Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ವಿಜಯ್ ವಲ್ಲಭ್ ಸುರೀಶ್ವರ್ ಅವರ 150ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿಡಿಯೋ ಸಂದೇಶದ ಮೂಲಕ ಪ್ರಧಾನ ಮಂತ್ರಿಯವರ ಭಾಷಣ 

ಶ್ರೀ ವಿಜಯ್ ವಲ್ಲಭ್ ಸುರೀಶ್ವರ್ ಅವರ 150ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿಡಿಯೋ ಸಂದೇಶದ ಮೂಲಕ ಪ್ರಧಾನ ಮಂತ್ರಿಯವರ ಭಾಷಣ 


 

“ಅಪರಿಗ್ರಹವು ಕೇವಲ ವೈರಾಗ್ಯ ಮಾತ್ರವಲ್ಲ, ಎಲ್ಲಾ ರೀತಿಯ ವ್ಯಾಮೋಹವನ್ನು ನಿಯಂತ್ರಿಸುತ್ತದೆ”

‘ಶಾಂತಿಯ ಪ್ರತಿಮೆ’ ಮತ್ತು ‘ಏಕತಾ ಪ್ರತಿಮೆ’ ಕೇವಲ ಎತ್ತರದ ಪ್ರತಿಮೆಗಳಲ್ಲ, ಅವು ʻಏಕ್ ಭಾರತ್, ಶ್ರೇಷ್ಠ ಭಾರತ್‌ʼನ ಶ್ರೇಷ್ಠ ಸಂಕೇತಗಳಾಗಿವೆ

“ಒಂದು ದೇಶದ ಸಮೃದ್ಧಿ ಅದರ ಆರ್ಥಿಕ ಸಮೃದ್ಧಿಯ ಮೇಲೆ ಅವಲಂಬಿತವಾಗಿರುತ್ತದೆ. ದೇಶೀಯ ಉತ್ಪನ್ನಗಳನ್ನು ಬಳಸುವ ಮೂಲಕ ಭಾರತದ ಕಲೆ, ಸಂಸ್ಕೃತಿ ಮತ್ತು ನಾಗರಿಕತೆಯನ್ನು ಜೀವಂತವಾಗಿರಿಸಬಹುದು

“ಸ್ವದೇಶಿ ಮತ್ತು ಸ್ವಾವಲಂಬನೆಯ ಸಂದೇಶವು ʻಆಜಾದಿ ಕಾ ಅಮೃತಕಾಲʼದಲ್ಲಿ ಅತ್ಯಂತ ಪ್ರಸ್ತುತವಾಗಿದೆ”

“ಆಜಾದಿ ಕಾ ಅಮೃತ ಕಾಲದಲ್ಲಿ, ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವತ್ತ ಸಾಗುತ್ತಿದ್ದೇವೆ”

“ನಾಗರಿಕ ಕರ್ತವ್ಯಗಳನ್ನು ಸಶಕ್ತಗೊಳಿಸುವಲ್ಲಿ ಸಂತರ ಮಾರ್ಗದರ್ಶನವು ಸದಾ ಮಹತ್ವವಾದುದು”

ಶ್ರೀ ವಿಜಯ್ ವಲ್ಲಭ್ ಸುರೀಶ್ವರ್ ಅವರ 150 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಸಭಿಕರನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತದಲ್ಲಿನ ಸಂತ ಪರಂಪರೆಯ ಧ್ವಜದಾರಿಗಳಿಗೆ ಮತ್ತು ವಿಶ್ವದಾದ್ಯಂತದ ಎಲ್ಲಾ ಜೈನ ಧರ್ಮ ಅನುಯಾಯಿಗಳಿಗೆ ತಲೆಬಾಗಿ ನಮಸ್ಕರಿಸಿದರು. ಅಸಂಖ್ಯಾತ ಸಂತರ ಜತೆಗಿರುವ ಮತ್ತು ಅವರ ಆಶೀರ್ವಾದವನ್ನು ಪಡೆಯಯುವ ಅವಕಾಶ ದೊರೆತಿದ್ದಕ್ಕೆ ಶ್ರೀ ಮೋದಿ ಅವರು ಸಂತೋಷ ವ್ಯಕ್ತಪಡಿಸಿದರು. ಗುಜರಾತ್‌ನ ವಡೋದರಾ ಮತ್ತು ಛೋಟಾ ಉದಯಪುರದ ಕನ್ವತ್ ಗ್ರಾಮದಲ್ಲಿ ಸಂತವಾಣಿ ಆಲಿಸುವ ಅವಕಾಶ ತಮಗೆ ದೊರೆತದ್ದನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. 

