Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​’ವೀರ ಬಾಲ ದಿವಸ್’ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ

​​​​​​​’ವೀರ ಬಾಲ ದಿವಸ್’ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ `ಭಾರತ್ ಮಂಟಪ’ದಲ್ಲಿ ನಡೆದ ‘ವೀರ ಬಾಲ ದಿವಸ್’ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಶ್ರೀ ಮೋದಿ ಅವರು ಮಕ್ಕಳಿಂದ ಗಾಯನ ಹಾಗೂ ಮೂರು ಸಮರ ಕಲೆಗಳ ಪ್ರದರ್ಶನಗಳಿಗೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ದೆಹಲಿಯಲ್ಲಿ ಯುವಜನರ ಜಾಥಾಕ್ಕೆ ಹಸಿರು ನಿಶಾನೆ ತೋರಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ದೇಶವು ʻವೀರ ಸಾಹಿಬ್‌ಜಾದಾʼ ಅವರ ಅಮರ ತ್ಯಾಗಗಳನ್ನು ಸ್ಮರಿಸುತ್ತಿದೆ ಎಂದರು. ʻಸ್ವಾತಂತ್ರ್ಯದ ಅಮೃತ ಮಹೋತ್ಸವʼದ ಈ ಸಂದರ್ಭದಲ್ಲಿ ಕಾಲದಲ್ಲಿ ಭಾರತಕ್ಕಾಗಿ ʻವೀರ್ ಬಾಲ ದಿವಸ್ʼನ ಹೊಸ ಅಧ್ಯಾಯವು ತೆರೆದುಕೊಳ್ಳುತ್ತಿರುವುದರಿಂದ, ವೀರ ಸಾಹಿಬ್‌ಜಾದಾʼ ಅವರಿಂದ ದೇಶವು ಸ್ಫೂರ್ತಿ ಪಡೆಯುತ್ತಿದೆ ಎಂದರು. ಕಳೆದ ವರ್ಷ ಇದೇ ದಿನ ಆಚರಿಸಲಾದ ಮೊದಲ ʻವೀರ ಬಾಲ ದಿವಸ್ʼ ಆಚರಣೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ʻವೀರ್ ಸಾಹಿಬ್‌ಜಾದಾʼ ಅವರ ಶೌರ್ಯದ ಕಥೆಗಳು ಇಡೀ ರಾಷ್ಟ್ರದಲ್ಲಿ ಮಿಂಚಿನ ಸಂಚಾರ ಉಂಟು ಮಾಡಿದ್ದನ್ನು ನೆನಪಿಸಿಕೊಂಡರು. “ಭಾರತೀಯತೆಯ ರಕ್ಷಣೆಗಾಗಿ ಎಂದಿಗೂ ಸಾಯದ ಮನೋಭಾವದ ಸಂಕೇತ ಈ ವೀರ್ ಬಾಲ ದಿವಸ್” ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. “ಧೈರ್ಯದ ವಿಷಯಕ್ಕೆ ಬಂದಾಗ ವಯಸ್ಸು ಮುಖ್ಯವಲ್ಲ ಎಂದು ಈ ದಿನ ನಮಗೆ ನೆನಪಿಸುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದರು. ಇದನ್ನು ಸಿಖ್ ಗುರುಗಳ ಪರಂಪರೆಯ ಆಚರಣೆ ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು, ಗುರು ಗೋವಿಂದ ಸಿಂಗ್ ಮತ್ತು ಅವರ ನಾಲ್ವರು ವೀರ್ ಸಾಹಿಬ್‌ಜಾದಾʼಗಳ ಧೈರ್ಯ ಮತ್ತು ಆದರ್ಶಗಳು ಇಂದಿಗೂ ಪ್ರತಿಯೊಬ್ಬ ಭಾರತೀಯನಿಗೂ ಧೈರ್ಯ ತುಂಬುತ್ತವೆ ಎಂದರು. ಬಾಬಾ ಮೋತಿ ರಾಮ್ ಮೆಹ್ರಾ ಅವರ ಕುಟುಂಬ ಮಾಡಿದ ತ್ಯಾಗ ಮತ್ತು ದಿವಾನ್ ತೋದರ್‌ಮಲ್‌ ರ್ಮಲ್ ಅವರ ಭಕ್ತಿಯನ್ನು ಸ್ಮರಿಸಿದದ ಪ್ರಧಾನಿ, “ವೀರ ಬಾಲ ದಿವಸ್ ಆಚರಣೆಯು ಸಾಟಿಯಿಲ್ಲದ ಶೂರರಿಗೆ ಜನ್ಮ ನೀಡಿದ ತಾಯಂದಿರಿಗೆ ಸಲ್ಲಿಸುವ ರಾಷ್ಟ್ರೀಯ ಗೌರವ,ʼʼ ಎಂದು ಹೇಳಿದರು. ಗುರುಗಳ ಬಗೆಗಿನ ಈ ನಿಜವಾದ ಭಕ್ತಿಯು ರಾಷ್ಟ್ರದ ಬಗ್ಗೆ ಭಕ್ತಿಯ ಜ್ವಾಲೆಯನ್ನು ಹೊತ್ತಿಸುತ್ತದೆ ಎಂದು ಪ್ರಧಾನಿ ಬಣ್ಣಿಸಿದರು.

