Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವಚ್ಛ ಭಾರತ್ ಮಿಷನ್ ಪ್ರಾರಂಭವಾಗಿ 10 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಅಕ್ಟೋಬರ್ 2 ರಂದು ಸ್ವಚ್ಛ ಭಾರತ್ ದಿವಸ್ 2024 ಕಾರ್ಯಕ್ರಮದಲ್ಲಿ  ಪ್ರಧಾನಮಂತ್ರಿ ಅವರು ಭಾಗವಹಿಸಲಿದ್ದಾರೆ


ಸ್ವಚ್ಛತೆಗಾಗಿ ಅತ್ಯಂತ ಮಹತ್ವದ ಸಾಮೂಹಿಕ ಆಂದೋಲನಗಳಲ್ಲಿ ಒಂದಾದ ಸ್ವಚ್ಛ ಭಾರತ ಮಿಷನ್ ಪ್ರಾರಂಭವಾಗಿ 10 ವರ್ಷಗಳು ಪೂರ್ಣಗೊಂಡಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 2, 2024ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ 155 ನೇ ಗಾಂಧಿ ಜಯಂತಿಯ ಸಂದರ್ಭದಲ್ಲಿ ಹಮ್ಮಿಕೊಂಡಿರುವ “ಸ್ವಚ್ಛ ಭಾರತ್ ದಿವಸ 2024” ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.  

ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು 9600 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ನೈರ್ಮಲ್ಯ ಮತ್ತು ಸ್ವಚ್ಛತೆಗೆ ಸಂಬಂಧಿಸಿದ ಹಲವಾರು ನೂತನ ಯೋಜನೆಗಳಿಗೆ ಚಾಲನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ.  ಇದು ಅಮೃತ್ ಮತ್ತು ಅಮೃತ್ 2.0 ಅಡಿಯಲ್ಲಿ  6,800 ಕೋಟಿ ರೂಪಾಯಿ ಮೌಲ್ಯದ ನಗರ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಉತ್ತಮಗೊಳಿಸುವ/ಹೆಚ್ಚಿಸುವ ಗುರಿಯನ್ನು ಹೊಂದಿರುವ ಯೋಜನೆಗಳನ್ನು ಕೂಡ ಒಳಗೊಂಡಿರುತ್ತದೆ. ಗಂಗಾ ಜಲಾನಯನ ಪ್ರದೇಶಗಳಲ್ಲಿನ ನೀರಿನ ಗುಣಮಟ್ಟ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸಲು 1550 ಕೋಟಿ ರೂಪಾಯಿ ಮೌಲ್ಯದ 10 ಯೋಜನೆಗಳು ಮತ್ತು ಸ್ವಚ್ಛ ಗಂಗಾ ರಾಷ್ಟ್ರೀಯ ಮಿಷನ್ ಅಡಿಯಲ್ಲಿ  15 ಸಂಕುಚಿತ ಜೈವಿಕ ಅನಿಲ (ಸಿಬಿಸಿ) ಸ್ಥಾವರ ಯೋಜನೆಗಳು ಹಾಗೂ ಗೋಬರ್ ಧನ್ ಯೋಜನೆಯಡಿಯಲ್ಲಿ 1332 ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಕೂಡ ಒಳಗೊಂಡಿರುತ್ತದೆ.

