Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಾಹಿಬ್ಜಾದಾ ಅಜಿತ್ ಸಿಂಗ್ ನಗರ (ಮೊಹಾಲಿ)ದಲ್ಲಿ ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ

ಸಾಹಿಬ್ಜಾದಾ ಅಜಿತ್ ಸಿಂಗ್ ನಗರ (ಮೊಹಾಲಿ)ದಲ್ಲಿ ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಮೊಹಾಲಿಯ ಸಾಹಿಬ್ಜಾದಾ ಅಜಿತ್ ಸಿಂಗ್ ನಗರದಲ್ಲಿರುವ ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಪಂಜಾಬ್ ರಾಜ್ಯಪಾಲ ಶ್ರೀ ಬನ್ವಾರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಶ್ರೀ ಭಗವಂತ್ ಮಾನ್, ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದಿನ ಕಾರ್ಯಕ್ರಮವು ದೇಶದ ಸುಧಾರಿತ ಆರೋಗ್ಯ ಸೌಲಭ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಈ ಆಸ್ಪತ್ರೆಯು ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಜನರಿಗೆ ಸೇವೆ ಒದಗಿಸಲಿದೆ ಎಂದೂ ಅವರು ಹೇಳಿದರು. ಹರ್ ಘರ್ ತಿರಂಗಾ ಅಭಿಯಾನದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಕ್ಕಾಗಿ ಅವರು ಪಂಜಾಬಿನ ಜನತೆಗೆ ಧನ್ಯವಾದ ಸಲ್ಲಿಸಿದರು.

 

ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಬಗ್ಗೆ ತಾವು ಕೆಂಪುಕೋಟೆಯ ಮೇಲಿನಿಂದ ಮಾಡಿದ ಘೋಷಣೆಯನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು “ಭಾರತವನ್ನು ಅಭಿವೃದ್ಧಿ ಪಡಿಸಬೇಕಾದರೆ, ಅದರ ಆರೋಗ್ಯ ಸೇವೆಗಳನ್ನು ಅಭಿವೃದ್ಧಿಪಡಿಸುವುದೂ ಅಷ್ಟೇ ಮುಖ್ಯ” ಎಂದು ಹೇಳಿದರು. ಭಾರತದ ಜನರಿಗೆ ಚಿಕಿತ್ಸೆಗಾಗಿ ಆಧುನಿಕ ಸೌಲಭ್ಯಗಳಿರುವ ಆಧುನಿಕ ಆಸ್ಪತ್ರೆಗಳು ಲಭ್ಯವಾದಾಗ ಅವರು ಬೇಗನೆ ಗುಣಮುಖರಾಗುತ್ತಾರೆ ಮತ್ತು ಅವರ ಶಕ್ತಿ ಕೂಡ ಸರಿಯಾದ ದಿಕ್ಕಿನಲ್ಲಿ ವ್ಯಯವಾಗುತ್ತದೆ ಎಂದು ಪ್ರಧಾನಿ ಹೇಳಿದರು. ಕ್ಯಾನ್ಸರ್ ಚಿಕಿತ್ಸೆಗೆ ಸೌಲಭ್ಯಗಳನ್ನು ಸೃಷ್ಟಿಸುವ ಸರ್ಕಾರದ ಬದ್ಧತೆಯನ್ನು ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು. ಟಾಟಾ ಮೆಮೋರಿಯಲ್ ಸೆಂಟರ್ ಈಗ ಪ್ರತಿ ವರ್ಷ 1.5 ಲಕ್ಷ ಹೊಸ ರೋಗಿಗಳ ಚಿಕಿತ್ಸೆಗಾಗಿ ಸಜ್ಜುಗೊಂಡಿರುವ ಬಗ್ಗೆ ಅವರು ಗಮನ ಸೆಳೆದರು. ಹೊಸ ಆಸ್ಪತ್ರೆ ಮತ್ತು ಬಿಲಾಸ್ಪುರದ ಎ.ಐ.ಐ.ಎಂ.ಎಸ್. ನಿಂದ ಪಿಜಿಐ ಚಂಡೀಗಢದ ಮೇಲಿನ ಹೊರೆ ಕಡಿಮೆಯಾಗಲಿದೆ ಮತ್ತು ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದೂ ಅವರು ಹೇಳಿದರು.

