ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 29 ಮತ್ತು 30 ರಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ. ಸೆಪ್ಟೆಂಬರ್ 29 ರಂದು ಬೆಳಗ್ಗೆ 11 ಗಂಟೆಗೆ ಪ್ರಧಾನಮಂತ್ರಿ ಅವರು ಸೂರತ್ ನಲ್ಲಿ 3400 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಲಿದ್ದಾರೆ. ತದನಂತರ, ಪ್ರಧಾನ ಮಂತ್ರಿ ಅವರು ಭಾವನಗರಕ್ಕೆ ಪ್ರಯಾಣಿಸುವರು. ಅಲ್ಲಿ ಮಧ್ಯಾಹ್ನ 2 ಗಂಟೆಗೆ ಶಂಕುಸ್ಥಾಪನೆ ನೆರವೇರಿಸಿ, 5200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅನೇಕ ಅಭಿವೃದ್ಧಿ ಉಪಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಸಂಜೆ 7 ಗಂಟೆಗೆ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ. ರಾತ್ರಿ 9 ಗಂಟೆಗೆ ಅಹ್ಮದಾಬಾದ್ ನ ಜಿಎಂಡಿಸಿ ಮೈದಾನದಲ್ಲಿ ನಡೆಯಲಿರುವ ನವರಾತ್ರಿ ಉತ್ಸವದಲ್ಲಿಯೂ ಪ್ರಧಾನಮಂತ್ರಿ ಅವರು ಪಾಲ್ಗೊಳ್ಳುವರು.
ಸೆಪ್ಟೆಂಬರ್ 30ರಂದು ಬೆಳಗ್ಗೆ 10.30ಕ್ಕೆ ಪ್ರಧಾನಮಂತ್ರಿ ಅವರು ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಗಾಂಧಿನಗರ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಲಿದ್ದು, ಅಲ್ಲಿಂದ ಕಲುಪುರ ರೈಲ್ವೆ ನಿಲ್ದಾಣಕ್ಕೆ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ. ಬೆಳಗ್ಗೆ 11.30ಕ್ಕೆ ಪ್ರಧಾನಮಂತ್ರಿ ಅವರು ಅಹ್ಮದಾಬಾದ್ ಮೆಟ್ರೋ ರೈಲು ಯೋಜನೆಗೆ ಹಸಿರು ನಿಶಾನೆ ತೋರಲಿದ್ದು, ಕಲುಪುರ ನಿಲ್ದಾಣದಿಂದ ದೂರದರ್ಶನ ಕೇಂದ್ರದ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ಪ್ರಯಾಣ ಕೈಗೊಳ್ಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಅಹ್ಮದಾಬಾದ್ ನ ಅಹ್ಮದಾಬಾದ್ ಎಜುಕೇಶನ್ ಸೊಸೈಟಿಯಲ್ಲಿ ನಡೆಯಲಿರುವ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಅಹ್ಮದಾಬಾದ್ ಮೆಟ್ರೋ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಲಿದ್ದಾರೆ. ತದನಂತರ, ಸಂಜೆ 5:45 ಕ್ಕೆ, ಪ್ರಧಾನಮಂತ್ರಿ ಅವರು ಅಂಬಾಜಿಯಲ್ಲಿ 7200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸುವರು. ಸಂಜೆ 7 ಗಂಟೆಗೆ ಅಂಬಾಜಿ ದೇವಸ್ಥಾನದಲ್ಲಿ ಪ್ರಧಾನಮಂತ್ರಿ ದರ್ಶನ ಮತ್ತು ಪೂಜೆ ಸಲ್ಲಿಸಲಿದ್ದಾರೆ. ನಂತರ, ಸಂಜೆ 7:45 ಕ್ಕೆ, ಅವರು ಗಬ್ಬರ್ ತೀರ್ಥದಲ್ಲಿ ಮಹಾ ಆರತಿಯಲ್ಲಿ ಭಾಗವಹಿಸಲಿದ್ದಾರೆ.
