Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೆಪ್ಟೆಂಬರ್ 10ರಂದು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಉದ್ಘಾಟಿಸಲಿರುವ ಪ್ರಧಾನಿ


ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 10 ರಂದು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‌.ವೈ) ಗೆ ಡಿಜಿಟಲ್ ಮೂಲಕ ಚಾಲನೆ ನೀಡಲಿದ್ದಾರೆ. ರೈತರ ನೇರ ಬಳಕೆಗಾಗಿ ಸಮಗ್ರ ತಳಿ ಸುಧಾರಣಾ ಮಾರುಕಟ್ಟೆ ಮತ್ತು ಮಾಹಿತಿ ಪೋರ್ಟಲ್ ಇ-ಗೋಪಾಲ ಆಪ್ ಅನ್ನೂ ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಬಿಹಾರದಲ್ಲಿ ಮೀನುಗಾರಿಕೆ ಮತ್ತು ಪಶುಸಂಗೋಪನಾ ಕ್ಷೇತ್ರಗಳಲ್ಲಿ ಹಲವಾರು ಇತರ ಉಪಕ್ರಮಗಳಿಗೂ ಪ್ರಧಾನಮಂತ್ರಿ ಚಾಲನೆ ನೀಡಲಿದ್ದಾರೆ.

ಬಿಹಾರದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಮತ್ತು ಮೀನುಗಾರಿಕೆ ಹಾಗೂ ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ಸಹಾಯಕ ಸಚಿವರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.  

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ 

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್.ವೈ) ದೇಶದ ಮೀನುಗಾರಿಕೆ ವಲಯದ ಸುಸ್ಥಿರ ಅಭಿವೃದ್ಧಿಗೆ ಗಮನಹರಿಸಿದ  20,050 ಕೋಟಿ  ರೂ. ಅಂದಾಜು ಹೂಡಿಕೆಯ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಆತ್ಮ ನಿರ್ಭರ ಭಾರತ ಪ್ಯಾಕೇಜ್ ಅಡಿಯಲ್ಲಿ 2020-21ರಿಂದ 2024-25ರ ಆರ್ಥಿಕ ವರ್ಷದ ನಡುವೆ 5 ವರ್ಷಗಳಲ್ಲಿ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಾಗಲಿದೆ. ಪಿಎಂಎಂಎಸ್.ವೈ. ಅಡಿಯಲ್ಲಿ 20,050 ಕೋಟಿ ರೂ. ಹೂಡಿಕೆ ಮೀನುಗಾರಿಕೆ ವಲಯದಲ್ಲಿ ಈವರೆಗಿನ ಅತ್ಯಧಿಕ ಹೂಡಿಕೆಯಾಗಿದೆ. ಈ ಪೈಕಿ 12,340 ಕೋಟಿ ರೂ. ಹೂಡಿಕೆಯನ್ನು ಸಾಗರ, ಒಳನಾಡ ಮೀನುಗಾರಿಕೆ ಮತ್ತು ಜಲಚರಗಳ ಕ್ಷೇತ್ರದ ಫಲಾನುಭವಿ ಆಧಾರಿತ ಚಟುವಟಿಕೆಗಳಿಗೆ ಉದ್ದೇಶಿಸಿದ್ದರೆ, ಮೀನುಗಾರಿಕೆ ಮೂಲಸೌಕರ್ಯದಲ್ಲಿ ಸುಮಾರು 7710 ಕೋಟಿ ರೂ. ಹೂಡಿಕೆ ಮಾಡಲಾಗುತ್ತದೆ.