ಆಚಾರ್ಯ ಶ್ರೀ ವಿಜಯ್ ವಲ್ಲಭ್ ಸುರೀಶ್ವರ್ ಜೀ ಅವರ 150ನೇ ಜನ್ಮ ವರ್ಷಾಚರಣೆಯ ಪ್ರಾರಂಭವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಆಚಾರ್ಯ ಜೀ ಮಹಾರಾಜ್ ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಸುಯೋಗದ ಬಗ್ಗೆ ಮಾಹಿತಿ ನೀಡಿದರು. “ಇಂದು ಮತ್ತೊಮ್ಮೆ ನಾನು ತಂತ್ರಜ್ಞಾನದ ಸಹಾಯದಿಂದ ಸಂತರ ಸಂಗದಲ್ಲಿದ್ದೇನೆ,ʼʼ ಎಂದು ಪ್ರಧಾನಿ ಹೇಳಿದರು. ಆಚಾರ್ಯ ಶ್ರೀ ವಿಜಯ್ ವಲ್ಲಭ್ ಸುರೀಶ್ವರ್ ಜೀ ಅವರ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಇಂದು ಬಿಡುಗಡೆ ಮಾಡಲಾಗಿದೆ. ಆಚಾರ್ಯ ಶ್ರೀ ವಿಜಯ್ ವಲ್ಲಭ್ ಸುರೀಶ್ವರ್ ಮಹಾರಾಜ್ ಸಾಹಿಬ್ ಅವರ ಜೀವನ ತತ್ವ ಮತ್ತು ಆಧ್ಯಾತ್ಮಿಕ ಪ್ರಜ್ಞೆಗೆ ಜನಸಾಮಾನ್ಯರನ್ನು ಸಂಪರ್ಕಿಸುವ ಉದ್ದೇಶದಿಂದ ಇವುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಎರಡು ವರ್ಷಗಳ ಸುದೀರ್ಘ ಆಚರಣೆಗಳು ಈಗ ಸಂಪನ್ನಗೊಳ್ಳುತ್ತಿವೆ. ನಂಬಿಕೆ, ಆಧ್ಯಾತ್ಮಿಕತೆ, ದೇಶಭಕ್ತಿ ಮತ್ತು ರಾಷ್ಟ್ರೀಯ ಶಕ್ತಿಯನ್ನು ಉದ್ದೀಪಿಸಲು ಪ್ರಾರಂಭಿಸಲಾದ ಈ ಅಭಿಯಾನವು ಪ್ರಶಂಸನೀಯವಾದುದು  ಎಂದು ಪ್ರಧಾನಿ ಹೇಳಿದರು.

