಡುವ ವಿವಿಧ ಕೆಲಸಗಳಿಗೆ ಸಮಯದ ಹಂಚಿಕೆಯನ್ನು ದಾಖಲಿಸುವಂತೆ ಅವರು ವಿದ್ಯಾರ್ಥಿಗಳಿಗೆ ಹೇಳಿದರು. ತಾನು ಇಷ್ಟಪಡುವ ವಿಷಯಗಳಿಗೆ ಹೆಚ್ಚಿನ ಸಮಯವನ್ನು ಮೀಸಲಿಡುವುದು ನಮ್ಮ ಸಾಮಾನ್ಯ ಪ್ರವೃತ್ತಿಯಾಗಿದೆ ಎಂದು ಹೇಳಿದ ಅವರು ಒಂದು ವಿಷಯಕ್ಕೆ ಸಮಯವನ್ನು ನಿಗದಿಪಡಿಸುವಾಗ, ಮನಸ್ಸು ಉಲ್ಲಾಸವಾಗಿರುವಾಗ ಕಡಿಮೆ ಆಸಕ್ತಿದಾಯಕ ಅಥವಾ ಅತ್ಯಂತ ಕಷ್ಟಕರವಾದ ವಿಷಯವನ್ನು ಅಭ್ಯಸಿಸಬೇಕು ಎಂದು ಅವರು ಹೇಳಿದರು. ತಮ್ಮನ್ನು ತಾವು ಒತ್ತಾಯಿಸುವ ಬದಲು, ವಿದ್ಯಾರ್ಥಿಗಳು ಸಂಕೀರ್ಣತೆಗಳನ್ನು ಶಾಂತ ಮನಸ್ಥಿತಿಯೊಂದಿಗೆ ನಿಭಾಯಿಸಬೇಕು. ಮನೆಯಲ್ಲಿ ಕೆಲಸ ಮಾಡುವ ತಾಯಂದಿರ ಸಮಯ ನಿರ್ವಹಣಾ ಕೌಶಲ್ಯವನ್ನು ವಿದ್ಯಾರ್ಥಿಗಳು ಗಮನಿಸಬೇಕು, ಅವರು ಪ್ರತಿಯೊಂದು ಕೆಲಸವನ್ನು ಸಮಯೋಚಿತವಾಗಿ ನಿರ್ವಹಿಸುತ್ತಾರೆ ಎಂದು ಪ್ರಧಾನಿ ಹೇಳಿದರು. ಅವರು ತಮ್ಮ ಎಲ್ಲಾ ಕೆಲಸಗಳನ್ನು ಮಾಡುವುದರಿಂದ ಆಯಾಸಗೊಳ್ಳುವುದಿಲ್ಲ, ಆದರೆ ಅದಕ್ಕೆ ಬದಲು ಅವರು ಉಳಿದ ಸಮಯದಲ್ಲಿ ಕೆಲವು ಸೃಜನಶೀಲ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಮಯವನ್ನು ಕಂಡುಕೊಳ್ಳುತ್ತಾರೆ ಎಂದು ಪ್ರಧಾನಿಯವರು ಹೇಳಿದರು. ತಮ್ಮ ತಾಯಂದಿರನ್ನು ಗಮನಿಸುವ ಮೂಲಕ ವಿದ್ಯಾರ್ಥಿಗಳು ಸಮಯದ ಸೂಕ್ಷ್ಮ ನಿರ್ವಹಣೆಯ ಮಹತ್ವವನ್ನು ಅರ್ಥಮಾಡಿಕೊಳ್ಳಬಹುದು. ಆ ಮೂಲಕ ಪ್ರತಿಯೊಂದು ವಿಷಯಕ್ಕೂ ನಿರ್ದಿಷ್ಟ ಸಮಯವನ್ನು ಮೀಸಲಿಡಬಹುದು ಎಂದು ಪ್ರಧಾನಿ ಗಮನಸೆಳೆದರು. “ನೀವು ನಿಮ್ಮ ಸಮಯವನ್ನು ಹೆಚ್ಚಿನ ಪ್ರಯೋಜನಗಳಿಗಾಗಿ ವಿನಿಯೋಗಿಸಬೇಕು” ಎಂದು ಪ್ರಧಾನಿ ಹೇಳಿದರು.

ಪರೀಕ್ಷೆಗಳಲ್ಲಿ ಅನ್ಯಾಯದ ವಿಧಾನಗಳು ಮತ್ತು ಅಡ್ಡ ದಾರಿಗಳನ್ನು ಹಿಡಿಯುವ ಬಗ್ಗೆ:

