Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಉದ್ಯೋಗ ಮೇಳಕ್ಕೆ ಪ್ರಧಾನಮಂತ್ರಿ ಚಾಲನೆ : 10 ಲಕ್ಷ ಸಿಬ್ಬಂದಿ ನೇಮಕ

​​​​​​​ಉದ್ಯೋಗ ಮೇಳಕ್ಕೆ ಪ್ರಧಾನಮಂತ್ರಿ ಚಾಲನೆ : 10 ಲಕ್ಷ ಸಿಬ್ಬಂದಿ ನೇಮಕ


“ನಮ್ಮ ಕರ್ಮಯೋಗಿಗಳ ಪ್ರಯತ್ನದಿಂದ ಸರ್ಕಾರಿ ಇಲಾಖೆಗಳ ದಕ್ಷತೆ ಹೆಚ್ಚಿದೆ”

“ಕಳೆದ 8 ವರ್ಷಗಳಿಂದ ಕೈಗೊಂಡ ಸುಧಾರಣೆಗಳ ಪರಿಣಾಮ ಭಾರತ 5 ನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯನ್ನೊಳಗೊಂಡ ದೇಶವಾಗಿದೆ”

“ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ಸ್ವಯಂ ಉದ್ಯೋಗ ಕಲ್ಪಿಸುವ ಮುದ್ರಾ ಯೋಜನೆಯನ್ನು ದೇಶದಲ್ಲಿ ಜಾರಿಗೊಳಿಸಲಾಗಿದೆ”

“ದೇಶದ ಯುವ ಜನತೆ ನಮ್ಮ ಅತಿ ದೊಡ್ಡ ಶಕ್ತಿ ಎಂದು ನಾವು ಪರಿಗಣಿಸಿದ್ದೇವೆ”

“ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಜಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಬಹುಹಂತದ

ವಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ”

“ಸರ್ಕಾರದ ಸೇವೆ ಎಂದರೆ 21ನೇ ಶತಮಾನದಲ್ಲಿ ಸೇವೆ ಮತ್ತು ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿದೆ”

“ನೀವು ಕಚೇರಿಯ ಬಾಗಿಲುಗಳ ಮೂಲಕ ನಡೆಯುವಾಗ “ಕರ್ತವ್ಯಪಥ”ವನ್ನು ಸದಾ ಮನಸ್ಸಿನಲ್ಲಿಟ್ಟುಕೊಳ್ಳಿ”

ಕೇಂದ್ರ ಸರ್ಕಾರದಲ್ಲಿ 10 ಲಕ್ಷ ಸಿಬ್ಬಂದಿಯನ್ನು ನೇಮಕಮಾಡಿಕೊಳ್ಳುವ ಉದ್ಯೋಗ ಮೇಳ ಅಭಿಯಾನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹೊಸದಾಗಿ ನೇಮಕಗೊಂಡ 75,000 ಸಿಬ್ಬಂದಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು.

ನೇಮಕಗೊಂಡವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಲಕ್ಷ್ಮೀ ಪೂಜೆಗೆ ಶುಭಾಶಯಗಳನ್ನು ತಿಳಿಸಿದರು. “ ಈ ದಿನವನ್ನು ದೇಶದಲ್ಲಿ ಕಳೆದ 8 ವರ್ಷಗಳಿಂದ ನಡೆಯುತ್ತಿರುವ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಅಭಿಯಾನಗಳಿಗೆ ಹೊಸ ಸಂಪರ್ಕ ಕಲ್ಪಿಸುತ್ತಿರುವ ದಿನವನ್ನಾಗಿ ಗುರುತಿಸಲಾಗಿದೆ” ಎಂದು ಹೇಳಿದರು. ದೇಶದ 75 ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮದಲ್ಲಿ 75,000 ಯುವ ಸಮೂಹಕ್ಕೆ ನೇಮಕಾತಿ ಪತ್ರಗಳನ್ನು ನೀಡಲಾಗುತ್ತಿದೆ. “ಒಂದೇ ಸಮಯದಲ್ಲಿ ನೇಮಕಾತಿ ಪತ್ರಗಳನ್ನು ನೀಡಬೇಕು ಎಂದು ನಾವು ನಿರ್ಧರಿಸಿದ್ದು, ಇದರಿಂದ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಮನೋಧರ್ಮ ಬೆಳೆಯುತ್ತದೆ” ಎಂದು ಉದ್ಯೋಗ ಮೇಳ ಕುರಿತು ಪ್ರಧಾನಮಂತ್ರಿ ಅವರು ವಿವರ ನೀಡಿದರು. ಮುಂಬರುವ ದಿನಗಳಲ್ಲೂ ಸಹ ಕಾಲಾನುಕಾಲಕ್ಕೆ ಸರ್ಕಾರದಿಂದ ನೇಮಕಾತಿ ಪತ್ರಗಳನ್ನು ಅಭ್ಯರ್ಥಿಗಳು ಪಡೆಯಲಿದ್ದಾರೆ. “ಎನ್.ಡಿ.ಎ ಆಡಳಿತ ಮತ್ತು ಬಿಜೆಪಿ ಆಡಳಿತವಿರುವ ಹಲವಾರು ರಾಜ್ಯಗಳು, ಕೇಂದ್ರಾಡಳಿ ಪ್ರದೇಶಗಳು ಸಹ ಇದೇ ರೀತಿಯ ಮೇಳಗಳನ್ನು ಆಯೋಜಿಸುತ್ತಿರುವುದು ತಮಗೆ ಸಂತಸ ತಂದಿದೆ” ಎಂದು ಹೇಳಿದರು.    

ಹೊಸದಾಗಿ ನೇಮಕಗೊಳ್ಳುತ್ತಿರುವವರ ಸೇರ್ಪಡೆಯನ್ನು ಸ್ವಾಗತಿಸುವ ಮಹತ್ವದ ಸಮಯದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಅಮೃತ ಕಾಲದಲ್ಲಿ ಹೊಸ ನೇಮಕಾತಿ ನಡೆಯುತ್ತಿದ್ದು, ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸು ಮಾಡಬೇಕಿದೆ. ನಾವೀಗ ಸ್ವಾವಲಂಬಿ ಭಾರತದತ್ತ ಮುನ್ನಡೆಯುತ್ತಿದ್ದೇವೆ ಎಂದರು. ಉತ್ಪಾದನೆ ಹಾಗೂ ಸೇವೆಗಳ ವಲಯದಲ್ಲಿ ನಾವೀನ್ಯತೆ, ಉದ್ಯಮವಲಯ, ಕೈಗಾರಿಕೋದ್ಯಮಿಗಳು, ರೈತರು ಮತ್ತು ಜನತೆ ಸ್ವಾವಲಂಬಿ ಭಾರತದತ್ತ ಸಾಗಲು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದರು. ಎಲ್ಲರ ಪ್ರಯತ್ನದ ಬಗ್ಗೆ ಮಹತ್ವದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಈ ಯಾನದಲ್ಲಿ ಪ್ರತಿಯೊಬ್ಬರ ಪ್ರಯತ್ನ ಪ್ರಮುಖವಾದದ್ದು ಮತ್ತು ಪ್ರತಿಯೊಬ್ಬರಿಗೂ ಪ್ರಮುಖ ಸೌಲಭ್ಯಗಳು ದೊರೆತಾಗ ಎಲ್ಲರ ಪ್ರಯತ್ನ ಸಫಲವಾದ ಭಾವನೆ ದೊರೆಯುತ್ತದೆ ಎಂದು ಹೇಳಿದರು.    