ವಿಶ್ವದ ಪ್ರಸ್ತುತ ಭೌಗೋಳಿಕ ರಾಜಕೀಯ ಸನ್ನಿವೇಶದ ಬಗ್ಗೆ ಮಾತನಾಡಿದ ಪ್ರಧಾನಿ, “ಇಂದು ಜಗತ್ತು ಯುದ್ಧ, ಭಯೋತ್ಪಾದನೆ ಮತ್ತು ಹಿಂಸೆಯ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಈ ವಿಷವರ್ತುಲದಿಂದ ಹೊರಬರಲು ಸ್ಫೂರ್ತಿ ಮತ್ತು ಪ್ರೋತ್ಸಾಹವನ್ನು ಜಗತ್ತು ಎದುರು ನೋಡುತ್ತಿದೆ,” ಎಂದು ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ, ಪ್ರಾಚೀನ ಸಂಪ್ರದಾಯಗಳು ಮತ್ತು ತತ್ವಗಳು ಹಾಗೂ ಇಂದಿನ ಭಾರತದ ಶಕ್ತಿಯು ವಿಶ್ವಕ್ಕೆ ದೊಡ್ಡ ಭರವಸೆಯಾಗಿ ಬದಲಾಗುತ್ತಿವೆ ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು. ಆಚಾರ್ಯ ಶ್ರೀ ವಿಜಯ್ ವಲ್ಲಭ್ ಸುರೀಶ್ವರ್ ಅವರು ತೋರಿದ ಮಾರ್ಗ ಮತ್ತು ಜೈನ ಗುರುಗಳ ಬೋಧನೆಗಳು ಈ ಜಾಗತಿಕ ಬಿಕ್ಕಟ್ಟಿಗೆ ಪರಿಹಾರವಾಗಿದೆ ಎಂದು ಅವರು ಹೇಳಿದರು. “ಆಚಾರ್ಯ ಜೀ ಅವರು ಅಹಿಂಸೆ, ಏಕಾಂತ ಮತ್ತು ವೈರಾಗ್ಯದ ಜೀವನವನ್ನು ನಡೆಸಿದರು. ಈ ವಿಚಾರಗಳ ಬಗ್ಗೆ ಜನರಲ್ಲಿ ನಂಬಿಕೆಯನ್ನು ಹರಡಲು ನಿರಂತರ ಪ್ರಯತ್ನಗಳನ್ನು ಮಾಡಿದರು, ಇದು ನಮಗೆಲ್ಲರಿಗೂ ಸ್ಪೂರ್ತಿದಾಯಕವಾಗಿದೆ,” ಎಂದು ಶ್ರೀ ಮೋದಿ ಹೇಳಿದರು. ವಿಭಜನೆಯ ಭಯಾನಕತೆಯ ಸಮಯದಲ್ಲಿಯೂ ಶಾಂತಿ ಮತ್ತು ಸೌಹಾರ್ದತೆಯ ಬಗ್ಗೆ ಆಚಾರ್ಯ ಜೀ ಅವರ ಒತ್ತಾಯವು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಕಾರಣಕ್ಕಾಗಿಯೇ ಆಚಾರ್ಯ ಶ್ರೀಗಳು ಚಾತುರ್ಮಾಸ ಉಪವಾಸವನ್ನು ಮುರಿಯಬೇಕಾಯಿತು ಎಂದರು. ಸ್ವಾತಂತ್ರ್ಯ ಚಳವಳಿಯಲ್ಲಿ ಆಚಾರ್ಯರು ಹಾಕಿಕೊಟ್ಟ ‘ಅಪರಿಗ್ರಹ’ದ ಮಾರ್ಗವನ್ನು ಅಳವಡಿಸಿಕೊಂಡ ಮಹಾತ್ಮಾ ಗಾಂಧಿಯವರೊಂದಿಗೆ ಪ್ರಧಾನಮಂತ್ರಿಯವರು ಹೋಲಿಕೆ ಮಾಡಿದರು. “ಅಪರಿಗ್ರಹವು ಕೇವಲ ವೈರಾಗ್ಯ ಮಾತ್ರವಲ್ಲ, ಎಲ್ಲಾ ರೀತಿಯ ವ್ಯಾಮೋಹವನ್ನು ನಿಯಂತ್ರಿಸುತ್ತದೆ,”  ಎಂದರು.