 

ಉತ್ತಮ ಆರೋಗ್ಯ ರಕ್ಷಣಾ ವ್ಯವಸ್ಥೆ ಎಂದರೆ ಕೇವಲ ನಾಲ್ಕು ಗೋಡೆಗಳನ್ನು ನಿರ್ಮಿಸುವುದು ಎಂದರ್ಥವಲ್ಲ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಯಾವುದೇ ದೇಶದ ಆರೋಗ್ಯ ವ್ಯವಸ್ಥೆಯು ಎಲ್ಲ ರೀತಿಯಲ್ಲೂ ಪರಿಹಾರಗಳನ್ನು ಒದಗಿಸುವಂತಾದಾಗ ಮತ್ತು ಪ್ರತೀ ಹಂತದಲ್ಲಿಯೂ ಅದನ್ನು ಬೆಂಬಲಿಸಿದಾಗ ಮಾತ್ರ ಅದು ಬಲಗೊಳ್ಳುತ್ತದೆ ಎಂಬುದನ್ನು ಅವರು ಒತ್ತಿ ಹೇಳಿದರು. ಸಮಗ್ರ ಆರೋಗ್ಯ ರಕ್ಷಣೆಯು ಕಳೆದ ಎಂಟು ವರ್ಷಗಳಲ್ಲಿ ದೇಶದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದೂ ಪ್ರಧಾನಿ ಹೇಳಿದರು.

 

ಇಂದು, ಆರು ಕೋನಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಮೂಲಕ ದೇಶದ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಎಲ್ಲಾ ಆರು ಕೋನಗಳ ಬಗ್ಗೆ ವಿವರಿಸಿದ ಪ್ರಧಾನಮಂತ್ರಿಯವರು, ರೋಗವನ್ನು ತಡೆಗಟ್ಟಿ ಆರೋಗ್ಯ ರಕ್ಷಣೆಯನ್ನು ಉತ್ತೇಜಿಸುವುದು ಮೊದಲ ಕೋನವಾದರೆ, ಹಳ್ಳಿಗಳಲ್ಲಿ ಸಣ್ಣ ಮತ್ತು ಆಧುನಿಕ ಆಸ್ಪತ್ರೆಗಳನ್ನು ತೆರೆಯುವುದು ಎರಡನೆಯ ಕೋನ, ಮತ್ತು ನಗರಗಳಲ್ಲಿ ವೈದ್ಯಕೀಯ ಕಾಲೇಜುಗಳು ಮತ್ತು ದೊಡ್ಡ ವೈದ್ಯಕೀಯ ಸಂಶೋಧನಾ ಸಂಸ್ಥೆಗಳನ್ನು ತೆರೆಯುವುದು ಮೂರನೆಯ ಕೋನ ಎಂದರು. ದೇಶಾದ್ಯಂತ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸುವುದು, ರೋಗಿಗಳಿಗೆ ಅಗ್ಗದ ಔಷಧಗಳು, ಅಗ್ಗದ ಸಲಕರಣೆಗಳು ಲಭ್ಯವಾಗುವಂತೆ ಮಾಡುವುದು ನಾಲ್ಕು ಹಾಗು ಐದನೇ ಕೋನ ಎಂದರು, ಮತ್ತು ತಂತ್ರಜ್ಞಾನವನ್ನು ಬಳಸುವ ಮೂಲಕ ರೋಗಿಗಳು ಎದುರಿಸುತ್ತಿರುವ ತೊಂದರೆಗಳನ್ನು ಕಡಿಮೆ ಮಾಡುವುದು ಆರನೆಯ ಕೋನ ಎಂದವರು ವಿವರಿಸಿದರು.

 

ರೋಗ ತಡೆಗಟ್ಟುವ ವಿಧಾನದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಜಲ ಜೀವನ್ ಮಿಷನ್ ನಿಂದಾಗಿ ನೀರಿನಿಂದ ಹರಡುವ ರೋಗಗಳಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದರು. ಅಂತೆಯೇ, ಸ್ವಚ್ಛತೆ, ಯೋಗ, ದೈಹಿಕ ಕ್ಷಮತೆಯ ಪ್ರವೃತ್ತಿಗಳು, ಪೋಷಣ್ ಅಭಿಯಾನ, ಅಡುಗೆ ಅನಿಲ ಇತ್ಯಾದಿಗಳು ರೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿವೆ. ಎರಡನೇ ಹಂತದಲ್ಲಿ, ಗುಣಮಟ್ಟದ ಪರೀಕ್ಷಾ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ ಮತ್ತು 1.5 ಲಕ್ಷಕ್ಕೂ ಹೆಚ್ಚು ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಅವುಗಳಲ್ಲಿ 1.25 ಲಕ್ಷ ಕೇಂದ್ರಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಪಂಜಾಬ್ ನಲ್ಲಿ ಸುಮಾರು 3000 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ದೇಶಾದ್ಯಂತ, 22 ಕೋಟಿಗೂ ಹೆಚ್ಚು ಜನರನ್ನು ಕ್ಯಾನ್ಸರ್ ತಪಾಸಣೆಗೆ ಒಳಪಡಿಸಲಾಗಿದ್ದು, ಈ ಪೈಕಿ 60 ಲಕ್ಷ ಸ್ಕ್ರೀನಿಂಗ್ ಗಳು ಪಂಜಾಬ್ ನಲ್ಲಿ ನಡೆದಿವೆ.

