ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸ ಸಂಸತ್ ಕಟ್ಟಡ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ 2021ರ ಸೆಪ್ಟೆಂಬರ್ 26ರಂದು ಸಂಜೆ ಭೇಟಿ ನೀಡಿ, ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.
ಸ್ಥಳದಲ್ಲಿ ನಡೆಯುತ್ತಿರುವ ಕಾಮಗಾರಿ ಪ್ರಗತಿಯನ್ನು ಖಚಿತಪಡಿಸಿಕೊಂಡ ಪ್ರಧಾನಮಂತ್ರಿಯವರು, ಯೋಜನೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಒತ್ತು ನೀಡುವಂತೆ ಸೂಚಿಸಿದರು. ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರೊಂದಿಗೆ ಸಂವಾದ ನಡೆಸಿ, ಅವರ ಯೋಗಕ್ಷೇಮವನ್ನು ಪ್ರಧಾನಿ ವಿಚಾರಿಸಿದರು. ಕಾರ್ಮಿಕರು ಪವಿತ್ರ ಮತ್ತು ಐತಿಹಾಸಿಕ ಕೆಲಸದಲ್ಲಿ ತೊಡಗಿದ್ದಾರೆ ಎಂದು ಪ್ರಧಾನಿ ಬಣ್ಣಿಸಿದರು.
ಕಾಮಗಾರಿ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಮಿಕರೂ ಕೋವಿಡ್ ಪ್ರತಿರೋಧ ಲಸಿಕೆ ಪಡೆದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪ್ರಧಾನಿ ಸೂಚನೆ ನೀಡಿದರು. ಎಲ್ಲಾ ಕಾರ್ಮಿಕರಿಗೆ ಮಾಸಿಕ ಆರೋಗ್ಯ ತಪಾಸಣೆ ನಡೆಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ, ಕಾಮಗಾರಿಯಲ್ಲಿ ತೊಡಗಿರುವ ಎಲ್ಲಾ ನಿರ್ಮಾಣ ಕಾರ್ಮಿಕರ ಡಿಜಿಟಲ್ ಆರ್ಕೈವ್ ಅನ್ನು ಸ್ಥಾಪಿಸಬೇಕು, ಇದು ಅವರ ಹೆಸರು, ಅವರ ಮೂಲ ಸ್ಥಳದ ಹೆಸರು, ಅವರ ಚಿತ್ರ ಸೇರಿದಂತೆ ಅವರ ವೈಯಕ್ತಿಕ ವಿವರಗಳನ್ನು ಪ್ರತಿಬಿಂಬಿಸಬೇಕು ಮತ್ತು ನಿರ್ಮಾಣ ಕೆಲಸಕ್ಕೆ ಅವರ ಕೊಡುಗೆಯನ್ನು ಗುರುತಿಸಬೇಕು ಎಂದು ಪ್ರಧಾನಿ ಹೇಳಿದರು. ಇದಲ್ಲದೆ, ಈ ಚಾರಿತ್ರಿಕ ಕಾರ್ಯದಲ್ಲಿ ಕಾರ್ಮಿಕರ ಪಾತ್ರ ಮತ್ತು ಪಾಲ್ಗೊಳ್ಳುವಿಕೆಯ ಬಗ್ಗೆ ವಿವಿರಿಸುವ ಪ್ರಮಾಣಪತ್ರವನ್ನು ಎಲ್ಲಾ ಕಾರ್ಮಿಕರಿಗೆ ನೀಡಬೇಕು ಎಂದರು.
ಪ್ರಧಾನಮಂತ್ರಿಯವರು ಕನಿಷ್ಠ ಭದ್ರತಾ ವ್ಯವಸ್ಥೆಯೊಂದಿಗೆ ಅಚ್ಚರಿಯ ಭೇಟಿ ನೀಡಿದರು. ಅವರು ಸ್ಥಳದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಕಳೆದರು.
***