ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಸಂವಿಧಾನ (ಜಮ್ಮು ಮತ್ತು ಕಾಶ್ಮೀರಕ್ಕೆಅನ್ವಯಿಸುವ) ತಿದ್ದುಪಡಿ ಆದೇಶ 2019 ಮೂಲಕ ಸಂವಿಧಾನ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುವ) ಆದೇಶ, 1954ಕ್ಕೆ ತಿದ್ದುಪಡಿ ಕುರಿತಂತೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ. ಇದು ಜಮ್ಮು ಮತ್ತು ಕಾಶ್ಮೀರಕ್ಕಾಗಿ ಸಂವಿಧಾನದ (ಎಪ್ಪತ್ತ ಏಳನೇ ತಿದ್ದುಪಡಿ) ಕಾಯಿದೆ 1995 ಮತ್ತು ಸಂವಿಧಾನ (ನೂರಾ ಮೂರನೇ ತಿದ್ದುಪಡಿ)ಕಾಯಿದೆ 2019ರ ಮೂಲಕ, ಸಂವಿಧಾನ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವ) ತಿದ್ದುಪಡಿ ಆದೇಶ 2019, ವಿಧಿ 370 ರ ಖಂಡ (1) ಪ್ರೆಸಿಡೆಂಟ್ ಅಡಿಯಲ್ಲಿ ಭಾರತದ ಸಂವಿಧಾನದ ಎಲ್ಲ ಸೂಕ್ತ ನಿಯಮಾವಳಿಗಳಿಗೆ ಅನ್ವಯವಾಗುವಂತೆ ತನ್ನ ಉದ್ದೇಶವನ್ನು ಈಡೇರಿಸುತ್ತದೆ.
ಪರಿಣಾಮಗಳು:
ಅಧಿಸೂಚನೆಯಾದ ತರುವಾಯ, ಇದು ಸೇವೆಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಬಡ್ತಿ ಸೌಲಭ್ಯ ನೀಡಲು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಲಿ ಇರುವ ಮೀಸಲಿನ ಜೊತೆಗೆ “ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ” ಶೈಕ್ಷಣಿಕ ಸಂಸ್ಥೆಗಳಲ್ಲಿನ ಪ್ರವೇಶ ಮತ್ತು ಸಾರ್ವಜನಿಕ ಉದ್ಯೋಗದಲ್ಲಿ 10% ಮೀಸಲು ನೀಡಲು ಅವಕಾಶ ನೀಡುತ್ತದೆ.
ಹಿನ್ನೆಲೆ : ನ್ಯಾಯ ಮತ್ತು ಒಳಗೊಳ್ಳುವಿಕೆ
ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಶೇ.10ರಷ್ಟು ಮೀಸಲು ಜಮ್ಮು ಮತ್ತು ಕಾಶ್ಮೀರಕ್ಕೂ ಅನ್ವಯಿಸುತ್ತದೆ. ಇದು ರಾಜ್ಯ ಸರ್ಕಾರದ ಉದ್ಯೋಗದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಧರ್ಮ ಜಾತಿಗೆ ಸೇರಿದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಯುವಕರಿಗೆ ಮೀಸಲು ನೀಡಲು ಅವಕಾಶ ಕಲ್ಪಿಸುತ್ತದೆ. 2019ರ ಜನವರಿಯಲ್ಲಿ ಸಂವಿಧಾನದ 103ನೇ ತಿದ್ದುಪಡಿಯ ಮೂಲಕ ದೇಶದ ಉಳಿದೆಲ್ಲ ಕಡೆ ಶೇ.10 ಮೀಸಲನ್ನು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಕಲ್ಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದು ಭಾರತ ಸರ್ಕಾರದ ಉದ್ಯೋಗದಲ್ಲಿ ದೊರಕುತ್ತಿರುವ ಇಂಥ ಮೀಸಲಿನ ಜೊತೆಗೆ ದೊರಕಲಿದೆ.
ಗುಜ್ಜರ್ಸ್ ಮತ್ತು ಬಕ್ರಾವಲ್ ಗಳು ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಬಡ್ತಿ ಸೌಲಭ್ಯ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ದೊರಕುವಂತೆ ಮಾಡಲಾಗಿದೆ. 24 ವರ್ಷಗಳ ದೀರ್ಘ ಕಾಯುವಿಕೆಯ ನಂತರ ಸಂವಿಧಾನದ 77ನೇ ತಿದ್ದುಪಡಿ 1995ನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆಅನ್ವಯಿಸಲಾಗಿದೆ.