 

ಒಮ್ಮೆ ರೋಗ ಪತ್ತೆಯಾದ ನಂತರ, ಗಂಭೀರ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಿರುವಂತಹ ಸುಧಾರಿತ ಆಧುನಿಕ ಆಸ್ಪತ್ರೆಗಳ ಅಗತ್ಯವು ತಲೆದೋರುತ್ತದೆ ಎಂದು ಪ್ರಧಾನಿ ಹೇಳಿದರು. ದೇಶದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಸ್ಥಾಪಿಸುವ ಗುರಿ ಸಾಧನೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯು 64 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜಿಲ್ಲಾ ಮಟ್ಟದಲ್ಲಿ ಆಧುನಿಕ ಆರೋಗ್ಯ ಸೌಲಭ್ಯಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು. ಒಂದು ಕಾಲದಲ್ಲಿ, ದೇಶದಲ್ಲಿ ಕೇವಲ 7 ಏಮ್ಸ್ ಗಳು ಮಾತ್ರ ಇದ್ದವು ಆದರೆ ಈಗ ಆ ಸಂಖ್ಯೆ 21 ಕ್ಕೆ ಏರಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ದೇಶಾದ್ಯಂತ ಸುಮಾರು 40 ವಿಶೇಷ ಕ್ಯಾನ್ಸರ್ ಸಂಸ್ಥೆಗಳಿಗೆ ಸರ್ಕಾರ ಅನುಮೋದನೆ ನೀಡಿದೆ, ಅವುಗಳಲ್ಲಿ ಅನೇಕ ಆಸ್ಪತ್ರೆಗಳು ಈಗಾಗಲೇ ಸೇವೆಗಳನ್ನು ಒದಗಿಸಲು ಪ್ರಾರಂಭಿಸಿವೆ.

 

