Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹೊಸದಿಲ್ಲಿಯ ಭಾರತ ಮಂಟಪದಲ್ಲಿ ವಿಶ್ವ ಪರಂಪರೆ ಸಮಿತಿಯ 46ನೇ ಅಧಿವೇಶನ ಉದ್ಘಾಟಿಸಿದ ಪ್ರಧಾನಮಂತ್ರಿ

ಹೊಸದಿಲ್ಲಿಯ ಭಾರತ ಮಂಟಪದಲ್ಲಿ ವಿಶ್ವ ಪರಂಪರೆ ಸಮಿತಿಯ 46ನೇ ಅಧಿವೇಶನ ಉದ್ಘಾಟಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯ ಭಾರತ ಮಂಟಪದಲ್ಲಿ ವಿಶ್ವ ಪರಂಪರೆ ಸಮಿತಿಯ 46ನೇ ಅಧಿವೇಶನವನ್ನು ಉದ್ಘಾಟಿಸಿದರು. ವಿಶ್ವ ಪರಂಪರೆ ಸಮಿತಿಯು ವಾರ್ಷಿಕವಾಗಿ ಸಭೆ ಸೇರುತ್ತದೆ ಮತ್ತು ವಿಶ್ವ ಪರಂಪರೆಯ ಎಲ್ಲಾ ವಿಷಯಗಳನ್ನು ನಿರ್ವಹಿಸುವ ಹಾಗು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಮೂಡಿಸಬೇಕಾದ/ಸೇರಿಸಬೇಕಾದ  ಸ್ಥಳಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ಹೊಂದಿದೆ. ಭಾರತವು ಮೊದಲ ಬಾರಿಗೆ ವಿಶ್ವ ಪರಂಪರೆ ಸಮಿತಿ ಸಭೆಯನ್ನು ಆಯೋಜಿಸುತ್ತಿದೆ. ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಿವಿಧ ವಸ್ತುಪ್ರದರ್ಶನಗಳನ್ನು  ಪ್ರಧಾನಮಂತ್ರಿಯವರು ವೀಕ್ಷಿಸಿದರು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಗುರು ಪೂರ್ಣಿಮೆಯ ಶುಭ ಸಂದರ್ಭವನ್ನು ಉಲ್ಲೇಖಿಸಿದರು ಮತ್ತು ಎಲ್ಲ ನಾಗರಿಕರಿಗೆ ಶುಭ ಕೋರಿದರು. ವಿಶ್ವ ಪರಂಪರೆ ಸಮಿತಿಯ ಸಭೆ ಇಂತಹ ಶುಭ ದಿನದಂದು ಪ್ರಾರಂಭವಾಗುತ್ತಿರುವುದಕ್ಕೆ ಮತ್ತು ಭಾರತವು ಮೊದಲ ಬಾರಿಗೆ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು. ವಿಶ್ವದಾದ್ಯಂತದ ಎಲ್ಲ ಗಣ್ಯರು ಮತ್ತು ಅತಿಥಿಗಳಿಗೆ, ವಿಶೇಷವಾಗಿ ಯುನೆಸ್ಕೋದ ಮಹಾನಿರ್ದೇಶಕಿ ಶ್ರೀಮತಿ ಆಡ್ರೆ ಅಝೌಲೆ ಅವರಿಗೆ ಪ್ರಧಾನಮಂತ್ರಿಯವರು ಆತ್ಮೀಯ ಸ್ವಾಗತ ಕೋರಿದರು ಮತ್ತು ವಿಶ್ವ ಪರಂಪರೆ ಸಮಿತಿಯ ಸಭೆ ಭಾರತದಲ್ಲಿ ನಡೆದ ಇತರ ಜಾಗತಿಕ ಸಭೆಗಳಂತೆಯೇ ಇತಿಹಾಸದಲ್ಲಿ ಹೊಸ ದಾಖಲೆಗಳನ್ನು ಬರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿದೇಶದಿಂದ ಹಿಂದಿರುಗಿ ತರಲ್ಪಟ್ಟ ಕಲಾಕೃತಿಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇತ್ತೀಚಿನ ದಿನಗಳಲ್ಲಿ 350 ಕ್ಕೂ ಹೆಚ್ಚು ಪಾರಂಪರಿಕ ವಸ್ತುಗಳನ್ನು ಮರಳಿ ತರಲಾಗಿದೆ ಎಂದರು. “ಪ್ರಾಚೀನ ಪರಂಪರೆಯ ಕಲಾಕೃತಿಗಳ ಮರಳಿ ತರುವಿಕೆ ಜಾಗತಿಕ ಔದಾರ್ಯ ಮತ್ತು ಇತಿಹಾಸದ ಮೇಲಿನ ಗೌರವದ ಪ್ರತೀಕವಾಗಿದೆ” ಎಂದು ಪ್ರಧಾನಿ ಹೇಳಿದರು. ತಂತ್ರಜ್ಞಾನ ಮುಂದುವರೆದಂತೆ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸಂಶೋಧನೆ ಮತ್ತು ಪ್ರವಾಸೋದ್ಯಮ ಅವಕಾಶಗಳ ಬಗ್ಗೆಯೂ ಅವರು ಗಮನಸೆಳೆದರು.

