Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವಾಮಿತ್ವ ಯೋಜನೆಯಡಿ ಇ-ಆಸ್ತಿ ಕಾರ್ಡ್ಗಳ ವಿತರಣೆಗೆ ಪ್ರಧಾನಿ ಚಾಲನೆ

ಸ್ವಾಮಿತ್ವ ಯೋಜನೆಯಡಿ ಇ-ಆಸ್ತಿ  ಕಾರ್ಡ್ಗಳ ವಿತರಣೆಗೆ ಪ್ರಧಾನಿ ಚಾಲನೆ


ರಾಷ್ಟ್ರೀಯ ಪಂಚಾಯತ್ ರಾಜ್ ದಿನವಾದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಮಿತ್ವ ಯೋಜನೆಯಡಿ ಇ-ಆಸ್ತಿ ಕಾರ್ಡ್‌ಗಳ ವಿತರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ 4.09 ಲಕ್ಷ ಆಸ್ತಿ ಮಾಲೀಕರಿಗೆ ಇ-ಆಸ್ತಿ ಕಾರ್ಡ್‌ಗಳನ್ನು ನೀಡಲಾಯಿತು, ಇದು ದೇಶಾದ್ಯಂತ ಅನುಷ್ಠಾನಗೊಳಿಸುವ ಸ್ವಾಮಿತ್ವ ಯೋಜನೆಯ ಚಾಲನೆಯೂ ಆಗಿದೆ. ಕೇಂದ್ರ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್, ಸಂಬಂಧಪಟ್ಟ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪಂಚಾಯತ್ ರಾಜ್ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪಂಚಾಯತ್ ರಾಜ್ ದಿನವು ಗ್ರಾಮೀಣ ಭಾರತದ ಪುನರಾಭಿವೃದ್ಧಿಯ ಪ್ರತಿಜ್ಞೆಗೆ ನಮ್ಮನ್ನು ಸಮರ್ಪಿಸಿಕೊಳ್ಳುವ ಸಂದರ್ಭವಾಗಿದೆ ಎಂದು ಪ್ರಧಾನಿ ಹೇಳಿದರು. ನಮ್ಮ ಗ್ರಾಮ ಪಂಚಾಯಿತಿಗಳ ಅಸಾಧಾರಣ ಕಾರ್ಯವನ್ನು ಪ್ರಶಂಸಿಸುವ ದಿನ ಇದಾಗಿದೆ ಎಂದೂ ಅವರು ಹೇಳಿದರು.

 

 

ಕೊರೊನಾ ನಿರ್ವಹಣೆಯಲ್ಲಿ ಪಂಚಾಯತ್‌ಗಳ ಪಾತ್ರವನ್ನು ಶ್ಲಾಘಿಸಿದ ಪ್ರಧಾನಿಯವರು, ಕೊರೊನಾ ಹಳ್ಳಿಗಳಿಗೆ ಪ್ರವೇಶಿಸುವುದನ್ನು ತಡೆಯಲು ಮತ್ತು ಜಾಗೃತಿ ಮೂಡಿಸಲು ಇವು ಸ್ಥಳೀಯ ನಾಯಕತ್ವ ವಹಿಸಿವೆ ಎಂದರು. ಸಾಂಕ್ರಾಮಿಕವು ಗ್ರಾಮೀಣ ಭಾರತಕ್ಕೆ ಹರಡದಂತೆ ನೋಡಿಕೊಳ್ಳುವ ಅಗತ್ಯವನ್ನು ಅವರು ಪುನರುಚ್ಚರಿಸಿದರು. ಕಾಲಕಾಲಕ್ಕೆ ಹೊರಡಿಸಲಾಗುತ್ತಿರುವ ಮಾರ್ಗಸೂಚಿಗಳ ಸಂಪೂರ್ಣ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವಂತೆ ಪ್ರಧಾನಿಯವರು ಪಂಚಾಯತ್‌ಗಳಿಗೆ ಕರೆ ಕೊಟ್ಟರು. ಈ ಬಾರಿ ನಮ್ಮಲ್ಲಿ ಲಸಿಕೆಯ ಗುರಾಣಿ ಇದೆ. ಗ್ರಾಮದ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ಹಾಕುವುದನ್ನು ಮತ್ತು ಮುಂಜಾಗ್ರತೆ ವಹಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.

 

 

ಈ ಸಂಕಷ್ಟದ ಸಮಯದಲ್ಲಿ ಯಾವುದೇ ಕುಟುಂಬವು ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಪ್ರತಿ ಬಡವರಿಗೂ ಮೇ ಮತ್ತು ಜೂನ್ ತಿಂಗಳಲ್ಲಿ ಉಚಿತ ಪಡಿತರ ನೀಡಲಾಗುವುದು ಎಂದು ಅವರು ಹೇಳಿದರು. ಈ ಯೋಜನೆಯು 80 ಕೋಟಿ ಫಲಾನುಭವಿಗಳಿಗೆ ಪ್ರಯೋಜನವನ್ನು ನೀಡಲಿದ್ದು, ಈ ಯೋಜನೆಗಾಗಿ ಕೇಂದ್ರವು 26,000 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡುತ್ತಿದೆ ಎಂದರು.