ಖಾಲಿ ಇರುವ ಲಕ್ಷಗಟ್ಟಲೆ ಹುದ್ದೆಗಳಿಗೆ ಕೆಲವೇ ತಿಂಗಳಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ ನೇಮಕಾತಿ ಪತ್ರ ನೀಡಲಾಗುವುದು, ಕಳೆದ 7-8 ವರ್ಷಗಳಲ್ಲಿ ಸರ್ಕಾರಿ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಗೆ ಇದು ಸಾಕ್ಷಿಯಾಗಿದೆ. “ಇಂದು ಕೆಲಸದ ಸಂಸ್ಕೃತಿಯಲ್ಲಿ ಬದಲಾವಣೆಯಾಗಿದೆ” ಎಂದು ಹೇಳಿದರು. “ನಮ್ಮ ಕರ್ಮಯೋಗಿಗಳ ಪ್ರಯತ್ನದಿಂದ ಸರ್ಕಾರಿ ಉದ್ಯೋಗಿಗಳ ದಕ್ಷತೆ ಹೆಚ್ಚಾಗಿದೆ. ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ಅಡೆತಡೆಯ ಪ್ರಕ್ರಿಯೆಯಾಗಿದ್ದು, ಆಯ್ಕೆಯಲ್ಲಿ ಒಲವು ಮತ್ತು ಭ್ರಷ್ಟಾಚಾರ ಮಿತಿ ಮೀರಿದ ದಿನಗಳನ್ನು ಪ್ರಧಾನಮಂತ್ರಿ ಅವರು ಸ್ಮರಿಸಿಕೊಂಡರು. ತಮ್ಮ ಸರ್ಕಾರದ ಆರಂಭಿಕ ವರ್ಷಗಳಲ್ಲಿ ಕೇಂದ್ರ ಸರ್ಕಾರದ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳನ್ನು ರದ್ದುಗೊಳಿಸುವಂತಹ ಕ್ರಮಗಳಿಂದ ಯುವ ಸಮೂಹಕ್ಕೆ ನೆರವಾಗಿದೆ ಎಂದರು.    

ಇಂದು ಭಾರತ 5 ನೇ ಅತಿ ದೊಡ್ಡ ಅರ್ಥವ್ಯವಸ್ಥೆಯನ್ನೊಳಗೊಂಡಿದೆ. ಕಳೆದ 8 ವರ್ಷಗಳಲ್ಲಿ ಕೈಗೊಂಡ ಸುಧಾರಣೆಗಳ ಪರಿಣಾಮ ಈ ಸಾಧನೆಯಾಗಿದೆ. ಹಿಂದಿನ 7 ರಿಂದ 8 ವರ್ಷಗಳ ಅವಧಿಯಲ್ಲಿ ಜಾಗತಿಕವಾಗಿ 10 ನೇ ಸ್ಥಾನದಿಂದ 5ನೇ ಸ್ಥಾನಕ್ಕೇರಿದ್ದೇವೆ. ದೇಶ ಎದುರಿಸುತ್ತಿರುವ ಸವಾಲುಗಳ ಅಗಾಧತೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತ ನಕಾರಾತ್ಮಕ ಪರಿಣಾಮಗಳನ್ನು ಹೆಚ್ಚಿನ ಮಟ್ಟದಲ್ಲಿ ನಿಯಂತ್ರಿಸಲು ಸಮರ್ಥವಾಗಿದೆ ಎಂದು ಹೇಳಿದರು. “ಕಳೆದ 8 ವರ್ಷಗಳಲ್ಲಿ ನಾವು ದೇಶದ ಆರ್ಥಿಕತೆಯ ಅಡೆತಡೆಗಳನ್ನು ತೊಡೆದುಹಾಕಿದ ಪರಿಣಾಮ ಇದನ್ನು ಸಾಧಿಸಲು ಸಾಧ್ಯವಾಗಿದೆ” ಎಂದು ಹೇಳಿದರು.  

