ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ದೇಶದ ಮಹಿಳೆಯರ ಕಲ್ಯಾಣಕ್ಕಾಗಿ ಐತಿಹಾಸಿಕವಾದ ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ ನಿಯಂತ್ರಣ ಮಸೂದೆ -2020 ಕ್ಕೆ ಅನುಮೋದನೆ ನೀಡಿದೆ. ಬಾಡಿಗೆ ತಾಯ್ತನ ನಿಯಂತ್ರಣ ಮಸೂದೆ -2020 ನ್ನು ಸಂಸತ್ತಿನಲ್ಲಿ ಮಂಡಿಸಿದ ನಂತರ ಮತ್ತು ವೈದ್ಯಕೀಯ ಗರ್ಭಪಾತ ತಿದ್ದುಪಡಿ ಮಸೂದೆ -2020 ಕ್ಕೆ ಅನುಮೋದನೆ ನೀಡಿದ ನಂತರ, ಇದು ಮಹಿಳೆಯರ ಸಂತಾನೋತ್ಪತ್ತಿ ಹಕ್ಕುಗಳನ್ನು ರಕ್ಷಿಸುವಲ್ಲಿ ಕೈಗೊಳ್ಳುತ್ತಿರುವ ಮತ್ತೊಂದು ಪ್ರಮುಖ ಕ್ರಮವಾಗಿದೆ.
ಮಸೂದೆಯನ್ನು ಸಂಸತ್ತು ಅಂಗೀಕರಿಸಿದ ನಂತರ, ಕೇಂದ್ರ ಸರ್ಕಾರವು ಕಾಯ್ದೆಯ ಅಧಿಸೂಚನೆ ಪ್ರಕಟಿಸುತ್ತದೆ. ಹಾಗೆಯೇ ರಾಷ್ಟ್ರೀಯ ಮಂಡಳಿಯನ್ನು ರಚಿಸಲಾಗುತ್ತದೆ.
ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರು ಪಾಲಿಸಬೇಕಾದ ನೀತಿ ಸಂಹಿತೆ, ಭೌತಿಕ ಮೂಲಸೌಕರ್ಯ, ಪ್ರಯೋಗಾಲಯ ಮತ್ತು ರೋಗನಿರ್ಣಯ ಸಾಧನಗಳು ಮತ್ತು ಚಿಕಿತ್ಸಾಲಯಗಳು ಮತ್ತು ಬ್ಯಾಂಕುಗಳು ಬಳಸಬೇಕಾದ ಪರಿಣಿತ ಮಾನವಶಕ್ತಿಯ ಕನಿಷ್ಠ ಮಾನದಂಡಗಳನ್ನು ರಾಷ್ಟ್ರೀಯ ಮಂಡಳಿಯು ನಿಗದಿಪಡಿಸುತ್ತದೆ.
ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದ ಮೂರು ತಿಂಗಳೊಳಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಾಜ್ಯ ಮಂಡಳಿಗಳು ಮತ್ತು ರಾಜ್ಯ ಪ್ರಾಧಿಕಾರಗಳನ್ನು ರಚಿಸುತ್ತವೆ.
ರಾಜ್ಯದ ಆಸ್ಪತ್ರೆಗಳು ಮತ್ತು ಬ್ಯಾಂಕುಗಳಿಗಾಗಿ ರಾಷ್ಟ್ರೀಯ ಮಂಡಳಿಯು ರೂಪಿಸುವ ನೀತಿಗಳು ಮತ್ತು ಯೋಜನೆಗಳನ್ನು ಅನುಸರಿಸುವ ಜವಾಬ್ದಾರಿಯನ್ನು ರಾಜ್ಯ ಮಂಡಳಿಯು ಹೊಂದಿರುತ್ತದೆ.
ಕೇಂದ್ರೀಯ ಡೇಟಾಬೇಸ್ ಅನ್ನು ನಿರ್ವಹಿಸಲು ಮತ್ತು ರಾಷ್ಟ್ರೀಯ ಮಂಡಳಿಯ ಕಾರ್ಯಚಟುವಟಿಕೆಗೆ ನೆರವಾಗಲು ರಾಷ್ಟ್ರೀಯ ನೋಂದಾವಣಿ ಮತ್ತು ನೋಂದಣಿ ಪ್ರಾಧಿಕಾರಕ್ಕೆ ಮಸೂದೆಯು ಅಧಿಕಾರ ಒದಗಿಸುತ್ತದೆ. ಲಿಂಗ ಆಯ್ಕೆ, ಮಾನವ ಭ್ರೂಣಗಳು ಅಥವಾ ಲಿಂಗಾಣುಗಳ ಮಾರಾಟದಂತಹ ಕಾನೂನುಬಾಹಿರ ಚಟುವಟಿಕೆಗಳಿಗಾಗಿ ಏಜೆನ್ಸಿಗಳು, ಸಂಸ್ಥೆಗಳಿಗೆ ಕಠಿಣ ಶಿಕ್ಷೆ ವಿಧಿಸಲು ಮಸೂದೆಯು ಪ್ರಸ್ತಾಪಿಸಿದೆ.
