ಪ್ರಧಾನಮಂತ್ರಿ ಲಾಫ್ವೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು 2018ರ ಏಪ್ರಿಲ್ 16-17ರಂದು ಸ್ಟಾಕ್ ಹೋಮ್ ಗೆ ಅಧಿಕೃತ ಭೇಟಿ ನೀಡಿದ್ದರು.
ಪ್ರಧಾನಮಂತ್ರಿ ಮೋದಿ ಮತ್ತು ಪ್ರಧಾನಮಂತ್ರಿ ಲಾಫ್ವೆನ್ ಅವರು ಏಪ್ರಿಲ್ 17ರಂದು ಭೇಟಿ ಮಾಡಿ, 2016ರಲ್ಲಿ ಮುಂಬೈನಲ್ಲಿ ಬಿಡುಗಡೆ ಮಾಡಿದ್ದ ತಮ್ಮ ಜಂಟಿ ಹೇಳಿಕೆಯನ್ನು ಸ್ಮರಿಸಿದರು ಮತ್ತು ಅದರ ಜಾರಿಯಲ್ಲಿ ಈವರೆಗೆ ಆಗಿರುವ ಪ್ರಗತಿಯನ್ನು ಸ್ವಾಗತಿಸಿ, ಸಹಕಾರದ ಸಮಗ್ರ ರಾಜಕೀಯ ಚೌಕಟ್ಟಾದ ಜಂಟಿ ಹೇಳಿಕೆಯ ಬಗ್ಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
ಭಾರತ ಮತ್ತು ಸ್ವೀಡನ್ ಪ್ರಜಾಪ್ರಭುತ್ವ, ನೆಲದ ಕಾನೂನು, ಮಾನವ ಹಕ್ಕುಗಳಿಗೆ ಗೌರವ, ಬಹುತ್ವ ಮತ್ತು ನಿಯಮಾಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆಯ ಮೌಲ್ಯಗಳನ್ನು ಹಂಚಿಕೊಂಡಿವೆ. ಇಬ್ಬರೂ ಪ್ರಧಾನ ಮಂತ್ರಿಗಳು ಹವಾಮಾನ ಬದಲಾವಣೆ, 2030 ಕಾರ್ಯಕ್ರಮ, ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ, ಮಾನವ ಹಕ್ಕುಗಳು, ಲಿಂಗ ಸಮಾನತೆ, ಮಾನವೀಯ ವಿಷಯಗಳು,ಅಂತಾರಾಷ್ಟ್ರೀಯ ವ್ಯಾಪಾರ ಸೇರಿದಂತೆ ಪರಸ್ಪರ ಹಿತದ ಪ್ರಮುಖ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಸಂವಾದ ಮತ್ತು ಸಹಕಾರಕ್ಕಾಗಿ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಹವಾಮಾನ ಬದಲಾವಣೆ ತಡೆಗೆ ಜಾಗತಿಕ ಪ್ರಯತ್ನಗಳನ್ನು ತ್ವರಿತಗೊಳಿಸುವ ತುರ್ತು ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು ಮತ್ತು ಪ್ಯಾರಿಸ್ ಒಪ್ಪಂದಕ್ಕೆ ತಮ್ಮ ಇಬ್ಬರ ಸಮಾನ ನಿರಂತರ ಬದ್ಧತೆಯನ್ನು ಪ್ರತಿಪಾದಿಸಿದರು. ಎರಡೂ ಕಡೆಯವರು ಭದ್ರತಾ ನೀತಿಯ ಸಂವಾದವನ್ನು ಜಂಟಿ ಹೇಳಿಕೆಗನುಗುಣವಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದಲ್ಲಿ ಮುಂದುವರಿಸಲು ಸಮ್ಮತಿ ಸೂಚಿಸಿದರು.
