Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ಅರಬಿಂದೋ ಅವರ 150ನೇ ಜನ್ಮದಿನಾಚರಣೆಯ ಸ್ಮರಣಾರ್ಥ ಕಾರ್ಯಕ್ರಮವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಮಂತ್ರಿ ಭಾಷಣ 

ಶ್ರೀ ಅರಬಿಂದೋ ಅವರ 150ನೇ ಜನ್ಮದಿನಾಚರಣೆಯ ಸ್ಮರಣಾರ್ಥ ಕಾರ್ಯಕ್ರಮವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಮಂತ್ರಿ ಭಾಷಣ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪುದುಚೇರಿಯ ಕಂಬನ್ ಕಲೈ ಸಂಗಮದಲ್ಲಿ ಶ್ರೀ ಅರಬಿಂದೋ ಅವರ 150ನೇ ಜನ್ಮ ವರ್ಷಾಚರಣೆಯ ಕಾರ್ಯಕ್ರಮದಲ್ಲಿ  ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು. ಪ್ರಧಾನಮಂತ್ರಿಯವರು ಶ್ರೀ ಅರಬಿಂದೋ ಅವರ ಗೌರವಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಶ್ರೀ ಅರಬಿಂದೋ ಅವರ 150ನೇ ಜಯಂತಿಯನ್ನು ವರ್ಷವಿಡೀ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತಿರುವ ಸಂದರ್ಭದ ಮಹತ್ವವನ್ನು ಒತ್ತಿ ಹೇಳಿದರು.ಅವರ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡುವ ಮೂಲಕ ರಾಷ್ಟ್ರವು ಶ್ರೀ ಅರಬಿಂದೋ ಅವರಿಗೆ ಗೌರವ ಸಲ್ಲಿಸುತ್ತಿದೆ ಎಂದೂ ಪ್ರಧಾನಮಂತ್ರಿ ಅವರು ಹೇಳಿದರು. ರಾಷ್ಟ್ರದ ಇಂತಹ ಪ್ರಯತ್ನಗಳು ಭಾರತದ ನಿರ್ಣಯಗಳಿಗೆ ಹೊಸ ಶಕ್ತಿ ಮತ್ತು ಬಲವನ್ನು ನೀಡುತ್ತವೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ಅವರು ವ್ಯಕ್ತಪಡಿಸಿದರು. 