ಬಸ್ತಾರ್ ನ ಸ್ವಾಮಿ ಆತ್ಮಾನಂದ್ ಸರ್ಕಾರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ರೂಪೇಶ್ ಕಶ್ಯಪ್ ಪರೀಕ್ಷೆಗಳಲ್ಲಿ ಅನ್ಯಾಯದ ವಿಧಾನಗಳನ್ನು ತಪ್ಪಿಸುವ ಮಾರ್ಗಗಳ ಬಗ್ಗೆ ಕೇಳಿದರು. ಒಡಿಶಾದ ಕೊನಾರ್ಕ್ ಪುರಿಯ ತನ್ಮಯ್ ಬಿಸ್ವಾಲ್ ಕೂಡ ಪರೀಕ್ಷೆಯಲ್ಲಿ ಮೋಸವನ್ನು ತೊಡೆದುಹಾಕುವ ಬಗ್ಗೆ ಕೇಳಿದರು. ಪರೀಕ್ಷೆಯ ಸಮಯದಲ್ಲಿ ದುಷ್ಕೃತ್ಯಗಳನ್ನು ಎದುರಿಸಲು ಮಾರ್ಗಗಳನ್ನು ಕಂಡುಹಿಡಿಯುವ ವಿಷಯವನ್ನು ವಿದ್ಯಾರ್ಥಿಗಳು ಎತ್ತಿದ್ದಾರೆ ಎಂದು ಪ್ರಧಾನಿ ಸಂತೋಷ ವ್ಯಕ್ತಪಡಿಸಿದರು. ಪರೀಕ್ಷೆಯಲ್ಲಿ ಮೋಸ ಮಾಡುವಾಗ ಮೇಲ್ವಿಚಾರಕರನ್ನು ಮೂರ್ಖರನ್ನಾಗಿಸಲು ವಿದ್ಯಾರ್ಥಿ ಹೆಮ್ಮೆ ಪಡುವ ನೈತಿಕತೆಯಲ್ಲಿನ ನಕಾರಾತ್ಮಕ ಬದಲಾವಣೆಗಳೆಡೆಗೆ ಅವರು ವಿದ್ಯಾರ್ಥಿಗಳ ಗಮನಸೆಳೆದರು. “ಇದು ಅತ್ಯಂತ ಅಪಾಯಕಾರಿ ಪ್ರವೃತ್ತಿಯಾಗಿದೆ” ಎಂದು ಹೇಳಿದ ಪ್ರಧಾನಮಂತ್ರಿಯವರು, ಇಡೀ ಸಮಾಜವು ಇದರ ಬಗ್ಗೆ ಆಲೋಚಿಸಬೇಕು ಎಂದು ಹೇಳಿದರು. ಬೋಧನಾ ತರಗತಿಗಳನ್ನು ನಡೆಸುವ ಕೆಲವು ಶಾಲೆಗಳು ಅಥವಾ ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಅನ್ಯಾಯದ ವಿಧಾನಗಳಿಗಾಗಿ ಪ್ರಯತ್ನಿಸುತ್ತಾರೆ ಎಂದು ಅವರು ಹೇಳಿದರು. ಅನ್ಯಾಯದ ಮಾರ್ಗಗಳನ್ನು ಕಂಡುಹಿಡಿಯುವ ಮತ್ತು ಮೋಸದ ಚೀಟಿಗಳನ್ನು ತಯಾರಿಸಲು ಸಮಯವನ್ನು ವ್ಯರ್ಥ ಮಾಡುವುದನ್ನು ಬಿಟ್ಟು, ಅದೇ ಸಮಯವನ್ನು ಕಲಿಕೆಯಲ್ಲಿ ಬಳಸುವಂತೆ ಅವರು ವಿದ್ಯಾರ್ಥಿಗಳನ್ನು ಕೇಳಿಕೊಂಡರು. ಎರಡನೆಯದಾಗಿ, “ಬದಲಾಗುತ್ತಿರುವ ಈ ಕಾಲದಲ್ಲಿ, ನಮ್ಮ ಸುತ್ತಲಿನ ಜೀವನವು ಬದಲಾಗುತ್ತಿರುವಾಗ, ನೀವು ಪ್ರತಿ ಹಂತದಲ್ಲೂ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ” ಎಂದು ಪ್ರಧಾನಿ ಹೇಳಿದರು, ಅಂತಹ ಜನರು ಕೆಲವು ಪರೀಕ್ಷೆಗಳನ್ನು ಮಾತ್ರ ಉತ್ತೀರ್ಣರಾಗಬಹುದು ಆದರೆ ಅಂತಿಮವಾಗಿ ಜೀವನದಲ್ಲಿ ವಿಫಲರಾಗುತ್ತಾರೆ ಎಂದು ಹೇಳಿದರು. “ಮೋಸದಿಂದ ಜೀವನ ಯಶಸ್ವಿಯಾಗಲು ಸಾಧ್ಯವಿಲ್ಲ. ನೀವು ಒಂದು ಅಥವಾ ಎರಡು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬಹುದು ಆದರೆ ಅದು ಜೀವನದಲ್ಲಿ ಪ್ರಶ್ನಾರ್ಹವಾಗಿಯೇ ಉಳಿಯುತ್ತದೆ “ಎಂದು ಅವರು ಹೇಳಿದರು. ವಂಚಕರ ತಾತ್ಕಾಲಿಕ ಯಶಸ್ಸಿನಿಂದ ಹತಾಶರಾಗಬೇಡಿ ಎಂದು ಕಠಿಣ ಪರಿಶ್ರಮಿ ವಿದ್ಯಾರ್ಥಿಗಳಿಗೆ ಹೇಳಿದ ಪ್ರಧಾನಮಂತ್ರಿಯವರು, ಕಠಿಣ ಪರಿಶ್ರಮವು ತಮ್ಮ ಜೀವನದಲ್ಲಿ ಯಾವಾಗಲೂ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು. “ಪರೀಕ್ಷೆಗಳು ಬರುತ್ತವೆ ಮತ್ತು ಹೋಗುತ್ತವೆ ಆದರೆ ಜೀವನವನ್ನು ಸಂಪೂರ್ಣವಾಗಿ ಅನುಭವಿಸಬೇಕು” ಎಂದು ಅವರು ಹೇಳಿದರು. ರೈಲ್ವೆ ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆಯನ್ನು ದಾಟುವ ಬದಲು ರೈಲ್ವೆ ಹಳಿಗಳ ಮೇಲೆ ಹಾದು ಹೋಗುವ ಮೂಲಕ ಪ್ಲಾಟ್ ಫಾರ್ಮ್ ಗಳನ್ನು ದಾಟುವ ಜನರ ಉದಾಹರಣೆಯನ್ನು ನೀಡಿದ ಪ್ರಧಾನಿ, ಶಾರ್ಟ್ ಕಟ್ ಗಳು ನಿಮ್ಮನ್ನು ಎಲ್ಲಿಯೂ ಕರೆದೊಯ್ಯುವುದಿಲ್ಲ ಎಂದು ಗಮನಸೆಳೆದರು ಮತ್ತು “ಶಾರ್ಟ್ ಕಟ್ ಗಳು ನಿಮ್ಮನ್ನು ಕಟ್ ಶಾರ್ಟ್ ಮಾಡುತ್ತವೆ” ಎಂದು ಹೇಳಿದರು.

ಕಷ್ಟಪಟ್ಟು ಕೆಲಸ ಮಾಡುವುದು ಮತ್ತು ಸ್ಮಾರ್ಟ್ ಆಗಿ ಕೆಲಸ ಮಾಡುವುದು:

