Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವಾತಂತ್ರ್ಯ ಹೋರಾಟಗಾರ ಶ್ರೀ ಪ್ರಹ್ಲಾದ್ ಪಟೇಲ್ ಅವರ 115 ನೇ ಜನ್ಮವರ್ಷಾಚರಣೆ ಅಂಗವಾಗಿ ಗುಜರಾತಿನ ಬೇಚರಾಜಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಮೋದಿ ಅವರ ಸಂದೇಶದ ಕನ್ನಡ ಅವತರಣಿಕೆ

ಸ್ವಾತಂತ್ರ್ಯ ಹೋರಾಟಗಾರ ಶ್ರೀ ಪ್ರಹ್ಲಾದ್ ಪಟೇಲ್ ಅವರ 115 ನೇ ಜನ್ಮವರ್ಷಾಚರಣೆ ಅಂಗವಾಗಿ ಗುಜರಾತಿನ ಬೇಚರಾಜಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಮೋದಿ ಅವರ ಸಂದೇಶದ ಕನ್ನಡ ಅವತರಣಿಕೆ


ಬೇಚರಾಜಿ ಅಂದರೆ ಬಹುಚರ ದೇವಿಯ ಪವಿತ್ರ ಯಾತ್ರಾ ಕೇಂದ್ರ. ಬೇಚರಾಜಿಯ ಪವಿತ್ರ ಭೂಮಿ ಅನೇಕ ಪುತ್ರರನ್ನು, ಸಮಾಜ ಸೇವಕರನ್ನು ಮತ್ತು ದೇಶಭಕ್ತರನ್ನು ಕೊಟ್ಟಿದೆ. ಇಂತಹ ಒಬ್ಬ ಈ ಮಣ್ಣಿನ ಮಗ,  ಸ್ವಾತಂತ್ರ್ಯ ಹೋರಾಟಗಾರ, ಮತ್ತು ಸಮಾಜಿಕ ಕಾರ್ಯಕರ್ತ ಶ್ರೀ ಪ್ರಹ್ಲಾದಜೀ ಹರ್ಗೋವಂದಾಸ್ ಪಟೇಲ್ ಅವರ 115 ನೇ ಜನ್ಮ ವರ್ಷಾಚರಣೆಯ ಈ ಸಂದರ್ಭದಲ್ಲಿ ಅವರ ಸದ್ಗುಣಗಳನ್ನು ಸ್ಮರಿಸಿಕೊಳ್ಳುವ ಅವಕಾಶ ನಮಗೆ ದೊರಕಿದೆ. ಅದೂ ಪವಿತ್ರ ನವರಾತ್ರಿ ಹಬ್ಬದ ಸಂದರ್ಭದಲ್ಲಿ  ಮತ್ತು ಬಹುಚರ ಮಾತೆಯ ಸಮ್ಮುಖದಲ್ಲಿ. ಭಾರತೀಯರಾದ ನಾವು “ಅಜಾದಿ ಕಾ ಅಮೃತ ಮಹೋತ್ಸವ” ವನ್ನು ಆಚರಿಸುತ್ತಿರುವಾಗ ಪ್ರಹ್ಲಾದಭಾಯಿ ಅವರಂತಹ ದೇಶಭಕ್ತರನ್ನು ಸ್ಮರಿಸಿಕೊಳ್ಳುವುದು ನನಗೆ ಅತ್ಯಂತ ಸಂತೋಷದ ಸಂಗತಿಯಾಗಿದೆ.

