Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ’ ಟ್ರಸ್ಟ್ ಸ್ಥಾಪಿಸುವುದಾಗಿ ಪ್ರಧಾನಿ


ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಉಸ್ತುವಾರಿಗಾಗಿ ಟ್ರಸ್ಟ್ವೊಂದನ್ನು ನೇಮಿಸುವುದಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಸಂಸತ್ತಿನಲ್ಲಿ ಘೋಷಿಸಿದರು.

“ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ನಮ್ಮ ಸರ್ಕಾರ ಇಂದು ‘ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ’ ಟ್ರಸ್ಟ್ ಅನ್ನು ನೇಮಿಸಲು ಸಮ್ಮತಿ ಸೂಚಿಸಿದೆ. ಈ ಟ್ರಸ್ಟ್ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ಕೈಗೊಳ್ಳಲು ಸ್ವಾತಂತ್ರ್ಯ ನೀಡಲಾಗಿದೆ” ಎಂದು ಪ್ರಧಾನಮಂತ್ರಿಗಳು ತಿಳಿಸಿದರು.

ಅಯೋಧ್ಯೆ ವಿವಾದ ಕುರಿತು ಸರ್ವೋಚ್ಚ ನ್ಯಾಯಾಲಯ ತೆಗೆದುಕೊಂಡ ಐತಿಹಾಸಿಕ ತೀರ್ಪಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲಾಗಿದೆ

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ, ಕೇಂದ್ರ ಸರ್ಕಾರವು 5 ಎಕರೆ ಭೂಮಿಯನ್ನು ಸುನ್ನಿ ವಕ್ಫ ಬೋರ್ಡ್ ಗೆ ನೀಡಲು ಉತ್ತರ ಪ್ರದೇಶ ಸರ್ಕಾರವನ್ನು ಕೋರಿತ್ತು ಮತ್ತು ರಾಜ್ಯ ಸರ್ಕಾರ ಈ ಮನವಿಯನ್ನು ಅಂಗೀಕರಿಸಿದೆ.

ಶ್ರೀ ರಾಮ ಮತ್ತು ಅಯೋಧ್ಯೆಯೊಂದಿಗೆ ಭಾರತೀಯರ ಚೈತನ್ಯ, ಹುರುಪು, ಆದರ್ಶ ಮತ್ತು ಸಂಸ್ಕೃತಿ ಮಿಲನವಾಗಿದ್ದು, ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಪಡೆದಿದೆ.

“ಬೃಹತ್ ರಾಮ ಮಂದಿರ ನಿರ್ಮಾಣ ಮತ್ತು ಭವಿಷ್ಯದಲ್ಲಿ ರಾಮಲಲ್ಲಾಗೆ ತಮ್ಮ ಭಕ್ತಿಯನ್ನು ಸಮರ್ಪಿಸಲು ಬರುವ ಭಕ್ತಾದಿಗಳ ಉತ್ಸಾಹವನ್ನು ಪರಿಗಣನೆಗೆ ತೆಗೆದುಕೊಂಡು, ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸಂಪೂರ್ಣ ಅಂದರೆ ಸುಮಾರು 67.703 ಎಕರೆಗಳಷ್ಟು ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ ವರ್ಗಾಯಿಸಲಾಗುವುದು” ಎಂದು ಪ್ರಧಾನಮಂತ್ರಿಗಳು ಹೇಳಿದರು.

ಭಾರತದ ಜನತೆಯ ಗುಣಧರ್ಮವನ್ನು ಪ್ರಶಂಸಿಸಿದ ಪ್ರಧಾನಮಂತ್ರಿ

ಅಯೋಧ್ಯೆ ವಿವಾದದ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗೌರವಿಸಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಲ್ಲಿ ದೇಶದ ಜನತೆ ತೋರಿದ ಪ್ರಬುದ್ಧತೆಯನ್ನು ಪ್ರಧಾನಮಂತ್ರಿಗಳು ಪ್ರಶಂಸಿಸಿದರು.

ಪ್ರತ್ಯೇಕ ಟ್ವೀಟ್ ವೊಂದರಲ್ಲಿ ಈ ಮಾತನ್ನೇ ಒತ್ತಿ ಹೇಳಿದ ಪ್ರಧಾನ ಮಂತ್ರಿಯವರು “ಭಾರತದ ಜನತೆ ಪ್ರಜಾಸತ್ತಾತ್ಮಕತೆಯ ಪ್ರಕ್ರಿಯೆಗಳು ಮತ್ತು ಕಾರ್ಯವಿಧಾನಗಳ ಮೇಲೆ ಗಮನಾರ್ಹ ನಂಬಿಕೆ ತೋರಿದ್ದಾರೆ” ನಾನು 130 ಕೋಟಿ ಭಾರತೀಯರಿಗೆ ವಂದಿಸುತ್ತೇನೆ ಎಂದು ಹೇಳಿದ್ದಾರೆ.

ಭಾರತದಲ್ಲಿರುವ ಎಲ್ಲ ಸಮುದಾಯದವರು ಒಂದು ದೊಡ್ಡ ಕುಟುಂಬದ ಸದಸ್ಯರು

ನಾವೆಲ್ಲ ಒಂದೇ ಕುಟುಂಬದ ಸದಸ್ಯರು. ಇದು ಭಾರತದ ಸಂಪ್ರದಾಯ. ಪ್ರತಿಯೊಬ್ಬ ಭಾರತೀಯನೂ ಸಂತೋಷ ಮತ್ತು ಆರೋಗ್ಯದಿಂದಿರಬೇಕು ಎಂದು ನಾವು ಬಯಸುತ್ತೇವೆ. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಎಂಬ ಧ್ಯೇಯದೊಂದಿಗೆ ನಾವು ಪ್ರತಿಯೊಬ್ಬ ಭಾರತೀಯರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದೇವೆ ಎಂದು ಪ್ರಧಾನಮಂತ್ರಿಗಳು ಹೇಳಿದರು.

“ಬೃಹತ್ ರಾಮ ಮಂದಿರ ನಿರ್ಮಾಣಕ್ಕೆ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ” ಎಂದು ಕೂಡಾ ಪ್ರಧಾನಮಂತ್ರಿಯವರು ಹೇಳಿದರು.

*****