ಪಿಎಂಎಂಎಸ್.ವೈ ಮೀನು ಉತ್ಪಾದನೆಯನ್ನು 2024-25ರ ಹೊತ್ತಿಗೆ ಹೆಚ್ಚುವರಿಯಾಗಿ 70 ಲಕ್ಷ ಟನ್ ಹೆಚ್ಚಳ ಮಾಡುವ, 2024-25ರ ಹೊತ್ತಿಗೆ ಮೀನುಗಾರಿಕೆಯ ರಫ್ತಿನ ಗಳಿಕೆಯನ್ನು 1,00,000 ಕೋಟಿ ರೂ.ಗಳಿಗೆ ಹೆಚ್ಚಿಸುವ, ಮೀನುಗಾರರ ಮತ್ತು ಮೀನುಕೃಷಿಕರ ಆದಾಯವನ್ನು ದುಪ್ಪಟ್ಟು ಮಾಡುವ ಹಾಗೂ ಕೊಯ್ಲು ನಂತರದ ನಷ್ಟವನ್ನು ಶೇ.20-25ರಿಂದ ಶೇ.10ಕ್ಕೆ ತಗ್ಗಿಸುವ ಮತ್ತು ಹೆಚ್ಚುವರಿಯಾಗಿ 55 ಲಕ್ಷ ನೇರ ಮತ್ತು ಪರೋಕ್ಷ ಲಾಭದಾಯಕ ಉದ್ಯೋಗಾವಕಾಶವನ್ನು ಮೀನುಗಾರಿಕೆ ಮತ್ತು ಅದರ ಪೂರಕ ಚಟುವಟಿಕೆ ವಲಯದಲ್ಲಿ ಸೃಷ್ಟಿಸುವ ಗುರಿ ಹೊಂದಿದೆ.

 ಪಿಎಂಎಂಎಸ್.ವೈ. ಅನ್ನು ಮೀನು ಉತ್ಪಾದನೆ ಮತ್ತು ಉತ್ಪಾದಕತೆ, ಗುಣಮಟ್ಟ, ತಾಂತ್ರಿಕತೆ, ಕೊಯ್ಲೋತ್ತರ ಮೂಲಸೌಕರ್ಯ ಮತ್ತು ನಿರ್ವಹಣೆ, ಆಧುನೀಕರಣ ಹಾಗೂ ಮೌಲ್ಯ ಸರಪಳಿಯ ಬಲವರ್ಧನೆ, ಪತ್ತೆ, ಚೈತನ್ಯಶೀಲ ಮೀನುಗಾರಿಕೆ ನಿರ್ವಹಣಾ ಚೌಕಟ್ಟು ಸ್ಥಾಪನೆ ಮತ್ತು ರೈತರ ಕಲ್ಯಾಣದ ನಡುವಿನ ಪ್ರಮುಖ ಕಂದಕವನ್ನು ನಿವಾರಿಸಲು ವಿನ್ಯಾಸಗೊಳಿಸಲಾಗಿದೆ.

 ಪಿಎಂಎಂಎಸ್.ವೈ. ಅನೇಕ ಹೊಸ ಮಧ್ಯಸ್ಥಿಕೆಗಳಾದ ಮೀನುಗಾರಿಕೆ ಹಡಗುಗಳ ವಿಮೆ, ಮೀನುಗಾರಿಕೆ ಹಡಗುಗಳ/ದೋಣಿಗಳ ಹೊಸತನ/ಮೇಲ್ದರ್ಜೀಕರಣಕ್ಕೆ ಬೆಂಬಲ, ಜೈವಿಕ ಶೌಚಾಲಯಗಳು, ಉಪ್ಪು / ಕ್ಷಾರೀಯ ಪ್ರದೇಶಗಳಲ್ಲಿ ಜಲಚರ ಕೃಷಿ, ಸಾಗರ ಮಿತ್ರರು, ಎಫ್.ಎಫ್.ಪಿ.ಓ/ಸಿಗಳು, ನ್ಯೂಕ್ಲಿಯಸ್ ತಳಿ ಸಂವರ್ಧನೆ ಕೇಂದ್ರಗಳು, ಮೀನುಗಾರಿಕೆ ಮತ್ತು ಜಲಚರ ನವೋದ್ಯಮಗಳು, ಕಾವುಪೆಟ್ಟಿಗೆ, ಸಮಗ್ರ ಜಲಚರ ಪಾರ್ಕ್ ಗಳು, ಸಮಗ್ರ ಕರಾವಳಿ ಮೀನುಗಾರಿಕಾ ಗ್ರಾಮಗಳ ಅಭಿವೃದ್ಧಿ, ಜಲಚರ ಪ್ರಯೋಗಾಲಯ ಜಾಲ ಮತ್ತು ವಿಸ್ತರಣಾ ಸೇವೆಗಳು, ಪತ್ತೆಹಚ್ಚುವಿಕೆ, ಪ್ರಮಾಣೀಕರಣ ಮತ್ತು ಮಾನ್ಯತೆ, ಆರ್.ಎ.ಎಸ್, ಬಯೋಫ್ಲಾಕ್  ಮತ್ತು ಪಂಜರ ಸಂಸ್ಕೃತಿ, ಇ-ವಾಣಿಜ್ಯ / ಮಾರುಕಟ್ಟೆ, ಮೀನುಗಾರಿಕಾ ನಿರ್ವಹಣಾ ಯೋಜನೆಗಳು, ಇತ್ಯಾದಿಗಳಿಗೆ ಅವಕಾಶ ನೀಡುತ್ತದೆ..

