ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹದಿನೈದನೇ ಹಣಕಾಸು ಆಯೋಗದ ಅವಧಿಯನ್ನು 2019 ರ ನವೆಂಬರ್ 30 ರವರೆಗೆ ವಿಸ್ತರಿಸಲು ತನ್ನ ಅನುಮೋದನೆ ನೀಡಿದೆ. 2020-2025ರ ಅವಧಿಯ ಸುಧಾರಣೆಗಳನ್ನು ಮತ್ತು ಹೊಸ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡು ಹಣಕಾಸಿನ ಪ್ರಕ್ಷೇಪಣಗಳಿಗಾಗಿ ಹೋಲಿಸಬಹುದಾದ ವಿವಿಧ ಅಂದಾಜುಗಳನ್ನು ಆಖೈರುಗೊಳಿಸಲು ಇದು ಆಯೋಗಕ್ಕೆ ಅನುವು ಮಾಡಿಕೊಡುತ್ತದೆ.
ಹಿನ್ನೆಲೆ:
ಹದಿನೈದನೇ ಹಣಕಾಸು ಆಯೋಗವನ್ನು ಸಂವಿಧಾನದ 280 ನೇ ವಿಧಿಯ (1)ನೇ ಉಪವಾಕ್ಯದ ಮತ್ತು ಹಣಕಾಸು ಆಯೋಗ (ವಿವಿಧ ನಿಬಂಧನೆಗಳ) ಕಾಯ್ದೆ 1951 ರ ಅನುಸಾರವಾಗಿ ರಾಷ್ಟ್ರಪತಿಗಳು 2017ರ ನವೆಂಬರ್ 27ರಂದು ರಚಿಸಿದ್ದರು. ಆಯೋಗವು ತನ್ನ ಉಲ್ಲೇಖದ ನಿಯಮಗಳ (ಟಿಓಆರ್) ಆಧಾರದ ಮೇಲೆ 2020 ಏಪ್ರಿಲ್ 1 ರಿಂದ ಪ್ರಾರಂಭವಾದ ಐದು ವರ್ಷಗಳ ಅವಧಿಯ ವರದಿಯನ್ನು 2019 ರ ಅಕ್ಟೋಬರ್ 30 ರೊಳಗೆ ಸಲ್ಲಿಸಬೇಕಾಗಿತ್ತು.
ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಪರಿಚಯಿಸಿದ ಅಂದರೆ, ಯೋಜನಾ ಆಯೋಗವನ್ನು ಮುಚ್ಚಿ ಅದರ ಬದಲಾಗಿ ನೀತಿ ಆಯೋಗ ರೂಪಿಸುವ, ಯೋಜನೇತರ ಮತ್ತು ಯೋಜನಾ ವೆಚ್ಚಗಳ ನಡುವಿನ ವ್ಯತ್ಯಾಸ ತೆಗೆದುಹಾಕುವ, ಒಂದು ತಿಂಗಳು ಮೊದಲೇ ಅಂದರೆ ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡುವ ಮತ್ತು ಹೊಸ ಆರ್ಥಿಕ ವರ್ಷ ಆರಂಭಕ್ಕೆ ಮೊದಲೇ ಪೂರ್ಣ ಬಜೆಟ್ ಗೆ ಅನುಮೋದನೆ ಪಡೆಯುವ, 2017ರ ಜುಲೈನಿಂದ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಪಿ)ಯನ್ನು ಜಾರಿ ಮಾಡುವ ಮತ್ತು ಹೊಸ ಸಾಲ ಮತ್ತು ವಿತ್ತೀಯ ಕೊರತೆ ಹಾದಿಯಲ್ಲಿ ಎಫ್.ಆರ್.ಬಿ.ಎಂ. ವಿನ್ಯಾಸದಂಥ ಹಲವು ಪ್ರಮುಖ ಹಣಕಾಸು/ಆಯವ್ಯಯದ ಸುಧಾರಣೆಗಳ ಹಿನ್ನೆಲೆಯಲ್ಲಿ ಈ ಆಯೋಗವನ್ನು ರಚಿಸಲಾಗಿತ್ತು.
ಆಯೋಗದ ಟಿ.ಓ.ಆರ್. ಮೇಲಿನ ಹಣಕಾಸು/ಆಯವ್ಯಯ ಸುಧಾರಣೆಗಳನ್ನು ಗಮನಕ್ಕೆ ತೆಗೆದುಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೆಚ್ಚ ಮತ್ತು ಸ್ವೀಕೃತಿಯನ್ನು ನಿರ್ಧರಿಸಿ, ತನ್ನ ಶಿಫಾರಸುಗಳನ್ನು ಮಾಡುವುದಕ್ಕೆ ಆಯೋಗಕ್ಕೆ ಕಾಲಾವಕಾಶ ಬೇಕಾಗುತ್ತದೆ, ಏಕೆಂದರೆ ಕಾಲಾನುಕ್ರಮದ ದತ್ತಾಂಶ ಸ್ಥಿರತೆ ಮತ್ತು ದತ್ತಾಂಶ ಸೆಟ್ ಗಳು ಸವಾಲಿನ ಅಂಶಗಳಾಗಿವೆ.