ಗೌರವಾನ್ವಿತ ಮಾರಿಷಸ್ ಪ್ರಧಾನಿ ಡಾ. ನವೀನ್ ಚಂದ್ರ ರಾಮ್‌ಗೂಲಮ್, ಜಿಸಿಎಸ್‌ಕೆ, ಎಫ್‌ಆರ್‌ಸಿಪಿ ಮತ್ತು ಗೌರವಾನ್ವಿತ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಮಾರ್ಚ್ 11ರಿಂದ 12ರವರೆಗೆ ಮಾರಿಷಸ್‌ಗೆ ಪ್ರಧಾನಿ ಮೋದಿ ಅವರ ಅಧಿಕೃತ ಭೇಟಿ ಸಂದರ್ಭದಲ್ಲಿ ಮಾರಿಷಸ್ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯ ಬಗ್ಗೆ ಸಮಗ್ರ ಮತ್ತು ಫಲಪ್ರದ ಚರ್ಚೆ ನಡೆಸಿದರು.
ಭಾರತ ಮತ್ತು ಮಾರಿಷಸ್ ದೇಶಗಳು ಇತಿಹಾಸ, ಭಾಷೆ, ಸಂಸ್ಕೃತಿ, ಪರಂಪರೆ, ಒಡನಾಟ ಹಾಗೂ ಮೌಲ್ಯಗಳ ವಿಚಾರದಲ್ಲಿ ಬಾಂಧವ್ಯವನ್ನು ಪರಸ್ಪರ ಹಂಚಿಕೊಂಡಿವೆ. ಆ ಮೂಲಕ ಉಭಯ ದೇಶಗಳು ಸರಿಸಾಟಿಯಿಲ್ಲದ ವಿಶೇಷ ಮತ್ತು ಅನನ್ಯ ಸಂಬಂಧವನ್ನು ಹೊಂದಿವೆ ಎಂದು 2025ರ ಮಾರ್ಚ್ 11 ರಂದು ನಡೆದ ದ್ವಿಪಕ್ಷೀಯ ಸಭೆಯಲ್ಲಿ ಉಭಯ ನಾಯಕರು ಪುನರುಚ್ಚರಿಸಿದರು. ಜನರ ನಡುವಿನ ಮತ್ತು ಸಾಂಸ್ಕೃತಿಕ ವಿನಿಮಯದಲ್ಲಿ ನೆಲೆಗೊಂಡಿರುವ ಮಾರಿಷಸ್-ಭಾರತ ಸಂಬಂಧಗಳು ಕಳೆದ ಹಲವಾರು ದಶಕಗಳಲ್ಲಿ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯಾಗಿ ಬೆಳೆದಿವೆ ಎಂದು ಅವರು ಸಮ್ಮತಿಸಿದರು. ಈ ವ್ಯೂಹಾತ್ಮಕ ಪಾಲುದಾರಿಕೆಯು ವಿವಿಧ ಕ್ಷೇತ್ರಗಳಿಗೆ ವ್ಯಾಪಿಸಿದ್ದು, ಎರಡೂ ದೇಶಗಳ ಜನರು ಮತ್ತು ವಿಶಾಲ ಹಿಂದೂ ಮಹಾಸಾಗರ ಪ್ರದೇಶಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು.
ಮಾರಿಷಸ್‌ನ ಸ್ವಾತಂತ್ರ್ಯದ ಸಮಯದಿಂದಲೂ ಅದರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಹಾಗೂ ದೀರ್ಘಕಾಲೀನ ಮತ್ತು ವಿಶ್ವಾಸಾರ್ಹ ಪಾಲುದಾರನಾಗಿ ಭಾರತದ ಪಾತ್ರವನ್ನು ಮಾರಿಷಸ್ ಪ್ರಧಾನಿ ಒತ್ತಿ ಹೇಳಿದರು. ಭಾರತವು ಎಲ್ಲಾ ಸಮಯದಲ್ಲೂ ಮಾರಿಷಸ್ ಅನ್ನು ದೃಢವಾಗಿ ಬೆಂಬಲಿಸಿದೆ ಎಂದು ಹೇಳಿದ ಮಾರಿಷಸ್ ಪ್ರಧಾನಿ, ಭವಿಷ್ಯದ ಬೆಳವಣಿಗೆಗಳನ್ನು ಉತ್ತೇಜಿಸಲು ಉಭಯ ದೇಶಗಳ ನಡುವೆ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ತಮ್ಮ ದೃಢ ಬದ್ಧತೆಯನ್ನು ಪುನರುಚ್ಚರಿಸಿದರು.
2015ರ ಮಾರ್ಚ್‌ನಲ್ಲಿ ತಾವು ಮಾರಿಷಸ್‌ಗೆ ಭೇಟಿ ನೀಡಿದ್ದನ್ನು ಸ್ಮರಿಸಿದ ಪ್ರಧಾನಿಯವರು, ಈ ಸಂದರ್ಭದಲ್ಲಿ ಭಾರತದ ʻವಿಷನ್ ಸಾಗರ್ʼ (ಸೆಕ್ಯೂರಿಟಿ ಆಂಡ್ ಗ್ರೋಥ್ ಫಾರ್ ಆಲ್ ಇನ್ ದಿ ರೀಜನ್-S.A.G.A.R) ಅನಾವರಣಗೊಂಡಿದ್ದನ್ನು ಸ್ಮರಿಸಿದರು. ʻವಿಷನ್ ಸಾಗರ್ʼ ಸಾಕಾರಕ್ಕೆ ಮಾರಿಷಸ್ ನಿರ್ಣಾಯಕ ಪಾಲುದಾರನಾಗಿದೆ ಎಂದು ಒತ್ತಿ ಹೇಳಿದರು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಮುನ್ನಡೆಸಲು ಮಾರಿಷಸ್ ಸರ್ಕಾರ ನೀಡಿದ ವ್ಯಾಪಕ ಬೆಂಬಲವನ್ನು ಶ್ಲಾಘಿಸಿದರು. ಭಾರತದ ʻವಿಷನ್ ಸಾಗರ್ʼ, ʻನೆರೆಹೊರೆಯವರಿಗೆ ಮೊದಲುʼ(ನೈಬರ್‌ಹುಡ್ ಫಸ್ಟ್) ಕಾರ್ಯವಿಧಾನ ಮತ್ತು ಜಾಗತಿಕ ದಕ್ಷಿಣದ ವಿಚಾರವಾಗಿ ಭಾರತದ ಬದ್ಧತೆಗೆ ಮಾರಿಷಸ್ ಒತ್ತಾಸೆಯಾಗಿ ನಿಂತಿದೆ ಎಂದು ಅವರು ಹೇಳಿದರು. ಎರಡೂ ದೇಶಗಳ ಸಾಮಾನ್ಯ ಪ್ರಯೋಜನಕ್ಕಾಗಿ ಈ ನೀತಿಗಳನ್ನು ಮುನ್ನಡೆಸುವಲ್ಲಿ ಮಾರಿಷಸ್ ನಿರ್ವಹಿಸಿದ ಪ್ರಮುಖ ಪಾತ್ರವನ್ನು ಒತ್ತಿಹೇಳಿದರು.
ದ್ವಿಪಕ್ಷೀಯ ಸಂಬಂಧಗಳ ಬಲ ಮತ್ತು ಅನನ್ಯತೆಯನ್ನು ಒತ್ತಿಹೇಳುತ್ತಾ, ಈ ಸಂಬಂಧಕ್ಕೆ ಹೆಚ್ಚಿನ ಮಾರ್ಗದರ್ಶನ ಮತ್ತು ದೃಷ್ಟಿಕೋನವನ್ನು ಒದಗಿಸಲು ಹಾಗೂ ಅದನ್ನು ವರ್ಧಿತ ವ್ಯೂಹಾತ್ಮಕ ಪಾಲುದಾರಿಕೆಯನ್ನಾಗಿ ಪರಿವರ್ತಿಸಲು ಇದು ಸೂಕ್ತ ಸಮಯ ಎಂದು ಉಭಯ ನಾಯಕರು ಸಹಮತಿಸಿದರು.