ಈ ವ್ಯಾಪಕ ಶ್ರೇಣಿಯ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯು ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು, ನಗರ ಚಲನಶೀಲತೆಯನ್ನು ಹೆಚ್ಚಿಸಲು ಮತ್ತು ಬಹು ಮಾದರಿ ಸಂಪರ್ಕವನ್ನು ಸುಧಾರಿಸಲು ಪ್ರಧಾನಮಂತ್ರಿ ಅವರು ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದು ಸಾಮಾನ್ಯ ಜನರ ಸುಲಭ ಜೀವನವನ್ನು ಸುಧಾರಿಸುವಲ್ಲಿ ಅವರ ಸರ್ಕಾರದ ನಿರಂತರ ಗಮನವನ್ನು ಸಹ ಪ್ರದರ್ಶಿಸುತ್ತದೆ.
ಸೂರತ್ ನಲ್ಲಿ ಪ್ರಧಾನ ಮಂತ್ರಿ
ಪ್ರಧಾನಮಂತ್ರಿ ಅವರು 3400 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವರು ಮತ್ತು ಲೋಕಾರ್ಪಣೆಗೊಳಿಸುವವರು. ಇವುಗಳಲ್ಲಿ ನೀರು ಸರಬರಾಜು, ಒಳಚರಂಡಿ ಯೋಜನೆಗಳು, ಡ್ರೀಮ್ ಸಿಟಿ, ಜೀವವೈವಿಧ್ಯ ಉದ್ಯಾನವನ ಮತ್ತು ಸಾರ್ವಜನಿಕ ಮೂಲಸೌಕರ್ಯ, ಪಾರಂಪರಿಕ ಪುನರುಜ್ಜೀವನ, ಸಿಟಿ ಬಸ್ / ಬಿಆರ್ ಟಿಎಸ್ ಮೂಲಸೌಕರ್ಯ, ಎಲೆಕ್ಟ್ರಿಕ್ ವಾಹನ ಮೂಲಸೌಕರ್ಯ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಅಭಿವೃದ್ಧಿ ಕಾರ್ಯಗಳಂತಹ ಇತರ ಅಭಿವೃದ್ಧಿ ಕಾಮಗಾರಿಗಳು ಸೇರಿವೆ.
ಪ್ರಧಾನಮಂತ್ರಿ ಅವರು ರಸ್ತೆ ಮೂಲಸೌಕರ್ಯ ಕಾಮಗಾರಿಗಳ ಹಂತ-1 ಮತ್ತು ಡೈಮಂಡ್ ರಿಸರ್ಚ್ ಅಂಡ್ ಮರ್ಕೆಂಟೈಲ್ (ಡ್ರೀಮ್) ನಗರದ ಮುಖ್ಯ ದ್ವಾರವನ್ನು ಉದ್ಘಾಟಿಸಲಿದ್ದಾರೆ. ಸೂರತ್ ನಲ್ಲಿ ವಜ್ರ ವ್ಯಾಪಾರ ವ್ಯವಹಾರದ ತ್ವರಿತ ಬೆಳವಣಿಗೆಗೆ ಪೂರಕವಾಗಿ ವಾಣಿಜ್ಯ ಮತ್ತು ವಸತಿ ಸ್ಥಳದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ದೃಷ್ಟಿಕೋನದೊಂದಿಗೆ ಡ್ರೀಮ್ ಸಿಟಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಪ್ರಧಾನಮಂತ್ರಿ ಅವರು ಯೋಜನೆಯ ಎರಡನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪ್ರಧಾನಮಂತ್ರಿ ಅವರು, ಡಾ. ಹೆಡ್ಗೆವಾರ್ ಸೇತುವೆಯಿಂದ ಭೀಮ್ರದ್-ಬಾಮ್ರೋಲಿ ಸೇತುವೆಯವರೆಗೆ 87 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಜೀವವೈವಿಧ್ಯ ಉದ್ಯಾನವನಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಮಂತ್ರಿ ಅವರು, ಸೂರತ್ ನ ವಿಜ್ಞಾನ ಕೇಂದ್ರದಲ್ಲಿ ಖೋಜ್ ವಸ್ತುಸಂಗ್ರಹಾಲಯವನ್ನು ಸಹ ಉದ್ಘಾಟಿಸಲಿದ್ದಾರೆ. ಮಕ್ಕಳಿಗಾಗಿ ನಿರ್ಮಿಸಲಾದ ಈ ಮ್ಯೂಸಿಯಂ ಸಂವಾದಾತ್ಮಕ ಪ್ರದರ್ಶನಗಳು, ವಿಚಾರಣೆ ಆಧಾರಿತ ಚಟುವಟಿಕೆಗಳು ಮತ್ತು ಜಿಜ್ಞಾಸೆ ಆಧಾರಿತ ಅನ್ವೇಷಣೆಗಳನ್ನು ಹೊಂದಿರುತ್ತದೆ.
