Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೆಪ್ಟೆಂಬರ್ 24 , 2023 ರಂದು ಒಂಬತ್ತು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 24ನೇ ಸೆಪ್ಟೆಂಬರ್ 2023 ರಂದು ಮಧ್ಯಾಹ್ನ 12:30 ಗಂಟೆಗೆ ವಿಡಿಯೊ ಸಮಾವೇಶ ಮೂಲಕ ಒಂಬತ್ತು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಲಿದ್ದಾರೆ.

ಈ ಹೊಸ ವಂದೇ ಭಾರತ್ ರೈಲುಗಳು ದೇಶದಾದ್ಯಂತ ಸಂಪರ್ಕವನ್ನು ಸುಧಾರಿಸುವ ಮತ್ತು ರೈಲು ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವ ಪ್ರಧಾನ ಮಂತ್ರಿಯವರ ದೃಷ್ಟಿಯನ್ನು ಸಾಕಾರಗೊಳಿಸುವತ್ತ ಒಂದು ಹೆಜ್ಜೆಯಾಗಿದೆ. ಹಸಿರು ನಿಶಾನೆ ಕಾಣಲಿರುವ ಹೊಸ ರೈಲುಗಳು:

1.ಉದಯಪುರ – ಜೈಪುರ ವಂದೇ ಭಾರತ್ ಎಕ್ಸ್ಪ್ರೆಸ್

2.ತಿರುನಲ್ವೇಲಿ-ಮಧುರೈ- ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್

3.ಹೈದರಾಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್

4.ವಿಜಯವಾಡ – ಚೆನ್ನೈ (ರೇಣಿಗುಂಟಾ ಮೂಲಕ) ವಂದೇ ಭಾರತ್ ಎಕ್ಸ್ಪ್ರೆಸ್

5.ಪಾಟ್ನಾ – ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್

6.ಕಾಸರಗೋಡು  – ತಿರುವನಂತಪುರಂ ವಂದೇ ಭಾರತ್ ಎಕ್ಸ್ಪ್ರೆಸ್

7. ರೂರ್ಕೆಲಾ – ಭುವನೇಶ್ವರ್ – ಪುರಿ ವಂದೇ ಭಾರತ್ ಎಕ್ಸ್ಪ್ರೆಸ್

8.ರಾಂಚಿ – ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್

9. ಜಾಮ್ ನಗರ-ಅಹಮದಾಬಾದ್ ವಂದೇ ಭಾರತ್ ಎಕ್ಸ್ಪ್ರೆಸ್

ಈ ಒಂಬತ್ತು ರೈಲುಗಳು ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್ ಸೇರಿದಂತೆ ಹನ್ನೊಂದು ರಾಜ್ಯಗಳಾದ್ಯಂತ ರೈಲು ಸಂಪರ್ಕವನ್ನು ಹೆಚ್ಚಿಸುತ್ತವೆ.

ಈ ವಂದೇ ಭಾರತ್ ರೈಲುಗಳು ತಮ್ಮ ಕಾರ್ಯಾಚರಣೆಯ ಮಾರ್ಗಗಳಲ್ಲಿ ಅತ್ಯಂತ ವೇಗದ ರೈಲು ಆಗಿರುತ್ತವೆ ಮತ್ತು ಪ್ರಯಾಣಿಕರ ಗಣನೀಯ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ. ಮಾರ್ಗದಲ್ಲಿ ಪ್ರಸ್ತುತ ವೇಗದ ರೈಲಿಗೆ ಹೋಲಿಸಿದರೆ, ರೂರ್ಕೆಲಾ- ಭುವನೇಶ್ವರ್ – ಪುರಿ ವಂದೇ ಭಾರತ್ ಎಕ್ಸ್ಪ್ರೆಸ್ ಮತ್ತು ಕಾಸರಗೋಡು – ತಿರುವನಂತಪುರಂ ವಂದೇ ಭಾರತ್ ಎಕ್ಸ್ಪ್ರೆಸ್ ಸುಮಾರು 3 ಗಂಟೆಗಳ ಸಮಯ ಉಳಿತಾಯದ ವೇಗ ಹೊಂದಿರುತ್ತವೆ; ಹೈದರಾಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ 2.5 ಗಂಟೆಗಳಿಗಿಂತ ಹೆಚ್ಚು ಸಮಯ ಉಳಿತಾಯ; ತಿರುನಲ್ವೇಲಿ-ಮಧುರೈ-ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್ 2 ಗಂಟೆಗಳಿಗೂ ಹೆಚ್ಚು; ರಾಂಚಿ – ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್, ಪಾಟ್ನಾ – ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್ ಮತ್ತು ಜಾಮ್ನಗರ-ಅಹಮದಾಬಾದ್ ವಂದೇ ಭಾರತ್ ಎಕ್ಸ್ಪ್ರೆಸ್ ಸುಮಾರು 1 ಗಂಟೆ; ಮತ್ತು ಉದಯಪುರ – ಜೈಪುರ ವಂದೇ ಭಾರತ್ ಎಕ್ಸ್ಪ್ರೆಸ್ ಸುಮಾರು ಅರ್ಧ ಗಂಟೆ ಸಮಯ ಉಳಿತಾಯ ಮಾಡುತ್ತವೆ.

ದೇಶದಾದ್ಯಂತ ಪ್ರಮುಖ ಧಾರ್ಮಿಕ ಸ್ಥಳಗಳ ಸಂಪರ್ಕವನ್ನು ಸುಧಾರಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ರೂರ್ಕೆಲಾ-ಭುವನೇಶ್ವರ್-ಪುರಿ ವಂದೇ ಭಾರತ್ ಎಕ್ಸ್ಪ್ರೆಸ್ ಮತ್ತು ತಿರುನಲ್ವೇಲಿ-ಮಧುರೈ-ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್ ಪ್ರಮುಖ ಧಾರ್ಮಿಕ ಪಟ್ಟಣಗಳಾದ ಪುರಿ ಮತ್ತು ಮಧುರೈಗಳನ್ನು ಸಂಪರ್ಕಿಸುತ್ತದೆ. ಅಲ್ಲದೆ, ವಿಜಯವಾಡ – ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್ ರೇಣಿಗುಂಟಾ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ತಿರುಪತಿ ಯಾತ್ರಾ ಕೇಂದ್ರಕ್ಕೆ ಸಂಪರ್ಕವನ್ನು ಒದಗಿಸುತ್ತದೆ.

ಈ ವಂದೇ ಭಾರತ್ ರೈಲುಗಳ ಅನುಷ್ಠಾನವು ದೇಶದಲ್ಲಿ ಹೊಸ ಗುಣಮಟ್ಟದ ರೈಲು ಸೇವೆಗೆ ನಾಂದಿ ಹಾಡಲಿದೆ. ವಿಶ್ವ ದರ್ಜೆಯ ಸೌಕರ್ಯಗಳು ಮತ್ತು ಕವಚ ತಂತ್ರಜ್ಞಾನ ಸೇರಿದಂತೆ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಈ ರೈಲುಗಳು ಸಾಮಾನ್ಯ ಜನರು, ವೃತ್ತಿಪರರು, ಉದ್ಯಮಿಗಳು, ವಿದ್ಯಾರ್ಥಿ ಸಮುದಾಯ ಮತ್ತು ಪ್ರವಾಸಿಗರಿಗೆ ಆಧುನಿಕ, ವೇಗದ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುವ ಪ್ರಮುಖ ಹೆಜ್ಜೆಯಾಗಿರುತ್ತವೆ.

****