Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಭಾರತ- ರಷ್ಯಾ 18ನೇ ವಾರ್ಷಿಕ ಶೃಂಗಸಭೆಯಲ್ಲಿ ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಭಾರತ- ರಷ್ಯಾ 18ನೇ ವಾರ್ಷಿಕ ಶೃಂಗಸಭೆಯಲ್ಲಿ ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಭಾರತ- ರಷ್ಯಾ 18ನೇ ವಾರ್ಷಿಕ ಶೃಂಗಸಭೆಯಲ್ಲಿ ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ರಷ್ಯಾ ಅಧ್ಯಕ್ಷ ಶ್ರೀ. ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದರು.

ಶೃಂಗದ ಕೊನೆಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 2001ರಲ್ಲಿ ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಪ್ರಥಮ ಸೇಂಟ್ ಪೀಟರ್ಸ್ ಬರ್ಗ್ ಭೇಟಿಯನ್ನು ಸ್ಮರಿಸಿದರು. ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯ ಸಂಸ್ಕೃತಿಯಿಂದ ರಕ್ಷಣೆಯವರೆಗೆ (ಸಂಸ್ಕೃತಿಯಿಂದ ಸುರಕ್ಷತೆ) ಹಬ್ಬಿದೆ ಎಂದರು.

ಎರಡೂ ದೇಶಗಳ ನಡುವಿನ 70 ವರ್ಷಗಳ ರಾಜತಾಂತ್ರಿಕ ಬಾಂಧವ್ಯವು ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಉನ್ನತ ಶ್ರೇಣಿಯ ಒಮ್ಮತದ ಸಂಕೇತವಾಗಿವೆ ಎಂದು ಪ್ರಧಾನಿ ಹೇಳಿದರು.

ಇಂದು ಬಿಡುಗಡೆ ಮಾಡಲಾದ ಸೇಂಟ್ ಪೀಟರ್ಸ್ ಬರ್ಗ್ ಘೋಷಣೆಯು ಪ್ರಕ್ಷುಬ್ಧ, ಪರಸ್ಪರ ಅವಲಂಬಿತ ಮತ್ತು ಅಂತರ ಸಂಪರ್ಕಿತ ಪ್ರಪಂಚದಲ್ಲಿ ಸ್ಥಿರತೆಯ ಒಂದು ಮಾನದಂಡವಾಗಿದೆ ಎಂದು ಬಣ್ಣಿಸಿದರು. ಎಸ್.ಪಿ.ಐ.ಇ.ಎಫ್.ನಲ್ಲಿ ಭಾರತ ಅತಿಥಿರಾಷ್ಟ್ರವಾಗಿ ಭಾಗಿಯಾಗುತ್ತಿರುವುದು ಮತ್ತು ನಾಳೆ ತಾವು ಅಲ್ಲಿ ಮಾತನಾಡುತ್ತಿರುವುದು ಎರಡೂ ರಾಷ್ಟ್ರಗಳ ನಡುವಿನ ಆರ್ಥಿಕ ಸಹಕಾರವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದರು.

ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯದಲ್ಲಿ ಇಂಧನ ಸಹಕಾರ ಒಂದು ಮೂಲೆಗಲ್ಲಾಗಿದೆ ಎಂದು ಪ್ರಧಾನಿ ಬಣ್ಣಿಸಿದರು, ಮತ್ತು ಪರಮಾಣು, ಹೈಡ್ರೋಕಾರ್ಬನ್ ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿನ ಈ ಸಹಕಾರ ಇಂದು ನಡೆದ ಚರ್ಚೆ ಮತ್ತು ಕೈಗೊಂಡ ನಿರ್ಧಾರದಿಂದ ಮತ್ತಷ್ಟು ಬಲಗೊಳ್ಳಲಿದೆ ಎಂದರು. ಈ ನಿಟ್ಟಿನಲ್ಲಿ ಕುಡಂಕುಳಂ ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕದ ಒಪ್ಪಂದವನ್ನು ಪ್ರಸ್ತಾಪಿಸಿದರು.

ಎರಡೂ ದೇಶಗಳ ನಡುವಿನ ವಾಣಿಜ್ಯ ಮತ್ತು ವ್ಯಾಪಾರ ಸಂಬಂಧವನ್ನು ಹೆಚ್ಚಿಸುವಲ್ಲಿ ಖಾಸಗಿ ವಲಯದ ಪಾತ್ರವನ್ನು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಭಾರತ ಮತ್ತು ರಷ್ಯಾ 2025ರಹೊತ್ತಿಗೆ 30 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಹೂಡಿಕೆಯ ಗುರಿ ಸಾಧಿಸುವ ಸಮೀಪದಲ್ಲಿವೆ ಎಂದು ತಿಳಿಸಿದರು.

ಸಂಪರ್ಕದ ಧ್ಯೇಯದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಅಂತಾರಾಷ್ಟ್ರೀಯ ಉತ್ತರ ದಕ್ಷಿಣ ಸಾರಿಗೆ ಕಾರಿಡಾರ್ ನಲ್ಲಿ ಎರಡೂ ದೇಶಗಳ ಸಹಕಾರವನ್ನು ಪ್ರಸ್ತಾಪಿಸಿದರು.. ಇತರ ಉಪಕ್ರಮಗಳಲ್ಲಿ, ನವೋದ್ಯಮಗಳನ್ನು ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ‘ನಾವಿನ್ಯತೆಯ ಸೇತು’ ಮತ್ತು ಮುಂಬರುವ ಐರೋಪ್ಯ ಆರ್ಥಿಕ ಒಕ್ಕೂಟದ ಮುಕ್ತ ವಾಣಿಜ್ಯ ಒಪ್ಪಂದ ಚರ್ಚೆಯ ಬಗ್ಗೆಯೂ ಉಲ್ಲೇಖಿಸಿದರು.