ಭಾವನಗರದಲ್ಲಿ ಪ್ರಧಾನ ಮಂತ್ರಿ
ಪ್ರಧಾನಮಂತ್ರಿಯವರು ಭಾವನಗರದಲ್ಲಿ 5,200 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಮಂತ್ರಿಯವರು ಭಾವನಗರದಲ್ಲಿ ವಿಶ್ವದ ಮೊದಲ ಸಿಎನ್ ಜಿ ಟರ್ಮಿನಲ್ ಮತ್ತು ಬ್ರೌನ್ ಫೀಲ್ಡ್ ಬಂದರಿಗೆ ಶಂಕುಸ್ಥಾಪನೆ ನೆರವೇರಿಸುವರು. ಈ ಬಂದರನ್ನು 4000 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ವಿಶ್ವದ ಮೊದಲ ಸಿಎನ್ ಜಿ ಟರ್ಮಿನಲ್ ಗಾಗಿ ಅತ್ಯಾಧುನಿಕ ಮೂಲಸೌಕರ್ಯವನ್ನು ವಿಶ್ವದ ನಾಲ್ಕನೇ ಅತಿದೊಡ್ಡ ಲಾಕ್ ಗೇಟ್ ವ್ಯವಸ್ಥೆಯೊಂದಿಗೆ ಹೊಂದಿರುತ್ತದೆ. ಸಿಎನ್ ಜಿ ಟರ್ಮಿನಲ್ ಜೊತೆಗೆ, ಈ ಬಂದರು ಪ್ರದೇಶದಲ್ಲಿ ಮುಂಬರುವ ವಿವಿಧ ಯೋಜನೆಗಳ ಭವಿಷ್ಯದ ಅಗತ್ಯಗಳು ಮತ್ತು ಬೇಡಿಕೆಗಳನ್ನು ಪೂರೈಸುತ್ತದೆ. ಈ ಬಂದರು ಅಲ್ಟ್ರಾ-ಮಾಡರ್ನ್ ಕಂಟೇನರ್ ಟರ್ಮಿನಲ್, ಬಹುಪಯೋಗಿ ಟರ್ಮಿನಲ್ ಮತ್ತು ಲಿಕ್ವಿಡ್ ಟರ್ಮಿನಲ್ ಅನ್ನು ಹೊಂದಿದ್ದು, ಅಸ್ತಿತ್ವದಲ್ಲಿರುವ ರಸ್ತೆ ಮಾರ್ಗ ಮತ್ತು ರೈಲ್ವೆ ಜಾಲಕ್ಕೆ ನೇರ ಸಮೀಪದ ಸಂಪರ್ಕವನ್ನು ಹೊಂದಿರುತ್ತದೆ. ಇದು ಸರಕುಗಳನ್ನು ನಿರ್ವಹಿಸುವಲ್ಲಿ ವೆಚ್ಚ ಉಳಿತಾಯದ ದೃಷ್ಟಿಯಿಂದ ಆರ್ಥಿಕ ಪ್ರಯೋಜನಗಳಿಗೆ ಕಾರಣವಾಗುವುದಲ್ಲದೆ, ಈ ಪ್ರದೇಶದ ಜನರಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ. ಅಲ್ಲದೆ, ಸಿಎನ್ ಜಿ ಆಮದು ಟರ್ಮಿನಲ್ ಹೆಚ್ಚುತ್ತಿರುವ ಶುದ್ಧ ಇಂಧನದ ಬೇಡಿಕೆಗಳನ್ನು ಪೂರೈಸಲು ಹೆಚ್ಚುವರಿ ಪರ್ಯಾಯ ಶಕ್ತಿಯ ಮೂಲವನ್ನು ಒದಗಿಸುತ್ತದೆ.
ಪ್ರಧಾನಮಂತ್ರಿ ಅವರು ಭಾವನಗರದಲ್ಲಿ 20 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಮತ್ತು ಸುಮಾರು 100 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನೂ ಉದ್ಘಾಟಿಸಲಿದ್ದಾರೆ. ಈ ಕೇಂದ್ರವು ಸಾಗರ ಅಕ್ವಾಟಿಕ್ ಗ್ಯಾಲರಿ, ಆಟೋಮೊಬೈಲ್ ಗ್ಯಾಲರಿ, ನೊಬೆಲ್ ಪ್ರಶಸ್ತಿಯ ಗ್ಯಾಲರಿ – ಫಿಸಿಯೋಲಜಿ ಮತ್ತು ಮೆಡಿಸಿನ್, ಎಲೆಕ್ಟ್ರೋ ಮೆಕ್ಯಾನಿಕ್ಸ್ ಗ್ಯಾಲರಿ, ಜೀವಶಾಸ್ತ್ರ ವಿಜ್ಞಾನ ಗ್ಯಾಲರಿ ಸೇರಿದಂತೆ ಹಲವಾರು ವಿಷಯಾಧಾರಿತ ಗ್ಯಾಲರಿಗಳನ್ನು ಹೊಂದಿದೆ. ಈ ಕೇಂದ್ರವು ಅನಿಮಾಟ್ರಾನಿಕ್ ಡೈನೋಸಾರ್ ಗಳು, ವಿಜ್ಞಾನ ವಿಷಯಾಧಾರಿತ ಆಟಿಕೆ ರೈಲು, ಪ್ರಕೃತಿ ಅನ್ವೇಷಣೆ ಪ್ರವಾಸ, ಮೋಷನ್ ಸಿಮ್ಯುಲೇಟರ್ ಗಳು, ಪೋರ್ಟಬಲ್ ಸೋಲಾರ್ ಅಬ್ಸರ್ವೇಟರಿ ಇತ್ಯಾದಿಗಳಂತಹ ಹೊರ-ಬಾಗಿಲಿನ ಸ್ಥಾಪನೆಗಳ ಮೂಲಕ ಮಕ್ಕಳಿಗೆ ಅನ್ವೇಷಣೆ ಮತ್ತು ಅನ್ವೇಷಣೆಗೆ ಸೃಜನಶೀಲ ವೇದಿಕೆಯನ್ನು ಒದಗಿಸುತ್ತದೆ.
ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಸೌನಿ ಯೋಜನೆ ಸಂಪರ್ಕ 2ರ ಪ್ಯಾಕೇಜ್ 7, 25 ಮೆಗಾವ್ಯಾಟ್ ಪಾಲಿಟಾನಾ ಸೋಲಾರ್ ಪಿವಿ ಯೋಜನೆ, ಎಪಿಪಿಎಲ್ ಕಂಟೇನರ್ (ಆವಡ್ ಕೃಪಾ ಪ್ಲಾಸ್ಟೋಮೆಚ್ ಪ್ರೈವೇಟ್ ಲಿಮಿಟೆಡ್) ಯೋಜನೆ ಸೇರಿದಂತೆ ವಿವಿಧ ಇತರ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಮತ್ತು ಸೌನಿ ಯೋಹ್ನಾ ಲಿಂಕ್ 2 ರ ಪ್ಯಾಕೇಜ್ 9, ಚೋರ್ವಾಡ್ಲಾ ವಲಯ ನೀರು ಸರಬರಾಜು ಯೋಜನೆ ಸೇರಿದಂತೆ ಇತರ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಅಹ್ಮದಾಬಾದ್ ನಲ್ಲಿ ಪ್ರಧಾನಮಂತ್ರಿ
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಭವ್ಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು 36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಘೋಷಿಸಲಿದ್ದಾರೆ. ಈ ವೇಳೆ ಅವರು, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ದೇಶಾದ್ಯಂತದ ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ದೇಸರ್ ನಲ್ಲಿ ವಿಶ್ವದರ್ಜೆಯ “ಸ್ವರ್ಣಿಮ್ ಗುಜರಾತ್ ಕ್ರೀಡಾ ವಿಶ್ವವಿದ್ಯಾಲಯ”ವನ್ನು ಉದ್ಘಾಟಿಸಲಿದ್ದಾರೆ. ಈ ಮಹತ್ವದ ಯೋಜನೆಯು ದೇಶದ ಕ್ರೀಡಾ ಶಿಕ್ಷಣ ಭೂದೃಶ್ಯವನ್ನು ಪರಿವರ್ತಿಸುವ ನಿರೀಕ್ಷೆಯಿದೆ.
