ನಮಸ್ಕಾರ್!
ರಾಜ್ಯ ಸಭೆಯ ಗೌರವಾನ್ವಿತ ಸಭಾಪತಿಗಳು ಹಾಗು ದೇಶದ ಉಪರಾಷ್ಟ್ರಪತಿಗಳಾದ ಶ್ರೀ ವೆಂಕಯ್ಯ ನಾಯ್ಡು ಜೀ, ಲೋಕಸಭೆಯ ಗೌರವಾನ್ವಿತ ಸ್ಪೀಕರ್ ಶ್ರೀ ಓಂ ಬಿರ್ಲಾ ಜೀ, ರಾಜ್ಯ ಸಭೆಯ ಗೌರವಾನ್ವಿತ ಉಪ ಸಭಾಪತಿಗಳಾದ ಶ್ರೀ ಹರಿವಂಶ ಜೀ, ಲೋಕ ಸಭಾ ಮತ್ತು ರಾಜ್ಯ ಸಭಾಗಳ ವಿಪಕ್ಷ ನಾಯಕರೇ ಮತ್ತು ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಹಾಜರಿರುವ ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!.
ಇಂದು ನಮ್ಮ ಸಂಸದೀಯ ವ್ಯವಸ್ಥೆಯಲ್ಲಿ ಇನ್ನೊಂದು ಪ್ರಮುಖ ಅಧ್ಯಾಯದ ಆರಂಭ.
ಇಂದು ದೇಶವು ಸಂಸದ್ ಟಿ.ವಿ.ಯ ರೂಪದಲ್ಲಿ ಸಂಪರ್ಕ ಮತ್ತು ಸಂವಾದದ ಮಾಧ್ಯಮವನ್ನು ಪಡೆದುಕೊಳ್ಳುತ್ತಿದೆ. ಇದು ದೇಶದ ಪ್ರಜಾಪ್ರಭುತ್ವದ ಮತ್ತು ಜನಪ್ರತಿನಿಧಿಗಳ ಹೊಸ ಧ್ವನಿಯಾಗಿ ಸೇವೆಯನ್ನು ಸಲ್ಲಿಸಲಿದೆ.
ನಾನು ನಿಮಗೆಲ್ಲರಿಗೂ ಮತ್ತು ಈ ಚಿಂತನೆಯನ್ನು ಸಾಕಾರಗೊಳಿಸಿದ ಇಡೀ ತಂಡಕ್ಕೆ ಶುಭವನ್ನು ಹಾರೈಸುತ್ತೇನೆ. ನಮ್ಮ ಗೌರವಾನ್ವಿತ ಸ್ಪೀಕರ್ ಅವರು ತಿಳಿಸಿದಂತೆ , ಇಂದು ದೂರದರ್ಶನಕ್ಕೆ 62 ವರ್ಷ ತುಂಬುತ್ತದೆ. ಇದು ಬಹಳ ಧೀರ್ಘ ಪ್ರಯಣ. ಈ ಪ್ರಯಾಣವನ್ನು ಯಶಸ್ವಿಗೊಳಿಸುವಲ್ಲಿ ಹಲವಾರು ಜನರು ತಮ್ಮ ಕೊಡುಗೆ ನೀಡಿದ್ದಾರೆ. ದೂರದರ್ಶನದ ಕಾರ್ಯಾಚರಣೆಗೆ ಸಂಬಂಧಪಟ್ಟಂತೆ ಪಾಲ್ಗೊಂಡಿದ್ದ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ತ್ವರಿತಗತಿಯಿಂದ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮಾಧ್ಯಮಗಳು ಮತ್ತು ಟಿ.ವಿ. ವಾಹಿನಿಗಳ ಪಾತ್ರವೂ ಬಹಳ ವೇಗವಾಗಿ ಬದಲಾಗುತ್ತಿದೆ. 21 ನೇ ಶತಮಾನವು ವಿಶೇಷವಾಗಿ ಸಂಪರ್ಕ ಮತ್ತು ಸಂವಾದ ಮೂಲಕ ಕ್ರಾಂತಿಯನ್ನು ಉಂಟು ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸಂಸತ್ತಿನೊಂದಿಗೆ ಸಂಬಂಧ ಹೊಂದಿರುವ ವಾಹಿನಿಗಳು ಈ ಆಧುನಿಕ ವ್ಯವಸ್ಥೆಗಳಿಗೆ ಅನುಗುಣವಾಗಿ ತಮ್ಮನ್ನು ತಾವು ಪರಿವರ್ತಿಸಿಕೊಳ್ಳಬೇಕಾಗಿರುವುದು ಸಹಜ ಸಂಗತಿಯಾಗಿದೆ.