ರಾಜ್ಯ ಸರ್ಕಾರದ ಉದ್ಯೋಗದಲ್ಲಿ ಅಂತಾರಾಷ್ಟ್ರೀಯ ಗಡಿಯ ಬಳಿ ಜೀವಿಸುತ್ತಿರುವ ಜನರಿಗೂ ಗಡಿ ನಿಯಂತ್ರಣ ರೇಖೆಯ ಬಳಿ ಬದುಕುತ್ತಿರುವವರಿಗೆ ಕಲ್ಪಿಸಲಾಗಿರುವ ಮೀಸಲಿಗೆ ಸಮಾನವಾಗಿ ಮೀಸಲು ನೀಡಲು ಜಮ್ಮು ಮತ್ತು ಕಾಶ್ಮೀರ ಮೀಸಲು ಕಾಯಿದೆ 2004ಕ್ಕೆ ಅಧ್ಯಾದೇಶದ ಮೂಲಕ ತಿದ್ದುಪಡಿ ತರಲಾಗಿದೆ. ಈ ಮುನ್ನ ಶೇ.3ರ ಮೀಸಲು ಸೌಲಭ್ಯವು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ 6 ಕಿ.ಮೀ. ಒಳಗೆ ಜೀವಿಸುತ್ತಿರುವವರಿಗೆ ಮಾತ್ರವೇ ಲಭ್ಯವಾಗಿತ್ತು. ಈಗ ಈ ನಿಯಮ ಅಂತಾರಾಷ್ಟ್ರೀಯ ಗಡಿಯಲ್ಲಿ ಜೀವಿಸುತ್ತಿರುವವರಿಗೂ ಅನ್ವಯವಾಗಲಿದೆ. ಇದು ಅಂತಾರಾಷ್ಟ್ರೀಯ ಗಡಿಯಲ್ಲಿ ಜೀವಿಸುತ್ತಿರುವ ಜನರ ದೀರ್ಘ ಕಾಲೀನ ಬೇಡಿಕೆಯಾಗಿತ್ತು. ಅವರೂ ಸಹ ಜಮ್ಮು ಕಾಶ್ಮೀರದಲ್ಲಿ ಗಡಿಯಾಚೆಗಿನ ಗುಂಡಿನ ದಾಳಿಯಿಂದ ತತ್ತರಿಸುತ್ತಿದ್ದಾರೆ.
ಸಂವಿಧಾನದ (ಎಪ್ಪತ್ತ ಏಳನೇ ತಿದ್ದುಪಡಿ)ಕಾಯಿದೆ 1995ನ್ನು ಜಾರಿಗೆ ತಂದು ಆ ಮೂಲಕ ಖಂಡ(4ಎ)ಯನ್ನು ಭಾರತ ಸಂವಿಧಾನದ ವಿಧಿ 16ರ ಖಂಡ 4ರ ನಂತರ ಸೇರಿಸಲಾಗಿತ್ತು. ಖಂಡ (4ಎ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸೇವೆಯಲ್ಲಿ ಬಡ್ತಿ ಸೌಲಭ್ಯ ನೀಡಲು ಅವಕಾಶ ಕಲ್ಪಿಸುತ್ತದೆ. ಸಂವಿಧಾನ (ಒಂದು ನೂರ ಮೂರನೇ ತಿದ್ದುಪಡಿ) ಕಾಯಿದೆ 2019 ಜಮ್ಮು ಮತ್ತು ಕಾಶ್ಮೀರ ಹೊರತು ಪಡಿಸಿ ಇಡೀ ದೇಶಕ್ಕೆ ಅನ್ವಯವಾಗಿತ್ತು ಮತ್ತು ಜಮ್ಮು ಕಾಶ್ಮೀರಕ್ಕೂ ಈ ಕಾಯಿದೆ ವಿಸ್ತರಿಸುವ ಮೂಲಕ ರಾಜ್ಯದ ಆರ್ಥಿಕವಾಗಿ ಹಿಂದುಳಿದವರೂ ಈ ಮೀಸಲು ಸೌಲಭ್ಯ ಪಡೆದುಕೊಳ್ಳಲಿದ್ದಾರೆ.