Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹಿಂದೂಸ್ತಾನ್ ಸ್ಟೀಲ್ ವರ್ಕ್ಸ್ ಕನ್ಸ್ಟ್ರಕ್ಷನ್ ಲಿಮಿಟೆಡ್ನ ಆರ್ಥಿಕ ಪುನಾರಚನೆ ಮತ್ತು ನ್ಯಾಷನಲ್ ಬಿಲ್ಡಿಂಗ್ಸ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಲಿಮಿಟೆಡ್ನಿಂದ ಈ ಸಂಸ್ಥೆಯ ಸ್ವಾಧೀನ.


ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಕೇಂದ್ರ ಸಚಿವ ಸಂಪುಟವು, ಹಿಂದೂಸ್ತಾನ್ ಸ್ಟೀಲ್ ವರ್ಕ್ಸ್ ಕನ್ಸ್ಟ್ರಕ್ಷನ್ ಲಿಮಿಟೆಡ್(ಎಚ್ಎಸ್ ಸಿಎಲ್)ನ ಆರ್ಥಿಕ ಪುನಾರಚನೆಗೆ ಅನುಮೋದನೆ ನೀಡಿದೆ. ಅಲ್ಲದೆ, ಈ ಸಂಸ್ಥೆಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಷನಲ್ ಬಿಲ್ಡಿಂಗ್ಸ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಲಿಮಿಟೆಡ್(ಎನ್ ಬಿಸಿಸಿ) ಸಂಸ್ಥೆಯು ಸ್ವಾಧೀನ ಪಡಿಸಿಕೊಳ್ಳುವುದಕ್ಕೂ ಅದು ಒಪ್ಪಿಗೆ ಕೊಟ್ಟಿದೆ. 

ಎಚ್ಎಸ್ಸಿಎಲ್ ಸಂಸ್ಥೆಯ ಷೇರು ಬಂಡವಾಳವು ಸದ್ಯಕ್ಕೆ 117.1 ಕೋಟಿ ರೂಪಾಯಿಗಳಷ್ಟಾಗಿದೆ. ಈಗಿನ ಪ್ರಸ್ತಾವನೆಯ ಪ್ರಕಾರ, ಈ ಸಂಸ್ಥೆಯ ಯೋಜನೇತರ ಸಾಲ ಮತ್ತು ಯೋಜನಾ ಸಾಲವು ಬಡ್ಡಿ ಮತ್ತು ಖಾತ್ರಿ ಶುಲ್ಕಸಹಿತ 1502.2 ಕೋಟಿ ರೂಪಾಯಿಗಳಾಗಲಿದ್ದು, ಕೇಂದ್ರ ಸರಕಾರವು ಇದನ್ನು ಬಂಡವಾಳ ಮತ್ತು ಷರು ಬಂಡವಾಳವಾಗಿ ಪರಿವರ್ತಿಸಲಿದೆ. ಹೀಗಾಗಿ, ಸಂಸ್ಥೆಯ ಷೇರು ಬಂಡವಾಳವು 1619.3 ಕೋಟಿ ರೂಪಾಯಿಗಳಾಗಲಿದೆ. ಈ ಮೊತ್ತವನ್ನು, ಎಚ್ಎಸ್ ಸಿಎಲ್ ಸಂಸ್ಥೆಯು 2015ರ ಮಾರ್ಚ್ 31ರ ಹೊತ್ತಿಗೆ ಹೊಂದಿದ್ದ 1585 ಕೋಟಿ ರೂಪಾಯಿಗಳಿಗೆ ಹೊಂದಿಸಿ, ಆ ಬಾಬ್ತಿಗೆ ಪಾವತಿಸಲಾಗುವುದು. ಪರಿಣಾಮವಾಗಿ, ಸಂಸ್ಥೆಯ ಷೇರು ಬಂಡವಾಳವು ಆಗ 34.3 ಕೋಟಿ ರೂಪಾಯಿಗಳಾಗಲಿವೆ. ಏತನ್ಮಧ್ಯೆ, ಎನ್ ಬಿಸಿಸಿ ಸಂಸ್ಥೆಯು 35.7 ಕೋಟಿ ರೂಪಾಯಿಗಳನ್ನು ಎಚ್ಎಸ್ ಸಿಎಲ್ಗೆ ಷೇರು ಬಂಡವಾಳವಾಗಿ ವಿನಿಯೋಗಿಸಲಿದೆ. ಇದಾದ ನಂತರ ಎನ್ ಬಿಸಿಸಿ ಸಂಸ್ಥೆಯು ಎಚ್ಎಸ್ ಸಿಎಲ್ನಲ್ಲಿ ಶೇಕಡ 51ರಷ್ಟು ಷೇರುಗಳನ್ನು ಹೊಂದಿರಲಿದೆ. ಹೀಗಾಗಿ, ಎಚ್ಎಸ್ ಸಿಎಲ್ ಸಂಸ್ಥೆಯು ಎನ್ ಬಿಸಿಸಿಯ ಅಂಗಸಂಸ್ಥೆಯಾಗಲಿದೆ. ಅಲ್ಲದೆ, ಇನ್ನುಮುಂದೆ ಕೇಂದ್ರ ಸರಕಾರವು ಎಚ್ಎಸ್ ಸಿಎಲ್ನಲ್ಲಿ ಶೇಕಡ 49ರಷ್ಟು ಷೇರುಗಳನ್ನು ಮಾತ್ರ ಹೊಂದಿರಲಿದೆ. 