ಪ್ರಹ್ಲಾದಭಾಯಿ ಅವರು ಮೂಲತಹ ಸೀತಾಪುರ ಗ್ರಾಮಕ್ಕೆ ಸೇರಿದವರು, ಆದರೆ ಅವರು ಬೇಚರಾಜಿಗೆ ಬಂದು ನೆಲೆಸಿದರು. ಪ್ರಹ್ಲಾದಜೀ ಅವರು ಸೇತ್ ಲಾಟಿವಾಲಾ ಎಂದು ಇಡೀ ರಾಜ್ಯದಲ್ಲಿ ಪ್ರಖ್ಯಾತರಾದರು. ಅವರು ಈ ರಾಜ್ಯಕ್ಕೆ ಕೃಷ್ಣನ “ಸನ್ವಾಲಿಯಾ ಸೇತ್” ರೂಪದಲ್ಲಿ ಬಂದರು. ಮತ್ತು ಉದಾರ ಹೃದಯದಿಂದ ಸಮಾಜಕ್ಕೆ ಸೇವೆ ಮಾಡಿದರು. ಅನೇಕ ಯುವಜನರಂತೆ ಪ್ರಹ್ಲಾದಭಾಯಿ ಅವರು ಗಾಂಧೀಜಿ ಅವರ ಪ್ರಭಾವದಿಂದ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಅವರು ಸಾಬರಮತಿಯಲ್ಲಿ ಮತ್ತು ಯರವಾಡಾ ಜೈಲಿನಲ್ಲಿ ಕಾರಾಗೃಹವಾಸ ಅನುಭವಿಸಿದ್ದರು. ಹೀಗೆ ಜೈಲು ಶಿಕ್ಷೆ ಅನುಭವಿಸುತ್ತಿದ್ದಾಗ ಅವರ ತಂದೆಯವರು ನಿಧನರಾದರು, ಆದರೆ ಅವರು ಪೆರೋಲ್ ಮೇಲೆ ತಮ್ಮ ಬಿಡುಗಡೆಗಾಗಿ  ಬ್ರಿಟಿಷ್ ಸರಕಾರಕ್ಕೆ  ಕ್ಷಮಾಪಣೆ ಪತ್ರ ಬರೆದುಕೊಡಲು ಖಡಾಖಂಡಿತವಾಗಿ ನಿರಾಕರಿಸಿದರು. ಅವರ ಪೋಷಕರ ಅಂತ್ಯಸಂಸ್ಕಾರವನ್ನು ಅವರ ಸೋದರ ಸಂಬಂಧಿಗಳು ನೆರವೇರಿಸಿದರು. ಅವರು “ರಾಷ್ಟ್ರ ಮೊದಲು” ಎಂಬ ತತ್ವಕ್ಕೆ ಅನುಗುಣವಾಗಿ ಬದುಕಿದವರು. ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಕೆಲವು ಭೂಗತ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಮತ್ತು ಹಲವಾರು ಹೋರಾಟಗಾರರು ಬೇಚರಾಜಿಯಲ್ಲಿ ಅಡಗಿಕೊಳ್ಳಲು ಸಹಾಯ ಮಾಡಿದ್ದರು. ಸ್ವಾತಂತ್ರ್ಯದ ಬಳಿಕ ಸರ್ದಾರ್ ಸಾಹೀಬ್ ಅವರ ಸೂಚನೆಯನ್ವಯ ದೇಶದ ಸಣ್ಣ ರಾಜ್ಯಗಳು ವಿಲೀನಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ದಾಸಡ, ವನೋಡ್ ಮತ್ತು ಝೈನಾಬಾದ್ ಗಳಂತಹ ರಾಜ್ಯಗಳು ಭಾರತದೊಡನೆ ಜೋಡಣೆಗೊಳ್ಳುವಲ್ಲಿ ಸಕ್ರಿಯವಾದ ಕೊಡುಗೆಯನ್ನು ನೀಡಿದ್ದರು. ದೇಶದ ಚರಿತ್ರೆಯ ಪುಸ್ತಕಗಳಲ್ಲಿ  ಇಂತಹ ದೇಶಭಕ್ತರ ವಿವರಗಳಿಲ್ಲದೆ ಇರುವುದು ನಿರಾಶಾದಾಯಕ ಸಂಗತಿ.