ಪಿಎಂಎಂಎಸ್.ವೈ ಪ್ರಾಥಮಿಕವಾಗಿ ಕ್ಲಸ್ಟರ್ ಅಥವಾ ಪ್ರದೇಶ ಆಧಾರಿತ ವಿಧಾನಗಳನ್ನು ಮತ್ತು ಮೀನುಗಾರಿಕಾ ಕ್ಲಸ್ಟರ್ ಗಳನ್ನು ಹಿಂದುಳಿದ ಮತ್ತು ಮುಂದುವರಿದ ಸಂಪರ್ಕದೊಂದಿಗೆ ಅಳವಡಿಸಿಕೊಳ್ಳುವುದಕ್ಕೆ ಗಮನ ನೀಡುತ್ತದೆ. ಅಲಂಕಾರಿಕ ಮೀನು ಕೃಷಿ ಮತ್ತು ಸಮುದ್ರ ಕಳೆಯಲ್ಲಿ ಉದ್ಯೋಗಾವಕಾಶ ಸೃಷ್ಟಿಗೂ  ವಿಶೇಷ ಗಮನ ಹರಿಸುತ್ತದೆ. ಗುಣಮಟ್ಟದ, ಬೀಜ ಮತ್ತು ಮೇವು, ಜಾತಿಗಳ ವೈವಿಧ್ಯೀಕರಣದ ಬಗ್ಗೆ ವಿಶೇಷ ಗಮನಹರಿಸಿ, ನಿರ್ಣಾಯಕ ಮೂಲಸೌಕರ್ಯ, ಮಾರುಕಟ್ಟೆ ಜಾಲ ಇತ್ಯಾದಿಗಳಿಗೆ ಇದು ಒತ್ತು ನೀಡುತ್ತದೆ.

ಈವರೆಗೆ ಪಿಎಂಎಂಎಸ್.ವೈ ಅಡಿಯಲ್ಲಿ ಮೀನುಗಾರಿಕೆ ಇಲಾಖೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೊದಲ ಹಂತದಲ್ಲಿ 123 ಕೋಟಿ ಮೌಲ್ಯದ ಪ್ರಸ್ತಾಪಗಳಿಗೆ  ಅನುಮೋದನೆ ನೀಡಿದೆ. ಪಿಎಂಎಂಎಸ್.ವೈ ಅಡಿಯಲ್ಲಿ ಆದಾಯ ಸೃಷ್ಟಿಸುವ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ.

