Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಿದ್ದಗಂಗಾ ಮಠಕ್ಕೆ ಪ್ರಧಾನಮಂತ್ರಿ ಭೇಟಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕದ ತುಮಕೂರು ಬಳಿಯ ಶ್ರೀ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ, ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸ್ಮಾರಕ ವಸ್ತುಸಂಗ್ರಹಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ತುಮಕೂರು ಶ್ರೀ ಸಿದ್ದಗಂಗಾ ಮಠದಲ್ಲಿ ಮಾತನಾಡಿದ ಅವರು, ತಾವು ಈ ಪವಿತ್ರ ಭೂಮಿಯಿಂದ 2020ನ್ನು ಆರಂಭಿಸುತ್ತಿರುವುದು ತಮ್ಮ ಸುದೈವ ಎಂದು ಹೇಳಿದರು. ಶ್ರೀ ಸಿದ್ಧಗಂಗಾಮಠದ ಪರಮಪೂಜ್ಯ ಸ್ವಾಮೀಜಿಗಳ ಪವಿತ್ರ ಚೈತನ್ಯ ನಮ್ಮ ದೇಶದ ಜನರ ಬದುಕನ್ನು ಶ್ರೀಮಂತಗೊಳಿಸುತ್ತಿದೆ ಎಂದರು.

ನಾವು ಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಭೌತಿಕ ಅಗಲಿಕೆಯ ದುಃಖ ಅನುಭವಿಸುತ್ತೇವೆ. ಅವರ ನೋಟವೇ ಸ್ಫೂರ್ತಿದಾಯಕವಾಗಿತ್ತು, ಇದನ್ನು ನಾನು ಸ್ವತಃ ಅನುಭವಪಡೆದಿದ್ದೇನೆ ಎಂದರು. ಅವರ ಸ್ಫೂರ್ತಿದಾಯಕ ವ್ಯಕ್ತಿತ್ವದಿಂದಾಗಿ ಈ ಪವಿತ್ರ ಭೂಮಿ ದಶಕಗಳಿಂದ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದೆ ಎಂದರು.

ಶ್ರೀ ಶಿವಕುಮಾರ ಸ್ವಾಮೀಜಿ ಅವರ ಸ್ಮರಣಾರ್ಥ ನಿರ್ಮಾಣವಾಗುತ್ತಿರುವ ವಸ್ತುಸಂಗ್ರಹಾಲಯದ ಶಂಕುಸ್ಥಾಪನೆಯನ್ನು ಮಾಡುವ ಅವಕಾಶ ತಮಗೆ ದೊರಕಿದ್ದು ತಮ್ಮ ಸುದೈವ ಎಂದರು. ಈ ವಸ್ತುಸಂಗ್ರಹಾಲಯ ಕೇವಲ ಜನರಿಗೆ ಸ್ಫೂರ್ತಿಯನ್ನಷ್ಟೇ ನೀಡುವುದಿಲ್ಲ, ಜೊತೆಗೆ ದೇಶಕ್ಕೆ ಮತ್ತು ಸಮಾಜಕ್ಕೆ ದಿಕ್ಕು ತೋರಿಸುತ್ತದೆ ಎಂದರು.

ಭಾರತವು 21ನೇ ಶತಮಾನದ 3ನೇ ದಶಕಕ್ಕೆ ಹೊಸ ಚೈತನ್ಯ ಮತ್ತು ಶಕ್ತಿಯೊಂದಿಗೆ ಕಾಲಿಟ್ಟಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ,

ಕಳೆದ ದಶಕ ಹೇಗೆ ಆರಂಭವಾಯಿತು ಎಂಬುದನ್ನು ದೇಶ ಸ್ಮರಿಸಬೇಕು ಎಂದ ಅವರು, 21ನೇ ಶತಮಾನದ 3ನೇ ದಶಕ ಬಲವಾದ ನಿರೀಕ್ಷೆಗಳು ಮತ್ತು ಮಹತ್ವಾಕಾಂಕ್ಷೆಯ ಹೆಜ್ಜೆಯೊಂದಿಗೆ ಆರಂಭವಾಗಿದೆ ಎಂದರು.

ನವ ಭಾರತದ ಆಶಯ ಇದಾಗಿದೆ. ಈ ಆಶಯ ಯುವಜನರ ಕನಸಾಗಿದೆ. ಇದು ದೇಶದ ಸೋದರಿಯರ ಮತ್ತು ಹೆಣ್ಣು ಮಕ್ಕಳ ಆಶಯವೂ ಆಗಿದೆ. ಇದೇ ಆಶಯ ದೇಶದ ಬಡವರು, ವಂಚಿತರು, ದುರ್ಬಲರು, ಹಿಂದುಳಿದವರು, ಬುಡಕಟ್ಟು ಜನರದ್ದೂ ಆಗಿದೆ ಎಂದರು.