ಪ್ರಯೋಜನಗಳು
ಈ ಕಾಯ್ದೆಯ ಪ್ರಮುಖ ಪ್ರಯೋಜನವೆಂದರೆ ಇದು ದೇಶದಲ್ಲಿ ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ ಸೇವೆಗಳನ್ನು ನಿಯಂತ್ರಿಸುತ್ತದೆ. ಪರಿಣಾಮವಾಗಿ, ಬಂಜೆತನದ ದಂಪತಿಗಳು ಎಆರ್‌ಟಿಗಳಲ್ಲಿನ ಚಟುವಟಿಕೆಗಳ ಬಗ್ಗೆ ಹೆಚ್ಚು ಭರವಸೆ ಹೊಂದುತ್ತಾರೆ.
ಹಿನ್ನೆಲೆ
ಮಹಿಳೆಯರ ಸಂತಾನೋತ್ಪತ್ತಿ ಹಕ್ಕುಗಳ ಸಂರಕ್ಷಣೆಗೆ ಕೇಂದ್ರ ಸಂಪುಟವು ಅನುಮೋದಿಸಿದ ಕಾಯ್ದೆಗಳ ಸರಣಿಯಲ್ಲಿ ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ ನಿಯಂತ್ರಣ ಮಸೂದೆ -2020 ಇತ್ತೀಚಿನದು. ಮಸೂದೆಯು ದೇಶದಲ್ಲಿ ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ ಸೇವೆಗಳ ಸುರಕ್ಷಿತ ಮತ್ತು ನೈತಿಕ ಚಟುವಟಿಕೆಗಳಿಗೆ ಅವಕಾಶ ನೀಡುತ್ತದೆ. ಮಸೂದೆಯ ಮೂಲಕ, ರಾಷ್ಟ್ರೀಯ ಮಂಡಳಿ, ರಾಜ್ಯ ಮಂಡಳಿಗಳು, ರಾಷ್ಟ್ರೀಯ ನೋಂದಾವಣೆ ಮತ್ತು ರಾಜ್ಯ ನೋಂದಣಿ ಪ್ರಾಧಿಕಾರಗಳು ಕ್ರಮವಾಗಿ ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ ಚಿಕಿತ್ಸಾಲಯಗಳು ಮತ್ತು ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ ಬ್ಯಾಂಕುಗಳನ್ನು ನಿಯಂತ್ರಿಸುತ್ತವೆ ಮತ್ತು ಇವುಗಳ ಮೇಲ್ವಿಚಾರಣೆ ಮಾಡುತ್ತವೆ.
ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನವು (ಎಆರ್‌ಟಿ) ಇತ್ತೀಚಿನ ವರ್ಷಗಳಲ್ಲಿ ಅಧಿಕವಾಗಿ ಬೆಳೆದಿದೆ. ಎಆರ್‌ಟಿ ಕೇಂದ್ರಗಳ ಅತ್ಯಧಿಕ ಬೆಳವಣಿಗೆಯಲ್ಲಿ ಭಾರತವೂ ಒಂದಾಗಿದೆ. ಇನ್-ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಸೇರಿದಂತೆ ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನವು ಬಂಜೆತನದಿಂದ ಬಳಲುತ್ತಿರುವ ಹಲವರಿಗೆ ಭರವಸೆ ಒದಗಿಸಿದೆ. ಆದರೆ ಕಾನೂನು, ನೈತಿಕತೆ ಮತ್ತು ಸಾಮಾಜಿಕ ಸಮಸ್ಯೆಗಳನ್ನೂ ಸಹ ತಂದೊಡ್ಡಿದೆ. ಭಾರತವು ಜಾಗತಿಕ ಫಲವತ್ತತೆ ಉದ್ಯಮದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಸಂತಾನೋತ್ಪತ್ತಿ ವೈದ್ಯಕೀಯ ಪ್ರವಾಸೋದ್ಯಮವು ಮಹತ್ವದ ಚಟುವಟಿಕೆಯಾಗಿದೆ. ಭಾರತದಲ್ಲಿನ ಆಸ್ಪತ್ರೆಗಳು ಲಿಂಗಾಣು ದಾನ, ಗರ್ಭಾಶಯದ ಗರ್ಭಧಾರಣೆ (ಐಯುಐ), ಐವಿಎಫ್, ಐಸಿಎಸ್ಐ, ಪಿಜಿಡಿ ಮತ್ತು ಬಾಡಿಗೆ ಗರ್ಭಾವಸ್ಥೆಯಂತಹ ಬಹುತೇಕ ಎಲ್ಲಾ ಎಆರ್‌ಟಿ ಸೇವೆಗಳನ್ನು ಒದಗಿಸುತ್ತವೆ. ಭಾರತದಲ್ಲಿ ಇಷ್ಟೆಲ್ಲಾ ಚಟುವಟಿಕೆಗಳು ನಡೆಯುತ್ತಿದ್ದರೂ ಪ್ರಮಾಣೀಕರಣ ಮತ್ತು ವರದಿ ಇನ್ನೂ ಅಸಮರ್ಪಕವಾಗಿದೆ.