ಏಕಕಾಲದಲ್ಲಿ ಹಲವಾರು ಮಹಾನ್ ಘಟನೆಗಳು ನಡೆದಾಗ, ಅಲ್ಲಿ  ‘ಯೋಗ-ಶಕ್ತಿ’ ಇರುತ್ತದೆ. ಅಂದರೆ ಅವುಗಳ ಹಿಂದೆ ಸಾಮೂಹಿಕ ಮತ್ತು ಒಗ್ಗೂಡಿಸುವ ಶಕ್ತಿ ಇರುತ್ತದೆ ಎಂದು ಪ್ರಧಾನಿ ಹೇಳಿದರು. ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೊಡುಗೆ ನೀಡಿದುದಲ್ಲದೆ, ರಾಷ್ಟ್ರದ ಆತ್ಮಕ್ಕೆ ಹೊಸ ಜೀವಶಕ್ತಿ ತುಂಬಿದ ಅನೇಕ ಮಹಾನ್ ವ್ಯಕ್ತಿಗಳನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಅವರಲ್ಲಿ, ಶ್ರೀ ಅರವಿಂದರು, ಸ್ವಾಮಿ ವಿವೇಕಾನಂದ ಮತ್ತು ಮಹಾತ್ಮಾ ಗಾಂಧಿ ಎಂಬ ಮೂವರು ವ್ಯಕ್ತಿಗಳು ಒಂದೇ ಸಮಯದಲ್ಲಿ ತಮ್ಮ ಜೀವನದಲ್ಲಿ ಅನೇಕ ಮಹಾನ್ ಘಟನೆಗಳನ್ನು ಕಂಡಿದ್ದರು.  ಈ ಘಟನೆಗಳು ಈ ವ್ಯಕ್ತಿಗಳ ಜೀವನವನ್ನು ಬದಲಾಯಿಸಿದ್ದಲ್ಲದೆ, ರಾಷ್ಟ್ರೀಯ ಜೀವನದಲ್ಲಿ ದೂರಗಾಮಿ ಬದಲಾವಣೆಗಳನ್ನು ತಂದವು. 1893ರಲ್ಲಿ ಶ್ರೀ ಅರಬಿಂದೋ ಅವರು ಭಾರತಕ್ಕೆ ಮರಳಿದರು ಮತ್ತು ಅದೇ ವರ್ಷ ಸ್ವಾಮಿ ವಿವೇಕಾನಂದರು ವಿಶ್ವಧರ್ಮಗಳ ಸಂಸತ್ತಿನಲ್ಲಿ ತಮ್ಮ ಅಪ್ರತಿಮ ಭಾಷಣ ಮಾಡಲು ಅಮೆರಿಕಕ್ಕೆ ತೆರಳಿದರು ಎಂದು ಪ್ರಧಾನಮಂತ್ರಿ ಅವರು ವಿವರಿಸಿದರು. ಗಾಂಧೀಜಿಯವರು ಅದೇ ವರ್ಷ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿದ್ದರು, ಇದು ಮಹಾತ್ಮಾ ಗಾಂಧಿಯಾಗಿ ಅವರ ರೂಪಾಂತರದ ಆರಂಭವನ್ನು ಸೂಚಿಸಿತು ಎಂದು ಪ್ರಧಾನಿ ಹೇಳಿದರು. ಶ್ರೀ ಅರವಿಂದರ 150ನೇ ಜನ್ಮವಾರ್ಷಿಕೋತ್ಸವ ಮತ್ತು ನೇತಾಜಿ ಸುಭಾಷ್ ಅವರ 125ನೇ ಜನ್ಮವಾರ್ಷಿಕೋತ್ಸವಕ್ಕೆ ನಾವು ಸಾಕ್ಷಿಯಾಗುತ್ತಿರುವಾಗ ದೇಶವು ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುವ ಮತ್ತು ಅಮೃತ್ ಕಾಲ್ ನ ಪ್ರಯಾಣವನ್ನು ಪ್ರಾರಂಭಿಸುತ್ತಿರುವ ಪ್ರಸ್ತುತ ಸಮಯದಲ್ಲಿ ಇದೇ ರೀತಿಯ ಘಟನೆಗಳ ಸಂಗಮ ಆಗುತ್ತಿರುವ ಬಗ್ಗೆ  ಅವರು ಗಮನ ಸೆಳೆದರು. “ಪ್ರೇರಣೆ ಮತ್ತು ಕ್ರಿಯೆಗಳು ಸಂಧಿಸಿದಾಗ, ಅಸಾಧ್ಯವೆಂದು ತೋರುವ ಗುರಿಯೂ ಸಹ ಅನಿವಾರ್ಯವಾಗಿ ಈಡೇರುತ್ತದೆ. ಇಂದು ಅಮೃತ್ ಕಾಲ್ ನಲ್ಲಿ ರಾಷ್ಟ್ರದ ಯಶಸ್ಸು ಮತ್ತು ‘ಸಬ್ ಕಾ ಪ್ರಯಾಸ್’ ನಿರ್ಣಯವು ಇದಕ್ಕೆ ಸಾಕ್ಷಿಯಾಗಿದೆ “, “ಎಂದು ಅವರು ನುಡಿದರು.

ಶ್ರೀ ಅರಬಿಂದೋ ಅವರ ಜೀವನವು ‘ಏಕ್ ಭಾರತ್ ಶ್ರೇಷ್ಠ ಭಾರತ’ದ ಪ್ರತಿಬಿಂಬವಾಗಿದೆ, ಏಕೆಂದರೆ ಅವರು ಬಂಗಾಳದಲ್ಲಿ ಜನಿಸಿದರು ಮತ್ತು ಗುಜರಾತಿ, ಬಂಗಾಳಿ, ಮರಾಠಿ, ಹಿಂದಿ ಮತ್ತು ಸಂಸ್ಕೃತ ಸೇರಿದಂತೆ ಅನೇಕ ಭಾಷೆಗಳನ್ನು ಅರಿತಿದ್ದರು ಎಂದು ಪ್ರಧಾನಿ ಹೇಳಿದರು. ಅವರು ತಮ್ಮ ಜೀವನದ ಬಹುಭಾಗವನ್ನು ಗುಜರಾತ್ ಮತ್ತು ಪುದುಚೇರಿಯಲ್ಲಿ ಕಳೆದರು ಮತ್ತು ಅವರು ಹೋದಲ್ಲೆಲ್ಲಾ ಆಳವಾದ ಛಾಪು ಮೂಡಿಸಿದರು ಎಂದರು. ಶ್ರೀ ಅರಬಿಂದೋ ಅವರ ಬೋಧನೆಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ನಾವು ನಮ್ಮ ಸಂಪ್ರದಾಯಗಳು ಮತ್ತು ಸಂಸ್ಕೃತಿಗಳ ಬಗ್ಗೆ ಅರಿತುಕೊಂಡು ಅವುಗಳ ಮೂಲಕ ಬದುಕಲು ಪ್ರಾರಂಭಿಸಿದಾಗ, ಆ ಕ್ಷಣದಲ್ಲಿ ನಮ್ಮ ವೈವಿಧ್ಯತೆಯು ನಮ್ಮ ಜೀವನದ ಸ್ವಾಭಾವಿಕ ಸಹಜ ಆಚರಣೆಯಾಗುತ್ತದೆ ಎಂದು ಹೇಳಿದರು. “ಇದು ಆಜಾದಿ ಕಾ ಅಮೃತ್ ಕಾಲ್ ಗೆ ದೊಡ್ಡ ಸ್ಫೂರ್ತಿಯ ಮೂಲವಾಗಿದೆ. ಏಕ್ ಭಾರತ್ ಶ್ರೇಷ್ಠ ಭಾರತವನ್ನು ವಿವರಿಸಲು ಇದಕ್ಕಿಂತ ಉತ್ತಮ ಮಾರ್ಗ ಬೇರೊಂದಿಲ್ಲ” ಎಂದೂ ಅವರು ಹೇಳಿದರು.