ಹೆಚ್ಚು ಉದ್ಯೋಗ ನೀಡುವ ಕೃಷಿ, ಖಾಸಗಿ ವಲಯ ಮತ್ತು ಎಂ.ಎಸ್.ಎಂ.ಇ ವಲಯಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು ಉಜ್ವಲ ಭವಿಷ್ಯಕ್ಕಾಗಿ ಭಾರತದ ಯುವ ಜನರನ್ನು ಕೌಶಲ್ಯವಂತರನ್ನಾಗಿ ಮಾಡುವ ಅಗತ್ಯವಿದೆ. “ಇಂದು ಯುವ ಸಮೂಹಕ್ಕೆ ಕೌಶಲ್ಯ ಕಲ್ಪಿಸಲು ಒತ್ತು ನೀಡಲಾಗಿದೆ. ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ದೇಶದ ಅಗತ್ಯಗಳಿಗೆ ಅನುಗುಣವಾಗಿ ಯುವ ಜನಾಂಗಕ್ಕೆ ಕೌಶಲ್ಯ ಕಲ್ಪಿಸಲು ಬಹುದೊಡ್ಡ ಅಭಿಯಾನ ನಡೆಯುತ್ತಿದೆ” ಎಂದು ಹೇಳಿದರು. ಕೌಶಲ್ಯ ಅಭಿಯಾನದಡಿ 1.25 ಕೋಟಿ ಯುವ ಜನರಿಗೆ ತರಬೇತಿ ನೀಡಲಾಗಿದೆ. ದೇಶಾದ್ಯಂತ ಕೌಶಲ್ಯ ವಿಕಾಸ ಕೇಂದ್ರಗಳು ಮತ್ತು ನೂರಾರು ಶಿಕ್ಷಣ ಸಂಸ್ಥೆಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು. ಡ್ರೋನ್ ನೀತಿಯನ್ನು ಸರಳೀಕರಣಗೊಳಿಸಲಾಗಿದ್ದು, ಬಾಹ್ಯಾಕಾಶ ನೀತಿಯನ್ನು ಮುಕ್ತಗೊಳಿಸಲಾಗಿದೆ ಮತ್ತು ಮುದ್ರಾ ಯೋಜನೆಯಡಿ 20 ಲಕ್ಷ ಕೋಟಿ ರೂಪಾಯಿ ಮೊತ್ತದ ಸಾಲ ನೀಡಲಾಗಿದೆ. “ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ಸ್ವಯಂ ಉದ್ಯೋಗ ಕಲ್ಪಿಸುವ ಯೋಜನೆಯನ್ನು ದೇಶದಲ್ಲಿ ಜಾರಿಗೊಳಿಸಲಾಗಿದೆ” ಎಂದು ಹೇಳಿದರು.  

ಇದಲ್ಲದೇ ಸ್ವಸಹಾಯ ಗುಂಪುಗಳು ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕಾ ವಲಯದಲ್ಲಿ ಹಳ‍್ಳಿಗಳಲ್ಲಿ ಉದ್ಯೋಗ ಸೃಜನೆಯಾಗುತ್ತಿರುವುದು ಪ್ರಮುಖ ಉದಾಹರಣೆಯಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕಾ ವಲಯದಲ್ಲಿ ವಹಿವಾಟು 4 ಲಕ್ಷ ಕೋಟಿ ರೂಪಾಯಿ ದಾಟಿದೆ ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕಾ ವಲಯದಲ್ಲಿ 4 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. “ಇದರಲ್ಲಿ ನಮ್ಮ ಸಹೋದರಿಯರ ಪಾಲು ಹೆಚ್ಚಿದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.  

ಭಾರತದ ನವೋದ್ಯಮ ಅಭಿಯಾನ ಕುರಿತು ಪ್ರಧಾನಮಂತ್ರಿ ಅವರು ಮಾತನಾಡಿ, ಪ್ರಪಂಚದಾದ್ಯಂತ ಇರುವ ಭಾರತ ಯುವ ಸಮೂಹದ ಸಾಮರ್ಥ್ಯವನ್ನು ಇದು ನಿರೂಪಿಸಿದೆ. ಸಾಂಕ್ರಾಮಿಕ ಸಂದರ್ಭದಲ್ಲಿ ಎಂ.ಎಸ್.ಎಂ.ಇ ಕೂಡ ಇದೇ ರೀತಿಯಲ್ಲಿ ಬೆಂಬಲ ನೀಡಿದ್ದು, 1.5 ಕೋಟಿ ಉದ್ಯೋಗಗಳನ್ನು ರಕ್ಷಿಸಿದೆ. ದೇಶದಲ್ಲಿ ಮನ್ರೇಗಾ ಯೋಜನೆಯಡಿ 7 ಕೋಟಿ ರೂಪಾಯಿ ಮೊತ್ತದ ಉದ್ಯೋಗ ಸೃಜಿಸಲಾಗಿದೆ ಎಂದು ಹೇಳಿದರು.  