ಸಂಸದ್ ಟಿ.ವಿ.ಯ ಮೂಲಕ ಇಂದು ಹೊಸ ಆರಂಭವನ್ನು ಮಾಡಲಾಗಿದೆ. ಸಂಸದ್ ಟಿ.ವಿ.ಯು ಹೊಸ ಅವತಾರದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಒ.ಟಿ.ಟಿ. ವೇದಿಕೆಗಳಲ್ಲಿ ಕೂಡಾ ಲಭ್ಯ ಇರುತ್ತದೆ, ಮತ್ತು ಅದು ಅದರದೇ ಆಪ್ ಹೊಂದಿರುತ್ತದೆ. ಇದರೊಂದಿಗೆ ನಮ್ಮ ಸಂಸತ್ತಿನ ಸಂವಾದಗಳು ಆಧುನಿಕ ತಂತ್ರಜ್ಞಾನದ ಜೊತೆ ಜೋಡಿಸಲ್ಪಡುವುದಲ್ಲದೆ, ಸಾಮಾನ್ಯ ಮನುಷ್ಯನಿಗೂ ಹೆಚ್ಚು ಪ್ರಮಾಣದಲ್ಲಿ ತಲುಪಲಿವೆ.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಇಂದು – ಸೆಪ್ಟೆಂಬರ್ 15 ರಂದು ಆಚರಿಸಲಾಗುತ್ತಿರುವುದು ಒಂದು ಯೋಗಾಯೋಗ. ಮತ್ತು ಪ್ರಜಾಪ್ರಭುತ್ವದ ವಿಷಯಕ್ಕೆ ಬಂದಾಗ ಭಾರತದ ಜವಾಬ್ದಾರಿ ಬಹಳ ಹೆಚ್ಚಿನದು. ಭಾರತವು ಪ್ರಜಾಪ್ರಭುತ್ವದ ತಾಯಿ. ಭಾರತಕ್ಕೆ ಪ್ರಜಾಪ್ರಭುತ್ವ ಬರೇ ಒಂದು ವ್ಯವಸ್ಥೆ ಮಾತ್ರವಲ್ಲ, ಅದೊಂದು ಚಿಂತನೆ. ಭಾರತದಲ್ಲಿ ಪ್ರಜಾಪ್ರಭುತ್ವ ಬರೇ ಸಾಂವಿಧಾನಿಕ ವ್ಯವಸ್ಥೆ ಮಾತ್ರವಲ್ಲ, ಅದೊಂದು ಉತ್ಸಾಹ, ಸ್ಫೂರ್ತಿ. ಭಾರತದಲ್ಲಿ ಪ್ರಜಾಪ್ರಭುತ್ವ ಎಂದರೆ ಅದು ಸಂವಿಧಾನದ ಸೆಕ್ಷನ್ ಗಳ ಸಂಗ್ರಹ ಮಾತ್ರವಲ್ಲ, ಅದು ನಮ್ಮ ಜೀವ ನದಿ. ಆದುದರಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದಂದು ಸಂಸದ್ ಟಿ.ವಿ.ಯ ಕಾರ್ಯಾರಂಭ ಬಹಳ ಪ್ರಸ್ತುತವಾದುದಾಗಿದೆ.
