ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಗಣರಾಜ್ಯ ಮತ್ತು ಗಿನಿಯಾ ಗಣರಾಜ್ಯ ಸರ್ಕಾರಗಳ ನಡುವೆ ಸಾಂಪ್ರದಾಯಿಕ ವೈದ್ಯ ಪದ್ಧತಿ ಮತ್ತು ಹೊಮಿಯೋಪತಿ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು ಗಿನಿಯಾಗೆ 3 ದಿನಗಳ ಭೇಟಿ ನೀಡಿದ್ದ ವೇಳೆ 2019ರ ಆಗಸ್ಟ್ 2ರಂದು ಅಂಕಿತ ಹಾಕಲಾಗಿತ್ತು.
ಪ್ರಮುಖ ಪರಿಣಾಮ:
ಈ ತಿಳಿವಳಿಕೆ ಒಪ್ಪಂದವು ಎರಡೂ ದೇಶಗಳ ನಡುವೆ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲಿದೆ. ಇದು ಎರಡೂ ದೇಶಗಳ ನಡುವಿನ ಹಂಚಿಕೆಯ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನೂ ಹೆಚ್ಚಿಸುತ್ತದೆ.
ಅನುಷ್ಠಾನದ ಕಾರ್ಯತಂತ್ರ ಮತ್ತು ಗುರಿಗಳು:
ಅಂಕಿತ ಹಾಕಲಾದ ತಿಳಿವಳಿಕೆ ಒಪ್ಪಂದದ ಪ್ರತಿಗಳು ಸ್ವೀಕೃತಿಯಾದ ಬಳಿಕ ಎರಡೂ ಕಡೆಗಳ ನಡುವೆ ಚಟುವಟಿಕೆ ಆರಂಭವಾಗಲಿದೆ. ಎರಡೂ ರಾಷ್ಟ್ರಗಳ ನಡುವೆ ತೆಗೆದುಕೊಳ್ಳಲಾದ ಉಪಕ್ರಮಗಳು ತಿಳಿವಳಿಕೆ ಒಪ್ಪಂದದಲ್ಲಿ ಉಲ್ಲೇಖಿತ ಷರತ್ತುಗಳಿಗೆ ಅನ್ವಯವಾಗಿರುತ್ತದೆ ಮತ್ತು ತಿಳಿವಳಿಕೆ ಒಪ್ಪಂದ ಕಾರ್ಯಾಚರಣೆಯಲ್ಲಿರುವವರೆಗೆ ನಿರಂತರವಾದ ಪ್ರಕ್ರಿಯೆ ಆಗಿರುತ್ತದೆ.
ಇದರಲ್ಲಿ ಒಳಗೊಂಡಿರುವ ವೆಚ್ಚ:
ಇದರಿಂದ ಯಾವುದೇ ಹೆಚ್ಚುವರಿ ಹಣಕಾಸು ಪರಿಣಾಮ ಒಳಗೊಂಡಿರುವುದಿಲ್ಲ. ಸಂಶೋಧನೆ, ತರಬೇತಿ ಕೋರ್ಸ್ ಗಳು, ವಿಚಾರಗೋಷ್ಠಿ/ಸಭೆಗಳನ್ನು ನಡೆಸಲು ಮತ್ತು ತಜ್ಞರ ನಿಯೋಜನೆ ಮಾಡಲು ಅಗತ್ಯವಾದ ಹಣಕಾಸು ಸಂಪನ್ಮೂಲವನ್ನು ಹಾಲಿ ಹಂಚಿಕೆ ಮಾಡಲಾಗಿರುವ ಆಯವ್ಯಯದಿಂದ ಮತ್ತು ಆಯುಷ್ ಸಚಿವಾಲಯದ ಯೋಜನೆಯಿಂದಲೇ ಭರಿಸಲಾಗುತ್ತದೆ.
ಹಿನ್ನೆಲೆ
ಭಾರತವು ಔಷಧೀಯ ಸಸ್ಯಗಳೂ ಸೇರಿದಂತೆ ಸಂಪೂರ್ಣ ಅಭಿವೃದ್ಧಿಹೊಂದಿದ ಸಾಂಪ್ರದಾಯಿಕ ವೈದ್ಯ ಪದ್ಧತಿಯಿಂದ ಹರಸಲ್ಪಟ್ಟಿದ್ದು, ಇದು ಜಾಗತಿಕ ಆರೋಗ್ಯ ಸನ್ನಿವೇಶದಲ್ಲಿ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ.
ಭಾರತ ಗಣರಾಜ್ಯದ ಆಯುಷ್ ಸಚಿವಾಲಯವು ಆಯುಷ್ ವೈದ್ಯ ಪದ್ಧತಿಗಳನ್ನು (ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ, ಸೋವಾ-ರಿಗ್ಪಾ ಮತ್ತು ಹೋಮಿಯೋಪತಿ ಸೇರಿದಂತೆ) ಜಾಗತಿಕವಾಗಿ ಉತ್ತೇಜಿಸಲು, ಪ್ರಚಾರ ಮಾಡುವ ಹೊಣೆ ಹೊಂದಿದೆ. ಆಯುಷ್ ವೈದ್ಯ ಪದ್ಧತಿಗಳ ಜಾಗತಿಕ ಉತ್ತೇಜನ ಮತ್ತು ಪ್ರಚಾರದ ಭಾಗವಾಗಿ ಆಯುಷ್ ಸಚಿವಾಲಯವು ವಿವಿಧ ರಾಷ್ಟ್ರಗಳೊಂದಿಗೆ ಸಾಂಪ್ರದಾಯಿಕ ವೈದ್ಯ ಪದ್ಧತಿಗಳ ಸಹಕಾರಕ್ಕಾಗಿ ಮತ್ತು ವಿವಿಧ ಹೊರ ರಾಷ್ಟ್ರಗಳಲ್ಲಿನ ಗುರುತಿಸಲಾದ ವಿಶ್ವ ವಿದ್ಯಾಲಯಗಳಲ್ಲಿ ಆಯುಷ್ ಅಧ್ಯಯನ ಪೀಠವನ್ನು ಸ್ಥಾಪಿಸಲು ದೇಶ ದೇಶಗಳ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿದೆ.
ಗಿನಿಯಾದಲ್ಲಿ ಆಯುಷ್ ವೈದ್ಯ ಪದ್ಧತಿಗಳ ಉತ್ತಜನ ಮತ್ತು ಪ್ರಚಾರದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಮಾನದಂಡದಂತೆ ಸಾಂಪ್ರದಾಯಿಕ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿಯ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದದ ಕರಡು ಸಿದ್ಧಪಡಿಸಿ ವಿದೇಶಾಂಗ ವ್ಯವಹಾರಗಳ ಕೇಂದ್ರ ಮತ್ತು ಪಶ್ಚಿಮ ಆಫ್ರಿಕಾ ವಿಭಾಗದ ಮೂಲಕ ಗಿನಿಯಾದೊಂದಿಗೆ ವಿನಿಮಯ ಮಾಡಿಕೊಳ್ಳಲಾಗಿತ್ತು.