21 ನೇ ಶತಮಾನದ ಮಹತ್ವಾಕಾಂಕ್ಷೆಯ ಯೋಜನೆ ಎಂದರೆ “ಮೇಕ್ ಇನ್ ಇಂಡಿಯಾ” ಮತ್ತು ಆತ್ಮನಿರ್ಭರ್ ಭಾರತ್. ಇಂದು ದೇಶ ಬೆಳವಣಿಗೆಯಾಗುತ್ತಿದ್ದು, ಆಮದುದಾರನಿಂದ ರಫ್ತುದಾರನತ್ತ ಸಾಗುತ್ತಿದೆ. ಇಂತಹ ಹಲವಾರು ವಲಯಗಳಲ್ಲಿ ಭಾರತ ತ್ವರಿತವಾಗಿ ಜಾಗತಿಕ ತಾಣವಾಗಿ ಪರಿವರ್ತೆನಯಾಗುತ್ತಿದೆ. ದಾಖಲೆ ಪ್ರಮಾಣದ ರಫ್ತು ಚಟುವಟಿಕೆಗಳು ನಡೆಯುತ್ತಿದ್ದು, ಇದು ದೃಢವಾದ ಉದ್ಯೋಗ ಬೆಳವಣಿಗೆಯನ್ನು ಸೂಚಿಸುತ್ತವೆ ಎಂದು ಹೇಳಿದರು.

“ಉತ್ಪಾದನೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸರ್ಕಾರ ಸಮಗ್ರವಾಗಿ ಕೆಲಸ ಮಾಡುತ್ತಿದೆ. ಏಕೆಂದರೆ ಈ ಎರಡೂ ವಲಯಗಳು ದೊಡ್ಡ ಉದ್ಯೋಗ ಸೃಜಿಸುವ ಸಾಮರ್ಥ್ಯವನ್ನು ಹೊಂದಿವೆ” ಎಂದು ಹೇಳಿದರು. ಜಗತ್ತಿನಾದ್ಯಂತ ಇರುವ ಕಂಪೆನಿಗಳು ಭಾರತಕ್ಕೆ ಬಂದು ಕಾರ್ಖಾನೆಗಳನ್ನು ಆರಂಭಿಸಲು ಮತ್ತು ಜಾಗತಿಕ ಬೇಡಿಕೆಗಳನ್ನು ಪೂರೈಸಲು ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ. ಉತ್ಪಾದನೆ ಆಧಾರಿತವಾಗಿ  ಪಿಎಲ್ಐ ಯೋಜನೆಯಡಿ ಸರ್ಕಾರ ಪ್ರೋತ್ಸಾಹಧನ ನೀಡುತ್ತಿದೆ. ಹೆಚ್ಚು ಉತ್ಪಾದನೆ, ಹೆಚ್ಚು ಪ್ರೋತ್ಸಾಹಧನ, ಇದು ಭಾರತದ ನೀತಿಯಾಗಿದೆ. ಇದರ ಫಲಿತಾಂಶವನ್ನು ನಾವಿಂದು ಹಲವಾರು ವಲಯಗಳಲ್ಲಿ ಭೌತಿಕವಾಗಿ ನಾವು ನೋಡುತ್ತಿದ್ದೇವೆ. ಕಳೆದ ಕೆಲ ವರ್ಷಗಳಿಂದ ಬರುತ್ತಿರುವ ಇಪಿಎಫ‍್ಒ ದತ್ತಾಂಶಗಳು ಉದ್ಯೋಗಕ್ಕೆ ಸಂಬಂಧಿಸಿದ ಸರ್ಕಾರದ ನೀತಿಗಳ ಪರಿಸ್ಥಿತಿ ಎಷ್ಟು ಸುಧಾರಿಸಿದೆ ಎಂಬುದನ್ನು ತೋರಿಸುತ್ತದೆ. ಎರಡು ದಿನಗಳ ಹಿಂದೆ ಬಂದ ದತ್ತಾಂಶದ ಮಾಹಿತಿಯಂತೆ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಇಪಿಎಫ್ಒಗೆ 17 ಲಕ್ಷ ಜನ ಸೇರ್ಪಡೆಯಾಗಿದ್ದಾರೆ ಮತ್ತು ಇದು ದೇಶದ ಔಪಚಾರಿಕ ಆರ್ಥಿಕತೆಯ ಭಾಗವಾಗಿದೆ. ಇದರಲ್ಲಿ 8 ಲಕ್ಷ ಮಂದಿ 18 ರಿಂದ 25 ವರ್ಷ ವಯೋಮಿತಿಯವರು ಎಂದು ಹೇಳಿದರು.   