ಸ್ವಚ್ಛ ಭಾರತ್ ದಿವಸ 2024 ಕಾರ್ಯಕ್ರಮವು ಭಾರತದಲ್ಲಿ  ಕಳೆದ ಒಂದು ದಶಕದ ಅವಧಿಯ ನೈರ್ಮಲ್ಯ ಸಾಧನೆಗಳನ್ನು ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಸ್ವಚ್ಛತೆಯೇ ಸೇವೆ ( ಸ್ವಚ್ಛತಾ ಹೈ ಸೇವಾ) 2024 ಅಭಿಯಾನದ ಸಾಧನೆಗಳನ್ನು ಪ್ರದರ್ಶಿಸಲಿದೆ.  ಇದು ಮುಂದಿನ ರಾಷ್ಟ್ರೀಯ ಪ್ರಯತ್ನಗಳನ್ನು  ಇನ್ನೂ ಮುಂದಿನ ಹಂತಕ್ಕೆ ಕೊಂಡೊಯ್ಯಲು ವೇದಿಕೆಯನ್ನು ಸಹ ಸೃಷ್ಟಿಸುತ್ತದೆ.  ಇದು ಸ್ಥಳೀಯ ಸರ್ಕಾರಿ ಸಂಸ್ಥೆಗಳು, ಮಹಿಳಾ ಗುಂಪುಗಳು, ಯುವ ಸಂಘಟನೆಗಳು ಮತ್ತು ಸಮುದಾಯದ ಮುಖಂಡರ ರಾಷ್ಟ್ರವ್ಯಾಪಿ ಭಾಗವಹಿಸುವಿಕೆಯನ್ನು ಒಳಗೊಂಡಿರುತ್ತದೆ. ಸಂಪೂರ್ಣ ಸ್ವಚ್ಛತಾ ಮನೋಭಾವವು ಭಾರತದ ಮೂಲೆ ಮೂಲೆಯನ್ನು ತಲುಪುತ್ತದೆ ಎಂಬುದನ್ನು  ಈ ಕಾರ್ಯಕ್ರಮ ಖಚಿತಪಡಿಸುತ್ತದೆ.

ಸ್ವಚ್ಛತೆಯೇ ಸೇವೆ ( ಸ್ವಚ್ಛತಾ ಹೈ ಸೇವಾ) 2024 ಇದರ ಪರಿಕಲ್ಪನೆ, ‘ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ’, ವೈಯಕ್ತಿಕ ಸ್ವಚ್ಛತೆ, ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸುಸ್ಥಿರತೆಗೆ ತನ್ನ ಬದ್ಧತೆಯಲ್ಲಿ ಮತ್ತೊಮ್ಮೆ ರಾಷ್ಟ್ರವನ್ನು ಏಕೀಕೃತಗೊಳಿಸಿ ಒಂದುಗೂಡಿಸುತ್ತದೆ.

ಸ್ವಚ್ಛತೆಯೇ ಸೇವೆ ( ಸ್ವಚ್ಛತಾ ಹೈ ಸೇವಾ) 2024 ಇದರ ಅಡಿಯಲ್ಲಿ, 17 ಕೋಟಿಗೂ ಹೆಚ್ಚು ಜನರ ಭಾಗವಹಿಸುವಿಕೆಯೊಂದಿಗೆ 19.70 ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಸುಮಾರು 6.5 ಲಕ್ಷ ಸ್ವಚ್ಛತೆ ಗುರಿ ಘಟಕಗಳಲ್ಲಿ ಈಗಾಗಲೇ ಪರಿವರ್ತನೆಯನ್ನು ಸಾಧಿಸಲಾಗಿದೆ.  ಸುಮಾರು 1 ಲಕ್ಷ ಸಫಾಯಿ ಮಿತ್ರ ಸುರಕ್ಷಾ ಶಿಬಿರಗಳನ್ನು ಸಹ ಆಯೋಜಿಸಲಾಗಿದ್ದು, 30 ಲಕ್ಷಕ್ಕೂ ಹೆಚ್ಚು ಸಫಾಯಿ ಕರ್ಮಚಾರಿಗಳಿಗೆ ಪ್ರಯೋಜನವಾಗಿದೆ.  ಇದಲ್ಲದೆ, ತಾಯಿ ಹೆಸರಿನಲ್ಲಿ ಒಂದು ಮರ (ಏಕ್ ಪೆಡ್ ಮಾ ಕೆ ನಾಮ್ ) ಅಭಿಯಾನದ ಅಡಿಯಲ್ಲಿ 45 ಲಕ್ಷ ಸಸಿಗಳನ್ನು ಈಗಾಗಲೇ ನೆಡಲಾಗಿದೆ.

 

 *****