ಆಸ್ಪತ್ರೆಯನ್ನು ನಿರ್ಮಿಸುವುದು ಮುಖ್ಯ ಮತ್ತು ಸಾಕಷ್ಟು ಸಂಖ್ಯೆಯ ಉತ್ತಮ ವೈದ್ಯರು ಮತ್ತು ಇತರ ಅರೆವೈದ್ಯಕೀಯ ಸಿಬ್ಬಂದಿಯನ್ನು ಹೊಂದಿರುವುದು ಅಷ್ಟೇ ಮುಖ್ಯ ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ಕೆಲಸವನ್ನು ದೇಶದಲ್ಲಿಂದು ಆಂದೋಲನದೋಪಾದಿಯಲ್ಲಿ ನಡೆಸಲಾಗುತ್ತಿದೆ ಎಂಬುದನ್ನೂ ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು. “2014 ಕ್ಕಿಂತ ಮೊದಲು, ದೇಶದಲ್ಲಿ 400 ಕ್ಕೂ ಕಡಿಮೆ ವೈದ್ಯಕೀಯ ಕಾಲೇಜುಗಳಿದ್ದವು. ಅಂದರೆ, 70 ವರ್ಷಗಳಲ್ಲಿ 400 ಕ್ಕಿಂತ ಕಡಿಮೆ ವೈದ್ಯಕೀಯ ಕಾಲೇಜುಗಳು. ಅದೇ ಸಮಯದಲ್ಲಿ, ಕಳೆದ 8 ವರ್ಷಗಳಲ್ಲಿ, ದೇಶದಲ್ಲಿ 200 ಕ್ಕೂ ಹೆಚ್ಚು ಹೊಸ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗಿದೆ” ಎಂದೂ ಪ್ರಧಾನಿ ಹೇಳಿದರು. ಸರ್ಕಾರವು 5 ಲಕ್ಷಕ್ಕೂ ಹೆಚ್ಚು ಆಯುಷ್ ವೈದ್ಯರನ್ನು ಅಲೋಪಥಿ ವೈದ್ಯರೆಂದು ಮಾನ್ಯತೆ ನೀಡಿದೆ ಮತ್ತು ಇದರಿಂದ ಭಾರತದಲ್ಲಿ ವೈದ್ಯರು ಮತ್ತು ರೋಗಿಗಳ ಅನುಪಾತವನ್ನು ಸುಧಾರಿಸಲು ಸಹಾಯವಾಗಿದೆ ಎಂಬುದರತ್ತ ಪ್ರಧಾನಿ ಗಮನ ಸೆಳೆದರು. ಆಯುಷ್ಮಾನ್ ಭಾರತ್ ಬಡವರಿಗೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಯನ್ನು ಒದಗಿಸಿದೆ ಮತ್ತು ಇದರ ಪರಿಣಾಮವಾಗಿ, ಇಲ್ಲಿಯವರೆಗೆ 3.5 ಕೋಟಿ ರೋಗಿಗಳು ಚಿಕಿತ್ಸೆಯನ್ನು ಪಡೆದಿದ್ದಾರೆ. ಈ 3.5 ಕೋಟಿ ರೋಗಿಗಳಲ್ಲಿ ಅನೇಕರು ಕ್ಯಾನ್ಸರ್ ರೋಗಿಗಳು ಎಂದು ಪ್ರಧಾನಿ ಹೇಳಿದರು. ಆಯುಷ್ಮಾನ್ ಭಾರತ್ ಯೋಜನೆಯು ರೋಗಿಗಳಿಗೆ ಸುಮಾರು 40 ಸಾವಿರ ಕೋಟಿ ರೂಪಾಯಿಗಳನ್ನು ಉಳಿತಾಯ ಮಾಡಿದೆ. ಕ್ಯಾನ್ಸರ್ ಚಿಕಿತ್ಸೆಗಾಗಿರುವ 500 ಕ್ಕೂ ಹೆಚ್ಚು ಔಷಧಗಳ ದರದಲ್ಲಿ ಶೇ.90 ರಷ್ಟು ಇಳಿಕೆಯಾಗಿದ್ದು, ಒಂದು ಸಾವಿರ ಕೋಟಿ ರೂಪಾಯಿಗಳವರೆಗೆ ಉಳಿತಾಯವಾಗಿದೆ ಎಂದು ಅವರು ಮಾಹಿತಿ ನೀಡಿದರು.

 

ಇದೇ ಮೊದಲ ಬಾರಿಗೆ ಆರೋಗ್ಯ ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವಾಗ ಪ್ರಧಾನಮಂತ್ರಿಯವರು ಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಮಿಷನ್ ಪ್ರತಿಯೊಬ್ಬ ರೋಗಿಗೆ ಕನಿಷ್ಠ ಪ್ರಯತ್ನದಲ್ಲಿ, ಸಕಾಲದಲ್ಲಿ ಗುಣಮಟ್ಟದ ಆರೋಗ್ಯ ಸೌಲಭ್ಯಗಳನ್ನು ಪಡೆಯುವುದನ್ನು ಖಾತ್ರಿಪಡಿಸುತ್ತಿದೆ ಎಂದು ಹೇಳಿದರು. ಮೇಡ್ ಇನ್ ಇಂಡಿಯಾ 5ಜಿ ಸೇವೆಗಳ ನಿರೀಕ್ಷಿತ ಆರಂಭವು ದೂರ ಪ್ರದೇಶದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂಬುದರತ್ತ ಪ್ರಧಾನಮಂತ್ರಿ ಅವರು ಬೆಟ್ಟು ಮಾಡಿದರು. “ಇದು ಗ್ರಾಮದ ಬಡ ಕುಟುಂಬಗಳ ರೋಗಿಗಳು ಮತ್ತೆ ಮತ್ತೆ ದೊಡ್ಡ ಆಸ್ಪತ್ರೆಗಳಿಗೆ ಭೇಟಿ ನೀಡುವ ಅನಿವಾರ್ಯತೆಯನ್ನು ಕಡಿಮೆ ಮಾಡುತ್ತದೆ” ಎಂದು ಅವರು ಹೇಳಿದರು. ಕ್ಯಾನ್ಸರ್ ನಿಂದ ಉಂಟಾಗುವ ಖಿನ್ನತೆಯ ವಿರುದ್ಧ ಹೋರಾಡಲು ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡುವ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. “ಪ್ರಗತಿಶೀಲ ಸಮಾಜವಾಗಿ, ಮಾನಸಿಕ ಆರೋಗ್ಯದ ಬಗ್ಗೆ ನಮ್ಮ ಚಿಂತನೆಯಲ್ಲಿ ಬದಲಾವಣೆ ಮತ್ತು ಮುಕ್ತತೆಯನ್ನು ತರುವುದು ನಮ್ಮ ಜವಾಬ್ದಾರಿಯಾಗಿದೆ. ಆಗ ಮಾತ್ರ ಈ ಸಮಸ್ಯೆಗೆ ಸರಿಯಾದ ಪರಿಹಾರವನ್ನು ಕಂಡುಹಿಡಿಯಬಹುದು” ಎಂದು ಅವರು ಹೇಳಿದರು.