 

 

6 ರಾಜ್ಯಗಳಲ್ಲಿ ಪ್ರಾರಂಭವಾದ ಕೇವಲ ಒಂದು ವರ್ಷದೊಳಗೆ ಸ್ವಾಮಿತ್ವ ಯೋಜನೆಯ ಪರಿಣಾಮದ ಬಗ್ಗೆ ಪ್ರಧಾನಿ ಮಾತನಾಡಿದರು. ಯೋಜನೆಯಡಿ, ಇಡೀ ಗ್ರಾಮದ ಆಸ್ತಿಗಳನ್ನು ಡ್ರೋನ್ ಮೂಲಕ ಸಮೀಕ್ಷೆ ಮಾಡಲಾಗುತ್ತದೆ ಮತ್ತು ಆಸ್ತಿ ಕಾರ್ಡ್ ಅನ್ನು ಮಾಲೀಕರಿಗೆ ವಿತರಿಸಲಾಗುತ್ತದೆ. ಇಂದು 5 ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ 4.09 ಲಕ್ಷ ಜನರಿಗೆ ಇ-ಆಸ್ತಿ ಕಾರ್ಡ್‌ಗಳನ್ನು ನೀಡಲಾಯಿತು. ಯೋಜನೆಯು ಆಸ್ತಿ ದಾಖಲೆಗಳ ಬಗೆಗಿನ ಅನಿಶ್ಚಿತತೆಯನ್ನು ತೊಡೆದುಹಾಕುತ್ತದೆ ಮತ್ತು  ಭ್ರಷ್ಟಾಚಾರ ಹಾಗು ಬಡವರ ಶೋಷಣೆಯನ್ನು  ತಡೆಯುತ್ತದೆ. ಯೋಜನೆಯು ಆಸ್ತಿ ವಿವಾದಗಳ ಸಾಧ್ಯತೆ ಕಡಿಮೆಮಾಡುವುದರಿಂದ ಹಳ್ಳಿಗಳಲ್ಲಿ ಹೊಸ ವಿಶ್ವಾಸವನ್ನು ತುಂಬಿದೆ. ಇದು ಸಾಲದ ಹೊರೆಯನ್ನು ಸಹ ತಗ್ಗಿಸುತ್ತದೆ. “ಒಂದು ರೀತಿಯಲ್ಲಿ, ಈ ಯೋಜನೆಯು ಬಡ ವರ್ಗದ ಸುರಕ್ಷತೆ ಮತ್ತು ಹಳ್ಳಿಗಳ ಯೋಜಿತ ಅಭಿವೃದ್ಧಿ ಮತ್ತು ಆರ್ಥಿಕತೆಯನ್ನು ಖಚಿತಪಡಿಸುತ್ತದೆ” ಎಂದು ಪ್ರಧಾನಿ ಹೇಳಿದರು. ಸರ್ವೆ ಆಫ್ ಇಂಡಿಯಾದೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಮತ್ತು ಅಗತ್ಯವಿರುವ ಕಡೆ  ಕಾನೂನುಗಳನ್ನು ಬದಲಾಯಿಸುವಂತೆ ಅವರು ರಾಜ್ಯಗಳಿಗೆ ವಿನಂತಿಸಿದರು. ಸಾಲ ನೀಡಿಕೆಯಲ್ಲಿ ಸುಲಭವಾಗಿ ಸ್ವೀಕಾರಾರ್ಹವಾದ ಆಸ್ತಿ ಕಾರ್ಡ್‌ನ ಸ್ವರೂಪವನ್ನು ಸಿದ್ಧಪಡಿಸುವ ಮೂಲಕ ಸುಲಭ ಸಾಲವನ್ನು ಖಾತ್ರಿಪಡಿಸಬೇಕು ಎಂದು ಅವರು ಬ್ಯಾಂಕುಗಳಿಗೆ ಕರೆ ಕೊಟ್ಟರು. 

ಪ್ರಗತಿ ಮತ್ತು ಸಾಂಸ್ಕೃತಿಕ ನಾಯಕತ್ವ ಯಾವಾಗಲೂ ನಮ್ಮ ಹಳ್ಳಿಗಳಲ್ಲಿ ಇದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ಈ ಕಾರಣಕ್ಕಾಗಿ, ಕೇಂದ್ರವು ತನ್ನ ಎಲ್ಲಾ ನೀತಿಗಳು ಮತ್ತು ಉಪಕ್ರಮಗಳಲ್ಲಿ ಹಳ್ಳಿಗಳನ್ನು ಕೇಂದ್ರೀಕರಿಸುತ್ತಿದೆ. ಆಧುನಿಕ ಭಾರತದ ಹಳ್ಳಿಗಳು ಸಮರ್ಥ ಮತ್ತು ಸ್ವಾವಲಂಬಿಗಳಾಗಿರಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ ಎಂದು ಪ್ರಧಾನಿ ಹೇಳಿದರು.