ಬಿಹಾರದಲ್ಲಿ ಪಿಎಂಎಂಎಸ್.ವೈ ಕೇಂದ್ರದ ಪಾಲಾದ 535 ಕೋಟಿ ರೂ.ಗಳೊಂದಿಗೆ 1390 ಕೋಟಿ ರೂ. ಹೂಡಿಕೆಗೆ ಅವಕಾಶ ನೀಡಿದ್ದು, 3 ಲಕ್ಷ ಟನ್ ಹೆಚ್ಚುವರಿ ಮೀನು ಉತ್ಪಾದನೆ ಗುರಿ ಹೊಂದಲಾಗಿದೆ. ಪ್ರಸಕ್ತ ಹಣಕಾಸು ವರ್ಷ (2020-21)ರಲ್ಲಿ ಭಾರತ ಸರ್ಕಾರ ಬಿಹಾರ ಸರ್ಕಾರದ ಪ್ರಸ್ತಾಪಕ್ಕೆ ಮಂಜೂರಾತಿ ನೀಡಿದ್ದು, ಜಲಚರ ಸಾಕಣೆಗಾಗಿ ಕೊಳಗಳು, ಫಿನ್‌ ಫಿಶ್ ಮೊಟ್ಟೆ ಕೇಂದ್ರಗಳು, ಜಲಚರ ಸಾಕಣೆಗಾಗಿ ಹೊಸ ಕೊಳಗಳ ನಿರ್ಮಾಣ, ಅಲಂಕಾರಿಕ ಮೀನು ಸಾಕಣೆ ಘಟಕಗಳು, ಜಲಾಶಯಗಳು / ತೇವ ಪ್ರದೇಶಗಳಲ್ಲಿ ಕೇಜ್ ಗಳ ಸ್ಥಾಪನೆ, ಐಸ್ ಘಟಕಗಳು, ಶೈತ್ಯೀಕರಣ ವಾಹನಗಳು, ಐಸ್ ಬಾಕ್ಸ್ ನೊಂದಿಗೆ ಮೋಟಾರು ಸೈಕಲ್, ಐಸ್ ಬಾಕ್ಸ್‌ ನೊಂದಿಗೆ ತ್ರಿಚಕ್ರವಾಹನ, ಐಸ್ ಬಾಕ್ಸ್‌ ನೊಂದಿಗೆ ಸೈಕಲ್, ಮೀನು ಆಹಾರ ಪ್ಲಾಂಟ್ ಗಳು, ವಿಸ್ತರಣೆ ಮತ್ತು ಬೆಂಬಲ ಸೇವೆಗಳು (ಮತ್ಸ್ಯ ಸೇವಾ ಕೇಂದ್ರ), ಮರಿಗಳ ಬ್ಯಾಂಕ್ ಸ್ಥಾಪನೆ, ಇತ್ಯಾದಿಗಳಿಗಾಗಿ .ಪ್ರಮುಖ ಅಂಶಗಳಿಗೆ  ಒಟ್ಟಾರೆ ಯೋಜನಾ ವೆಚ್ಚ 107.00 ಕೋಟಿ ರೂ. ಮಂಜೂರು ಮಾಡಿದೆ.  

ಮೀನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಇತರ ಉದ್ಘಾಟನೆಗಳು

ಪ್ರಧಾನಮಂತ್ರಿಯವರು ಪಿಎಂಎಂಎಸ್.ವೈ ಅಡಿಯಲ್ಲಿ ನೆರವು ಒದಗಿಸಲಿರುವ ಸೀತಾಮರಿಯಲ್ಲಿ ಮೀನು ಮರಿ ಬ್ಯಾಂಕ್ ಮತ್ತು ಕಿಶನ್ ಗಂಜ್ ನಲ್ಲಿ ಜಲಚರ ರೋಗ ರೆಫರಲ್ ಪ್ರಯೋಗಾಲಯಗಳ ಘೋಷಣೆ ಮಾಡಲಿದ್ದಾರೆ. ಈ ಸೌಲಭ್ಯಗಳು ಮೀನು ಕೃಷಿಕರಿಗೆ ಸಕಾಲದಲ್ಲಿ ಕೈಗೆಟಕುವ ದರದಲ್ಲಿ ಗುಣಮಟ್ಟದ ಮೀನು ಮೊಟ್ಟೆ,  ಲಭ್ಯತೆಯ ಖಾತ್ರಿಯೊಂದಿಗೆ  ಮೀನು ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಲು ನೆರವಾಗುತ್ತದೆ ಮತ್ತು ಜಲ ಹಾಗೂ ಮಣ್ಣು ಪರೀಕ್ಷೆ ಸೌಲಭ್ಯದೊಂದಿಗೆ ರೋಗ ಪತ್ತೆ ಅಗತ್ಯ ನಿವಾರಿಸುತ್ತದೆ.