ವಿಶ್ವ ಪರಂಪರೆ ಸಮಿತಿಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಈ ಕಾರ್ಯಕ್ರಮವನ್ನು ಆಯೋಜಿಸುವುದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು. ಈಶಾನ್ಯ ಭಾರತದ ಐತಿಹಾಸಿಕ ಮೈದಾಮ್ ನ್ನು ಯುನೆಸ್ಕೋದ ಜನಪ್ರಿಯ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲು ನಾಮನಿರ್ದೇಶನ ಮಾಡಲಾಗಿದೆ ಎಂದು ಅವರು ಒತ್ತಿ ಹೇಳಿದರು. “ಇದು ಭಾರತದ 43 ನೇ ವಿಶ್ವ ಪರಂಪರೆಯ ತಾಣವಾಗಿದೆ ಮತ್ತು ಸಾಂಸ್ಕೃತಿಕ ವಿಶ್ವ ಪರಂಪರೆಯ ಸ್ಥಾನಮಾನವನ್ನು ಪಡೆದ ಈಶಾನ್ಯ ಭಾರತದ ಮೊದಲ ಪರಂಪರೆಯಾಗಿದೆ” ಎಂದು ಶ್ರೀ ಮೋದಿ ಹೇಳಿದರು, ವಿಶಿಷ್ಟ ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವ ಮೈದಾಮ್ ( ಮೃತರನ್ನು ಹೂಳಿದ ವಿಶಿಷ್ಟ ರಚನೆಗಳು) ಹೆಚ್ಚು ಜನಪ್ರಿಯವಾಗಲಿದೆ ಮತ್ತು ಪಟ್ಟಿಯಲ್ಲಿ ಸ್ಥಾನ ಪಡೆದ ನಂತರ ಹೆಚ್ಚಿನ ಆಕರ್ಷಣೆಯನ್ನು ಪಡೆಯುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ವಿಶ್ವದಾದ್ಯಂತದ ತಜ್ಞರ ಉಪಸ್ಥಿತಿಯು ಶೃಂಗಸಭೆಯ ವ್ಯಾಪ್ತಿ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಎಂದು ಪ್ರಧಾನಿ ಹೇಳಿದರು. ವಿಶ್ವದ ಅತ್ಯಂತ ಹಳೆಯ ಜೀವಂತ ನಾಗರಿಕತೆಗಳಲ್ಲಿ ಒಂದಾದ ನೆಲದಲ್ಲಿ/ಭೂಮಿಯಲ್ಲಿ ಇದನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಜಗತ್ತು ವಿವಿಧ ಪರಂಪರೆಯ ಕೇಂದ್ರಗಳನ್ನು ಹೊಂದಿದೆ ಎಂದು ಹೇಳಿದ ಪ್ರಧಾನಿ, ಭಾರತದ ಪ್ರಾಚೀನ ಯುಗಗಳ ಬಗ್ಗೆ ಬೆಳಕು ಚೆಲ್ಲಿದರು ಮತ್ತು “ಭಾರತವು ಎಷ್ಟು ಪ್ರಾಚೀನವಾಗಿದೆಯೆಂದರೆ, ಪ್ರಸ್ತುತ ಕ್ಷಣದ ಪ್ರತಿಯೊಂದು ಸಮಯವೂ ಅದರ ಭವ್ಯವಾದ ಗತಕಾಲದ ಪ್ರತಿಬಿಂಬವಾಗಿದೆ” ಎಂದು ಹೇಳಿದರು. ಭಾರತದ ರಾಜಧಾನಿ ಹೊಸದಿಲ್ಲಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇದು ಸಾವಿರಾರು ವರ್ಷಗಳ ಪರಂಪರೆಯ ಕೇಂದ್ರವಾಗಿದೆ ಮತ್ತು ಇಲ್ಲಿ ಪ್ರತಿಯೊಂದು ಹಂತದಲ್ಲೂ ಪರಂಪರೆ ಮತ್ತು ಇತಿಹಾಸವನ್ನು ಕಾಣಬಹುದು ಎಂದರು. ಅವರು 2000 ವರ್ಷಗಳಷ್ಟು ಹಳೆಯದಾದ ಕಬ್ಬಿಣದ ಸ್ತಂಭದ ಉದಾಹರಣೆಯನ್ನು ನೀಡಿದರು, ಇದು ತುಕ್ಕು ನಿರೋಧಕವಾಗಿದೆ ಮತ್ತು ಹಿಂದೆ ಭಾರತದ ಲೋಹಶಾಸ್ತ್ರದ ಪ್ರಾವಿಣ್ಯದ ಒಂದು ನೋಟವನ್ನು ನೀಡುತ್ತದೆ. “ಭಾರತದ ಪರಂಪರೆ ಕೇವಲ ಇತಿಹಾಸವಲ್ಲ, ವಿಜ್ಞಾನವೂ ಆಗಿದೆ” ಎಂದು ಅವರು ಹೇಳಿದರು. 8 ನೇ ಶತಮಾನದ ಕೇದಾರನಾಥ ದೇವಾಲಯವು 3500 ಮೀಟರ್ ಎತ್ತರದಲ್ಲಿದೆ, ಇದು ಚಳಿಗಾಲದಲ್ಲಿ ನಿರಂತರ ಹಿಮಪಾತದಿಂದಾಗಿ ಇಂದು ಮೂಲಸೌಕರ್ಯ ಅಭಿವೃದ್ಧಿಗೆ ಸವಾಲಿನ ಸ್ಥಳವಾಗಿ ಉಳಿದಿದೆ ಎಂದು ಅವರು ಉಲ್ಲೇಖಿಸಿದರು. ರಾಜ ಚೋಳನು ನಿರ್ಮಿಸಿದ ದಕ್ಷಿಣ ಭಾರತದ ಬೃಹದೀಶ್ವರ ದೇವಾಲಯ ಮತ್ತು ಅದರ ಅದ್ಭುತ ವಾಸ್ತುಶಿಲ್ಪ ವಿನ್ಯಾಸ ಮತ್ತು ವಿಗ್ರಹದ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಗುಜರಾತ್ ಧೋಲಾವಿರಾ ಮತ್ತು ಲೋಥಾಲ್ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು. ಧೋಲಾವಿರಾ, ಕ್ರಿ.ಪೂ 3000 ರಿಂದ ಕ್ರಿ.ಪೂ 1500 ರವರೆಗೆ ಪ್ರಾಚೀನ ನಗರ ಯೋಜನೆ ಮತ್ತು ನೀರಿನ ನಿರ್ವಹಣಾ ವ್ಯವಸ್ಥೆಗಳಿಗೆ ಹೆಸರುವಾಸಿಯಾಗಿದೆ. ಅಂತೆಯೇ, ಲೋಥಾಲ್ ಕೋಟೆ ಅದ್ಭುತ ಯೋಜನೆಯ ತೊಟ್ಟಿಲಾಗಿತ್ತು ಹಾಗು  ಬೀದಿಗಳು ಮತ್ತು ಒಳಚರಂಡಿಯ ವಿಸ್ತಾರವಾದ ಜಾಲವನ್ನು ಹೊಂದಿತ್ತು ಎಂಬುದರತ್ತ ಅವರು ಬೆಳಕು ಚೆಲ್ಲಿದರು.