ಅದೇ ರೀತಿ ಭಾರತದಲ್ಲಿರುವ ನಾವೆಲ್ಲರೂ ಇಂದು ಇಂಜಿನಿಯರುಗಳ ದಿನವನ್ನು ಆಚರಿಸುತ್ತಿದ್ದೇವೆ. ಈ ಪವಿತ್ರ ದಿನ, ಎಂ. ವಿಶ್ವೇಶ್ವರಯ್ಯ ಜೀ ಅವರ ಜನ್ಮದಿನ, ಭಾರತದ ಕಠಿಣ ಪರಿಶ್ರಮಿ ಮತ್ತು ಕೌಶಲ್ಯದ ಇಂಜಿನಿಯರುಗಳಿಗೆ ಅರ್ಪಿತವಾಗಿದೆ. ಟಿ.ವಿ. ಜಗತ್ತಿನಲ್ಲಿ ಒ.ಬಿ. ಇಂಜಿನಿಯರುಗಳು, ಧ್ವನಿ ಇಂಜಿನಿಯರುಗಳು, ಗ್ರಾಫಿಕ್ ವಿನ್ಯಾಸದಲ್ಲಿ ತೊಡಗಿಕೊಂಡವರು, ಸ್ಟುಡಿಯೋ ತಂಡ, ಸ್ಟುಡಿಯೋ ನಿರ್ದೇಶಕರು, ಕ್ಯಾಮರಾಮನ್, ವೀಡಿಯೋ ಎಡಿಟರ್, ಮತ್ತು ಇತರ ಹಲವಾರು ವೃತ್ತಿಪರರು ಪ್ರಸಾರವನ್ನು ಸಾಧ್ಯವಾಗಿಸುತ್ತಾರೆ. ಇಂದು ನಾನು ಸಂಸದ್ ಟಿ.ವಿ. ಸಹಿತ ವಿಶೇಷವಾಗಿ ದೇಶದ ಎಲ್ಲಾ ಟಿ.ವಿ. ವಾಹಿನಿಗಳಲ್ಲಿ ಕೆಲಸ ಮಾಡುವ ಇಂಜಿನಿಯರುಗಳನ್ನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ಇಂದು, ದೇಶವು ಸ್ವಾತಂತ್ರ್ಯದ 75 ನೇ ವರ್ಷವನ್ನಾಚರಿಸುತ್ತಿರುವಾಗ, ನಾವು ಹಿಂದಿನ ವೈಭವದ ಜೊತೆ ಭವಿಷ್ಯಕ್ಕಾಗಿ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ. ಈ ಎರಡು ಕ್ಷೇತ್ರಗಳಲ್ಲಿಯೂ ಮಾಧ್ಯಮಕ್ಕೆ ಬಹಳ ದೊಡ್ಡ ಪಾತ್ರವಿದೆ. ಮಾಧ್ಯಮಗಳು ಸ್ವಚ್ಛ ಭಾರತ್ ಅಭಿಯಾನದಂತಹ ಒಂದು ವಿಷಯವನ್ನು ಕೈಗೆತ್ತಿಕೊಂಡಾಗ, ಅದು ಜನರಲ್ಲಿ ಬಹಳ ತ್ವರಿತವಾಗಿ ಹರಡುತ್ತದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ದೇಶವಾಸಿಗಳ ಪ್ರಯತ್ನಗಳನ್ನು ಪ್ರಕಟಿಸಿ ಅಥವಾ ಪ್ರಸಾರಿಸಿ ಮಾಧ್ಯಮಗಳು ಬಹಳ ದೊಡ್ಡ ಕೆಲಸ ಮಾಡಬಹುದು. ಉದಾಹರಣೆಗೆ ಟಿ.ವಿ. ವಾಹಿನಿಗಳು ಸ್ವಾತಂತ್ರ್ಯ ಹೋರಾಟದ 75 ಕಂತುಗಳನ್ನು ಯೋಜಿಸಬಹುದು. ಮತ್ತು ಸಾಕ್ಷ್ಯಚಿತ್ರಗಳನ್ನು ಮಾಡಬಹುದು. ವೃತ್ತ ಪತ್ರಿಕೆಗಳು ಅಮೃತ ಮಹೋತ್ಸವಕ್ಕೆ ಸಂಬಂಧಿಸಿದ ವಿಶೇಷ ಪುರವಣಿಗಳನ್ನು ಪ್ರಕಟಿಸಬಹುದು. ಡಿಜಿಟಲ್ ಮಾಧ್ಯಮಗಳು ರಸಪ್ರಶ್ನೆ ಮತ್ತು ಸ್ಪರ್ಧೆಗಳಂತಹ ಚಿಂತನೆಗಳ ಮೂಲಕ ಯುವಜನತೆಯನ್ನು ನೇರ ಸಂಪರ್ಕಿಸಬಹುದು.
