Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀಲಂಕಾ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆಯ ಇಂಗ್ಲಿಷ್ ಅನುವಾದ

ಶ್ರೀಲಂಕಾ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆಯ ಇಂಗ್ಲಿಷ್ ಅನುವಾದ


ಗೌರವಾನ್ವಿತ ಅಧ್ಯಕ್ಷರಾದ, ಅನುರ ಕುಮಾರ ದಿಸನಾಯಕ್,

ಎರಡೂ ದೇಶಗಳ ಪ್ರತಿನಿಧಿಗಳು,

ಮಾಧ್ಯಮದ ಸ್ನೇಹಿತರೇ,

ಶುಭಾಶಯಗಳು!

ನಾನು ಅಧ್ಯಕ್ಷ ದಿಸನಾಯಕ ಅವರನ್ನು ಭಾರತಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಅಧ್ಯಕ್ಷರಾದ ನಂತರ ನೀವು ನಿಮ್ಮ ಮೊದಲ ವಿದೇಶ ಪ್ರವಾಸಕ್ಕೆ ಭಾರತವನ್ನು ಆಯ್ಕೆ ಮಾಡಿರುವುದಕ್ಕೆ ನನಗೆ ಸಂತೋಷವಾಗಿದೆ. ಅಧ್ಯಕ್ಷ ದಿಸನಾಯಕ ಅವರ ಭೇಟಿ ನಮ್ಮ ಸಂಬಂಧದಲ್ಲಿ ಹೊಸ ಚೈತನ್ಯ ಮತ್ತು ಶಕ್ತಿಯನ್ನು ತುಂಬಿದೆ. ನಮ್ಮ ಪಾಲುದಾರಿಕೆಗಾಗಿ ನಾವು ಭವಿಷ್ಯದ ದೃಷ್ಟಿಕೋನವನ್ನು ಅಳವಡಿಸಿಕೊಂಡಿದ್ದೇವೆ. ನಾವು ನಮ್ಮ ಆರ್ಥಿಕ ಪಾಲುದಾರಿಕೆಯಲ್ಲಿ ಹೂಡಿಕೆ ಆಧಾರಿತ ಬೆಳವಣಿಗೆ ಮತ್ತು ಸಂಪರ್ಕಕ್ಕೆ ಒತ್ತು ನೀಡಿದ್ದೇವೆ. ಮತ್ತು ಭೌತಿಕ, ಡಿಜಿಟಲ್ ಹಾಗು ಇಂಧನ ಸಂಪರ್ಕವು ನಮ್ಮ ಪಾಲುದಾರಿಕೆಯ ಪ್ರಮುಖ ಆಧಾರಸ್ತಂಭಗಳಾಗಿರಬೇಕು ಎಂದು ನಿರ್ಧರಿಸಿದ್ದೇವೆ. ಎರಡೂ ರಾಷ್ಟ್ರಗಳ ನಡುವೆ ವಿದ್ಯುತ್-ಗ್ರಿಡ್ ಸಂಪರ್ಕ ಮತ್ತು ಬಹು ಉತ್ಪನ್ನ ಪೆಟ್ರೋಲಿಯಂ ಪೈಪ್ ಲೈನ್ ಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ. ಸಂಪೂರ್ ಸೌರ ವಿದ್ಯುತ್ ಯೋಜನೆಯನ್ನು ತ್ವರಿತಗೊಳಿಸಲಾಗುವುದು. ಹೆಚ್ಚುವರಿಯಾಗಿ, ಶ್ರೀಲಂಕಾದ ವಿದ್ಯುತ್ ಸ್ಥಾವರಗಳಿಗೆ ಎಲ್ ಎನ್ ಜಿ ಪೂರೈಸಲಾಗುವುದು. ದ್ವಿಪಕ್ಷೀಯ ವ್ಯಾಪಾರವನ್ನು ಉತ್ತೇಜಿಸಲು ಇಟಿಸಿಎ ಅನ್ನು ಶೀಘ್ರದಲ್ಲೇ ಸಾಧಿಸಲು ಎರಡೂ ಕಡೆಯವರು ಪ್ರಯತ್ನಿಸುತ್ತಾರೆ.

