ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 230 ಕ್ಕೂ ಹೆಚ್ಚು ಜಿಲ್ಲೆಗಳ 50,000 ಕ್ಕೂ ಹೆಚ್ಚು ಹಳ್ಳಿಗಳ ಆಸ್ತಿ ಮಾಲೀಕರಿಗೆ ಸ್ವಾಮಿತ್ವ ಯೋಜನೆಯಡಿ 65 ಲಕ್ಷಕ್ಕೂ ಹೆಚ್ಚು ಆಸ್ತಿ ಕಾರ್ಡ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ಭಾರತದ ಹಳ್ಳಿಗಳು ಮತ್ತು ಗ್ರಾಮೀಣ ಪ್ರದೇಶಗಳಿಗೆ ಚರಿತ್ರಾರ್ಹ ದಿನವಾಗಿದೆ ಎಂದರಲ್ಲದೆ ಈ ಸಂದರ್ಭದಲ್ಲಿ ಎಲ್ಲಾ ಫಲಾನುಭವಿಗಳು ಮತ್ತು ನಾಗರಿಕರಿಗೆ ಶುಭ ಕೋರಿದರು.
ಐದು ವರ್ಷಗಳ ಹಿಂದೆ, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು ತಮ್ಮ ಆಸ್ತಿ ಕಾರ್ಡ್ ಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸ್ವಾಮಿತ್ವ ಯೋಜನೆಯನ್ನು ಪ್ರಾರಂಭಿಸಲಾಯಿತು ಎಂದು ಪ್ರಧಾನಿ ಹೇಳಿದರು. ವಿವಿಧ ರಾಜ್ಯಗಳು ಆಸ್ತಿ ಮಾಲೀಕತ್ವ ಪ್ರಮಾಣಪತ್ರಗಳನ್ನು ಘರೋನಿ, ಅಧಿಕಾರ್ ಅಭಿಲೇಖ್, ಪ್ರಾಪರ್ಟಿ ಕಾರ್ಡ್, ಮಾಲ್ಮಟ್ಟಾ ಪತ್ರಕ್ ಮತ್ತು ಆವಾಸಿಯಾ ಭೂಮಿ ಪಟ್ಟಾ ಮುಂತಾದ ವಿವಿಧ ಹೆಸರುಗಳಿಂದ ಉಲ್ಲೇಖಿಸುತ್ತವೆ ಎಂದು ಅವರು ಹೇಳಿದರು. “ಕಳೆದ 5 ವರ್ಷಗಳಲ್ಲಿ 1.5 ಕೋಟಿಗೂ ಹೆಚ್ಚು ಜನರಿಗೆ ಸ್ವಾಮಿತ್ವ ಕಾರ್ಡ್ ಗಳನ್ನು ವಿತರಿಸಲಾಗಿದೆ” ಎಂದು ಶ್ರೀ ಮೋದಿ ಹೇಳಿದರು. ಇಂದಿನ ಕಾರ್ಯಕ್ರಮದಲ್ಲಿ, 65 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಈ ಕಾರ್ಡ್ ಗಳನ್ನು ಪಡೆದಿವೆ ಎಂದು ಅವರು ನುಡಿದರು. ಸ್ವಾಮಿತ್ವ ಯೋಜನೆ ಅಡಿಯಲ್ಲಿ ಹಳ್ಳಿಗಳಲ್ಲಿ ಸುಮಾರು 2.25 ಕೋಟಿ ಜನರು ಈಗ ತಮ್ಮ ಮನೆಗಳಿಗೆ ಕಾನೂನುಬದ್ಧ ದಾಖಲೆಗಳನ್ನು ಪಡೆದಿದ್ದಾರೆ ಎಂದು ಪ್ರಧಾನಿ ಹೇಳಿದರು. ಎಲ್ಲಾ ಫಲಾನುಭವಿಗಳಿಗೆ ಅವರು ತಮ್ಮ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳನ್ನು ತಿಳಿಸಿದರು.