ಕೇರಳದ ಕೋಝಿಕೋಡ್ ನ ವಿದ್ಯಾರ್ಥಿಯೊಬ್ಬರು ಕಠಿಣ ಪರಿಶ್ರಮ ಮತ್ತು ಜಾಣ್ಮೆಯ ಕೆಲಸದ ಅಗತ್ಯ ಮತ್ತು ಚಲನಶೀಲತೆಯ ಬಗ್ಗೆ ಕೇಳಿದರು. ಜಾಣ್ಮೆಯ ಕೆಲಸದ ಉದಾಹರಣೆಯನ್ನು ನೀಡಿದ ಪ್ರಧಾನಮಂತ್ರಿಯವರು, ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಬಿಂದಿಗೆಯಲ್ಲಿ ಕಲ್ಲುಗಳನ್ನು ಹಾಕಿದ ಬಾಯಾರಿದ ಕಾಗೆಯ ಉದಾಹರಣೆಯನ್ನು ಎತ್ತಿ ತೋರಿಸಿದರು. ಕೆಲಸವನ್ನು ನಿಕಟವಾಗಿ ವಿಶ್ಲೇಷಿಸಿ ಅರ್ಥಮಾಡಿಕೊಳ್ಳುವ ಅಗತ್ಯವನ್ನು ಅವರು ಒತ್ತಿಹೇಳಿದರು. ಕಷ್ಟಪಟ್ಟು, ಬುದ್ಧಿವಂತಿಕೆಯಿಂದ ಕೆಲಸ ಮಾಡುವುದನ್ನು ಈ ಕಥೆಯ ನೈತಿಕತೆಯಿಂದ ಎತ್ತಿ ತೋರಿಸಿದರು. “ಪ್ರತಿಯೊಂದು ಕೆಲಸವನ್ನು ಮೊದಲು ಕೂಲಂಕಷವಾಗಿ ಪರಿಶೀಲಿಸಬೇಕು” ಎಂದು ಅವರು ಹೇಳಿದರು. ಜಾಣ್ಮೆಯ ಕೆಲಸದ ಮೆಕ್ಯಾನಿಕ್ ಒಬ್ಬರು ಎರಡು ನಿಮಿಷಗಳಲ್ಲಿ ಜೀಪನ್ನು ಫಿಕ್ಸ್ ಮಾಡಿ ಇನ್ನೂರು ರೂಪಾಯಿಗಳನ್ನು ದುಡಿಯುವ ಉದಾಹರಣೆಯನ್ನು ನೀಡಿದ ಅವರು, ಕೆಲಸ ಮಾಡಲು ತೆಗೆದುಕೊಂಡ ಸಮಯಕ್ಕಿಂತ ಅವರ ಕೆಲಸದ ಅನುಭವವು ಮುಖ್ಯವಾಗಿದೆ ಎಂದು ಹೇಳಿದರು. “ಕಠಿಣ ಪರಿಶ್ರಮದಿಂದ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ.” ಅಂತೆಯೇ, ಕ್ರೀಡೆಯಲ್ಲಿಯೂ ವಿಶೇಷ ತರಬೇತಿ ಮುಖ್ಯವಾಗಿದೆ. ಏನು ಮಾಡಬೇಕೆಂಬುದರ ಬಗ್ಗೆ ನಾವು ಗಮನ ಹರಿಸಬೇಕು ಎಂದು ಅವರು ಹೇಳಿದರು. ಅವರು ಕಠಿಣ ಪರಿಶ್ರಮವನ್ನು ಬುದ್ಧಿವಂತಿಕೆಯಿಂದ, ಮುಖ್ಯವಾದ ಕ್ಷೇತ್ರಗಳಲ್ಲಿ ಮಾಡಬೇಕು ಎಂದು ಹೇಳಿದರು.

ಒಬ್ಬರ ಸಾಮರ್ಥ್ಯವನ್ನು ಗುರುತಿಸುವಾಗ:

ಗುರುಗ್ರಾಮದ ಜವಾಹರ್ ನವೋದಯ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿನಿ ಜೊವಿತಾ ಪಾತ್ರಾ ಸರಾಸರಿ ವಿದ್ಯಾರ್ಥಿಯಾಗಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವ ಬಗ್ಗೆ ಕೇಳಿದರು. ತಮ್ಮ ಬಗ್ಗೆ ವಾಸ್ತವಿಕ ಮೌಲ್ಯಮಾಪನ ಮಾಡುವ ಅಗತ್ಯವನ್ನು ಪ್ರಧಾನಿ ಶ್ಲಾಘಿಸಿದರು. ಈ ಅರಿವನ್ನು ಪಡೆದ ನಂತರ, ವಿದ್ಯಾರ್ಥಿಯು ಸೂಕ್ತ ಗುರಿಗಳು ಮತ್ತು ಕೌಶಲ್ಯಗಳನ್ನು ನಿಗದಿಪಡಿಸಬೇಕು ಎಂದು ಪ್ರಧಾನಿ ಹೇಳಿದರು. ತಮ್ಮ ಸಾಮರ್ಥ್ಯವನ್ನು ತಿಳಿದುಕೊಳ್ಳುವುದು ಒಬ್ಬ ವ್ಯಕ್ತಿಯನ್ನು ತುಂಬಾ ಸಮರ್ಥನನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು. ಪೋಷಕರು ತಮ್ಮ ಮಕ್ಕಳ ಬಗ್ಗೆ ಸರಿಯಾದ ಮೌಲ್ಯಮಾಪನ ಮಾಡಬೇಕೆಂದು ಅವರು ಕೇಳಿದರು. ಹೆಚ್ಚಿನ ಜನರು ಸರಾಸರಿಯಾದ ಸಾಮಾನ್ಯರು ಆದರೆ ಈ ಸಾಮಾನ್ಯ ಜನರು ಅಸಾಧಾರಣ ಕಾರ್ಯಗಳನ್ನು ಮಾಡಿದಾಗ, ಅವರು ಹೊಸ ಸಾಹಸವನ್ನು ಸಾಧಿಸುತ್ತಾರೆ ಎಂದು ಅವರು ಹೇಳಿದರು. ಜಾಗತಿಕ ಆರ್ಥಿಕತೆಯಲ್ಲಿ ಭಾರತವನ್ನು ಹೊಸ ಭರವಸೆಯಾಗಿ ನೋಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಭಾರತೀಯ ಅರ್ಥಶಾಸ್ತ್ರಜ್ಞರು ಮತ್ತು ಪ್ರಧಾನ ಮಂತ್ರಿಗಳನ್ನು ಸಹ ಪ್ರವೀಣ ಅರ್ಥಶಾಸ್ತ್ರಜ್ಞರೆಂದು ನೋಡದಿದ್ದ ಸಮಯವನ್ನು ಅವರು ನೆನಪಿಸಿಕೊಂಡರು, ಆದರೆ ಇಂದು ಭಾರತವು ವಿಶ್ವದ ತುಲನಾತ್ಮಕ ಅರ್ಥಶಾಸ್ತ್ರದಲ್ಲಿ ಮುಂದುವರೆಯುತ್ತಿದೆ. “ನಾವು ಎಂದಿಗೂ ಸಾಮಾನ್ಯ ಎಂಬ ಒತ್ತಡಕ್ಕೆ ಒಳಗಾಗಬಾರದು ಮತ್ತು ನಾವು ಸಾಮಾನ್ಯರಾಗಿದ್ದರೂ ನಮ್ಮಲ್ಲಿ ಅಸಾಧಾರಣವಾದದ್ದು ಏನಾದರೂ ಇರುತ್ತದೆ, ನೀವು ಮಾಡಬೇಕಾಗಿರುವ ಕೆಲಸವೆಂದರೆ ಅದನ್ನು ಗುರುತಿಸುವುದು ಮತ್ತು ಪೋಷಿಸುವುದು ಮಾತ್ರ” ಎಂದು ಅವರು ಹೇಳಿದರು.