ಎನ್ ಬಿಸಿಸಿ ಮತ್ತು ಎಚ್ಎಸ್ ಸಿಎಲ್ ಎರಡೂ ಕೇಂದ್ರ ಸರಕಾರದ ಸಂಸ್ಥೆಗಳಾಗಿದ್ದು, ಇವೆರಡೂ ಒಂದೇ ಬಗೆಯ ಕಾರ್ಯಗಳಲ್ಲಿ ತೊಡಗಿಕೊಂಡಿವೆ. ಕೇಂದ್ರ ಸರಕಾರದ ಈಗಿನ ನಿರ್ಧಾರದಿಂದ ಎನ್ ಬಿಸಿಸಿ ಆರ್ಥಿಕವಾಗಿ ಮತ್ತಷ್ಟು ಸದೃಢವಾಗಲಿದ್ದು, ಮಾನವಶಕ್ತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಾಗಲಿದೆ. ಅಲ್ಲದೆ, ಎನ್ ಬಿಸಿಸಿ ಮತ್ತು ಎಚ್ಎಸ್ ಸಿಎಲ್ ತಮ್ಮ ಸಂಪನ್ಮೂಲ ಮತ್ತು ಪರಿಣತಿಯಿಂದ ಪರಸ್ಪರ ಲಾಭ ಪಡೆಯಲಿವೆ. ಎಚ್ಎಸ್ ಸಿಎಲ್ ಸಂಸ್ಥೆ ತಾನು ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಇದರಲ್ಲಿ ಯಾವುದೇ ಅಡೆತಡೆ ಇರುವುದಿಲ್ಲ.

ಎಚ್ಎಸ್ ಸಿಎಲ್ ಸಂಸ್ಥೆಯು ನಾನಾ ವಾಣಿಜ್ಯ ಬ್ಯಾಂಕುಗಳಿಂದ ಪಡೆದಿರುವ ಸಾವಧಿ ಸಾಲಗಳನ್ನು ತೀರುವಳಿ ಮಾಡಲು ಕೇಂದ್ರ ಸರಕಾರವು ಆ ಸಂಸ್ಥೆಗೆ 200 ಕೋಟಿ ರೂಪಾಯಿಗಳನ್ನು ಕೊಡಲಿದ್ದು, ಒಂದು ಸಲದ ಬೆಂಬಲ ಕೊಡಲಿದೆ. ಅಲ್ಲದೆ, ಸ್ವಯಂ ನಿವೃತ್ತಿ ಪಡೆದಿರುವ ಸಂಸ್ಥೆಯ ಹಲವು ಉದ್ಯೋಗಿಗಳಿಗೆ ಸುಪ್ರೀಂಕೋರ್ಟ್ ತೀರ್ಮಾನದಂತೆ ಕೊಡಬೇಕಾದ (ಅಂದಾಜು) 110 ಕೋಟಿ ರೂಪಾಯಿಗಳನ್ನು ಕೂಡ ಕೇಂದ್ರ ಸರಕಾರವೇ ಭರಿಸಲಿದೆ. ಜೊತೆಗೆ, 2015-16ನೇ ಆರ್ಥಿಕ ಸಾಲಿನಲ್ಲಿ (2016ರ ಮಾರ್ಚ್ 31ರವರೆಗೆ) ಸಂಸ್ಥೆಯು ತಾನು ಪಡೆದುಕೊಂಡಿರುವ ಸಾಲಗಳಿಗೆ ಬಾಕಿ ಉಳಿಸಿಕೊಂಡಿರುವ ಅಂದಾಜು 44 ಕೋಟಿ ರೂಪಾಯಿಗಳಷ್ಟು ಬಡ್ಡಿಯನ್ನು ಕೂಡ ಕೇಂದ್ರ ಸರಕಾರವೇ ಪಾವತಿಸಲಿದೆ. ಎಚ್ಎಸ್ ಸಿಸಿ ಸಂಸ್ಥೆಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವವರೆಗಿನ ದಿನಾಂಕದವರೆಗೆ ಎನ್ ಬಿಸಿಸಿ ಈ ಬಡ್ಡಿಯನ್ನು ತಾನೇ ತುಂಬಲಿದೆ. 

