ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 18 ರಂದು ಮಧ್ಯಾಹ್ನ 12:30ರ ಸುಮಾರಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 230ಕ್ಕೂ ಹೆಚ್ಚು ಜಿಲ್ಲೆಗಳ 50000ಕ್ಕೂ ಹೆಚ್ಚು ಹಳ್ಳಿಗಳಲ್ಲಿನ ಆಸ್ತಿ ಮಾಲೀಕರಿಗೆ ಸ್ವಾಮಿತ್ವ ಯೋಜನೆಯಡಿ 65 ಲಕ್ಷಕ್ಕೂ ಹೆಚ್ಚು ಆಸ್ತಿ ಕಾರ್ಡ್ ಗಳನ್ನು ವಿತರಿಸಲಿದ್ದಾರೆ.
ಸಮೀಕ್ಷೆಗಾಗಿ ಹಳ್ಳಿಗಳಲ್ಲಿನ ಜನವಸತಿ ಪ್ರದೇಶಗಳಲ್ಲಿ ಮನೆಗಳ ಒಡೆತನ ಹೊಂದಿರುವ ಕುಟುಂಬಗಳಿಗೆ ಇತ್ತೀಚಿನ ಡ್ರೋನ್ ತಂತ್ರಜ್ಞಾನದ ಮೂಲಕ ‘ಹಕ್ಕು ಪತ್ರ (ರೆಕಾರ್ಡ್ ಆಫ್ ರೈಟ್ಸ್)’ ಒದಗಿಸುತ್ತಾ ಗ್ರಾಮೀಣ ಭಾರತದ ಆರ್ಥಿಕ ಪ್ರಗತಿಯನ್ನು ಉತ್ತೇಜಿಸಲು ಪ್ರಧಾನಮಂತ್ರಿಯವರು SVAMITVA ಯೋಜನೆಗೆ ಚಾಲನೆ ನೀಡಿದ್ದರು.
ಈ ಯೋಜನೆಯು ಆಸ್ತಿಗಳ ನಗದೀಕರಣ ಸುಗಮಗೊಳಿಸಲು ಮತ್ತು ಬ್ಯಾಂಕ್ ಸಾಲ ಮೊದಲಾದ ಸಾಂಸ್ಥಿಕ ಸಾಲ ಲಭ್ಯವಾಗಿಸಲು, ಆಸ್ತಿ ಸಂಬಂಧಿತ ವಿವಾದಗಳನ್ನು ಕಡಿಮೆ ಮಾಡಲು, ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿಗಳು ಮತ್ತು ಆಸ್ತಿ ತೆರಿಗೆಯ ಸೂಕ್ತ ಮೌಲ್ಯಮಾಪನಕ್ಕೆ ಪೂರಕವಾಗಿದೆ ಹಾಗೂ ಸಮಗ್ರ ಗ್ರಾಮ ಮಟ್ಟದ ಯೋಜನೆಯನ್ನು ಕಾರ್ಯಗತಗೊಳಿಸಲು ಅನುಕೂಲವಾಗಲಿದೆ.
ಉದ್ದೇಶಿತ ಹಳ್ಳಿಗಳ ಪೈಕಿ ಶೇಕಡ 92 ರಷ್ಟು ಅಂದರೆ 3.17 ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿ ಡ್ರೋನ್ ಸಮೀಕ್ಷೆ ಪೂರ್ಣಗೊಂಡಿದೆ. ಈವರೆಗೆ 1.53 ಲಕ್ಷಕ್ಕೂ ಹೆಚ್ಚು ಹಳ್ಳಿಗಳ ಸುಮಾರು 2.25 ಕೋಟಿ ಆಸ್ತಿ ಕಾರ್ಡ್ ಗಳನ್ನು ಸಿದ್ಧಪಡಿಸಲಾಗಿದೆ.
ಈ ಯೋಜನೆಯು ಪುದುಚೆರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ತ್ರಿಪುರಾ, ಗೋವಾ, ಉತ್ತರಾಖಂಡ ಮತ್ತು ಹರಿಯಾಣಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿದೆ. ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಛತ್ತೀಸ್ ಗಢ ಹಾಗೂ ವಿವಿಧ ಕೇಂದ್ರಾಡಳಿತ ಪ್ರದೇಶಗಳಲ್ಲಿ ಡ್ರೋನ್ ಸಮೀಕ್ಷೆ ಪೂರ್ಣಗೊಂಡಿದೆ.
*****