ಮುಖ್ಯವಾಗಿ ಸಂತ್ರಸ್ತ ಮಹಿಳೆಯರು ಮತ್ತು ಮಕ್ಕಳನ್ನು ಶೋಷಣೆಯಿಂದ ರಕ್ಷಿಸುವುದೇ ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ ಸೇವೆಗಳ ನಿಯಂತ್ರಣದ ಉದ್ದೇಶವಾಗಿದೆ. ಅಂಡಾಣು ದಾನಿಯನ್ನು ವಿಮೆಯಿಂದ ರಕ್ಷಿಸುವುದು, ಬಹು ಭ್ರೂಣ ಅಳವಡಿಕೆಯಿಂದ ರಕ್ಷಣೆ ಮತ್ತು ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನದ ಮೂಲಕ ಜನಿಸಿದ ಮಕ್ಕಳಿಗೆ ಜೈವಿಕವಾಗಿ ಜನಿಸಿದ ಮಕ್ಕಳಿಗೆ ಸಮಾನವಾದ ಎಲ್ಲಾ ಹಕ್ಕುಗಳನ್ನು ಒದಗಿಸುವುದು ಮುಖ್ಯವಾಗಿದೆ. ಎಆರ್‌ಟಿ ಬ್ಯಾಂಕುಗಳ ವೀರ್ಯ, ಅಂಡಾಣುಗಳು ಮತ್ತು ಭ್ರೂಣದ ಸಂಗ್ರಹವನ್ನು ನಿಯಂತ್ರಿಸಬೇಕಾಗಿದೆ ಮತ್ತು ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನದ ಮೂಲಕ ಜನಿಸಿದ ಮಗುವಿನ ಅನುಕೂಲಕ್ಕಾಗಿ ಪೂರ್ವ-ಜೆನೆಟಿಕ್ ಇಂಪ್ಲಾಂಟೇಶನ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲು ಮಸೂದೆ ಉದ್ದೇಶಿಸಿದೆ.
ಬಾಡಿಗೆ ತಾಯ್ತನ ನಿಯಂತ್ರಣ ಮಸೂದೆ -2020
ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ, 2020 ರಲ್ಲಿ ಕೇಂದ್ರ ಮಟ್ಟದಲ್ಲಿ ರಾಷ್ಟ್ರೀಯ ಮಂಡಳಿ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯ ಮಂಡಳಿಗಳು ಮತ್ತು ಸೂಕ್ತ ಪ್ರಾಧಿಕಾರಗಳನ್ನು ಸ್ಥಾಪಿಸುವ ಮೂಲಕ ಭಾರತದಲ್ಲಿ ಬಾಡಿಗೆ ತಾಯ್ತನ ನಿಯಂತ್ರಿಸಲು ಪ್ರಸ್ತಾಪಿಸಲಾಗಿದೆ. ಮಸೂದೆಯನ್ನು ಆಯ್ಕೆ ಸಮಿತಿಯು ಪರಿಶೀಲಿಸಿದ್ದು, ವರದಿಯನ್ನು 2020 ರ ಫೆಬ್ರವರಿ 5 ರಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ.