ಪ್ರಹ್ಲಾದ ಭಾಯಿ ಅವರಂತಹ ಸ್ವಾತಂತ್ರ್ಯ ಹೋರಾಟಗಾರರ ನಾಯಕತ್ವದ ಕಥನಗಳನ್ನು ಹೊಸ ತಲೆಮಾರಿಗೆ ತಿಳಿಸಿ ಹೇಳುವುದನ್ನು ಖಾತ್ರಿಪಡಿಸುವುದು ನಮ್ಮೆಲ್ಲರ ಕರ್ತವ್ಯ. ಇದರಿಂದ ಹೊಸ ತಲೆಮಾರು ಪ್ರೇರಣೆಯನ್ನು ಪಡೆದುಕೊಳ್ಳಬಹುದು. ಸ್ವಾತಂತ್ರ್ಯ ಹೋರಾಟ ಮುಕ್ತಾಯಗೊಂಡ ಬಳಿಕವೂ, ಸ್ವತಂತ್ರ ಭಾರತದಲ್ಲಿ ಅವರು ವಿಶ್ರಾಂತಿ ಪಡೆಯಲಿಲ್ಲ, ಅವರು ಸಮಾಜದ ಕೆಲಸಗಳಲ್ಲಿ ತೊಡಗಿಕೊಂಡರು. 1951 ರಲ್ಲಿ ಅವರು ವಿನೋಬಾ ಭಾವೆ ಅವರ ಭೂದಾನ ಚಳವಳಿಗೆ ಸೇರಿದರು ಮತ್ತು ತಮ್ಮ ಮಾಲಕತ್ವಕ್ಕೆ ಒಳಪಟ್ಟ 200 ಭಿಗಾ ಭೂಮಿಯನ್ನು ದಾನ ಮಾಡಿದರು. ಹಲವಾರು ಭೂರಹಿತರ ಪರವಾಗಿ ಓರ್ವ “ಭೂಮಿ ಪುತ್ರ” ಕೈಗೊಂಡ ಬಹಳ ದೊಡ್ಡ ಕ್ರಮ ಇದು. ಮುಂಬಯಿ ರಾಜ್ಯದಿಂದ ಪ್ರತ್ಯೇಕಗೊಂಡ ಬಳಿಕ ಗುಜರಾತಿನಲ್ಲಿ 1962 ರಲ್ಲಿ ಮೊದಲ ಚುನಾವಣೆ ನಡೆದಾಗ, ಅವರು ಚನಾಸ್ಮ ಕ್ಷೇತ್ರದಿಂದ ಸ್ಪರ್ಧಿಸಿದರು ಮತ್ತು ಅವರು ಜನ ಪ್ರತಿನಿಧಿಯಾದರು ಹಾಗು ಜನತೆಯ ಧ್ವನಿಯಾದರು.ಅವರು ಇಡೀ ರಾಜ್ಯವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ದರು. ನನಗಿನ್ನೂ ನೆನಪಿದೆ, ಆಗ ನಾನು ಸಂಘಕ್ಕಾಗಿ ಕೆಲಸ ಮಾಡುತ್ತಿದ್ದೆ ಮತ್ತು ಅದಕ್ಕಾಗಿ ಬೇರೆ ಬೇರೆ ಕಡೆಗಳಿಗೆ ಹೋಗಬೇಕಾಗುತ್ತಿತ್ತು. ಮತ್ತು ಬೇಚರಾಜಿಯಲ್ಲಿಗೆ ಜನರು ಹೋಗಲು ಇಚ್ಛಿಸಿದಾಗೆಲ್ಲ, ಅವರಿಗೆ ಪ್ರಹ್ಲಾದಭಾಯಿ ಅವರ ಲಾಟಿಯಂತೆ ಅದು  ಸಾರ್ವಜನಿಕ ಕಲ್ಯಾಣದ  ಸ್ಥಳವಾಗಿತ್ತು. ಪ್ರಹ್ಲಾದಭಾಯಿ ಅವರು ವಿಶ್ವಸ್ಥರ ಹುರುಪಿನಲ್ಲಿ ಕೆಲಸ ಮಾಡಿದರು ಮತ್ತು ಅವರು ಗುಜರಾತಿನ ಮಹಾಜನ್ ಸಂಪ್ರದಾಯದ ಸಂಪರ್ಕಸೇತುವಾಗಿದ್ದರು. ಮತ್ತು ಪ್ರಹ್ಲಾದಭಾಯಿ ಅವರ ಪತ್ನಿ ಕಾಶಿ ಬಾ ಅವರ ಬಗ್ಗೆ ಮಾತನಾಡದಿದ್ದರೆ ಇಂದಿನ ಕಾರ್ಯಕ್ರಮ ಅಪೂರ್ಣವಾದಂತಾಗುತ್ತದೆ. ಕಾಶಿ ಬಾ ಅವರು ಆದರ್ಶ ಗೃಹಿಣಿ ಮಾತ್ರವಲ್ಲದೆ, ಕಸ್ತೂರ್ಬಾ ಅವರಂತೆ ನಾಗರಿಕ ಕರ್ತವ್ಯಗಳನ್ನು ಕೈಗೊಂಡು ತಮ್ಮ ಪತಿಗೆ ಬಲಿಷ್ಟವಾದ ಬೆಂಬಲವನ್ನು ಒದಗಿಸಿದರು. ಅವರ ಇಡೀ ಬದುಕು, ಕೆಲಸದ ಸಂಸ್ಕೃತಿ, ಆ ಪರಿಸ್ಥಿತಿಗಳಲ್ಲಿ ಕೆಲಸ ಮಾಡಲು ಅವರಿಗಿದ್ದ ಆಸೆ ಮತ್ತು ಬಹಳ ಸಣ್ಣ ಸಂಗತಿಗಳು ಕೂಡಾ ಸ್ವಾತಂತ್ರ್ಯ ಹೋರಾಟದ ಮೌಲ್ಯಭರಿತ ದಾಖಲೆಗಳಾಗಿವೆ. ಅವರ ಕೆಲಸ ಮತ್ತು ಸಾಮಾಜಿಕ ಕೊಡುಗೆ ದಾಖಲು ಮಾಡಬೇಕಾಗಿದೆ, ಯಾಕೆಂದರೆ ಅದು ಇಂದಿನ ತಲೆಮಾರಿಗೆ ಹೊಸ ಮಾಹಿತಿಯನ್ನು ಒದಗಿಸುತ್ತದೆ. ಮತ್ತು ಅವರು ಬರಲಿರುವ ತಲೆಮಾರಿಗೆ ಒಂದು ಪ್ರೇರಣೆಯಾಗುತ್ತಾರೆ. ಅವರ ಜೀವಿತಾವಧಿಯಲ್ಲಿ ಅವರು ಸಾರ್ವಜನಿಕ ಸೇವೆಯ  ಮುಂಚೂಣಿಯಲ್ಲಿದ್ದರು. ಅವರು ತಮ್ಮ ಸಾವಿನ ಬಳಿಕ ತಮ್ಮ ಕಣ್ಣುಗಳನ್ನು ದಾನ ಮಾಡಲು ಅವರು ನಿರ್ಧರಿಸಿದ್ದರು. ಬರೇ ಕಲ್ಪಿಸಿಕೊಳ್ಳಿ ಅವರು ತಮ್ಮ ಕಣ್ಣುಗಳನ್ನು ದಾನ ಮಾಡುವ ನಿರ್ಧಾರ ಮಾಡಿದ್ದು ನೇತ್ರ ದಾನದ  ಬಗ್ಗೆ ಯಾವುದೇ, ಜಾಗೃತಿ ಮತ್ತು ಅರಿವು ಇರದಿದ್ದ ಕಾಲದಲ್ಲಿ . ಈ ನಿರ್ಧಾರ ಎಷ್ಟೊಂದು ಶ್ರೇಷ್ಠವಾದುದು ಮತ್ತು ಪ್ರೇರಣಾದಾಯಕವಾದುದು!.

