ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಕೆಳಗಿನ ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಯಿತು.
ಎ. ಹರಿಯಾಣದ ರೇವಾರಿ ಜಿಲ್ಲೆಯ ಮನೇಥಿಯಲ್ಲಿ 122 ಕೋಟಿ ವೆಚ್ಚದಲ್ಲಿ ಹೊಸದಾಗಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಸ್ಥಾಪನೆ ಮತ್ತು
ಬಿ. ಮೇಲಿನ ಏಮ್ಸ್ ಗೆ ಮೂಲವೇತನ 2,25,000/-(ನಿಗದಿತ) ಜೊತೆಗೆ ಎನ್ ಪಿ ಎ(ವೇತನ ಪ್ಲಸ್ ಎನ್ ಪಿ ಎ ಎರಡೂ ಸೇರಿ 2,37,500/-ರೂ ಮೀರದಂತೆ)ದೊಂದಿಗೆ ಹೊಸ ನಿರ್ದೇಶಕರ ಹುದ್ದೆಯನ್ನು ಸೃಷ್ಟಿಸುವುದು.
ಪ್ರಮುಖಾಂಶಗಳು :
• ಹೊಸ ಏಮ್ಸ್ ನಲ್ಲಿ ನೂರು 100 ಪದವಿ(ಎಂಬಿಬಿಎಸ್) ಸೀಟುಗಳು ಮತ್ತು 60 ಬಿಎಸ್ಸಿ(ನರ್ಸಿಂಗ್) ಸೀಟುಗಳು ಸೇರ್ಪಡೆಯಾಗಲಿವೆ.
• ಹೊಸ ಏಮ್ಸ್ ನಲ್ಲಿ 15-20 ಸೂಪರ್ ಸ್ಪೆಷಾಲಿಟಿ ವಿಭಾಗಗಳು ಇರಲಿವೆ.
• ಹೊಸ ಏಮ್ಸ್ ನಲ್ಲಿ ಸುಮಾರು 750 ಹಾಸಿಗೆಗಳ ಸಾಮರ್ಥ್ಯವಿರಲಿದೆ.
• ಪ್ರಸ್ತುತ ಏಮ್ಸ್ ಗಳ ಕಾರ್ಯನಿರ್ವಹಣೆ ಅಂಕಿ-ಅಂಶದ ಪ್ರಕಾರ ಪ್ರತಿಯೊಂದು ಹೊಸ ಏಮ್ಸ್ ಗಳು ಪ್ರತಿ ದಿನ ಸುಮಾರು 1500 ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಿದೆ ಮತ್ತು ತಿಂಗಳಿಗೆ ಸುಮಾರು 1000 ಒಳ ರೋಗಿಗಳಿಗೆ ಚಿಕಿತ್ಸೆ ಕೊಡಲಿದೆ.
ವಿವರಗಳು :
ಹೊಸ ಏಮ್ಸ್ ಸ್ಥಾಪನೆ ಅಡಿಯಲ್ಲಿ ಆಸ್ಪತ್ರೆ, ವೈದ್ಯಕೀಯ ಮತ್ತು ನರ್ಸಿಂಗ್ ಕೋರ್ಸ್ ಗಳ ತರಬೇತಿ ಬ್ಲಾಕ್, ವಸತಿ ಸಮುಚ್ಛಯ ಮತ್ತಿತರ ಅನುಕೂಲ ಮತ್ತು ಸೌಕರ್ಯಗಳು ಇರುತ್ತವೆ. ಇನ್ನು ವಿಸ್ತೃತವಾಗಿ ಹೇಳುವುದಾದರೆ ದೆಹಲಿಯ ಏಮ್ಸ್ ಮಾದರಿಯಲ್ಲಿ ಮತ್ತು ಪಿಎಂಎಸ್ಎಸ್ ವೈ ಒಂದನೇ ಹಂತದ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಆರು ಹೊಸ ಏಮ್ಸ್ ಗಳ ಮಾದರಿಯಲ್ಲಿ ಈ ಏಮ್ಸ್ ಕಾರ್ಯನಿರ್ವಹಿಸಲಿದೆ. ಗುಣಮಟ್ಟದ ಆರೋಗ್ಯ ರಕ್ಷಣೆ, ವೈದ್ಯಕೀಯ ಶಿಕ್ಷಣ, ನರ್ಸಿಂಗ್ ಶಿಕ್ಷಣ ಮತ್ತು ಆ ಪ್ರದೇಶದಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳುವ ಉದ್ದೇಶದಿಂದ ರಾಷ್ಟ್ರೀಯ ಸಂಸ್ಥೆಯ ಸ್ಥಾನಮಾನ ನೀಡಲು ಹೊಸದಾಗಿ ಏಮ್ಸ್ ಅನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ.