ಗುಜರಾತ್ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾಕೂಟಗಳು ನಡೆಯುತ್ತಿವೆ. ಇದನ್ನು 2022 ರ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 12 ರವರೆಗೆ ಆಯೋಜಿಸಲಾಗುವುದು. ದೇಶಾದ್ಯಂತ ಸುಮಾರು 15,000 ಕ್ರೀಡಾಪಟುಗಳು, ತರಬೇತುದಾರರು ಮತ್ತು ಅಧಿಕಾರಿಗಳು 36 ಕ್ರೀಡಾ ವಿಭಾಗಗಳಲ್ಲಿ ಭಾಗವಹಿಸಲಿದ್ದು, ಇದುವರೆಗಿನ ಅತಿದೊಡ್ಡ ರಾಷ್ಟ್ರೀಯ ಕ್ರೀಡಾಕೂಟವಾಗಿದೆ. ಅಹ್ಮದಾಬಾದ್, ಗಾಂಧಿನಗರ, ಸೂರತ್, ವಡೋದರಾ, ರಾಜ್ ಕೋಟ್ ಮತ್ತು ಭಾವನಗರ ಸೇರಿ ಆರು ನಗರಗಳಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಆಗಿನ ಮುಖ್ಯಮಂತ್ರಿ ಮತ್ತು ಪ್ರಸ್ತುತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಗುಜರಾತ್ ಅಂತಾರಾಷ್ಟ್ರೀಯ ಮಾನದಂಡಗಳ ಬಲವಾದ ಕ್ರೀಡಾ ಮೂಲಸೌಕರ್ಯವನ್ನು ಸೃಷ್ಟಿಸುವ ಪ್ರಯಾಣವನ್ನು ಪ್ರಾರಂಭಿಸಿತು, ಇದು ಅತ್ಯಂತ ಕಡಿಮೆ ಅವಧಿಯಲ್ಲಿ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸಲು ರಾಜ್ಯಕ್ಕೆ ಸಹಾಯ ಮಾಡಿದೆ.
ಅಹ್ಮದಾಬಾದ್ ನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಅಹ್ಮದಾಬಾದ್ ಮೆಟ್ರೋ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಲಿದ್ದಾರೆ. ಇದು ಪೂರ್ವ-ಪಶ್ಚಿಮ ಕಾರಿಡಾರ್ ನ ಸುಮಾರು 32 ಕಿ.ಮೀ ಪೂರ್ವ-ಪಶ್ಚಿಮ ಕಾರಿಡಾರ್ ಅನ್ನು ಅಪೆರೆಲ್ ಪಾರ್ಕ್ ನಿಂದ ತಾಲ್ತೇಜ್ ವರೆಗೆ ಮತ್ತು ಮೊಟೆರಾದಿಂದ ಗ್ಯಾಸ್ ಪುರದವರೆಗೆ ಉತ್ತರ-ದಕ್ಷಿಣ ಕಾರಿಡಾರ್ ಅನ್ನು ಒಳಗೊಂಡಿದೆ. ಪೂರ್ವ-ಪಶ್ಚಿಮ ಕಾರಿಡಾರ್ ನಲ್ಲಿ ತಲ್ತೇಜ್-ವಸ್ತ್ರಾಲ್ ಮಾರ್ಗವು 17 ನಿಲ್ದಾಣಗಳನ್ನು ಹೊಂದಿದೆ. ಈ ಕಾರಿಡಾರ್ ನಾಲ್ಕು ನಿಲ್ದಾಣಗಳೊಂದಿಗೆ 6.6 ಕಿ.