ಈ ಆಶಯವು ಭಾರತವನ್ನು ಪ್ರಗತಿದಾಯಕವಾಗಿ, ಸಮರ್ಥವಾಗಿ ಮತ್ತು ಎಲ್ಲವನ್ನೂ ಒಳಗೊಂಡ ವಿಶ್ವ ಶಕ್ತಿಯಾಗಿ ಕಾಣುವುದಾಗಿದೆ. ನಮ್ಮಲ್ಲಿ ಅಂತರ್ಗತವಾಗಿರುವ ಸಮಸ್ಯೆಗಳು ಪರಿಹಾರವಾಗಬೇಕು ಎಂಬುದು ಈಗ ಪ್ರತಿಯೊಬ್ಬ ಭಾರತೀಯನ ಮನದಲ್ಲಿದೆ. ಈ ಸಂದೇಶ ಸಮಾಜದಿಂದ ಹೊರಹೊಮ್ಮುತ್ತಿದ್ದು, ನಮ್ಮ ಸರ್ಕಾರಕ್ಕೂ ಸ್ಫೂರ್ತಿ ನೀಡುತ್ತಿದೆ ಎಂದರು.

ತಮ್ಮ ಪ್ರಾಣ ಉಳಿಸಿಕೊಳ್ಳಲು, ತಮ್ಮ ಹೆಣ್ಣುಮಕ್ಕಳ ಜೀವ ಉಳಿಸಲು ಪಾಕಿಸ್ತಾನದಿಂದ ಭಾರತಕ್ಕೆ ಜನರು ಓಡಿ ಬಂದಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು.

ಜನರು ಪಾಕಿಸ್ತಾನದ ವಿರುದ್ಧ ಏಕೆ ಮಾತನಾಡುವುದಿಲ್ಲ ಮತ್ತು ಇದರ ಬದಲಾಗಿ ಈ ಜನರ ವಿರುದ್ಧ ಮೆರವಣಿಗೆಗಳನ್ನು ನಡೆಸಲಾಗುತ್ತಿದೆ ಎಂಬ ಪ್ರಶ್ನೆ ಪ್ರತಿಯೊಬ್ಬ ದೇಶವಾಸಿಗಳಿಗೂ ಇದೆ ಎಂದು ಅವರು ಹೇಳಿದರು.

ಭಾರತದ ಸಂಸತ್ತಿನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ “ನೀವು ಪ್ರತಿಭಟನೆ ಮಾಡುವುದಿದ್ದರೆ, ಕಳೆದ 70 ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಆಗಿರುವ ಶೋಷಣೆಯ ವಿರುದ್ಧ ಧ್ವನಿ ಎತ್ತಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಈ ಕ್ರಮವನ್ನು ಬಹಿರಂಗಪಡಿಸಬೇಕಾದ ಕಾಲ ಇದಾಗಿದೆ. ನೀವು ಘೋಷಣೆ ಕೂಗುವುದಿದ್ದರೆ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಎಷ್ಟು ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂಬುದರ ಬಗ್ಗೆ ಇರಲಿ, ನೀವು ಮೆರವಣಿಗೆ ಮಾಡುವುದಿದ್ದರೆ, ಪಾಕಿಸ್ತಾನದಿಂದ ಶೋಷಿತರಾದ ಹಿಂದೂ-ದಲಿತ – ಸಂತ್ರಸ್ತರ ಬೆಂಬಲಿಸಿ ಮಾಡಿ’’ಎಂದರು.

ಸಂತರು, ಸ್ವಾಮೀಜಿಗಳಿಗೆ 3 ಸಂಕಲ್ಪ ಮಾಡುವಂತೆ ಪ್ರಧಾನಿ ಕೋರಿದರು.

ಮೊದಲನೆಯದಾಗಿ, ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯಗಳು ಮತ್ತು ಕಟ್ಟುಪಾಡುಗಳಿಗೆ ಪ್ರಾಮುಖ್ಯತೆ ನೀಡುವ ಭಾರತದ ಪ್ರಾಚೀನ ಸಂಸ್ಕೃತಿಯನ್ನು ಪುನಶ್ಚೈತನ್ಯಗೊಳಿಸಿ.

ಎರಡನೆಯದಾಗಿ, ಪ್ರಕೃತಿ ಮತ್ತು ಪರಿಸರವನ್ನು ಸಂರಕ್ಷಿಸಲು ಸಂಕಲ್ಪಿಸಿ

ಮತ್ತು ಮೂರನೆಯದಾಗಿ, ನೀರಿನ ಸಂರಕ್ಷಣೆ, ನೀರಿನ ಕೊಯ್ಲುಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಹಕರಿಸಿ.

ಭಾರತವು ಸದಾ ಸಂತರು, ಋಷಿ ಮುನಿಗಳು, ಗುರುಗಳನ್ನು ಸರಿ ದಾರಿಯಲ್ಲಿ ಕರೆದೊಯ್ಯುವ ದೀಪಸ್ತಂಭದಂತೆ ನೋಡಿದೆ ಎಂದು ಹೇಳಿದರು.