ರಾಜಕೀಯ ವಿನಿಮಯಗಳು
ತಮ್ಮ ದ್ವಿಪಕ್ಷೀಯ ಸಂಬಂಧಗಳು ವಿವಿಧ ಹಂತಗಳಲ್ಲಿ ಉನ್ನತ ಮಟ್ಟದ ವಿಶ್ವಾಸ ಮತ್ತು ಪರಸ್ಪರ ತಿಳಿವಳಿಕೆಯನ್ನು ಹೊಂದಿವೆ ಎಂದು ಉಭಯ ನಾಯಕರು ಒಪ್ಪಿಕೊಂಡರು. ಇದಕ್ಕೆ ಪೂರಕವಾಗಿ ಉಭಯ ದೇಶಗಳ ನಡುವೆ ನಿಯಮಿತ ಉನ್ನತ ಮಟ್ಟದ ವಿನಿಮಯ ಮತ್ತು ಭೇಟಿಗಳು ನಡೆದಿವೆ. ಭಾರತದ ʻಜಿ 20ʼ ಅಧ್ಯಕ್ಷತೆಯ ಅಡಿಯಲ್ಲಿ ಅತಿಥಿ ರಾಷ್ಟ್ರವಾಗಿ ಮಾರಿಷಸ್ ಭಾಗವಹಿಸುವಿಕೆಯು ಎಲ್ಲಾ ಕ್ಷೇತ್ರಗಳಲ್ಲಿನ ಬಾಂಧವ್ಯವನ್ನು ಆಳಗೊಳಿಸಿದೆ ಎಂದು ಹೇಳಿದ ಉಭಯ ನಾಯಕರು, ಈ ಕಾರ್ಯಕ್ರಮಗಳನ್ನು ಮುಂದುವರಿಸುವ ಬದ್ಧತೆಯನ್ನು ಪುನರುಚ್ಚರಿಸಿದರು.
ಸಾಮರ್ಥ್ಯ ವರ್ಧನೆ ಕ್ಷೇತ್ರ ಸೇರಿದಂತೆ ಉಭಯ ದೇಶಗಳ ಸಂಸತ್ತುಗಳ ನಡುವೆ ನಡೆಯುತ್ತಿರುವ ಚರ್ಚೆಗಳನ್ನು ಸ್ವಾಗತಿಸಿದ ಉಭಯ ನಾಯಕರು, ಸಂಸದೀಯ ಕಾರ್ಯಕಲಾಪಗಳಲ್ಲಿ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಸಹಕಾರವನ್ನು ಬಲಪಡಿಸಲು ಒಪ್ಪಿಕೊಂಡರು. ಇದಲ್ಲದೆ, ಉಭಯ ದೇಶಗಳ ಸಂಸದರ ನಡುವಿನ ಸಂವಾದವನ್ನು ತೀವ್ರಗೊಳಿಸಲು ಅವರು ಸಹಮತಿಸಿದರು.
ಅಭಿವೃದ್ಧಿ ಪಾಲುದಾರಿಕೆ
ಮಾರಿಷಸ್‌ಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ಭಾರತವು ಪ್ರಮುಖ ಅಭಿವೃದ್ಧಿ ಪಾಲುದಾರನಾಗಿದೆ ಮತ್ತು ಅದರ ಮೂಲಸೌಕರ್ಯ ಮತ್ತು ಅಭಿವೃದ್ಧಿ ಅಗತ್ಯಗಳಿಗೆ ಗಮನಾರ್ಹ ಕೊಡುಗೆ ನೀಡಿದೆ ಎಂದು ಉಭಯ ನಾಯಕರು ಹೇಳಿದರು. ʻಭಾರತ-ಮಾರಿಷಸ್ ಮೆಟ್ರೋ ಎಕ್ಸ್‌ಪ್ರೆಸ್ ಯೋಜನೆʼ, ಹೊಸ ಸುಪ್ರೀಂ ಕೋರ್ಟ್ ಕಟ್ಟಡ, ಹೊಸ ʻಇಎನ್‌ಟಿʼ ಆಸ್ಪತ್ರೆ, 956 ಸಾಮಾಜಿಕ ವಸತಿ ಘಟಕಗಳು ಮತ್ತು ಶೈಕ್ಷಣಿಕ ಟ್ಯಾಬ್ಲೆಟ್‌ಗಳಂತಹ ಹಲವಾರು ಉನ್ನತ ಮೂಲಸೌಕರ್ಯ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಭಾರತದ ಬೆಂಬಲವನ್ನು ಒತ್ತಿ ಹೇಳಿದ ಮಾರಿಷಸ್ ಪ್ರಧಾನಿಯವರು, ವಿವಿಧ ಕ್ಷೇತ್ರಗಳಲ್ಲಿ ಮಾರಿಷಸ್‌ನ ಭಾಗವಾಗಿರುವ ಮತ್ತು ವರ್ಷಗಳಿಂದ ಮಾರಿಷಸ್‌ನ ಎಲ್ಲಾ ವರ್ಗಗಳಿಗೆ ಪ್ರಯೋಜನವಾಗಿರುವ ಭಾರತ-ನೆರವಿನ ಯೋಜನೆಗಳಿಗೆ ಕೃತಜ್ಞತೆ ಸಲ್ಲಿಸಿದರು.
ʻಅಗಲೇಗಾʼದಲ್ಲಿ ಭಾರತದ ನೆರವಿನೊಂದಿಗೆ ಅಭಿವೃದ್ಧಿಪಡಿಸಲಾದ ಹೊಸ ರನ್‌ವೇ ಮತ್ತು ಜೆಟ್ಟಿಯ ಪ್ರಯೋಜನಗಳನ್ನು ಹಾಗೂ ʻಅಗಲೇಗಾʼದಲ್ಲಿ ಇತ್ತೀಚೆಗೆ ಚಿಡೋ ಚಂಡಮಾರುತದ ನಂತರ ಮಾರಿಷಸ್ ಜನರಿಗೆ ತುರ್ತು ಮಾನವೀಯ ನೆರವು ಒದಗಿಸುವಲ್ಲಿ ಅದರ ನಿರ್ಣಾಯಕ ಪಾತ್ರವನ್ನು ಇಬ್ಬರೂ ನಾಯಕರು ಒಪ್ಪಿದರು. ಮಾರಿಷಸ್ ಸರ್ಕಾರದ ಪುನರ್ವಸತಿಯ ಪ್ರಯತ್ನಗಳಿಗೆ ಸಹಾಯ ಮಾಡಲು ಸಾರಿಗೆ ವಿಮಾನಗಳು ಮತ್ತು ಹಡಗುಗಳ ನಿಯೋಜನೆ ಸೇರಿದಂತೆ ಸಮಯೋಚಿತ ಮತ್ತು ತ್ವರಿತ ಸಹಾಯಕ್ಕಾಗಿ ಮಾರಿಷಸ್ ಪ್ರಧಾನಿ ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಆ ಮೂಲಕ ಅಗತ್ಯದ ಸಮಯದಲ್ಲಿ ಮಾರಿಷಸ್‌ಗೆ ‘ಪ್ರಥಮ ಸ್ಪಂದಕ’ನಾಗಿ ಭಾರತದ ಪಾತ್ರವನ್ನು ಪುನರುಚ್ಚರಿಸಿದರು. ʻಅಗಲೇಗಾʼ ನಿವಾಸಿಗಳ ಕಲ್ಯಾಣ ಮತ್ತು ಪ್ರಯೋಜನಕ್ಕಾಗಿ, ಅದರ ಅಭಿವೃದ್ಧಿಗಾಗಿ ಭಾರತದ ಪ್ರಧಾನಿಯವರ ನೆರವನ್ನು ಮಾರಿಷಸ್ ಪ್ರಧಾನಮಂತ್ರಿಗಳು ಸ್ವಾಗತಿಸಿದರು.
ಮೂತ್ರಪಿಂಡ ಕಸಿ ಘಟಕ, ವಿಧಿವಿಜ್ಞಾನ ಪ್ರಯೋಗಾಲಯ, ರಾಷ್ಟ್ರೀಯ ಪತ್ರಾಗಾರ ಮತ್ತು ಗ್ರಂಥಾಲಯ ಹಾಗೂ ನಾಗರಿಕ ಸೇವಾ ಕಾಲೇಜುಗಳಂತಹ ಮೂಲಸೌಕರ್ಯ ಯೋಜನೆಗಳ ಮಹತ್ವವನ್ನು ಉಭಯ ನಾಯಕರು ಒತ್ತಿಹೇಳಿದರು. ಜೊತೆಗೆ, ಮಾರಿಷಸ್‌ನಾದ್ಯಂತ ವ್ಯಾಪಿಸಿರುವ ಪರಿಣಾಮಕಾರಿ ಸಮುದಾಯ ಅಭಿವೃದ್ಧಿ ಯೋಜನೆಗಳ ಮಹತ್ವವನ್ನು ಒತ್ತಿಹೇಳಿದರು. ಅಲ್ಲದೆ, ಅವುಗಳನ್ನು ಸಮಯೋಚಿತವಾಗಿ ಪೂರ್ಣಗೊಳಿಸಲು ತಮ್ಮ ಸಂಪೂರ್ಣ ಬೆಂಬಲವನ್ನು ಪುನರುಚ್ಚರಿಸಿದರು.