ಸಂಸದ್ ಟಿ.ವಿ. ಯ ತಂಡ ಈ ದಿಕ್ಕಿನಲ್ಲಿ ಹಲವು ಕಾರ್ಯಕ್ರಮಗಳನ್ನು ಯೋಜಿಸಿರುವುದಾಗಿ ನನಗೆ ತಿಳಿಸಲಾಗಿದೆ. ಈ ಕಾರ್ಯಕ್ರಮಗಳು ಅಮೃತ ಮಹೋತ್ಸವದ ಉತ್ಸಾಹವನ್ನು ಜನಸಮೂಹಕ್ಕೆ ಹರಡುವಲ್ಲಿ ಬಹಳ ಪರಿಣಾಮಕಾರಿಯಾಗಲಿವೆ.
ಸ್ನೇಹಿತರೇ,
ಸಂಪರ್ಕ ಕ್ಷೇತ್ರದಲ್ಲಿರುವ ನೀವೆಲ್ಲರೂ ಸೃಜನಶೀಲರು. ನೀವು ಆಗಾಗ ಹೇಳುತ್ತಿರುತ್ತೀರಿ “ವಿಷಯವೇ ರಾಜ” (ಕಂಟೆಂಟ್ ಈಸ್ ಕಿಂಗ್) ಎಂದು. ನಾನು ನಿಮ್ಮೊಂದಿಗೆ ನನ್ನ ಅನುಭವವನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ. ನನ್ನ ಅನುಭವ ಎಂದರೆ “ವಿಷಯವೇ ಸಂಪರ್ಕ” (ಕಂಟೆಂಟ್ ಈಸ್ ಕನೆಕ್ಟ್) . ಅಂದರೆ ನೀವು ಉತ್ತಮ ವಿಷಯವನ್ನು ಹೊಂದಿದ್ದರೆ, ಆಗ ಜನರು ಸಹಜವಾಗಿ ನಿಮ್ಮೊಂದಿಗೆ ಬರುತ್ತಾರೆ, ಕೈಜೋಡಿಸುತ್ತಾರೆ. ಮಾಧ್ಯಮಕ್ಕೆ ಇದು ಹೆಚ್ಚು ಅನ್ವಯವಾಗುವಂತೆಯೇ, ಅದು ನಮ್ಮ ಸಂಸದೀಯ ವ್ಯವಸ್ಥೆಗೂ ಅನ್ವಯವಾಗುತ್ತದೆ. ಯಾಕೆಂದರೆ ಸಂಸತ್ತಿನಲ್ಲಿ ಬರೇ ರಾಜಕೀಯ ಮಾತ್ರ ಇರುವುದಲ್ಲ, ಅಲ್ಲಿ ನೀತಿ ರೂಪಣೆಯೂ ಇರುತ್ತದೆ.
ಸಂಸತ್ ಅಧಿವೇಶನ ನಡೆಯುತ್ತಿರುವಾಗ, ವಿವಿಧ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ ಮತ್ತು ಅಲ್ಲಿ ಯುವಜನತೆ ಕಲಿಯುವುದಕ್ಕೆ ಬಹಳಷ್ಟು ಇರುತ್ತದೆ. ಗೌರವಾನ್ವಿತ ಸದಸ್ಯರು ಕೂಡಾ ಇಡೀ ದೇಶ ತಮ್ಮನ್ನು ಗಮನಿಸುತ್ತಿರುವುದನ್ನು ತಿಳಿದುಕೊಂಡಾಗ ಅವರಿಗೆ ಕೂಡಾ ಉತ್ತಮ ನಡತೆಯ ಪ್ರೇರಣೆ ದೊರೆಯುತ್ತದೆ. ಮತ್ತು ಸಂಸತ್ತಿನಲ್ಲಿ ಉತ್ತಮ ಚರ್ಚೆ ನಡೆಯಲು ಸಾಧ್ಯವಾಗುತದೆ. ಇದರಿಂದ ಸಂಸತ್ತಿನ ಉತ್ಪಾದಕತೆ ಹೆಚ್ಚುತ್ತದೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳು ಕೂಡಾ ಜನಪ್ರಿಯವಾಗುತ್ತವೆ.