ಈ ಕಾಯ್ದೆಯ ಪ್ರಮುಖ ಪ್ರಯೋಜನವೆಂದರೆ ಇದು ದೇಶದಲ್ಲಿ ಬಾಡಿಗೆ ತಾಯ್ತನ ಸೇವೆಗಳನ್ನು ನಿಯಂತ್ರಿಸುತ್ತದೆ. ಮಾನವ ಭ್ರೂಣಗಳು ಮತ್ತು ಲಿಂಗಾಣುಗಳ ಮಾರಾಟ ಮತ್ತು ಖರೀದಿ ಸೇರಿದಂತೆ ವಾಣಿಜ್ಯ ಬಾಡಿಗೆ ತಾಯ್ತನವನ್ನು ನಿಷೇಧಿಸಲಾಗುವುದು. ಭಾರತೀಯ ವಿವಾಹಿತ ದಂಪತಿಗಳಿಗೆ, ಭಾರತೀಯ ಮೂಲದ ವಿವಾಹಿತ ದಂಪತಿಗಳು ಮತ್ತು ಭಾರತೀಯ ಒಂಟಿ ಮಹಿಳೆ (ವಿಧವೆ ಅಥವಾ ವಿಚ್ಛೇದಿತ)ಯರಿಗೆ ಷರತ್ತುಗಳನ್ನು ಪೂರೈಸಿದ ನಂತರ ನೈತಿಕ ಬಾಡಿಗೆ ತಾಯ್ತನಕ್ಕೆ ಅನುಮತಿ ನೀಡಲಾಗುವುದು. ಹಾಗೆಯೇ ಇದು ಬಾಡಿಗೆ ತಾಯ್ತನದಲ್ಲಿರುವ ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ, ಸರೊಗಸಿ ವಾಣಿಜ್ಯೀಕರಣವನ್ನು ತಡೆಯುತ್ತದೆ ಮತ್ತು ಬಾಡಿಗೆ ತಾಯಂದಿರು ಮತ್ತು ಬಾಡಿಗೆ ತಾಯ್ತನದ ಮೂಲಕ ಜನಿಸಿದ ಮಕ್ಕಳ ಶೋಷಣೆಯನ್ನು ತಡೆಯುತ್ತದೆ.
ವೈದ್ಯಕೀಯ ಗರ್ಭಪಾತ ತಿದ್ದುಪಡಿ ಮಸೂದೆ -2020
ನೋಂದಾಯಿತ ವೈದ್ಯರಿಂದ ಕೆಲವು ಗರ್ಭಪಾತಗಳಿಗೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಿಗಾಗಿ ವೈದ್ಯಕೀಯ ಗರ್ಭಪಾತ ಕಾಯ್ದೆ 1971 (1971 ರ 34) ಅನ್ನು ಜಾರಿಗೆ ತರಲಾಯಿತು. ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಗರ್ಭಪಾತ ಮಾಡಿಸಿಕೊಳ್ಳಬೇಕಾದ ಮಹಿಳೆಯರಿಗೆ ಸುರಕ್ಷಿತ, ಕೈಗೆಟುಕುವ, ಗರ್ಭಪಾತ ಸೇವೆಗಳನ್ನು ಈ ಕಾಯ್ದೆ ಒದಗಿಸಿದೆ. ಇದಲ್ಲದೆ, ಲೈಂಗಿಕ ದೌರ್ಜನ್ಯ, ಭ್ರೂಣದ ವೈಪರೀತ್ಯಗಳು ಅಥವಾ ಗರ್ಭಧಾರಣೆಯ ಅವಧಿಯ ಆಧಾರದ ಮೇಲೆ ಗರ್ಭಪಾತ ಮಾಡಿಸಲು ಪ್ರಸ್ತುತ ಇರುವ ಮಿತಿಯನ್ನು ಮೀರಿ ಅನುಮತಿ ಕೋರಿ ಹಲವಾರು ರಿಟ್ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್‌ಗಳಿಗೆ ಸಲ್ಲಿಸಲಾಗಿದೆ.
ಒಟ್ಟಾರೆಯಾಗಿ, ಈ ಮೂರು ಪ್ರಸ್ತಾವಿತ ಕಾಯ್ದೆಗಳು ಮಹಿಳೆಯರ ಸಂತಾನೋತ್ಪತ್ತಿ ಹಕ್ಕುಗಳ ರಕ್ಷಣೆಯ ವಾತಾವರಣವನ್ನು ಸೃಷ್ಟಿಸುತ್ತವೆ. ಬದಲಾಗುತ್ತಿರುವ ಸಾಮಾಜಿಕ ಸಂದರ್ಭಗಳನ್ನು ಮತ್ತು ತಾಂತ್ರಿಕ ಪ್ರಗತಿಯನ್ನು ಬಗೆಹರಿಸುತ್ತವೆ.
******