ಭಾರತ ಬೆಂಬಲಿತವಾದ ಜನ-ಕೇಂದ್ರಿತ ಅಭಿವೃದ್ಧಿ ಸಹಾಯವು ಮಾರಿಷಸ್‌ನ ಸ್ನೇಹಮಯಿ ಜನರಿಗೆ ಸ್ಪಷ್ಟ ಪ್ರಯೋಜನಗಳನ್ನು ತರುತ್ತದೆ ಮತ್ತು ಮಾರಿಷಸ್‌ನ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಉಭಯ ನಾಯಕರು ಈ ಕೆಳಗಿನವುಗಳಿಗೆ ಸಮ್ಮತಿಸಿದರು:
i. 100 ಎಲೆಕ್ಟ್ರಿಕ್ ಬಸ್‌ಗಳ ಸಮಯೋಚಿತ ವಿತರಣೆ ಮತ್ತು ಅದಕ್ಕೆ ಸಂಬಂಧಿಸಿದ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು;
ii. ಹೆಚ್ಚಿನ ಪರಿಣಾಮ ಬೀರುವ ಸಮುದಾಯ ಅಭಿವೃದ್ಧಿ ಯೋಜನೆಗಳ ಎರಡನೇ ಹಂತವನ್ನು ಅನುಷ್ಠಾನಗೊಳಿಸುವುದು;
iii. ಉಭಯ ದೇಶಗಳ ನಡುವೆ ಭಾರತೀಯ ರೂಪಾಯಿ(INR) ಮೌಲ್ಯಸೂಚ್ಯಂಕವನ್ನು (ಡಿನಾಮಿನೇಷನ್) ಹೊಂದಿರುವ ಮೊದಲ ಸಾಲ ಒಪ್ಪಂದದ ಅಡಿಯಲ್ಲಿ, ಮಾರಿಷಸ್‌ನಲ್ಲಿ 100 ಕಿ.ಮೀ ನೀರಿನ ಪೈಪ್‌ಲೈನ್ ಬದಲಿ ಕಾರ್ಯವನ್ನು ಪ್ರಾರಂಭಿಸುವುದು;
iv. ಮಾರಿಷಸ್ ಸರ್ಕಾರವು ಗುರುತಿಸಲಿರುವ ಸ್ಥಳದಲ್ಲಿ ಹೊಸ ಸಂಸತ್ ಕಟ್ಟಡದ ಬಗ್ಗೆ ಚರ್ಚೆಗಳನ್ನು ಅಂತಿಮಗೊಳಿಸುವುದು ಮತ್ತು ಭಾರತದ ಅನುದಾನದ ನೆರವಿನೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಒಪ್ಪಂದವನ್ನು ಅಂತಿಮಗೊಳಿಸುವುದು; ಮತ್ತು
v. ʻಗಂಗಾ ತಲಾವ್ ಆಧ್ಯಾತ್ಮಿಕ ಪ್ರತಿಷ್ಠಾನʼದ ಪುನರಾಭಿವೃದ್ಧಿಯ ಬಗ್ಗೆ ಚರ್ಚೆಯನ್ನು ಅಂತಿಮಗೊಳಿಸುವುದು ಮತ್ತು ಭಾರತದ ಅನುದಾನದ ನೆರವಿನೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಒಪ್ಪಂದವನ್ನು ಅಂತಿಮಗೊಳಿಸುವುದು;
vi. ಮಾರಿಷಸ್ ಸರ್ಕಾರದ ಅಗತ್ಯತೆಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಸಹಕಾರದ ಹೊಸ ಕ್ಷೇತ್ರಗಳನ್ನು ಅನ್ವೇಷಿಸುವುದು.
ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮರ್ಥ್ಯ ವರ್ಧನೆ
12. ಮಾರಿಷಸ್‌ನ ಸಾಮರ್ಥ್ಯ ವರ್ಧನೆ ಮತ್ತು ತರಬೇತಿ ಅಗತ್ಯತೆಗಳಿಗೆ ಹಾಗೂ ಮಾರಿಷಸ್‌ನ ಮಾನವ ಸಂಪನ್ಮೂಲ ಅಭಿವೃದ್ಧಿ ಅಗತ್ಯತೆಗಳಿಗೆ ತಾನು ವಹಿಸಬಹುದಾದ ರಚನಾತ್ಮಕ ಪಾತ್ರಕ್ಕೆ ಭಾರತ ಸದಾ ಕೊಡುಗೆ ನೀಡಿದೆ ಎಂದು ಹೇಳಿದ ಇಬ್ಬರೂ ನಾಯಕರು ಈ ಕೆಳಗಿನವುಗಳಿಗೆ ಬದ್ಧತೆ ಸೂಚಿಸಿದ್ದಾರೆ:
i. ಭಾರತ ಸರ್ಕಾರದ ʻಐಟಿಇಸಿʼ ನೀತಿ ಮತ್ತು ವೈಯಕ್ತೀಕರಿಸಿದ ತರಬೇತಿ ಕಾರ್ಯಕ್ರಮಗಳ ಅಡಿಯಲ್ಲಿ ನಡೆಯುತ್ತಿರುವ ಸಾಮರ್ಥ್ಯ ವರ್ಧನೆ ಉಪಕ್ರಮಗಳನ್ನು ಮುಂದುವರಿಸುವುದು; ಐದು ವರ್ಷಗಳ ಅವಧಿಯಲ್ಲಿ ʻಭಾರತದಲ್ಲಿ ಉತ್ತಮ ಆಡಳಿತದ ರಾಷ್ಟ್ರೀಯ ಕೇಂದ್ರʼದ ಮೂಲಕ ಮಾರಿಷಸ್‌ನ 500 ನಾಗರಿಕ ಸೇವಕರಿಗೆ ವೈಯಕ್ತೀಕರಿಸಿದ ತರಬೇತಿ ಕಾರ್ಯಕ್ರಮವನ್ನು ಜಾರಿಗೆ ತರುವುದು;
ii. ನಾಗರಿಕ ಸೇವಾ ಕಾಲೇಜು, ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ರಾಷ್ಟ್ರೀಯ ಪತ್ರಾಗಾರ ಮತ್ತು ಗ್ರಂಥಾಲಯದ ನಡುವೆ ನಿರಂತರ ಸಹಕಾರ ಮತ್ತು ಉತ್ತಮ ಕಾರ್ಯವಿಧಾನಗಳ ವಿನಿಮಯಕ್ಕಾಗಿ ಸಂಬಂಧಪಟ್ಟ ಭಾರತದ ಪ್ರಮುಖ ಸಂಸ್ಥೆಗಳೊಂದಿಗೆ ಸಾಂಸ್ಥಿಕ ಸಂಪರ್ಕವನ್ನು ರಚಿಸುವುದು;
iii. ಮಾರಿಷಸ್ ಸರ್ಕಾರದ ಕ್ರಿಯಾತ್ಮಕ ಅಗತ್ಯಗಳಿಗಾಗಿ ಸಹಾಯ ಮಾಡಲು ಸಲಹೆಗಾರರು ಮತ್ತು / ಅಥವಾ ತಾಂತ್ರಿಕ ತಜ್ಞರ ನಿರಂತರ ನಿಯೋಜನೆಯನ್ನು ಬೆಂಬಲಿಸುವುದು;
iv. ತಿಳಿವಳಿಕಾ ಒಡಂಬಡಿಕೆ ಮೂಲಕ ʻಸುಷ್ಮಾ ಸ್ವರಾಜ್ ವಿದೇಶಾಂಗ ಸೇವೆಗಳ ಸಂಸ್ಥೆʼಯಲ್ಲಿ ಸಾಮರ್ಥ್ಯ ವರ್ಧನೆ ಕಾರ್ಯಕ್ರಮವನ್ನು ಸಾಂಸ್ಥಿಕಗೊಳಿಸುವುದು, ಆ ಮೂಲಕ ಮಾರಿಷಸ್ ರಾಜತಾಂತ್ರಿಕರಿಗೆ ಅಸ್ತಿತ್ವದಲ್ಲಿರುವ ತರಬೇತಿ ಸಹಯೋಗವನ್ನು ಹೆಚ್ಚಿಸುವುದು ಮತ್ತು ಬಲಪಡಿಸುವುದು; ಮತ್ತು
v. ಮಾರಿಷಸ್‌ನ ಅಗತ್ಯತೆಗಳು ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಸಿವಿಲ್, ಪೊಲೀಸ್, ಸಂಸದೀಯ, ಕಸ್ಟಮ್ಸ್, ಕಾನೂನು, ಆರೋಗ್ಯ ಮತ್ತು ಇತರ ಕ್ಷೇತ್ರಗಳಲ್ಲಿ ಮಾರಿಷಸ್ ಅಧಿಕಾರಿಗಳಿಗೆ ಹೆಚ್ಚಿನ ತರಬೇತಿ ಕಾರ್ಯಕ್ರಮಗಳನ್ನು ಅನ್ವೇಷಿಸುವುದು.