ಭಾರತ- ರಷ್ಯಾ ನಡುವಿನ ಸರ್ವಕಾಲಕ್ಕೂ ಸಾಬೀತಾದ ವ್ಯೂಹಾತ್ಮಕ ಆಯಾಮವನ್ನು ಒತ್ತಿ ಹೇಳಿದ ಪ್ರಧಾನಿ, ಎರಡೂ ದೇಶಗಳ ನಡುವಿನ ಮುಂಬರುವ ಪ್ರಥಮ ತ್ರಿ ಸೇವಾ ಸಮರಾಭ್ಯಾಸ – ಇಂದ್ರ-2017 ಬಗ್ಗೆಯೂ ಪ್ರಸ್ತಾಪಿಸಿದರು. ಕಮೋವ್ 226 ಹೆಲಿಕಾಪ್ಟರ್ ಮತ್ತು ಸಮರ ಸಾಧನಗಳ ತಯಾರಿಕೆಗಾಗಿ ರಕ್ಷಣಾ ಉತ್ಪಾದನೆಯ ಜಂಟಿ ಸಹಯೋಗದ ಬಗ್ಗೆ ಪ್ರಧಾನಿ ಉಲ್ಲೇಖಿಸಿದರು. ಗಡಿಯಾಚೆಗಿನ ಭಯೋತ್ಪಾದನೆ ವಿಚಾರದಲ್ಲಿ ಭಾರತಕ್ಕೆ ಭೇಷರತ್ ಬೆಂಬಲ ನೀಡಿದ ರಷ್ಯಾದ ನಿರ್ಧಾರವನ್ನು ಪ್ರಧಾನಿ ಸ್ವಾಗತಿಸಿದರು.

ಸಂಸ್ಕೃತಿಯ ವಿಚಾರ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಭಾರತದಲ್ಲಿ ರಷ್ಯಾದ ಸಂಸ್ಕೃತಿಯ ಆಳವಾದ ಅರಿವಿದೆ ಅಂತೆಯೇ ರಷ್ಯಾದಲ್ಲಿ ಯೋಗ ಮತ್ತು ಆಯುರ್ವೇದದ ವಿಚಾರಗಳಲ್ಲಿ ತೃಪ್ತಿ ಇದೆ ಎಂದರು.

ಭಾರತ-ರಷ್ಯಾ ಬಾಂಧವ್ಯ ವರ್ಧನೆಯಲ್ಲಿ ರಾಷ್ಟ್ರಾಧ್ಯಕ್ಷ ಪುಟಿನ್ ಅವರ ನಾಯಕತ್ವವನ್ನು ಸ್ವಾಗತಿಸಿದ ಪ್ರಧಾನಿ, ಅದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಇತ್ತೀಚೆಗೆ ನಿಧನರಾದ ಭಾರತದ ಮಿತ್ರ ಹಾಗೂ ರಾಯಭಾರಿ ಅಲೆಕ್ಸಾಂಡರ್ ಕಡಕಿನ್ ಅವರ ಹೆಸರನ್ನು ದೆಹಲಿಯ ರಸ್ತೆಗೆ ಪುನರ್ನಾಮಕರಣ ಮಾಡವುದಾಗಿಯೂ ಘೋಷಿಸಿದರು.

ಇದಕ್ಕೂ ಮುನ್ನ ಎರಡೂ ರಾಷ್ಟ್ರಗಳ ಸಿಇಓಗಳ ಸಭೆಯಲ್ಲಿ ಭಾಷಣ ಮಾಡಿದ ಪ್ರಧಾನಮಂತ್ರಿ, ಭಾರತೀಯ ಆರ್ಥಿಕತೆಯ ಪ್ರಮುಖ ವಲಯಗಳಲ್ಲಿ ಅದರಲ್ಲೂ ವ್ಯೂಹಾತ್ಮಕ ವಲಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದರು.

ಭಾರತ ಮತ್ತು ರಷ್ಯಾ ಇಂದು ಪರಮಾಣು ಇಂಧನ, ರೈಲ್ವೆ, ರತ್ನ ಮತ್ತು ಆಭರಣ, ಸಾಂಪ್ರದಾಯಿಕ ಜ್ಞಾನ ಮತ್ತು ಸಾಂಸ್ಕೃತಿಕ ವಿನಿಮಯ ಸೇರಿದಂತೆ ಐದು ಒಪ್ಪಂದಗಳಿಗೆ ಅಂಕಿತ ಹಾಕಿದವು.

ಇದಕ್ಕೂ ಮುನ್ನ ಬೆಳಗ್ಗೆ, ಪ್ರಧಾನಮಂತ್ರಿಯವರು ಲೆನಿನ್ ಗ್ರಾಡ್ ಯುದ್ಧದಲ್ಲಿ ಶೌರ್ಯದಿಂದ ಹೋರಾಡಿದ ವೀರ ಯೋಧರಿಗೆ ಪಿಸ್ಕೊರೊವ್ಸ್ಕೊಯ್ ಸ್ಮಾರಕ ಸಮಾಧಿ ಸ್ಥಳದಲ್ಲಿಗೌರವ ನಮನ ಸಲ್ಲಿಸಿದರು.

***

AKT/AK