 ಅವರು ನೀಲಿ ಕ್ರಾಂತಿಯ ಅಡಿಯಲ್ಲಿ ಪಾಟ್ನಾದಲ್ಲಿ ನೆರವಾಗಲು ಮಾಧೇಪುರದಲ್ಲಿ ಒಂದು ಘಟಕ ಮೀನು ಆಹಾರ ಗಿರಣಿ ಮತ್ತು ಎರಡು  ‘ಗಾಲಿಯ ಮೇಲೆ ಮತ್ಸ್ಯ’ ಘಟಕ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಪ್ರಧಾನಮಂತ್ರಿಯವರು ಸಮಗ್ರ ಮೀನು ಉತ್ಪಾದನೆ ತಂತ್ರಜ್ಞಾನ ಕೇಂದ್ರವನ್ನು ಬಿಹಾರದ ಪೂಸಾದ ಡಾ. ರಾಜೇಂದ್ರ ಪ್ರಸಾದ್ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದಲ್ಲಿ ಉದ್ಘಾಟಿಸಲಿದ್ದಾರೆ. ಮೊಟ್ಟೆ ಉತ್ಪಾದನಾ ತಂತ್ರಜ್ಞಾನ ಮತ್ತು ಮೀನುಗಳಿಗೆ ಪ್ರಾತ್ಯಕ್ಷಿಕೆ ಘಟಕ ತಂತ್ರಜ್ಞಾನ, ರೆಫರಲ್ ಪ್ರಯೋಗಾಲಯ ಮತ್ತು ರೋಗಪತ್ತೆ ಪರೀಕ್ಷೆ ಸೌಲಭ್ಯಗಳನ್ನು ಹೊಂದಿರುವ ಕೇಂದ್ರವು ಮೀನು ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಮೀನುಕೃಷಿಕರ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇ-ಗೋಪಾಲ ಆಪ್ 