ಬಾಹ್ಯಾಕಾಶ ಮತ್ತು ಹವಾಮಾನ ಬದಲಾವಣೆ
ಪ್ರಸ್ತುತ ಅಸ್ಥಿತ್ವದಲ್ಲಿರುವ ಬಾಹ್ಯಾಕಾಶ ಸಹಕಾರವು ಎರಡೂ ದೇಶಗಳಿಗೆ ಅಪಾರ ಪ್ರಯೋಜನವನ್ನು ನೀಡಿದೆ ಮತ್ತು ಮಾರಿಷಸ್ ಜೊತೆಗಿನ ವಿಶೇಷ ಸಂಬಂಧಗಳಿಗೆ ಭಾರತವು ನೀಡಿರುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಉಭಯ ನಾಯಕರು ಒಪ್ಪಿಕೊಂಡರು. ಮಾರಿಷಸ್‌ಗಾಗಿ ಉಪಗ್ರಹವನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಭಾರತ ಸರ್ಕಾರ ನೀಡಿದ ಬೆಂಬಲಕ್ಕಾಗಿ ಮಾರಿಷಸ್ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಈ ಸಹಕಾರವು ಮಾರಿಷಸ್‌ನ ಅಭಿವೃದ್ಧಿಯ ಪ್ರಯಾಣದಲ್ಲಿ ಭಾರತದ ಅಚಲ ಬೆಂಬಲಕ್ಕೆ ಸಾಕ್ಷಿಯಾಗಿದೆ ಎಂದು ಒಪ್ಪಿಕೊಂಡರು. ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಹಕಾರವನ್ನು ಮತ್ತಷ್ಟು ಆಳಗೊಳಿಸುವ ಸಲುವಾಗಿ, ಅವರು ಈ ಕೆಳಗಿನವುಗಳಿಗೆ ಸಹಮತಿಸಿದ್ದಾರೆ:
1. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಮಾರಿಷಸ್‌ನ ವಿಜ್ಞಾನಿಗಳು ಮತ್ತು ತಜ್ಞರಿಗೆ ಅಗತ್ಯ ತರಬೇತಿ ಸೇರಿದಂತೆ ಭಾರತ-ಮಾರಿಷಸ್ ಉಪಗ್ರಹದ ಯಶಸ್ವಿ ಅಭಿವೃದ್ಧಿ ಮತ್ತು ಉಡಾವಣೆಗಾಗಿ ನಿಕಟವಾಗಿ ಕೆಲಸ ಮಾಡುವುದು;
ii. ಸ್ಥಿತಿಸ್ಥಾಪಕ ವಿಪತ್ತು ಸನ್ನದ್ಧತೆ ಮತ್ತು ಪ್ರತಿಕ್ರಿಯೆ ವ್ಯವಸ್ಥೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ನೆರವಾಗಲು ಮಾರಿಷಸ್‌ನಲ್ಲಿ ವಿವಿಧ ತಾತ್ಕಾಲಿಕ ಮಾಪಕಗಳಲ್ಲಿ ಹವಾಮಾನ ಮುನ್ಸೂಚನೆ ವ್ಯವಸ್ಥೆ, ವೇವ್ ರೈಡರ್ ಬೋಯ್‌ಗಳು ಮತ್ತು ಬಹು-ಅಪಾಯದ ತುರ್ತು ವ್ಯವಸ್ಥೆಯ ಅನುಷ್ಠಾನವನ್ನು ಬೆಂಬಲಿಸುವುದು;
iii. ಮಾರಿಷಸ್‌ನಲ್ಲಿ ʻಇಸ್ರೋ ಟೆಲಿಮೆಟ್ರಿ ಮತ್ತು ಟ್ರ್ಯಾಕಿಂಗ್ ಸೆಂಟರ್ʼ ಕುರಿತು ಇಸ್ರೋ ಮತ್ತು ಮಾರಿಷಸ್ ರಿಸರ್ಚ್ ಅಂಡ್ ಇನ್ನೋವೇಶನ್ ಕೌನ್ಸಿಲ್ (ಎಂಆರ್‌ಐಸಿ) ನಡುವೆ ನಡೆಯುತ್ತಿರುವ ಸಹಕಾರವನ್ನು ನವೀಕರಿಸುವುದು; ಮತ್ತು
iv. ಮಾರಿಷಸ್‌ನ ಅಗತ್ಯಗಳನ್ನು ಪೂರೈಸಲು ಬಾಹ್ಯಾಕಾಶ ಮತ್ತು ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಸಹಕಾರದ ಹೊಸ ಮಾರ್ಗಗಳನ್ನು ಅನ್ವೇಷಿಸುವುದು ಮತ್ತು ಅದಕ್ಕೆ ಸಂಬಂಧಿಸಿದ ಸಾಮರ್ಥ್ಯ ವರ್ಧನೆ ಬೆಂಬಲ; ಮತ್ತು
v. ತೀವ್ರ ಹವಾಮಾನ ವಿದ್ಯಮಾನಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಹವಾಮಾನ ಪರಿಣಾಮವನ್ನು ಪರಿಣಾಮಕಾರಿಯಾಗಿ ಅಧ್ಯಯನ ಮಾಡಲು ಮಾರಿಷಸ್‌ಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ʻಭೂ ವೀಕ್ಷಣಾ ತಂತ್ರಾಂಶʼ ಮತ್ತು ಸಂವಾದಾತ್ಮಕ ಕಂಪ್ಯೂಟಿಂಗ್ ಚೌಕಟ್ಟನ್ನು ಬಳಸಿಕೊಳ್ಳಲು ಭಾರತದ ಪ್ರಸ್ತಾಪವನ್ನು ಮುಂದುವರಿಸುವುದು; ʻಕ್ವಾಡ್ʼ ಅಡಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಭೂ ವಿಜ್ಞಾನ ಸಚಿವಾಲಯ (ಎಂಒಇಎಸ್) ಇದನ್ನು ಕೈಗೊಳ್ಳಲಿವೆ.
ಆರೋಗ್ಯ ಮತ್ತು ಶಿಕ್ಷಣ ಸಹಕಾರ
ಆರೋಗ್ಯ ಸಂಬಂಧಿತ ʻಡಿಪಿಐʼಗಳು ಮತ್ತು ವೇದಿಕೆಗಳ ಅಳವಡಿಕೆ ಹಾಗೂ ನಿಯೋಜನೆಗೆ ನೆರವು, ಜೊತೆಗೆ ಮಾರಿಷಸ್ ಅಭಿವೃದ್ಧಿಗೆ ಅವುಗಳ ಸಕಾರಾತ್ಮಕ ಕೊಡುಗೆ ಸೇರಿದಂತೆ ಆರೋಗ್ಯ ಮತ್ತು ಶೈಕ್ಷಣಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಭಾರತದ ಬೆಂಬಲವನ್ನು ಉಭಯ ನಾಯಕರು ಒತ್ತಿ ಹೇಳಿದರು. ಮಾರಿಷಸ್ ಜನರಿಗೆ ಗುಣಮಟ್ಟದ, ಕೈಗೆಟುಕುವ ಮತ್ತು ಕೈಗೆಟುಕುವ ಆರೋಗ್ಯ ರಕ್ಷಣಾ ಪ್ರಯೋಜನಗಳನ್ನು ಒದಗಿಸುವ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು. ಮಾರಿಷಸ್‌ನಲ್ಲಿ ಭಾರತವು ಆರಂಭಿಸಿರುವ ಮೊದಲ ವಿದೇಶಿ ʻಜನೌಷಧ ಕೇಂದ್ರʼಗಳನ್ನು ಅವರು ಶ್ಲಾಘಿಸಿದರು ಮತ್ತು ಮಾರಿಷಸ್‌ನ ವಿವಿಧ ಭಾಗಗಳಿಗೆ ಈ ಉಪಕ್ರಮವನ್ನು ವಿಸ್ತರಿಸಲು ಸಮ್ಮತಿಸಿದರು.