ಗಚ್ಚಾಧಿಪತಿ ಜೈನಾಚಾರ್ಯ ಶ್ರೀ ವಿಜಯ್ ನಿತ್ಯಾನಂದ್ ಸುರೀಶ್ವರ್ ಜೀ ಅವರು ಉಲ್ಲೇಖಿಸಿದಂತೆ, ಗುಜರಾತ್ ರಾಜ್ಯವು ದೇಶಕ್ಕೆ ಎರಡು ವಲ್ಲಭಗಳನ್ನು ನೀಡಿದೆ ಎಂದು ಪ್ರಧಾನಮಂತ್ರಿಯವರು ಗಮನಸೆಳೆದರು. “ಇಂದು ಆಚಾರ್ಯ ಜೀ ಅವರ 150ನೇ ಜನ್ಮ ವಾರ್ಷಿಕೋತ್ಸವದ ಆಚರಣೆಗಳು ಸಂಪನ್ನಗೊಳ್ಳುತ್ತಿರುವುದು ಕಾಕತಾಳೀಯವಾಗಿದೆ, ಮತ್ತು ಕೆಲವು ದಿನಗಳ ನಂತರ ನಾವು ಸರ್ದಾರ್ ಪಟೇಲ್ ಅವರ ಜನ್ಮದಿನವಾದ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಿದ್ದೇವೆ” ಎಂದು ಅವರು ಹೇಳಿದರು. ‘ಶಾಂತಿಯ ಪ್ರತಿಮೆ’ ಸಂತರ ಅತಿದೊಡ್ಡ ಪ್ರತಿಮೆಗಳಲ್ಲಿ ಒಂದಾಗಿದೆ ಮತ್ತು ‘ಏಕತಾ ಪ್ರತಿಮೆ’ಯು ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. “ಇವು ಕೇವಲ ಎತ್ತರದ ಪ್ರತಿಮೆಗಳಷ್ಟೇ ಅಲ್ಲ, ಅವು ʻಏಕ್ ಭಾರತ್, ಶ್ರೇಷ್ಠ ಭಾರತ್‌ʼನ ಶ್ರೇಷ್ಠ ಸಂಕೇತವೂ ಹೌದು,” ಎಂದು ಶ್ರೀ ಮೋದಿ ಬಣ್ಣಿಸಿದರು. ಇಬ್ಬರು ವಲ್ಲಭರ ಕೊಡುಗೆಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ರಾಜಪ್ರಭುತ್ವಗಳಾಗಿ ವಿಭಜಿಸಲ್ಪಟ್ಟಿದ್ದ ಭಾರತವನ್ನು ಸರ್ದಾರ್ ಸಾಹೇಬರು ಒಂದುಗೂಡಿಸಿದ್ದರು, ಆಚಾರ್ಯ ಜೀ ಅವರು ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿ ಭಾರತದ ಏಕತೆ, ಸಮಗ್ರತೆ ಮತ್ತು ಸಂಸ್ಕೃತಿಯನ್ನು ಬಲಪಡಿಸಿದರು ಎಂದು ಪ್ರಧಾನಿ ಒತ್ತಿ ಹೇಳಿದರು. 

ಧಾರ್ಮಿಕ ಸಂಪ್ರದಾಯ ಮತ್ತು ದೇಶೀಯ ಉತ್ಪನ್ನಗಳನ್ನು ಏಕಕಾಲದಲ್ಲಿ ಹೇಗೆ ಉತ್ತೇಜಿಸಬಹುದು ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, “ಒಂದು ದೇಶದ ಸಮೃದ್ಧಿ ಅದರ ಆರ್ಥಿಕ ಸಮೃದ್ಧಿಯ ಮೇಲೆ ಅವಲಂಬಿತವಾಗಿದೆ. ದೇಶೀಯ ಉತ್ಪನ್ನಗಳನ್ನು ಬಳಸುವ ಮೂಲಕ ಭಾರತದ ಕಲೆ, ಸಂಸ್ಕೃತಿ ಮತ್ತು ನಾಗರಿಕತೆಯನ್ನು ಜೀವಂತವಾಗಿಡಬಹುದು,” ಎಂದು ಹೇಳಿದರು. ಆಚಾರ್ಯ ಜೀ ಅವರ ವಸ್ತ್ರಗಳು ಶ್ವೇತವರ್ಣದ್ದು ಮತ್ತು ಸದಾ ಖಾದಿಯನ್ನು ಧರಿಸುತ್ತಿದ್ದರು ಎಂದು ಅವರು ಮಾಹಿತಿ ನೀಡಿದರು. ಸ್ವದೇಶಿ ಮತ್ತು ಸ್ವಾವಲಂಬನೆಯ ಸಂದೇಶವು ʻಆಜಾದಿ ಕಾ ಅಮೃತಕಾಲʼದಲ್ಲಿ ಅತ್ಯಂತ ಪ್ರಸ್ತುತವಾಗಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. “ಇದು ಸ್ವಾವಲಂಬಿ ಭಾರತದ ಪ್ರಗತಿಯ ಮಂತ್ರವಾಗಿದೆ. ಆದ್ದರಿಂದ, ಆಚಾರ್ಯ ವಿಜಯ್ ವಲ್ಲಭ್ ಸುರೀಶ್ವರ್ ಜೀ ಅವರಿಂದ ಹಿಡಿದು ಈಗಿನ ಗಚ್ಚಾಧಿಪತಿ ಆಚಾರ್ಯ ಶ್ರೀ ನಿತ್ಯಾನಂದ ಸುರೀಶ್ವರ್ ಜೀ ಅವರವರೆಗೆ, ಈ ಮಾರ್ಗವನ್ನು ಬಲಪಡಿಸಲಾಗಿದೆ, ನಾವು ಅದನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದು ಮೋದಿ ಹೇಳಿದರು.