ಕಾಶಿ ತಮಿಳು ಸಂಗಮದಲ್ಲಿ ಭಾಗವಹಿಸುವ ಅವಕಾಶವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಭಾರತವು ತನ್ನ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೂಲಕ ದೇಶವನ್ನು ಹೇಗೆ ಒಗ್ಗೂಡಿಸುತ್ತದೆ ಎಂಬುದಕ್ಕೆ ಈ ಅದ್ಭುತ ಘಟನೆಯು ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು. ಇಂದಿನ ಯುವಜನತೆ ಭಾಷೆ ಮತ್ತು ಉಡುಗೆ-ತೊಡುಗೆಗಳ ಆಧಾರದ ಮೇಲೆ ಆಗುತ್ತಿರುವ ವಿಭಜನೆಯ ರಾಜಕೀಯವನ್ನು ಬಿಟ್ಟು ಏಕ್ ಭಾರತ್ ಶ್ರೇಷ್ಠ ಭಾರತದ ರಾಜಕೀಯವನ್ನು ಅಪ್ಪಿಕೊಳ್ಳುತ್ತಿದ್ದಾರೆ ಎಂಬುದನ್ನು ಕಾಶಿ ತಮಿಳು ಸಂಗಮಂ ತೋರಿಸಿಕೊಟ್ಟಿದೆ. ಇಂದು ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಅಮೃತ್ ಕಾಲ್ ನಲ್ಲಿ ನಾವು ಕಾಶಿ ತಮಿಳು ಸಂಗಮಂನ ಸ್ಫೂರ್ತಿಯನ್ನು ವಿಸ್ತರಿಸಬೇಕಾಗಿದೆ ಎಂದೂ ಅವರು ಹೇಳಿದರು.