ʻವೀರ ಬಾಲ ದಿವಸ್‌ʼಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಅಮೆರಿಕ, ಬ್ರಿಟನ್‌, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಅರಬ್‌ ಸಂಯುಕ್ತ ಸಂಸ್ಥಾನ ಹಾಗೂ ಗ್ರೀಸ್ ದೇಶಗಳು ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ʻವೀರ ಬಾಲ ದಿವಸ್ʼ ಆಚರಿಸುತ್ತಿರುವುದಕ್ಕೆ ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ʻಚಮ್‌ಕೌರ್ʼ ಮತ್ತು ʻಸಿರ್‌ಹಿಂದ್‌ʼ ಕದನಗಳ ಸಾಟಿಯಿಲ್ಲದ ಇತಿಹಾಸವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಈ ಇತಿಹಾಸವನ್ನು ಮರೆಯಲು ಸಾಧ್ಯವೇ ಇಲ್ಲ ಎಂದರು. ಭಾರತೀಯರು ಕ್ರೌರ್ಯ ಮತ್ತು ನಿರಂಕುಶ ಪ್ರಭುತ್ವವನ್ನು ಹೇಗೆ ಘನತೆಯಿಂದ ಎದುರಿಸಿದರು ಎಂಬುದನ್ನು ಅವರು ಸ್ಮರಿಸಿದರು.

ನಾವು ನಮ್ಮ ಪರಂಪರೆಗೆ ಸರಿಯಾದ ಗೌರವವನ್ನು ನೀಡಲು ಪ್ರಾರಂಭಿಸಿದಾಗ ಮಾತ್ರ ಜಗತ್ತು ಸಹ ನಮ್ಮ ಪರಂಪರೆಯನ್ನು ಗುರುತಿಸಿದೆ ಎಂದು ಪ್ರಧಾನಿ ಮೋದಿ ಗಮನಸೆಳೆದರು. “ಇಂದು ನಾವು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತಿರುರುವ ಹಿನ್ನೆಲೆಯಲ್ಲಿ, ಈ ಬಗ್ಗೆ ವಿಶ್ವದ ದೃಷ್ಟಿಕೋನವೂ ಬದಲಾಗಿದೆ,” ಎಂದು ಅವರು ಹೇಳಿದರು. ಇಂದಿನ ಭಾರತವು ಗುಲಾಮಗಿರಿಯ ಮನಸ್ಥಿತಿಯನ್ನು ತೊರೆಯುತ್ತಿದೆ. ದೇಶದ ಸಾಮರ್ಥ್ಯಗಳು, ಸ್ಫೂರ್ತಿಗಳು ಮತ್ತು ಜನರ ಮೇಲೆ ಸಂಪೂರ್ಣ ವಿಶ್ವಾಸವನ್ನು ಹೊಂದಿದೆ ಎಂದು ಶ್ರೀ ಮೋದಿ ಸಂತೃಪ್ತಿ ವ್ಯಕ್ತಪಡಿಸಿದರು. “ಇಂದಿನ ಭಾರತಕ್ಕೆ, ʻಸಾಹಿಬ್‌ಜಾದಾʼಗಳ ತ್ಯಾಗವು ಸ್ಫೂರ್ತಿಯ ವಿಷಯವಾಗಿದೆ,ʼʼ ಎಂದ ಪ್ರಧಾನಿ, ಭಗವಾನ್ ಬಿರ್ಸಾ ಮುಂಡಾ ಮತ್ತು ಗೋವಿಂದ ಗುರು ಅವರ ತ್ಯಾಗವು ಇಡೀ ದೇಶಕ್ಕೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.