ಈ ಹಿಂದೆ ಆಚಾರ್ಯರು ಬೆಳೆಸಿದ ಸಮಾಜ ಕಲ್ಯಾಣ, ಮಾನವ ಸೇವೆ, ಶಿಕ್ಷಣ ಮತ್ತು ಸಾರ್ವಜನಿಕ ಪ್ರಜ್ಞೆಯ ಶ್ರೀಮಂತ ಪರಂಪರೆ ವಿಸ್ತರಿಸುತ್ತಲೇ ಸಾಗಬೇಕು ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. “ಆಜಾದಿ ಕಾ ಅಮೃತಕಾಲದಲ್ಲಿ, ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವತ್ತ ಸಾಗುತ್ತಿದ್ದೇವೆ”, ಎಂದು ಹೇಳಿದ ಮೋದಿ ಅವರು, “ಇದಕ್ಕಾಗಿ ದೇಶವು ಐದು ಪ್ರತಿಜ್ಞೆಗಳನ್ನು ಕೈಗೊಂಡಿದೆ ಮತ್ತು ಸಂತರ ಪಾತ್ರವು ‘ಪಂಚ್ ಪ್ರಾಣ್’ ಅನ್ನು ಸಾಧಿಸುವಲ್ಲಿ ಮುಂಚೂಣಿಯಲ್ಲಿದೆ,” ಎಂದರು. ನಾಗರಿಕ ಕರ್ತವ್ಯಗಳನ್ನು ಸಶಕ್ತಗೊಳಿಸುವಲ್ಲಿ ಸಂತರ ಮಾರ್ಗದರ್ಶನವು ಸದಾ ಮಹತ್ವದ್ದಾಗಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ‘ವೋಕಲ್ ಫಾರ್ ಲೋಕಲ್’ ಪ್ರಚಾರದಲ್ಲಿ ಆಚಾರ್ಯರ ಪಾತ್ರವನ್ನು ಅವರು ಒತ್ತಿ ಹೇಳಿದರು ಮತ್ತು ಇದು ಅವರ ಕಡೆಯಿಂದ ರಾಷ್ಟ್ರಕ್ಕೆ ದೊಡ್ಡ ಸೇವೆಯಾಗಲಿದೆ ಎಂದು ಹೇಳಿದರು. “ನಿಮ್ಮ ಅನುಯಾಯಿಗಳಲ್ಲಿ ಹೆಚ್ಚಿನವರು ವ್ಯವಹಾರಕ್ಕೆ ಸಂಬಂಧಿಸಿದವರು,” ಎಂದು ಹೇಳಿದ ಪ್ರಧಾನಮಂತ್ರಿಯವರು, ಭಾರತದಲ್ಲಿ ಮಾತ್ರ ತಯಾರಾದ ಸರಕುಗಳಲ್ಲಿ ವ್ಯಾಪಾರ ಮಾಡುವ ಪ್ರತಿಜ್ಞೆಯನ್ನು ಕೈಗೊಳ್ಳುವಂತೆ ಅವರನ್ನು ಒತ್ತಾಯಿಸಿದರು. ಹಾಗೆ ಮಾಡಿದಲ್ಲಿ ಇದು ಮಹಾರಾಜ್ ಸಾಹಿಬ್ ಅವರಿಗೆ ಸಲ್ಲಿಸುವ ದೊಡ್ಡ ಗೌರವವಾಗಲಿದೆ ಎಂದು ಹೇಳಿದರು. “ಆಚಾರ್ಯ ಶ್ರೀಗಳು ನಮಗೆ ಈ ಪ್ರಗತಿಯ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ ಮತ್ತು ನಾವು ಅದನ್ನು ಭವಿಷ್ಯಕ್ಕಾಗಿ ಮುನ್ನಡೆಸುವುದನ್ನು ಮುಂದುವರಿಸೋಣ” ಎಂದು ಪ್ರಧಾನ ಮಂತ್ರಿ ಅವರು ಮಾತು ಮುಗಿಸಿದರು. 

*****