21 ನೇ ಶತಮಾನವು ಹವಾಮಾನ ಬದಲಾವಣೆ, ನೀರಿನ ಕೊರತೆ, ಆರೋಗ್ಯ ಬಿಕ್ಕಟ್ಟುಗಳು ಮತ್ತು ಜಾಗತಿಕ ಸಾಂಕ್ರಾಮಿಕ ರೋಗಗಳು ಸೇರಿದಂತೆ ಹಲವಾರು ಸವಾಲುಗಳನ್ನು ಪ್ರಸ್ತುತಪಡಿಸುತ್ತದೆ ಎಂದು ಹೇಳಿದ ಪ್ರಧಾನಿ, ಜಗತ್ತು ಎದುರಿಸುತ್ತಿರುವ ಮತ್ತೊಂದು ಮಹತ್ವದ ಸವಾಲು ಆಸ್ತಿ ಹಕ್ಕುಗಳು ಮತ್ತು ಕಾನೂನುಬದ್ಧ ಆಸ್ತಿ ದಾಖಲೆಗಳ ಕೊರತೆ ಎಂದು ಒತ್ತಿ ಹೇಳಿದರು. ವಿವಿಧ ದೇಶಗಳಲ್ಲಿನ ಅನೇಕ ಜನರು ತಮ್ಮ ಆಸ್ತಿಗೆ ಸರಿಯಾದ ಕಾನೂನು ದಾಖಲೆಗಳನ್ನು ಹೊಂದಿಲ್ಲ ಎಂಬ ವಿಶ್ವಸಂಸ್ಥೆಯ ಅಧ್ಯಯನವನ್ನು ಪ್ರಧಾನಿ ಉಲ್ಲೇಖಿಸಿದರು. ಬಡತನವನ್ನು ಕಡಿಮೆ ಮಾಡಲು ಜನರು ಆಸ್ತಿ ಹಕ್ಕುಗಳನ್ನು ಹೊಂದಿರಬೇಕು ಎಂದು ವಿಶ್ವಸಂಸ್ಥೆ ಒತ್ತಿ ಹೇಳಿದೆ ಎಂದು ಅವರು ಹೇಳಿದರು. ಆಸ್ತಿ ಹಕ್ಕುಗಳ ಸವಾಲಿನ ಬಗ್ಗೆ ಪುಸ್ತಕ ಬರೆದಿರುವ ಖ್ಯಾತ ಅರ್ಥಶಾಸ್ತ್ರಜ್ಞರೊಬ್ಬರನ್ನು ಉಲ್ಲೇಖಿಸಿದ ಪ್ರಧಾನಿ, ಗ್ರಾಮಸ್ಥರ ಒಡೆತನದ ಸಣ್ಣ ಪ್ರಮಾಣದ ಆಸ್ತಿಯು ಹೆಚ್ಚಾಗಿ ಅವರು ಅಧಿಕೃತ ಭೂದಾಖಲೆಗಳನ್ನು ಹೊಂದಿಲ್ಲದೇ ಇರುವುದರಿಂದ ಸಾಲ ಪಡೆಯಲಾಗದಂತಹ ಆಸ್ತಿಯಾಗಿ ಉಳಿಯುವುದರಿಂದ “ಸತ್ತ ಬಂಡವಾಳ” ಎಂದು ಹೇಳಿದ್ದನ್ನು ಪ್ರಸ್ತಾಪಿಸಿದರು. ಇದರರ್ಥ ಆಸ್ತಿಯನ್ನು ವಹಿವಾಟುಗಳಿಗೆ ಬಳಸಲಾಗುವುದಿಲ್ಲ ಮತ್ತು ಇದು ಕುಟುಂಬದ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುವುದಿಲ್ಲ ಎಂದು ಅವರು ವಿವರಿಸಿದರು. ಆಸ್ತಿ ಹಕ್ಕುಗಳ ಜಾಗತಿಕ ಸವಾಲಿನಿಂದ ಭಾರತವೂ ಹೊರತಾಗಿಲ್ಲ ಎಂದು ಶ್ರೀ ಮೋದಿ ಹೇಳಿದರು. ಲಕ್ಷಾಂತರ ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರೂ, ಗ್ರಾಮಸ್ಥರಿಗೆ ಕಾನೂನುಬದ್ಧ ದಾಖಲೆಗಳ ಕೊರತೆಯಿದೆ, ಇದು ವಿವಾದಗಳಿಗೆ ಕಾರಣವಾಗುತ್ತದೆ ಮತ್ತು ಪ್ರಬಲ ವ್ಯಕ್ತಿಗಳು ಅದನ್ನು ಅಕ್ರಮವಾಗಿ ಸ್ವಾಧೀನಕ್ಕೆ ತೆಗೆದುಕೊಳ್ಳಲು ಕಾರಣವಾಗುತ್ತದೆ ಎಂಬುದರತ್ತ ಅವರು ಬೆಟ್ಟು ಮಾಡಿದರು. ಕಾನೂನು ದಾಖಲೆಗಳಿಲ್ಲದೆ, ಬ್ಯಾಂಕುಗಳು ಸಹ ಅಂತಹ ಆಸ್ತಿಗಳಿಗೆ ಸಾಲ ಒದಗಿಸದೆ ದೂರವಿರುತ್ತವೆ ಎಂದು ಅವರು ಹೇಳಿದರು. ಈ ಸಮಸ್ಯೆಯನ್ನು ಪರಿಹರಿಸಲು ಹಿಂದಿನ ಸರ್ಕಾರಗಳು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಎಂದು ಪ್ರಧಾನಿ ಒತ್ತಿ ಹೇಳಿದರು. ಸ್ವಾಮಿತ್ವ ಯೋಜನೆ ಮೂಲಕ ಆಸ್ತಿ ದಾಖಲೀಕರಣದ ಸವಾಲನ್ನು ಎದುರಿಸಲು ಸರ್ಕಾರ 2014 ರಲ್ಲಿ ನಿರ್ಧರಿಸಿತು ಎಂದು ಅವರು ಹೇಳಿದರು. ಯಾವುದೇ ಸಂವೇದನಾಶೀಲ ಸರ್ಕಾರವು ತನ್ನ ಗ್ರಾಮಸ್ಥರನ್ನು ಇಂತಹ ಸಂಕಷ್ಟಕ್ಕೆ ದೂಡಬಾರದಿತ್ತು ಎಂದು ಪ್ರಧಾನಿ ಒತ್ತಿ ಹೇಳಿದರು. ಸ್ವಾಮಿತ್ವ ಯೋಜನೆಯ ಬಗ್ಗೆ ವಿವರಿಸಿದ ಅವರು, ಇದು ಡ್ರೋನ್ಗಳನ್ನು ಬಳಸಿಕೊಂಡು ಹಳ್ಳಿಗಳಲ್ಲಿನ ಮನೆಗಳು ಮತ್ತು ಭೂಮಿಯನ್ನು ಮ್ಯಾಪಿಂಗ್ ಮಾಡುವುದು ಮತ್ತು ಗ್ರಾಮಸ್ಥರಿಗೆ ವಸತಿ ಆಸ್ತಿಗಳಿಗೆ ಕಾನೂನುಬದ್ಧ ದಾಖಲೆಗಳನ್ನು ಒದಗಿಸುವುದನ್ನು ಒಳಗೊಂಡಿದೆ ಎಂದರು. ಈ ಯೋಜನೆಯ ಪ್ರಯೋಜನಗಳು ಈಗ ಗೋಚರಿಸುತ್ತಿವೆ ಎಂದು ಅವರು ಹೇಳಿದರು. ಸ್ವಾಮಿತ್ವ ಯೋಜನೆಯ ಫಲಾನುಭವಿಗಳೊಂದಿಗಿನ ತಮ್ಮ ಹಿಂದಿನ ಸಂವಾದವನ್ನು ಉಲ್ಲೇಖಿಸಿದ ಶ್ರೀ ಮೋದಿ, ಈ ಯೋಜನೆಯು ಅವರ ಜೀವನವನ್ನು ಹೇಗೆ ಪರಿವರ್ತಿಸಿದೆ ಎಂಬುದನ್ನು ವಿವರಿಸಿದರು, ಅವರು ಈಗ ತಮ್ಮ ಆಸ್ತಿಗಳಿಗಾಗಿ ಬ್ಯಾಂಕುಗಳಿಂದ ಸಹಾಯವನ್ನು ಪಡೆಯುತ್ತಿದ್ದಾರೆ ಮತ್ತು ಅವರ ತೃಪ್ತಿ ಹಾಗು ಸಂತೋಷ ಸ್ಪಷ್ಟವಾಗಿದೆ ಎಂದರು. ಇದನ್ನು ದೊಡ್ಡ ಆಶೀರ್ವಾದವೆಂದು ಪರಿಗಣಿಸುವುದಾಗಿಯೂ ಪ್ರಧಾನ ಮಂತ್ರಿ ಹೇಳಿದರು.
“ಭಾರತವು 6 ಲಕ್ಷಕ್ಕೂ ಹೆಚ್ಚು ಗ್ರಾಮಗಳನ್ನು ಹೊಂದಿದೆ, ಅವುಗಳಲ್ಲಿ ಅರ್ಧದಷ್ಟು ಜಿಲ್ಲೆಗಳಲ್ಲಿ ಡ್ರೋನ್ ಸಮೀಕ್ಷೆ ಪೂರ್ಣಗೊಂಡಿದೆ” ಎಂದು ಪ್ರಧಾನಿ ಹೇಳಿದರು. ಕಾನೂನು ಬದ್ಧ ದಾಖಲೆಗಳನ್ನು ಪಡೆದ ನಂತರ, ಲಕ್ಷಾಂತರ ಜನರು ತಮ್ಮ ಆಸ್ತಿಯ ಆಧಾರದ ಮೇಲೆ ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ, ತಮ್ಮ ಹಳ್ಳಿಗಳಲ್ಲಿ ಸಣ್ಣ ವ್ಯವಹಾರಗಳನ್ನು ಪ್ರಾರಂಭಿಸಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಈ ಫಲಾನುಭವಿಗಳಲ್ಲಿ ಹೆಚ್ಚಿನವರು ಸಣ್ಣ ಮತ್ತು ಮಧ್ಯಮ ರೈತ ಕುಟುಂಬಗಳು, ಅವರಿಗೆ ಈ ಆಸ್ತಿ ಕಾರ್ಡ್ ಗಳು ಆರ್ಥಿಕ ಭದ್ರತೆಯ ಮಹತ್ವದ ಖಾತರಿಯಾಗಿದೆ ಎಂದು ಅವರು ವಿವರಿಸಿದರು. ದಲಿತ, ಹಿಂದುಳಿದ ಮತ್ತು ಬುಡಕಟ್ಟು ಕುಟುಂಬಗಳು ಅಕ್ರಮ ವಾಸ್ತವ್ಯ ಮತ್ತು ದೀರ್ಘಕಾಲದ ನ್ಯಾಯಾಲಯದ ವಿವಾದಗಳಿಂದ ಹೆಚ್ಚು ಬಾಧಿತವಾಗಿವೆ ಎಂಬುದರತ್ತ ಪ್ರಧಾನಿ ಗಮನ ಸೆಳೆದರು. ಕಾನೂನು ಪ್ರಮಾಣೀಕರಣದೊಂದಿಗೆ, ಅವರು ಈಗ ಈ ಬಿಕ್ಕಟ್ಟಿನಿಂದ ಮುಕ್ತರಾಗುತ್ತಾರೆ ಎಂದು ಅವರು ಹೇಳಿದರು. ಎಲ್ಲಾ ಹಳ್ಳಿಗಳಲ್ಲಿ ಪ್ರಾಪರ್ಟಿ ಕಾರ್ಡ್ ಗಳನ್ನು ವಿತರಿಸಿದ ನಂತರ, ಅದು 100 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಚಟುವಟಿಕೆಗಳನ್ನು ಅನ್ಲಾಕ್ ಮಾಡುತ್ತದೆ ಎಂದು ಅಂದಾಜಿಸಲಾಗಿದೆ. ಇದರಿಂದ ದೇಶದ ಆರ್ಥಿಕತೆಗೆ ಗಣನೀಯ ಬಂಡವಾಳ ಸೇರ್ಪಡೆಯಾಗುತ್ತದೆ ಎಂಬುದನ್ನು ಪ್ರಧಾನಿ ಒತ್ತಿ ಹೇಳಿದರು.