 

 

 ಪಂಚಾಯಿತಿಗಳ ಪಾತ್ರವನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಪ್ರಧಾನಿಯವರು ವಿವರಿಸಿದರು. ಪಂಚಾಯಿತಿಗಳು ಹೊಸ ಹಕ್ಕುಗಳನ್ನು ಪಡೆಯುತ್ತಿವೆ, ಅವುಗಳನ್ನು ಫೈಬರ್-ನೆಟ್ ಮೂಲಕ ಸಂಪರ್ಕಿಸಲಾಗುತ್ತಿದೆ. ಪ್ರತಿ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರನ್ನು ಒದಗಿಸಲು ಜಲ ಜೀವನ್ ಮಿಷನ್‌ನಲ್ಲಿ ಅವುಗಳ ಪಾತ್ರ ನಿರ್ಣಾಯಕವಾಗಿದೆ. ಅಂತೆಯೇ, ಪ್ರತಿ ಬಡವರಿಗೆ ಅಥವಾ ಗ್ರಾಮೀಣ ಉದ್ಯೋಗ ಯೋಜನೆಗೆ ಸಹಕಾರಿಯಾಗುವಂತೆ ಆಂದೋಲನವನ್ನು ಪಂಚಾಯಿತಿಗಳ ಮೂಲಕ ನಡೆಸಲಾಗುತ್ತಿದೆ ಎಂದು ಹೇಳಿದರು. ಪಂಚಾಯಿತಿಗಳ ಹೆಚ್ಚುತ್ತಿರುವ ಆರ್ಥಿಕ ಸ್ವಾಯತ್ತತೆಯ ಬಗ್ಗೆಯೂ ಪ್ರಧಾನಿಯವರು ಮಾತನಾಡಿದರು. ಅಸಾಧಾರಣ ಮೊತ್ತವಾದ 2.25 ಲಕ್ಷ ಕೋಟಿ ರೂಪಾಯಿಗಳನ್ನು ಪಂಚಾಯತ್‌ಗಳಿಗೆ ಭಾರತ ಸರ್ಕಾರ ನಿಗದಿಪಡಿಸಿದೆ. ಇದು ಪಾರದರ್ಶಕತೆಯ ಹೆಚ್ಚಿನ ನಿರೀಕ್ಷೆಗೂ ಕಾರಣವಾಗುತ್ತದೆ ಎಂದು ಶ್ರೀ ಮೋದಿ ಹೇಳಿದರು. ಪಂಚಾಯತಿ ರಾಜ್ ಸಚಿವಾಲಯವು ‘ಇ-ಗ್ರಾಮ ಸ್ವರಾಜ್’ಮೂಲಕ ಆನ್‌ಲೈನ್ ಪಾವತಿ ವ್ಯವಸ್ಥೆ ಮಾಡಿದೆ ಎಂದು ಪ್ರಧಾನಿ ಹೇಳಿದರು. ಈಗ ಎಲ್ಲಾ ಪಾವತಿಗಳನ್ನು ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (ಪಿಎಫ್‌ಎಂಎಸ್) ಮೂಲಕ ಮಾಡಲಾಗುತ್ತದೆ. ಹಾಗೆಯೇ, ಆನ್‌ಲೈನ್ ಲೆಕ್ಕಪರಿಶೋಧನೆಯು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ. ಅನೇಕ ಪಂಚಾಯಿತಿಗಳು ಪಿಎಫ್‌ಎಂಎಸ್‌ನೊಂದಿಗೆ ಸಂಪರ್ಕ ಹೊಂದಿವೆ ಮತ್ತು ಇತರರು ತ್ವರಿತವಾಗಿ ಸಂಪರ್ಕ ಸಾಧಿಸಬೇಕು ಎಂದು ಅವರು ಹೇಳಿದರು.

ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಸಂದರ್ಭದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿಯವರು, ಸವಾಲುಗಳ ನಡುವೆಯೂ, ಅಭಿವೃದ್ಧಿಯ ಚಕ್ರ ತಿರುಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಪಂಚಾಯಿತಿಗಳಿಗೆ ಕರೆ ಕೊಟ್ಟರು. ತಮ್ಮ ಗ್ರಾಮದ ಅಭಿವೃದ್ಧಿಗೆ ಗುರಿಗಳನ್ನು ನಿಗದಿಪಡಿಸುವಂತೆ ಮತ್ತು ಅವುಗಳನ್ನು ನಿರ್ದಿಷ್ಟ ಸಮಯದೊಳಗೆ ಸಾಧಿಸುವಂತೆ ಪ್ರಧಾನಿಯವರು ಪಂಚಾಯಿತಿಗಳಿಗೆ ಆಗ್ರಹಿಸಿದರು.

****