ರಾಜ್ಯದ ಪ್ರತೀ ಮೂಲೆ ಮೂಲೆಗಳಲ್ಲಿ ಇಂತಹ ಶ್ರೇಷ್ಠ ಮಹನೀಯರನ್ನು ಗುಜರಾತಿನ ಎಲ್ಲಾ ವಿಶ್ವವಿದ್ಯಾಲಯಗಳು ಹುಡುಕಬೇಕು. ಮತ್ತು ಅವರ ಬಗ್ಗೆ ತಿಳಿದಿರದ, ಹೇಳಿರದ ಕಥೆಗಳನ್ನು, ಸಂಗತಿಗಳನ್ನು ಸಂಕಲಿಸಬೇಕು ಹಾಗು ಪುಸ್ತಕದ ರೂಪದಲ್ಲಿ ಹೊರತಂದು ಅವರನ್ನು ಪ್ರಖ್ಯಾತರನ್ನಾಗಿಸಬೇಕು. ಆಗ ಮಾತ್ರ “ಅಜಾದಿ ಕಾ ಅಮೃತ ಮಹೋತ್ಸವ” ಅದರ ನಿಜಾರ್ಥದಲ್ಲಿ ಎತ್ತಿ ಹಿಡಿಯಲ್ಪಟ್ಟಿರುತ್ತದೆ. ಶ್ರೀ ಪ್ರಹ್ಲಾದಭಾಯಿ ಅವರು ದೇಶಭಕ್ತಿ, ಅರ್ಪಣಾಭಾವದ ಸ್ಫೂರ್ತಿ, ಕರ್ತವ್ಯ ಮತ್ತು ಸೇವೆಯ ತ್ರಿವೇಣಿ ಸಂಗಮವಾಗಿದ್ದರು. ಇಂದು ಅವರ ಅರ್ಪಣಾಭಾವದ ಬಗ್ಗೆ ಚಿಂತನೆ ಮಾಡಿ ಮತ್ತು ನವ ಭಾರತ ನಿರ್ಮಾಣ ಹಾಗು ಅದರ ಇನ್ನಷ್ಟು ಅಭಿವೃದ್ಧಿಗೆ ಪ್ರೇರಣೆಯನ್ನು ಪಡೆಯಿರಿ. ಇದು ನಿಜಾರ್ಥದಲ್ಲಿ ಅವರಿಗೆ ಸಲ್ಲಿಸುವ ಗೌರವದ ಶ್ರದ್ಧಾಂಜಲಿ. ನಾನು ಅತ್ಯಂತ ಗೌರವದಿಂದ ಪ್ರಹ್ಲಾದಭಾಯಿ ಅವರಿಗೆ ಮತ್ತು ಅವರ ಅತ್ಯುತ್ತಮ ಕೆಲಸಕ್ಕೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ಬಹುಚರ ಮಾತೆಯ ಸಮಕ್ಷಮದಲ್ಲಿ, ನಾನು ಬಹುಚರ  ಮಾತೆಗೆ ಮತ್ತು ಭಾರತಿ ಮಾತೆಗೆ ಸೇವೆ ಸಲ್ಲಿಸುವವರಿಗೆ ಶಿರಬಾಗಿ ನಮಿಸುವ ಮೂಲಕ ನನ್ನ ಭಾಷಣವನ್ನು ಮುಕ್ತಾಯ ಮಾಡುತ್ತೇನೆ.

ಭಾರತ್ ಮಾತಾ ಕೀ ಜೈ!

ಜೈ ಜೈ ಗರ್ವಿ ಗುಜರಾತ್ !

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಗುಜರಾತಿಯಲ್ಲಿ ಮಾಡಲಾಗಿದೆ.