ಶ್ರೀ ಅರಬಿಂದೋ ಅವರು ಆಧುನಿಕ ವೈಜ್ಞಾನಿಕ ಮನೋಭಾವ, ರಾಜಕೀಯ ಬಂಡುಕೋರತ್ವ ಮತ್ತು ದೈವಿಕ ಪ್ರಜ್ಞೆ ಹೊಂದಿರುವಂತಹ ವ್ಯಕ್ತಿತ್ವವನ್ನು ಹೊಂದಿದ್ದರು ಎಂಬುದರತ್ತ ಪ್ರಧಾನಮಂತ್ರಿ ಅವರು ಗಮನ ಸೆಳೆದರು. ಬಂಗಾಳದ ವಿಭಜನೆಯ ಸಂದರ್ಭದಲ್ಲಿ ‘ರಾಜಿ ಮಾಡಿಕೊಳ್ಳಬಾರದು’ ಎಂಬ ಅವರ ಘೋಷಣೆಯನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಅವರ ಸೈದ್ಧಾಂತಿಕ ಸ್ಪಷ್ಟತೆ, ಸಾಂಸ್ಕೃತಿಕ ಶಕ್ತಿ ಮತ್ತು ದೇಶಭಕ್ತಿ ಅವರನ್ನು ಅಂದಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾದರಿಯನ್ನಾಗಿ ಮಾಡಿತು. ಆಳವಾದ ತಾತ್ವಿಕ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ  ತೊಡಗಿದ್ದ ಶ್ರೀ ಅರಬಿಂದೋ ಅವರ ಋಷಿಮುನಿಗಳನ್ನು ಹೋಲುವಂತಹ  ಅಂಶಗಳ ಬಗ್ಗೆಯೂ ಶ್ರೀ ಮೋದಿ ಅವರು ಪ್ರಸ್ತಾಪಿಸಿದರು.  ಅವರು ಉಪನಿಷತ್ತುಗಳಿಗೆ ಸಮಾಜ ಸೇವೆಯ ಅಂಶವನ್ನು ಸೇರಿಸಿದರು ಎಂದ ಪ್ರಧಾನ ಮಂತ್ರಿ ಅವರು  ಯಾವುದೇ ಕೀಳರಿಮೆಯ ಭಾವನೆಯಿಲ್ಲದೆ ಅಭಿವೃದ್ಧಿ ಹೊಂದಿದ ಭಾರತದ ನಮ್ಮ ಪ್ರಯಾಣದಲ್ಲಿ ನಾವು ಎಲ್ಲಾ ದೃಷ್ಟಿಕೋನಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ ಎಂದೂ ನುಡಿದರು.  ನಾವು ‘ಭಾರತ ಮೊದಲು’ ಎಂಬ ಮಂತ್ರದೊಂದಿಗೆ ಕೆಲಸ ಮಾಡುತ್ತಿದ್ದೇವೆ ಮತ್ತು ನಮ್ಮ ಪರಂಪರೆಯನ್ನು ಇಡೀ ವಿಶ್ವದ ಮುಂದೆ ಹೆಮ್ಮೆಯಿಂದ ಇಡುತ್ತಿದ್ದೇವೆ ಎಂದವರು ವಿವರಿಸಿದರು. 

ಐದು ಪ್ರತಿಜ್ಞೆಗಳಲ್ಲಿ ಒಂದಾದ “ಗುಲಾಮಗಿರಿಯ ಮನಸ್ಥಿತಿಯಿಂದ ಸ್ವಾತಂತ್ರ್ಯ” ಎಂಬ ಪ್ರತಿಜ್ಞೆಯಲ್ಲಿ ಭಾರತವು ಹೊಂದಿರುವ ಮತ್ತೊಂದು ಶಕ್ತಿಯನ್ನು ಸಾಕಾರಗೊಳಿಸುವುದು ಶ್ರೀ ಅರವಿಂದರ ಜೀವನದ ಧ್ಯೇಯವಾಗಿತ್ತು ಎಂದು ಪ್ರಧಾನಿ ಹೇಳಿದರು.  ಪಾಶ್ಚಾತ್ಯರ ಭಾರೀ ಪ್ರಭಾವದ ನಡುವೆಯೂ, ಶ್ರೀ ಅರಬಿಂದೋ ಅವರು ಭಾರತಕ್ಕೆ ಹಿಂದಿರುಗಿದಾಗ, ಮತ್ತು ಅವರು ಜೈಲಿನಲ್ಲಿದ್ದಾಗ ಗೀತೆಯ ಸಂಪರ್ಕಕ್ಕೆ ಬಂದರು ಮತ್ತು ಅವರು ಭಾರತೀಯ ಸಂಸ್ಕೃತಿಯ ಗಟ್ಟಿ ಧ್ವನಿಯಾಗಿ ಹೊರಹೊಮ್ಮಿದರು ಎಂದು ಅವರು ಹೇಳಿದರು. ರಾಮಾಯಣ, ಮಹಾಭಾರತ ಮತ್ತು ಉಪನಿಷತ್ತುಗಳಿಂದ ಹಿಡಿದು ಕಾಳಿದಾಸ, ಭವಭೂತಿ ಮತ್ತು ಭರ್ತಹರಿಯವರವರೆಗಿನ ಗ್ರಂಥಗಳನ್ನು ಅಧ್ಯಯನ ಮಾಡಿ ಅವರು ಭಾಷಾಂತರಿಸಿದ್ದನ್ನು  ಶ್ರೀ ಮೋದಿ ಅವರು ನೆನಪಿಸಿಕೊಂಡರು. “ಶ್ರೀ ಅರಬಿಂದೋ ಅವರ ಚಿಂತನೆಗಳಲ್ಲಿ ಜನರು ಭಾರತವನ್ನು ನೋಡಿದರು, ಅದೇ ಅರವಿಂದರು ಒಂದೊಮ್ಮೆ ತಮ್ಮ ಯೌವ್ವನದಲ್ಲಿ ಭಾರತೀಯತೆಯಿಂದ ದೂರ ಉಳಿದಿದ್ದರು. ಇದೇ ಭಾರತ ಮತ್ತು ಭಾರತೀಯತೆಯ ನಿಜವಾದ ಶಕ್ತಿ”, ಎಂದು ಪ್ರಧಾನ ಮಂತ್ರಿ ಅವರು  ಹೇಳಿದರು.