ಮೀ ಭೂಗತ (ಸುರಂಗ ಮಾರ್ಗ) ವಿಭಾಗವನ್ನು ಸಹ ಹೊಂದಿದೆ. ಗ್ಯಾಸ್ ಪುರ ರದಿಂದ ಮೊಟೆರಾ ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸುವ 19 ಕಿ.ಮೀ ಉತ್ತರ-ದಕ್ಷಿಣ ಕಾರಿಡಾರ್ 15 ನಿಲ್ದಾಣಗಳನ್ನು ಹೊಂದಿದೆ. ಸಂಪೂರ್ಣ ಹಂತ 1 ಯೋಜನೆಯನ್ನು 12,900 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಹ್ಮದಾಬಾದ್ ಮೆಟ್ರೋ ಭೂಗತ ಸುರಂಗಗಳು, ವಯಾಡಕ್ಟ್ ಮತ್ತು ಸೇತುವೆಗಳು, ಎತ್ತರಿಸಿದ ಮತ್ತು ಭೂಗತ (ಸುರಂಗ) ನಿಲ್ದಾಣ ಕಟ್ಟಡಗಳು, ಬ್ಯಾಲಸ್ಟ್ ಲೆಸ್ ರೈಲು ಹಳಿಗಳು ಮತ್ತು ಚಾಲಕ ರಹಿತ ರೈಲು ಕಾರ್ಯಾಚರಣೆ ಕಂಪ್ಲೈಂಟ್ ರೋಲಿಂಗ್ ಸ್ಟಾಕ್ ಇತ್ಯಾದಿಗಳನ್ನು ಒಳಗೊಂಡ ಬೃಹತ್ ಅತ್ಯಾಧುನಿಕ ಮೂಲಸೌಕರ್ಯ ಯೋಜನೆಯಾಗಿದೆ. ಮೆಟ್ರೋ ರೈಲು ಸೆಟ್ ಇಂಧನ ದಕ್ಷತೆಯ ವ್ಯವಸ್ಥೆಯನ್ನು ಹೊಂದಿದೆ, ಇದು ಸುಮಾರು ಶೇ. 30-35 ರಷ್ಟು ಇಂಧನ ಬಳಕೆಯನ್ನು ಉಳಿಸುತ್ತದೆ. ಈ ರೈಲು ಅತ್ಯಾಧುನಿಕ ಸಸ್ಪೆನ್ಷನ್ ಸಿಸ್ಟಮ್ ಅನ್ನು ಹೊಂದಿದ್ದು, ಪ್ರಯಾಣಿಕರಿಗೆ ತುಂಬಾ ನಯವಾದ ಸಂಚಾರಿ ಅನುಭವವನ್ನು ನೀಡುತ್ತದೆ. ಅಹ್ಮದಾಬಾದ್ ಹಂತ -1 ಮೆಟ್ರೋ ಯೋಜನೆಯ ಉದ್ಘಾಟನೆಯು ನಗರದ ಜನರಿಗೆ ವಿಶ್ವದರ್ಜೆಯ ಬಹು ಮಾದರಿ ಸಂಪರ್ಕವನ್ನು ಒದಗಿಸುತ್ತದೆ. ಭಾರತೀಯ ರೈಲ್ವೆ ಮತ್ತು ಬಸ್ ವ್ಯವಸ್ಥೆ (ಬಿಆರ್ ಟಿಎಸ್, ಜಿಎಸ್ಆರ್ ಟಿಸಿ ಮತ್ತು ಸಿಟಿ ಬಸ್ ಸೇವೆ) ಯೊಂದಿಗೆ ಬಹು ಮಾದರಿ ಸಂಪರ್ಕವನ್ನು ಒದಗಿಸಲಾಗುತ್ತಿದೆ. ಇದು ರಾಣಿಪ್, ವಡಾಜ್, ಎಇಸಿ ನಿಲ್ದಾಣ ಇತ್ಯಾದಿಗಳಲ್ಲಿ ಬಿಆರ್ ಟಿಎಸ್ ಜತೆ ಮತ್ತು ಗಾಂಧಿಧಾಮ್, ಕಲುಪುರ್ ಮತ್ತು ಸಬರಮತಿ ನಿಲ್ದಾಣಗಳಲ್ಲಿ ಭಾರತೀಯ ರೈಲ್ವೆಯೊಂದಿಗೆ ಸಂಪರ್ಕವನ್ನು ಒಳಗೊಂಡಿದೆ. ಕಲುಪುರದಲ್ಲಿ, ಮೆಟ್ರೋ ಮಾರ್ಗವನ್ನು ಮುಂಬೈ ಮತ್ತು ಅಹಮದಾಬಾದ್ ಅನ್ನು ಸಂಪರ್ಕಿಸುವ ಹೈಸ್ಪೀಡ್ ರೈಲು ವ್ಯವಸ್ಥೆಗೆ ಸಂಪರ್ಕಿಸಲಾಗುತ್ತದೆ.