ಹೊಸದಾಗಿ ಸ್ಥಾಪಿಸಲಾಗುತ್ತಿರುವ ಈ ಆಸ್ಪತ್ರೆ 750 ಹಾಸಿಗೆಗಳ ಸಾಮರ್ಥ್ಯ ಹೊಂದಿರಲಿದ್ದು, ಇದರಲ್ಲಿ ತುರ್ತು ನಿಗಾಘಟಕ, ಗಾಯಾಳುಗಳ ರಕ್ಷಣೆ, ಆಯುಷ್ ಖಾಸಗಿ ಮತ್ತು ಐಸಿಯು ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಹಾಸಿಗೆಗಳು ಸೇರಿವೆ. ಇದಲ್ಲದೆ ವೈದ್ಯಕೀಯ ಕಾಲೇಜು, ಆಯುಷ್ ಬ್ಲಾಕ್, ಸಭಾಂಗಣ, ರಾತ್ರಿ ವಸತಿ, ಅತಿಥಿ ಗೃಹ, ಹಾಸ್ಟೆಲ್ ಮತ್ತು ವಸತಿ ಸೌಕರ್ಯಗಳಿರಲಿವೆ. ಹೊಸ ಏಮ್ಸ್ ಸ್ಥಾಪನೆಯಿಂದಾಗಿ ಬಂಡವಾಳ ಸೃಷ್ಟಿಯಾಗುವುದಲ್ಲದೆ, ಆರು ಹೊಸ ಏಮ್ಸ್ ಗಳ ಮಾದರಿಯಲ್ಲಿ ಅದರ ನಿರ್ವಹಣೆ ಮತ್ತು ನಿಗಾವಹಿಸಲು ಅಗತ್ಯ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸಲಾಗುವುದು, ಈ ಕೇಂದ್ರಕ್ಕೆ ತಗುಲುವ ಒಟ್ಟು ವೆಚ್ಚವನ್ನು ಆರೋಗ್ಯ ಮತ್ತು ಕುಟುಂಬ ಸಚಿವಾಲಯದಿಂದ ಪಿಎಂಎಸ್ಎಸ್ ವೈ ಅಡಿಯಲ್ಲಿ ನಿಗದಿಪಡಿಸಲಾಗಿರುವ ಬಜೆಟ್ ನಲ್ಲಿ ಅನುದಾನವನ್ನು ಒದಗಿಸಲಾಗುವುದು.
ಅನುಕೂಲಗಳು:
• ಹೊಸ ಏಮ್ಸ್ ಸ್ಥಾಪನೆಯಿಂದ ಆರೋಗ್ಯ ಶಿಕ್ಷಣ ಮತ್ತು ತರಬೇತಿಯಲ್ಲಿ ಪರಿವರ್ತನೆ ತರುವುದಷ್ಟೇ ಅಲ್ಲದೆ, ಪ್ರಾಂತ್ಯದಲ್ಲಿ ಇರುವ ಆರೋಗ್ಯ ರಕ್ಷಣಾ ವೃತ್ತಿಪರರ ಕೊರತೆಯನ್ನು ನೀಗಿಸಲಾಗುವುದು.