ಮಾದಕ ವ್ಯಸನ ಮತ್ತು ಸಂಬಂಧಿತ ಸಾಮಾಜಿಕ ಸಮಸ್ಯೆಗಳ ಹೆಚ್ಚಳದಿಂದಾಗಿ ಮಾರಿಷಸ್ ಎದುರಿಸುತ್ತಿರುವ ಸವಾಲುಗಳನ್ನು ಉಲ್ಲೇಖಿಸಿದ ನಾಯಕರು, ಮಾದಕ ವ್ಯಸನ ಮುಕ್ತ ಮತ್ತು ಪುನರ್ವಸತಿ ಕುರಿತು ಪರಿಣತಿಯನ್ನು ಹಂಚಿಕೊಳ್ಳುವಲ್ಲಿ ಒಟ್ಟಾಗಿ ಕೆಲಸ ಮಾಡಲು ಸಮ್ಮತಿಸಿದರು. ಇದೇ ವೇಳೆ, ʻಭಾರತದ ಮಾದಕವಸ್ತು ನಿಯಂತ್ರಣ ಬ್ಯೂರೋʼದ ಪರಿಣತಿ ಮತ್ತು ಬೆಂಬಲದೊಂದಿಗೆ ರಾಷ್ಟ್ರೀಯ ಮಾದಕವಸ್ತು ನೀತಿ, ಮೇಲ್ವಿಚಾರಣೆ ಮತ್ತು ಸಮನ್ವಯ ಸಂಸ್ಥೆಯೊಂದಿಗೆ ನಿಕಟವಾಗಿ ಕೆಲಸ ಮಾಡಲು ಸಮ್ಮತಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ಹಾಲಿ ಸಹಕಾರವನ್ನು ಮುಂದುವರಿಸಲು ನಿರ್ಧರಿಸಿದ ಉಭಯ ನಾಯಕರು, ಮಾರಿಷಸ್‌ನಲ್ಲಿ ಆರೋಗ್ಯ ಸೇವೆಗಳನ್ನು ಡಿಜಿಟಲೀಕರಣಗೊಳಿಸುವ ಮಾರಿಷಸ್ ಸರ್ಕಾರದ ಪ್ರಯತ್ನಕ್ಕೆ ಸಹಾಯ ಮಾಡಲು ಭಾರತದಿಂದ ತಜ್ಞರನ್ನು ನಿಯೋಜಿಸುವುದರ ಜೊತೆಗೆ ಮಾರಿಷಸ್‌ನಲ್ಲಿ ಡಿಜಿಟಲ್ ಆರೋಗ್ಯ ಕಚೇರಿ ವ್ಯವಸ್ಥೆಯನ್ನು ಸಮಯೋಚಿತವಾಗಿ ಅನುಷ್ಠಾನಗೊಳಿಸಲು ನಿಕಟವಾಗಿ ಕೆಲಸ ಮಾಡಲು ಒಪ್ಪಿಕೊಂಡರು.
ʻಆಯುಷ್ʼನಲ್ಲಿ ಸಹಕಾರದ ಮಹತ್ವವನ್ನು ನಾಯಕರು ಒತ್ತಿ ಹೇಳಿದರು. ಮಾರಿಷಸ್‌ನಲ್ಲಿ ʻಆಯುಷ್ ಸೆಂಟರ್ ಆಫ್ ಎಕ್ಸಲೆನ್ಸ್ʼ ಸ್ಥಾಪನೆಗೆ ಭಾರತ ನೀಡಿದ ಬೆಂಬಲಕ್ಕೆ ಮಾರಿಷಸ್ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಾಕಾರಗೊಳಿಸಲು ಭಾರತದ ನಿರಂತರ ಸಹಾಯವನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದರು. ಭಾರತದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾರಿಷಸ್ ರೋಗಿಗಳಿಗೆ ಭಾರತ ನೀಡಿದ ಎಲ್ಲ ಸೌಲಭ್ಯಗಳಿಗಾಗಿ ಮಾರಿಷಸ್ ಪ್ರಧಾನಿ ಭಾರತದ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು.
ಶಾಲಾ ಶಿಕ್ಷಣಕ್ಕಾಗಿ ಪಠ್ಯಕ್ರಮದ ಅಭಿವೃದ್ಧಿಯಲ್ಲಿ ಪರಿಣತಿಯನ್ನು ಹಂಚಿಕೊಳ್ಳುವ ಕುರಿತು ʻರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿʼ(ಎನ್‌ಸಿಇಆರ್ ಟಿ) ಮತ್ತು ಮಾರಿಷಸ್‌ನ ಉನ್ನತ ಶಿಕ್ಷಣ ಸಚಿವಾಲಯದ ನಡುವೆ ನಡೆಯುತ್ತಿರುವ ಚರ್ಚೆಗಳನ್ನು ನಾಯಕರು ಸ್ವಾಗತಿಸಿದರು. ಇಂತಹ ಸಹಕಾರ ಉಪಕ್ರಮಗಳು ದ್ವಿಪಕ್ಷೀಯ ಸಂಬಂಧಗಳನ್ನು ಆಳಗೊಳಿಸಲು ಮತ್ತು ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಸಾಂಸ್ಥಿಕ ಸಂಪರ್ಕಗಳನ್ನು ಬಲಪಡಿಸಲು ಉತ್ತಮವಾಗಿವೆ ಎಂದು ಸಮ್ಮತಿಸಿದರು. ʻಭಾರತ ಮಾರಿಷಸ್ ಎಸ್ & ಟಿ ಸಹಕಾರʼವನ್ನು ಬಲಪಡಿಸಲು ಅವರು ಸಹಮತಿಸಿದರು. ʻರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯತಂತ್ರʼದ ಅನುಷ್ಠಾನಕ್ಕಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸುವುದು ಮತ್ತು ಮಾರಿಷಸ್‌ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ನಿರ್ದೇಶನಾಲಯವನ್ನು ಸ್ಥಾಪಿಸುವುದನ್ನು ಇದು ಒಳಗೊಂಡಿದೆ.
ಆರ್ಥಿಕ ಮತ್ತು ವ್ಯಾಪಾರ ಸಹಕಾರ
ಆಫ್ರಿಕನ್ ಪ್ರದೇಶದ ದೇಶದೊಂದಿಗಿನ ಭಾರತದ ಮೊದಲ ವ್ಯಾಪಾರ ಒಪ್ಪಂದವಾದ ʻಸಮಗ್ರ ಆರ್ಥಿಕ ಸಹಕಾರ ಮತ್ತು ಪಾಲುದಾರಿಕೆ ಒಪ್ಪಂದʼವನ್ನು(ಸಿಇಸಿಪಿಎ) ಅಂತಿಮಗೊಳಿಸಿರುವುದು ಎರಡೂ ದೇಶಗಳ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳಲ್ಲಿ ಪ್ರಮುಖ ಮೈಲುಗಲ್ಲಾಗಿದೆ ಎಂದು ಉಭಯ ನಾಯಕರು ಒಪ್ಪಿಕೊಂಡರು. ಮಾರಿಷಸ್ ಮತ್ತು ಭಾರತದ ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿಯ ಹಂಚಿಕೆಯ ಉದ್ದೇಶಕ್ಕಾಗಿ ದ್ವಿಪಕ್ಷೀಯ ವ್ಯಾಪಾರದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಆಫ್ರಿಕಾವು ʻಆಫ್ರಿಕನ್ ಕಾಂಟಿನೆಂಟಲ್ ಫ್ರೀ ಟ್ರೇಡ್ ಏರಿಯಾʼ(ಎಎಫ್‌ಸಿಎಫ್‌ಟಿಎ) ಭಾಗವಾಗಿರುವುದರಿಂದ ಮಾರಿಷಸ್‌ನ ಸ್ಥಳೀಯ ಅನುಕೂಲ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಮಾರಿಷಸ್ ಪ್ರಧಾನಿ ಎತ್ತಿ ತೋರಿದರು. ಭಾರತೀಯ ಕಂಪನಿಗಳು ಮತ್ತು ವ್ಯವಹಾರಗಳು ಮಾರಿಷಸ್ ಅನ್ನು ಆಫ್ರಿಕಾದೊಂದಿಗಿನ ಭಾರತದ ಕಾರ್ಯಕ್ರಮಗಳಿಗೆ ಹೆಬ್ಬಾಗಿಲಾಗಿ ನೋಡುವ ಅಗತ್ಯವನ್ನು ಒತ್ತಿಹೇಳಿದರು. ಅಲ್ಲದೆ, ಆಫ್ರಿಕಾ ನೀಡುವ ವ್ಯಾಪಾರ ಮತ್ತು ವ್ಯವಹಾರ ಅವಕಾಶಗಳಿಂದ ಪ್ರಯೋಜನ ಪಡೆಯುವುದಾಗಿ ಒತ್ತಿ ಹೇಳಿದರು.
ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ವಾಣಿಜ್ಯ ಸಂಪರ್ಕಗಳನ್ನು ವೈವಿಧ್ಯಗೊಳಿಸುವ ತಮ್ಮ ದೃಢ ಬದ್ಧತೆಯನ್ನು ಪುನರುಚ್ಚರಿಸಿದ ನಾಯಕರು, ಈ ಕೆಳಗಿನವುಗಳಿಗೆ ಸಮ್ಮತಿಸಿದರು:
i. ಎರಡೂ ದೇಶಗಳ ನಡುವಿನ ವ್ಯಾಪಾರ, ಆರ್ಥಿಕ ಸಹಕಾರ ಮತ್ತು ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ʻಸಿಇಸಿಪಿಎʼ ಅಡಿಯಲ್ಲಿ ಉನ್ನತ ಅಧಿಕಾರ ಜಂಟಿ ವ್ಯಾಪಾರ ಸಮಿತಿಯ ಎರಡನೇ ಅಧಿವೇಶನವನ್ನು ನಡೆಸುವುದು;
ii. ಸ್ಥಳೀಯ ಕರೆನ್ಸಿಗಳಲ್ಲಿ ಅಂದರೆ ʻಭಾರತೀಯ ರೂಪಾಯಿʼ ಮತ್ತು ʻಮಾರಿಷಿಯನ್ ರುಪೀʼಯಲ್ಲಿವ್ಯಾಪಾರ ವಸಾಹತುಗಳನ್ನು ಸುಗಮಗೊಳಿಸುವುದು. ಪಾಲುದಾರ ಕೇಂದ್ರ ಬ್ಯಾಂಕುಗಳು ಸ್ಥಳೀಯ ಕರೆನ್ಸಿ ಇತ್ಯರ್ಥಕ್ಕಾಗಿ ಸಹಿ ಹಾಕಿದ ಒಪ್ಪಂದದ ಅನುಸಾರವಾಗಿ ದ್ವಿಪಕ್ಷೀಯ ವ್ಯಾಪಾರದ ಅಪಾಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯಮಗ್ನರಾಗುವುದು ಇದರ ಉದ್ದೇಶ
iii. ಹಾಲಿ ಚರ್ಚೆಗಳು ಮುಗಿದ ನಂತರ, ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ ಸಮನ್ವಯಗೊಳಿಸಲು ದ್ವಿ ತೆರಿಗೆ ತಪ್ಪಿಸುವ ಒಪ್ಪಂದದ ತಿದ್ದುಪಡಿಯ ಪ್ರೋಟೋಕಾಲ್ ಅನ್ನು ಆದಷ್ಟು ಬೇಗ ಅನುಮೋದಿಸುವುದು; ಮತ್ತು
iv. ದೀರ್ಘಕಾಲೀನ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಗಾಗಿ ಮಾರಿಷಸ್ ತನ್ನ ಆರ್ಥಿಕತೆಯನ್ನು ವೈವಿಧ್ಯಗೊಳಿಸುವುದನ್ನು ಬೆಂಬಲಿಸಲು ಸಾಗರ ಆರ್ಥಿಕತೆ, ಔಷಧ, ಐಟಿ ಮತ್ತು ಫಿನ್-ಟೆಕ್ ಮುಂತಾದ ಕ್ಷೇತ್ರಗಳಲ್ಲಿ ಹೂಡಿಕೆಗಳನ್ನು ಉತ್ತೇಜಿಸುವುದು.
ಡಿಜಿಟಲ್ ಸಹಕಾರ
ಹಲವಾರು ಜನ-ಕೇಂದ್ರಿತ ಡಿಜಿಟಲೀಕರಣ ಉಪಕ್ರಮಗಳನ್ನು ಹೊರತರುವಲ್ಲಿ ಭಾರತದ ಸಾಧನೆಗಳನ್ನು ಒತ್ತಿಹೇಳುತ್ತಾ, ಆಡಳಿತ ಮತ್ತು ಸೇವಾ ವಿತರಣೆಯ ಮೇಲೆ ಅವುಗಳ ಸಕಾರಾತ್ಮಕ ಪರಿಣಾಮವನ್ನು ಒತ್ತಿಹೇಳುತ್ತಾ, ಮಾರಿಷಸ್ ಪ್ರಧಾನಿಯವರು ಮಾರಿಷಸ್ ಸರ್ಕಾರಕ್ಕೆ ವಿವಿಧ ಕ್ಷೇತ್ರಗಳಲ್ಲಿ ಡಿಜಿಟಲೀಕರಣಕ್ಕೆ ಭಾರತದ ಬೆಂಬಲವನ್ನು ಕೋರಿದರು. ಇದಕ್ಕೆ ಭಾರತದ ಪ್ರಧಾನಿ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು. ಈ ಉದ್ದೇಶಕ್ಕೆ ಅನುಗುಣವಾಗಿ, ನಾಯಕರು ಈ ಕೆಳಗಿನವುಗಳಿಗೆ ಸಮ್ಮತಿಸಿದರು:
i. ಇ-ನ್ಯಾಯಾಂಗ ವ್ಯವಸ್ಥೆಯ ಅನುಷ್ಠಾನ ಮತ್ತು ಮಹಾತ್ಮ ಗಾಂಧಿ ಸಂಸ್ಥೆಯಲ್ಲಿ ಪತ್ರಾಗಾರ ಮತ್ತು ದಾಖಲೆಗಳ ಡಿಜಿಟಲೀಕರಣಕ್ಕೆ ಬೆಂಬಲ;
ii. ಸೈಬರ್ ಭದ್ರತೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಸಾಮರ್ಥ್ಯ ವರ್ಧನೆ ಸೇರಿದಂತೆ ʻಐಸಿಟಿʼ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವುದು; ಮತ್ತು
iii. ಮಾರಿಷಸ್‌ನ ಅವಶ್ಯಕತೆಗಳಿಗೆ ಅನುಗುಣವಾಗಿ ʻಪಿಎಂ ಗತಿ ಶಕ್ತಿʼ ಡಿಜಿಟಲ್ ವೇದಿಕೆಯಂತಹ ಭಾರತವು ಅಭಿವೃದ್ಧಿಪಡಿಸಿದ ಯಶಸ್ವಿ ಡಿಜಿಟಲ್ ಸಾಧನಗಳ ಅನುಷ್ಠಾನವನ್ನು ಅನ್ವೇಷಿಸುವುದು.
ರಕ್ಷಣಾ ಮತ್ತು ಕಡಲ ಭದ್ರತಾ ಸಹಕಾರ
ರಕ್ಷಣಾ ಮತ್ತು ಕಡಲ ಭದ್ರತಾ ಸಹಕಾರವು ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ಆಧಾರಸ್ತಂಭವಾಗಿ ಉಳಿದಿದೆ. ಈ ಕ್ಷೇತ್ರದಲ್ಲಿನ ನಿಕಟ ಸಹಕಾರವು ಕಾರ್ಯತಂತ್ರದ ಆಯಾಮವನ್ನು ಪಡೆದಿದ್ದು, ಎರಡೂ ದೇಶಗಳಿಗೆ ಅಪಾರ ಪ್ರಯೋಜನವನ್ನು ನೀಡಿದೆ ಎಂದು ಇಬ್ಬರೂ ನಾಯಕರು ಹೇಳಿದರು. ಮುಕ್ತ, ಸುರಕ್ಷಿತ ಮತ್ತು ಸುಭದ್ರ ಹಿಂದೂ ಮಹಾಸಾಗರ ಪ್ರದೇಶವನ್ನು ಖಚಿತಪಡಿಸಿಕೊಳ್ಳಲು ಹಂಚಿಕೆಯ ಬದ್ಧತೆಯನ್ನು ಹೊಂದಿರುವ ಮಾರಿಷಸ್ ಮತ್ತು ಭಾರತವು ಈ ಪ್ರದೇಶದ ನೈಸರ್ಗಿಕ ಪಾಲುದಾರರು ಎಂದು ನಾಯಕರು ಸಮ್ಮತಿಸಿದರು. ಇದೇ ವೇಳೆ, ಕಡಲ ಸವಾಲುಗಳನ್ನು ಎದುರಿಸುವಲ್ಲಿ ಮತ್ತು ಈ ಪ್ರದೇಶದ ದೊಡ್ಡ ಕಾರ್ಯತಂತ್ರದ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ನಿಕಟವಾಗಿ ಕೆಲಸ ಮಾಡುವ ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದರು.
