ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಸಂಸತ್ತಿನಲ್ಲಿ ಹೆರಿಗೆ ಸೌಲಭ್ಯಗಳ (ತಿದ್ದುಪಡಿ)ಕಾಯಿದೆ 2016ನ್ನು ಮಂಡಿಸುವ ಮೂಲಕ ಹೆರಿಗೆ ಸೌಲಭ್ಯಗಳ ಕಾಯಿದೆ 1961ಕ್ಕೆ ತಿದ್ದುಪಡಿ ತರಲು ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.
ಹೆರಿಗೆ ಸೌಲಭ್ಯ ಕಾಯಿದೆ 1961 ಮಹಿಳಾ ಉದ್ಯೋಗಿಗಳಿಗೆ ಅವರ ಹೆರಿಗೆಯ ಸಮಯದಲ್ಲಿ ಅವರ ಉದ್ಯೋಗವನ್ನು ರಕ್ಷಿಸುವುದಲ್ಲದೆ ಆಕೆಗೆ ಹೆರಿಗೆ ಸೌಲಭ್ಯ ಅಂದರೆ ಕರ್ತವ್ಯಕ್ಕೆ ಹಾಜರಾಗದಿದ್ದರೂ ಆಕೆಗೆ ತನ್ನ ಮಗುವಿನ ಆರೈಕೆ ಮಾಡಲು ಸಂಪೂರ್ಣ ವೇತನ ಒದಗಿಸುತ್ತದೆ.
10 ಅಥವಾ ಅದಕ್ಕಿಂತ ಹೆಚ್ಚು ಜನರು ಕೆಲಸ ಮಾಡುವ ಎಲ್ಲ ಸಂಸ್ಥೆಗಳಿಗೂ ಇದು ಅನ್ವಯಿಸುತ್ತದೆ. ಈಗಿನ ತಿದ್ದುಪಡಿಗಳು ಸಂಘಟಿತ ವಲಯದ ಸುಮಾರು 1.8 ದಶಲಕ್ಷ ಮಹಿಳಾ ಕಾರ್ಯಪಡೆಗೆ ನೆರವಾಗಲಿದೆ.
ಹೆರಿಗೆ ಸೌಲಭ್ಯ ಕಾಯಿದೆ 1961ಕ್ಕೆ ತಿದ್ದುಪಡಿಗಳು ಈ ಕೆಳಗಿನಂತಿವೆ:
• ಹೆರಿಗೆ ಸೌಲಭ್ಯವನ್ನು ಎರಡು ಜೀವಂತ ಮಕ್ಕಳವರೆಗೆ 12 ವಾರಗಳಿಂದ 26 ವಾರಗಳಿಗೆ ಹಾಗೂ ಎರಡಕ್ಕಿಂತ ಹೆಚ್ಚು ಮಕ್ಕಳಿಗೆ 12 ವಾರಕ್ಕೆ ಹೆಚ್ಚಿಸುವುದು.
• “ಮಗುವಿಗೆ ಜನ್ಮ ಕೊಡುವ ತಾಯಿ’’ ಮತ್ತು “ದತ್ತು ಪಡೆಯುವ ತಾಯಿ’’ಗೂ 12 ವಾರಗಳ ಹೆರಿಗೆ ಸೌಲಭ್ಯ.
• ‘ಮನೆಯಿಂದಲೇ ಕೆಲಸ ಮಾಡಲು ಅವಕಾಶ’.
•50 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಶಿಶುಪಾಲನಾ ಕೇಂದ್ರದ ಸ್ಥಾಪನೆ.
ಸಮರ್ಥನೆ:
• ಬಾಲ್ಯದಲ್ಲಿ ಮಗುವಿಗೆ ತಾಯಿಯ ಆರೈಕೆ – ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ನಿರ್ಣಾಯಕ.
• 44ನೇ, 45ನೇ ಹಾಗೂ 46ನೇ ಭಾರತೀಯ ಕಾರ್ಮಿಕರ ಸಮಾವೇಶವು ಹೆರಿಗೆ ಸೌಲಭ್ಯವನ್ನು 24 ವಾರಗಳಿಗೆ ಹೆಚ್ಚಳ ಮಾಡಲು ಶಿಫಾರಸು ಮಾಡಿತ್ತು.
•ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಹೆರಿಗೆ ಸೌಲಭ್ಯವನ್ನು 8 ತಿಂಗಳುಗಳಿಗೆ ಹೆಚ್ಚಿಸುವ ಉದ್ದೇಶವನ್ನು ಪ್ರಸ್ತಾಪಿಸಿತ್ತು.
• ಎಲ್ಲ ಬಾಧ್ಯಸ್ಥರೊಂದಿಗೆ ತ್ರಿಪಕ್ಷೀಯ ಮಾತುಕತೆಯ ಬಳಿಕ ಈ ತಿದ್ದುಪಡಿ ಪ್ರಸ್ತಾಪಕ್ಕೆ ಬೆಂಬಲ ವ್ಯಕ್ತವಾಗಿದೆ..