ಗಾಂಧಿನಗರ ಮತ್ತು ಮುಂಬೈ ನಡುವಿನ ವಂದೇ ಭಾರತ್ ಎಕ್ಸ್ ಪ್ರೆಸ್ ನ ಹೊಸ ಮತ್ತು ನವೀಕರಿಸಿದ ಆವೃತ್ತಿಗೆ ಪ್ರಧಾನಮಂತ್ರಿ ಅರು ಹಸಿರು ನಿಶಾನೆ ತೋರಲಿದ್ದಾರೆ. ವಂದೇ ಭಾರತ್ ಎಕ್ಸ್ ಪ್ರೆಸ್ ಅಸಂಖ್ಯಾತ ಉತ್ಕೃಷ್ಟ ಮತ್ತು ವಿಮಾನದಂತಹ ಪ್ರಯಾಣದ ಅನುಭವವನ್ನು ನೀಡುತ್ತದೆ. ಇದು ದೇಶೀಯವಾಗಿ ಅಭಿವೃದ್ಧಿಪಡಿಸಿದ ಟ್ರೈನ್ ಕೊಲಿಷನ್ ಅವಾಯ್ಡನ್ಸ್ ಸಿಸ್ಟಮ್ – ಕಾವಾಚ್ ಸೇರಿದಂತೆ ಸುಧಾರಿತ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಎಲ್ಲಾ ತರಗತಿಗಳಲ್ಲಿ ಒರಗಿಕೊಳ್ಳುವ ಆಸನಗಳಿವೆ, ಆದರೆ ಕಾರ್ಯನಿರ್ವಾಹಕ ಬೋಗಿಗಳು 180 ಡಿಗ್ರಿ ತಿರುಗುವ ಆಸನಗಳ ಹೆಚ್ಚುವರಿ ವೈಶಿಷ್ಟ್ಯವನ್ನು ಹೊಂದಿವೆ. ಪ್ರತಿ ಬೋಗಿಯಲ್ಲಿ ಪ್ರಯಾಣಿಕರ ಮಾಹಿತಿ ಮತ್ತು ಮಾಹಿತಿ ಮನರಂಜನೆ ಒದಗಿಸುವ 32″ ಪರದೆಗಳನ್ನು ಅಳವಡಿಸಲಾಗಿದೆ.