ಸ್ನೇಹಿತರೇ,

ಇಲ್ಲಿಯವರೆಗೆ, ಭಾರತವು ಶ್ರೀಲಂಕಾಕ್ಕೆ 5 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಅನುದಾನ ಮತ್ತು ಲೈನ್ಸ್ ಆಫ್ ಕ್ರೆಡಿಟ್ ಅನ್ನು ವಿಸ್ತರಿಸಿದೆ. ನಾವು ಶ್ರೀಲಂಕಾದ ಎಲ್ಲಾ 25 ಜಿಲ್ಲೆಗಳಿಗೆ ಬೆಂಬಲ ನೀಡುತ್ತಿದ್ದೇವೆ. ನಮ್ಮ ಯೋಜನೆಗಳನ್ನು ಸದಾ ನಮ್ಮ ಪಾಲುದಾರ ರಾಷ್ಟ್ರಗಳ ಅಭಿವೃದ್ಧಿ ಆದ್ಯತೆಗಳ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಈ ಅಭಿವೃದ್ಧಿ ಬೆಂಬಲವನ್ನು ಮುಂದಕ್ಕೆ ಕೊಂಡೊಯ್ಯಲು, ಮಾಹೋದಿಂದ ಅನುರಾಧಪುರ ರೈಲು ವಿಭಾಗ ಮತ್ತು ಕಂಕೆಸಂತುರೈ ಬಂದರಿಗೆ ಸಿಗ್ನಲಿಂಗ್ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಅನುದಾನ ಬೆಂಬಲವನ್ನು ನೀಡಲು ನಾವು ನಿರ್ಧರಿಸಿದ್ದೇವೆ. ನಮ್ಮ ಶೈಕ್ಷಣಿಕ ಸಹಕಾರದ ಭಾಗವಾಗಿ, ನಾವು ಜಾಫ್ನಾದ 200 ವಿದ್ಯಾರ್ಥಿಗಳಿಗೆ ಮತ್ತು ಶ್ರೀಲಂಕಾದ ಪೂರ್ವ ವಲಯದ ವಿಶ್ವವಿದ್ಯಾಲಯಗಳಿಗೆ ಮಾಸಿಕ ವಿದ್ಯಾರ್ಥಿವೇತನವನ್ನು ಒದಗಿಸುತ್ತೇವೆ. ಮುಂದಿನ ಐದು ವರ್ಷಗಳಲ್ಲಿ ಶ್ರೀಲಂಕಾದ 1500 ನಾಗರಿಕ ಸೇವಕರಿಗೆ ಭಾರತದಲ್ಲಿ ತರಬೇತಿ ನೀಡಲಾಗುವುದು. ವಸತಿ, ನವೀಕರಿಸಬಹುದಾದ ಇಂಧನ ಮತ್ತು ಮೂಲಸೌಕರ್ಯಗಳ ಜೊತೆಗೆ, ಕೃಷಿ, ಹೈನುಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರಗಳಲ್ಲಿಯೂ ಭಾರತವು ಶ್ರೀಲಂಕಾಕ್ಕೆ ತನ್ನ ಬೆಂಬಲವನ್ನು ನೀಡಲಿದೆ. ಶ್ರೀಲಂಕಾದಲ್ಲಿ ನಡೆಯಲಿರುವ ವಿಶಿಷ್ಟ ಡಿಜಿಟಲ್ ಗುರುತಿನ ಯೋಜನೆಯಲ್ಲಿ ಭಾರತ ಪಾಲುದಾರಿಕೆ ಹೊಂದಲಿದೆ.