ಟೀಕೆಗಳನ್ನು ನಿರ್ವಹಿಸುವ ಬಗ್ಗೆ:

ಚಂಡೀಗಢದ ಸೇಂಟ್ ಜೋಸೆಫ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಮನ್ನತ್ ಬಜ್ವಾ, ಅಹಮದಾಬಾದ್ ನ 12ನೇ ತರಗತಿಯ ವಿದ್ಯಾರ್ಥಿ ಕುಮ್ಕುಮ್ ಪ್ರತಾಪ್ ಭಾಯ್ ಸೋಲಂಕಿ ಮತ್ತು ಬೆಂಗಳೂರಿನ ವೈಟ್ ಫೀಲ್ಡ್ ಗ್ಲೋಬಲ್ ಶಾಲೆಯ 12ನೇ ತರಗತಿಯ ವಿದ್ಯಾರ್ಥಿ ಆಕಾಶ್ ದರಿರಾ ಅವರು ತಮ್ಮ ಬಗ್ಗೆ ನಕಾರಾತ್ಮಕ ದೃಷ್ಟಿಕೋನ ಮತ್ತು ಅಭಿಪ್ರಾಯಗಳನ್ನು ಹೊಂದಿರುವ ಜನರನ್ನು ಎದುರಿಸುವ ಬಗ್ಗೆ ಮತ್ತು ಅದು ಅವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಪ್ರಧಾನಿಯವರನ್ನು ಕೇಳಿದರು. ದಕ್ಷಿಣ ಸಿಕ್ಕಿಂನ ಡಿಎವಿ ಪಬ್ಲಿಕ್ ಶಾಲೆಯ 11ನೇ ತರಗತಿ ವಿದ್ಯಾರ್ಥಿ ಅಷ್ಟಮಿ ಸೇನ್ ಕೂಡ ಮಾಧ್ಯಮಗಳ ವಿಮರ್ಶಾತ್ಮಕ ದೃಷ್ಟಿಕೋನವನ್ನು ನಿಭಾಯಿಸುವ ಬಗ್ಗೆ ಇದೇ ರೀತಿಯ ಪ್ರಶ್ನೆಯನ್ನು ಎತ್ತಿದರು. ಟೀಕೆಯು ಶುದ್ಧೀಕರಣ ಯಜ್ಞ ಮತ್ತು ಅಭಿವೃದ್ಧಿ ಹೊಂದುತ್ತಿರುವ ಪ್ರಜಾಪ್ರಭುತ್ವದ ಮೂಲ ಸ್ಥಿತಿಯಾಗಿದೆ ಎಂಬ ತತ್ವವನ್ನು ತಾವು ನಂಬುವುದಾಗಿ ಪ್ರಧಾನಿ ಒತ್ತಿ ಹೇಳಿದರು. ಪ್ರತಿಕ್ರಿಯೆಯ ಅಗತ್ಯವನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಸುಧಾರಣೆಗಳಿಗಾಗಿ ಓಪನ್ ಸೋರ್ಸ್ ನಲ್ಲಿ ತಮ್ಮ ಕೋಡ್ ಅನ್ನು ಹಾಕುವ ಪ್ರೋಗ್ರಾಮರ್ ಮತ್ತು ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟಕ್ಕೆ ಇಡುವ ಕಂಪನಿಗಳ ಉದಾಹರಣೆಗಳನ್ನು ನೀಡಿದರು. ನಿಮ್ಮ ಕೆಲಸವನ್ನು ಯಾರು ಟೀಕಿಸುತ್ತಿದ್ದಾರೆ ಎಂದು ಗಮನಿಸುವುದು ಮುಖ್ಯ ಎಂದು ಅವರು ಗಮನಸೆಳೆದರು. ಇತ್ತೀಚಿನ ದಿನಗಳಲ್ಲಿ ಪೋಷಕರು ರಚನಾತ್ಮಕ ಟೀಕೆಯ ಬದಲು ತಮ್ಮ ಮಕ್ಕಳಿಗೆ ಅಡ್ಡಿಪಡಿಸುವ ಅಭ್ಯಾಸವನ್ನು ಹೊಂದಿದ್ದಾರೆ. ಈ ಅಭ್ಯಾಸವನ್ನು ಮುರಿಯುವಂತೆ ಪೋಷಕರನ್ನು ಒತ್ತಾಯಿಸಿದರು, ಏಕೆಂದರೆ ಇದು ಮಕ್ಕಳ ಜೀವನವನ್ನು ಸರಿಯಾದ ರೀತಿಯಲ್ಲಿ ರೂಪಿಸುವುದಿಲ್ಲ. ಒಂದು ನಿರ್ದಿಷ್ಟ ವಿಷಯದ ಬಗ್ಗೆ ಅಧಿವೇಶನವನ್ನುದ್ದೇಶಿಸಿ ಮಾತನಾಡುವ ಸದಸ್ಯರೊಬ್ಬರು ವಿರೋಧ ಪಕ್ಷದ ಸದಸ್ಯರಿಂದ ಬರುವ ಅಡ್ಡಿ-ಆತಂಕಗಳ ಮಧ್ಯೆಯೂ ವಿಚಲಿತರಾಗದೆ ತಮ್ಮ ಮಾತನ್ನು ಮುಂದುವರೆಸುವ ಸಂಸತ್ ಅಧಿವೇಶನದ ದೃಶ್ಯಗಳನ್ನು ಪ್ರಧಾನಿಯವರು ವಿವರಿಸಿದರು. ಎರಡನೆಯದಾಗಿ, ವಿಮರ್ಶಕರಾಗಿ ಸಂಶೋಧನೆಯ ಮಹತ್ವವನ್ನು ಪ್ರಧಾನಿ ಎತ್ತಿ ತೋರಿಸಿದರು ಆದರೆ ಪ್ರಸ್ತುತ ಯುಗದಲ್ಲಿ ಹೆಚ್ಚಿನ ಜನರು ಟೀಕೆಗಿಂತ ಹೆಚ್ಚಾಗಿ ಆರೋಪಗಳನ್ನು ಮಾಡುವ ಶಾರ್ಟ್ ಕಟ್ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ ಎಂದು ಗಮನಿಸಿದರು. “ಆರೋಪಗಳು ಮತ್ತು ಟೀಕೆಗಳ ನಡುವೆ ಬಹಳ ದೊಡ್ಡ ಅಂತರವಿದೆ” ಎಂದು ಹೇಳಿದ ಪ್ರಧಾನಿ, ಟೀಕೆಗಳನ್ನು ಆರೋಪಗಳಿಗೆ ತಪ್ಪಾಗಿ ಅರ್ಥೈಸಬಾರದು ಎಂದು ಪ್ರತಿಯೊಬ್ಬರನ್ನು ಒತ್ತಾಯಿಸಿದರು.