“ಭಾರತದ ಇತಿಹಾಸ ಮತ್ತು ಇತಿಹಾಸ ಪ್ರಜ್ಞೆ ಸಾಮಾನ್ಯಕ್ಕಿಂತ ಹಳೆಯದು ಮತ್ತು ಹೆಚ್ಚು ವಿಸ್ತಾರವಾಗಿದೆ, ಇದು ತಾಂತ್ರಿಕ ಬೆಳವಣಿಗೆಗಳು ಮತ್ತು ಹೊಸ ಆವಿಷ್ಕಾರಗಳೊಂದಿಗೆ ಭೂತಕಾಲವನ್ನು ನೋಡಲು ಹೊಸ ದೃಷ್ಟಿಕೋನಗಳ ಅಗತ್ಯವನ್ನು ಹುಟ್ಟು ಹಾಕಿದೆ”  ಎಂದು ಪ್ರಧಾನಿ ಪ್ರತಿಪಾದಿಸಿದರು. ಉತ್ತರ ಪ್ರದೇಶದ ಸಿನೌಲಿಯ ಸಂಶೋಧನೆಗಳನ್ನು ಉಲ್ಲೇಖಿಸಿದ ಅವರು, ತಾಮ್ರದ ಯುಗದ ಸಂಶೋಧನೆಗಳು ಸಿಂಧೂ ಕಣಿವೆ ನಾಗರೀಕತೆಗಿಂತ ವೈದಿಕ ಯುಗಕ್ಕೆ ಹತ್ತಿರವಾಗಿವೆ ಎಂದರು. ಅವರು 4000 ವರ್ಷಗಳಷ್ಟು ಹಳೆಯದಾದ ಕುದುರೆ ಚಾಲಿತ ರಥದ ಆವಿಷ್ಕಾರದ ಬಗ್ಗೆಯೂ  ಮಾತನಾಡಿದರು. ಇಂತಹ ಸಂಶೋಧನೆಗಳು ಭಾರತವನ್ನು ತಿಳಿದುಕೊಳ್ಳಲು, ಪೂರ್ವಾಗ್ರಹ ಮುಕ್ತ ಹೊಸ ಪರಿಕಲ್ಪನೆಗಳ ಅಗತ್ಯವನ್ನು ಪ್ರತಿಪಾದಿಸುತ್ತವೆ ಎಂದೂ ಹೇಳಿದ ಪ್ರಧಾನಿ ಅವರು , ಈ ಹೊಸ ಪ್ರವಾಹದ ಭಾಗವಾಗಲು ಸಭಿಕರನ್ನು ಆಹ್ವಾನಿಸಿದರು.

ಪರಂಪರೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, “ಪರಂಪರೆ ಕೇವಲ ಇತಿಹಾಸವಲ್ಲ. ಬದಲಾಗಿ ಮಾನವೀಯತೆಯ ಹಂಚಿಕೆಯ ಪ್ರಜ್ಞೆ. ನಾವು ಐತಿಹಾಸಿಕ ತಾಣಗಳನ್ನು ನೋಡಿದಾಗಲೆಲ್ಲಾ, ಅದು ಪ್ರಸ್ತುತ ಭೌಗೋಳಿಕ-ರಾಜಕೀಯ ಅಂಶಗಳಿಂದ ನಮ್ಮ ಮನಸ್ಸನ್ನು ಮೇಲಕ್ಕೆತ್ತುತ್ತದೆ ಎಂದರು.  ಪರಂಪರೆಯ ಸಾಮರ್ಥ್ಯವನ್ನು ವಿಶ್ವದ ಒಳಿತಿಗಾಗಿ ಬಳಸುವಂತೆ ಜನರನ್ನು ಪ್ರೋತ್ಸಾಹಿಸಿದರು, ಅದಕ್ಕೆ  ಹೃದಯಗಳನ್ನು ಜೋಡಿಸುವ  ಸಾಮರ್ಥ್ಯ ಇದೆ ಎಂದರು.  “46 ನೇ ವಿಶ್ವ ಪರಂಪರೆ ಸಮಿತಿಯ ಸಭೆಯ ಮೂಲಕ ಪರಸ್ಪರರ ಪರಂಪರೆಯನ್ನು ಉತ್ತೇಜಿಸಲು ಮತ್ತು ಮಾನವ ಕಲ್ಯಾಣದ ಮನೋಭಾವವನ್ನು ಹೆಚ್ಚಿಸಲು, ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗು ಅಧಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಒಗ್ಗೂಡುವುದಕ್ಕೆ ಇದು ಜಗತ್ತಿಗೆ ಭಾರತದ ಸ್ಪಷ್ಟ ಕರೆಯಾಗಿದೆ” ಎಂದೂ  ಶ್ರೀ ಮೋದಿ ನುಡಿದರು.  

ಅಭಿವೃದ್ಧಿಯ ಅನ್ವೇಷಣೆಯಲ್ಲಿ ಪರಂಪರೆಯನ್ನು ನಿರ್ಲಕ್ಷಿಸಿದ ಕಾಲಘಟ್ಟವನ್ನು  ಸ್ಮರಿಸಿದ ಪ್ರಧಾನಮಂತ್ರಿಯವರು, ಇಂದು ಭಾರತದ ದೃಷ್ಟಿಕೋನವು ಅಭಿವೃದ್ಧಿ ಮತ್ತು ಪರಂಪರೆಯನ್ನು ಸಮ್ಮಿಳಿತಗೊಳಿಸಿಕೊಂಡಿದೆ ಎಂದರು. ಅದು ವಿಕಾಸ್ ಭಿ ವಿರಾಸತ್ ಭಿ ಆಗಿದೆ. ಕಳೆದ 10 ವರ್ಷಗಳಲ್ಲಿ ಪರಂಪರೆಯ ಪ್ರತಿಜ್ಞೆಯ ಬಗ್ಗೆ ಮೂಡಿರುವ  ಹೆಮ್ಮೆಯನ್ನು ವಿವರಿಸಿದ ಪ್ರಧಾನಮಂತ್ರಿಯವರು, ಕಾಶಿ ವಿಶ್ವನಾಥ ಕಾರಿಡಾರ್, ಶ್ರೀ ರಾಮ ಮಂದಿರ, ಪ್ರಾಚೀನ ನಳಂದ ವಿಶ್ವವಿದ್ಯಾಲಯದ ಆಧುನಿಕ ಕ್ಯಾಂಪಸ್ ನಂತಹ ಅಭೂತಪೂರ್ವ ಕ್ರಮಗಳನ್ನು ಉಲ್ಲೇಖಿಸಿದರು. “ಪರಂಪರೆಗೆ ಸಂಬಂಧಿಸಿದಂತೆ ಭಾರತದ ಸಂಕಲ್ಪವು ಇಡೀ ಮಾನವೀಯತೆಗೆ ಸೇವೆ ಸಲ್ಲಿಸುವ ಭಾವನೆಯೊಂದಿಗೆ ಸಂಬಂಧ ಹೊಂದಿದೆ. ಭಾರತೀಯ ಸಂಸ್ಕೃತಿಯು ನಮ್ಮ ಬಗ್ಗೆ ಮಾತನಾಡುತ್ತದೆ,  ಅಲ್ಲಿ ಕೇವಲ ಸ್ವಾರ್ಥಕ್ಕೆ ಎಡೆ ಇಲ್ಲ” ಎಂದು ಅವರು ಹೇಳಿದರು.

