ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬುಧವಾರ ಭಾರತ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ 70ಕ್ಕೂ ಹೆಚ್ಚು ಹೆಚ್ಚುವರಿ ಕಾರ್ಯದರ್ಶಿಗಳು ಹಾಗೂ ಜಂಟಿ ಕಾರ್ಯದರ್ಶಿಗಳನ್ನು ಭೇಟಿ ಮಾಡಿ, ಅವರೊಂದಿಗೆ ಸಂವಾದ ನಡೆಸಿದರು. ಇದು ಇಂಥ ಐದು ಸಂವಾದಗಳ ಪೈಕಿ ಮೊದಲನೆಯದಾಗಿದೆ.
ಈ ಮಾತುಕತೆಯ ವೇಳೆ, ಅಧಿಕಾರಿಗಳು ಡಿಜಿಟಲ್ ಮತ್ತು ಸ್ಮಾರ್ಟ್ ಆಡಳಿತ, ಆಡಳಿತಾತ್ಮಕ ಪ್ರಕ್ರಿಯೆಗಳು ಮತ್ತು ಹೊಣೆಗಾರಿಕೆ, ಪಾರದರ್ಶಕತೆ, ರೈತರ ಆದಾಯ ದುಪ್ಪಟ್ಟು ಮಾಡುವುದು, ಕೌಶಲ ಅಭಿವೃದ್ಧಿ, ಸ್ವಚ್ಛಭಾರತ, ಗ್ರಾಹಕ ಹಕ್ಕುಗಳು, ಪರಿಸರ ಸಂರಕ್ಷಣೆ ಮತ್ತು 2022ರ ವೇಳೆಗೆ ನವ ಭಾರತ ನಿರ್ಮಾಣದಂಥ ವಿಚಾರಗಳ ಕುರಿತಂತೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಜನತೆಯ ತೃಪ್ತಿ ಮತ್ತು ಕಲ್ಯಾಣಕ್ಕಾಗಿ ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಸಮ್ಮಿಲನ ಅತ್ಯಗತ್ಯ ಎಂದು ಪ್ರಧಾನಿ ಪ್ರತಿಪಾದಿಸಿದರು. ಅಧಿಕಾರಿಗಳಿಗೆ ಉತ್ತಮ ಆಡಳಿತ ಆದ್ಯತೆಯಾಗಬೇಕು ಎಂದೂ ಹೇಳಿದರು. ಉತ್ತಮ ಫಲಿತಾಂಶಗಳನ್ನು ಸಾಧಿಸಲು ಸರ್ಕಾರದ ಎಲ್ಲಾ ವಿಭಾಗಳೂ ಸಾಮರಸ್ಯ ಮತ್ತು ಒಮ್ಮತದಿಂದ ಕೆಲಸ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಎಲ್ಲ ಅಧಿಕಾರಿಗಳೂ ನಿರ್ಣಯ ಕೈಗೊಳ್ಳುವಾಗ ಬಡವರು ಮತ್ತು ಶ್ರೀಸಾಮಾನ್ಯರನ್ನು ತಮ್ಮ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಇಡೀ ವಿಶ್ವ ಭಾರತದತ್ತ ಧನಾತ್ಮಕ ನಿರೀಕ್ಷೆಯೊಂದಿಗೆ ನೋಡುತ್ತಿದೆ ಎಂದು ಪ್ರಧಾನಿ ಹೇಳಿದರು. ಜಾಗತಿಕ ಸಮತೋಲನಕ್ಕೆ ಯಶಸ್ವಿ ಭಾರತ ಪ್ರಮುಖವಾದ್ದು ಎಂದು ಇಡೀ ವಿಶ್ವ ಭಾವಿಸಿದೆ ಎಂದರು. ಭಾರತದ ಸಾಮಾನ್ಯ ಜನರಿಂದ ಉತ್ಕೃಷ್ಟತೆಗೆ ಬಲವಾದ ಅಂತಃಪ್ರವಾಹ ಇದೆ ಎಂದೂ ಅವರು ಹೇಳಿದರು. ವಿನಮ್ರ ಹಿನ್ನೆಲೆಯಿಂದ ಬಂದ ಯುವಕರು, ಅತ್ಯಂತ ಸೀಮಿತವಾದ ಸಂಪನ್ಮೂಲಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮತ್ತು ಕ್ರೀಡೆಗಳಲ್ಲಿ ಉತ್ತಮ ಸ್ಥಾನಗಳನ್ನು ಸಾಧಿಸುತ್ತಾರೆ., ತಮ್ಮ ವೃತ್ತಿ ಬದುಕಿನ ಮೊದಲ ಮೂರು ವರ್ಷಗಳಲ್ಲಿ ತಾವು ಹೊಂದಿದ್ದ ಸ್ಫೂರ್ತಿ ಮತ್ತು ಶಕ್ತಿಯನ್ನು ಸ್ಮರಿಸಿ, ಈ ಸ್ವಯಂಪ್ರೇರಿತ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಶ್ರಮಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ದೇಶದ ಒಳಿತಿಗಾಗಿ ಶಕ್ತಿಮೀರಿ ದುಡಿಯುವ ವಿಶಿಷ್ಟ ಅವಕಾಶ ನಿಮಗೆ ದೊರೆತಿದೆ ಎಂದು ಅಧಿಕಾರಿಗಳಿಗೆ ಪ್ರಧಾನಿ ತಿಳಿಸಿದರು. ಕಂದಕಗಳನ್ನು ನಿವಾರಿಸಿ, ಸರ್ಕಾರದ ವಿವಿಧ ಇಲಾಖೆಗಳ ನಡುವೆ ಆಂತರಿಕ ಸಂವಹನ ಸಾಮರ್ಥ್ಯ ಹೆಚ್ಚಿಸುವ ಮಹತ್ವವನ್ನು ಪ್ರಧಾನಿ ಪ್ರತಿಪಾದಿಸಿದರು. ನಿರ್ಧಾರ ಕೈಗೊಳ್ಳುವ ವಿಚಾರದಲ್ಲಿ ತ್ವರಿತ ಮತ್ತು ಸಮರ್ಥ ನಿರ್ಣಯ ಅಗತ್ಯವನ್ನು ಅವರು ಒತ್ತಿ ಹೇಳಿದರು. ಉತ್ತಮ ಉದ್ದೇಶದ ಪ್ರಾಮಾಣಿಕ ನಿರ್ಣಯಗಳಿಗೆ ಕೇಂದ್ರ ಸರ್ಕಾರ ಸದಾ ಉತ್ತೇಜನ ನೀಡುತ್ತದೆ ಎಂದು ಅವರು ಹೇಳಿದರು. ದೇಶದ 100 ಅತಿ ಹಿಂದುಳಿದ ಜಿಲ್ಲೆಗಳ ಮೇಲೆ ಗಮನ ಹರಿಸುವಂತೆ ಹೇಳಿದ ಪ್ರಧಾನಿ, ಇದರಿಂದ ಆ ಜಿಲ್ಲೆಗಳನ್ನು ವಿವಿಧ ಅಭಿವೃದ್ಧಿ ಮಾನದಂಡಗಳನ್ವಯ ದೇಶದ ಸಾಧಾರಣ ಮಟ್ಟಕ್ಕೆ ತರಬಹುದು ಎಂದೂ ಹೇಳಿದರು.