ಅವಕಾಶಗಳ ವಿಷಯದಲ್ಲಿ ಜಗತ್ತು ಭಾರತವನ್ನು ಅಗ್ರಗಣ್ಯ ದೇಶದ ಸ್ಥಾನದಲ್ಲಿರಿಸಿದೆ ಎಂದು ಪ್ರಧಾನಿ ಗಮನಸೆಳೆದರು. ವಿಜ್ಞಾನ, ಸಂಶೋಧನೆ, ಕ್ರೀಡೆ, ರಾಜತಾಂತ್ರಿಕತೆ ಹಾಗೂ ಜಾಗತಿಕ ಆರ್ಥಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಹಾಗಾಗಿಯೇ, ಕೆಂಪು ಕೋಟೆಯಿಂದ ತಾವು ನೀಡಿದ್ದ “ಇದೇ ಸಮಯ, ಇದೇ ಸರಿಯಾದ ಸಮಯ” ಎಂಬ ತಮ್ಮ ಸ್ಪಷ್ಟ ಕರೆಯನ್ನು ಪುನರುಚ್ಚರಿಸಿದರು. ಇದು “ಇದು ಭಾರತದ ಸಮಯ, ಮುಂದಿನ 25 ವರ್ಷಗಳು ಭಾರತದ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತವೆ,” ಎಂದು ಅವರು ಹೇಳಿದರು. ʻಪಂಚ ಪ್ರಾಣʼವನ್ನು ಅನುಸರಿಸುವ ಅಗತ್ಯವನ್ನು ಒತ್ತಿ ಹೇಳಿದ ಅವರು, ಒಂದು ಕ್ಷಣವನ್ನೂ ವ್ಯರ್ಥ ಮಾಡಬಾರದು ಎಂದು ಸಲಹೆ ನೀಡಿದರು.

ಭಾರತವು ಪ್ರಸ್ತುತ ʻಮಹಾಕಲ್ಪʼದ(ಬಹಳ ದೀರ್ಘಕಾಲದ ಬಳಿಕ ಬರುವ ಕಾಲಘಟ್ಟ) ಮೂಲಕ ಸಾಗುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಸ್ವಾತಂತ್ರ್ಯದ ಈ ಅಮೃತ ಕಾಲದಲ್ಲಿ, ಭಾರತದ ಸುವರ್ಣ ಯುಗವನ್ನು ನಿರ್ಧರಿಸುವ ಅನೇಕ ಅಂಶಗಳು ಒಗ್ಗೂಡಿವೆ ಎಂದು ಶ್ರೀ ಮೋದಿ ಅವರು ಹೇಳಿದರು. ಭಾರತದ ಯುವ ಶಕ್ತಿಯ ಬಗ್ಗೆ ಒತ್ತಿ ಹೇಳಿದ ಅವರು, ಇಂದು ದೇಶದಲ್ಲಿ ಯುವಜನರ ಜನಸಂಖ್ಯೆ ಸ್ವಾತಂತ್ರ್ಯ ಹೋರಾಟದ ವೇಳೆ ಇದ್ದದ್ದಕ್ಕಿಂತಲೂ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು. ಇಂದಿನ ಪೀಳಿಗೆಯು ದೇಶವನ್ನು ಊಹಿಸಲಾಗದ ಎತ್ತರಕ್ಕೆ ಕೊಂಡೊಯ್ಯಬಲ್ಲದು ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು. ಜ್ಞಾನದ ಅನ್ವೇಷಣೆಯಲ್ಲಿ ಎಲ್ಲಾ ಅಡೆತಡೆಗಳನ್ನು ಮೀರಿದ ನಚಿಕೇತ, ಚಿಕ್ಕ ವಯಸ್ಸಿನಲ್ಲಿಯೇ ʻಚಕ್ರವ್ಯೂಹʼವನ್ನು ಭೇದಿಸಿದ ʻಅಭಿಮನ್ಯುʼ, ಧ್ರುವ ಮತ್ತು ಅವನ ತಪಸ್ಸು, ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸಾಮ್ರಾಜ್ಯವನ್ನು ಮುನ್ನಡೆಸಿದ ಮೌರ್ಯ ರಾಜ ಚಂದ್ರಗುಪ್ತ, ಏಕಲವ್ಯ ಹಾಗೂ ಅವನ ಗುರು ದ್ರೋಣಾಚಾರ್ಯ, ಖುದಿರಾಮ್ ಬೋಸ್, ಬದುಕೇಶ್ವರ್ ದತ್ತ್, ಕನಕಲತಾ ಬರುವಾ, ರಾಣಿ ಗೈಡಿನ್ಲಿಯು, ಬಾಜಿ ರಾವತ್ ಹಾಗೂ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹಲವಾರು ರಾಷ್ಟ್ರೀಯ ನಾಯಕರನ್ನು ಅವರು ಉಲ್ಲೇಖಿಸಿದರು.