ಗೇಮಿಂಗ್ ಮತ್ತು ಆನ್ ಲೈನ್ ವ್ಯಸನದ ಬಗ್ಗೆ:

ಭೋಪಾಲ್ ನ ದೀಪೇಶ್ ಅಹಿರ್ವಾರ್, ಹತ್ತನೇ ತರಗತಿಯ ವಿದ್ಯಾರ್ಥಿ ಆದಿತಾಭ್ ಇಂಡಿಯಾ ಟಿವಿ ಮೂಲಕ, ಕಾಮಾಕ್ಷಿ ರಿಪಬ್ಲಿಕ್ ಟಿವಿ ಮೂಲಕ ಮತ್ತು ಮನನ್ ಮಿತ್ತಲ್ ಜೀ ಟಿವಿ ಮೂಲಕ ಆನ್ಲೈನ್ ಆಟಗಳು ಮತ್ತು ಸಾಮಾಜಿಕ ಮಾಧ್ಯಮಗಳ ವ್ಯಸನದ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ನೀವು ಜಾಣರಾಗಿದ್ದೀರಾ ಅಥವಾ ನಿಮ್ಮ ಉಪರಕಣ ಸ್ಮಾರ್ಟ್ ಆಗಿದೆಯೇ ಎಂಬುದನ್ನು ನಿರ್ಧರಿಸುವುದು ಮೊದಲಿಗೆ ಪ್ರಮುಖವಾಗಿದೆ ಎಂದು ಪ್ರಧಾನಿ ಹೇಳಿದರು. ನೀವು ಗ್ಯಾಜೆಟ್ ಅನ್ನು ನಿಮಗಿಂತ ಸ್ಮಾರ್ಟ್ ಎಂದು ಪರಿಗಣಿಸಲು ಪ್ರಾರಂಭಿಸಿದಾಗ ಸಮಸ್ಯೆ ಪ್ರಾರಂಭವಾಗುತ್ತದೆ. ಒಬ್ಬರ ಜಾಣ್ತನವು ಸ್ಮಾರ್ಟ್ ಗ್ಯಾಜೆಟ್ ಅನ್ನು ಸ್ಮಾರ್ಟ್ ಆಗಿ ಬಳಸಲು ಮತ್ತು ಉತ್ಪಾದಕತೆಗೆ ಸಹಾಯ ಮಾಡುವ ಸಾಧನಗಳಾಗಿ ಪರಿಗಣಿಸಲು ಅನುವು ಮಾಡಿಕೊಡುತ್ತದೆ.  ಒಂದು ಅಧ್ಯಯನದ ಪ್ರಕಾರ, ಒಬ್ಬ ಭಾರತೀಯನ ಸರಾಸರಿ ಪರದೆಯ ಸಮಯವು ಆರು ಗಂಟೆಗಳಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಅಂತಹ ಪರಿಸ್ಥಿತಿಯಲ್ಲಿ ಗ್ಯಾಜೆಟ್ ನಮ್ಮನ್ನು ಗುಲಾಮರನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು. “ದೇವರು ನಮಗೆ ಸ್ವತಂತ್ರ ಇಚ್ಛಾಶಕ್ತಿ ಮತ್ತು ಸ್ವತಂತ್ರ ವ್ಯಕ್ತಿತ್ವವನ್ನು ನೀಡಿದ್ದಾನೆ. ನಮ್ಮ ಗ್ಯಾಜೆಟ್ ಗಳಿಗೆ ಗುಲಾಮರಾಗುವ ಬಗ್ಗೆ ನಾವು ಯಾವಾಗಲೂ ಜಾಗೃತರಾಗಿರಬೇಕು” ಎಂದು ಪ್ರಧಾನಿ ಹೇಳಿದರು. ತಾವು ತುಂಬಾ ಸಕ್ರಿಯರಾಗಿದ್ದರೂ ಮೊಬೈಲ್ ಫೋನಿನೊಂದಿಗೆ ವಿರಳವಾಗಿ ಕಾಣಿಸಿಕೊಳ್ಳುತ್ತೇನೆ ಎಂದು ಅವರು ತಮ್ಮದೇ ಉದಾಹರಣೆಯನ್ನು ನೀಡಿದರು. ಅಂತಹ ಚಟುವಟಿಕೆಗಳಿಗೆ ತಾವು ನಿರ್ದಿಷ್ಟ ಸಮಯವನ್ನು ನಿಗಧಿಪಡಿಸಿಕೊಳ್ಳುವುದನ್ನು ಅವರು ತಿಳಿಸಿದರು. ಒಬ್ಬರು ತಂತ್ರಜ್ಞಾನವನ್ನು ಅಲ್ಲಗಳೆಯಬಾರದು ಆದರೆ ಒಬ್ಬರ ಅಗತ್ಯಕ್ಕೆ ಅನುಗುಣವಾಗಿ ಉಪಯುಕ್ತ ವಿಷಯಗಳಿಗೆ ಅದನ್ನು ಸೀಮಿತಗೊಳಿಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಮಗ್ಗಿ ಹೇಳುವ ಸಾಮರ್ಥ್ಯವನ್ನು ಕಳೆದುಕೊಂಡ ಉದಾಹರಣೆಯನ್ನು ಅವರು ನೀಡಿದರು. ನಮ್ಮ ಮೂಲಭೂತ ಕೊಡುಗೆಗಳನ್ನು ಕಳೆದುಕೊಳ್ಳದೆ ನಾವು ನಮ್ಮ ಸಾಮರ್ಥ್ಯಗಳನ್ನು ಅರಿತುಕೊಳ್ಳಬೇಕಾಗಿದೆ ಎಂದು ಪ್ರಧಾನಿ ಹೇಳಿದರು. ತಮ್ಮ ಸೃಜನಶೀಲತೆಯನ್ನು ಕಾಪಾಡಿಕೊಳ್ಳಲು ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ಪರೀಕ್ಷೆ ಮತ್ತು ಕಲಿಕೆಯನ್ನು ಮುಂದುವರಿಸಬೇಕು. ನಿಯಮಿತವಾಗಿ ‘ತಂತ್ರಜ್ಞಾನ ಉಪವಾಸ’ಕ್ಕೆ ಪ್ರಧಾನಿ ಸಲಹೆ ನೀಡಿದರು. ಪ್ರತಿ ಮನೆಯಲ್ಲೂ ‘ತಂತ್ರಜ್ಞಾನ ಮುಕ್ತ ವಲಯ’ ಎಂದು ಗುರುತಿಸಲಾದ ಪ್ರದೇಶವನ್ನು ನಿರ್ಮಿಸಲು ಅವರು ಸೂಚಿಸಿದರು. ಇದು ಜೀವನದಲ್ಲಿ ಹೆಚ್ಚಿನ ಸಂತೋಷಕ್ಕೆ ಕಾರಣವಾಗುತ್ತದೆ ಮತ್ತು ನೀವು ಗ್ಯಾಜೆಟ್ ಗಳ ಗುಲಾಮಗಿರಿಯ ಹಿಡಿತದಿಂದ ಹೊರಬರಬಹುದು ಎಂದು ಪ್ರಧಾನಿ ಹೇಳಿದ್ದಾರೆ.