“ನಮ್ಮ ಸರ್ಕಾರವು ಗ್ರಾಮ ಸ್ವರಾಜ್ಯವನ್ನು ತಳಮಟ್ಟದಲ್ಲಿ ಜಾರಿಗೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ” ಎಂದು ಶ್ರೀ ಮೋದಿ ಉದ್ಗರಿಸಿದರು. ಸ್ವಾಮಿತ್ವ ಯೋಜನೆಯಿಂದ ಗ್ರಾಮ ಅಭಿವೃದ್ಧಿ ಯೋಜನೆ ಮತ್ತು ಅನುಷ್ಠಾನ ಗಮನಾರ್ಹವಾಗಿ ಸುಧಾರಿಸಿದೆ ಎಂದು ಒತ್ತಿ ಹೇಳಿದರು. ಸ್ಪಷ್ಟ ನಕ್ಷೆಗಳು ಮತ್ತು ಜನವಸತಿ ಪ್ರದೇಶಗಳ ಜ್ಞಾನದೊಂದಿಗೆ, ಅಭಿವೃದ್ಧಿ ಕಾರ್ಯ ಯೋಜನೆ ನಿಖರವಾಗಿರುತ್ತದೆ, ಕಳಪೆ ಯೋಜನೆಯಿಂದ ಉಂಟಾಗುವ ಪೋಲಾಗುವಿಕೆಯನ್ನು ಮತ್ತು ಅಡೆತಡೆಗಳನ್ನು ನಿವಾರಿಸುತ್ತದೆ ಎಂದು ಅವರು ಹೇಳಿದರು. ಆಸ್ತಿ ಹಕ್ಕುಗಳು ಪಂಚಾಯತ್ ಭೂಮಿ ಮತ್ತು ಗೋಮಾಳ ಪ್ರದೇಶಗಳನ್ನು ಗುರುತಿಸುವ ಮೂಲಕ ಭೂ ಮಾಲೀಕತ್ವದ ವಿವಾದಗಳನ್ನು ಪರಿಹರಿಸುತ್ತವೆ, ಆ ಮೂಲಕ ಗ್ರಾಮ ಪಂಚಾಯಿತಿಗಳನ್ನು ಆರ್ಥಿಕವಾಗಿ ಸಬಲೀಕರಿಸುತ್ತವೆ ಎಂದು ಪ್ರಧಾನಿ ಹೇಳಿದರು. ಆಸ್ತಿ ಕಾರ್ಡ್ ಗಳು ಹಳ್ಳಿಗಳಲ್ಲಿ ವಿಪತ್ತು ನಿರ್ವಹಣೆಯನ್ನು ಹೆಚ್ಚಿಸುತ್ತವೆ, ಬೆಂಕಿ, ಪ್ರವಾಹ ಮತ್ತು ಭೂಕುಸಿತದಂತಹ ಘಟನೆಗಳ ಸಮಯದಲ್ಲಿ ಪರಿಹಾರವನ್ನು ಪಡೆಯುವುದನ್ನು ಸುಲಭಗೊಳಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಭೂ ವಿವಾದಗಳು ರೈತರಿಗೆ ಸಾಮಾನ್ಯವಾಗಿದೆ ಮತ್ತು ಭೂ ದಾಖಲೆಗಳನ್ನು ಪಡೆಯುವುದು ಸವಾಲಿನದ್ದಾಗಿದೆ, ಆಗಾಗ್ಗೆ ಅಧಿಕಾರಿಗಳನ್ನು ಅನೇಕ ಬಾರಿ ಭೇಟಿ ಮಾಡಬೇಕಾಗುತ್ತದೆ ಮತ್ತು ಇದು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ ಎಂದು ಹೇಳಿದ ಪ್ರಧಾನಿ, ಈ ಸಮಸ್ಯೆಗಳನ್ನು ಕಡಿಮೆ ಮಾಡಲು, ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ ಎಂದು ಹೇಳಿದರು. ಸ್ವಾಮಿತ್ವ ಮತ್ತು ಭೂ-ಆಧಾರ್ ಗ್ರಾಮ ಅಭಿವೃದ್ಧಿಗೆ ಅಡಿಪಾಯ ವ್ಯವಸ್ಥೆಗಳಾಗಿವೆ ಎಂದು ಅವರು ಒತ್ತಿ ಹೇಳಿದರು. ಭೂ-ಆಧಾರ್ ಭೂಮಿಗೆ ವಿಶಿಷ್ಟ ಗುರುತನ್ನು ಒದಗಿಸುತ್ತದೆ, ಸುಮಾರು 23 ಕೋಟಿ ಭೂ-ಆಧಾರ್ ಸಂಖ್ಯೆಗಳನ್ನು ನೀಡಲಾಗಿದೆ, ಇದು ಭೂ ನಿವೇಶನಗಳನ್ನು (ಪ್ಲಾಟ್ಗಳನ್ನು) ಗುರುತಿಸುವುದನ್ನು ಸುಲಭಗೊಳಿಸುತ್ತದೆ ಎಂದು ಅವರು ಹೇಳಿದರು. “ಕಳೆದ 7-8 ವರ್ಷಗಳಲ್ಲಿ, ಸರಿಸುಮಾರು 98% ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ, ಮತ್ತು ಹೆಚ್ಚಿನ ಭೂ ನಕ್ಷೆಗಳು ಈಗ ಡಿಜಿಟಲ್ ರೂಪದಲ್ಲಿ ಲಭ್ಯವಿವೆ” ಎಂದು ಶ್ರೀ ಮೋದಿ ಹೇಳಿದರು.