ಜಾಗತಿಕ ಕಲ್ಯಾಣದಲ್ಲಿ ಪಾಲುದಾರ ಆಗುವ ಭಾರತದ ಪ್ರಯತ್ನವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತದ ವೈಜ್ಞಾನಿಕ ಪರಂಪರೆಯಾದ ಯೋಗ ಮತ್ತು ಆಯುರ್ವೇದವನ್ನು ಜಾಗತಿಕವಾಗಿ ಅಪ್ಪಿಕೊಳ್ಳುತ್ತಿರುವುದನ್ನೂ  ಉಲ್ಲೇಖಿಸಿದರು. ಭಾರತ ಆಯೋಜಿಸಿದ್ದ ಜಿ-20 ಶೃಂಗಸಭೆಯ ಶೀರ್ಷಿಕೆ- ಒಂದು ಜಗತ್ತು, ಒಂದು ಕುಟುಂಬ, ಒಂದು ಭವಿಷ್ಯ ಎಂಬುದನ್ನು ಅವರು ಸ್ಮರಿಸಿದರು.  ಭಾರತದ ‘ವಸುದೈವ ಕುಟುಂಬಕಂ’ ದೃಷ್ಟಿಕೋನಕ್ಕೆ ಅನುಗುಣವಾಗಿ ಪ್ರಧಾನಮಂತ್ರಿಯವರು ಸಿರಿಧಾನ್ಯಗಳ ಉತ್ತೇಜನ ಮತ್ತು ಅಂತಾರಾಷ್ಟ್ರೀಯ ಸೌರ ಮೈತ್ರಿ ಮತ್ತು ಮಿಷನ್ ಲೈಫ್ ನಂತಹ  ಉಪಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು.

ಜಾಗತಿಕ ಪರಂಪರೆಯ ಸಂರಕ್ಷಣೆಯನ್ನು ಭಾರತವು ತನ್ನ ಜವಾಬ್ದಾರಿ ಎಂದು ಪರಿಗಣಿಸುತ್ತದೆ ಎಂಬುದನ್ನು ಪ್ರಧಾನಿ ಪುನರುಚ್ಚರಿಸಿದರು. ಅದಕ್ಕಾಗಿಯೇ, ನಾವು ಭಾರತೀಯ ಪರಂಪರೆಯ ಜೊತೆಗೆ ಜಾಗತಿಕ ದಕ್ಷಿಣದ ದೇಶಗಳಲ್ಲಿ ಪರಂಪರೆ ಸಂರಕ್ಷಣೆಗಾಗಿ ಸಹಕರಿಸುತ್ತಿದ್ದೇವೆ ಎಂದೂ ಅವರು ಹೇಳಿದರು. ಕಾಂಬೋಡಿಯಾದ ಅಂಕೋರ್ ವಾಟ್, ವಿಯೆಟ್ನಾಂನ ಚಾಮ್ ದೇವಾಲಯಗಳು ಮತ್ತು ಮ್ಯಾನ್ಮಾರ್ ಬಗಾನ್ ಸ್ತೂಪದಂತಹ ಪಾರಂಪರಿಕ ತಾಣಗಳನ್ನು ಉಲ್ಲೇಖಿಸಿದ ಅವರು, ಯುನೆಸ್ಕೋ ವಿಶ್ವ ಪರಂಪರೆ ಕೇಂದ್ರಕ್ಕೆ ಸಾಮರ್ಥ್ಯ ವರ್ಧನೆ, ತಾಂತ್ರಿಕ ನೆರವು ಮತ್ತು ವಿಶ್ವ ಪರಂಪರೆಯ ತಾಣಗಳ ಸಂರಕ್ಷಣೆಗೆ ಭಾರತ 1 ಮಿಲಿಯನ್ ಡಾಲರ್ ಕೊಡುಗೆ ನೀಡಲಿದೆ ಎಂದು ಘೋಷಿಸಿದರು. ಈ ಹಣವು ಜಾಗತಿಕ ದಕ್ಷಿಣದ ದೇಶಗಳಿಗೆ ಉಪಯುಕ್ತವಾಗಲಿದೆ ಎಂದು ಅವರು ಒತ್ತಿ ಹೇಳಿದರು. ಭಾರತದಲ್ಲಿ ಯುವ ವೃತ್ತಿಪರರಿಗಾಗಿ ವಿಶ್ವ ಪರಂಪರೆ ನಿರ್ವಹಣೆಯಲ್ಲಿ ಪ್ರಮಾಣಪತ್ರ ಕಾರ್ಯಕ್ರಮವನ್ನು ಸಹ ಪ್ರಾರಂಭಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಭಾರತದ ಸಾಂಸ್ಕೃತಿಕ ಮತ್ತು ಸೃಜನಶೀಲ ಉದ್ಯಮವು ಜಾಗತಿಕ ಬೆಳವಣಿಗೆಯಲ್ಲಿ ದೊಡ್ಡ ಅಂಶವಾಗಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು.