“ಪ್ರತಿಕೂಲ ಪರಿಸ್ಥಿತಿಗಳಲ್ಲಿ ಸ್ವಲ್ಪ ದಮನ ಮಾಡಬಹುದಾದ, ಸ್ವಲ್ಪ ಒಣಗಬಹುದಾದ, ಆದರೆ ಅದು ಸಾಯಲು ಸಾಧ್ಯವಿಲ್ಲ ಎಂಬಂತಹ ಅಮರ ಬೀಜ ಭಾರತ” ಎಂದು ವಿವರಿಸಿದ  ಪ್ರಧಾನಮಂತ್ರಿಯವರು ಶ್ರೀಮಂತ ಸಾಂಸ್ಕೃತಿಕ ಇತಿಹಾಸದ ಬಗ್ಗೆ ತಮ್ಮ ಮಾತುಗಳನ್ನು ಮುಂದುವರೆಸಿ “ಭಾರತವು ಮಾನವ ನಾಗರಿಕತೆಯ ಅತ್ಯಂತ ಪರಿಷ್ಕೃತ ಕಲ್ಪನೆಯಾಗಿದೆ, ಇದು ಮನುಕುಲದ ಮಾನವೀಯತೆಯ ಅತ್ಯಂತ ಸ್ವಾಭಾವಿಕ ಧ್ವನಿಯಾಗಿದೆ” ಎಂದು ಹೇಳಿದರು. ಭಾರತದ ಸಾಂಸ್ಕೃತಿಕ ಅಮರತ್ವದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, “ಮಹರ್ಷಿ ಅರವಿಂದರ ಕಾಲದಲ್ಲೂ ಭಾರತ ಅಮರವಾಗಿತ್ತು ಮತ್ತು ಆಜಾದಿ ಕಾ ಅಮೃತ್ ಕಾಲ್ ನಲ್ಲಿ ಇಂದಿಗೂ ಅದು ಅಮರವಾಗಿದೆ” ಎಂದು ಹೇಳಿದರು. ಇಂದಿನ ಜಗತ್ತು ಎದುರಿಸುತ್ತಿರುವ ಭೀಕರ ಸವಾಲುಗಳನ್ನು ಪ್ರಸ್ತಾಪಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು ಮತ್ತು ಈ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ಭಾರತದ ಪಾತ್ರದ ಮಹತ್ವವನ್ನು ಒತ್ತಿ ಹೇಳಿದರು. “ಅದಕ್ಕಾಗಿಯೇ ನಾವು ಮಹರ್ಷಿ ಅರವಿಂದರಿಂದ ಸ್ಫೂರ್ತಿ ಪಡೆದು ಸಬ್ ಕಾ ಪ್ರಯಾಸ್ ಮೂಲಕ ಅಭಿವೃದ್ಧಿ ಹೊಂದಿದ ಭಾರತವನ್ನು ರೂಪಿಸಿ,  ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕು ಎಂದು ಅವರು ನುಡಿದರು.

ಹಿನ್ನೆಲೆ

1872ರ ಆಗಸ್ಟ್ 15ರಂದು ಜನಿಸಿದ ಶ್ರೀ ಅರಬಿಂದೋ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಶಾಶ್ವತ ಕೊಡುಗೆಗಳನ್ನು ನೀಡಿದ ದಾರ್ಶನಿಕರು. ಸ್ವಾತಂತ್ರ್ಯ ದೊರೆತು 75ವರ್ಷಗಳಾಗಿರುವ ಸಂದರ್ಭದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಮೂಲಕ  ಭಾರತದ ಜನತೆ, ಸಂಸ್ಕೃತಿ ಮತ್ತು ಸಾಧನೆಗಳ ಭವ್ಯ ಇತಿಹಾಸವನ್ನು ಆಚರಿಸುವ ಪ್ರಯತ್ನ ಇದಾಗಿದೆ. – ಶ್ರೀ ಅರವಿಂದರ 150 ನೇ ಜನ್ಮ ವರ್ಷಾಚರಣೆಯನ್ನು ದೇಶಾದ್ಯಂತ ವರ್ಷಪೂರ್ತಿ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಾಡಲಾಗುತ್ತಿದೆ

*****