ಭಾರತದ ಆತ್ಮವು ಅದರ ಹಳ್ಳಿಗಳಲ್ಲಿದೆ ಎಂಬ ಮಹಾತ್ಮ ಗಾಂಧಿಯವರ ನಂಬಿಕೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ದೃಷ್ಟಿಕೋನದ ನಿಜವಾದ ಅನುಷ್ಠಾನ ಕಳೆದ ದಶಕದಲ್ಲಿ ಸಂಭವಿಸಿದೆ ಎಂದೂ ಹೇಳಿದರು. ಕಳೆದ 10 ವರ್ಷಗಳಲ್ಲಿ ಅದರಲ್ಲೂ ಹೆಚ್ಚಾಗಿ ಹಳ್ಳಿಗಳಲ್ಲಿ 2.5 ಕೋಟಿಗೂ ಹೆಚ್ಚು ಕುಟುಂಬಗಳು ವಿದ್ಯುತ್ ಸಂಪರ್ಕ ಪಡೆದಿವೆ, 10 ಕೋಟಿಗೂ ಹೆಚ್ಚು ಕುಟುಂಬಗಳು ಶೌಚಾಲಯಗಳಿಗೆ ಪ್ರವೇಶವನ್ನು ಪಡೆದಿವೆ ಮತ್ತು ಉಜ್ವಲ ಯೋಜನೆಯ ಮೂಲಕ 10 ಕೋಟಿ ಮಹಿಳೆಯರು ಅನಿಲ ಸಂಪರ್ಕವನ್ನು ಪಡೆದಿದ್ದಾರೆ, ಇವರಲ್ಲಿ ಹೆಚ್ಚಿನವರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಕಳೆದ ಐದು ವರ್ಷಗಳಲ್ಲಿ 12 ಕೋಟಿಗೂ ಹೆಚ್ಚು ಕುಟುಂಬಗಳು ನಲ್ಲಿ ನೀರನ್ನು ಪಡೆದಿವೆ ಮತ್ತು 50 ಕೋಟಿಗೂ ಹೆಚ್ಚು ಜನರು ಮುಖ್ಯವಾಗಿ ಹಳ್ಳಿಗಳಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ ಎಂದೂ ಅವರು ಹೇಳಿದರು. 1.5 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಭಾರತ್ ಆರೋಗ್ಯ ಮಂದಿರಗಳನ್ನು ಸ್ಥಾಪಿಸಲಾಗಿದೆ, ಅವುಗಳಲ್ಲಿ ಹೆಚ್ಚಿನವು ಹಳ್ಳಿಗಳಲ್ಲಿವೆ ಎಂದು ಪ್ರಧಾನಿ ಹೇಳಿದರು. ದಶಕಗಳಿಂದ, ಲಕ್ಷಾಂತರ ಗ್ರಾಮಸ್ಥರು, ವಿಶೇಷವಾಗಿ ದಲಿತ, ಹಿಂದುಳಿದ ಮತ್ತು ಬುಡಕಟ್ಟು ಕುಟುಂಬಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದವು ಮತ್ತು ಈಗ ಈ ಕುಟುಂಬಗಳು ಈ ಸೌಲಭ್ಯಗಳ ಪ್ರಮುಖ ಫಲಾನುಭವಿಗಳಾಗಿವೆ ಎಂದು ಅವರು ಒತ್ತಿ ಹೇಳಿದರು.