ಇ –ಗೋಪಾಲ ಆಪ್ ಸಮಗ್ರ ತಳಿ ಸುಧಾರಣಾ ಮಾರುಕಟ್ಟೆ ತಾಣ ಮತ್ತು ಮಾಹಿತಿ ಪೋರ್ಟಲ್ ಆಗಿದ್ದು, ರೈತರ ನೇರ ಬಳಕೆಗೆ ಲಭ್ಯವಾಗಲಿದೆ. ಜಾನುವಾರುಗಳನ್ನು ನಿರ್ವಹಿಸುವ ರೈತರಿಗೆ, ಎಲ್ಲಾ ರೀತಿಯ (ರೇತಸ್ಸು, ಭ್ರೂಣಗಳು, ಇತ್ಯಾದಿ) ರೋಗ ಮುಕ್ತ ಜರ್ಮ್‌ ಪ್ಲಾಸಂ ಖರೀದಿಸುವುದು ಮತ್ತು ಮಾರಾಟ ಮಾಡುವುದು ಸೇರಿದಂತೆ; ಗುಣಮಟ್ಟದ ಸಂತಾನೋತ್ಪತ್ತಿ ಸೇವೆಗಳ ಲಭ್ಯತೆ (ಕೃತಕ ಗರ್ಭಧಾರಣೆ, ಪಶುವೈದ್ಯಕೀಯ ಪ್ರಥಮ ಚಿಕಿತ್ಸೆ, ಲಸಿಕೆ, ಚಿಕಿತ್ಸೆ ಇತ್ಯಾದಿ) ಮತ್ತು ಪ್ರಾಣಿಗಳ ಪೋಷಣೆಗೆ ರೈತರಿಗೆ ಮಾರ್ಗದರ್ಶನ, ಸೂಕ್ತವಾದ ಆಯುರ್ವೇದ ಔಷಧಿ / ಎಥ್ನೋ ಪಶುವೈದ್ಯಕೀಯ ಔಷಧಿ ಬಳಸಿ ಪ್ರಾಣಿಗಳ ಚಿಕಿತ್ಸೆಗಾಗಿ ಪ್ರಸ್ತುತ ದೇಶದಲ್ಲಿ ಯಾವುದೇ ಡಿಜಿಟಲ್ ವೇದಿಕೆ ಲಭ್ಯವಿರುವುದಿಲ್ಲ. ಮುನ್ನೆಚ್ಚರಿಕೆಗಳನ್ನು ಕಳುಹಿಸಲು (ಲಸಿಕೆ, ಗರ್ಭಧಾರಣೆಯ ರೋಗನಿರ್ಣಯ, ಕರು ಹಾಕುವಿಕೆ ಇತ್ಯಾದಿಗಳಿಗೆ ನಿಗದಿತ ದಿನಾಂಕ) ಮತ್ತು ಈ ಪ್ರದೇಶದ ವಿವಿಧ ಸರ್ಕಾರಿ ಯೋಜನೆಗಳು ಮತ್ತು ಅಭಿಯಾನಗಳ ಬಗ್ಗೆ ರೈತರಿಗೆ ತಿಳಿಸಲು ಯಾವುದೇ ಕಾರ್ಯವಿಧಾನವಿರುವುಲ್ಲ. ಇ-ಗೋಪಾಲ ಆ್ಯಪ್ ಈ ಎಲ್ಲ ಅಂಶಗಳ ಬಗ್ಗೆ ರೈತರಿಗೆ ಪರಿಹಾರಗಳನ್ನು ಒದಗಿಸುತ್ತದೆ.