ಪರೀಕ್ಷೆಯ ನಂತರದ ಒತ್ತಡ:

ಜಮ್ಮುವಿನ ಸರ್ಕಾರಿ ಮಾಡೆಲ್ ಹೈ ಸೆಕೆಂಡರಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ನಿದಾಹ್ ಅವರು ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯದಿರುವ ಬಗ್ಗೆ ಮತ್ತು ಹರಿಯಾಣದ ಪಲ್ವಾಲ್ ನ ಶಹೀದ್ ನಾಯಕ್ ರಾಜೇಂದ್ರ ಸಿಂಗ್ ರಾಜ್ಕಿಯಾ ಶಾಲೆಯ ತರಗತಿ ವಿದ್ಯಾರ್ಥಿ ಪ್ರಶಾಂತ್ ಅವರು ಒತ್ತಡವು ಫಲಿತಾಂಶಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಧಾನಿ, ಪರೀಕ್ಷೆಗಳ ನಂತರ ಒತ್ತಡಕ್ಕೆ ಮುಖ್ಯ ಕಾರಣವೆಂದರೆ ಪರೀಕ್ಷೆಗಳು ಉತ್ತಮವಾಗಿ ನಡೆದಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳದಿರುವುದು ಎಂದು ಹೇಳಿದರು. ವಿದ್ಯಾರ್ಥಿಗಳ ನಡುವಿನ ಸ್ಪರ್ಧೆಯು ಒತ್ತಡವನ್ನು ಪ್ರಚೋದಿಸುವ ಅಂಶವಾಗಿದೆ ಎಂದು ಉಲ್ಲೇಖಿಸಿದ ಪ್ರಧಾನಿಯವರು, ವಿದ್ಯಾರ್ಥಿಗಳು ತಮ್ಮ ಆಂತರಿಕ ಸಾಮರ್ಥ್ಯಗಳನ್ನು ಬಲಪಡಿಸುವಾಗ ತಾವು ತಮ್ಮ ಸುತ್ತಮುತ್ತಲಿನಿಂದ ಕಲಿತು ಬದುಕಬೇಕು ಎಂದು ಸಲಹೆ ನೀಡಿದರು. ಜೀವನದ ಬಗೆಗಿನ ದೃಷ್ಟಿಕೋನದ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಒಂದು ಪರೀಕ್ಷೆಯು ಜೀವನದ ಅಂತ್ಯವಲ್ಲ. ಫಲಿತಾಂಶಗಳ ಬಗ್ಗೆ ಅತಿಯಾಗಿ ಯೋಚಿಸುವುದು ದೈನಂದಿನ ಜೀವನದ ವಿಷಯವಾಗಬಾರದು ಎಂದು ಹೇಳಿದರು.

ಹೊಸ ಭಾಷೆಗಳನ್ನು ಕಲಿಯುವ ಪ್ರಯೋಜನಗಳ ಬಗ್ಗೆ:

