ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಹೋಮಿಯೋಪತಿ ಮತ್ತು ಸಾಂಪ್ರದಾಯಿಕ ವೈದ್ಯ ಪದ್ಧತಿಯ ಸಹಕಾರಕ್ಕಾಗಿ ಭಾರತ ಗಣರಾಜ್ಯ ಸರ್ಕಾರದ ಆಯುಷ್ ಸಚಿವಾಲಯ ಮತ್ತು ಪ್ರಜಾಪ್ರಭುತ್ವ ಸಮಾಜವಾದಿ ಗಣರಾಜ್ಯ ಶ್ರೀಲಂಕಾ ಸರ್ಕಾರದ ಆರೋಗ್ಯ, ಪೌಷ್ಟಿಕತೆ ಮತ್ತು ದೇಶೀಯ ಔಷಧ ಸಚಿವಾಲಯದ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಈ ತಿಳಿವಳಿಕೆ ಒಪ್ಪಂದಕ್ಕೆಅಂಕಿತ ಹಾಕುವುದರಿಂದ ಎರಡೂ ರಾಷ್ಟ್ರಗಳ ನಡುವೆ ಸಾಂಪ್ರದಾಯಿಕ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ ಹೆಚ್ಚಿಸಲಿದೆ. ಇದು ಸಂಸ್ಕೃತಿ ಪರಂಪರೆಯನ್ನು ಹಂಚಿಕೊಂಡಿರುವ ಎರಡೂ ದೇಶಗಳ ನಡುವೆ ಮಹತ್ವವನ್ನು ಪಡೆದಿದೆ.
ಇದರಲ್ಲಿ ಯಾವುದೇ ಹೆಚ್ಚುವರಿ ಆರ್ಥಿಕ ಪರಿಣಾಮ ಇರುವುದಿಲ್ಲ. ಸಂಶೋಧನೆ, ತರಭೇತಿ ಕೋರ್ಸ್, ಸಮಾವೇಶ/ಸಭೆಗಳನ್ನು ನಡೆಸಲು ಆಗುವ ವೆಚ್ಚವನ್ನು ಆಯುಷ್ ಸಚಿವಾಲಯಕ್ಕೆ ಆಯವ್ಯಯದಲ್ಲಿ ಹಂಚಿಕೆ ಮಾಡಲಾಗಿರುವ ಹಾಲಿ ಹಣದಲ್ಲಿಯೇ ಭರಿಸಲಾಗುವುದು.
ಎರಡೂ ಕಡೆಗಳ ನಡುವಿನ ಚಟುವಟಿಕೆಗಳು ಈ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿದ ಕೂಡಲೇ ಆರಂಭವಾಗಲಿವೆ. ಎರಡು ದೇಶಗಳ ನಡುವೆ ತೆಗೆದುಕೊಳ್ಳಲಾದ ಉಪಕ್ರಮಗಳು ತಿಳಿವಳಿಕೆ ಒಪ್ಪಂದಕ್ಕೆಸಹಿ ಹಾಕಿದ ಉಲ್ಲೇಖದ ಪ್ರಕಾರವಾಗಿರುತ್ತವೆ ಮತ್ತು ತಿಳಿವಳಿಕೆ ಒಪ್ಪಂದ ಕಾರ್ಯಾಚರಣೆಯಲ್ಲಿರುವತನಕ ಪ್ರಕ್ರಿಯೆಗಳು ಮುಂದುವರಿಯುತ್ತವೆ.
ಹಿನ್ನೆಲೆ:
ಭಾರತವು ಔಷಧೀಯ ಸಸ್ಯಗಳನ್ನೂ ಒಳಗೊಂಡಂತೆ ಅತ್ಯಂತ ಸೂಕ್ತವಾಗಿ ಅಭಿವೃದ್ಧಿ ಹೊಂದಿದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಿಂದ ಹರಸಲ್ಪಟ್ಟಿದೆ, ಇದು ಜಾಗತಿಕ ಆರೋಗ್ಯ ಸನ್ನಿವೇಶದಲ್ಲಿ ಅತ್ಯಂತ ಹೆಚ್ಚು ಸಾಮರ್ಥ್ಯವನ್ನು ಹೊಂದಿದೆ. ಶ್ರೀಲಂಕಾ ಕೂಡ ಸಾಂಪ್ರದಾಯಿಕ ವೈದ್ಯಪದ್ಧತಿಯಲ್ಲಿ ದೀರ್ಘ ಇತಿಹಾಸ ಹೊಂದಿದೆ. ಆಯುರ್ವೇದ, ಸಿದ್ಧ, ಯುನಾನಿ, ಯೋಗ ಮತ್ತು ನೈಸರ್ಗಿಕ ಚಿಕಿತ್ಸೆ ಹಾಗೂ ಹೋಮಿಯೋಪತಿ ಶ್ರೀಲಂಕಾದಲ್ಲಿ ಅಸ್ತಿತ್ವದಲ್ಲಿರುವ ಪ್ರಮುಖ ಸಾಂಪ್ರದಾಯಿಕ ವೈದ್ಯ ಸೇವಾ ಪದ್ಧತಿಗಳಾಗಿವೆ. ಎರಡೂ ದೇಶಗಳು ಆಯುರ್ವೇದ, ಸಿದ್ಧ ಮತ್ತು ಯುನಾನಿ ವೈದ್ಯ ಪದ್ಧತಿಗೆ ಸಂಬಂಧಿಸಿದಂತೆ ಸಮಾನವಾದ ಸಂಸ್ಕೃತಿಯನ್ನು ಹೊಂದಿವೆ. ಮಿಗಿಲಾಗಿ, ಉಷ್ಣವಲಯದಲ್ಲಿ ಕಂಡುಬರುವ ದೊಡ್ಡ ಸಂಖ್ಯೆಯ ಔಷಧೀಯ ಸಸ್ಯಗಳು, ಸಮಾನ ಭೂ ಹವಾಮಾನದ ಕಾರಣದಿಂದ ಎರಡೂ ದೇಶಗಳಲ್ಲಿ ಸಮಾನವಾಗಿವೆ.