ಹಳ್ಳಿಗಳಲ್ಲಿ ರಸ್ತೆಗಳನ್ನು ಸುಧಾರಿಸಲು ಕಳೆದ ದಶಕದಲ್ಲಿ ಮಾಡಿದ ಅಭೂತಪೂರ್ವ ಪ್ರಯತ್ನಗಳನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, 2000 ರಲ್ಲಿ ಅಟಲ್ ಜೀ ಅವರ ಸರ್ಕಾರವು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ, ಹಳ್ಳಿಗಳಲ್ಲಿ ಸರಿಸುಮಾರು 8.25 ಲಕ್ಷ ಕಿಲೋಮೀಟರ್ ರಸ್ತೆಗಳನ್ನು ನಿರ್ಮಿಸಲಾಗಿದೆ, ಅವುಗಳಲ್ಲಿ ಅರ್ಧದಷ್ಟು ಕಳೆದ 10 ವರ್ಷಗಳಲ್ಲಿ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು. ದೂರದ ಗಡಿ ಹಳ್ಳಿಗಳಲ್ಲಿ ಸಂಪರ್ಕವನ್ನು ಹೆಚ್ಚಿಸಲು ತಂದಿರುವ ರೋಮಾಂಚಕ ಗ್ರಾಮ ಕಾರ್ಯಕ್ರಮವನ್ನು ಪ್ರಧಾನಿ ಉಲ್ಲೇಖಿಸಿದರು. ಹಳ್ಳಿಗಳಲ್ಲಿ ಇಂಟರ್ನೆಟ್ ಒದಗಿಸುವುದು ಸಹ ಆದ್ಯತೆಯಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, 2014 ಕ್ಕಿಂತ ಮೊದಲು 100 ಕ್ಕಿಂತ ಕಡಿಮೆ ಪಂಚಾಯಿತಿಗಳು ಬ್ರಾಡ್ ಬ್ಯಾಂಡ್ ಫೈಬರ್ ಸಂಪರ್ಕವನ್ನು ಹೊಂದಿದ್ದವು, ಆದರೆ ಕಳೆದ 10 ವರ್ಷಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಪಂಚಾಯಿತಿಗಳು ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಹೊಂದಿವೆ ಎಂದರು. ಇದೇ ಅವಧಿಯಲ್ಲಿ 1 ಲಕ್ಷಕ್ಕಿಂತ ಕಡಿಮೆ ಇದ್ದ ಸಾಮಾನ್ಯ ಸೇವಾ ಕೇಂದ್ರಗಳ ಸಂಖ್ಯೆ 5 ಲಕ್ಷಕ್ಕೆ ಏರಿದೆ ಎಂದು ಅವರು ಹೇಳಿದರು. ಈ ಅಂಕಿಅಂಶಗಳು ಈ ಹಿಂದೆ ನಗರಗಳಲ್ಲಿ ಮಾತ್ರ ಕಾಣುತ್ತಿದ್ದ ಹಳ್ಳಿಗಳಿಗೆ ದುರ್ಲಭವಾಗಿದ್ದ ಆಧುನಿಕ ಸೌಲಭ್ಯಗಳು ಮತ್ತು ಸವಲತ್ತುಗಳ ವಿತರಣೆಯನ್ನು ಪ್ರತಿನಿಧಿಸುತ್ತವೆ ಎಂದು ಪ್ರಧಾನಿ ಹೇಳಿದರು. ಇದು ಅನುಕೂಲತೆಗಳನ್ನು ಸುಧಾರಿಸಿದೆ ಮಾತ್ರವಲ್ಲದೆ ಹಳ್ಳಿಗಳಲ್ಲಿ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.
ಗ್ರಾಮಗಳು ಮತ್ತು ರೈತರಿಗೆ ಸಂಬಂಧಿಸಿದ ಮಹತ್ವದ ನಿರ್ಧಾರಗಳೊಂದಿಗೆ 2025 ಪ್ರಾರಂಭವಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಮುಂದುವರಿಕೆಯನ್ನು ಎತ್ತಿ ತೋರಿಸಿದರು, ಇದರ ಅಡಿಯಲ್ಲಿ ರೈತರು ಸುಮಾರು 2.25 ಲಕ್ಷ ಕೋಟಿ ರೂಪಾಯಿಗಳ ಕ್ಲೇಮ್ ಗಳನ್ನು ಪಡೆದಿದ್ದಾರೆ ಎಂದ ಅವರು ಡಿಎಪಿ ರಸಗೊಬ್ಬರಕ್ಕೆ ಸಂಬಂಧಿಸಿದಂತೆ ಮತ್ತೊಂದು ನಿರ್ಧಾರದತ್ತ ಗಮನ ಸೆಳೆದರು. ಅದರ ಬೆಲೆಗಳು ಜಾಗತಿಕವಾಗಿ ಏರಿಕೆಯಾಗಿವೆ. ರೈತರಿಗೆ ಕೈಗೆಟಕುವ ದರದಲ್ಲಿ ರಸಗೊಬ್ಬರ ಒದಗಿಸಲು ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಕಳೆದ ದಶಕದಲ್ಲಿ, ರೈತರಿಗೆ ಕೈಗೆಟುಕುವ ದರದಲ್ಲಿ ರಸಗೊಬ್ಬರವನ್ನು ಒದಗಿಸಲು ಸುಮಾರು 12 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ, ಇದು 2014 ರ ಹಿಂದಿನ ದಶಕದಲ್ಲಿ ಖರ್ಚು ಮಾಡಿದ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಸುಮಾರು 3.5 ಲಕ್ಷ ಕೋಟಿ ರೂಪಾಯಿಗಳನ್ನು ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು, ಇದು ರೈತರ ಕಲ್ಯಾಣಕ್ಕೆ ಕೇಂದ್ರ ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದವರು ನುಡಿದರು.
“ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಮಹಿಳೆಯರ ಮಹತ್ವದ ಪಾತ್ರವನ್ನು ಗುರುತಿಸಿ, ಕಳೆದ ದಶಕದಲ್ಲಿ ಪ್ರತಿಯೊಂದು ಪ್ರಮುಖ ಯೋಜನೆಯಲ್ಲಿ ಮಹಿಳಾ ಸಬಲೀಕರಣವನ್ನು ಕೇಂದ್ರಬಿಂದುವಾಗಿಸಲಾಗಿದೆ” ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಬ್ಯಾಂಕ್ ಸಖಿ ಮತ್ತು ಬಿಮಾ ಸಖಿಯಂತಹ ಉಪಕ್ರಮಗಳು ಹಳ್ಳಿಗಳಲ್ಲಿ ಮಹಿಳೆಯರಿಗೆ ಹೊಸ ಅವಕಾಶಗಳನ್ನು ಒದಗಿಸಿವೆ ಎಂದು ಅವರು ಒತ್ತಿ ಹೇಳಿದರು. ಲಖ್ಪತಿ ದೀದಿ ಯೋಜನೆ 1.25 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಿದೆ ಎಂದು ಅವರು ಹೇಳಿದರು. ಸ್ವಾಮಿತ್ವ ಯೋಜನೆ ಮಹಿಳೆಯರ ಆಸ್ತಿ ಹಕ್ಕುಗಳನ್ನು ಬಲಪಡಿಸಿದೆ, ಅನೇಕ ರಾಜ್ಯಗಳು ಆಸ್ತಿ ಕಾರ್ಡ್ ಗಳಲ್ಲಿ ಗಂಡನ ಹೆಸರಿನೊಂದಿಗೆ ಪತ್ನಿಯ ಹೆಸರನ್ನೂ ದಾಖಲಿಸಿವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಬಡವರಿಗೆ ಒದಗಿಸಲಾದ ಹೆಚ್ಚಿನ ಮನೆಗಳು ಮಹಿಳೆಯರ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿವೆ ಎಂಬುದರತ್ತ ಪ್ರಧಾನಿ ಬೆಟ್ಟು ಮಾಡಿದರು. ಸ್ವಾಮಿತ್ವ ಯೋಜನೆ ಡ್ರೋನ್ ಗಳು ಮಹಿಳೆಯರಿಗೆ ಆಸ್ತಿ ಹಕ್ಕುಗಳನ್ನು ಪಡೆಯಲು ಸಹಾಯ ಮಾಡುತ್ತಿವೆ ಎಂಬ ಧನಾತ್ಮಕ ಕಾಕತಾಳೀಯತೆಯತ್ತಲೂ ಅವರು ಗಮನ ಸೆಳೆದರು. ಸ್ವಾಮಿತ್ವ ಯೋಜನೆಯಲ್ಲಿ ಮ್ಯಾಪಿಂಗ್ ಕೆಲಸವನ್ನು ಡ್ರೋನ್ಗಳಿಂದ ಮಾಡಲಾಗುತ್ತಿದೆ ಮತ್ತು ನಮೋ ಡ್ರೋನ್ ದೀದಿ ಯೋಜನೆ ಅಡಿಯಲ್ಲಿ, ಹಳ್ಳಿಯ ಮಹಿಳೆಯರು ಡ್ರೋನ್ ಪೈಲಟ್ಗಳಾಗುತ್ತಿದ್ದಾರೆ, ಕೃಷಿಗೆ ಸಹಾಯ ಮಾಡುತ್ತಿದ್ದಾರೆ ಮತ್ತು ಹೆಚ್ಚುವರಿ ಆದಾಯವನ್ನು ಗಳಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಸ್ವಾಮಿತ್ವ ಯೋಜನೆ ಹಳ್ಳಿಗರನ್ನು ಸಬಲೀಕರಣಗೊಳಿಸಿದೆ, ಭಾರತದ ಗ್ರಾಮೀಣ ಜೀವನವನ್ನು ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ ಎಂದು ಪ್ರಧಾನಿ ಹೇಳಿದರು. ಗ್ರಾಮಗಳು ಮತ್ತು ಬಡವರು ಬಲಗೊಳ್ಳುತ್ತಿದ್ದಂತೆ, ಅಭಿವೃದ್ಧಿ ಹೊಂದಿದ ಭಾರತದತ್ತ ಪ್ರಯಾಣವು ಸುಗಮವಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಹಳ್ಳಿಗಳು ಮತ್ತು ಬಡವರ ಅನುಕೂಲಕ್ಕಾಗಿ ಕಳೆದ ದಶಕದಲ್ಲಿ ಕೈಗೊಂಡ ಕ್ರಮಗಳು 25 ಕೋಟಿ ಜನರಿಗೆ ಬಡತನದಿಂದ ಹೊರಬರಲು ಸಹಾಯ ಮಾಡಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಶ್ರೀ ಮೋದಿ ಅವರು, ಸ್ವಾಮಿತ್ವದಂತಹ ಯೋಜನೆಗಳು ಗ್ರಾಮಗಳನ್ನು ಅಭಿವೃದ್ಧಿಯ ಬಲವಾದ ಕೇಂದ್ರಗಳನ್ನಾಗಿ ಮಾಡುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಹಲವು ರಾಜ್ಯಗಳ ರಾಜ್ಯಪಾಲರು, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನ ಲೆಫ್ಟಿನೆಂಟ್ ಗವರ್ನರ್ಗಳು, ಒಡಿಶಾ, ಛತ್ತೀಸ್ಗಢ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ಮುಖ್ಯಮಂತ್ರಿಗಳು, ಕೇಂದ್ರ ಪಂಚಾಯತ್ ರಾಜ್ ಸಚಿವ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ರಾಜೀವ್ ರಂಜನ್ ಸಿಂಗ್ ಹಾಗು ಇತರ ಅನೇಕ ಗಣ್ಯರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಿನ್ನೆಲೆ
ಸಮೀಕ್ಷೆಗಾಗಿ ಇತ್ತೀಚಿನ ಡ್ರೋನ್ ತಂತ್ರಜ್ಞಾನ ಬಳಸಿ ಹಳ್ಳಿಗಳಲ್ಲಿ ಜನವಸತಿ ಪ್ರದೇಶಗಳಲ್ಲಿ ಮನೆಗಳನ್ನು ಹೊಂದಿರುವ ಕುಟುಂಬಗಳಿಗೆ ‘ಹಕ್ಕುಗಳ ದಾಖಲೆ’ ಒದಗಿಸುವ ಮೂಲಕ ಗ್ರಾಮೀಣ ಭಾರತದ ಆರ್ಥಿಕ ಪ್ರಗತಿಯನ್ನು ಹೆಚ್ಚಿಸುವ ದೃಷ್ಟಿಕೋನದೊಂದಿಗೆ ಪ್ರಧಾನಿಯವರು ಸ್ವಾಮಿತ್ವ ಯೋಜನೆಯನ್ನು ಪ್ರಾರಂಭಿಸಿದರು.