ಸ್ನೇಹಿತರೇ,

ಅಧ್ಯಕ್ಷ ದಿಸನಾಯಕ ಮತ್ತು ನಾನು ನಮ್ಮ ಭದ್ರತಾ ಹಿತಾಸಕ್ತಿಗಳು ಪರಸ್ಪರ ಸಂಬಂಧ ಹೊಂದಿವೆ ಎಂಬುದನ್ನು ಸಂಪೂರ್ಣ ಒಪ್ಪುತ್ತೇವೆ. ಭದ್ರತಾ ಸಹಕಾರ ಒಪ್ಪಂದವನ್ನು ತ್ವರಿತವಾಗಿ ಅಂತಿಮಗೊಳಿಸಲು ನಾವು ನಿರ್ಧರಿಸಿದ್ದೇವೆ. ಜಲವಿಜ್ಞಾನದಲ್ಲಿ ಸಹಕಾರಕ್ಕೂ ನಾವು ಒಪ್ಪಿದ್ದೇವೆ. ಕೊಲಂಬೊ ಭದ್ರತಾ ಸಮಾವೇಶವು ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಗೆ ಪ್ರಮುಖ ವೇದಿಕೆಯಾಗಿದೆ ಎಂದು ನಾವು ನಂಬುತ್ತೇವೆ. ಈ ಕೊಡೆಯಡಿ ಕಡಲ ಭದ್ರತೆ, ಭಯೋತ್ಪಾದನೆ ನಿಗ್ರಹ, ಸೈಬರ್ ಭದ್ರತೆ, ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧಗಳ ವಿರುದ್ಧ ಹೋರಾಟ, ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ವಿಷಯಗಳಲ್ಲಿ ಬೆಂಬಲವನ್ನು ವಿಸ್ತರಿಸಲಾಗುವುದು.

ಸ್ನೇಹಿತರೇ,

ಭಾರತ ಮತ್ತು ಶ್ರೀಲಂಕಾ ನಡುವಿನ ಜನತೆ ಹಾಗು ಜನತೆಯ ನಡುವಿನ ಸಂಬಂಧವು ನಮ್ಮ ನಾಗರಿಕತೆಗಳಲ್ಲಿ ಬೇರೂರಿದೆ. ಭಾರತವು ಪಾಲಿ ಭಾಷೆಯನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಿದಾಗ, ಶ್ರೀಲಂಕಾ ಆಚರಣೆಯಲ್ಲಿ ನಮ್ಮೊಂದಿಗೆ ಸೇರಿಕೊಂಡಿತು. ದೋಣಿ ಸೇವೆ ಮತ್ತು ಚೆನ್ನೈ-ಜಾಫ್ನಾ ವಿಮಾನ ಸಂಪರ್ಕವು ಪ್ರವಾಸೋದ್ಯಮವನ್ನು ಹೆಚ್ಚಿಸಿದೆ ಮಾತ್ರವಲ್ಲದೆ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸಿದೆ. ನಾಗಪಟ್ಟಿಣಂ – ಕಂಕೆಸಂತುರೈ ದೋಣಿ ಸೇವೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದ ನಂತರ, ನಾವು ರಾಮೇಶ್ವರಂ ಮತ್ತು ತಲೈಮನ್ನಾರ್ ನಡುವೆ ದೋಣಿ ಸೇವೆಯನ್ನು ಪ್ರಾರಂಭಿಸಲು ಜಂಟಿಯಾಗಿ ನಿರ್ಧರಿಸಿದ್ದೇವೆ. ಬೌದ್ಧ ಸರ್ಕ್ಯೂಟ್ ಮತ್ತು ಶ್ರೀಲಂಕಾದ ರಾಮಾಯಣ ಪಥದ ಮೂಲಕ ಪ್ರವಾಸೋದ್ಯಮದಲ್ಲಿನ ಅಪಾರ ಸಾಮರ್ಥ್ಯವನ್ನು ಅರಿತುಕೊಳ್ಳುವ ಕೆಲಸವನ್ನು ಸಹ ಪ್ರಾರಂಭಿಸಲಾಗುವುದು.