ರಕ್ಷಣಾ ಮತ್ತು ಕಡಲ ಸ್ವತ್ತುಗಳನ್ನು ಒದಗಿಸುವುದು, ಹಡಗುಗಳು ಮತ್ತು ವಿಮಾನಗಳ ನಿಯಮಿತ ನಿಯೋಜನೆ, ಜಂಟಿ ಕಡಲ ಕಣ್ಗಾವಲು, ಹೈಡ್ರೋಗ್ರಾಫಿಕ್ ಸಮೀಕ್ಷೆಗಳು ಮತ್ತು ಗಸ್ತು, ದ್ವಿಪಕ್ಷೀಯ ಸಮರಾಭ್ಯಾಸ ಮತ್ತು ಮಾಹಿತಿ ಹಂಚಿಕೆ ಹಾಗೂ ತರಬೇತಿ ಬೆಂಬಲದ ಮೂಲಕ ತನ್ನ ವಿಶಾಲವಾದ ವಿಶೇಷ ಆರ್ಥಿಕ ವಲಯವನ್ನು ರಕ್ಷಿಸುವಲ್ಲಿ ಮಾರಿಷಸ್‌ಗೆ ಅಚಲ ಬೆಂಬಲ ನೀಡಿದ್ದಕ್ಕಾಗಿ ಮಾರಿಷಸ್ ಪ್ರಧಾನಿ ಭಾರತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ʻಕೋಸ್ಟ್ ಗಾರ್ಡ್ʼ ಹಡಗುಗಳಾದ ʻವಿಕ್ಟರಿʼ, ʻವೆಲಿಯಂಟ್ʼ ಮತ್ತು ʻಬರಾಕುಡಾʼವನ್ನು ಅನುದಾನದ ಆಧಾರದ ಮೇಲೆ ಮರುಹೊಂದಿಸಲು ನಿರಂತರ ನೆರವು ನೀಡುತ್ತಿರುವುದಕ್ಕಾಗಿ ಭಾರತಕ್ಕೆ ಮಾರಿಷಸ್‌ನ ಪ್ರಧಾನಮಂತ್ರಿಯವರು ಧನ್ಯವಾದ ಅರ್ಪಿಸಿದರು. ಮಾರಿಷಸ್ ಭಾರತಕ್ಕೆ ವಿಶೇಷ ಕಡಲ ಪಾಲುದಾರ ಮತ್ತು ಭಾರತದ ʻವಿಷನ್ ಸಾಗರ್ʼ ಅಡಿಯಲ್ಲಿ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ ಎಂದು ಭಾರತದ ಪ್ರಧಾನಿ ಹೇಳಿದರು. ಈ ಪ್ರದೇಶದಲ್ಲಿ ನಮ್ಮ ಪರಸ್ಪರ ಸಮಾನ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು, ಮಾರಿಷಸ್‌ನ ರಕ್ಷಣಾ ಮತ್ತು ಭದ್ರತಾ ಅಗತ್ಯಗಳನ್ನು ಹೆಚ್ಚಿಸಲು ಭಾರತದ ನಿರಂತರ ಬೆಂಬಲ ಮತ್ತು ಸಹಾಯವನ್ನು ಭಾರತದ ಪ್ರಧಾನಿ ಪುನರುಚ್ಚರಿಸಿದರು.
ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಬೆದರಿಕೆಗಳು ಮತ್ತು ಸವಾಲುಗಳನ್ನು ಎದುರಿಸಲು ತಮ್ಮ ಸಾಮೂಹಿಕ ಇಚ್ಛೆಯನ್ನು ಪುನರುಚ್ಚರಿಸಿದ ನಾಯಕರು ಈ ಕೆಳಗಿನ ನಿರ್ಧಾರಗಳನ್ನು ಕೈಗೊಂಡರು:
i. ಮಾರಿಷಸ್‌ನ ಅಗತ್ಯತೆಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿ ರಕ್ಷಣಾ ಮತ್ತು ಕಡಲ ಸ್ವತ್ತುಗಳು ಹಾಗೂ ಸಲಕರಣೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸಹಕಾರವನ್ನು ಮುಂದುವರಿಸುವುದು;
ii. ಜಂಟಿ ಕಡಲ ಕಣ್ಗಾವಲು ಮತ್ತು ಜಲವಿಜ್ಞಾನ ಸಮೀಕ್ಷೆಗಾಗಿ ಹಡಗುಗಳು ಮತ್ತು ವಿಮಾನಗಳ ಹೆಚ್ಚಿನ ನಿಯೋಜನೆಯ ಮೂಲಕ ಕಡಲ ಸಹಕಾರವನ್ನು ಹೆಚ್ಚಿಸುವುದು;
iii. ʻಅಗಲೇಗಾʼದಲ್ಲಿ ಹೊಸದಾಗಿ ನಿರ್ಮಿಸಲಾದ ರನ್ ವೇ ಮತ್ತು ಜೆಟ್ಟಿಯ ಹೆಚ್ಚಿನ ಬಳಕೆ ಸೇರಿದಂತೆ ಮಾರಿಷಸ್‌ನ ʻಇಇಝೆಡ್ʼ ಅನ್ನು ಭದ್ರಪಡಿಸುವ ನಿಟ್ಟಿನಲ್ಲಿ ಸಹಕಾರವನ್ನು ಆಳಗೊಳಿಸುವುದು;
iv. ಕಡಲ ಕ್ಷೇತ್ರದ ಜಾಗೃತಿಯನ್ನು ಹೆಚ್ಚಿಸಲು ʻರಾಷ್ಟ್ರೀಯ ಕಡಲ ಮಾಹಿತಿ ಹಂಚಿಕೆ ಕೇಂದ್ರʼವನ್ನು ಸ್ಥಾಪಿಸಲು ಸಹಾಯ ಮಾಡುವುದು;
v. ಸಾಗರ ಕಾರ್ಯಾಚರಣೆ ಮತ್ತು ಸಾಗರ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಪರಿಣತಿಯನ್ನು ಒದಗಿಸುವ ಮೂಲಕ ಸಹಕಾರ; ಬಂದರು ಸುರಕ್ಷತಾ ವಾತಾವರಣ, ಮಾರಿಷಸ್ ಬಂದರು ಪ್ರಾಧಿಕಾರಕ್ಕೆ ಬಂದರು ತುರ್ತುಸ್ಥಿತಿ ಮತ್ತು ಬಂದರು ಭದ್ರತೆ; ಮತ್ತು
vi. ಮಾರಿಷಸ್ ಪೊಲೀಸ್ ಪಡೆಯ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ವೈಯಕ್ತೀಕರಿಸಿದ ತರಬೇತಿ ಕಾರ್ಯಕ್ರಮ ಮತ್ತು ಸಾಮರ್ಥ್ಯ ವರ್ಧನೆ ಉಪಕ್ರಮಗಳನ್ನು ಕೈಗೊಳ್ಳುವುದು.
ಪ್ರಾದೇಶಿಕ ಮತ್ತು ಬಹುಪಕ್ಷೀಯ ಸಹಕಾರ
ʻಚಾಗೋಸ್ʼ ದ್ವೀಪಗ ಕುರಿತಾಗಿ ಮಾರಿಷಸ್ ಮತ್ತು ಬ್ರಿಟನ್ ನಡುವೆ ನಡೆಯುತ್ತಿರುವ ಚರ್ಚೆಗಳನ್ನು ಉಭಯ ನಾಯಕರು ಸ್ವಾಗತಿಸಿದರು. ಚಾಗೋಸ್ ವಿಷಯದಲ್ಲಿ ಮಾರಿಷಸ್‌ಗೆ ಭಾರತದ ದೃಢ ಬೆಂಬಲವನ್ನು ಭಾರತದ ಪ್ರಧಾನಿ ಪುನರುಚ್ಚರಿಸಿದರು. ಈ ವಿಷಯದಲ್ಲಿ ಜಾಗತಿಕ ನಾಯಕರ ವೈಯಕ್ತಿಕ ಬೆಂಬಲ ಮತ್ತು ತೊಡಗಿಸಿಕೊಳ್ಳುವಿಕೆಗಾಗಿ ಭಾರತದ ಪ್ರಧಾನಮಂತ್ರಿಯವರಿಗೆ ಮಾರಿಷಸ್ ಪ್ರಧಾನಮಂತ್ರಿಯವರು ಧನ್ಯವಾದ ಅರ್ಪಿಸಿದರು.