ಮೂಲ ಸೌಕರ್ಯ ಮೂಲಕ ಉದ್ಯೋಗ ಸೃಷ್ಟಿಸುವ ಆಯಾಮದ ಬಗ್ಗೆ ಪ್ರಧಾನಮಂತ್ರಿ ಅವರು ಬೆಳಕು ಚೆಲ್ಲಿದರು. ಕಳೆದ 8 ವರ್ಷಗಳಲ್ಲಿ ಸಹಸ್ರಾರು ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ ಮತ್ತು ರೈಲ್ವೆ ವಲಯದ ದ್ವಿಪಥ, ಗೇಜ್ ಪರಿವರ್ತನೆ ಹಾಗೂ ವಿದ್ಯುದೀಕರಣ ಕಾರ್ಯ ದೇಶದಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದರು.

ದೇಶದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದ್ದು, ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಮತ್ತು ಹೊಸ ಜಲ ಮಾರ್ಗಗಳನ್ನು ನಿರ್ಮಾಣ ಮಾಡಲಾಗುತ್ತಿದೆ. “ಪಿಎಂ ಆವಾಸ್ ಯೋಜನೆಯಡಿ ಮೂರು ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ” ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.  

ದೇಶದಲ್ಲಿ ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಜಿಸಲು ಕೇಂದ್ರ ಸರ್ಕಾರ ಹಲವು ವಲಯಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಮೂಲ ಸೌಕರ್ಯ ವಲಯದಲ್ಲಿ ಒಂದು ನೂರು ಲಕ್ಷ ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಭಾರತ ಸರ್ಕಾರ ಕೈಗೆತ್ತಿಕೊಂಡಿದೆ ಎಂದರು. ಸ್ಥಳೀಯ ಮಟ್ಟದಲ್ಲಿ ಯುವ ಜನಾಂಗಕ್ಕೆ ಲಕ್ಷಾಂತರ ಉದ್ಯೋಗಗಳನ್ನು ಸೃಜಿಸಲು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ದೇಶಾದ್ಯಂತ ನಂಬಿಕೆ, ಧಾರ್ಮಿಕತೆ ಮತ್ತು ಐತಿಹಾಸಿಕ ಮಹತ್ವದ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕೆಲಸಗಳಿಂದ ಆಧುನಿಕ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗಿದ್ದು, ಇದರಿಂದ ಪ್ರವಾಸೋದ್ಯಮ ವಲಯಕ್ಕೆ ಹೊಸ ಶಕ್ತಿ ನೀಡಿದಂತಾಗಿದೆ ಮತ್ತು ದೂರದ ಪ್ರದೇಶಗಳ ಜನರಿಗೆ ಉದ್ಯೋಗ ದೊರಕಿಸಿಕೊಟ್ಟಂತಾಗಿದೆ ಎಂದರು.

ಭಾರತದ ಬಹುದೊಡ್ಡ ಶಕ್ತಿ ರಾಷ್ಟ್ರದ ಯುವ ಸಮೂಹದಲ್ಲಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಮೃತ ಕಾಲದಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಯುವ ಸಮೂಹ ಪ್ರಮುಖ ಚಾಲನಾ ಶಕ್ತಿಯಾಗಿದೆ. ಹೊಸದಾಗಿ ನೇಮಕವಾದವರು ಕಚೇರಿಗಳ ಬಾಗಿಲುಗಳ ಬಳಿ ನಡೆದಾಡುವ  ಸಂದರ್ಭದಲ್ಲಿ “ಕರ್ತವ್ಯ ಪಥ”ವನ್ನು ಸದಾ ಕಾಲ ಮನಸ್ಸಿನಲ್ಲಿಟ್ಟುಕೊಳ್ಳಬೇಕು. “ರಾಷ್ಟ್ರದ ಸೇವೆ ಸಲ್ಲಿಸಲು ನಿಮ್ಮನ್ನು ನೇಮಕಮಾಡಲಾಗಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. 21 ನೇ ಶತಮಾನದಲ್ಲಿ ಭಾರತ ಸರ್ಕಾರದ ಉದ್ಯೋಗ ಎಂದರೆ ಅದು ಸೌಲಭ್ಯವಲ್ಲ, ಬದ್ಧತೆಯಾಗಿದೆ ಮತ್ತು ಕಾಲಮಿತಿಯಲ್ಲಿ ದೇಶದ ಪ್ರತಿಯೊಂದು ಮೂಲೆ ಮೂಲೆಯಲ್ಲಿರುವವರಿಗೆ ಸೇವೆ ಸಲ್ಲಿಸಲು ಇದು ಸುವರ್ಣಾವಕಾಶ ಎಂದು ಪ್ರಧಾನಮಂತ್ರಿ ಅವರು ತಮ್ಮ ಭಾಷಣ ಪೂರ್ಣಗೊಳಿಸಿದರು.  

