ಶ್ರೀಲಂಕಾದ ಅಧ್ಯಕ್ಷ ಘನತೆವೆತ್ತ ಮೈತ್ರಿಪಾಲ ಸಿರಿಸೇನಾ ಅವರು 2019ರ ಮೇ 30ರಂದು ನಡೆದ ಪ್ರಧಾನಮಂತ್ರಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಇಂದು ನಡೆದ ದ್ವಿಪಕ್ಷೀಯ ಸಭೆಯಲ್ಲಿ, ಅಧ್ಯಕ್ಷ ಸಿರಿಸೇನಾ ಅವರು ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ಪಕ್ಷದ ಜಯಭೇರಿಯ ತರುವಾಯ ಮತ್ತೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದರು ಮತ್ತು ವಲಯದಲ್ಲಿನ ಸುರಕ್ಷತೆಗಾಗಿ ಎರಡೂ ರಾಷ್ಟ್ರಗಳ ನಡುವೆ ಶಾಂತಿ, ಸಮೃದ್ಧಿ ಮತ್ತು ಭದ್ರತೆಯ ಬಲವರ್ಧನೆಗೆ ಒಗ್ಗೂಡಿ ಶ್ರಮಿಸುವ ಆಶಯವನ್ನು ಪುನರುಚ್ಚರಿಸಿದರು.
ಪ್ರಧಾನಮಂತ್ರಿ ಶ್ರೀ. ಮೋದಿ ಅವರು ಸಮಾರಂಭದಲ್ಲಿ ಭಾಗಿಯಾಗಿದ್ದಕ್ಕಾಗಿ ಹಾಗೂ ಶುಭ ಹಾರೈಸಿದ್ದಕ್ಕಾಗಿ ಅಧ್ಯಕ್ಷ ಸಿರಿಸೇನಾ ಅವರಿಗೆ ಆತ್ಮೀಯವಾಗಿ ಧನ್ಯವಾದ ಅರ್ಪಿಸಿದರು, ಶ್ರೀಲಂಕಾದೊಂದಿಗೆ ಸ್ನೇಹಪರ ದ್ವಿಪಕ್ಷೀಯ ಬಾಂಧವ್ಯ ಮುಂದುವರಿಸುವ ತಮ್ಮ ಸರ್ಕಾರದ ಬದ್ಧತೆಯನ್ನು ವ್ಯಕ್ತಪಡಿಸಿದರು.
ಭಯೋತ್ಪಾದನೆ ಮತ್ತು ವಿಧ್ವಂಸಕತೆ ಮಾನವತೆಗೆ ಬೆದರಿಕೆ ಒಡ್ಡಿದೆ ಎಂಬುದನ್ನು ಉಲ್ಲೇಖಿಸಿದ ಇಬ್ಬರೂ ನಾಯಕರು, ದಕ್ಷಿಣ ಏಷ್ಯಾ ಮತ್ತು ಹಿಂದೂಮಹಾಸಾಗರ ವಲಯದಲ್ಲಿ ಶಾಂತಿ ಮತ್ತು ಭದ್ರತೆಗಾಗಿ ಆಪ್ತವಾದ ದ್ವಿಪಕ್ಷೀಯ ಬಾಂಧವ್ಯದ ಬದ್ಧತೆಯನ್ನು ವ್ಯಕ್ತಪಡಿಸಿದರು.