ಪಶು ಸಂಗೋಪನೆ ವಲಯಕ್ಕೆ ಸಂಬಂಧಿಸಿದಂತೆ ಇತರ  ಉದ್ಘಾಟನೆಗಳು

ಪ್ರಧಾನಮಂತ್ರಿಯವರು ಸುಸಜ್ಜಿತವಾದ ಸೌಲಭ್ಯದೊಂದಿಗೆ ರೇತಸ್ಸು ಕೇಂದ್ರವನ್ನು ಉದ್ಘಾಟಿಸಲಿದ್ದು, ಇದನ್ನು ಬಿಹಾರದ ಪುರುನಿಯಾದಲ್ಲಿ ರಾಷ್ಟ್ರೀಯ ಗೋಕುಲ ಅಭಿಯಾನದ ಅಡಿಯಲ್ಲಿ 84.27 ಕೋಟಿ ರೂ. ಹೂಡಿಕೆಯೊಂದಿಗೆ ಸ್ಥಾಪಿಸಲಾಗುತ್ತಿದ್ದು, ಬಿಹಾರ ರಾಜ್ಯ ಸರ್ಕಾರ 75 ಎಕರೆ ಪ್ರದೇಶ ಲಭ್ಯವಾಗುವಂತೆ ಮಾಡಿದೆ. ಇದು ಸರ್ಕಾರಿ ವಲಯದಲ್ಲಿ ಅತಿ ದೊಡ್ಡ ವೀರ್ಯ ಕೇಂದ್ರವಾಗಿದ್ದು, ವಾರ್ಷಿಕ 50 ಲಕ್ಷ ಡೋಸ್ ರೇತಸ್ಸು ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಈ ವೀರ್ಯ ಕೇಂದ್ರ ಬಿಹಾರದ ದೇಶೀಯ ತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಹೊಸ ಆಯಾಮ ನೀಡಲಿದೆ ಮತ್ತು ಈಶಾನ್ಯ ಮತ್ತು ಪೂರ್ವ ಭಾಗದ ರಾಜ್ಯಗಳ ವೀರ್ಯ ಡೋಸ್ ನ ಬೇಡಿಕೆ ಈಡೇರಿಸಲಿದೆ.
ಪ್ರಧಾನಮಂತ್ರಿಯವರು ರಾಷ್ಟ್ರೀಯ ಗೋಕುಲ ಅಭಿಯಾನದ ಅಡಿಯಲ್ಲಿ ಪಾಟ್ನಾದಲ್ಲಿ ಪಶು ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಐವಿಎಫ್ ಪ್ರಯೋಗಾಲಯವನ್ನೂ ಉದ್ಘಾಟಿಸಲಿದ್ದಾರೆ. ಒಟ್ಟು 30 ಇಟಿಟಿ ಮತ್ತು ಐವಿಎಫ್ ಪ್ರಯೋಗಾಲಯಗಳನ್ನು ದೇಶದಾದ್ಯಂತ ಶೇ.100 ಧನ ಸಹಾಯದೊಂದಿಗೆ  ಸ್ಥಾಪಿಸಲಾಗುವುದು. ಈ ಪ್ರಯೋಗಾಲಯಗಳು ಸ್ಥಳೀಯ ತಳಿಗಳ ಪ್ರಮುಖ ಪಶುಗಳ ಹೆಚ್ಚಳ ಮಾಡಲು ಮತ್ತು ಆ ಮೂಲಕ ಹಾಲು ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹಲವು ಪಟ್ಟು ಹೆಚ್ಚಿಸಲು ನಿರ್ಣಾಯಕವಾಗಿದೆ.
ಪ್ರಧಾನಮಂತ್ರಿಯವರು ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಬಿಹಾರದ ಬೆಗುಸರೈ ಜಿಲ್ಲೆಯ ಬರೋನಿ ಹಾಲು ಒಕ್ಕೂಟದಲ್ಲಿ ಕೃತಕ ಗರ್ಭಧಾರಣೆಯಲ್ಲಿ ಲಿಂಗ ವಿಭಾಗಿತ ವೀರ್ಯದ ಬಳಕೆಯ ವ್ಯವಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಕೃತಕ ಗರ್ಭಧಾರಣೆಯಲ್ಲಿ ಲಿಂಗ ವಿಭಾಗಿತ ವೀರ್ಯದ ಬಳಕೆಯಿಂದ ಕೇವಲ ಹೆಣ್ಣುಗರುಗಳು ಮಾತ್ರ (ಶೇ.90ರಷ್ಟು ನಿಖರತೆಯೊಂದಿಗೆ) ಜನಿಸುವಂತೆ ಮಾಡಲಾಗುತ್ತದೆ.  ಇದು ದೇಶದಲ್ಲಿ ಕ್ಷೀರ ಉತ್ಪಾದನೆ ದರ ದುಪ್ಪಟ್ಟಾಗಲು ನೆರವಾಗುತ್ತದೆ. ಪ್ರಧಾನಮಂತ್ರಿಯವರು ರೈತರ ಮನೆ ಬಾಗಿಲಲ್ಲಿ ಐವಿಎಫ್ ತಂತ್ರಜ್ಞಾನದ ಪ್ರಾತ್ಯಕ್ಷಿಕೆಗೂ ಚಾಲನೆ ನೀಡಲಿದ್ದಾರೆ. ಹೆಚ್ಚಿನ ಇಳುವರಿ ನೀಡುವ ಪಶುಗಳನ್ನು ತ್ವರಿತ ದರದಲ್ಲಿ ದುಪ್ಪಟ್ಟುಗೊಳಿಸುವ ತಂತ್ರಜ್ಞಾನವನ್ನು ಇದು ಪ್ರಚಾರ ಮಾಡುತ್ತದೆ, ತಂತ್ರಜ್ಞಾನದ ಬಳಕೆಯ ಮೂಲಕ ವರ್ಷದಲ್ಲಿ 20 ಕರುಗಳಿಗೆ ಜನ್ಮ ನೀಡಲು ಸಾಧ್ಯವಿದೆ.

 

***