ಆದುದರಿಂದ, ಸದನದ ಕಾರ್ಯಕಲಾಪಗಳೊಂದಿಗೆ ಜನರು ಸಂಪರ್ಕ ಹೊಂದುವುದು ಬಹಳ ಮುಖ್ಯ. ಅವರು ದೇಶದಲ್ಲಿ ಎಲ್ಲಿಯೇ ಇರಲಿ, ಅವರು ಸದನದ ಕಾರ್ಯಚಟುವಟಿಕೆಗಳ ಭಾಗವಾಗಬೇಕು. ಆದುದರಿಂದ ಸಂಸದ್ ಟಿ.ವಿ. ಅದರ ಕಾರ್ಯಕ್ರಮಗಳನ್ನು ಜನರ ಆಸಕ್ತಿ, ಅದರಲ್ಲೂ ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಬೇಕು. ಇದಕ್ಕಾಗಿ, ಭಾಷೆಯ ಬಗ್ಗೆ ಹೆಚ್ಚಿನ ಗಮನ ಕೊಡಬೇಕು, ಆಸಕ್ತಿದಾಯಕ ಹಾಗು ಅವರನ್ನು ಒಳಗೊಳ್ಳುವಂತಹ ಪ್ಯಾಕೇಜುಗಳು ಕಡ್ಡಾಯವಾಗಬೇಕು.
ಉದಾಹರಣೆಗೆ, ಸಂಸತ್ತಿನಲ್ಲಿಯ ಚಾರಿತ್ರಿಕ ಭಾಷಣಗಳಿಗೆ ಹೆಚ್ಚು ಆದ್ಯತೆ ನೀಡಬಹುದು. ಅದರ ಜೊತೆಗೆ ಅರ್ಥಪೂರ್ಣ ಮತ್ತು ತರ್ಕ ಬದ್ಧ ಚರ್ಚೆಗಳು ಮತ್ತು ಕೆಲವೊಮ್ಮೆ ಕೆಲವು ತಮಾಷೆಯ ಸಂದರ್ಭಗಳನ್ನು ಕೂಡಾ ಪ್ರಸಾರ ಮಾಡಬಹುದು. ವಿವಿಧ ಸಂಸತ್ ಸದಸ್ಯರ ಮಾಹಿತಿಗಳನ್ನು ಕೂಡಾ ಹಂಚಿಕೊಳ್ಳಬಹುದು, ಇದರಿಂದ ಜನರಿಗೆ ಸಂಸದರ ಕೆಲಸದ ಬಗ್ಗೆ ತುಲನಾತ್ಮಕ ವಿಶ್ಲೇಷಣೆ ಮಾಡುವುದಕ್ಕೂ ಸಾಧ್ಯವಾಗುತ್ತದೆ. ಹಲವು ಸಂಸದರು ವಿವಿಧ ಕ್ಷೇತ್ರಗಳಲ್ಲಿ ಶ್ಲಾಘನೀಯ ಕೆಲಸಗಳನ್ನು ಮಾಡುತ್ತಿದ್ದಾರೆ. ನೀವು ಈ ಪ್ರಯತ್ನಗಳನ್ನು ಪ್ರಮುಖವಾಗಿ ತೋರಿಸಿದರೆ, ಅವರ ಉತ್ಸಾಹ ಇನ್ನಷ್ಟು ಹೆಚ್ಚುತ್ತದೆ ಮತ್ತು ಇತರ ಜನ ಪ್ರತಿನಿಧಿಗಳಿಗೆ ಧನಾತ್ಮಕ ರಾಜಕೀಯದ ಮಾದರಿ ಹಾಗು ಪ್ರೇರಣೆ ದೊರೆಯುತ್ತದೆ.
ಸ್ನೇಹಿತರೇ,
ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವು ಕೈಗೆತ್ತಿಕೊಳ್ಳಬಹುದಾದ ಇನ್ನೊಂದು ವಿಷಯ ಎಂದರೆ ನಮ್ಮ ಸಂವಿಧಾನ ಮತ್ತು ನಾಗರಿಕ ಕರ್ತವ್ಯಗಳು!. ದೇಶದ ನಾಗರಿಕರಲ್ಲಿ ಕರ್ತವ್ಯಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಈ ಜಾಗೃತಿಗೆ ಮಾಧ್ಯಮವು ಒಂದು ಸಕ್ರಿಯ ಮಾಧ್ಯಮ. ಸಂಸದ್ ಟಿ.ವಿ.ಯು ಇಂತಹ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿದೆ ಎಂದು ನನಗೆ ತಿಳಿಸಲಾಗಿದೆ.
ನಮ್ಮ ಯುವಕರು ನಮ್ಮ ಪ್ರಜಾಪ್ರಭುತ್ವದ ಸಂಸ್ಥೆಗಳ, ಅವುಗಳ ಕಾರ್ಯನಿರ್ವಹಣೆಯ ಬಗ್ಗೆ ಮತ್ತು ನಾಗರಿಕ ಕರ್ತವ್ಯಗಳ ಬಗ್ಗೆ ಈ ಕಾರ್ಯಕ್ರಮಗಳಿಂದ ತಿಳಿದುಕೊಳ್ಳಬಹುದಾಗಿದೆ.
ಅದೇ ರೀತಿ ಅಲ್ಲಿ ಸಮಿತಿಗಳು, ಶಾಸನಾತ್ಮಕ ಕೆಲಸದ ಮಹತ್ವ, ಮತ್ತು ಶಾಸಕಾಂಗದ ಕಾರ್ಯದ ಬಗ್ಗೆ ಬಹಳಷ್ಟು ಮಾಹಿತಿ ಇದ್ದು, ಅದು ಯುವಕರಿಗೆ ಭಾರತದ ಪ್ರಜಾಪ್ರಭುತ್ವವನ್ನು ಆಳವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡಲಿದೆ.
ಸಂಸದ್ ಟಿ.ವಿ.ಯು ತಳಮಟ್ಟದ ಪ್ರಜಾಪ್ರಭುತ್ವವಾದ ಪಂಚಾಯತ್ ಕಾರ್ಯನಿರ್ವಹಣೆ ಬಗ್ಗೆಯೂ ಕಾರ್ಯಕ್ರಮಗಳನ್ನು ಮಾಡುತ್ತದೆ ಎಂಬ ಭರವಸೆ ನನಗಿದೆ. ಈ ಕಾರ್ಯಕ್ರಮಗಳು ಭಾರತದ ಪ್ರಜಾಪ್ರಭುತ್ವಕ್ಕೆ ಹೊಸ ಶಕ್ತಿ, ಹೊಸ ಪ್ರಜ್ಞೆಯನ್ನು ನೀಡಲಿವೆ.
ಸ್ನೇಹಿತರೇ,
ನಮ್ಮ ಸಂಸತ್ತು, ವಿವಿಧ ರಾಜಕೀಯ ಪಕ್ಷಗಳು, ನಮ್ಮ ಮಾಧ್ಯಮಗಳು, ನಮ್ಮ ಸಂಸ್ಥೆಗಳು, ಅವುಗಳದೇ ಆದ ವಿವಿಧ ಕೆಲಸದ ವಲಯಗಳನ್ನು ಹೊಂದಿವೆ. ಆದರೆ ದೇಶದ ನಿರ್ಧಾರಗಳನ್ನು ಈಡೇರಿಸಲು ಸಾಮೂಹಿಕ ಪ್ರಯತ್ನ ಅಗತ್ಯವಿದೆ.