ಈ ಯೋಜನೆಯು ಆಸ್ತಿಗಳ ನಗದೀಕರಣವನ್ನು ಸುಗಮಗೊಳಿಸಲು ಮತ್ತು ಬ್ಯಾಂಕ್ ಸಾಲಗಳ ಮೂಲಕ ಸಾಂಸ್ಥಿಕ ಸಾಲವನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ; ಆಸ್ತಿ ಸಂಬಂಧಿತ ವಿವಾದಗಳನ್ನು ಕಡಿಮೆ ಮಾಡುವುದು; ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ಮತ್ತು ಆಸ್ತಿ ತೆರಿಗೆಯ ಉತ್ತಮ ಮೌಲ್ಯಮಾಪನಕ್ಕೆ ಅನುಕೂಲ ಕಲ್ಪಿಸುವುದು ಮತ್ತು ಸಮಗ್ರ ಗ್ರಾಮ ಮಟ್ಟದ ಯೋಜನೆಯನ್ನು ಸಕ್ರಿಯಗೊಳಿಸುತ್ತದೆ.
ಡ್ರೋನ್ ಸಮೀಕ್ಷೆಯನ್ನು 3.17 ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪೂರ್ಣಗೊಳಿಸಲಾಗಿದೆ, ಇದು ನಿಗದಿತ ಗುರಿಯ 92% ಗ್ರಾಮಗಳನ್ನು ಒಳಗೊಂಡಿದೆ. ಇಲ್ಲಿಯವರೆಗೆ, 1.53 ಲಕ್ಷಕ್ಕೂ ಹೆಚ್ಚು ಗ್ರಾಮಗಳಿಗೆ ಸಂಬಂಧಿಸಿ ಸುಮಾರು 2.25 ಕೋಟಿ ಆಸ್ತಿ ಕಾರ್ಡ್ ಗಳನ್ನು ಸಿದ್ಧಪಡಿಸಲಾಗಿದೆ.
ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ತ್ರಿಪುರಾ, ಗೋವಾ, ಉತ್ತರಾಖಂಡ ಮತ್ತು ಹರಿಯಾಣದಲ್ಲಿ ಈ ಯೋಜನೆಯು ಪೂರ್ಣ ಪ್ರಮಾಣವನ್ನು ತಲುಪಿದೆ. ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಛತ್ತೀಸ್ಗಢ ರಾಜ್ಯಗಳು ಮತ್ತು ಹಲವಾರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಡ್ರೋನ್ ಸಮೀಕ್ಷೆ ಪೂರ್ಣಗೊಂಡಿದೆ.
*****
Speaking at the distribution of property cards under SVAMITVA scheme. https://t.co/9J04CE9iiA
— Narendra Modi (@narendramodi) January 18, 2025
हमने स्वामित्व योजना शुरू की।
— PMO India (@PMOIndia) January 18, 2025
हमने तय किया कि ड्रोन की मदद से देश के गांव-गांव में घरों की... जमीनों की मैपिंग कराई जाएगी... गांव के लोगों को उनकी आवासीय संपत्ति के कागज दिए जाएंगे: PM @narendramodi
आज हमारी सरकार पूरी ईमानदारी से ग्राम स्वराज को जमीन पर उतारने का प्रयास कर रही है।
— PMO India (@PMOIndia) January 18, 2025
स्वामित्व योजना से गांव के विकास की प्लानिंग और उस पर अमल अब काफी बेहतर हो रहा है: PM @narendramodi
विकसित भारत के निर्माण में नारीशक्ति की बहुत बड़ी भूमिका है।
— PMO India (@PMOIndia) January 18, 2025
इसलिए बीते दशक में हमने माताओं-बेटियों के सशक्तिकरण को, हर बड़ी योजना के केंद्र में रखा है: PM @narendramodi