• ಹೊಸ ಏಮ್ಸ್ ಸ್ಥಾಪನೆಯಿಂದ ಜನರಿಗೆ ಸೂಪರ್ ಸ್ಪೆಷಾಲಿಟಿ ಆರೋಗ್ಯ ರಕ್ಷಣಾ ಸೇವೆ ದೊರಕುವುದಲ್ಲದೆ, ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯರ ಸಂಖ್ಯೆ ಹಾಗೂ ಅವರ ಲಭ್ಯತೆ ಹೆಚ್ಚಾಗಲಿದೆ. ಹೊಸ ಏಮ್ಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರವೇ ಸಂಪೂರ್ಣ ಆರ್ಥಿಕ ಅನುದಾನ ಒದಗಿಸಲಿದೆ. ಜೊತೆಗೆ ಹೊಸ ಏಮ್ಸ್ ನ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚವನ್ನೂ ಸಹ ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸಲಿದೆ.
ಉದ್ಯೋಗ ಸೃಷ್ಟಿ:
ಹೊಸ ಏಮ್ಸ್ ಸ್ಥಾಪನೆಯಿಂದಾಗಿ ಬೋಧಕ ಮತ್ತು ಬೋಧಕೇತರ ಹುದ್ದೆಗಳಲ್ಲಿ ಸುಮಾರು 3000 ಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಲಿವೆ. ಅಲ್ಲದೆ, ಏಮ್ಸ್ ನ ಸುತ್ತಮುತ್ತ ಶಾಪಿಂಗ್ ಕೇಂದ್ರ, ಕ್ಯಾಂಟೀನ್ ಮತ್ತಿತರ ಅನುಕೂಲ ಹಾಗೂ ಸೇವಾ ಚಟುವಟಿಕೆಗಳಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಭೌತಿಕ ಮೂಲಸೌಕರ್ಯ ವೃದ್ಧಿ ಕೆಲಸ ಸೇರಿದೆ. ಹಾಗಾಗಿ ಹೊಸ ಏಮ್ಸ್ ನಿರ್ಮಾಣ ಹಂತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆ ಇದೆ.
ಹಿನ್ನೆಲೆ:
ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ(ಪಿಎಂಎಸ್ಎಸ್ ವೈ) ಕೇಂದ್ರದ ಪ್ರಾಯೋಜಿತ ಯೋಜನೆಯಾಗಿದ್ದು, ಅದರ ಮೂಲಕ ದೇಶದ ನಾನಾ ಭಾಗಗಳಲ್ಲಿ ಕೈಗೆಟಕುವ ದರದಲ್ಲಿ ಆರೋಗ್ಯ ರಕ್ಷಣಾ ಸೇವೆಗಳ ಲಭ್ಯತೆಯಲ್ಲಿರುವ ಅಸಮತೋಲನವನ್ನು ಹೋಗಲಾಡಿಸುವುದು ಮತ್ತು ಹಿಂದುಳಿದ ರಾಜ್ಯಗಳಲ್ಲಿ ವಿಶೇಷವಾಗಿ ಗುಣಮಟ್ಟದ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುವ ಗುರಿ ಹೊಂದಲಾಗಿದೆ. ಗೌರವಾನ್ವಿತ ಹಣಕಾಸು ಸಚಿವರು ಮಂಡಿಸಿದ 2019-20ನೇ ಸಾಲಿನ ಮಧ್ಯಂತರ ಬಜೆಟ್ ಭಾಷಣದಲ್ಲಿ ಹರಿಯಾಣದಲ್ಲಿ ಏಮ್ಸ್ ಸ್ಥಾಪನೆ ಬಗ್ಗೆ ಘೋಷಿಸಲಾಗಿತ್ತು. ಏಮ್ಸ್ ಸ್ಥಾಪನೆ ಪೂರ್ಣ ವೆಚ್ಚ ಮತ್ತು ಅದರ ನಿರ್ವಹಣಾ ವೆಚ್ಚವನ್ನು ಕೇಂದ್ರ ಸರ್ಕಾರವು ಪಿಎಂಎಸ್ಎಸ್ ವೈ ಅಡಿಯಲ್ಲಿ ಭರಿಸಲಿದೆ.