ನಾವೆಲ್ಲರೂ ನಮ್ಮ ವಿವಿಧ ಪಾತ್ರಗಳಲ್ಲಿ ಪರಸ್ಪರ ಹಂಚಿಕೊಂಡ ನಿರ್ಧಾರಗಳೊಂದಿಗೆ ಮುನ್ನಡೆದು ನವಭಾರತದ ಕನಸನ್ನು ಈಡೇರಿಸುತ್ತೇವೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ.
ಈ ನಂಬಿಕೆಯೊಂದಿಗೆ, ನಾನು ರವಿ ಕಪೂರ್ ಅವರನ್ನು ಅಭಿನಂದಿಸಲು ಬಯಸುತೇನೆ, ಯಾಕೆಂದರೆ ಇದು ಅವರ ಕ್ಷೇತ್ರವಲ್ಲ. ಅದರೆ ಅವರು ಬಂದು, ತಾನು ಜಗತ್ತಿನ ವಿವಿಧ ಭಾಗಗಳ ಜನರಿಂದ ಸಲಹೆ ಪಡೆದು, ಅವರ ಮಾರ್ಗದರ್ಶನದಲ್ಲಿ, ಹೊಸ ಚಿಂತನೆಗಳನ್ನು ಪಡೆದುಕೊಂಡು ಸಂಸದ್ ಟಿ.ವಿ.ಯನ್ನು ರೂಪಿಸಿದುದಾಗಿ ಹೇಳುತ್ತಿರುವಾಗ ನಿಜವಾಗಿಯೂ ನಾನು ಅದರಿಂದ ಬಹಳ ಪ್ರಭಾವಿತನಾದೆ. ನಾನು ರವಿ ಮತ್ತು ಅವರ ಇಡೀ ತಂಡವನ್ನು ಅಭಿನಂದಿಸುತ್ತೇನೆ.ನಿಮ್ಮೆಲ್ಲರಿಗೂ ಬಹಳ ಅಭಿನಂದನೆಗಳು ಮತ್ತು ಶುಭಾಶಯಗಳು!.
ಧನ್ಯವಾದಗಳು!
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ.ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
***
तेजी से बदलते समय में मीडिया और टीवी channels की भूमिका भी तेजी से बदल रही है।
— PMO India (@PMOIndia) September 15, 2021
21वीं सदी तो विशेष रूप से संचार और संवाद के जरिए revolution ला रही है।
ऐसे में ये स्वाभाविक हो जाता है कि हमारी संसद से जुड़े चैनल भी इन आधुनिक व्यवस्थाओं के हिसाब से खुद को ट्रान्स्फॉर्म करें: PM
India is the mother of democracy.
— PMO India (@PMOIndia) September 15, 2021
भारत के लिए लोकतन्त्र केवल एक व्यवस्था नहीं है, एक विचार है।
भारत में लोकतंत्र, सिर्फ संवैधानिक स्ट्रक्चर ही नहीं है, बल्कि वो एक स्पिरिट है।
भारत में लोकतंत्र, सिर्फ संविधाओं की धाराओं का संग्रह ही नहीं है, ये तो हमारी जीवन धारा है: PM
मेरा अनुभव है कि- “कन्टेंट इज़ कनेक्ट।”
— PMO India (@PMOIndia) September 15, 2021
यानी, जब आपके पास बेहतर कन्टेंट होगा तो लोग खुद ही आपके साथ जुड़ते जाते हैं।
ये बात जितनी मीडिया पर लागू होती है, उतनी ही हमारी संसदीय व्यवस्था पर भी लागू होती है!
क्योंकि संसद में सिर्फ पॉलिटिक्स नहीं है, पॉलिसी भी है: PM
हमारी संसद में जब सत्र होता है, अलग अलग विषयों पर बहस होती है तो युवाओं के लिए कितना कुछ जानने सीखने के लिए होता है।
— PMO India (@PMOIndia) September 15, 2021
हमारे माननीय सदस्यों को भी जब पता होता है कि देश हमें देख रहा है तो उन्हें भी संसद के भीतर बेहतर आचरण की, बेहतर बहस की प्रेरणा मिलती है: PM @narendramodi