ಪ್ರಾದೇಶಿಕ ಮತ್ತು ಬಹುಪಕ್ಷೀಯ ಚೌಕಟ್ಟುಗಳ ಅಡಿಯಲ್ಲಿ, ವಿಶೇಷವಾಗಿ ʻಹಿಂದೂ ಮಹಾಸಾಗರದ ರಿಮ್ ಅಸೋಸಿಯೇಷನ್ʼ (ಐಒಆರ್‌ಏ), ʻಕೊಲಂಬೊ ಭದ್ರತಾ ಶೃಂಗʼ, ʻಜಾಗತಿಕ ಜೈವಿಕ ಇಂಧನ ಒಕ್ಕೂಟʼ, ʻಅಂತರರಾಷ್ಟ್ರೀಯ ಸೌರ ಮೈತ್ರಿʼ ಮತ್ತು ʻವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳ ಒಕ್ಕೂಟʼದ ಮೂಲಕ ಸಹಕಾರವನ್ನು ಮುನ್ನಡೆಸಲು ನಿಕಟವಾಗಿ ಕೆಲಸ ಮಾಡಲು ಉಭಯ ನಾಯಕರು ಸಮ್ಮತಿಸಿದರು. ʻಕೊಲಂಬೊ ಭದ್ರತಾ ಶೃಂಗʼದ ದಾಖಲೆಗಳಿಗೆ ಇತ್ತೀಚೆಗೆ ಸಹಿ ಹಾಕಿರುವುದನ್ನು ಮತ್ತು 2025-26ರ ಅವಧಿಗೆ ಭಾರತವು ʻಐಒಆರ್‌ಎʼ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿರುವುದನ್ನು ಅವರು ಸ್ವಾಗತಿಸಿದರು. ಕಡಲ ಭದ್ರತೆಯಲ್ಲಿ ಸಹಕಾರವನ್ನು ಹೆಚ್ಚಿಸಲು ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿನ ಸಾಮಾನ್ಯ ಸವಾಲುಗಳನ್ನು ಎದುರಿಸಲು ಈ ಪ್ರಾದೇಶಿಕ ಕಾರ್ಯವಿಧಾನಗಳ ಮಹತ್ವವನ್ನು ಒತ್ತಿ ಹೇಳಿದರು.
ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು
ಸಾಂಸ್ಕೃತಿಕ ಪರಂಪರೆ, ಐತಿಹಾಸಿಕ ಬಂಧಗಳು ಮತ್ತು ಜನರ ನಡುವಿನ ಸಂಬಂಧಗಳು ಮಾರಿಷಸ್-ಭಾರತ ವಿಶೇಷ ಸಂಬಂಧಗಳಿಗೆ ಆಧಾರವಾಗಿವೆ ಎಂದು ಹೇಳಿದ ನಾಯಕರು, ಉಭಯ ದೇಶಗಳ ನಡುವಿನ ಸ್ನೇಹದ ನಿಕಟ ಬಂಧವನ್ನು ಮತ್ತಷ್ಟು ಆಳಗೊಳಿಸಲು ಸಮ್ಮತಿಸಿದರು. ಈ ನಿಟ್ಟಿನಲ್ಲಿ, ಅವರು ಈ ಕೆಳಗಿನವುಗಳಿಗೆ ಸಹಮತ ವ್ಯಕ್ತಪಡಿಸಿದರು:
i. ಭಾರತದ ʻರಾಷ್ಟ್ರೀಯ ಪತ್ರಾಗಾರʼದ ಮೂಲಕ ವಿಶೇಷ ತರಬೇತಿ ಮತ್ತು ಸಾಂಸ್ಥಿಕ ಬೆಂಬಲ ಸೇರಿದಂತೆ ಭಾರತದಿಂದ ಗುತ್ತಿಗೆ ಕಾರ್ಮಿಕರ ದಾಖಲೆಗಳನ್ನು ಸಂರಕ್ಷಿಸುವಲ್ಲಿ ಮಹಾತ್ಮ ಗಾಂಧಿ ಸಂಸ್ಥೆಗೆ ಬೆಂಬಲ;
ii. ʻನೋ ಇಂಡಿಯಾ ಕಾರ್ಯಕ್ರಮʼ, ʻಕನೆಕ್ಟಿಂಗ್ ದಿ ರೂಟ್ಸ್ʼ ʻಪ್ರವಾಸಿ ಭಾರತೀಯ ದಿವಸ್ʼ ಮತ್ತು ವಿದ್ಯಾರ್ಥಿವೇತನಗಳ ಮೂಲಕ ವಲಸಿಗರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವುದು ಹಾಗೂ ʻಗಿರ್ಮಿತ್ಯʼ ಅವರ ಪರಂಪರೆಗೆ ಸಂಬಂಧಿಸಿದ ಸಂಶೋಧನೆಯಲ್ಲಿ ಸಹಕರಿಸುವುದು ಹಾಗೂ ಜನರ ನಡುವಿನ ಸಂಬಂಧ ಬಲಪಡಿಸುವಲ್ಲಿ ಅವರ ಕೊಡುಗೆಯ ದಾಖಲಿಸುವುದು;
iii. ʻಚಾರ್ ಧಾಮ್ʼ ಮತ್ತು ʻರಾಮಾಯಣ ಸರ್ಕ್ಯೂಟ್ʼ ಹಾಗೂ ಭಾರತದ ಪ್ರಾಚೀನ ಧಾರ್ಮಿಕ ಪೂಜಾ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುವುದು; ಮತ್ತು
iv. ಮಾರಿಷಸ್ ಮತ್ತು ಭಾರತದ ನಡುವೆ ಕಾರ್ಮಿಕ ಚಲನವಲನಕ್ಕೆ ಅನುಕೂಲವಾಗುವಂತೆ ಕಾರ್ಮಿಕ ನೇಮಕಾತಿ ಕುರಿತ ಒಪ್ಪಂದದ ಅನುಷ್ಠಾನವನ್ನು ತ್ವರಿತಗೊಳಿಸಲು ಮತ್ತಷ್ಟು ಸಹಕಾರ.
ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯ ಕುರಿತಾದ ತಮ್ಮ ಸಮಗ್ರ ಚರ್ಚೆಗಳ ಬಗ್ಗೆ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಇದೇ ವೇಳೆ, ತಮ್ಮ ವಿಶೇಷ ಮತ್ತು ನಿಕಟ ದ್ವಿಪಕ್ಷೀಯ ಸಹಭಾಗಿತ್ವವು ಗಮನಾರ್ಹ ವ್ಯೂಹಾತ್ಮಕ ಆಯಾಮ ಪಡೆದುಕೊಂಡಿದೆ ಎಂದು ಸಮ್ಮತಿಸಿದರು. ಅಭಿವೃದ್ಧಿ ಪಾಲುದಾರಿಕೆ, ರಕ್ಷಣೆ ಮತ್ತು ಕಡಲ ಭದ್ರತೆ ಹಾಗೂ ಜನರ ನಡುವಿನ ಸಂಬಂಧಗಳ ಕ್ಷೇತ್ರಗಳಲ್ಲಿ ಮಾರಿಷಸ್-ಭಾರತ ದ್ವಿಪಕ್ಷೀಯ ಸಹಭಾಗಿತ್ವವು ಸಹಕಾರದ ಉಜ್ವಲ ಉದಾಹರಣೆಯಾಗಿದೆ. ಈ ವಲಯದಲ್ಲಿ ದ್ವಿಪಕ್ಷೀಯ ಪಾಲುದಾರಿಕೆಗೆ ಅದು ಮಾನದಂಡವನ್ನು ನಿಗದಿಪಡಿಸುತ್ತದೆ ಎಂದು ಅವರು ಗಮನ ಸೆಳೆದರು. ಮಾರಿಷಸ್‌ನ ಅಭಿವೃದ್ಧಿ ಅಗತ್ಯಗಳನ್ನು ಪೂರೈಸುವ ಮತ್ತು ಈ ಪ್ರದೇಶದ ಸಮಾನ ಉದ್ದೇಶಗಳಿಗೆ ಕೊಡುಗೆ ನೀಡುವಂತಹ ಪರಸ್ಪರ ಲಾಭದಾಯಕವಾದ ವ್ಯೂಹಾತ್ಮಕ ಪಾಲುದಾರಿಕೆಯಾಗಿ ಈ ಸಂಬಂಧವನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ದೃಷ್ಟಿಕೋನ ಮತ್ತು ಮಾರ್ಗದರ್ಶನ ಮುಂದುವರಿಸಲು ಉಭಯ ನಾಯಕರು ಸಮ್ಮತಿಸಿದರು.
ಮಾರಿಷಸ್‌ನ ಸ್ವಾತಂತ್ರ್ಯದ 57ನೇ ವರ್ಷಾಚರಣೆ ಮತ್ತು ಮಾರಿಷಸ್ ಗಣರಾಜ್ಯದ 33ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ರಾಷ್ಟ್ರೀಯ ದಿನಾಚರಣೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದಕ್ಕಾಗಿ ಮಾರಿಷಸ್‌ನ ಪ್ರಧಾನಮಂತ್ರಿಯವರು ಭಾರತದ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು.
ಭಾರತದ ಪ್ರಧಾನಮಂತ್ರಿಯವರು ಮಾರಿಷಸ್ ಪ್ರಧಾನಮಂತ್ರಿಯವರಿಗೆ ತಮ್ಮ ಅನುಕೂಲಿತ ಸಮಯದಲ್ಲಿ ಭಾರತಕ್ಕೆ ಅಧಿಕೃತ ಭೇಟಿ ನೀಡುವಂತೆ ಆಹ್ವಾನಿಸಿದರು.
*****