 

ಹಿನ್ನೆಲೆ

 

ಪಂಜಾಬ್ ಮತ್ತು ನೆರೆಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿವಾಸಿಗಳಿಗೆ ವಿಶ್ವದರ್ಜೆಯ ಕ್ಯಾನ್ಸರ್ ಆರೈಕೆಯನ್ನು ಒದಗಿಸುವ ಪ್ರಯತ್ನದಲ್ಲಿ, ಪ್ರಧಾನಮಂತ್ರಿಯವರು ಮೊಹಾಲಿಯ ಹೊಸ ಚಂಡೀಗಢದ ಮುಲ್ಲನ್ ಪುರ್, ಸಾಹಿಬ್ಜಾದಾ ಅಜಿತ್ ಸಿಂಗ್ ನಗರ ಜಿಲ್ಲೆಯಲ್ಲಿ ‘ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಭಾರತ ಸರ್ಕಾರದ ಅಣುಶಕ್ತಿ ಇಲಾಖೆಯ ಅಡಿಯಲ್ಲಿ ಬರುವ ಅನುದಾನಿತ ಸಂಸ್ಥೆಯಾದ ಟಾಟಾ ಮೆಮೋರಿಯಲ್ ಸೆಂಟರ್ 660 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಿದೆ.

 

ಈ ಕ್ಯಾನ್ಸರ್ ಆಸ್ಪತ್ರೆಯು 300 ಹಾಸಿಗೆಗಳ ಸಾಮರ್ಥ್ಯದ ತೃತೀಯ ಹಂತದ ಚಿಕಿತ್ಸಾ-ಆರೈಕೆ ಆಸ್ಪತ್ರೆಯಾಗಿದೆ. ಶಸ್ತ್ರಚಿಕಿತ್ಸೆ, ರೇಡಿಯೋಥೆರಪಿ ಮತ್ತು ಮೆಡಿಕಲ್ ಆಂಕಾಲಜಿ – ಕೀಮೋಥೆರಪಿ, ಇಮ್ಯುನೋಥೆರಪಿ ಮತ್ತು ಅಸ್ಥಿಮಜ್ಜೆ ಕಸಿಯಂತಹ ಲಭ್ಯವಿರುವ ಪ್ರತಿಯೊಂದು ಚಿಕಿತ್ಸಾ ವಿಧಾನವನ್ನು ಬಳಸಿಕೊಂಡು ಎಲ್ಲಾ ರೀತಿಯ ಕ್ಯಾನ್ಸರ್ ಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವಂತಹ ಆಧುನಿಕ ಸೌಲಭ್ಯಗಳನ್ನು ಇದು ಹೊಂದಿದೆ.

 

ಈ ಆಸ್ಪತ್ರೆಯು ಈ ವಲಯದಲ್ಲಿ ಕ್ಯಾನ್ಸರ್ ಆರೈಕೆ ಮತ್ತು ಚಿಕಿತ್ಸೆಯ ‘ಕೇಂದ್ರ’ದಂತೆ ಕಾರ್ಯನಿರ್ವಹಿಸುತ್ತದೆ, ಸಂಗ್ರೂರಿನ 100 ಹಾಸಿಗೆಗಳ ಆಸ್ಪತ್ರೆ ಅದರ ‘ಸ್ಪೋಕ್’ (ಅಂಗ) ಆಗಿ ಕಾರ್ಯಾಚರಿಸುತ್ತದೆ.

 

 

****