ತೆಲಂಗಾಣದ ಜವಾಹರ್ ನವೋದಯ ವಿದ್ಯಾಲಯ ರಂಗಾರೆಡ್ಡಿಯ 9ನೇ ತರಗತಿ ವಿದ್ಯಾರ್ಥಿನಿ ಆರ್. ಅಕ್ಷರಸಿರಿ ಮತ್ತು ಭೋಪಾಲ್ ನ ರಾಜ್ಕಿಯಾ ಮಾಧ್ಯಮಿಕ ವಿದ್ಯಾಲಯದ 12ನೇ ತರಗತಿ ವಿದ್ಯಾರ್ಥಿನಿ ರಿತಿಕಾ ಅವರು ಹೆಚ್ಚು ಭಾಷೆಗಳನ್ನು ಹೇಗೆ ಕಲಿಯಬಹುದು ಮತ್ತು ಅದರಿಂದ ಅವರಿಗೆ ಹೇಗೆ ಪ್ರಯೋಜನವಾಗಬಹುದು ಎಂಬ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಧಾನಿ, ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಶ್ರೀಮಂತ ಪರಂಪರೆಯನ್ನು ಎತ್ತಿ ಹಿಡಿದರು. ಭಾರತವು ನೂರಾರು ಭಾಷೆಗಳು ಮತ್ತು ಸಾವಿರಾರು ಉಪಭಾಷೆಗಳಿಗೆ ನೆಲೆಯಾಗಿದೆ ಎಂಬುದು ಬಹಳ ಹೆಮ್ಮೆಯ ವಿಷಯ ಎಂದರು. ಹೊಸ ಭಾಷೆಗಳನ್ನು ಕಲಿಯುವುದು ಹೊಸ ಸಂಗೀತ ವಾದ್ಯವನ್ನು ಕಲಿಯುವುದಕ್ಕೆ ಸಮಾನವಾಗಿದೆ ಎಂದು ಅವರು ಹೇಳಿದರು. “ಪ್ರಾದೇಶಿಕ ಭಾಷೆಯನ್ನು ಕಲಿಯಲು ಪ್ರಯತ್ನಿಸುವ ಮೂಲಕ, ನೀವು ಭಾಷೆ ಕೇವಲ ಅಭಿವ್ಯಕ್ತಿಯಾಗುವ ಬಗ್ಗೆ ಕಲಿಯುವುದಿಲ್ಲ ಆದರೆ ಈ ಪ್ರದೇಶಕ್ಕೆ ಸಂಬಂಧಿಸಿದ ಇತಿಹಾಸ ಮತ್ತು ಪರಂಪರೆಯತ್ತ ನೀವು ಹೆಜ್ಜೆ ಹಾಕುತ್ತಿರಿ” ಎಂದು ಪ್ರಧಾನಿ ಹೇಳಿದರು, ದೈನಂದಿನ ದಿನಚರಿಗೆ ಹೊರೆಯಾಗದೆ ಹೊಸ ಭಾಷೆಯನ್ನು ಕಲಿಯಲು ಅವರು ಒತ್ತು ನೀಡಿದರು. ಎರಡು ಸಾವಿರ ವರ್ಷಗಳ ಹಿಂದೆ ನಿರ್ಮಿಸಲಾದ ದೇಶದ ಸ್ಮಾರಕದ ಬಗ್ಗೆ ನಾಗರಿಕರು ಹೆಮ್ಮೆ ಪಡುವಂತಹ ಹೋಲಿಕೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭೂಮಿಯ ಮೇಲಿನ ಅತ್ಯಂತ ಹಳೆಯ ಭಾಷೆ ಎಂದು ಕರೆಯಲ್ಪಡುವ ತಮಿಳು ಭಾಷೆಯ ಬಗ್ಗೆ ದೇಶವು ಇದೇ ರೀತಿಯ ಹೆಮ್ಮೆ ಪಡಬೇಕು ಎಂದು ಹೇಳಿದರು. ವಿಶ್ವಸಂಸ್ಥೆಯಲ್ಲಿ ತಾವು ಮಾಡಿದ ಹಿಂದಿನ ಭಾಷಣವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಅತ್ಯಂತ ಪ್ರಾಚೀನ ಭಾಷೆಯ ನೆಲೆಯಾಗಿರುವ ಈ ದೇಶದ ಬಗ್ಗೆ ತಮಗಿರುವ ಹೆಮ್ಮೆಯ ಬಗ್ಗೆ ಜಗತ್ತಿಗೆ ತಿಳಿಸಲು ಬಯಸಿದ್ದರಿಂದ ತಾವು ತಮಿಳಿನ ಬಗ್ಗೆ ಹೇಗೆ ನಿರ್ದಿಷ್ಟವಾಗಿ ವಾಸ್ತವಾಂಶಗಳನ್ನು ನಿರೂಪಿಸಿದ ಬಗ್ಗೆ ಒತ್ತಿ ಹೇಳಿದರು. ಉತ್ತರ ಭಾರತದ ಜನರು ದಕ್ಷಿಣ ಭಾರತದ ಭಕ್ಷ್ಯಗಳನ್ನು ಸವಿಯುತ್ತಾರೆ ಮತ್ತು ದಕ್ಷಿಣ ಭಾರತದವರು ಉತ್ತರ ಭಾರತದ ಭಕ್ಷ್ಯಗಳನ್ನು ಸವಿಯುತ್ತಾರೆ ಎಂಬುದನ್ನು ಪ್ರಧಾನಿ ಒತ್ತಿ ಹೇಳಿದರು. ಮಾತೃಭಾಷೆಯನ್ನು ಹೊರತುಪಡಿಸಿ ಭಾರತದ ಕನಿಷ್ಠ ಮತ್ತೊಂದು ಪ್ರಾದೇಶಿಕ ಭಾಷೆಯನ್ನು ತಿಳಿದುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, ನೀವು ಅವರೊಂದಿಗೆ ಮಾತನಾಡುವಾಗ ಆ ಭಾಷೆಯನ್ನು ತಿಳಿದ ಜನರ ಮುಖವು ಹೇಗೆ ಬಿರಿಯುತ್ತದೆ ಎಂಬುದನ್ನು ಎತ್ತಿ ಹೇಳಿದರು. ಗುಜರಾತಿನ ವಲಸೆ ಕಾರ್ಮಿಕರ 8 ವರ್ಷದ ಮಗಳು ಬಂಗಾಳಿ, ಮಲಯಾಳಂ, ಮರಾಠಿ ಮತ್ತು ಗುಜರಾತಿಯಂತಹ ವಿವಿಧ ಭಾಷೆಗಳನ್ನು ಮಾತನಾಡುತ್ತಾಳೆ ಎಂದು ಪ್ರಧಾನಿ ತಿಳಿಸಿದರು. ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಿಂದ ಮಾಡಿದ ಭಾಷಣವನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಪಂಚಪ್ರಾಣಗಳಲ್ಲಿ ಒಂದಾದ ಐದು ಪ್ರತಿಜ್ಞೆಗಳು ಬಗ್ಗೆ ಹೆಮ್ಮೆ ಪಡುವ ಬಗ್ಗೆ ಬೆಳಕು ಚೆಲ್ಲಿದರು. ಪ್ರತಿಯೊಬ್ಬ ಭಾರತೀಯನೂ ಭಾರತದ ಭಾಷೆಗಳ ಬಗ್ಗೆ ಹೆಮ್ಮೆ ಪಡಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳನ್ನು ಪ್ರೇರೇಪಿಸುವಲ್ಲಿ ಶಿಕ್ಷಕರ ಪಾತ್ರದ ಬಗ್ಗೆ:

ಒಡಿಶಾದ ಕಟಕ್ ನ ಶಿಕ್ಷಕಿ ಸುನನ್ಯಾ ತ್ರಿಪಾಠಿ ಅವರು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಬಗ್ಗೆ ಮತ್ತು ತರಗತಿಗಳನ್ನು ಆಸಕ್ತಿದಾಯಕ ಮತ್ತು ಶಿಸ್ತುಬದ್ಧವಾಗಿಡುವ ಬಗ್ಗೆ ಪ್ರಧಾನಮಂತ್ರಿಯವರನ್ನು ಕೇಳಿದರು. ಶಿಕ್ಷಕರು ಮಕ್ಕಳೊಂದಿಗೆ ಹೊಂದಿಕೊಳ್ಳಬೇಕು ಮತ್ತು ವಿಷಯ ಮತ್ತು ಪಠ್ಯಕ್ರಮದ ಬಗ್ಗೆ ಹೆಚ್ಚು ಕಟ್ಟುನಿಟ್ಟಾಗಿರಬಾರದು ಎಂದು ಪ್ರಧಾನಿ ಹೇಳಿದರು. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ಶಿಕ್ಷಕರು ಯಾವಾಗಲೂ ವಿದ್ಯಾರ್ಥಿಗಳಲ್ಲಿ ಕುತೂಹಲವನ್ನು ಉತ್ತೇಜಿಸಬೇಕು ಏಕೆಂದರೆ ಅದು ಅವರ ದೊಡ್ಡ ಶಕ್ತಿಯಾಗಿದೆ. ಇಂದಿಗೂ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ತುಂಬಾ ಗೌರವಿಸುತ್ತಾರೆ ಎಂದು ಅವರು ಹೇಳಿದರು. ಅದಕ್ಕಾಗಿಯೇ, ಶಿಕ್ಷಕರು ಏನನ್ನಾದರೂ ಹೇಳುವ ಮೊದಲು ಯೋಚಿಸಬೇಕು ಎಂದು ಪ್ರಧಾನಿ ಹೇಳಿದರು. ಶಿಸ್ತನ್ನು ಸ್ಥಾಪಿಸುವ ಮಾರ್ಗಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ದುರ್ಬಲ ವಿದ್ಯಾರ್ಥಿಗಳನ್ನು ಅವಮಾನಿಸುವ ಬದಲು, ಶಿಕ್ಷಕರು ಪ್ರಶ್ನೆಗಳನ್ನು ಕೇಳುವ ಮೂಲಕ ಬಲವಾದ ವಿದ್ಯಾರ್ಥಿಗಳನ್ನು ಉತ್ತೇಜಿಸಬೇಕು ಎಂದರು. ಅಂತೆಯೇ, ವಿದ್ಯಾರ್ಥಿಗಳ ಅಹಂ ಅನ್ನು ನೋಯಿಸುವ ಬದಲು ಶಿಸ್ತಿನ ವಿಷಯಗಳನ್ನು ಮಾತನಾಡುವ ಮೂಲಕ, ಅವರ ನಡವಳಿಕೆಯನ್ನು ಸರಿಯಾದ ದಿಕ್ಕಿಗೆ ತರಬಹುದು ಎಂದರು. “ಶಿಸ್ತನ್ನು ಬೆಳೆಸಲು ನಾವು ದೈಹಿಕ ಶಿಕ್ಷೆಯ ಮಾರ್ಗಕ್ಕೆ ಹೋಗಬಾರದು ಎಂದು ನಾನು ನಂಬುತ್ತೇನೆ, ನಾವು ಸಂವಾದ ಮತ್ತು ಸಂಬಂಧದ ಮಾರ್ಗವನ್ನು ಅನುಸರಿಸಬೇಕು”.