ಹಿನ್ನೆಲೆ

ನಾಗರಿಕರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳುವ ಮತ್ತು ಯುವ ಜನಾಂಗಕ್ಕೆ ಉದ್ಯೋಗಾವಕಾಶ ಕಲ್ಪಿಸುವ ಪ್ರಧಾನಮಂತ್ರಿ ಅವರ ನಿರಂತರ ಬದ್ಧತೆಯನ್ನು ಪೂರ್ಣಗೊಳಿಸಲು ಇಂದಿನ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದೆ. ಪ್ರಧಾನಮಂತ್ರಿ ಅವರ ನಿರ್ದೇಶನದ ಹಿನ್ನೆಲೆಯಲ್ಲಿ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಅಸ್ಥಿತ್ವದಲ್ಲಿರುವ ಹುದ್ದೆಗಳನ್ನು ಭರ್ತಿ ಮಾಡಲು ಕೆಲಸ ಮಾಡುತ್ತಿವೆ.   

ದೇಶಾದ್ಯಂತ ಭಾರತ ಸರ್ಕಾರದ 38 ಸಚಿವಾಲಯಗಳು/ಇಲಾಖೆಗಳಲ್ಲಿ ಆಯ್ಕೆಯಾದವರು, ಹೊಸದಾಗಿ ನೇಮಕಗೊಂಡವರಾಗಿದ್ದಾರೆ. ಗ್ರೂಪ್ – ಎ, ಗ್ರೂಪ್ – ಬಿ [ಗೆಜೆಟೆಡ್], ಗ್ರೂಪ್ -ಬಿ [ಗೆಜೆಟೆಡ್ ಅಲ್ಲದ] ಮತ್ತು ಗ್ರೂಪ್ -ಸಿ ಹುದ್ದೆಗಳಿಗೆ ನೇಮಕಗೊಂಡಿದ್ದಾರೆ. ಕೇಂದ್ರೀಯ ಸಶಸ್ತ ಪಡೆಗಳು, ಸಬ್ ಇನ್ಸ್ ಪೆಕ್ಟರ್, ಪೇದೆಗಳು, ಎಲ್.ಡಿ.ಸಿ, ಶೀಘ್ರಲಿಪಿಗಾರರು, ಆಪ್ರ ಸಹಾಯಕರು, ಆದಾಯ ತೆರಿಗೆ ಇಲಾಖೆ ಇನ್ಸ್ ಪೆಕ್ಟ್ರರ್ ಗಳು ಮತ್ತು ಎಂ.ಟಿ.ಎಸ್ ಮತ್ತಿತತರ ಹುದ್ದೆಗಳಿಗೆ ನೇಮಕವಾಗಿದ್ದಾರೆ.

ಅಭಿಯಾನದ ಮಾದರಿಯಲ್ಲಿ ಸಚಿವಾಲಯಗಳು ಮತ್ತು ಇಲಾಖೆಗಳು ಅಥವಾ ನೇಮಕಾತಿ ಸಂಸ್ಥೆಗಳಾದ ಯು.ಪಿ.ಎಸ್.ಸಿ, ಎಸ್.ಎಸ್.ಸಿ ಮತ್ತು ರೈಲ್ವೆ ನೇಮಕಾತಿ ಮಂಡಳಿಗಳಿಂದ ನೇಮಕಾತಿ ಮಾಡಿಕೊಳ್ಳಲಾಗಿದೆ. ಆಯ್ಕೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ ಮತ್ತು ನೇಮಕಾತಿಗಾಗಿ ತಂತ್ರಜ್ಞಾನವನ್ನು ಸಕ್ರಿಯಗೊಳಿಸಲಾಗಿದೆ.

*****