ಹಿನ್ನೆಲೆ:
ಪೂರ್ಣಪ್ರಮಾಣದ ಉಕ್ಕು ಸ್ಥಾವರಗಳನ್ನು ನಿರ್ಮಿಸುವ ಸಲುವಾಗಿ ಕೇಂದ್ರ ಸರಕಾರವು 1964ರಲ್ಲಿ ಎಚ್ಎಸ್ ಸಿಎಲ್ ಅನ್ನು ಸ್ಥಾಪಿಸಿತು. ವರ್ಷಗಳು ಕಳೆದಂತೆ ಈ ಸಂಸ್ಥೆಯು, ಇನ್ನಿತರ ಮೂಲಸೌಲಭ್ಯ ನಿರ್ಮಾಣ ಕಾಮಗಾರಿ ಯೋಜನೆಗಳನ್ನೂ ಕೈಗೆತ್ತಿಕೊಂಡಿತು. ಆದರೆ, ಹಲವು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳ ಸಾವಿರಾರು ಉದ್ಯೋಗಿಗಳನ್ನೆಲ್ಲ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರ ಪರಿಣಾಮವಾಗಿ ಎಚ್ಎಸ್ ಸಿಎಲ್ ಸಂಸ್ಥೆಯು 1978-79ರಿಂದ ನಷ್ಟದ ಸುಳಿಗೆ ಸಿಲುಕಿಕೊಂಡಿತು. ಏಕೆಂದರೆ, 1970ರಲ್ಲಿ ಕೇವಲ 4,100 ಉದ್ಯೋಗಿಗಳನ್ನು ಮಾತ್ರ ಹೊಂದಿದ್ದ ಎಚ್ಎಸ್ ಸಿಎಲ್ನಲ್ಲಿ 1979ರ ಹೊತ್ತಿಗೆ ಉದ್ಯೋಗಿಗಳ ಸಂಖ್ಯೆ 26,537ರಷ್ಟಾಗಿತ್ತು. ಇದಾದ ನಂತರ, ಈ ಸಂಸ್ಥೆಯನ್ನು ಪುನಶ್ಚೇತನಗೊಳಿಸಲು ಕೇಂದ್ರ ಸರಕಾರವು 1999ರಲ್ಲಿ ಒಂದು ಪ್ಯಾಕೇಜನ್ನು ಘೋಷಿಸಿತು. ಇದಾದ ನಂತರವೂ ಕೇಂದ್ರ ಸರಕಾರವು ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿತು. ಆದರೆ, ಆ ಯಾವ ಯತ್ನಗಳೂ ಫಲ ಕೊಡಲಿಲ್ಲ. 

ನಂತರ, ಕಾರ್ಯದರ್ಶಿಗಳ ಸಮಿತಿಯು 2015ರ ಜುಲೈನಲ್ಲಿ ಒಂದು ವರದಿ ನೀಡಿ, ನಷ್ಟದಲ್ಲಿರುವ ಎಚ್ಎಸ್ ಸಿಎಲ್ ಅನ್ನು ಕೇಂದ್ರ ಸರಕಾರಿ ಸ್ವಾಮ್ಯದ ಇನ್ನೊಂದು ಉದ್ಯಮದೊಂದಿಗೆ ವಿಲೀನಗೊಳಿಸುವ ಬಗ್ಗೆ ಅಥವಾ ಸ್ವಾಧೀನಕ್ಕೆ ತೆಗೆದುಕೊಳ್ಳುವ ಬಗ್ಗೆ ಪರಿಶೀಲಿಸಬೇಕೆಂದು ಕೇಂದ್ರ ಉಕ್ಕು ಸಚಿವಾಲಯಕ್ಕೆ ಶಿಫಾರಸು ಮಾಡಿತು. ನಂತರ, ಎಚ್ಎಸ್ ಸಿಎಲ್ ಸಂಸ್ಥೆಯ ಭವಿಷ್ಯ ಕುರಿತು ಒಂದು ವಿವರ ದಾಖಲೆ ಸಿದ್ಧಪಡಿಸುವ ಉದ್ದೇಶದೊಂದಿಗೆ ಕಾರ್ಯದರ್ಶಿಗಳ ಒಂದು ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ಮಾಡಿರುವ ಶಿಫಾರಸುಗಳು ಮತ್ತು ನಂತರ ಕೈಗೊಂಡ ಒಮ್ಮತದ ತೀರ್ಮಾನದ ಮೇರೆಗೆ, ಎಚ್ಎಸ್ ಸಿಎಲ್ನ ಆರ್ಥಿಕ ಪುನಾರಚನೆ ಮತ್ತು ಎನ್ ಬಿಸಿಸಿ ಇದನ್ನು ಸ್ವಾಧೀನ ಪಡಿಸಿಕೊಳ್ಳಲು ಅನುಮೋದನೆ ಕೊಡುವ ಸಂಬಂಧಧ ಸಂಪುಟ ಟಿಪ್ಪಣಿಯನ್ನು ಸಿದ್ಧಪಡಿಸಲಾಯಿತು.