ವಿದ್ಯಾರ್ಥಿಗಳ ವರ್ತನೆಯ ಬಗ್ಗೆ:

ಸಮಾಜದಲ್ಲಿ ವಿದ್ಯಾರ್ಥಿಗಳ ನಡವಳಿಕೆಯ ಬಗ್ಗೆ ನವದೆಹಲಿಯ ಪೋಷಕರಾದ ಶ್ರೀಮತಿ ಸುಮನ್ ಮಿಶ್ರಾ ಅವರ ಪ್ರಶ್ನೆಗೆ ಉತ್ತರಿಸಿದ ಪ್ರಧಾನಮಂತ್ರಿಯವರು, ಸಮಾಜದಲ್ಲಿ ವಿದ್ಯಾರ್ಥಿಗಳ ನಡವಳಿಕೆಯ ವ್ಯಾಪ್ತಿಯನ್ನು ಪೋಷಕರು ಮಿತಿಗೊಳಿಸಬಾರದು ಎಂದು ಹೇಳಿದರು. “ಸಮಾಜದಲ್ಲಿ ವಿದ್ಯಾರ್ಥಿಯ ಬೆಳವಣಿಗೆಗೆ ಸಮಗ್ರ ದೃಷ್ಟಿಕೋನವಿರಬೇಕು. ವಿದ್ಯಾರ್ಥಿಗಳನ್ನು ಸಂಕುಚಿತ ವಲಯಕ್ಕೆ ಸೀಮಿತಗೊಳಿಸಬಾರದು ಎಂದು ಸಲಹೆ ನೀಡಿದ ಪ್ರಧಾನಿ, ವಿದ್ಯಾರ್ಥಿಗಳಿಗೆ ವಿಸ್ತೃತ ವಲಯವನ್ನು ಪ್ರೋತ್ಸಾಹಿಸಿ” ಎಂದು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳು ಮುಗಿದ ನಂತರ ಹೊರಗೆ ಪ್ರಯಾಣಿಸಿ ತಮ್ಮ ಅನುಭವಗಳನ್ನು ದಾಖಲಿಸಲು ಪ್ರೋತ್ಸಾಹಿಸಬೇಕು ಎಂಬ ತಮ್ಮ ಸ್ವಂತ ಸಲಹೆಯನ್ನು ಅವರು ನೆನಪಿಸಿಕೊಂಡರು. ಈ ರೀತಿ ಅವರನ್ನು ಮುಕ್ತಗೊಳಿಸುವುದರಿಂದ ಅವರಿಗೆ ಬಹಳಷ್ಟು ಕಲಿಯಲು ಅನುವು ಮಾಡಿಕೊಡುತ್ತದೆ. 12ನೇ ತರಗತಿ ಪರೀಕ್ಷೆಗಳ ನಂತರ ಅವರನ್ನು ತಮ್ಮ ರಾಜ್ಯಗಳಿಂದ ಹೊರಗೆ ಹೋಗಲು ಪ್ರೋತ್ಸಾಹಿಸಬೇಕು. ಹೊಸ ಅನುಭವಗಳನ್ನು ಪಡೆಯುವಂತೆ ತಮ್ಮ ಮಕ್ಕಳನ್ನು ಒತ್ತಾಯಿಸುತ್ತಲೇ ಇರುವಂತೆ ಅವರು ಪೋಷಕರನ್ನು ಕೇಳಿಕೊಂಡರು. ಪೋಷಕರು ತಮ್ಮ ಮಕ್ಕಳ ಮನಸ್ಥಿತಿ ಮತ್ತು ಪರಿಸ್ಥಿತಿಯ ಬಗ್ಗೆ ಜಾಗರೂಕರಾಗಿರಬೇಕು ಎಂದು ಅವರು ಕೇಳಿಕೊಂಡರು. ಪೋಷಕರು ತಮ್ಮನ್ನು ದೇವರ ವರವಾದ ಮಕ್ಕಳ ರಕ್ಷಕರಾಗಿ ಪರಿಗಣಿಸಿದಾಗ ಇದು ಸಂಭವಿಸುತ್ತದೆ ಎಂದು ಅವರು ಹೇಳಿದರು. 

ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, ಈ ಸಂದರ್ಭದಲ್ಲಿ ಹಾಜರಿದ್ದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಪರೀಕ್ಷೆಗಳ ಸಮಯದಲ್ಲಿ ಸೃಷ್ಟಿಯಾಗುತ್ತಿರುವ ಒತ್ತಡದ ವಾತಾವರಣವನ್ನು ಗರಿಷ್ಠ ಪ್ರಮಾಣದಲ್ಲಿ ತೊಡೆದುಹಾಕುವಂತೆ ಪೋಷಕರು, ಶಿಕ್ಷಕರು ಮತ್ತು ಪಾಲಕರನ್ನು ಒತ್ತಾಯಿಸಿದರು. ಪರಿಣಾಮವಾಗಿ, ಪರೀಕ್ಷೆಗಳು ವಿದ್ಯಾರ್ಥಿಗಳ ಜೀವನವನ್ನು ಉತ್ಸಾಹದಿಂದ ತುಂಬುವ ಆಚರಣೆಯಾಗಿ ರೂಪಾಂತರಗೊಳ್ಳುತ್ತವೆ, ಮತ್ತು ಈ ಉತ್ಸಾಹವು ವಿದ್ಯಾರ್ಥಿಗಳ ಉತ್ಕೃಷ್ಟತೆಯನ್ನು ಖಾತರಿಪಡಿಸುತ್ತದೆ ಎಂದು ಹೇಳಿದರು.

ಪರೀಕ್ಷಾ ಪೇ ಚರ್ಚಾ 2018
ಪರೀಕ್ಷಾ ಪೇ ಚರ್ಚಾ 2019
ಪರೀಕ್ಷಾ ಪೇ ಚರ್ಚಾ 2020
ಪರೀಕ್ಷಾ ಪೇ ಚರ್ಚಾ 2021
ಪರೀಕ್ಷಾ ಪೇ ಚರ್ಚಾ 2022

*****