ಭಾಷಣವನ್ನು ಮುಕ್ತಾಯಗೊಳಿಸುವಾಗ  ಪ್ರಧಾನಮಂತ್ರಿಯವರು, ಎಲ್ಲ ವಿದೇಶಿ ಅತಿಥಿಗಳು ಮತ್ತು ಗಣ್ಯರು ಭಾರತವನ್ನು ಅನ್ವೇಷಿಸುವಂತೆ ಮನವಿ ಮಾಡಿದರು ಮತ್ತು ಅವರ ಅನುಕೂಲಕ್ಕಾಗಿ ಅಪ್ರತಿಮ ಪಾರಂಪರಿಕ ತಾಣಗಳಿಗಾಗಿ ಪ್ರವಾಸ ಸರಣಿಯ ಬಗ್ಗೆ ಮಾಹಿತಿ ನೀಡಿದರು. ಭಾರತದಲ್ಲಿನ ಅವರ ಅನುಭವಗಳು ಸ್ಮರಣೀಯ ಪ್ರವಾಸವನ್ನಾಗಿ ಮಾಡುತ್ತವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಯುನೆಸ್ಕೋ ಮಹಾನಿರ್ದೇಶಕ ಶ್ರೀಮತಿ ಆಡ್ರೆ ಅಝೌಲೆ ಮತ್ತು ವಿಶ್ವ ಪರಂಪರೆ ಸಮಿತಿಯ ಅಧ್ಯಕ್ಷ ಶ್ರೀ ವಿಶಾಲ್ ಶರ್ಮಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಭಾರತವು ಮೊದಲ ಬಾರಿಗೆ ವಿಶ್ವ ಪರಂಪರೆ ಸಮಿತಿ ಸಭೆಯನ್ನು ಆಯೋಜಿಸುತ್ತಿದೆ. ಇದು 2024 ರ ಜುಲೈ 21 ರಿಂದ 31 ರವರೆಗೆ ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ನಡೆಯುತ್ತದೆ. ವಿಶ್ವ ಪರಂಪರೆ ಸಮಿತಿಯು ವಾರ್ಷಿಕವಾಗಿ ಸಭೆ ಸೇರುತ್ತದೆ ಮತ್ತು ವಿಶ್ವ ಪರಂಪರೆಯ ಎಲ್ಲಾ ವಿಷಯಗಳನ್ನು ನಿರ್ವಹಿಸುವ ಹಾಗು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕಾದ ಸ್ಥಳಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ಅದು ಹೊಂದಿದೆ. ಈ ಸಭೆಯಲ್ಲಿ, ವಿಶ್ವ ಪರಂಪರೆಯ ಪಟ್ಟಿಗೆ ಹೊಸ ತಾಣಗಳನ್ನು ನಾಮನಿರ್ದೇಶನ ಮಾಡುವ ಪ್ರಸ್ತಾಪಗಳು, ಅಸ್ತಿತ್ವದಲ್ಲಿರುವ 124 ವಿಶ್ವ ಪರಂಪರೆಯ ಆಸ್ತಿಗಳ ಸಂರಕ್ಷಣಾ ವರದಿಗಳ ಸ್ಥಿತಿಗತಿ, ಅಂತರರಾಷ್ಟ್ರೀಯ ನೆರವು ಮತ್ತು ವಿಶ್ವ ಪರಂಪರೆ ನಿಧಿಯ ಬಳಕೆ ಇತ್ಯಾದಿಗಳ ಬಗ್ಗೆ ಚರ್ಚಿಸಲಾಗುತ್ತದೆ. ಸಭೆಯಲ್ಲಿ 150 ಕ್ಕೂ ಹೆಚ್ಚು ದೇಶಗಳಿಂದ 2000 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ವಿಶ್ವ ಪರಂಪರೆ ಸಮಿತಿ ಸಭೆಯ ಜೊತೆಗೆ, ವಿಶ್ವ ಪರಂಪರೆಯ ಯುವ ವೃತ್ತಿಪರರ ವೇದಿಕೆ ಮತ್ತು ವಿಶ್ವ ಪರಂಪರೆಯ ತಾಣ ವ್ಯವಸ್ಥಾಪಕರ ವೇದಿಕೆಯ ಸಭೆಗಳೂ   ಸಂದರ್ಭದಲ್ಲಿ ನಡೆಯುತ್ತಿವೆ.