ಅಂಬಾಜಿಯಲ್ಲಿ ಪ್ರಧಾನ ಮಂತ್ರಿ
ಪ್ರಧಾನಮಂತ್ರಿ ಅವರು ಅಂಬಾಜಿಯಲ್ಲಿ 7,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ 45,000 ಕ್ಕೂ ಹೆಚ್ಚು ಮನೆಗಳ ಶಂಕುಸ್ಥಾಪನೆ ಮತ್ತು ಸಮರ್ಪಣೆಯನ್ನು ಪ್ರಧಾನಮಂತ್ರಿ ಅವರು ನೆರವೇರಿಸಲಿದ್ದಾರೆ. ಪ್ರಧಾನಮಂತ್ರಿ, ತರಂಗ ಬೆಟ್ಟ – ಅಂಬಾಜಿ – ಅಬು ರಸ್ತೆ ಹೊಸ ಬ್ರಾಡ್ ಗೇಜ್ ಲೈನ್ ಮತ್ತು ಪ್ರಸಾದ ಯೋಜನೆಯಡಿ ಅಂಬಾಜಿ ದೇವಾಲಯದಲ್ಲಿ ಯಾತ್ರಾ ಸೌಲಭ್ಯಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹೊಸ ರೈಲು ಮಾರ್ಗವು 51 ಶಕ್ತಿ ಪೀಠಗಳಲ್ಲಿ ಒಂದಾದ ಅಂಬಾಜಿಗೆ ಭೇಟಿ ನೀಡುವ ಲಕ್ಷಾಂತರ ಭಕ್ತರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಈ ಎಲ್ಲಾ ಯಾತ್ರಾ ಸ್ಥಳಗಳಲ್ಲಿ ಭಕ್ತರ ಪೂಜಾ ಅನುಭವವನ್ನು ಶ್ರೀಮಂತಗೊಳಿಸುತ್ತದೆ. ದೀಸಾದ ಏರ್ ಫೋರ್ಸ್ ನಿಲ್ದಾಣದಲ್ಲಿ ರನ್ ವೇ ನಿರ್ಮಾಣ ಮತ್ತು ಸಂಬಂಧಿತ ಮೂಲಸೌಕರ್ಯಗಳ ನಿರ್ಮಾಣ ಸೇರಿದಂತೆ ಇತರ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು; ಅಂಬಾಜಿ ಬೈಪಾಸ್ ರಸ್ತೆ ಇತರ ಯೋಜನೆಗಳಲ್ಲಿ ಒಂದಾಗಿದೆ.
ಪ್ರಧಾನಮಂತ್ರಿ ಅವರು ವೆಸ್ಟರ್ನ್ ಫ್ರೈಟ್ ಡೆಡಿಕೇಟೆಡ್ ಕಾರಿಡಾರ್ ನ 62 ಕಿ.ಮೀ ಉದ್ದದ ನ್ಯೂ ಪಾಲನ್ ಪುರ್-ನ್ಯೂ ಮಹೆಸಾನಾ ವಿಭಾಗ ಮತ್ತು 13 ಕಿ.ಮೀ ಉದ್ದದ ನ್ಯೂ ಪಾಲನ್ ಪುರ್-ನ್ಯೂ ಚಟೋದಾರ್ ವಿಭಾಗವನ್ನು (ಪಾಲನ್ ಪುರ್ ಬೈಪಾಸ್ ಲೈನ್) ಲೋಕಾರ್ಪಣೆ ಮಾಡಲಿದ್ದಾರೆ. ಇದು ಪಿಪವಾವ್, ದೀನ್ ದಯಾಳ್ ಬಂದರು ಪ್ರಾಧಿಕಾರ (ಕಾಂಡ್ಲಾ), ಮುಂದ್ರಾ ಮತ್ತು ಗುಜರಾತ್ ನ ಇತರ ಬಂದರುಗಳಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ. ಈ ವಿಭಾಗಗಳನ್ನು ತೆರೆಯುವುದರೊಂದಿಗೆ, ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ನ 734 ಕಿ.ಮೀ. ಕಾರ್ಯಾರಂಭ ಮಾಡಲಿದೆ. ಈ ವಿಸ್ತರಣೆಯನ್ನು ತೆರೆಯುವುದರಿಂದ ಗುಜರಾತ್ ನ ಮೆಹ್ಸಾನಾ-ಪಾಲನ್ ಪುರದ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ; ರಾಜಸ್ತಾನದ ಸ್ವರೂಪ್ ಗಂಜ್, ಕೇಶವಗಂಜ್, ಕಿಶನ್ ಗಡ್; ಹರಿಯಾಣದ ರೆವಾರಿ-ಮನೇಸರ್ ಮತ್ತು ನರ್ನೌಲ್ ಸೇರಿವೆ. ಪ್ರಧಾನಮಂತ್ರಿ ಅವರು, ಮಿಥಾ – ತರಡ್ – ದೀಸಾ ರಸ್ತೆ ಅಗಲೀಕರಣ ಸೇರಿದಂತೆ ವಿವಿಧ ರಸ್ತೆ ಯೋಜನೆಗಳನ್ನು ಲೋಕಾರ್ಪಣೆ ನೆರವೇರಿಸುವರು.
********