ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವೇಲ್ಸ್ ರಾಜಕುಮಾರರೊಂದಿಗೆ ಇಂದು ದೂರವಾಣಿ ಸಂಭಾಷಣೆ ನಡೆಸಿದರು.
ಇಬ್ಬರೂ ಗಣ್ಯರು COVID-19 ಸಾಂಕ್ರಾಮಿಕ ರೋಗದ ಬಗ್ಗೆ ಚರ್ಚಿಸಿದರು. ಕಳೆದ ಕೆಲವು ದಿನಗಳಿಂದ ಬ್ರಿಟನ್ ನಲ್ಲಿ ಸಂಭವಿಸಿರುವ ಪ್ರಾಣಹಾನಿಯ ಬಗ್ಗೆ ಪ್ರಧಾನಿ ಸಂತಾಪ ಸೂಚಿಸಿದರು. ರಾಜಕುಮಾರರು ಇತ್ತೀಚಿನ ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ ಪ್ರಧಾನಿಯವರು ಅವರಿಗೆ ಉತ್ತಮ ಆರೋಗ್ಯವನ್ನು ಬಯಸಿದರು.
ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ರಾಷ್ಟ್ರೀಯ ಆರೋಗ್ಯ ಸೇವೆಯ ಅನೇಕ ಸದಸ್ಯರು ಸೇರಿದಂತೆ ಬ್ರಿಟನ್ ನಲ್ಲಿರುವ ಭಾರತೀಯ ವಲಸೆಗಾರರ ಬಗ್ಗೆ ಪ್ರಿನ್ಸ್ ಮೆಚ್ಚುಗೆ ವ್ಯಕ್ತಪಡಿಸಿದರು. ಬ್ರಿಟನ್ ನಲ್ಲಿರುವ ಭಾರತೀಯ ಸಮುದಾಯದ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು ಮಾಡುತ್ತಿರುವ ನಿಸ್ವಾರ್ಥ ಸೇವೆಯನ್ನು ಅವರು ಉಲ್ಲೇಖಿಸಿದರು.
ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದಲ್ಲಿ ಸಿಲುಕಿರುವ ಬ್ರಿಟನ್ ನಾಗರಿಕರಿಗೆ ಒದಗಿಸಿರುವ ಅನುಕೂಲ ಮತ್ತು ನೆರವಿಗಾಗಿ ರಾಜಕುಮಾರ ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸಿದರು.
ಆಯುರ್ವೇದದಲ್ಲಿ ಸದಾ ಆಸಕ್ತಿ ಇಟ್ಟುಕೊಂಡಿರುವುದಕ್ಕಾಗಿ ಪ್ರಧಾನಮಂತ್ರಿಯವರು ರಾಜಕುಮಾರರಿಗೆ ಧನ್ಯವಾದ ಅರ್ಪಿಸಿದರು. ಸಣ್ಣ ಆನಿಮೇಷನ್ ವೀಡಿಯೊಗಳ ಮೂಲಕ ಯೋಗ ವ್ಯಾಯಾಮಗಳನ್ನು ಕಲಿಸುವ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮನೆಯಲ್ಲಿ ತಯಾರಿಸಿದ ಸಾಂಪ್ರದಾಯಿಕ ಪರಿಹಾರಗಳ ಇತ್ತೀಚಿನ ಭಾರತೀಯ ಉಪಕ್ರಮವನ್ನು ಅವರು ವಿವರಿಸಿದರು. ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಕಾಪಾಡಲು, ವಿಶೇಷವಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಉಪಕ್ರಮಗಳ ಸಾಮರ್ಥ್ಯವನ್ನು ರಾಜಕುಮಾರ ಶ್ಲಾಘಿಸಿದರು.