ಸಮರ್ಥವಾಗಿ ಭಾರತದ ಜನರೊಂದಿಗೆ ಸಂಪರ್ಕ ಹೊಂದಲು ತಮ್ಮ ಸಂದರ್ಭಗಳು ಮತ್ತು ಸುತ್ತಲಿನ ವಾತಾವರಣಕ್ಕೆ ಸಂವೇದನಾಶೀಲರಾಗಿರುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಯುವ ಐ.ಎ.ಎಸ್. ಅಧಿಕಾರಿಗಳಿಗೆ ಸಲಹೆ ಮಾಡಿದ್ದಾರೆ.
ಸಹಾಯಕ ಕಾರ್ಯದರ್ಶಿಗಳ ಉದ್ಘಾಟನಾ ಅಧಿವೇಶನದಲ್ಲಿ 2014ರ ತಂಡದ ಐ.ಎ.ಎಸ್. ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ತಮ್ಮ ತರಬೇತಿ ಅವಧಿಯಲ್ಲಿ ಈವರೆಗೆ ಕಲಿತಿದ್ದಕ್ಕಿಂತಲೂ ವಿಸ್ತಾರವಾಗಿ ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳುವ ಮತ್ತು ಕಲಿಯುವ ದೊಡ್ಡ ಅವಕಾಶ ಅವರಿಗೆ ಇದೆ ಎಂದು ಹೇಳಿದರು.
ಮುಂದಿನ ಮೂರು ತಿಂಗಳುಗಳ ಅವಧಿಯನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಸ್ವಯಂ ಕೌಶಲದ ಮೌಲ್ಯವರ್ಧನೆ ಮಾಡಿಕೊಳ್ಳುವಂತೆ ಮತ್ತು ತಾವು ನಿಯುಕ್ತಿಗೊಂಡಿರುವ ಇಲಾಖೆಗಳಿಗೂ ಮೌಲ್ಯ ತಂದುಕೊಡಲು ಪ್ರಯತ್ನ ಮಾಡುವಂತೆ ಕರೆ ನೀಡಿದರು. ಆಡಳಿತದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಒತ್ತಿ ಹೇಳಿದ ಪ್ರಧಾನಿ ಅವರು, ಸರ್ಕಾರದ ಆಡಳಿತದಲ್ಲಿ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಲು ಶ್ರಮಿಸುವಂತೆ ಯುವ ಅಧಿಕಾರಿಗಳಿಗೆ ತಿಳಿಸಿದರು.
ತಮ್ಮ ಮೇಲಧಿಕಾರಿಗಳನ್ನು ಮೆಚ್ಚಿಸಲು ಪ್ರಯತ್ನಿಸದೆ ಸಹಾಯಕ ಕಾರ್ಯದರ್ಶಿಗಳಾಗಿ ಇರುವ ಮುಂದಿನ ಮೂರು ತಿಂಗಳುಗಳ ಅವಧಿಯಲ್ಲಿ ನಿರ್ಭೀತಿಯಿಂದ ಮತ್ತು ಮುಕ್ತವಾಗಿ ಹಿರಿಯ ಅಧಿಕಾರಿಗಳೊಂದಿಗೆ ಸಂವಾದ ನಡೆಸುವಂತೆ ತಿಳಿಸಿದರು. 2013ರ ಐ.ಎ.ಎಸ್. ತಂಡದಿಂದ ಈ ಹೊಸ ಬಗೆಯ ತರಬೇತಿಯನ್ನು ಆರಂಭಿಸಲಾಗುತ್ತಿದೆ ಮತ್ತು ಇದು ಐ.ಎ.ಎಸ್. ಅಧಿಕಾರಿಗಳಿಗೆ ತಮ್ಮ ವೃತ್ತಿ ಬದುಕು ಆರಂಭಿಸುವ ಮೊದಲಲ್ಲೇ ಕೇಂದ್ರದೊಂದಿಗೆ ಕೈಜೋಡಿಸಲು ನೆರವಾಗುತ್ತದೆ- ಇಂಥ ಅವಕಾಶ ಅವರ ಹಿರಿಯ ಅಧಿಕಾರಿಗಳಿಗೆ ಇರಲಿಲ್ಲ, ದೊರಕಿರಲಿಲ್ಲ ಎಂದರು.
ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಹಾಜರಿದ್ದರು.
***
NK/NT