ಇಬ್ಬರೂ ಪ್ರಧಾನಮಂತ್ರಿಗಳು ವಿಶ್ವಸಂಸ್ಥೆ ಮತ್ತು ಇತರ ಬಹುಪಕ್ಷೀಯ ವೇದಿಕೆಗಳಲ್ಲಿ ಆಪ್ತ ಸಹಕಾರಕ್ಕೆ ಸಮ್ಮತಿ ಸೂಚಿಸಿದರು. 2030 ಕಾರ್ಯಕ್ರಮದ ಅನುಷ್ಠಾನಕ್ಕೆ ಸದಸ್ಯ ರಾಷ್ಟ್ರಗಳಿಗೆ ಬೆಂಬಲ ನೀಡುವ ವಿಶ್ವಸಂಸ್ಥೆಯನ್ನು ಸಮರ್ಥಗೊಳಿಸುವುದನ್ನು ಖಾತ್ರಿ ಪಡಿಸಲು, ವಿಶ್ವಸಂಸ್ಥೆಯ ಮಹಾ ಪ್ರಧಾನಕಾರ್ಯದರ್ಶಿಯವರ ಸುಧಾರಣಾ ಪ್ರಯತ್ನಗಳ ಬಗ್ಗೆ ಗಮನ ಹರಿಸಿದರು. 21ನೇ ಶತಮಾನದ ವಾಸ್ತವಗಳಿಗೆ ವಿಶ್ವಸಂಸ್ಥೆಯನ್ನು ಹೆಚ್ಚು ಪ್ರತಿನಿಧಿತ್ವಗೊಳಿಸಲು, ಹೊಣೆಗಾರರನ್ನಾಗಿಸಲು, ಸಮರ್ಥ ಮತ್ತು ಸ್ಪಂದನಾತ್ಮಕವಾಗಿಸಲು ಅದರ ವಿಸ್ತರಣೆ ಸೇರಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯ ಅಗತ್ಯವನ್ನೂ ಅವರು ಪುನರುಚ್ಚರಿಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (2021-22) ಶಾಶ್ವತ ವಲ್ಲದ ಸದಸ್ಯತ್ವಕ್ಕೆ ಭಾರತದ ಅಭ್ಯರ್ಥಿಕೆ ಮತ್ತು ವಿಸ್ತರಿತ ಮತ್ತು ಸುಧಾರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವದ ಬೆಂಬಲಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರು ಪ್ರಧಾನಮಂತ್ರಿ ಲಾಫ್ವೆನ್ ಅವರಿಗೆ ಧನ್ಯವಾದ ಅರ್ಪಿಸಿದರು.
ಇಬ್ಬರೂ ಪ್ರಧಾನಮಂತ್ರಿಗಳು, ಜಾಗತಿಕ ರಫ್ತು ನಿಯಂತ್ರಣ, ಪ್ರಸರಣ ಮಾಡದಿರುವುದು ಮತ್ತು ನಿಶ್ಶಸ್ತ್ರೀಕರಣ ಉದ್ದೇಶಗಳನ್ನು ಬಲಪಡಿಸಲುಮತ್ತು ಬೆಂಬಲಿಸಲು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು ಹಾಗೂ ಈ ಕ್ಷೇತ್ರಗಳಲ್ಲಿ ಆಪ್ತವಾದ ಸಹಕಾರವನ್ನು ಎದಿರು ನೋಡುತ್ತಿರುವುದಾಗಿ ತಿಳಿಸಿದರು. ಆಸ್ಟ್ರೇಲಿಯಾ ಗುಂಪು (ಎ.ಜಿ.), ವಸ್ಸೇನಾರ್ ಒಪ್ಪಂದ (ಡಬ್ಲ್ಯುಎ), ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಆಡಳಿತ (ಎಂ.ಟಿ.ಸಿ.ಆರ್.) ಮತ್ತು ಖಂಡಾಂತರ ಕ್ಷಿಪಣಿ ಪ್ರಸರಣದ ವಿರುದ್ಧ ಹೇಗ್ ನೀತಿ ಸಂಹಿತೆ (ಎಚ್.ಸಿ.ಓ.