“ಮುಂಬರುವ 25 ವರ್ಷಗಳು ನಮ್ಮ ಯುವಕರಿಗೆ ದೊಡ್ಡ ಅವಕಾಶಗಳನ್ನು ಹೊತ್ತು ತರಲಿವೆ. ಭಾರತದ ಯುವಕರು, ಅವರು ಯಾವುದೇ ಪ್ರದೇಶ ಅಥವಾ ಸಮಾಜದಲ್ಲಿ ಜನಿಸಿದರೂ, ಅಪರಿಮಿತ ಕನಸುಗಳನ್ನು ಹೊಂದಿದ್ದಾರೆ. ಈ ಕನಸುಗಳನ್ನು ಈಡೇರಿಸಲು, ಸರ್ಕಾರವು ಸ್ಪಷ್ಟ ಮಾರ್ಗಸೂಚಿ ಮತ್ತು ಸ್ಪಷ್ಟ ದೃಷ್ಟಿಕೋನವನ್ನು ಹೊಂದಿದೆ ಎಂದರು. ʻರಾಷ್ಟ್ರೀಯ ಶಿಕ್ಷಣ ನೀತಿʼ, 10 ಸಾವಿರ ʻಅಟಲ್ ಟಿಂಕರಿಂಗ್ ಲ್ಯಾಬ್‌ʼಗಳು ಮತ್ತು ರೋಮಾಂಚಕ ನವೋದ್ಯಮ ಸಂಸ್ಕೃತಿಯನ್ನು ಉಲ್ಲೇಖಿಸುವ ಮೂಲಕ ಪ್ರಧಾನಿಯವರು ಇದನ್ನು ವಿವರಿಸಿದರು. ʻಮುದ್ರಾʼ ಯೋಜನೆಯಿಂದಾಗಿ ಯುವಕರು, ಎಸ್‌ಸಿ/ಎಸ್‌ಟಿ ಹಾಗೂ ಹಿಂದುಳಿದ ಸಮುದಾಯಗಳ ಬಡ ವಿಭಾಗಗಳಿಂದ 8 ಕೋಟಿ ಹೊಸ ಉದ್ಯಮಿಗಳು ಹೊರಹೊಮ್ಮಿದ್ದಾರೆ ಎಂದು ಪ್ರಧಾನಿ ಉಲ್ಲೇಖಿಸಿದರು.

ಇತ್ತೀಚಿನ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತೀಯ ಕ್ರೀಡಾಪಟುಗಳ ಯಶಸ್ಸನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಹೆಚ್ಚಿನ ಕ್ರೀಡಾಪಟುಗಳು ಗ್ರಾಮೀಣ ಪ್ರದೇಶದ ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರಾಗಿದ್ದಾರೆ ಎಂದರು. ಈ ಯಶಸ್ಸಿನ ಶ್ರೇಯವು ʻಖೇಲೋ ಇಂಡಿಯಾʼ ಅಭಿಯಾನಕ್ಕೆ ಸಲ್ಲುತ್ತದೆ. ʻಖೇಲೋ ಇಂಡಿಯಾʼ ಅಭಿಯಾನವು ಕ್ರೀಡಾಪಟುಗಳ ಮನೆಗಳ ಬಳಿ ಉತ್ತಮ ಕ್ರೀಡೆ ಮತ್ತು ತರಬೇತಿ ಸೌಲಭ್ಯಗಳನ್ನು ಒದಗಿಸುತ್ತದೆ. ಜೊತೆಗೆ ಪಾರದರ್ಶಕ ಆಯ್ಕೆ ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು. ಇದು ಯುವಜನರ ಕಲ್ಯಾಣಕ್ಕೆ ಸರ್ಕಾರ ನೀಡಿದ ಆದ್ಯತೆ ಪರಿಣಾಮವಾಗಿದೆ ಎಂದು ತಿಳಿಸಿದರು.

ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಕನಸಿನ ಅರ್ಥವನ್ನು ವಿವರಿಸಿದ ಪ್ರಧಾನಿ, ಇದು ಯುವಕರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದರು. ಇದು ಉತ್ತಮ ಆರೋಗ್ಯ, ಶಿಕ್ಷಣ, ಅವಕಾಶಗಳು, ಉದ್ಯೋಗಗಳು, ಜೀವನದ ಗುಣಮಟ್ಟ ಮತ್ತು ಉತ್ಪನ್ನಗಳ ಗುಣಮಟ್ಟವನ್ನು ಸೂಚಿಸುತ್ತದೆ ಎಂದು ಅವರು ವಿವರಿಸಿದರು. ʻವಿಕಸಿತ ಭಾರತʼದ ಕನಸುಗಳು ಮತ್ತು ಸಂಕಲ್ಪದೊಂದಿಗೆ ಯುವಕರನ್ನು ಸಂಪರ್ಕಿಸುವ ರಾಷ್ಟ್ರವ್ಯಾಪಿ ಅಭಿಯಾನದ ಬಗ್ಗೆ ಪ್ರಧಾನಿ ಮೋದಿ ಅವರು ಯುವ ಪ್ರೇಕ್ಷಕರಿಗೆ ಮಾಹಿತಿ ನೀಡಿದರು. ʻಮೈ-ಭಾರತ್ʼ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವಂತೆ ಅವರು ಪ್ರತಿಯೊಬ್ಬ ಯುವಕರನ್ನು ಆಹ್ವಾನಿಸಿದರು. “ಈ ವೇದಿಕೆಯು ಈಗ ದೇಶದ ಯುವಕ-ಯುವತಿಯರಿಗೆ ದೊಡ್ಡ ಸಂಸ್ಥೆಯಾಗುತ್ತಿದೆ,” ಎಂದು ಅವರು ಹೇಳಿದರು.

ಜೀವನದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ಆರೋಗ್ಯವು ನಿರ್ಣಾಯಕವಾಗಿರುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಪ್ರಧಾನಿ ಯುವಕರಿಗೆ ಸಲಹೆ ನೀಡಿದರು. ದೈಹಿಕ ವ್ಯಾಯಾಮ, ಡಿಜಿಟಲ್ ಚಟಕ್ಕೆ ಕಡಿವಾಣ, ಮಾನಸಿಕ ಸದೃಢತೆ, ಸಾಕಷ್ಟು ನಿದ್ರೆ ಮತ್ತು ತಮ್ಮ ಆಹಾರದಲ್ಲಿ ʻಶ್ರೀಅನ್ನʼ ಅಥವಾ ʻಸಿರಿಧಾನ್ಯʼಗಳನ್ನು ಸೇರ್ಪಡೆಗೆ ಅವರು ಸಲಹೆ ನೀಡಿದರು. ಯುವಕರು ತಮಗಾಗಿ ಕೆಲವು ನಿಯಮಗಳನ್ನು ರೂಪಿಸಿಕೊಂಡು, ಅವುಗಳನ್ನು ತಪ್ಪದಂತೆ ಅನುಸರಿಸಲು ಸಲಹೆ ನೀಡಿದರು. ಪ್ರಧಾನಿ ಮೋದಿ ಅವರು ಸಮಾಜದಲ್ಲಿನ ಮಾದಕವಸ್ತುಗಳ ಪಿಡುಗಿನ ಬಗ್ಗೆಯೂ ಪ್ರಸ್ತಾಪಿಸಿದರು. ರಾಷ್ಟ್ರ ಮತ್ತು ಸಮಾಜವಾಗಿ ಒಗ್ಗೂಡುವ ಮೂಲಕ ಈ ಪಿಡುಗನ್ನು ಎದುರಿಸುವ ಅಗತ್ಯದ ಬಗ್ಗೆ ಒತ್ತಿ ಹೇಳಿದರು. ಎಲ್ಲಾ ಧಾರ್ಮಿಕ ಮುಖಂಡರು ಸರ್ಕಾರ ಮತ್ತು ಕುಟುಂಬಗಳೊಂದಿಗೆ ಮಾದಕವಸ್ತುಗಳ ವಿರುದ್ಧ ಬಲವಾದ ಅಭಿಯಾನವನ್ನು ಪ್ರಾರಂಭಿಸಬೇಕೆಂದು ಅವರು ಒತ್ತಾಯಿಸಿದರು. “ಸಮರ್ಥ ಮತ್ತು ಬಲವಾದ ಯುವ ಶಕ್ತಿಗೆ ʻಸಬ್ ಕಾ ಪ್ರಯಾಸ್ʼ ಅತ್ಯಗತ್ಯ,” ಎಂದು ಹೇಳುವ ಮೂಲಕ ಪ್ರಧಾನಿಯವರು ಮಾತು ಮುಗಿಸಿದರು. ಕೊನೆಯದಾಗಿ, ನಮ್ಮ ಗುರುಗಳು ನಮಗೆ ನೀಡಿದ ‘ಸಬ್ ಕಾ ಪ್ರಯಾಸ್’ ಬೋಧನೆಗಳು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುತ್ತವೆ ಎಂಬುದನ್ನು ಸ್ಮರಿಸಿದರು.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ, ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ʻವೀರ ಬಾಲ ದಿವಸ್ʼ ಅಂಗವಾಗಿ, ʻಸಾಹಿಬ್‌ಜಾದಾʼಗಳ ಆದರ್ಶಪ್ರಾಯ ಶೌರ್ಯಗಾಥೆಗಳನ್ನು ನಾಗರಿಕರಿಗೆ, ವಿಶೇಷವಾಗಿ ಚಿಕ್ಕ ಮಕ್ಕಳಿಗೆ ತಿಳಿಸಲು ಮತ್ತು ಅವರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ʻಸಾಹಿಬ್‌ಜಾದಾʼಗಳ ಜೀವನ ಕಥೆ ಮತ್ತು ತ್ಯಾಗವನ್ನು ವಿವರಿಸುವ ಡಿಜಿಟಲ್ ಪ್ರದರ್ಶನವನ್ನು ದೇಶಾದ್ಯಂತದ ಶಾಲೆಗಳು ಮತ್ತು ಶಿಶುಪಾಲನಾ ಸಂಸ್ಥೆಗಳಲ್ಲಿ ಪ್ರದರ್ಶಿಸಲಾಗುವುದು. ‘ವೀರ ಬಾಲ ದಿವಸ್’ ಕುರಿತ ಚಲನಚಿತ್ರವನ್ನು ಸಹ ರಾಷ್ಟ್ರವ್ಯಾಪಿ ಪ್ರದರ್ಶಿಸಲಾಗುವುದು. ಅಲ್ಲದೆ, ಸಂವಾದಾತ್ಮಕ ರಸಪ್ರಶ್ನೆಗಳಂತಹ ವಿವಿಧ ಆನ್‌ಲೈನ್‌ ಸ್ಪರ್ಧೆಗಳನ್ನು ʻಮೈಭಾರತ್ʼ ಮತ್ತು ʻಮೈಗೌವರ್ನ್‌ಮೆಂಟ್‌ʼ ಪೋರ್ಟಲ್‌ಗಳ ಮೂಲಕ ಆಯೋಜಿಸಲಾಗುವುದು.

ಶ್ರೀ ಗುರು ಗೋವಿಂದ್ ಸಿಂಗ್ ಅವರ ʻಪ್ರಕಾಶ್ ಪುರಬ್ʼ ದಿನವಾದ 2022ರ ಜನವರಿ 9ರಂದು, ಶ್ರೀ ಗುರು ಗೋವಿಂದ್ ಸಿಂಗ್ ಅವರ ಪುತ್ರರಾದ ಸಾಹಿಬ್‌ಜಾದಾ ಬಾಬಾ ಜೋರಾವರ್ ಸಿಂಗ್ ಮತ್ತು ಬಾಬಾ ಫತೇಹ್ ಸಿಂಗ್ ಅವರ ಹುತಾತ್ಮತೆಯ ಸಂಕೇತವಾಗಿ ಡಿಸೆಂಬರ್ 26 ಅನ್ನು ‘ವೀರ ಬಾಲ ದಿವಸ್’ ಎಂದು ಆಚರಿಸಲಾಗುವುದು ಎಂದು ಪ್ರಧಾನಿ ಘೋಷಿಸಿದರು.

 

***

 

******