ಭಾರತ ಮತ್ತು ಶ್ರೀಲಂಕಾ ಹಲವು ಸಾಂಸ್ಕೃತಿಕ, ಐತಿಹಾಸಿಕ, ಭಾಷಿಕ ಮತ್ತು ಸಾಹಿತ್ಯ ಸಮಾನತೆಯನ್ನು ಹೊಂದಿವೆ. ಎರಡೂ ದೇಶಗಳ ನಡುವಿನ ವಿನಿಮಯಿತ ಸಂಸ್ಕೃತಿ, ನಾಗರಿಕತೆಯ ಪರಂಪರೆ, ಮತ್ತು ಎರಡೂ ದೇಶಗಳ ಜನರ ನಡುವಿನ ವ್ಯಾಪಕ ಬಾಂಧವ್ಯ ಮತ್ತು ಸೌಹಾರ್ದಯುತವಾದ ದ್ವಿಪಕ್ಷೀಯ ಬಾಂಧವ್ಯವು ಬಹುಮುಖಿ ಪಾಲುದಾರಿಕೆಯನ್ನು ಕಟ್ಟಲು ಬುನಾದಿಯಾಗಿವೆ.
ಆಯುಷ್ಸಚಿವಾಲಯವು ಭಾರತೀಯ ವೈದ್ಯ ಪದ್ಧತಿಗಳನ್ನು ಜಾಗತಿಕವಾಗಿ ಪ್ರಸಾರ ಮಾಡುವ ತನ್ನ ಕಾರ್ಯಕ್ರಮದ ಅಂಗವಾಗಿ 11 ರಾಷ್ಟ್ರಗಳೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿದೆ. ಅವುಗಳೆಂದರೆ ಚೈನಾ ಪ್ರಜಾ ಗಣರಾಜ್ಯದ ಸಾಂಪ್ರದಾಯಿಕ ಚೈನದ ವೈದ್ಯ ಪದ್ಧತಿಯ ರಾಜ್ಯ ಆಡಳಿತ (ಎಸ್.ಎ.ಟಿ.ಸಿ.ಎಂ.); ಮಲೇಷಿಯಾ ಸರ್ಕಾರ;ಟ್ರಿನಿಡ್ಯಾಡ್ ಮತ್ತು ಟೊಬ್ಯಾಗೋ ಗಣರಾಜ್ಯ ಸರ್ಕಾರದ ಆರೋಗ್ಯ ಸಚಿವಾಲಯ; ಹಂಗರಿ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯ; ಬಾಂಗ್ಲಾ ಪ್ರಜಾ ಗಣರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ; ನೇಪಾಳ ಸರ್ಕಾರದ ಆರೋಗ್ಯ ಮತ್ತು ಜನಸಂಖ್ಯೆ ಸಚಿವಾಲಯ; ಮಾರಿಷಸ್ ಸರ್ಕಾರದ ಜೀವನ ಗುಣಮಟ್ಟ ಮತ್ತು ಆರೋಗ್ಯ ಸಚಿವಾಲಯ; ಮಂಗೋಲಿಯಾ ಸರ್ಕಾರದ ಆರೋಗ್ಯ ಮತ್ತು ಕ್ರೀಡಾ ಸಚಿವಾಲಯ;ತುರ್ಕ್ಮೇನಿಸ್ತಾನ ಸರ್ಕಾರದ ಆರೋಗ್ಯ ಮತ್ತು ಔಷಧ ಕೈಗಾರಿಕೆ ಸಚಿವಾಲಯ;ಮ್ಯಾನ್ಮಾರ್ ಸರ್ಕಾರದ ಆರೋಗ್ಯ ಮತ್ತು ಕ್ರೀಡಾ ಸಚಿವಾಲಯ ಮತ್ತು ಜರ್ಮನಿ ಗಣರಾಜ್ಯ ಒಕ್ಕೂಟದ ಆರೋಗ್ಯ ಸಚಿವಾಲಯದೊಂದಿಗೆ ಜಂಟಿ ಘೋಷಣೆಯೊಂದಿಗೆ ಸಾಂಪ್ರದಾಯಿಕ ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರದ ಉದ್ದೇಶ ಹೊಂದಿದೆ.
*****
KSD/VBA/SH-