ಸಿ.) ಸೇರಿದಂತೆ ಅಂತಾರಾಷ್ಟ್ರೀಯ ರಫ್ತು ನಿಯಂತ್ರಣ ಆಡಳಿತಕ್ಕೆ ಭಾರತದ ಇತ್ತೀಚಿನ ಸೇರ್ಪಡೆಯನ್ನು ಪ್ರಧಾನಮಂತ್ರಿ ಲಾಫ್ವೆನ್ ಅವರು ಸ್ವಾಗತಿಸಿದರು ಮತ್ತು ಪರಮಾಣು ಪೂರೈಕೆ ಗುಂಪಿ (ಎನ್.ಎಸ್.ಜಿ.)ನಲ್ಲಿ ಭಾರತದ ಸದಸ್ಯತ್ವಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಇಬ್ಬರೂ ಪ್ರಧಾನಮಂತ್ರಿಗಳು, ಭಯೋತ್ಪಾದನೆ ನಿಗ್ರಹ, ಭಯೋತ್ಪಾದಕ ಜಾಲಗಳ ಮತ್ತು ಆರ್ಥಿಕ ನೆರವಿಗೆ ಕಡಿವಾಣ ಮತ್ತು ಹಿಂಸಾತ್ಮಕ ವಿಧ್ವಂಸಕತೆ ತಡೆಗೆ ಬಲವಾದ ಅಂತಾರಾಷ್ಟ್ರೀಯ ಪಾಲುದಾರಿಕೆ ಮತ್ತು ಬೃಹತ್ ಏಕತೆಗೆ ಕರೆ ನೀಡಿದರು. ಭಯೋತ್ಪಾದನೆಯ ಬದಲಾಗುತ್ತಿರುವ ಬೆದರಿಕೆಯನ್ನು ಬಲವಾಗಿ ಎದುರಿಸಲು ಜಾಗತಿಕ ಭಯೋತ್ಪಾದನೆ ನಿಗ್ರಹಕ್ಕೆ ಕಾನೂನು ಚೌಕಟ್ಟನ್ನು ನಿಯಮಿತವಾಗಿ ನವೀಕರಿಸಬೇಕು ಎಂದು ಅವರು ಪ್ರತಿಪಾದಿಸಿದರು ಮತ್ತು ಭಯೋತ್ಪಾದನೆಯನ್ನು ಎದುರಿಸಲು ಕೈಗೊಳ್ಳುವ ಯಾವುದೇ ಕ್ರಮಗಳು ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿರಬೇಕೆಂದು ಅವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ, ಎರಡೂ ರಾಷ್ಟ್ರಗಳು, ಅಂತಾರಾಷ್ಟ್ರೀಯ ಭಯೋತ್ಪಾದನೆ ಕುರಿತ ಸಮಗ್ರ ನಿರ್ಣಯದ ಕರಡನ್ನು (ಸಿಸಿಐಟಿ) ಆದಷ್ಟು ಬೇಗ ಆಖೈರುಗೊಳಿಸಲು ಕರೆ ನೀಡಿದರು. ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಉತ್ತೇಜಿಸಲು, ಅವರು ಈ ಕೆಳಗಿನ ಭಾರತ – ಸ್ವೀಡನ್ ಜಂಟಿ ಕ್ರಿಯಾ ಯೋಜನೆಗೆ ನಿರ್ಧರಿಸಿದರು. ಇದರಡಿ, ಭಾರತ ಮತ್ತು ಸ್ವೀಡನ್ ಸೂಕ್ತ ಸಚಿವರು, ಸಂಸ್ಥೆ ಮತ್ತು ಆಕ್ಟರ್ ಗಳ ಮೂಲಕ ಈ ಗುರಿಯನ್ನು ಹೊಂದಿದೆ:
ನಾವಿನ್ಯತೆ
ವಾಣಿಜ್ಯ ಮತ್ತು ಹೂಡಿಕೆ
ಸ್ಮಾರ್ಟ್ ನಗರಗಳು ಮತ್ತು ಮುಂದಿನ ಪೀಳಿಗೆಯ ಸಾರಿಗೆ
ಸ್ಮಾರ್ಟ್, ಸುಸ್ಥಿರ ಮತ್ತು ಪುನರ್ ನವೀಕರಿಸುವ ಇಂಧನ
ಮಹಿಳೆಯರ ಕೌಶಲ ಅಭಿವೃದ್ಧಿ ಮತ್ತು ಸಬಲೀಕರಣ
ರಕ್ಷಣೆ
ಬಾಹ್ಯಾಕಾಶ ಮತ್ತು ವಿಜ್ಞಾನ
ಆರೋಗ್ಯ ಮತ್ತು ಜೀವನ ವಿಜ್ಞಾನಗಳು
ಅನುಸರಣೆ
***