ಸ್ನೇಹಿತರೇ,

ನಮ್ಮ ಮೀನುಗಾರರ ಜೀವನೋಪಾಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆಯೂ ನಾವು ಸುದೀರ್ಘವಾಗಿ ಮಾತನಾಡಿದ್ದೇವೆ. ಈ ವಿಷಯದ ಬಗ್ಗೆ ನಾವು ಮಾನವೀಯ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ. ನಾವು ಶ್ರೀಲಂಕಾದಲ್ಲಿ ಪುನರ್ನಿರ್ಮಾಣ ಮತ್ತು ಸಾಮರಸ್ಯದ ಬಗ್ಗೆಯೂ ಮಾತನಾಡಿದ್ದೇವೆ. ಅಧ್ಯಕ್ಷ ದಿಸನಾಯಕ ಅವರು ತಮ್ಮ ಅಂತರ್ಗತ ದೃಷ್ಟಿಕೋನವನ್ನು ನನಗೆ ವಿವರಿಸಿದರು. ಶ್ರೀಲಂಕಾ ಸರ್ಕಾರವು ತಮಿಳು ಜನರ ಆಕಾಂಕ್ಷೆಗಳನ್ನು ಈಡೇರಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಮತ್ತು ಶ್ರೀಲಂಕಾದ ಸಂವಿಧಾನವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಮತ್ತು ಪ್ರಾಂತೀಯ ಮಂಡಳಿ ಚುನಾವಣೆಗಳನ್ನು ನಡೆಸುವ ತಮ್ಮ ಬದ್ಧತೆಯನ್ನು ಅವರು ಪೂರೈಸಬೇಕು.

ಸ್ನೇಹಿತರೇ,

ರಾಷ್ಟ್ರ ನಿರ್ಮಾಣದ ಪ್ರಯತ್ನಗಳಲ್ಲಿ ಭಾರತವು ವಿಶ್ವಾಸಾರ್ಹ ಮತ್ತು ನಂಬಿಕಾರ್ಹ ಪಾಲುದಾರನಾಗಿ ನಿಲ್ಲುತ್ತದೆ ಎಂದು ನಾನು ಅಧ್ಯಕ್ಷ ದಿಸನಾಯಕ ಅವರಿಗೆ ಭರವಸೆ ನೀಡಿದ್ದೇನೆ. ಮತ್ತೊಮ್ಮೆ ನಾನು ಅಧ್ಯಕ್ಷ ದಿಸನಾಯಕ ಮತ್ತು ಅವರ ನಿಯೋಗಕ್ಕೆ ಭಾರತದಲ್ಲಿ ಹಾರ್ದಿಕ ಸ್ವಾಗತ ಕೋರುತ್ತೇನೆ. ಬೋಧಗಯಾಕ್ಕೆ ಅವರ ಭೇಟಿಗಾಗಿ ನಾನು ಅವರಿಗೆ ಶುಭ ಹಾರೈಸುತ್ತೇನೆ ಮತ್ತು ಅದು ಆಧ್ಯಾತ್ಮಿಕ ಶಕ್ತಿ ಮತ್ತು ಸ್ಫೂರ್ತಿಯಿಂದ ತುಂಬಿದೆ ಎಂದು ಭಾವಿಸುತ್ತೇನೆ.

ತುಂಬಾ ಧನ್ಯವಾದಗಳು.

ಘೋಷಣೆಇದು ಪ್ರಧಾನಮಂತ್ರಿಯವರ ಹೇಳಿಕೆಗಳ ಸರಿಸುಮಾರಾದ ಭಾಷಾಂತರವಾಗಿದೆ. ಮೂಲ ಹೇಳಿಕೆಗಳನ್ನು ಹಿಂದಿಯಲ್ಲಿ ನೀಡಲಾಗಿದೆ.

 

*****