ಇದಲ್ಲದೆ, ಭಾರತದ ಸಂಸ್ಕೃತಿಯನ್ನು ಪ್ರದರ್ಶಿಸಲು ಭಾರತ್ ಮಂಟಪದಲ್ಲಿ ವಿವಿಧ ಪ್ರದರ್ಶನಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ರಿಟರ್ನ್ ಆಫ್ ಟ್ರೆಷರ್ಸ್ (ಹಿಂತಿರುಗಿ ತರಲಾದ ಸಂಪತ್ತು/ಭಂಡಾರ) ಪ್ರದರ್ಶನವು ದೇಶಕ್ಕೆ ಮರಳಿ ತರಲಾದ ಕೆಲವು ಕಲಾಕೃತಿಗಳನ್ನು ಪ್ರದರ್ಶಿಸುತ್ತದೆ. ಈವರೆಗೆ 350ಕ್ಕೂ ಹೆಚ್ಚು ಕಲಾಕೃತಿಗಳನ್ನು ಮರಳಿ ತರಲಾಗಿದೆ. ಭಾರತದ 3 ವಿಶ್ವ ಪರಂಪರೆಯ ತಾಣಗಳಿಗೆ ಅದ್ಭುತ ಅನುಭವವನ್ನು ಒದಗಿಸಲು ಎಆರ್ ಮತ್ತು ವಿಆರ್ ತಂತ್ರಜ್ಞಾನಗಳನ್ನು ಸಹ ಬಳಸಲಾಗುತ್ತಿದೆ.  ಗುಜರಾತ್ ಪಟಾನ್ ನ ರಾಣಿ ಕಿ ವಾವ್, ಮಹಾರಾಷ್ಟ್ರದ ಎಲ್ಲೋರಾ ಗವಿಗಳ ಕೈಲಾಸ ದೇವಾಲಯ, ಮತ್ತು ಕರ್ನಾಟಕದ ಹಳೇಬೀಡಿನ ಹೊಯ್ಸಳ ದೇವಾಲಯಗಳು ಇದರಲ್ಲಿ ಸೇರಿವೆ. ಮಾಹಿತಿ ತಂತ್ರಜ್ಞಾನ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿನ ಆಧುನಿಕ ಬೆಳವಣಿಗೆಗಳ ಜೊತೆಗೆ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಪ್ರಾಚೀನ ನಾಗರಿಕತೆ, ಭೌಗೋಳಿಕ ವೈವಿಧ್ಯತೆ ಮತ್ತು ಪ್ರವಾಸೋದ್ಯಮ ತಾಣಗಳನ್ನು ಪ್ರಮುಖವಾಗಿ ಎತ್ತಿ ತೋರಿಸಲು ‘ಇನ್ಕ್ರೆಡಿಬಲ್ ಇಂಡಿಯಾ’ ಪ್ರದರ್ಶನವನ್ನು ಸಹ ವ್ಯವಸ್ಥೆ ಮಾಡಲಾಗಿದೆ.

 

 

*****